ಕಾದಂಬರಿ : ‘ಸುಮನ್’ – ಅಧ್ಯಾಯ 9

Share Button

 (ಹಿಂದಿನ ಸಂಚಿಕೆಯಿಂದ ಮುಂದುವರಿದುದು…)

ಗಿರೀಶ : ಕಿಚ್ಚು

ಧಾರಾಕಾರವಾದ ಮಳೆ. ಕಪ್ಪು ಮೋಡಗಳಿಂದ ಕಪ್ಪಾದ ಆಕಾಶ, ಅದೂ ಮಧ್ಯಾಹ್ನದ ಸಮಯ. ಬೆಳಗ್ಗೆ ಸೂರ್ಯ ಮೂಡಿದ್ದನೆ? ಹಾಗಾದರೆ ಎಲ್ಲಿ? ಮೋಡಗಳ ಹಿಂದೆ ಕಳೆದು ಹೋಗಿದ್ದ. ಒಂದು ಗಂಟೆಯಿಂದ ಸುರಿಯುವ ಮಳೆ, ಬೇಗನೆ ನಿಲ್ಲುವ ಹಾಗೆ ಕಾಣದು. ಬಕೇಟಿನಲ್ಲಿ ಯಾರೋ ಎತ್ತಿ ಎತ್ತಿ ಸುರಿದ ಹಾಗೆ. ಹತ್ತು ವರ್ಷದ ಗಿರೀಶ ಆ ಮಳೆಯಲ್ಲಿ ಮೇಲುಸಿರು ಬಿಡುತ್ತ ಅರ್ಧ ಗಂಟೆಯಿಂದ ಓಡುತ್ತಿದ್ದ. ಇನ್ನೇನು ಆ ಮೂಲೆ ತಿರುಗಿದರೆ ಮನೆ.

ಪುಟ್ಟ ರಾಜಕುಮಾರನ ಹಾಗೆ ಕಾಣುವ ಗಿರೀಶ ಒಬ್ಬ ಜಾಣ ಹಾಗೂ ಬಲು ಉತ್ಸಾಹಿ ಹುಡುಗ. ಓದಿನಲ್ಲಿ ಮೊದಲು, ಆಟದಲ್ಲಿ ಮೊದಲು, ಪಠ್ಯೇತರ ಚಟುವಟಿಕೆಗಳಲ್ಲಿ ಮೊದಲಿಗ. ಎಲ್ಲದರಲ್ಲು ಭಾಗವಹಿಸಬೇಕೆಂಬ ಅದಮ್ಯ ಉತ್ಸಾಹ. ಶಿಕ್ಷಕರ ಅಚ್ಚುಮೆಚ್ಚು. ಆ ಸಲದ ವಾರ್ಷಿಕೋತ್ಸವದಲ್ಲಿ “ಸ್ಲೀಪಿಂಗ್ ಬ್ಯೂಟಿ” ನಾಟಕ ಮಾಡಿಸುವುದಾಗಿ ಅವರ ಮಿಸ್ ಹೇಳಿದ್ದರು. ಅದರಲ್ಲಿ ಭಾಗವಹಿಸಲು ಇಚ್ಚಿಸುವವರು ಹೆಸರು ನೋಂದಾಯಿಸುತ್ತಿದ್ದ ಮಿಸ್ ಮುಂದೆ ಮಕ್ಕಳು ಬೀಡು ಬಿಟ್ಟಿದ್ದರು. ನಾಟಕದಲ್ಲಿ ರಾಜಕುಮಾರನ ಪಾತ್ರ ಮಾಡುವುದು ಗಿರೀಶನ ಕನಸು. ಅದಕ್ಕೆ ಆ ಪಾತ್ರಕ್ಕೆ “ನಾನು ನಾನು” ಎನ್ನುತ್ತ ಇನ್ನು ಐದಾರು ಹುಡುಗರು ಕೈಯತ್ತಿದಾಗ ಗಿರೀಶ ತಾನೂ ಕೈ ಎತ್ತಿದ. ಮಿಸ್ ಎಲ್ಲರನ್ನು ಒಮ್ಮೆ ನೋಡಿದರು. ಗಿರೀಶಗೆ ಮಾಡಿಸದಂತಹ ಪಾತ್ರ. ಅದರಲ್ಲಿ ಸಂದೇಹವಿರಲಿಲ್ಲ. ಆದರೆ ಪಾತ್ರಧಾರಿಗಳೇ ನಾಟಕಕ್ಕೆ ಉಡುಪು ಹೊಂದಿಸಬೇಕಿತ್ತು. ಶಾಲೆ ಬರಿ ರೊಟ್ಟಿನ ಕಿರೀಟ, ಕತ್ತಿ, ಬೆಲ್ಟು  ಮಾತ್ರ ಒದಗಿಸುವುದು. “ಗಿರೀಶ ನೀನು ನಿನ್ನ ಬೆಸ್ಟ್ ಡ್ರೆಸ್ ತೊಗೊಂಡು ಬಾ. ಆಮೇಲೆ ನಿರ್ಧರಿಸೋಣ” ಮಿಸ್ ಪುಸ್ತಕ ಮುಚ್ಚಿ ನಡೆದುಬಿಟ್ಟರು. ಗಿರೀಶನ ಉತ್ಸಾಹ ಜರ್ರನೆ ಇಳಿಯಿತು. ಪೆಚ್ಚು ಮುಖ, ಇನ್ನೇನು ಅಳಬೇಕು. ಎಲ್ಲರಿಗೂ ಬೆನ್ನು ಮಾಡಿ ನಡೆದುಬಿಟ್ಟ. ಶಾಲೆಯಿಂದಾಚೆ ಬಂದ ಗಿರೀಶ ಮನೆಗೆ ಓಡಲು ಆರಂಭಿಸಿದ. ಮಧ್ಯದಲ್ಲಿ ಮಳೆ ಶುರುವಾಯಿತು. ಅವಮಾನದಿಂದ ಇಳಿದ ಅವನ ಕಣ್ಣೀರು ಮಳೆಯಲಿ ಲೀನವಾಯಿತು. ಕೆಂಪಾದ ಮುಖ ಮೆಲ್ಲಗೆ ತನ್ನ ಬಣ್ಣಕ್ಕೆ ತಿರುಗಿತು.

ಅವನು ಉಡುಪು ತಂದಿದ್ದೂ ಆಯಿತು. ನಾಟಕದಲ್ಲಿ ರಾಜಕುಮಾರನೂ ಆದ. ಬಹುಮಾನವೂ ಬಂದಿತ್ತು. ಆದರೆ ಆ ಘಟನೆಯನ್ನಾಗಲಿ ಅಥವಾ ಆ ಅವಮಾನವನ್ನಾಗಲಿ ಅವನು ಮರೆಯಲಿಲ್ಲ. ಬೇರೆ ಪಾತ್ರದವರಿಗೆ ಡ್ರೆಸ್ ತಂದು ತೋರಿಸು ಎಂದು ಹೇಳಲಿಲ್ಲ ಆ ಮಿಸ್ ಅವನಿಗೆ ಮಾತ್ರ ಹಾಗೆ ಹೇಳಿದರು. ಅ ನೋವನ್ನು ಅವನು ಮರೆಯಲಿಲ್ಲ.

**

ಮನೆಯ ಮುಂದಿನ ಖಾಲಿ ಸೈಟಿನಲ್ಲಿ ಎಲ್ಲರು ಲಗೋರಿ ಆಡುತ್ತಿದ್ದರು. ಮೂಲೆಯಲ್ಲಿ ಕೆಲವರು ಚಪ್ಪಲಿ ಬಿಟ್ಟಿದ್ದರು. ಗಿರೀಶ ಮನೆಗೆ ಓಡಿ ತನ್ನ ಚಪ್ಪಲಿ ಬಿಟ್ಟು ಬಂದ. ಅಶೋಕ “ಏನು ಚಪ್ಪಲಿ ಸವಿದು ಹೋಗುತ್ತೆ ಅಂತ ಅದನ್ನ ಬಿಟ್ಟು ಬಂದ್ಯಾ. ಸೇವ್ ಮಾಡ್ತಾ ಇದಿಯಾ?” ಗಿರೀಶನ ಹಂಗಿಸಿದ. ಅವನ ಮುಖದಲ್ಲಿದ್ದ ತಾತ್ಸರ ದರ್ಪ ಗಿರೀಶನ ಹೃದಯವನ್ನು ಇರಿಯಿತು. ಅವನ ಮುಖಭಾವ ಗಿರೀಶ ಮನಸ್ಸಿನಲ್ಲಿ ಮುದ್ರೆಯೊತ್ತಿತು.

**

“ಬರ್ತೀಯಾ ಅಶೋಕ? ಟೆಕ್ಸಟ್‍ಬುಕ್ ತರೋಕೆ ಹೋಗ್ತಾ ಇದೀನಿ” ಸೈಕಲ್ ನಿಂದ ಇಳಿದು ಗಿರೀಶ ಕೂಗಿದ ಅಶೋಕ ಮನೆಯ ಮುಂದೆ ನಿಂತು. ಕ್ಯಾರಂ ಆಡುತ್ತಿದ್ದ ಅಶೋಕ “ಪ್ಲೀಸ್ ನಂದು ತಂದು ಬಿಡು” ಗಿರೀಶ ಕೈಗೆ ದುಡ್ಡಿಟ್ಟು ಆಟ ಮುಂದವರಿಸಿದ. ಪೆಚ್ಚಾಗಿ ಗಿರೀಶ ಸೈಕಲ್ ಹತ್ತಿ ಹೊರಟ. ವಾಪಸ್ ಬಂದು ಪುಸ್ತಕ ಕೊಟ್ಟು “ಇದು ಮಿಕ್ಕ ಹಣ ಒಂದೂವರೆ ರೂಪಾಯಿ” ಹಣ ಕೊಡಲು ಹೋದ ಗಿರೀಶನ ತಡೆದು ಅಶೋಕ “ಬೇಡ ಅದನ್ನ ನೀನೇ ಇಟ್ಕೋ” ಪುಸ್ತಕ ತೆಗೆದುಕೊಂಡು ಒಳಗೆ ಹೋಗಿಯೇ ಬಿಟ್ಟ. ಗಿರೀಶ ಅವಮಾನದಿಂದ ಸುಟ್ಟು ಹೋದ. ನಾಣ್ಯಗಳು ಅವನ ಕೈಯನ್ನು ಸುಡುವಷ್ಟು ಬಿಸಿ ಎನಿಸಿ ಗೋಡೆಯಲ್ಲಿ ಇದ್ದ ಗಣಪತಿ ಮುಂದೆ ಅವನ್ನು ಬೀಳಿಸಿ ಬಿಟ್ಟ. ಕೆಂಪು ಮುಖ ಹೊತ್ತು ಮನೆಗೆ ಹೊರಟ.

**

ಹತ್ತನೆ ತರಗತಿಯ ಹುಡುಗರು ಫುಟ್‍ಬಾಲ್ ಆಡಿ ಶಾಲೆಯ ಅಂಗಳದಲ್ಲಿ ಸುಧಾರಿಸಿಕೊಳ್ಳುತ್ತಿದ್ದರು. ಮುಂದೆ ಪಿಯುಸಿಯಲ್ಲಿ ಏನು ಓದುವುದು ಎಂಬ ಚರ್ಚೆ ನಡೆದಿತ್ತು. ಗಿರೀಶ “ನಾನು ಇಂಜಿನಿಯರ್ ಆಗ್ತೀನಿ” ಎಂದ. “ಇಂಜಿನಿಯರ್ ಮಕ್ಳು ಇಂಜಿನಿಯರ್, ಡಾಕ್ಟರ್ ಮಕ್ಳು ಡಾಕ್ಟ್ರು ಆಗ್ತಾರೆ” ಡಾಕ್ಟರ್ ಮಗ ಅರವಿಂದ ಅದು ಒಂದು ವೇದವಾಕ್ಯ ಎನ್ನುವಂತೆ ಖಚಿತವಾಗಿ ಹೇಳಿದ. “ನೀನು ಬರಿ ಮೇಷ್ಟ್ರು ಆಗ್ತೀಯಾ. ಇನ್ನೇನು ಆಗೋಲ್ಲ” ಅರವಿಂದನ ಮಾತಿನಲ್ಲಿ ಗಿರೀಶಗೆ ಕೇಳಿಸಿದ್ದು ಇದು. ತನ್ನ ಅವಮಾನವನೆಲ್ಲ ಸೈಕಲ್ ಮೇಲೆ ತೀರಿಸುತ್ತ ಮನೆಗೆ ಹೊರಟ.

**

ಎಸ್.ಎಲ್.ಸಿಯಲ್ಲಿ ್ಯಾಂಕ್ ಪಡೆದು ಗಿರೀಶ ಪಿಯುಸಿಯಲ್ಲಿ ಸೈನ್ಸ್ ಓದುತ್ತಿದ್ದ. ಇನ್ನೇನು ಎರಡನೆ ಪಿಯುಸಿಯ ಪರೀಕ್ಷೆ ಹತ್ತಿರ ಬಂದಿತ್ತು. ಅಶೋಕ ಅವನ ಕಾಲೇಜಿನಲ್ಲೇ ಇದ್ದ. ಹತ್ತನೆ ತರಗತಿಯಲ್ಲೂ ಸರಿಯಾಗಿ ಅಂಕಗಳು ಬಂದಿರಲಿಲ್ಲ. ಈಗ ಅವನು ಓದುತ್ತಿರುವ ವೈಖರಿ ನೋಡಿ ಅವನ ತಂದೆಗೆ ಚಿಂತೆಯಾಗಿ ಗಿರೀಶ ಕಂಡಾಗ “ಗಿರೀಶ ನಮ್ಮ ಅಶೋಕನ ಜೊತೆ ಕಂಬೈನ್ಡ್ ಸ್ಟಡೀಸ್ ಮಾಡು ಬಾ ಇವತ್ತು ರಾತ್ರಿ” ಎಂದು ಕರೆದಿದ್ದರು. ಸರಿ ಗಿರೀಶ ರಾತ್ರಿ ಊಟ ಮುಗಿಸಿ ಅವರ ಮನೆಗೆ ಹೋದ. ಇಬ್ಬರು ಓದುತ್ತ ಕುಳಿತರು ಅಶೋಕನ ಕೋಣೆಯಲ್ಲಿ. ರಾತ್ರಿ ಹನ್ನೆರಡರ ಸಮಯ. ಇದ್ದ ಒಂದು ಮಂಚದ ಪಕ್ಕ ಎರಡು ಹೊದಿಕೆ ಹಾಸಿ “ಗಿರೀಶ ನಿಂಗೆ ನಿದ್ದೆ ಬಂದಾಗ ಇಲ್ಲಿ ಮಲಗಿಕೋ” ಎನ್ನುತ್ತ ಮಂಚದ ಮೇಲೆ ಗೊರಕೆ ಹೊಡೆಯಲು ಆರಂಭಿಸಿದ ಅಶೋಕ. ಗಿರೀಶನ ಮೈ ಹತ್ತಿ ಉರಿಯುತ್ತಿತ್ತು. ಬಹಳ ಕಷ್ಟದಿಂದ ಓದಿನಲ್ಲಿ ತನ್ನನ್ನು ತಾನು ತೊಡಗಿಸಿಕೊಂಡ. ರಾತ್ರಿಯಿಡೀ ಓದಿ ಕೋಳಿ ಕೂಗುತ್ತಲ್ಲೇ ಇನ್ನು ಗೊರಕೆ ಹೊಡೆಯುತ್ತಿದ್ದ ಅಶೋಕನ ಬಿಟ್ಟು ಮನೆಗೆ ಮರಳಿದ. ಇನ್ನೆಂದೂ ಅವನು ಅಶೋಕನ ಜೊತೆ ಕಂಬೈನ್ಡ್ ಸ್ಟಡೀಸ್ ಮಾಡಲಿಲ್ಲ.

**

ಘಟನೆಗಳು ಜೀವನದ ಮೈಲಿಗಲ್ಲುಗಳಾದರೆ ಗಿರೀಶನ ಜೀವನದ ಮೈಲಿಗಲ್ಲುಗಳಿವು. ಇವೇ ಗಿರೀಶನ ವ್ಯಕ್ತಿತ್ವವನ್ನು ರೂಪಿಸಿದ ಘಟನೆಗಳು. ಒಬ್ಬ ಅಂಚೆಚೀಟಿ ಸಂಗ್ರಾಹಕ ತರಾವರಿ ಅಂಚೆಚೀಟಿಗಳನ್ನು ಕೂಡಿ ಹಾಕುವ ಹಾಗೆ ಗಿರೀಶ ಈ ಘಟನೆಗಳನ್ನು, ಅವು ಮೂಡಿಸಿದ ಭಾವನೆಗಳನ್ನು ಕಲೆ ಹಾಕಿದ್ದ. ಅವನ್ನು ಮೆಲಕು ಹಾಕಿ ಅವುಗಳಲ್ಲಿ ಇಲ್ಲದ ಆಯಾಮಗಳನ್ನು ಕಲ್ಪಿಸಿಕೊಂಡು ತನ್ನ ಮನಸ್ಸಿನಲ್ಲಿ ಹುಳಿ ಹಿಂಡಿ ಜೀವನದಲ್ಲಿ ಕಿಚ್ಚು ತುಂಬಿಕೊಂಡಿದ್ದ. ಅವು ಅವನನ್ನು ಬಿಡಲು ತಯಾರಾದರೂ ಅವನ್ನು ಅವನು ಬಿಡಲಾರ. ಹೀ ಜಸ್ಟ್ ಕುಡ ನಾಟ್ ಮೂವ್ ಆನ್.

***

ಗಿರೀಶನ ತಂದೆ ನಾಗರಾಜರಾಯರು ಊರಿನ ಸರಕಾರಿ ಶಾಲೆಯಲ್ಲಿ ಹೈಸ್ಕೂಲ ಮೇಷ್ಟ್ರು. ತಾಯಿ ಜಯ ಒಬ್ಬ ಸರಳವಾದ ಗೃಹಣಿ. ವಾಸ ಮಾಡಲು ಪುಟ್ಟ ಮನೆಯಿತ್ತು. ಅದು ಅವರು ಕಟ್ಟಿದ ಮನೆ. ನಾಗರಾಜರಾಯರ ತಂದೆ ಅವರಿಗೆ ಒಂದು ಮನೆ ಬಿಟ್ಟು ಹೋಗಿದ್ದರು. ಅದನ್ನು ಬಾಡಿಗೆ ಕೊಟ್ಟಿದ್ದರು. ಇದ್ದ ಒಬ್ಬನೆ ಮಗನನ್ನು ಅಕ್ಕರೆಯಿಂದ ಬೆಳೆಸಿದ್ದರು. ಊರಿನ ಪ್ರತಿಷ್ಟಿತ ಕಾನ್ವೆಂಟಿಗೆ ಸೇರಿಸಿದ್ದರು. ಅಲ್ಲಿ ಬರುವ ಮಕ್ಕಳೆಲ್ಲ ಮಧ್ಯಮವರ್ಗಕ್ಕಿಂತ ಮೇಲು ದರ್ಜೆಯವರು. ಉಡಿಗೆ ತೊಡಿಗೆ ಊಟ ಉಪಚಾರಕ್ಕೆ ಎಂದೂ ಕೊರತೆ ಇರಲಿಲ್ಲ ಮನೆಯಲ್ಲಿ. ಆದರೆ ಗಿರೀಶ ಶಾಲೆಗೆ ನಡೆದು ಹೋಗುತ್ತಿದ್ದ. ಅವನ ಗೆಳೆಯರೆಲ್ಲ ಆಟೋದಲ್ಲಿ ಬರುತ್ತಿದರು. ಅವನು ಸ್ವಂತ ಸೈಕಲ್ ಕಂಡಿದ್ದು ಪಿಯುಸಿಗೆ ಬಂದಾಗ. ಗೆಳೆಯರೆಲ್ಲ ಹೈಸ್ಕೂಲಿನಲ್ಲೇ ಸೈಕಲ್ ತರುತ್ತಿದ್ದರು. ಅವನ ಹುಟ್ಟುಹಬ್ಬಕ್ಕೆ ಮಕ್ಕಳಿಗೆಲ್ಲ ಪ್ರೀತಿಯಿಂದ ಅವನ ಅಮ್ಮ ಮಾಡಿದ ತರಹ ತರಹದ ತಿಂಡಿ. ಕೇಕ್ ಇಲ್ಲ. ನೆಲದ ಮೇಲೆ ಹಾಸಿದ ಜಮಖಾನೆ ಮೇಲೆ ಕೂರಬೇಕು. ಎಲ್ಲಾದರೂ ಹೋಗಬೇಕೆಂದರೇ ನಾಗರಾಜರಾಯರು ನಡದೇ ಹೋಗುತ್ತಿದ್ದರು. ಎಲ್ಲರೂ ಹೊರಟರೇ ಬಸ್ಸೇ ಗತಿ. ಅವರಮ್ಮ ಜಯ ಕೂಡ ಹಾಗೇ. ತರಕಾರಿ ತರಲು ನಡೆದು ಹೋಗುತ್ತಿದ್ದರು. ಬೇರೆ ಮಕ್ಕಳ ಅಮ್ಮಂದಿರು ಆಟೋ ಅಥವಾ ಕಾರಿನಲ್ಲೇ ಓಡಾಡುವರು. ಇದು ದೊಡ್ಡ ಅಪರಾಧ ಗಿರೀಶ ಕಣ್ಣಿನಲ್ಲಿ. ವರ್ಷದಲ್ಲಿ ಮೂರು ನಾಲ್ಕು ಜೊತೆ ಹೊಸ ಬಟ್ಟೆ ಕೊಡಿಸಿದರೂ, ಪ್ರತಿ ಹಬ್ಬಕ್ಕೆ ಹೊಸ ಬಟ್ಟೆ ಕೊಡಿಸುವುದಿಲ್ಲ ಎಂಬ ಕೊರಗು. ದೀಪಾವಳಿಯಲ್ಲಿ ಎಲ್ಲರು ಸಾವಿರಾರು ರೂಪಾಯಿಯ ಪಟಾಕಿ ಹೊಡೆದರೆ ಪಟಾಕಿ ತಯಾರು ಮಾಡುವ ಕಾರ್ಖಾನೆಯಲ್ಲಿ ಬರಿ ಹಸುಳೆಗಳು ಕೆಲಸ ಮಾಡುವರು. ಅದನ್ನು ಖರೀದಿಸುವುದೇ ಅಮಾನವೀಯ. ಇನ್ನು ಅದರ ಹೊಗೆ ಪರಿಸರಕ್ಕೆ ಹಾನಿಕಾರಕ ಎಂಬ ಪ್ರವಚನ ಬೇರೆ. ಹೀಗೆ ಗಿರೀಶ ಕಣ್ಣಿಗೆ ತನ್ನ ಹಾಗೂ ತನ್ನ ಗೆಳೆಯರ ಮಧ್ಯ ಹಲವಾರು ಏರುಪೇರುಗಳೇ ಕಾಣುತ್ತಿದವು. ಅವರ ತಂದೆಯ ಹತ್ತಿರ ಸಾಕಷ್ಟು ದುಡ್ಡು ಇತ್ತು. ಆದರೆ ಅವರಿಗೆ ಸರಳವಾದ ಜೀವನ ಇಷ್ಟ. ಪ್ರದರ್ಶನ ಮಾಡುವ ಜಾಯಮಾನವೇ ಅಲ್ಲಾ. ಇದು ಗಿರೀಶನಿಗೆ ತಿಳಿಯದು. ಅಪ್ಪ ದೊಡ್ಡ ಕಂಜೂಸು. ದುಡ್ಡು ಇಲ್ಲದಿದ್ದರೇ ಮನೆಪಾಠ ಮಾಡಬೇಕು, ಜಮ್ ಅಂತ ಇರಬೇಕು. ಹೀಗೆ ಯೋಚಿಸುವ ಅವನಲ್ಲಿ ಒಂದು ವಿಧವಾದ ಕೀಳರಿಮೆ ಮೊಳಕೆ ಒಡೆಯುತ್ತಿದೆ ಎಂಬ ಅರಿವು ಅವರಿಗೆ ಆಗಲೇ ಇಲ್ಲ.

ಗಿರೀಶ ದೊಡ್ಡವನಾದ. ಅವನಿಗೆ ಅವನ ತಂದೆ ತಾಯಿಯ ನಿಲುವು, ಸರಳ ಜೀವನ ಒಪ್ಪಿಗೆಯಾಗುತ್ತಲೇ ಇರಲಿಲ್ಲ. ಅವರಿಗೆ ಅವನಲ್ಲಿ ಮೊಳಕೆಯೊಡೆಯುತ್ತಿದ್ದ ಕೀಳರಿಮೆ ಅದರಿಂದಾಗಿ ಬೇರೂರುತ್ತಿರುವ ಎಲ್ಲರಿಗಿಂತ ತಾನು ಮೇಲಿರಬೇಕೆಂಬ ಛಲ ಅರಿವಾಗಲಿಲ್ಲ. ನೀರು ಕುಡಿದಂತೆ ಸಲೀಸಾಗಿ ಸಿ.ಇ.ಟಿ (ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ) ಪಾಸ್ ಮಾಡಿ ಬೆಂಗಳೂರಿನ ಪ್ರತಿಷ್ಟಿತ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗಕ್ಕೆ ಸೀಟು ಗಿಟ್ಟಿಸಿದ. ನಾಗರಾಜರಾಯರು ಸಂಭ್ರಮದಿಂದ ಮಗನನ್ನು ಕಾಲೇಜಿಗೆ ಸೇರಿಸಿದರು. ಹಾಗೇ ಹಾಸ್ಟೆಲಿಗೆ ಕೂಡ.

ನಾಲ್ಕು ವರ್ಷ ಕಳೆದದ್ದೇ ಗೊತ್ತಾಗಲಿಲ್ಲ. ಸೆಮಿಸ್ಟರ್ ಮಧ್ಯದ ರಜೆಯಲ್ಲಿ ಊರಿಗೆ ಬರುವ ಮಗನ್ನನ್ನು ನೋಡಿ ನಾಗರಾಜರಾಯರು ಹಾಗೂ ಜಯ ಸಂತೋಷಪಡುತ್ತಿದರು ಅವನಲ್ಲಿ ಆಗುತ್ತಿದ್ದ ಬದಲಾವಣೆಗಳನ್ನು ನೋಡಿ ಸಂಭ್ರಮಪಡುತ್ತಿದ್ದರು. ಮೊದಲೇ ನೋಡಲು ಸ್ಫುರದ್ರೂಪಿ ಈಗ ಬೆಂಗಳೂರಿನಲ್ಲಿ ಕೊಂಡ ತರಾವರಿ ಸಿದ್ಧ ಉಡುಪುಗಳನ್ನು ಧರಿಸುವ ಗಿರೀಶನಿಗೆ ಹೊಸ ಕಳೆ ಬಂದಿತ್ತು. ಉಡಿಗೆ ತೊಡಿಗೆ ಬದಲಾಯಿತು ನಡೆ ನುಡಿಯಲ್ಲಿ ಬದಲಾವಣೆ ಬಂದಿತು. ಇಂಜಿನಿಯರಿಂಗ್ ಮುಗಿಸಿ ಕೆಲಸಕ್ಕೆ ಮಗ ಸೇರ್ತಾನೆ ಇನ್ನು ಎಂದು ಸಂಭ್ರಮಿಸುತ್ತಿದ್ದ ನಾಗರಾಜರಾಯರಿಗೆ ಗಿರೀಶ ಎಮ್.ಬಿ.ಎ (ಮಾಸ್ಟರ್ ಇನ್ ಮ್ಯಾನೇಜ್ಮೆಂಟ್) ಮಾಡಲು ಹೊರಟ ವಿಷಯ ಗೊತ್ತಾಗಿದ್ದು  ಗಿರೀಶ ಕರೆ ಮಾಡಿದಾಗ. ರಜೆಯಲ್ಲಿ ಅವನು ಊರಿಗೆ ಬಂದಾಗ ವಿಧ್ಯಾರ್ಥಿ ಸಾಲಕ್ಕೆ ಅರ್ಜಿ ಹಾಕಿದ್ದೇ ಗೊತ್ತಿಲ್ಲ. ಕ್ಯಾಟ್ (ಎಮ್.ಬಿ.ಎ ಸೇರಲು ಪ್ರವೇಶ ಪರೀಕ್ಷೆ) ಪಾಸ್ ಮಾಡಿ ಬೆಂಗಳೂರು ಐ.ಐ.ಎಮ್ (ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್) ನಲ್ಲಿ ಸೀಟು ಸಿಕ್ಕಾಗ ದುಡ್ಡು ತೆಗೆದುಕೊಂಡು ಬೆಂಗಳೂರಿಗೆ ಬರಲು ಗಿರೀಶ ಕರೆ ಮಾಡಿದ್ದ. ಮಗ ತನ್ನ ಈ ಯೋಚನೆಯನ್ನು ಮೊದಲು ತಿಳಿಸೇ ಇರಲಿಲ್ಲ ಎಂದು ಪೆಚ್ಚು ಆದರೂ ಸಂತಸದಿಂದಲೇ ಬ್ಯಾಂಕಿನಿಂದ ಹಣ ತೆಗೆದುಕೊಂಡು ಬೆಂಗಳೂರಿಗೆ ಧಾವಿಸಿದ್ದರು.

ಅರ್ಜಿಯನ್ನು ತುಂಬಿ ಗುಮಾಸ್ತರ ಮುಂದೆ ನಿಂತಿದ್ದ ಗಿರೀಶ ಹಣ ಪಾವತಿಸಲು ಅವನ ಸರದಿ ಬಂದಾಗ ನಾಗರಾಜರಾಯರು ತಮ್ಮ ಜೇಬಿನಿಂದ ಒಂದು ಕರವಸ್ತ್ರದ ಗಂಟನ್ನು ತೆಗೆದರು. ಅದನ್ನು ಬಿಡಿಸಿದರೆ ಅದರೊಳಗೆ ಸಾವಿರ ರೂಪಾಯಿ ನೋಟುಗಳ ಒಂದು ಕಟ್ಟು. ಗಿರೀಶನಿಗೆ ಸಿಟ್ಟು ನೆತ್ತಿಗೇರಿತು. ಅವರ ಕೈಯಿಂದ ಆ ದುಡ್ಡನ್ನು ಒಮ್ಮೆಲ್ಲೇ ಕಸಿದುಕೊಂಡು ಕರವಸ್ತ್ರವನ್ನು ಅಲ್ಲೆ ಬಿಸಾಕಿ ದುಡ್ಡನ್ನು ಏಣಿಸದೇ ಗುಮಾಸ್ತನ ಕೈಗೆ ತುರುಕಿದ. ಅವನ ಮುಖದಲ್ಲಿನ ಸಿಟ್ಟು, ತಿರಸ್ಕಾರವನ್ನು ಅವರಮ್ಮ ನೋಡಿ ಬೆಚ್ಚಿ ಬಿದ್ದರು. ನೆಲದ ಮೇಲೆ ಬಿದ್ದ ಕರವಸ್ತ್ರವನ್ನು ಎತ್ತಲು ಬಗ್ಗಿದ ನಾಗರಾಜರಾಯರಿಗೆ ಇದ್ಯಾವುದು ಕಾಣಿಸಲಿಲ್ಲ. ಹಣ ಕೈಯಲ್ಲಿ ಹಿಡಿದು ಗುಮಾಸ್ತನಿಗೆ ಕೊಡುವ ಮುನ್ನ ಗಿರೀಶನ ಕಣ್ಣು ಬಾಬ್ ಕಟ್ ಕೂದಲಿನ ಹುