ಕಾದಂಬರಿ : ‘ಸುಮನ್’ – ಅಧ್ಯಾಯ 5

Share Button

ತವರ ಸುಖದೊಳು

ಯಾಕೋ ಅಂದು ಎದ್ದಾಗಿನಿಂದ ಸುಮನ್‍ಗೆ ಅವಳ ಅಮ್ಮನ ನೆನಪು. ಮೂರು ದಿನದಿಂದ ಗಿರೀಶನನ್ನು ಗೋಗರಿದಿದ್ದಳು ಊರಿಗೆ ಹೋಗೋಣಾ ಎಂದು. ಅವನು ನೋಡಿದ್ರೇ ಇಲ್ಲ ನೀನು ಬೇಕಾದ್ರೆ ಹೋಗು ಎಂದು ರಾಗ ಏಳಿತಾನೇ ಇದ್ದ. ಅಮ್ಮ ಅಪ್ಪನ ನೋಡಬೇಕು, ಅಮ್ಮನ ಕೈ ಅಡುಗೆ ಸವಿಯಬೇಕು ಇದೇ ಆಸೆ ಮೂರು ಹೊತ್ತು ಸುಮನ್‍ಗೆ. ಕೊನೆಗೆ “ಸರಿ ನಾನೊಬ್ಬಳೇ ಹೋಗಿ ಬರ್ತೀನಿ” ಮುಖ ಊದಿಸಿಕೊಂಡು ಬೆಳಗ್ಗೆ ಬ್ಯಾಗ್ ಹಿಡದುಕೊಂಡು ಹೊರಟೇ ಬಿಟ್ಟಳು. ಚಾಲಕ ಮೆಜೆಸ್ಟಿಕ್‍ಗೆ ಕರೆ ತಂದು ಅವರೂರ ಬಸ್ ಹತ್ತಿಸಿ ಹೋದ. ಸುಮನ್ ತವರಮನೆಗೆ ಹೋಗುವ ಸಂತಸದಲ್ಲಿ ಗಿರೀಶನ ಮೇಲಿನ ಕೋಪವನ್ನು ಬದಿಗೆ ಒತ್ತಿದಳು. ಊರು ತಲುಪಿ ಬಸ್ ಇಳಿದು ಆಟೋ ಹತ್ತಿ ಮನೆ ಬಾಗಿಲ ಎದುರು ನಿಂತ  ಸುಮನಳ “ಅಮ್ಮ  ಅಮ್ಮ” ಕೂಗಿಗೆ ಅವರಮ್ಮ ಓಡೋಡಿ ಬಂದು ಬಾಗಿಲು ತೆರೆದರು. ಮದುವೆ ಮಾಡಿ ಕಳುಹಿಸಿದ ಮಗಳ ಕೈಯಿಂದ ಬ್ಯಾಗ್ ಕೈಗೆತ್ತಿಕೊಂಡು ಇನ್ನೊಂದು ಕೈಯಲ್ಲಿ ಮಗಳನ್ನು ಬಿಗಿದಪ್ಪಿ ಒಳಗೆ ಕರೆದೊಯ್ದರು “ಅಮ್ಮ, ಅಪ್ಪ ಎಲ್ಲಿ” ಎನ್ನುತ್ತ ಸುಮನ್ ಮನೆಯೊಳಗೆ ಕಾಲಿಟ್ಟಳು.

“ಇಲ್ಲೇ ಎಲ್ಲೋ ಹೋಗಿದಾರೆ. ಬರ್ತಾರೆ ಬಾ ಕೈ ಕಾಲು ತೊಳ್ಕೋ. ಕಾಫಿ ಕೊಡ್ತೀನಿ” ಅವಳಮ್ಮ ಕಾಫಿ ಬೆರೆಸಲು ಓಡಿದರು.

ಅವಾಗಿನಿಂದ ಶುರುವಾಯಿತು ಸಂಭ್ರಮ.  ಅವಳು ವಾಪಸ್ ಹೋಗುವವರೆಗೂ ಅವಳ ಅಮ್ಮ ಅಪ್ಪ ಅವಳ ಮೇಲೆ ಪ್ರೀತಿಯ ಮಹಾಪೂರವನ್ನೇ ಹರಿಸಿದರು. ಸುಮನ್‍ಗೆ ಆಲುಗಡ್ಡೆ ಹುಳಿ ಇಷ್ಟ ಅದು ಊಟಕ್ಕೆ ಆದರೆ ಆಲೂಗಡ್ಡೆ ಪರಾಠಾ ಅವಳಮ್ಮ ತಿಂಡಿಗೆ ಮಾಡಿದರು. ಇನ್ನೊಂದು ದಿನ ತರಾವರಿ ಉಪ್ಪೇರಿಗಳ ಸಂಭ್ರಮವಾದರೇ ಅದರ ಮಾರನೆಯ ದಿನ ಜಾಮೂನು, ಫ್ರೂಟ್ ಸಲಾಡಿನ ಔತನ. ಅವಳಪ್ಪ ಮನೆಗು ಅಂಗಡಿಗು ಚಪ್ಪಲಿ ಸವಿಯುವರೆಗೂ ಓಡಾಡಿ ಸುಮನ್‍ಗೆ ಈ ಬೇಕರಿ ಕೇಕ್ ಇಷ್ಟ ಆ ಅಂಗಡಿ ಕೋಡಬಳೆ ಇಷ್ಟ ಅವಳಿಗೆ ಹಲಸಿನ ಹಣ್ಣು ಇಷ್ಟ ಹೀಗೆ ಹುಡುಕಿ ಹುಡುಕಿ ಸುಮನ್‍ಗೆ ತರುವರು. ಅವಳ ಹಿಂದೆ ಮುಂದೆ ಓಡಾಡಿ ತಮ್ಮ ಮನದ ಇಂಗಿತವನ್ನು ತೀರಿಸಿಕೊಂಡರು. ಮಗಳು ತಾವು ಮಾಡಿದ ಅಕ್ಕಿ ತರಿ ಉಪ್ಪಿಟ್ಟು ತಿನ್ನುವ ಪರಿಯನ್ನು ನೋಡಿ “ಯಾಕೆ ಸುಮನ್ ನಿಮ್ಮ ಅಡುಗೆಯವನಿಗೆ ಉಪ್ಪಿಟ್ಟು ಮಾಡೋಕ್ಕೆ ಬರಲ್ವಾ?” ಎಂದರು ರಾಜಲಕ್ಷ್ಮಿ. ಸುಮನಳ ಕಣ್ಣಿನಲ್ಲಿ ನೀರು ಚಿಮ್ಮಿತು ತಿಂಡಿಯ ರಾದ್ಧಾಂತ ಜ್ಞಾಪಕವಾಗಿ. ಮೆಲ್ಲಗೆ “ಇಲ್ಲಮ್ಮ” ಎಂದು ಉಸಿರಿಸಿದಳು. ರಾಜಲಕ್ಷ್ಮಿ ಅವಳ ತಟ್ಟೆಗೆ ಇನ್ನಷ್ಟು ಉಪ್ಪಿಟ್ಟು ತುಪ್ಪ ಬಡಿಸಿ ಒಮ್ಮೆ ಮಗಳನ್ನು ದಿಟ್ಟಿಸಿ ನೋಡಿದರು. ಮಗಳು ಸ್ವಲ್ಪ ಬಡವಾಗಿರುವ ಹಾಗೆ ಕಂಡಳು. ಹೊಸದಾಗಿ ಮದುವೆಯಾಗಿರುವ ಹುಡುಗಿಯಲ್ಲಿ  ಪ್ರೀತಿಸುವ ಗಂಡನಿಂದಾಗಿ ಮೈ ಮನ ಎರಡರಲ್ಲು ಇರಬೇಕಾದ ಉತ್ಸಾಹ ಹುಮ್ಮಸ್ಸು ಸುಮನಳಲಿಲ್ಲ ಎನಿಸಿತು ಅವರಿಗೆ. ಅರಮನೆಯಂತಹ ಮನೆಯಲ್ಲಿ ನಮ್ಮ ಪುಟ್ಟಿಗೆ ಯಾವುದಕ್ಕು ಕಮ್ಮಿ ಇರಲಿಕ್ಕಿಲ್ಲ,  ತಮ್ಮನ್ನು ತಾವೇ ಸಂತೈಸಿಕೊಂಡರು.

ಸುಮನ್ ಬೆಂಗಳೂರಿನ ಅವಳ ಮನೆಯ ವೈಭವ ಬಿಡಿಸಿ ಬಿಡಿಸಿ ಬಣ್ಣಿಸಿದಳು. ತಮ್ಮಂದಿರನ್ನು ಫೋನಿನಲ್ಲಿ ಮಾತಾಡಿಸಿದಳು. ಒಬ್ಬ ಅಮೆರಿಕಾದಲ್ಲಿದ್ದರೇ ಇನ್ನೊಬ್ಬ ನಾರ್ವೆಗೆ ಹೋಗಿದ್ದ. ಲತಾ ಹಾಗೂ ಶ್ವೇತ ಮನೆಗೆ ಹೋಗಿ ಬಂದಳು. ಗಿರಿಜಮ್ಮನ ಮನೆಗೆ ತಿಂಡಿ, ಸರೋಜಮ್ಮನ ಮನೆಗೆ ಕಾಫಿಗೆ ಹೋಗಿದ್ದಾಯಿತು. ಒಂದ್ನಿಮಿಷ ಅಮ್ಮನಿಗೆ ಏನೋ ಹೇಳಲು ಅಡುಗೆಮನೆಗೆ ಹೋದರೆ ಇನ್ನೊಂದು  ನಿಮಿಷ ಅವರಪ್ಪನ ಹುಡುಕಿಕೊಂಡು ಕೋಣೆಗೆ ಹೋಗುವಳು. ಮನೆ ತುಂಬ ಅವಳ ಕಾಲಗೆಜ್ಜೆ ನಾದ. ಮನೆ ಕೂಡ ಅವಳ ಮಾತು ನಗುವನ್ನು ಆಲಿಸಿ ಸಂತಸಪಡುತ್ತಿತ್ತು. ಆಗೊಮ್ಮೆ ಈಗೊಮ್ಮೆ ಗಿರೀಶನನ್ನು ನೋಡಬೇಕೆಂಬ ಉತ್ಕಟ ಆಸೆ. ತಕ್ಷಣ ಕರೆ ಮಾಡಿ ಮಾತಾಡಿ ಮನ ತುಂಬಿಸಿಕೊಳ್ಳುವಳು.

ಕೊನೆಗೆ ಒಂದು ವಾರ ಕಳೆದು ಹೋಯಿತು. ಅವಳಮ್ಮ ಕೋಡಬಳೆ, ಚಕ್ಕುಲಿ, ರವೆ ಉಂಡೆ, ಬೇಸನ್ ಉಂಡೆ ಎಲ್ಲಾ ಮಾಡಿ ಕವರ್ ಗೆ ಹಾಕಿದರೇ ಅವಳಪ್ಪ ಹುರಿಗಾಳು, ಹುರಿದ ಗೋಡಂಬಿ ಎಲ್ಲಾ ತಂದು ಪೇರಿಸಿದರು. ಮಗಳಿಗೆ ರೇಶ್ಮೆ ಸೀರೆ ಅದಕ್ಕೊಪ್ಪುವ ಬ್ಲೌಸ್ ಎಲ್ಲಾ ಹೊಲಿಸಿ ಮಗಳನ್ನು ಅವಳಪ್ಪ ತಾವೇ  ಬೆಂಗಳೂರಿಗೆ ಕರೆ ತಂದು ಅಳಿಯನ್ನನ್ನು  ನೋಡಿಕೊಂಡು ಹೋದರು. ಊಟ ಮಾಡಿ ಹೊರಟ ಅಪ್ಪನ ಕಾಲಿಗೆರಗಿ ಕಣ್ಣೀರಿಟ್ಟಳು ಸುಮನ್.

ಸುಮನ್ ಗಿರೀಶನ ನೋಡಿ ಹರ್ಷುಗೊಂಡಳು. ಇತ್ತ ಮಗಳಿಲ್ಲದೆ ಬಿಕೋ ಎನ್ನುವ ಮನೆಯಲ್ಲಿ ರಾಜಲಕ್ಷ್ಮಿ ಸೊರ ಸೊರ ಎಂದು ಕಣ್ಣೀರುಗರೆದರೇ ಅಶ್ವತನಾರಾಯಣರು ಸುಮ್ಮನೆ ಕಣ್ಣ ಮುಂದೆ ಪತ್ರಿಕೆಯನ್ನು ಹಿಡಿದು ಕುಳಿತರು.

*****

ಪೇಪರ್ ಡಾನ್ಸ್

ಊರಿಂದ ಗಂಡ ಗಂಡ ಎಂದು ಅಲವತ್ತುಗೊಂಡು ಸುಮನ್ ಬಂದು ಒಂದು ತಿಂಗಳಾಗಿತ್ತು. ಗಿರೀಶ ಎಥಾ ಪ್ರಕಾರ ತನ್ನ ಆಫೀಸು, ಮೀಟಿಂಗು ಅಂತ ಬ್ಯೂಸಿಯಾಗಿದ್ದ. ಸುಮನ್‍ಗೆ ತಿರುಗಿ ಮನೆಯಲ್ಲಿ ಬೇಸರವಾಗ ತೊಡಗಿತು. ಅಂದು ಸಂಜೆ ಗಿರೀಶ ಲವಲವಿಕೆಯಿಂದ ಮನೆಗೆ ಬಂದು “ನಡಿ ಸುಮನ್ ಶಾಪಿಂಗೆ ಹೋಗೋಣ” ಅಂದಾಗ ಸುಮನ್ ಸಂತೋಷದಿಂದ ತಯಾರಾಗಿ ಹತ್ತು ನಿಮಿಷದಲ್ಲಿ ಓಡುತ್ತ ಕಾರು ಹತ್ತಿದಳು. ಗಿರೀಶ ಬೆಂಗಳೂರಿನ ಪ್ರಖ್ಯಾತ ಫೋಲಿಯೋ, ಲೈಫಸ್ಟೈಲ್, ವೆಸ್ಟ್ ಸೈಡ್ ಅಂಗಡಿಗಳಿಗೆ ಕರೆದೊಯ್ದು ಅವಳಿಗೆ ಜೀನ್ಸ್ ಪ್ಯಾಂಟ್, ಉದ್ದನೆಯ ಸ್ಕರ್ಟ್, ಅದಕ್ಕೆ ಹೊಂದುವ ಟಾಪುಗಳು, ಚಿನ್ನದ ಬಳೆಯಂತಿರುವ ಗಡಿಯಾರ, ತರಾವರಿ ಮ್ಯಾಚಿಂಗ್ ಪರ್ಸುಗಳು, ಚಪ್ಪಲಿಗಳು ಒಂದೇ ಎರಡೇ ಗಿರೀಶ ಮಡದಿಗೆ ಅಂಗಡಿಯನ್ನೆ ಖರೀದಿಸಿದ. ಎಲ್ಲರ ಹಾಗೆ ಇನ್ನೇನು ಬಿದ್ದು ಹೋಗುವಂಥ ಜೀನ್ಸ್ ಧರಿಸಬೇಕು ಸುಮನ್ ಎಂಬ ಆಸೆಯಿಂದ ಗಿರೀಶ ಅವಳ ಕೈಗೆ ಒಂದು ಅಂತಹ ಜೀನ್ಸ್ ಕೊಟ್ಟು “ಟ್ರೈ ಮಾಡು” ಎಂದ. ಸುಮನ್ ಟ್ರಯಲ್ ರೂಮಿಗೆ ಹೋಗಿ ಅದನ್ನು ಹಾಕಿಕೊಂಡಳು. ಸೈಜು ಸರಿಯಾಗಿದ್ದರೂ ಕನ್ನಡಿಯಲ್ಲಿ ತನ್ನ ಪ್ರತಿಬಿಂಬ ನೋಡಿ ಹೌಹಾರಿದಳು. ಹೊರ ಬರಲು ನಾಚಿದ ಸುಮನ್ ಬೇಗ ಬೇಗನೆ ಅದನ್ನು ಕಳಚಿ ತನ್ನ ಚುಡಿದಾರ ತೊಟ್ಟು ಹೊರ ಬಂದಳು. ಮುಖ ಊದಿಸಿಕೊಂಡು “ಇದು ನಂಗೆ ಬೇಡ” ಎನ್ನುತ್ತ ಅದನ್ನು ಅಲ್ಲೇ ನಿಂತಿದ್ದ ಅಂಗಡಿಯವಳಿಗೆ ಕೊಟ್ಟಳು.  ಗಿರೀಶ ಸಿಟ್ಟಿನಿಂದ “ಅಡಗೂಲಜ್ಜಿ” ಎನ್ನುತ್ತ ಹೊರ ನಡೆದ. ಅಂಗಡಿಯವಳು “ಅದು ಸರಿಯಾದ ಅಭಿಪ್ರಾಯ” ಎನ್ನುವಂತೆ ಸುಮನಳನ್ನು ನೋಡಿ ಜಾಗ ಖಾಲಿ ಮಾಡಿದಳು. ಅವಮಾನದಿಂದ ಕೆಂಪಾದ ಮುಖದಲ್ಲಿ ಕಣ್ಣೀರು ಜಾರದಂತೆ ರೆಪ್ಪೆಯನ್ನು ಪಟ ಪಟ ಬಡಿಯುತ್ತ ಗಿರೀಶನ ಹಿಂದೆ ಹೊರಟಳು ಸುಮನ್. ರಶೀತಿಗೆ ಸಹಿ ಹಾಕಿ ಗಿರೀಶ ಕಾರು ಹತ್ತಿ ಕುಳಿತ. ಸುಮನ್ ಕೊಂಡಿದನ್ನು ಕಾರಿನೊಳಗಿಟ್ಟು ಕಾರು ಹತ್ತಿದಳು. ಗಿರೀಶಗೆ ಅವಮಾನವಾಗಿತ್ತು. ಸುಮನ್‌ಗೂ ಅವಮಾನವಾಗಿತ್ತು, ನೋವಿನಿಂದ ಅಳುತ್ತಿದ್ದಳು. ಗಿರೀಶ ರೋಷದಲ್ಲಿ ಎಡ್ಡಾದಿಡ್ಡಿ ಕಾರ ನಡೆಸುತ್ತಿದ್ದ. ಮನೆಗೆ ಬಂದ ಗಿರೀಶ ಟಿವಿಯನ್ನು ಜೋರಾಗಿ ಹಾಕಿ ಕುಳಿತ. ಸುಮನ್ ತನ್ನ ಪಾಡಿಗೆ ತಾನು ಮಲಗುವ ಕೋಣೆಯಲ್ಲಿ ಅಳುತ್ತ ಕುಳಿತಳು.

*****

ಇಷ್ಟೆಲ್ಲ ಹೆಂಡತಿಗೆ ಖರೀದಿ ಮಾಡಿದ್ದು ಗಿರೀಶ ಆ ಶನಿವಾರ ಕಂಪನಿ ಮೇಲಧಿಕಾರಿಗಳು ಕುಟುಂಬ ಸಮೇತ ಸೇರುವ ಪಿಕ್‍ನಿಕ್‌ಗಾಗೆ. ಸರಿ ಈ ಅಡಗೂಲಜ್ಜಿನಾ ಕರೆದುಕೊಂಡು ಹೋಗಬೇಕಲ್ಲ ಎಂದುಕೊಳ್ಳುತ್ತ “ಸುಮನ್ ನಾಳೆ ಗೋಲ್ಡ್ ಕಾಯಿನ್ ರಿಸಾರ್ಟ್‍ಗೆ ಪಿಕ್ನಿಕ್ ಹೋಗಲು ರೆಡಿಯಾಗು” ಎನ್ನುತ್ತ ಪತ್ರಿಕೆಯನ್ನು ಮುಖಕ್ಕೆ ಅಡ್ಡ ಹಿಡಿದ. “ಆಫೀಸಿನಿಂದಾನಾ” ಸುಮನ್ ಹೆದರುತ್ತಲೇ ಕೇಳಿದಳು.

“ಹೂಂ.”

ಸರಿ ಬೆಳಗ್ಗೆ ಎದ್ದು ಸುಮನ್ ಎಲ್ಲಾ ಚಟುವಟಿಕೆಗಳಿಗೆ ಸರಿ ಹೊಂದುವ ಹಾಗೆ ದಟ್ಟ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಅದರ ಮೇಲೆ ಕಸೂತಿ ಇರುವ ಬಿಳಿ ಬಣ್ಣದ ತೋಳಿಲ್ಲದ ಟಾಪ್ ಧರಿಸಿದಳು. ಕೂದಲನ್ನು ಹಿಂದಕ್ಕೆ ಏಳೆದು ಒಂದು ಕ್ಲಿಪ್‍ಗೆ ಸೇರಿಸಿ ಕಾಲಿಗ ಒಂದು ಕಪ್ಪು ಮೇರಿ ಕ್ಲೇರ್ ಶೂಸ್ ಧರಿಸಿ ಒಮ್ಮೆ ಕನ್ನಡಿಯಲ್ಲಿ ನೋಡಿದಳು. ಕನ್ನಡಿ ಅವಳ ಸೊಗಸನ್ನು ಕಣ್ಣಲ್ಲಿ ತುಂಬಿಕೊಂಡು “ಹೋಗಿ ಬಾ ಸುಮನ್ ಯು ಲುಕ್ ಗ್ರೇಟ್” ಎಂದಿತು. ಸುಮನ್ ಕೆಳಗೆ ನಡೆದಳು. ಗಿರೀಶ  ವೀಕೆಂಡರ್ ಶಾರ್ಟ್ಸ್ ಹಾಗೂ ಒಂದೊಗಳೆ ಶರ್ಟ್ ಹಾಕಿ ಕಾರಿನ ಬೀಗದ ಕೈ ಹಿಡಿದು ನಿಂತಿದ್ದ. ಅವಳನ್ನೊಮ್ಮೆ ನೋಡಿ ಹೋಗಿ ಕಾರಿನಲ್ಲಿ ಕುಳಿತ. ಸುಮನ್ ಗಿರೀಶಗೆ ಸಿಟ್ಟು ಇನ್ನು ಇಳಿದಿಲ್ಲ ಎಂದುಕೊಂಡು ಸೀಟ್ ಬೆಲ್ಟ್ ಹಾಕಿದಳು. ಗಿರೀಶ ದೊಡ್ಡದಾಗಿ ಅವನಿಗೆ ಇಷ್ಟವಾದ ಹಾಡುಗಳನ್ನು ಕೇಳುತ್ತ ಡ್ರೈವ್ ಮಾಡಿದ. ಸುಮನ್ ಮೌನವಾಗಿ ಕಿಟಕಿಯಾಚೆ ನೋಡುತ್ತಿದ್ದಳು.  ಬೆಂಗಳೂರು ಚೆನ್ನೈ ದಾರಿಯಲ್ಲಿ ಒಂದು ಗಂಟೆ ಪ್ರಯಾಣಿಸಿದ ಮೇಲೆ ರಿಸಾರ್ಟ್ ತಲುಪಿದರು.

ಸುಮನ್ ಕಿಟ್ಟಿ ಪಾರ್ಟಿಯಲ್ಲಿ ಕಂಡ ಸೋನಾಲ್, ರೇಖಾ, ರತ್ನ ಆಗಲೇ ತಮ್ಮ ಗಂಡಂದಿರ ಜೊತೆ ಬಂದ್ದಾಗಿತ್ತು. ಏಷ್ಟೋ ವರ್ಷಗಳ ನಂತರ ಭೇಟಿಯಾಗುತ್ತಿರುವಂತೆ ಒಬ್ಬರನೊಬ್ಬರು ಕೆನ್ನೆಗೆ ಕೆನ್ನೆಗೆ ತಾಕಿಸುತ್ತ ಗಾಳಿಗೆ ಮುತ್ತಿಟ್ಟರು.  ಎಲ್ಲರು ಹಿಪ್ಸ್ಟರ್ ಮಾದರಿಯ ಜೀನ್ಸ್ ತೊಟ್ಟಿದನ್ನು ಸುಮನ್ ಗಮನಿಸಿದಳು. ಮಾತಾಡುತ್ತ ಒಳಗೆ ಹೋದರು. ಹೋಗಿ ಅದೇ ಬ್ರೆಡ್ ಜಾಮ್ ಹಣ್ಣಿನ ರಸದ ತಿಂಡಿ ತಿಂದು ರಿಸಾರ್ಟ್ ಒಂದು ಸುತ್ತ ನೋಡಲು ಹೊರಟರು. ಅಷ್ಟು ಹೊತ್ತಿಗೆ ಇನ್ನೂಂದಿಷ್ಟು ದಂಪತಿಗಳು ಗುಂಪನ್ನು ಸೇರಿದರು. ಕುಟುಂಬ ಸಮೇತ ಪಿಕ್ನಿಕ್ ಆದರು ಯಾರೂ ಮಕ್ಕಳನ್ನು ಕರೆತಂದಿರಲಿಲ್ಲ. ವಯಸ್ಸಾದ ಬೊಜ್ಜಿರುವ ಹೆಂಗಸರು ಕೊಡ ಹೊಟ್ಟೆಯ ಕೆಳಗೆ ಜೀನ್ಸ್ ಅನ್ನು ಸಿಕ್ಕಿಸಿದ್ದರು. ಇನ್ನು ಅದರ ಮೇಲಿನ ಟಾಪ್ ಗಳು ಎಷ್ಟು ಮೇಲೆ ಹಾಕಬಹುದೋ ಅಷ್ಟು ಮೇಲೆ ಹಾಕಿದ್ದರು. ಬಟ್ಟೆ  ಧರಿಸುವ ಅವರ ಆ ಅಭಿರುಚಿ ಸುಮನ್‍ಗೆ ಅಸಹ್ಯವೆನಿಸಿತು. ಬಿಲಿಯರ್ಡ್ಸ್ ರೂಮಿನಲ್ಲಿ ಸ್ವಲ್ಪ ಜನ ಉಳಿದರೆ ಟೇಬಲ್ ಟೆನ್ನಿಸ್ ಆಡಲು ಸ್ವಲ್ಪ ಜನ ಶುರು ಮಾಡಿದರು. ಕೆಲವರು ಈಜುವ ಕೊಳದ ನೀರಿಗೆ ಇಳಿದರು. ಗಿರೀಶ ಅಲ್ಲಿ ಉಳಿದ. ಸುಮನ್ ಟೆನ್ನಿಸ್ಸ ಆಡುವ ಚಿಕ್ಕ ಒಳಾಂಗಣದಲ್ಲಿ ಉಳಿದಳು. 

