ಅವಿಸ್ಮರಣೀಯ ಅಮೆರಿಕ – ಎಳೆ 50

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು…)

ಜಲಪಾತಗಳ ಜೊತೆಗೆ…

ನಮ್ಮ ಮುಂದುಗಡೆ ಮೇಲೆತ್ತರದಲ್ಲಿ ಬಹು ಸುಂದರ ಜಲಪಾತವೊಂದು ಬೆಳ್ನೊರೆಯನ್ನು ಚಿಮ್ಮಿಸುತ್ತಾ ಕೆಳಗಡೆಗೆ ಧುಮುಕಿ ಮುಂದೆ ಸಣ್ಣ ತೊರೆಯಾಗಿ ನಮ್ಮ ಪಕ್ಕದಲ್ಲೇ ಹರಿಯುತ್ತಿತ್ತು. ಇದುವೇ Multnomah ಜಲಪಾತ. ಇದನ್ನು George ಜಲಪಾತ ಎಂದೂ ಕರೆಯುವರು. ಬೆಟ್ಟದ ಮೇಲಿನಿಂದ ಎರಡು ಹಂತಗಳಲ್ಲಿ ಧುಮುಕುವ ಇದರ ಎತ್ತರ ಸುಮಾರು 620 ಅಡಿಗಳಷ್ಟಿದ್ದು; ಇಡೀ ಪೋರ್ಟ್ ಲ್ಯಾಂಡಿನಲ್ಲಿಯೇ ಅತೀ ಎತ್ತರದ ಜಲಪಾತವಾಗಿದೆ.  ವರ್ಷಂಪ್ರತಿ ಇಲ್ಲಿಗೆ ಸುಮಾರು ಎರಡು ಮಿಲಿಯದಷ್ಟು ಪ್ರವಾಸಿಗರು ಈ ದಟ್ಟ ಹಸಿರಿನ ನಡುವೆ ಅವಿತುಕೊಂಡಿರುವ ಸುಂದರ ದೃಶ್ಯವನ್ನು ವೀಕ್ಷಿಸಲು ಬರುವರು.

ತಲೆ ಎತ್ತರಿಸಿ ಮೇಲೆ ನೋಡಿದರೆ; ಜಲಪಾತದ ಮೇಲ್ಭಾಗದಲ್ಲಿ ಸುಂದರವಾದ ಕಮಾನಿನಾಕಾರದ ಹಳೆಯ ಸೇತುವೆಯೊಂದು ಗೋಚರಿಸಿತು. ಜಲಪಾತದ ಸೌಂದರ್ಯವನ್ನು ಪೂರ್ತಿ ಸವಿಯಬೇಕಾದರೆ ಅದರ ಮೇಲ್ಗಡೆ ಹೋಗಬೇಕು. ಈಗಾಗಲೇ ಎತ್ತರವೇರುತ್ತಾ ನಡೆದು ಸುಸ್ತಾಗಿದ್ದರಿಂದ  ಅಲ್ಲಿ ಹೋಗಲು ನಾವು ಹೆಚ್ಚು ಉತ್ಸಾಹ ತೋರಲಿಲ್ಲ. ಆದರೆ ವಿನಾಯಕನ  ಒತ್ತಾಯದ ಉತ್ತೇಜಿತ ಮಾತುಗಳಿಂದಾಗಿ ನಾವು ಮೇಲೇರಲೇ ಬೇಕಾಯಿತು. ಆಹಾ.. ಏನು ಹೇಳಲಿ..?! ಅಲ್ಲಿಗೆ ಹೋಗದಿದ್ದಲ್ಲಿ ನಾವು ಎಂತಹ ಸುವರ್ಣಾವಕಾಶವನ್ನು ಕಳೆದುಕೊಳ್ಳುತ್ತಿದ್ದೆವು ಎಂಬುದು ಅರಿವಾಯಿತು. ಜಲರಾಶಿಯ ಪ್ರಮಾಣ ಕಡಿಮೆಯಾಗಿದ್ದರೂ, ಬೆಟ್ಟದ ಮೇಲಿನಿಂದ ಧುಮುಕಿ ಅಲ್ಲಿ ಉಂಟುಮಾಡಿದ ಬೆಳ್ನೊರೆಯ ಕೊಳವು ವಿಶೇಷವಾದ ಸೊಗಸಿನಿಂದ ಮಿಂಚುತ್ತಿತ್ತು. ಮುಂದಕ್ಕೆ ಅದೇ ನೀರು;  ಸೇತುವೆಯ ಕೆಳಭಾಗದಿಂದ ಬೆಟ್ಟದ ತಳಭಾಗಕ್ಕೆ ಹರಿದು ಹೋಗುವ ತೊರೆಯನ್ನು ಪೂರ್ತಿ ಅಲ್ಲಿಂದ ವೀಕ್ಷಿಸಬಹುದಿತ್ತು. ನೀರು ಚಿಮ್ಮಿಸುತ್ತಿದ್ದ ತುಂತುರು ಹನಿಗಳು ನಮ್ಮನ್ನು ಭಾಗಶ: ಒದ್ದೆ ಮಾಡಿದವು. ಆಗ ಸಮಯ ನಡುಹಗಲಾಗಿದ್ದರೂ, ಕಾಡಿನ ಮರಗಳೆಡೆಯಿಂದ ಬೀಳುತ್ತಿದ್ದ ಕೆಲವೇ ಕೆಲವು ಕಿರಣಗಳು ನಮ್ಮ ಸಂಗಾತಿಯಾಗಿದ್ದವು. ಮೂರ್ನಾಲ್ಕು ಪ್ರವಾಸಿಗರನ್ನು ಬಿಟ್ಟರೆ ಬೇರೆ ಜನಸಂಚಾರವಿಲ್ಲ. ಮನಸ್ಸಿಲ್ಲದ ಮನಸ್ಸಿನಿಂದ ಅಲ್ಲಿಂದಿಳಿದು ವಾಹನದಲ್ಲಿ ಮುಂದಿನ ಜಲಪಾತದತ್ತ ನಮ್ಮ ಪಯಣ ಸಾಗಿತು…ಕಾಡಿನೊಳಗೆ. 

ಅಲ್ಲಿಂದ ಕೇವಲ ಹತ್ತು ನಿಮಿಷಗಳ ಪ್ರಯಾಣ… Wahkeena ಎಂಬ ಇನ್ನೊಂದು ಜಲಪಾತದಲ್ಲಿಗೆ.  ರಸ್ತೆ ಮಟ್ಟದಿಂದ; ಕಾನನದ ನಡುವೆ ಇರುವ ಸೊಗಸಾದ ಕಾಲುದಾರಿಯಲ್ಲಿ ಇಪ್ಪತ್ತು ನಿಮಿಷಗಳ ನಡಿಗೆಯಲ್ಲಿ ಏರುತ್ತಾ ಸಾಗಿದಾಗ ಸಿಕ್ಕಿದ ಈ ಜಲಪಾತದ ಎತ್ತರ ಸುಮಾರು 242 ಅಡಿಗಳಾಗಿದ್ದು, ಇದು ಆರು ಹಂತಗಳಲ್ಲಿ ಧುಮುಕುತ್ತದೆ. ಈ ಜಲಪಾತದಲ್ಲಿಯೂ ನೀರಿನ ಪ್ರಮಾಣ ಕಡಿಮೆಯೆನಿಸಿದರೂ; ಬೆಳ್ನೊರೆಯ ಬಿಳಿ ಬಣ್ಣದಲ್ಲದ್ದಿದ ಕುಂಚದಲ್ಲಿ, ವನದೇವಿಯ ಹಸಿರು ಸೆರಗಲ್ಲಿ ಬರೆದ ಸುಂದರ ಚಿತ್ರವು ಅತ್ಯದ್ಭುತವಾಗಿತ್ತು. ಮೇಲಿನಿಂದ ಹರಿದು ಬಂದ ನೀರು ನಮ್ಮ ಕಾಲುದಾರಿಯ ಪಕ್ಕದಲ್ಲೇ ಜುಳುಜುಳು ನಿನಾದದೊಂದಿಗೆ ಹರಿಯುತ್ತಾ ತನ್ನ ಸುತ್ತುಮುತ್ತಲು ಸುಂದರ ಕಾಡುಹೂಗಳ ತೋಟವನ್ನೇ ರಚಿಸಿಬಿಟ್ಟಿತ್ತು. ನೀರ ಹರಿವಿನ ಪಾತಳಿಯಲ್ಲಿ ಎಲ್ಲೆಲ್ಲೂ ದಪ್ಪ ಹಸಿರು ಪಾಚಿ… ಎಲ್ಲವನ್ನೂ ನೋಡುತ್ತಾ ಪ್ರಕೃತಿಯ ಮಡಿಲಲ್ಲಿ ಮೈಮರೆತಾಗ ಬೇರೇನೂ ನೆನಪಾಗುವುದಿಲ್ಲವಲ್ಲವೇ..? ಆದರೆ ಇಲ್ಲಿ ಒಂದು ಬಹು ದೊಡ್ಡ ವ್ಯತ್ಯಾಸವು ನಮ್ಮ ಗಮನ ಸೆಳೆಯದಿರಲು ಸಾಧ್ಯವೇ ಇಲ್ಲ. ಈ ಚಳಿ ಪ್ರದೇಶದ ಕಾಡುಗಳಲ್ಲಿ, ಬರೇ ಸೂಜಿ ಮೊನೆ ಎಲೆಯ ರೆಡ್ ವುಡ್ ಮರಗಳನ್ನು  ಬಿಟ್ಟರೆ ನಮ್ಮಲ್ಲಿಯಂತೆ ಬೇರೆ ಯಾವುದೇ ಸಸ್ಯ ವೈವಿಧ್ಯಗಳನ್ನು ಕಾಣಲಾರೆವು. ಹೂವು, ಹಣ್ಣುಗಳಿಲ್ಲ…ಅಂತೆಯೇ ಯಾವುದೇ ಪ್ರಾಣಿ ಪಕ್ಷಿಗಳೂ ಇಲ್ಲ. ಕಾಡಿನೊಳಗಿನ ಚಿಲಿಪಿಲಿ, ಕುಹೂಗಳ ಸದ್ದಿಲ್ಲದೆ ಬಿಕೋ ಎನ್ನಿಸಿದ್ದು ಸುಳ್ಳಲ್ಲ. ಸೂರ್ಯಾಸ್ತವಿನ್ನೂ ತಡವಿದ್ದರೂ ಕಾಡಿನೊಳಗಡೆ ಕತ್ತಲಾವರಿಸಲಾರಂಭಿಸಿತು… ಹಾಗೇ ನಮ್ಮ ಕಾರು ಹಿಂದಿರುಗಿ ಮನೆ ಸೇರಿತು…ಜಲಪಾತಗಳಲ್ಲಿ ನೀರು ಧುಮುಕುವ ಸದ್ದು, ಕಾಡಿನೊಳಗಿನ ಎಲೆ, ನೀರಹರಿವಿನ ಪಕ್ಕದ ಪುಟ್ಟ ಹೂಗಳ ನವಿರುಗಂಧದ ಸುವಾಸನೆ, ಪುಟ್ಟ ಕೀಟಗಳ ಮಾತುಗಳನ್ನು ತನ್ನೊಳಗೆ ತುಂಬಿಕೊಂಡು….

ಮರುದಿನ ಮೇ 29, ಶುಕ್ರವಾರ, ನಮಗಾಗಿ ದಂಪತಿಗಳು ರಜೆ ಪಡೆದು, ನಮ್ಮನ್ನು ಬಹು ವಿಶೇಷವಾದ ಸ್ಥಳವೊಂದಕ್ಕೆ ಕರೆದೊಯ್ಯುವುದಾಗಿ ಸೂಚನೆ ಇತ್ತಿದ್ದರು. ಅಂತೆಯೇ, ಬೆಳಗ್ಗೆ 10:45ರ ಹೊತ್ತಿಗೆ; ಅವರ ಪುಟ್ಟ ಮಗು ಸಮೇತ ನಮ್ಮ ವಾಹನವು ಕಾಡನ್ನು ಸೀಳುತ್ತಾ, ಬಯಲನ್ನು ದಾಟುತ್ತಾ, ನೀರ ಝರಿಗಳನ್ನು ಹಿಂದಿಕ್ಕುತ್ತಾ ದೊಡ್ಡ ಬೆಟ್ಟವೇರತೊಡಗಿತು. ಮನೆಯಿಂದ ಸುಮಾರು 50ಮೈಲು ಕ್ರಮಿಸಿದಾಗ ಮನ ಹಿಂಡುವಂತಹ ದೃಶ್ಯವು ಗೋಚರವಾಯಿತು. ಆ ಬೆಟ್ಟ ಹಾಗೂ ಅಕ್ಕಪಕ್ಕದಲ್ಲಿರುವ ಇನ್ನೂ ಹಲವಾರು ಬೆಟ್ಟಗಳ ಸಾವಿರಾರು ಹೆಕ್ಟೇರ್  ಪ್ರದೇಶದ ರೆಡ್ ವುಡ್ ಮರಗಳೆಲ್ಲಾ ಸುಟ್ಟು ಕರಕಲಾಗಿದ್ದವು. ಇದಕ್ಕೇನು ಕಾರಣವೆಂದು ವಿನಾಯಕನಲ್ಲಿ ವಿಚಾರಿಸಿದಾಗ ತಿಳಿದ ವಿಷಯವು ಬಹಳ ರೋಚಕವಾಗಿತ್ತು!

ಜ್ವಾಲಾಮುಖಿಯ ಮುಂದೆ…!

ಅದುವೇ ಹೆಲೆನ್ ಜ್ವಾಲಾಮುಖಿ! (Helen Valcano) ಇದು Mount Saint Helen ಎಂಬ ಸುಮಾರು 2540ಮೀ ಎತ್ತರದ ಪರ್ವತದಲ್ಲಿ ಇಂದಿಗೂ ಜೀವಂತವಾಗಿರುವ ಜ್ವಾಲಾಮುಖಿ. ಇದು ಮೊದಲ ಬಾರಿಗೆ 18ನೇ ಶತಮಾನದ ಸಮಯದಲ್ಲಿ ಬೆಳಕಿಗೆ ಬಂತು ಎನ್ನಬಹುದು. ಇತ್ತೀಚೆಗೆ, ಅಂದರೆ 1980ರ ಮೇ 18ಕ್ಕೆ 5.1 ರಿಕ್ಟರ್ ಕಂಪನದೊಂದಿಗೆ ಸಂಭವಿಸಿದ ಜ್ವಾಲಾಮುಖಿಯ ಬಹು ದೊಡ್ಡ ಸ್ಪೋಟದಲ್ಲಿ 57ಜನರು ಸಾವನ್ನಪ್ಪಿದರು.  200 ಮನೆಗಳು ನಾಶವಾಗಿ, 47 ಸೇತುವೆಗಳು ಧ್ವಂಸಗೊಂಡವು. 24ಕಿ.ಮೀ ಉದ್ದದ ರೈಲು ಹಳಿಗಳೇ ನಾಪತ್ತೆಯಾದರೆ, 298 ಕಿ.ಮೀ. ಉದ್ದದ ಹೆದ್ದಾರಿ ರಸ್ತೆ ಸಂಪೂರ್ಣ ನಾಶವಾಯಿತು. ಈ ಸ್ಪೋಟದಿಂದಾಗಿ ಪರ್ವತದ ಎತ್ತರವೇ ಸುಮಾರು 1,320 ಅಡಿಗಳಷ್ಟು ಕುಗ್ಗಿಹೋಯಿತು! ಅಲ್ಲದೆ ಒಂದು ಮೈಲಿ ಅಗಲವಾದ ಕುಳಿಯು ಪರ್ವತ ಶಿಖರದ ಮೇಲೆ ಏರ್ಪಟ್ಟಿತು. ಇದರಿಂದಾಗಿ ಆಕಾಶದತ್ತ ಎಸೆಯಲ್ಪಟ್ಟ ಕಸ, ಮಣ್ಣು, ಧೂಳು, ಬೂದಿ ಇತ್ಯಾದಿಗಳ ದಪ್ಪನೆಯ ರಾಶಿಯು ಸುಮಾರು ಮೂರು ಚ.ಕೀ. ವಿಸ್ತಾರಕ್ಕೆ ಹರಡಿತು! ಆ ಬಳಿಕ ಬರೇ ಎರಡು ವರ್ಷಗಳ ಬಳಿಕ, 1982 ನೇ, ಮೇ19 ರಂದು ಸಂಭವಿಸಿದ ಇನ್ನೊಂದು ಸ್ಪೋಟದಲ್ಲಿ ಸುಮಾರು 3,000 ಅಡಿಗಳಷ್ಟು ಎತ್ತರಕ್ಕೆ ಬೆಂಕಿ, ಹೊಗೆ, ಬೂದಿ ಇತ್ಯಾದಿಗಳು ಆಕಾಶದತ್ತ ಚಿಮ್ಮಿದವು ಎನ್ನುವ ಉಲ್ಲೇಖವಿದೆ. 

ನಾವಲ್ಲಿಗೆ ತಲಪಿದಾಗ ಅದಾಗಲೇ ಮಧ್ಯಾಹ್ನ 12:30. ..ಬಿಸಿಲ ತಾಪ ಜೋರಾಗಿಯೇ ಇತ್ತು. ನಿಯಮದಂತೆ ಸ್ವಲ್ಪ ದೂರದಲ್ಲೇ ವಾಹನವನ್ನು ನಿಲ್ಲಿಸಿ ಮುಂದಕ್ಕೆ ನಡೆದೇ ಹೋಗಬೇಕು. ರಸ್ತೆಯ ಕೊನೆಯಲ್ಲಿ ಮುಂಭಾಗದಲ್ಲೇ ಬಹು ದೂರದಲ್ಲಿರುವ ಬೃಹದಾಕಾರ ಬೆಟ್ಟ(ಪರ್ವತ?)ದ ಶಿಖರದಲ್ಲಿ ಹೊಗೆಯಾಡುತ್ತಿರುವ ಜ್ವಾಲಾಮುಖಿ! ನನ್ನ ಜೀವಮಾನದಲ್ಲಿಯೇ ಮೊತ್ತಮೊದಲ ಬಾರಿಗೆ ನೋಡಿದ ಜೀವಂತ ಜ್ವಾಲಾಮುಖಿಯಿದು. ನಂಬಲಾಗಲೇ ಇಲ್ಲ… ಬೆಂಕಿಯ ಜ್ವಾಲೆಯೇನೂ ಕಂಡುಬರದಿದ್ದರೂ, ತೆಳುವಾದ ಹೊಗೆಯು ಆಗಸದತ್ತ ಮೆಲ್ಲನೆ ಮೇಲೇಳುತ್ತಿತ್ತು. ಆ ಬೆಟ್ಟವಿಡೀ ಅಕ್ಷರಶ: ಬೋಳಾಗಿದ್ದು; ಅದರ ತಪ್ಪಲಲ್ಲಿ ಪುಟ್ಟದಾಗಿ ಗಿಡಮರಗಳ ಹಸಿರು ಚಿಗುರೊಡೆಯುವ ಕುರುಹುಗಳು ಕಾಣುತ್ತಿದ್ದವು. ಆಗೊಮ್ಮೆ  ಈಗೊಮ್ಮೆ ಆ ಕಡೆಯಿಂದ ಬಿಸಿ ಗಾಳಿ ಬೀಸಿ ಬರುವ ಅನುಭವವಾಯಿತು. 

ನಾವು ನಿಂತಿದ್ದ ಜಾಗವು ಕೂಡಾ ಇನ್ನೊಂದು ಬೆಟ್ಟದ ತುದಿಯಾಗಿದ್ದರಿಂದ, ನಡುವೆ ಅತ್ಯಂತ ಅಗಾಧ ಆಳದ ವಿಶಾಲವಾದ ಕಂದಕವು ಎದೆ ಝಲ್ ಎನ್ನುವಂತಿದೆ. ಪ್ರವಾಸಿಗರ ರಕ್ಷಣೆಗಾಗಿ ಕಬ್ಬಿಣದ ಬಲವಾದ ಬೇಲಿಯನ್ನು ಹಾಕಲಾಗಿದೆ. ನಾವು ನಿಂತಿರುವ ಸ್ಥಳದ ಬಲ ಪಕ್ಕದಲ್ಲಿರುವ ವಿಶಾಲವಾದ ವೀಕ್ಷಣಾಲಯದಲ್ಲಿ  ಜ್ವಾಲಾಮುಖಿಗೆ ಸಂಬಂಧಪಟ್ಟ ವಿವರವಾದ ಮಾಹಿತಿಗಳು ಲಭ್ಯ. ಅದುವೇ Johnston Ridge Observatory. ಹಾಗೆಯೇ ಅದರ ವೀಕ್ಷಣೆಗಾಗಿ ನಮ್ಮ ಹೆಜ್ಜೆ ಅತ್ತ ಕಡೆಗೆ ಚಲಿಸಿತು.

ಈ ವೀಕ್ಷಣಾಲಯದಲ್ಲಿ, ಜ್ವಾಲಾಮುಖಿ ಸ್ಪೋಟಗೊಳ್ಳುವ ಮೊದಲಿನ ಹೆಲೆನ್ ಪರ್ವತ ಪ್ರದೇಶದ ಜೈವಿಕ, ಭೂವೈಜ್ಞಾನಿಕ, ಮತ್ತು ಮಾನವ ಕಥೆಗಳನ್ನು ಹೇಳುವ ವಿವರಣಾತ್ಮಕ ಪ್ರದರ್ಶನಗಳನ್ನು ಆಯೋಜಿಸಲಾಗಿದೆ. ಜ್ವಾಲಾಮುಖಿ ಮತ್ತು ಪರ್ವತ ಶಿಖರದ ಕುಳಿಯ ರುದ್ರ ರಮಣೀಯ ನೋಟವನ್ನು ಇಲ್ಲಿ ನೋಡಿ ಆನಂದಿಸಬಹುದು. ಇಲ್ಲಿ ಮ್ಯೂಸಿಯಂ ಮಾದರಿಯ ಪ್ರದರ್ಶನವನ್ನು ಬಹಳ ಅಚ್ಚುಕಟ್ಟಾಗಿ ಏರ್ಪಡಿಸಲಾಗಿದೆ. ಹೊರಭಾಗದ ಕೋಣೆಗಳಲ್ಲಿ ಹಾಗೂ ಅದರ ಗೋಡೆಗಳ ಮೇಲೆ ಇರುವ ನೂರಾರು ಫೊಟೋಗಳು ಜ್ವಾಲಾಮುಖಿಯಿಂದಾದ ಅನಾಹುತಗಳನ್ನು ನಮ್ಮ ಕಣ್ಣ ಮುಂದೆ ಇರಿಸುವಲ್ಲಿ ಸಫಲವಾಗಿವೆ. ಅಲ್ಲೇ ಒಂದು ಕಡೆಯಲ್ಲಿ ಬಹು ಕುತೂಹಲಕಾರಿಯಾದ ಯಂತ್ರವೊಂದು ಗಮನಸೆಳೆಯಿತು. ಅಲ್ಲಿರುವ ಪ್ರಾಣಿಯ ಚಿತ್ರದ ಮೇಲೆ ಬೆರಳಿರಿಸಿದರೆ, ಆ ಪ್ರಾಣಿಯ ಓಟದ ರಭಸದ ಅನುಭವ, ಮಾಹಿತಿ ಜೊತೆಗೆ ಅದರ ಶಬ್ದವನ್ನೂ ಕೇಳಬಹುದು! ಮಕ್ಕಳಂತೂ ಇದನ್ನು ಬಹಳ ಆನಂದಿಸುತ್ತಿದ್ದರು…(ಜೊತೆಗೆ ನಾನೂ!) ಕಟ್ಟಡದೊಳಗೆ ಮಧ್ಯಭಾಗದಲ್ಲಿರುವ ಪುಟ್ಟ ಥಿಯೇಟರ್ ನಲ್ಲಿ ಹಗಲು ಪೂರ್ತಿ ನಡೆಯುತ್ತಿರುವ, 1980ರಲ್ಲಿ ಸಂಭವಿಸಿದ ಜ್ವಾಲಾಮುಖಿ ಸ್ಪೋಟದ ಬಗೆಗಿನ 20ನಿಮಿಷಗಳ ಸಾಕ್ಷ್ಯಚಿತ್ರವನ್ನು  ನೋಡಲು ಅದರೊಳಗೆ ಹೊಕ್ಕೆವು.

ಒಮ್ಮೆಗೆ ಸುಮಾರು 50ಮಂದಿ ಕುಳಿತುಕೊಳ್ಳಬಹುದಾದಂತಹ ಅಷ್ಟೇನೂ ಸುಸಜ್ಜಿತವಲ್ಲದ ಥಿಯೇಟರ್ ಆಗಿತ್ತದು.  ಆದರೆ ಪ್ರೊಜೆಕ್ಟರ್ ಮೂಲಕ ಸಣ್ಣದಾದ ಪರದೆಯ ಮೇಲೆ ಬೀಳುವ ದೃಶ್ಯಾವಳಿಗಳು, ಶಬ್ದಗಳ ಗುಣಮಟ್ಟ ಮಾತ್ರ ಯಾವ ಸುಸಜ್ಜಿತ ಥಿಯೇಟರ್ ಗೂ ಕಡಿಮೆಯಿರಲಿಲ್ಲ. ನಮ್ಮ ಕಣ್ಣಿನ ಎದುರಿಗೇ  ಸಂಭವಿಸಿದಂತೆನಿಸುವ ಜ್ವಾಲಾಮುಖಿ ಸ್ಪೋಟದ ದೃಶ್ಯಗಳು, ಅದರ ಬಳಿಕ ಆದಂತಹ ಅನಾಹುತಗಳನ್ನು ಪರದೆಯ ಮೇಲೆ ಮೂಡಿಸಿದ ರೀತಿ ಅತ್ಯದ್ಭುತ!   ಜ್ವಾಲಾಮುಖಿಯ ಶಾಖಕ್ಕೆ ಸುಟ್ಟುಹೋದ ಮರಗಳ ಜಾಗದಲ್ಲಿ ಸಹಸ್ರಾರು ರೆಡ್ ವುಡ್ ಗಿಡಗಳನ್ನು ನೆಟ್ಟು ಪೋಷಿಸುತ್ತಿರುವ ರೀತಿ ನಿಜಕ್ಕೂ ಮೆಚ್ಚುವಂತಹುದು. ಇದರಲ್ಲಿ ಹಲವಾರು ಸಂಘ ಸಂಸ್ಥೆಗಳು ಹಾಗೂ ಸ್ಥಳೀಯರ ಸಹಕಾರಗಳನ್ನು ನೆನಪಿಸಿದುದು ಮನತುಂಬಿತು. ಎಲ್ಲವನ್ನೂ ವೀಕ್ಷಿಸಿದ ಬಳಿಕ ನಮ್ಮೆಲ್ಲರ ಕಣ್ಣು ತೇವಗೊಂಡುದು ಸುಳ್ಳಲ್ಲ.

ಅದಾಗಲೇ ನಡುಹಗಲು ಇಳಿಯುವ ಹೊತ್ತಾಗಿ ಬಿಟ್ಟಿತ್ತು…ಗಂಟೆ 2:30… ನಮ್ಮ ಹೊಟ್ಟೆಯೊಳಗಿನ ಜ್ವಾಲಾಮುಖಿ ಭುಗಿಲೆದ್ದಿತ್ತು… ಅದನ್ನು ತಂಪು ಮಾಡಿದುದು ನಮ್ಮ ಡಬ್ಬದೊಳಗಿದ್ದ ಪುಳಿಯೊಗರೆ ಮತ್ತು ಮೊಸರನ್ನ! ಎಲ್ಲವನ್ನೂ ಖಾಲಿಯಾಗಿಸಿ ಹೊರಟಾಗ ಮಧ್ಯಾಹ್ನ ಮೂರುಗಂಟೆ. ಹಾಗಯೇ, ನಮ್ಮ ವಾಹನದ ಚಕ್ರಗಳು ಮುಂದಕ್ಕೆ ಉರುಳಿದವು…

(ಮುಂದುವರಿಯುವುದು…)

ಈ ಪ್ರವಾಸಕಥನದ ಹಿಂದಿನ ಎಳೆ ಇಲ್ಲಿದೆ:http://surahonne.com/?p=38151

-ಶಂಕರಿ ಶರ್ಮ, ಪುತ್ತೂರು.  

8 Responses

  1. ನಯನ ಬಜಕೂಡ್ಲು says:

    Very nice

  2. ತುಂಬಾ ವಿಸ್ತಾರವಾದ ಹಾಗೂ ವಿವರಣಾತ್ಮಕ… ಪ್ರವಾಸದ ಅನುಭವದ ಲೇಖನ… ಧನ್ಯವಾದಗಳು ಶಂಕರಿ ಮೇಡಂ

    • ಶಂಕರಿ ಶರ್ಮ says:

      ತಮ್ಮ ಪ್ರೀತಿಯ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು…ನಾಗರತ್ನ ಮೇಡಂ.

  3. Padma Anand says:

    ಸುಂದರ ಜುಳು ಜುಳು ಜಲಪಸತದ ಹಾಗೂ ಪ್ರಕೃತಿಯ ರೌದ್ರಾವತಾರದ ಜ್ವಾಲಾಮುಖಿಯ ವರ್ಣನೆ ಎಂದಿನಂತೆ ಕಣ್ಣಿಗೆ ಕಟ್ಟುವಂತೆ ಮೂಡಿ ಬಂದಿದೆ.

    • ಶಂಕರಿ ಶರ್ಮ says:

      ತಮ್ಮ ಪ್ರೋತ್ಸಾಹಕ ನುಡಿಗಳಿಗೆ ಧನ್ಯ ನಮನಗಳು ಪದ್ಮಾ ಮೇಡಂ.

  4. ಸುಚೇತಾ says:

    ಚೆನ್ನಾಗಿದೆ ಜಲಪಾತ ಹಾಗು ಜ್ವಾಲಾಮುಖಿಗಳ ವರ್ಣನೆ.

  5. ಮಹಾಬಲ says:

    ಸೊಗಸಾದ ನಿರೂಪಣೆ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: