ಶರಣೆಂಬೆ ವರಮಹಾಲಕ್ಷ್ಮಿ
ಈ ಬಾರಿ ಅಧಿಕಮಾಸ ಇರುವುದರಿಂದ ನಿಜಶ್ರಾವಣದಲ್ಲೇ ನಾವು ಈ ದೇವಿಯ ವ್ರತವನ್ನು ಆಚರಿಸುತ್ತೇವೆ. ವಿಷ್ಣು ಪತ್ನಿಯನ್ನು ಆರಾಧಿಸುವ ಇಂದಿನ ದಿನವನ್ನು “ವರಮಹಾಲಕ್ಷ್ಮಿ ವ್ರತ” ಎಂದು ಕರೆಯಲಾಗುತ್ತದೆ.
“ಶುಕ್ಲೇ ಶ್ರಾವಣಿಕೇ ಮಾಸೇ ಪೂರ್ಣಿಮೋಪ್ತಾನ್ತ್ಯಭಾರ್ಗವೇ
ವರಲಕ್ಷ್ಮ್ಯಾ ವ್ರತಂ ಕಾರ್ಯಂ ಸರ್ವಸಿದ್ಧಿ ಪ್ರದಾಯಕಂ”
” ನಭೋ ಮಾಸೇ ಪೂರ್ಣಿಮಾಯಾಂ ಅಂತಿಕಸ್ಥೇ ಭೃಗೋರ್ದಿನೇ
ಮತ್ಪೂಜಾ ತತ್ರ ಕರ್ತವ್ಯಾ ಸರ್ವಸಿದ್ಧಿ ಪ್ರದಾಯಿನಿ “….
ಇದು “ವ್ರತರತ್ನ “ಪುಟದಿಂದಾಯ್ದ ವರಲಕ್ಷ್ಮಿ ವ್ರತವನ್ನು ಆಚರಿಸುವ ವಿಧಿಯನ್ನು ಆಯ್ದು ಓದುಗರಿಗೆ ತಿಳಿಸುತ್ತಿರುವೆ. ಎಷ್ಟೋ ವಿಚಾರಗಳು ಬಂದು ಹೋಗಿದ್ದರೂ ಕೆಲವೊಮ್ಮೆ ಗೊತ್ತಿದ್ದರೂ ಸಹಾ ಮರೆತುಬಿಡುವ ಸ್ವಭಾವ ಮನುಷ್ಯನದು. ಮತ್ತೊಮ್ಮೆ ಆಚಾರ ವಿಚಾರಗಳತ್ತ ಗಮನ ಹರಿಸೋಣ.
ಶ್ರಾವಣ ಶುಕ್ಲ ಪೂರ್ಣಿಮೆಯ ದಿನಕ್ಕೆ ಅತೀ ಹತ್ತಿರದ ಶುಕ್ರವಾರದಂದು ಈ ಹಬ್ಬವನ್ನು ಆಚರಿಸಬೇಕಾಗಿದೆ. ಶುಕ್ರಗ್ರಹವು ಪೂರ್ವದಲ್ಲಿ ಬೆಳಗುತ್ತಿರುವ ಸಮಯದಲ್ಲಿ ವರಲಕ್ಷ್ಮಿ ವ್ರತ ಆರಾಧನೆ ಮಾಡಬೇಕೆಂಬ ಶಾಸ್ತ್ರ ವಿಧಿಯನ್ನು ಇಲ್ಲಿ ನೋಡುತ್ತೇವೆ. ಆದರೆ ಶುಕ್ಲಪಕ್ಷದ ಇತರ ಶುಕ್ರವಾರಗಳಲ್ಲಿಯೂ ವ್ರತವನ್ನು ಆಚರಿಸುವ ರೂಢಿ ಕಂಡುಬರುತ್ತದೆ.
ಶ್ರೀಲಕ್ಷ್ಮಿಯು ಕ್ಷೀರಸಾಗರದಲ್ಲಿ ಜನಿಸಿದಾಗ ಪಾರಿಜಾತದ ಚಿಗುರುಗಳಿಂದ ರಾಗ ( ಕೆಂಬಣ್ಣ, ದುಷ್ಟವಾದ ಕಾಮ) ವನ್ನೂ, ಚಂದ್ರಕಲೆಯಿಂದ ಕೇವಲ ವಕ್ರತೆಯನ್ನು, ಉಚ್ಚೈಶ್ಶ್ರವಸ್ಸಿನಿಂದ ಚಂಚಲತೆಯನ್ನು, ಕಾಲಕೂಟವಿಷದಿಂದ ಮೋಹನಶಕ್ತಿಯನ್ನು, ಮದಿರೆಯಿಂದ ಮದವನ್ನೂ ಮತ್ತು ಕೌಸ್ತುಭದಿಂದ ಕಡುನಿಷ್ಠುರತೆಯನ್ನೂ ಅವುಗಳ ಸಹವಾಸ ಪರಿಚಯದಿಂದ ಎತ್ತಿಕೊಂಡು ಬಂದಿದ್ದಾಳೆ. (ಕಾದಂಬರೀ – ಶುಕನಾಸೋಪದೇಶದ ಸಾಲುಗಳಿವು).
ಧನಲಕ್ಷ್ಮಿ, ಧಾನ್ಯಲಕ್ಷ್ಮೀ, ಸಂತಾನ ಲಕ್ಷ್ಮಿ,ವಿದ್ಯಾಲಕ್ಷ್ಮೀ, ಶೌರ್ಯ ಲಕ್ಷ್ಮಿ, ಕೀರ್ತಿ ಲಕ್ಷ್ಮೀ, ಸೌಮ್ಯ ಲಕ್ಷ್ಮೀ ಮತ್ತು ವಿಜಯಲಕ್ಷ್ಮಿ ಎಂಬಿವು ಅಷ್ಟಲಕ್ಷ್ಮಿಯ ಸ್ವರೂಪಗಳು ಎಂಬುದನ್ನು ಆಗಮಗಳು ಹೇಳುತ್ತವೆ.
“ವಕ್ತ್ರಾಬ್ಜೇ ಭಾಗ್ಯಲಕ್ಷ್ಮಿ: ಕರತಲಕಮಲೇ ಸರ್ವದಾ ಧಾನ್ಯಲಕ್ಷ್ಮೀ:
ದೋರ್ದಂಡೇ ವೀರಲಕ್ಷ್ಮಿ: ಹೃದಯಸರಸಿಜೇ ಭೂತಕಾರುಣ್ಯಲಕ್ಷ್ಮೀ:
ಖಡ್ಗಾಗ್ರೇ ಶೌರ್ಯ ಲಕ್ಷ್ಮಿ : ನಿಖಿಲಗುಣಗಣಾಡಂಬರೇ ಕೀರ್ತಿ ಲಕ್ಷ್ಮೀ
ಸರ್ವಾಂಗೇ ಸೌಮ್ಯ ಲಕ್ಷ್ಮೀ: ಸಪದಿ ಭವತು ಮೇ ಧರ್ಮಮೋಕ್ಷಾರ್ಥ ಸಿದ್ಧೇ: “
ನನ್ನ ಮುಖಕಮಲವನ್ನು ಭಾಗ್ಯಲಕ್ಷ್ಮಿಯೂ, ಕರಕಮಲದಲ್ಲಿ ಧಾನ್ಯಲಕ್ಷ್ಮೀ ಯೂ, ತೋಳುಗಳಲ್ಲಿ ವೀರಲಕ್ಷ್ಮಿಯೂ, ಹೃದಯಕಮಲದಲ್ಲಿ ಭೂತದಯಾಲಕ್ಷ್ಮಿಯೂ, ಕತ್ತಿಯ ತುದಿಯಲ್ಲಿ ಶೌರ್ಯ ಲಕ್ಷ್ಮಿಯೂ, ಎಲ್ಲಾ ಗುಣಗಣಗಳನ್ನು ವೈಭವದಿಂದ ಪ್ರದರ್ಶಿಸುವಾಗ ಕೀರ್ತಿ ಲಕ್ಷ್ಮೀಯೂ , ಎಲ್ಲಾ ಅಂಗಗಳಲ್ಲಿಯೂ ಸೌಮ್ಯ ಲಕ್ಷ್ಮೀಯೂ ನನಗೆ ಒಡನೆ ಉಂಟಾಗಲಿ. ಅಲ್ಲಿ ಯಾವಾಗಲೂ ನೆಲಸಿರಲಿ. ಅವುಗಳಿಂದ ಮೋಕ್ಷವೂ ಮತ್ತು ಧರ್ಮವೂ ಸಿದ್ಧಿಸಲಿ. ಕಾಮಿನೀ ಕಾಂಚನಗಳನ್ನು, ಖ್ಯಾತಿ ಲಾಭಗಳನ್ನು, ಪೂಜೆಗಳನ್ನು ತೊರೆದ ಆತ್ಮಸಾಧಕನೂ ಕೂಡಾ, ಸನ್ಯಾಸಿಯೂ ಕೂಡಾ ಭೂತದಯೆ,ಕ್ಷಮೆ,ಅನಸೂಯೆ ಇಂತಹ ಆತ್ಮಗುಣಸಂಪತ್ತನ್ನೂ,ಮೋಕ್ಷವನ್ನೂ ಪ್ರಾರ್ಥಿಸುತ್ತಾರೆ. ಹಾಗಾಗಿ ಇವುಗಳೆಲ್ಲದರ ಆಕಾರ ಲಕ್ಷ್ಮಿಯೇ ಆಗಿರುವುದರಿಂದ ಎಲ್ಲರಿಗೂ ಮಹಾಲಕ್ಷ್ಮಿಯೇ ಆರಾಧ್ಯಳು. ಈ ಕಾರಣದಿಂದಲೇ ಶೃತಿ, ಸ್ಮೃತಿ,ಪುರಾಣ ಇತಿಹಾಸ,ಆಗಮಾದಿಗಳಲ್ಲಿ ಹೇಳಿರುವಂತೆ ಬ್ರಹ್ಮಾದಿ ದೇವತೆಗಳೂ ಮತ್ತು ಸರ್ವಪುರುಷಾರ್ಥ ಸಾಧಕರೂ,ಸಿದ್ಧರೂ ಈ ತಾಯಿಯನ್ನು ಪೂಜಿಸಿ ಕೃತಾರ್ಥರಾಗುತ್ತಾರೆ. ಅನೇಕ ಆಚಾರ್ಯರು ಕೂಡಾ ಸಾಕಷ್ಟು ಭಕ್ತಿರಸದಿಂದ ದೇವಿಯನ್ನು ಅರ್ಚಿಸಿದ್ದಾರೆ.
“ಲಕ್ಷಯತಿ ಸರ್ವಂ ಸದಾ ಇತಿ ಲಕ್ಷ್ಮೀ” ಸದಾ ಎಲ್ಲರನ್ನೂ ಗಮನಿಸುತ್ತಾ ಎಲ್ಲರನ್ನೂ ಸಂತೋಷಪಡಿಸುವ, ಸಕಲ ನಾಮಾಂಕಿತಳಾದ ಮಹಾಲಕ್ಷ್ಮಿಯನ್ನು ಭಕ್ತಿಯಿಂದ ಪೂಜಿಸಲಾಗುತ್ತದೆ. ಜೀವ ಹಾಗೂ ಜಡಗಳನ್ನೂ ಪೋಷಿಸಿಕಾಪಾಡುವವಳು, ಸಕಲ ಚರಾಚರಗಳಲ್ಲೂ ಚೈತನ್ಯವಾಗಿರುವ ತಾಯಿಯನ್ನು ಧ್ಯಾನ ಪೂಜೆಗಳಿಂದ ಸಂತೃಪ್ತಿ ಗೊಳಿಸಬೇಕು. ಈ ಹಬ್ಬವನ್ನು ವ್ರತನಿಷ್ಠರು ಕಳಸಾದಿಗಳಲ್ಲಿ ಶ್ರೀ ದೇವಿಯನ್ನು ಆವಾಹನೆ ಮಾಡಿ ಆರಾಧಿಸುವರೂ ಉಂಟು, ನಿಯಮವಿಲ್ಲದೆ ಪೂಜಿಸುವವರೂ ಉಂಟು. ಮೇಲೆ ಹೇಳಿದಂತೆ ಶುಕ್ಲಪಕ್ಷದ ಹುಣ್ಣಿಮೆಗೆ ಸಮೀಪದ ಈ ದಿನ ಪವಿತ್ರವಾದದ್ದು. ಅಧಿಕ ಬಂದರೆ ಅಧಿಕಮಾಸದಲ್ಲಿ ಆಚರಿಸುವಂತಿಲ್ಲ. ನಿಜ ಶ್ರಾವಣಮಾಸದಲ್ಲೇ ಆಚರಿಸಬೇಕು.
ಇದು ಇಂದೇ ಏಕೆ ಅಂದರೆ ಆಯಾ ದೇವತಾಕೇಂದ್ರಗಳು ಸಹಜವಾಗಿ ತೆರೆದು ದೇವತಾನುಗ್ರಹವು ಸಹಜವಾಗಿ ಹರಿಯುವುದಕ್ಕೆ ಒಳ ಹೊರ ಪ್ರಕೃತಿಗಳ ಅನುಕೂಲ ಇರುವ ದಿನವನ್ನು ಜ್ಞಾನಿಗಳು ಆಯ್ಕೆ ಮಾಡಿರುತ್ತಾರೆ. ಶ್ರಾವಣಮಾಸ,ಶನಿವಾರ ವಿಷ್ಣುವಿನ ಆರಾಧನೆಯಾದರೆ, ಕಾರ್ತೀಕ ಮಾಸ,ಸೋಮವಾರ ಶಿವನಿಗೆ ಶ್ರೇಷ್ಠವು. ಹಾಗಾಗಿ ವಿಷ್ಣು ಪ್ರಿಯೆಯನ್ನು ಇದೇ ಮಾಸದಲ್ಲಿ ಪೂಜಿಸುವುದು ಶ್ರೇಷ್ಠ ಎನ್ನಲಾಗಿದೆ.
ಶ್ರೀದೇವಿಗೆ ಧ್ಯಾನ ,ಧೂಪ, ದೀಪ ನೈವೇದ್ಯಗಳಂತಹ ಷೋಡಶೋಪಚಾರ ಪೂಜೆಯನ್ನು ಸಮರ್ಪಿಸಬೇಕು. ಸಜ್ಜೆಯಪ್ಪ, ಸಿಹಿಗಡುಬು ಇವು ಮಧುರ ಸಿಹಿಯಿಂದ ಕೂಡಿರುವುದರಿಂದ ಇವು ನೈವೇದ್ಯಕ್ಕೆ ಶ್ರೇಷ್ಠ ಎನ್ನಲಾಗಿದೆ. ನಾರಾಯಣನಿಗೆ ಪ್ರಿಯವಾದ ಈ ಶ್ರಾವಣಮಾಸವು ಲಕ್ಷ್ಮಿಗೆ ಪ್ರಿಯವಾದ್ದರಿಂದ ಈ ಮಾಸವು ಈ ತಾಯಿಯ ಪೂಜೆಗೆ ಶ್ರೇಷ್ಠವಾಗಿದೆ. ಶುಕ್ಲಕೃಷ್ಣಪಕ್ಷದ ಮೊದಲನೆಯದು ದೇವತೆಗಳಿಗೆ ಪ್ರಿಯ, ಎರಡನೆಯದು ಪಿತೃಗಳಿಗೆ ಪ್ರಿಯವಾದುದು ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು.
ಯಥಾಶಕ್ತಿ,ಭಕ್ತಿಗಳಿಂದ ಈ ಹಬ್ಬವನ್ನು ಆಚರಿಸುತ್ತಿರುವ ಸರ್ವರಿಗೂ ಆ ತಾಯಿ ಸಕಲಸನ್ಮಂಗಳವನ್ನುಂಟುಮಾಡಲಿ.
ಎಲ್ಲರಿಗೂ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು.
-ಸಿ.ಎನ್.ಭಾಗ್ಯಲಕ್ಷ್ಮಿನಾರಾಯಣ
ಬರಲಿರು ವ ವರ ಮಹಾಲಕ್ಷ್ಮಿ ಹಬ್ಬದ ಸಂಪೂರ್ಣ ಚಿತ್ರ ಣ ಕೊಟ್ಟ ಸೋದರಿ ಲಕ್ಷ್ಮಿ ಗೆ ಅನಂತ ವಂದನೆಗಳು
ಭಕ್ತಿ ಪ್ರದಾನ ಸುಂದರ ಬರಹ
ಶೀಘ್ರವೇ ಆಗಮಿಸಲಿರುವ ವರಮಹಾಲಕ್ಷ್ಮಿ ಹಬ್ಬದ ಕುರಿತು ಬಹಳಷ್ಟು ಮಾಹಿತಿಗಳನ್ನು ಹೊತ್ತ ಲೇಖನ ಚೆನ್ನಾಗಿದೆ.