ಮಧ್ಯಾಹ್ನದ ಊಟದವರೆಗು ಏನೇನೋ ಆಟ ಆಡುತ್ತ ಕಾಲ ಕಳೆದರು. ಊಟದ ನಂತರ ಎಲ್ಲರು ಈಜುವ ಕೊಳದ ಬಳಿ ಸೇರಿದರು. ಕೆಲವರು ಕುರ್ಚಿಯ ಮೇಲೆ ಅರ್ಧ ನಿದ್ದೆಯಲ್ಲಿ ಪವಡಿಸಿದರೇ ಕೆಲವರು ಹೆಂಗಸರೂ ಸೇರಿದಂತೆ ನೀರಿಗಿಳಿದರು. ನೋಡು ನೋಡುತ್ತಿದಂತೆ ಸುಮನಳ ಕಿಟ್ಟಿ ಪಾರ್ಟಿ ಗೆಳತಿಯರು ಬಿಕಿನಿ ಧರಿಸಿ ವಯ್ಯಾರದಿಂದ ನಿಸ್ಸಂಕೋಚವಾಗಿ ನೀರಿಗೆ ಇಳಿದರು. ಸುಮನ್ ಪ್ಯಾಂಟು ಸ್ವಲ್ಪ ಮೇಲೆ ಮಾಡಿ ನೀರಿನಲ್ಲಿ ಕಾಲು ಬಿಟ್ಟು ಕುಳಿತಳು. ಹೆಂಗಸರು ಗಂಡಸರು ಎಂಬ ಭೇದ ಭಾವವಿಲ್ಲದೆ ನೀರಿನಲ್ಲಿ ಏನೋ ಆಡುತ್ತಿದ್ದವರನ್ನು ಬೆರಗಿನಿಂದ ನೋಡುತ್ತಿದ್ದಳು. ಒಮ್ಮೆ ಗಿರೀಶ ಬಂದು “ಬಾ ನೀನು” ಎಂದು ಕರೆದ್ದಿದ್ದ. ಗಾಬರಿಯಿಂದ  “ಇಲ್ಲ” ಎಂದು ತಲೆ ಅಲ್ಲಾಡಿಸಿದ್ದಳು ಸುಮನ್. ಇದನ್ನು ನೋಡಿ ಸೋನಾಲ್ ಹಾಗೂ ರತ್ನ  “ಬಾ ಬಾ” ಎಂದು ತಾವೂ ಒತ್ತಾಯ ಮಾಡಿದರು. “ಇಲ್ಲ ನನ್ನ ಹತ್ರ ಸ್ವಿಮ್‍ವೇರ್ ಇಲ್ಲ”  ಎಂದಳು ಸುಮನ್ ಹೇಗಾದರೂ ಮಾಡಿ ತಪ್ಪಿಸಿಕೊಳ್ಳಬೇಕು ಎಂದುಕೊಂಡು. ಸೋನಾಲಳ ಸೊಂಟ ಬಳಸಿ ಲಲ್ಲೆಗರಿಯುತ್ತಿದ್ದ ರಾಹುಲ್ “ಸೋನಾಲ್ ವಿಲ್ ಗಿವ್ ಯು ಹರ್ಸ್” ಎಂದ ಕೀಟಲೆಯಿಂದ.

ಸುಮನ್ ಗಾಬರಿಯ “ಬೇಡ ಬೇಡ” ಸೋನಾಲ್ ಹಾಗೂ ರಾಹುಲರ ನಾಟಕೀಯ ಜಗಳದಲ್ಲಿ ಯಾರಿಗೂ ಕೇಳಿಸಲಿಲ್ಲ. ಕೊನೆಗೆ ಗಿರೀಶ ಬಂದು “ಬೀ ಎ ರೋಮನ್ ಇನ್ ರೋಮ್. ಬಾ ಸುಮನ್” ಸ್ವಲ್ಪ ಗಡುಸಾಗಿ ಹೇಳಿದ.

“ನಂಗೆ ಸ್ವಿಮಿಂಗ್ ಬರೋಲ್ಲಾ” ಸುಮನಳ ಉತ್ತರ ಅಲ್ಲಿ ಯಾರಿಗೂ ಸರಿ ಕಾಣಲಿಲ್ಲ. ಗಿರೀಶಗೆ ಕೋಪ ನೆತ್ತಿಗೇರಿತು. ತಿರಸ್ಕಾರದಿಂದ ಅವಳಿಗೆ ಬೆನ್ನು ಮಾಡಿ ನೀರಿನಲ್ಲಿ ತೇಲುತ್ತ ಗುಂಪನ್ನು ಸೇರಿದ. ಸುಮನ್ ಪೆಚ್ಚಾಗಿ ಒಂದು ಕುರ್ಚಿಯ ಮೇಲೆ ಅವರ ಆಟವನ್ನು ನೋಡುತ್ತ ಕುಳಿತಳು.

ಹೀಗೆ ಜಲ ಕ್ರೀಡೆ ಸೂರ್ಯ ಮುಳಗುವರೆಗು ನಡೆಯಿತು. ಕೊನೆಗೆ ಇನ್ನೂ ಸುಸ್ತಾಗದವರು ಅದೇನೋ ಪೇಪರ್ ಡ್ಯಾನ್ಸಗಿಳಿದರು. ಜೋರಾಗಿ ಸಂಗೀತ ಹಾಕಿಕೊಂಡು ಜೋಡಿಗಳು ಮೊದಲು ಒಂದು ದಿನಪತ್ರಿಕೆಯ ಮೇಲೆ ನೃತ್ಯ ಮಾಡಲು ಶುರು ಮಾಡಿದರು. ಒಂದೊಂದು ಹಾಡಿಗೂ ಕೆಳಗಿನ ಪತ್ರಿಕೆಯನ್ನು ಮಡಚುತ್ತಿದ್ದರು. ಯಾರೊಬ್ಬರು ಕಾಲು ಹೊರಗಿಟ್ಟರೂ ಆ ಜೋಡಿ ಆಟದಿಂದ ಹೊರಗೆ. ಗಿರೀಶ ರತ್ನಾಳ ಜೊತೆ ಮೈ ಕುಲುಕುತ್ತಿದ್ದ.  ಆಟದ ನಿಯಮಗಳನ್ನು  ಕೇಳಿ ನೃತ್ಯ ಮಾಡಲು ಬರದ ಸುಮನ್ “ನಂಗೆ ಸ್ವಲ್ಪ ತಲೆ ನೋವು” ಎನ್ನುತ್ತ ಹೊರ ಉಳಿದಳು. ಗಿರೀಶ ಮಧ್ಯಾಹ್ನದಿಂದ ಅವಳ ಹತ್ತಿರ ಬಂದಿರಲಿಲ್ಲ. ಅವಳನ್ನು ನೋಡಿದರೆ ಮುಖ ತಿರುಗಿಸುತ್ತಿದ. ಮುಖ ಚಿಕ್ಕದು ಮಾಡಿಕೊಂಡು ಸುಮನ್ ನೃತ್ಯ ನೋಡುತ್ತ ಕುಳಿತಳು. ಹಾಡಿನ ಲಯ ಜೋರಾದಂತೆ ಪತ್ರಿಕೆ ಚಿಕ್ಕದಾಗುತ್ತ ಹೋಯಿತು. ಮೈಗೆ ಮೈ ತಾಕುವಷ್ಟು ಆದಾಗ ರತ್ನ ಸಮತೋಲನ ತಪ್ಪಿ ಹೆಜ್ಜೆ ಆಚೆ ಇಟ್ಟಳು. ಗಿರೀಶ ಹಾಗೂ ರತ್ನ ಹೊರ ಬಂದರು. ಕೊನೆಗೆ ಉಳಿದ ಎರಡು ಜೋಡಿಗಳ ಮಧ್ಯ ಪೈಪೋಟಿ ಭರದಿಂದ ಸಾಗಿತ್ತು. ದಂಪತಿಗಳಲ್ಲದಿದ್ದರೂ ಜೋಡಿಗಳು ಒಬ್ಬರನೊಬ್ಬರು ಅಪ್ಪಿಕೊಂಡು ಕೈ ಕಾಲು ಅಲ್ಲಾಡಿಸುತ್ತಿದ್ದನ್ನು ನೋಡಿ ಸುಮನ್‍ಗೆ ಒಂದೆಡೆ ಬೆರಗಾದರೆ ಇನ್ನೊಂದೆಡೆ ಅಸಹ್ಯವಾಯಿತು. ಮೆಲ್ಲಗೆ ಹೋಗಿ ಗಿರೀಶನ ಪಕ್ಕ ನಿಂತಳು. ಮುಖಕ್ಕೆ ಮುಖ ತಾಕುವ ಸ್ಥಿತಿ ಬಂದಾಗ ಉಳಿದ್ದಿದ್ದು ಒಂದು ಜೋಡಿ. ಅವರು ಗೆದ್ದಿದ್ದರು. ಎಲ್ಲರು “ಹೋ” ಎನ್ನುತ್ತ ಚಪ್ಪಾಳೆ ತಟ್ಟಿದರು.  ಅಲ್ಲಿಗೆ ಪಿಕ್ನಿಕ್ ಮುಗಿಯಿತು.

ಗಿರೀಶ ಕಾರು ಇನ್ನು ರಿಸಾರ್ಟ್ ಗೇಟು ದಾಟಿರಲಿಲ್ಲ ಅವಾಗಲೇ ಸುಮನ್ ಮೇಲೆ ಗರ್ಜಿಸ ತೊಡಗಿದ “ನೋಡಿದ್ಯಾ ಹೇಗೆ ಡ್ರೆಸ್ ಮಾಡಕೊಂಡು ಬಂದಿದ್ರು ಹೆಂಗಸ್ರು. ಎಲ್ಲಿಗೆ ಹೇಗೆ ಡ್ರೆಸ್ ಮಾಡ್ಕೊಬೇಕು ಅಂತ ಸೆನ್ಸ್ ಬೇಡ? ಹೋಗಲಿ ಗೊತ್ತಿಲ್ಲದಿದ್ರೆ ನನ್ನ ಕೇಳಬೇಕಿತ್ತು. ನಾನು ಕೊಡಿಸಿದ ಜೀನ್ಸ್ ಹಾಕಿಕೊಂಡಿದ್ರೆ ನಿನ್ನ ಗಂಟೇನು ಹೋಗತ್ತಿತ್ತು. ನಿನ್ನ ಫೀಗರ್‌ಗೆ ಅದು ಒಪ್ಪುತ್ತಿತ್ತು. ಬಂದ ದಿನದಿಂದ ಬಡ್ಕೋತಾ ಇದೀನಿ ಇಲ್ಲಿ ಕಲ್ಚರ್ ಕಲಿ ಕಲಿ ಅಂತ ನನ್ನ ಮಾತು ನಿನ್ನ ಕಿವಿ ಮೇಲೆ ಬೀಳಲ್ಲ. ಸ್ಮಾರ್ಟಾಗಿ ಅಪ್ ಟು ಡೇಟಾಗು ಅಂದ್ರೇ ಲೈಟ್ ಬಿಲ್ ಕಟ್ತೀನಿ, ನೀರಿನ ಬಿಲ್ ಕಟ್ತೀನಿ ಅಂತ ಮಾತಾಡ್ತಿ. ಸ್ವಿಮಿಂಗ್ ಬರದೆ ಹೋಗಿದ್ರೆ ಒಂದು ಸ್ವಿಮ್ ಸೂಟ್ ಹಾಕ್ಕೊಂಡು ನೀರಿನಲ್ಲಿ ಇಳಿದ್ದಿದ್ರೇ ನಿನ್ನ ಮರ್ಯಾದೆ ಕಮ್ಮಿ ಆಗಿರೋದೇನೋ? ನೀನು ಮುಳುಗದ ಹಾಗೆ ನಾನು ನೋಡ್ಕೋತಾ ಇದ್ದೆ. ನಾಳೆಯಿಂದಾನೆ ಸ್ವಿಮಿಂಗ್ ಕ್ಲಾಸ್‍ಗೆ ಹೋಗು. ನೀನು ಹಳ್ಳಿಗೆ ಸರಿ ದಿಲ್ಲಿಗಲ್ಲ…………….” ನಡದೇ ಇತ್ತು ಗಿರೀಶನ ಪ್ರಲಾಪ. ಅವನ ಕಣ್ಣಿಗೆ ಸುಮನ್ ಅಳುತ್ತಿರುವುದು ಬೀಳಲಿಲ್ಲ. ಅವನ ಸ್ನೇಹಿತರ ಎದುರು ತನ್ನ ಹಳ್ಳಿ ಹೆಂಡತಿಯಿಂದಾದ ಅವಮಾನವನ್ನು ಅವಳ ಮೇಲೆ ಹಾರಾಡುವುದರಲ್ಲೇ ತೀರಿಸಿಕೊಂಡ. ದಾರಿ ಉದ್ದಕ್ಕೂ ಅವಳನ್ನು ಹೀಯಾಳಿಸುತ್ತಾ ಬಂದ. ಮೌನವಾಗಿ ಸುಮನ್ ಅಳುತ್ತ ಬಂದಳು.

ಈ ಕಾದಂಬರಿಯ ಹಿಂದಿನ ಅಧ್ಯಾಯವನ್ನು ಓದಲು ಇಲ್ಲಿ ಕ್ಲಿಕ್ಕಿಸಿ: http://surahonne.com/?p=38138

(ಮುಂದುವರಿಯುವುದು)

-ಸುಚೇತಾ ಗೌತಮ್.‌ 

6 Responses

  1. ಕಾದಂಬರಿ ಯ ಓದು ಕಂತಿ ನಿಂದ ಕಂತಿಗೆ ಕುತೂಹಲ ಮೂಡಿಸುತ್ತಾ ಸಾಗಿದೆ..

  2. Padma Anand says:

    ಸ್ವಾತಂತ್ತ್ಯಕ್ಕೂ ಸ್ವೇಚ್ಚಾಚಾರಕ್ಕೂ ವ್ಯತ್ಯಾಸ ತಿಳಿಯದ ಸಮಾಜದಲ್ಲಿ ಸುಮನಳು ಅನುಭವಿಸುತ್ತಿರುವ ನೋವು ಮರುಕ ಹುಟ್ಟಿಸುತ್ತಿದೆ. ಕಾದಂಬರಿ ಕುತೂಹಲದಿಂದ ಸಾಗುತ್ತಿದೆ.

  3. ನಯನ ಬಜಕೂಡ್ಲು says:

    ಮುಂದೆ ಸುಮನ್ ಯಾವ ರೀತಿ ಬದಲಾಗುತ್ತಾಳೆ ಅನ್ನುವ ಕುತೂಹಲವನ್ನು ಹುಟ್ಟು ಹಾಕುವಂತೆ ಸಾಗಿದೆ ಕಥೆ.

  4. ಶಂಕರಿ ಶರ್ಮ says:

    ನಾಗರಿಕತೆಯ ಹೆಸರಲ್ಲಿ ಸುಮನ್ ಅನುಭವಿಸುತ್ತಿರುವ ಸಂಕಟ ಗಿರೀಶನಿಗೆ ಅರ್ಥವಾಗದಿರುವುದು ದುರಂತ… ಕುತೂಹಲಕಾರಿಯಾಗಿದೆ ಧಾರಾವಾಹಿ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: