ಪುಸ್ತಕ ಪರಿಚಯ: ‘ಹಾಡಾಗಿ ಹರಿದಾಳೆ’ -ಶ್ರೀಮತಿ ಹೆಚ್.ಆರ್.ಲೀಲಾವತಿ.

Share Button


ಆತ್ಮಕಥನ: ಹಾಡಾಗಿ ಹರಿದಾಳೆ
ಲೇಖಕರು: ಶ್ರೀಮತಿ ಹೆಚ್.ಆರ್.ಲೀಲಾವತಿ.

ಸಂಕಟಗಳಲ್ಲಿಯೂ ಹಾಡಾಗಿಯೇ ಮಿಡಿದವರು

ಉಡುಗಣವೇಷ್ಟಿತ ಚಂದ್ರ ಸುಶೋಭಿತ ದಿವ್ಯಾಂಬರ ಸಂಚಾರಿ
ಕಣ್ಣ ನೀರಿನಲಿ ಮಣ್ಣ ಧೂಳಿನಲಿ ಹೊರಳುತ್ತಿರುವರ ಸಹಚಾರಿ

-ಜಿ.ಎಸ್. ಶಿವರುದ್ರಪ್ಪ

ಈ ಭಾವಗೀತೆಯನ್ನು ಕೇಳಿದ ಎಂಥ ಅರಸಿಕನೂ, ಆ ಮೋಹಕ ಕಂಠಕ್ಕೆ ಪರವಶನಾಗುತ್ತಾನೆ. ಅರವತ್ತು ಎಪ್ಪತ್ತರ ದಶಕಗಳಲ್ಲಿ ಇದನ್ನು ಕೇಳಿ ತನ್ಮಯರಾಗದ ರೇಡಿಯೋ ಪ್ರೇಮಿಗಳು ಇಲ್ಲವೇ ಇಲ್ಲ ಎಂದರೆ ಅದು ಸತ್ಯದ ಮಾತು. ಈ ಪೀಠಿಕೆ ಸಿರಿಕಂಠದ ಗಾಯಕಿ ಎಚ್ ಆರ್.ಲೀಲಾವತಿಯವರ ಬಗ್ಗೆ ಹೇಳತೊಡಗಲೋಸುಗ.

‘ಆತ್ಮಕಥನವೆಂದರೆ ಕಹಿಯೂ ಸಿಹಿಯಾಗಿ ದಾಖಲಾಗುವ ಮಧುರಕ್ಷಣದ ತುಣುಕುಗಳು.’ ತಾವನುಭವಿಸಿದ ಕಷ್ಟಕಾರ್ಪಣ್ಯಗಳು, ತಾರಕಮಟ್ಟಕ್ಕೇರಿದ ದುಃಖದುಮ್ಮಾನಗಳು, ಅವಮಾನಗಳು, ನೀಚಲಾರೆನೆಂಬ ಕಹಿಗಳು, ಬದುಕಲೇಬಾರದೆಂಬ ಕ್ಷಣಿಕ ನಿರ್ಧಾರಗಳು; ಇವೆಲ್ಲವುಗಳನ್ನು ಜಯಿಸಿ ಬಂದನಂತರ ಜೀವನದ ಮೌಲ್ಯವನ್ನು ಅರ್ಥ ಮಾಡಿಕೊಂಡು ಕೊನೆಗೊಂದು ದಿನ ತಾವುಂಡ ಎಲ್ಲ ಕಹಿಸಿಹಿಗಳನ್ನು; ಇದರ ನಡುವೆಯೇ ತನ್ನ ಅಭಿರುಚಿ, ಹವ್ಯಾಸ, ಆಸೆ, ವೃತ್ತಿ ಪ್ರವೃತ್ತಿಗಳಲ್ಲಿ ಸಾಧಿಸಿದ ಜಯಭೇರಿಯನ್ನು, ಸಂದ ಸನ್ಮಾನಗಳನ್ನು ಜತನ ಮಾಡಲೇಬೇಕೆಂಬ ಆಕಾಂಕ್ಷೆಗೆ ಬಿದ್ದು, ಪುಟಗಳಲಿ ರಕ್ಷಿಸಿ ತನ್ನಂತಹ ಹತಾಶಜೀವಿಗಳಿಗೆ ಕಾಣಿಕೆಯಾಗಿ, ಕೈದೀಪವಾಗಿ ನೀಡಬೇಕೆನಿಸುವ ಯಶಸ್ಸಿನ ಬುತ್ತಿಯೇ ಆತ್ಮಕಥನವೆಂದರೂ ತಪ್ಪಾಗಲಾರದೇನೋ.

ಈ ನಿಟ್ಟಿನಲ್ಲಿ ಶ್ರೀಮತಿ ಎಚ್.ಆರ್.ಲೀಲಾವತಿಯವರ ‘ಹಾಡಾಗಿ ಹರಿದಾಳೆ’ ಆತ್ಮಕಥನ ಓದುಗರ ಮುಂದೆ ತೆರೆದುಕೊಂಡಿದೆ. ಓದುಗ ಆತ್ಮಕಥನಗಳನ್ನು ಹೇಗೆ ಸ್ವೀಕರಿಸುತ್ತಾನೋ, ಅದನ್ನು ತನ್ನೆಣಿಕೆಯಲ್ಲಿ ಏನೆಂದು ಬಗೆಯುತ್ತಾನೋ ಅದು ಅವನ ವಿವೇಕಕ್ಕೆ ಬಿಟ್ಟಿದ್ದು. ಲೀಲಾವತಿಯವರು ತಮ್ಮ ಜೀವನದ ಹಾದಿಯಲ್ಲಿ ಸಾವಧಾನವಾಗಿ ಹೆಜ್ಜೆಯಿಟ್ಟ, ನಡೆದ, ದಾಪುಗಾಲು ಹಾಕಿದ, ಎಡವಿದ, ಉತ್ತುಂಗಕ್ಕೇರಿ ಹೋದ, ಕುಳಿತು ಸಾವರಿಸಿಕೊಂಡ ಎಲ್ಲವನ್ನೂ ನಿರ್ವಂಚನೆಯಿಂದ ಓದುಗನ ಮುಂದಿಟ್ಟಿದ್ದಾರೆ.

ಒಂದು ಉತ್ತಮ ಮನೆತನದಲ್ಲಿ ಜನ್ಮತಳೆದ ಲೀಲಾವತಿಯವರು ಅನೇಕ ಎಡರುತೊಡರುಗಳ ನಡುವೆಯೂ ಸಾಧನೆಯ ಹಾದಿಯಲ್ಲಿ ನಡೆದು ಈಗಲೂ ತಮ್ಮ ಮನೆತನದ ಗೌರವವನ್ನು ಹೆಚ್ಚಿಸಿದ್ದಾರೆ, ಕಾಯ್ದಿದ್ದಾರೆ, ತನ್ಮೂಲಕ ನಾಡಿನ ಕೀರ್ತಿಕಳಶಕ್ಕೊಂದು ಗರಿಯಾಗಿದ್ದಾರೆ.

ಲೇಖಕಿ ಉದ್ದಕ್ಕೂ ತಮ್ಮ ಬಾಲ್ಯ, ಯೌವ್ವನದ ದಿನಗಳನ್ನು ಆಗ ಒದಗಿಬಂದ ಅನೇಕ ಅವಕಾಶಗಳನ್ನು, ಕಂಡ ಸುಸಂಸ್ಕೃತ ವ್ಯಕ್ತಿಗಳನ್ನು ತಮ್ಮ ಬರವಣಿಗೆಯಲ್ಲಿ, ಮನದುಂಬಿ ಬಿಚ್ಚಿಡುತ್ತಾ ಹೋಗುತ್ತಾರೆ. ಅವರ ಬರವಣಿಗೆಯ ಶೈಲಿ ಸರಳವಾಗಿದ್ದರೂ ಅವರು ಹೇಳುವ ವಿಷಯಗಳು ಅರಗಿಸಿಕೊಳ್ಳಲು ಸ್ವಲ್ಪ ಕಷ್ಟವೇ ಎನಿಸುವಂತಿವೆ. ತಮಗೆ ತಿಳಿಯದೆ ಕೆಲವೊಂದು ಸಂದರ್ಭದಲ್ಲಿ ಬಲಿಪಶುವಾದ ತಮ್ಮ ಆ ದಿನಗಳನ್ನು ಅತ್ಯಂತ ದುಃಖದಿಂದ ನೆನೆಯುತ್ತಾರೆ. ಈ ವಿವರಗಳು ಕೆಲವೊಮ್ಮೆ ಕ್ಲೀಷೆಯೆನಿಸಿದರೂ ಅದನ್ನು ಮತ್ತೆ ಮತ್ತೆ ನೆನೆದುಕೊಳ್ಳುತ್ತಾರೆಂದರೆ, ಅದರಿಂದ ಅವರು ಪಟ್ಟ ಕಷ್ಟ ಅವಮಾನಗಳು ತೆತ್ತ ಬೆಲೆಗಳ ಬಗ್ಗೆ ಪಶ್ಚಾತ್ತಾಪವಿದೆ, ನೋವಿದೆ ಎಂದೇ ಓದು ಅರ್ಥೈಸಿಕೊಳ್ಳಬೇಕಾಗುತ್ತದೆ. ತಮಗೆ ಸಿಕ್ಕ ವಿದ್ಯಾರ್ಥಿವೇತನದ ಬಗ್ಗೆ ಹೆಮ್ಮೆಯಿಂದ ಹೇಳುತ್ತಾರೆ. ತಮ್ಮ ಉದ್ಯೋಗಸ್ಥಾನದಲ್ಲಿ ತಮಗಾದ ಅನ್ಯಾಯದ ವಿರುದ್ಧ ಸಿಡಿದೆದ್ದಿದ್ದನ್ನು ನಿರ್ಭೀತಿಯಿಂದ ತೆರೆದಿಡುತ್ತಾರೆ. ಪು.ತಿ.ನ. ಅವರೊಂದಿಗೆ ಮಾಡಬೇಕಾಗಿದ್ದ ಕೆಲಸವನ್ನು ಬಲವಂತವಾಗಿಯೇ ತಪ್ಪಿಸಿದ ಬಗ್ಗೆ ಈಗಲೂ ಅವರಲ್ಲಿ ನೋವಿದೆ. ಆದರೆ ನಂತರ ಪುತಿನ ಅವರೇ ಲೇಖಕಿಯ ಬೆನ್ನುತಟ್ಟಿ ಪ್ರಶಂಸೆ ಮಾಡಿದ್ದು ಅವರ ಜೀವನದ ಮರೆಯಲಾರದ ಸವಿ ಘಟನೆಯಾಗಿದೆ. ಕುವೆಂಪು ಜಿ.ಎಸ್.ಎಸ್., ಅವರಿಂದ ಹಿಡಿದು ಎಲ್ಲ ಜನಪ್ರಿಯ ಹಾಗೂ ಪ್ರಸಿದ್ಧ ಕವಿಗಳ ಸಂಪರ್ಕ ಲೇಖಕಿಗೆ ಸಿಕ್ಕಿರುವುದು ಅವರ ಜೀವನದ ಅನುಪಮ ಅನುಭವವೇ ಆಗಿದೆ. ಕಡಲತೀರದ ಭಾರ್ಗವರಂತೂ ಇವರಿಗೆ ತೀರಾ ಆತ್ಮೀಯರು. ಇವರ ಕಷ್ಟ ಸುಖಗಳಿಗೆ ಸ್ಪಂದಿಸಿ ಸರಿಯಾದ ರೀತಿಯಲ್ಲಿ ಇವರಿಗೆ ಮಾರ್ಗದರ್ಶನ ನೀಡಿದ ಮಹನೀಯರು.

ಮಾಜಿ ವಿದ್ಯಾಮಂತ್ರಿಗಳಾದ ಶ್ರೀಯುತ ಶಂಕರೇಗೌಡರ ‘ಪಾದುಕಾ ಕಿರೀಟಿ‘ಗೆ ಹಾಡುಗಳನ್ನು ರಚಿಸಿಕೊಟ್ಟಿದ್ದು, ಮತ್ತು ಶಂಕರೇಗೌಡರು ಇವರನ್ನು ಮಗಳಂತೆ ನಡೆಸಿಕೊಂಡಿದ್ದನ್ನು ತುಂಬು ಪ್ರೀತಿಯಿಂದ ನೆನೆಯುತ್ತಾರೆ. ಸಂಗೀತ ನಾಟಕ ಅಕಾಡೆಮಿ ಅಧ್ಯಕ್ಷ ಸ್ಥಾನ, ನೂರಾರು ಪ್ರಶಸ್ತಿಗಳು, ದೇಶದ ನಾನಾ ಮೂಲೆಯಲ್ಲಲ್ಲದೆ, ವಿದೇಶಗಳಲ್ಲಿಯೂ ಸಂಗೀತ ಕಾರ್ಯಕ್ರಮಗಳು, ಎಲ್ಲ ಹಿರಿಕಿರಿಯರೊಂದಿಗೆ ಜಾತ್ಯತೀತವಾಗಿ ಸ್ನೇಹ ಸೌಹಾರ್ದತೆಯಿಂದ ಬೆರೆತ ಲೀಲಾವತಿಯವರು ಅತ್ಯಂತ ಸರಳಜೀವಿಯೆಂಬುದನ್ನು ಅವರ ಬರವಣಿಗೆಯಿಂದ ಗುರುತಿಸಬಹುದಲ್ಲದೆ, ವೈಯಕ್ತಿಕವಾಗಿಯೂ ಕೂಡ ಇದು ಅತ್ಯಂತ ಸತ್ಯದ ಮಾತು.

ಹಾಡಾಗಿ ಹರಿದ ಲೀಲಾವತಿಯವರು, ಮುಳ್ಳಿನ ಮೇಲೆ ತನ್ನ ಜೀವನ ನಡೆದ ಬಗೆಯನ್ನು ಅತ್ಯಂತ ಪ್ರಾಮಾಣಿಕವಾಗಿ ಹೇಳುತ್ತಾ ಹೋಗುತ್ತಾರೆ. ಅಂದಿನ ರೇಡಿಯೋ ಭಾವಗೀತೆಗಳಲ್ಲಿ ಲೀಲಾವತಿಯವರ ಹೆಸರು ಕೇಳದ ದಿನವೇ ಇಲ್ಲವೆನ್ನಬಹುದು. ಅವರ ಗಾಯನಕ್ಕೆ ಮಾರು ಹೋಗಿ ಅವರನ್ನು ಸುಕುಮಾರಿ ಎಂದು ಕಲ್ಪಿಸಿಕೊಂಡವರೂ ಇದ್ದಾರೆ. ಅಂತಹವರಲ್ಲಿ ನಾನೂ ಒಬ್ಬಳು. ಸುಕುಮಾರಿಯೇನೋ ಹೌದು. ಆದರೆ ನೂರೆಂಟು ಕ್ರೌರ್ಯ, ಅವಮಾನ, ಅಸಡ್ಡೆಗಳ ನಡುವೆಯೂ ತಮ್ಮ ಮನಸ್ಸಿನ ಸ್ವಾಸ್ತ್ಯವನ್ನು ಕಾಪಾಡಿಕೊಂಡು, ಜೀವನ ಪ್ರೀತಿಯನ್ನುಳಿಸಿಕೊಂಡು, ಮುಖದಲ್ಲಿ ಸದಾ ನಗುವನ್ನು ಹೃದಯತುಂಬಿ ಹರಡಿಕೊಂಡಿರುವ ಲೀಲಾವತಿಯವರ ಗುಟ್ಟೇನು ಎಂದರೆ, ಅವರೇ ಹೇಳುವಂತೆ, ”ನನಗೆ ದ್ವೇಷಿಸುವ ಮನಸ್ಸಿಲ್ಲ. ಎಲ್ಲರನ್ನೂ ಪ್ರೀತಿಸುತ್ತೇನೆ. ಎಲ್ಲರನ್ನೂ ಸಮಾನವಾಗಿ ಕಾಣುತ್ತೇನೆ. ಜಗತ್ತು ಸುಂದರವಾಗಿದೆ. ಇದರಲ್ಲಿ ಸಂತೋಷವೇ ತುಂಬಿದೆ. ಸಂತೋಷವನ್ನೇ ಹಂಚಬೇಕು.” ಒಟ್ಟಾರೆ ಹೇಳಬೇಕೆಂದರೆ ‘ಅರಿಷಡ್ವರ್ಗಗಳನ್ನು ದೂರವಿಟ್ಟು ಎಲ್ಲರನ್ನೂ ನಿಶ್ಕಲ್ಮಷವಾಗಿ ಪ್ರೀತಿಸಿದ, ತನ್ನ ಮಮತೆಯ ತೆಕ್ಕೆಗೆ ತೆಗೆದುಕೊಂಡ ವಾತ್ಸಲ್ಯಮಯಿ.’ ಇದು ಅವರ ಸ್ವಭಾವ, ಅಲಿಖಿತ ನಿಯಮ, ಶರತ್ತು, ಗುರಿ ಏನಾದರೂ ಅಂದುಕೊಳ್ಳಬಹುದು.

ಲೀಲಾವತಿಯವರು ಬಹಳ ಗಟ್ಟಿಗಿತ್ತಿ ಮಹಿಳೆ. ಇವರನ್ನು ಹೀಗೆ ಬೆಳೆಸಿದ ಅವರ ಮನೆಯವರೂ ಬಹಳ ವಿಶಾಲ ಹೃದಯಿಗಳು. ಕಷ್ಟಸುಖಗಳಿಗೆ ಹೆಗಲು ಕೊಟ್ಟವರು. ಎಲ್ಲದಕ್ಕೂ ನಾನಿದ್ದೇನೆ ಎಂದವರು. ಅವರ ಕುಟುಂಬದ ಔದಾರ್ಯವೇ ಲೀಲಾವತಿಯವರನ್ನು ಸಂಗೀತ ಸಾಮ್ರಾಜ್ಞಿಯನ್ನಾಗಿಸಿದೆ, ಸಾಹಿತಿಯನ್ನಾಗಿಸಿದೆ, ಕವಿಯಾಗಿಸಿದೆ ಎಂದರೆ ತಪ್ಪಾಗಲಾರದು. ತಮ್ಮ ಜೀವನವನ್ನು ತೆರೆದಿಟ್ಟಿರುವ ಲೇಖಕಿ ತೊಂದರೆಗಳ ನಡುವೆಯೂ ರಘುರಾಮರೆಂಬ ಜೀವದ ಸಂಗಾತಿಯೊಂದಿಗೆ ಅನನ್ಯವಾದ ಬದುಕಿನ ನೆನಪನ್ನು ಉಳಿಸಿಕೊಂಡವರು. ಸೋಮಿ ಎಂಬ ಮುದ್ದು ಮಗನ ಆಸರೆಯಲ್ಲಿ ಬದುಕಿನ ಸಂಜೆಯನ್ನು ಸುಖವಾಗಿಯೇ ಕಳೆಯುತ್ತಿರುವವರು. ಒಮ್ಮೆ ಓದಿ ನಿಮ್ಮಲ್ಲೂ ಲೀಲಾವತಿಯವರ ಹಾಡುಗಳ ಗುನುಗುನಿಸುವಿಕೆ ಮರುಕಳಿಸಬಹುದು. ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತೆ ನಿಮ್ಮ ಹೃದಯದ ಧಮನಿಗಳಲ್ಲಿ ಭಾವವಾಗಿ ಹರಿಯಬಹುದು.

-ಬಿ.ಕೆ.ಮೀನಾಕ್ಷಿ, ಮೈಸೂರು

6 Responses

 1. ಆತ್ಮ ಕಥನ ಕೃತಿಯ ಪರಿಚಯ ಸೊಗಸಾಗಿ ಮೂಡಿಬಂದಿದೆ.ಅಭಿನಂದನೆಗಳು… ಗೆಳತಿ ಮೀನಾ..

 2. Padmini Hegde says:

  ಹಾಡಾಗಿ ಹರಿದ ಲೀಲಾವತಿಯವರ ಹಾಡುಪಾಡನ್ನು ಕಟ್ಟಿಕೊಡುವ ಲೇಖನ. ಚೆನ್ನಾಗಿದೆ

 3. ಆತ್ಮ ಕಥೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟು ಪರಿಚಯ ಮಾಡಿಕೊಟ್ಟ ಗೆಳತಿಗೆ ಧನ್ಯವಾದಗಳು

 4. ನಯನ ಬಜಕೂಡ್ಲು says:

  ಪುಸ್ತಕ ಪರಿಚಯ ಸೊಗಸಾಗಿದೆ.

 5. ಶಂಕರಿ ಶರ್ಮ says:

  ಪುಸ್ತಕಾವಲೋಕನ ಚೆನ್ನಾಗಿ ಮೂಡಿಬಂದಿದೆ.

 6. Padma Anand says:

  ಸೊಗಸಾಗಿ ಮೂಡಿ ಬಂದಿರುವ ಪುಸ್ತಕಾವಲೋಕನ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: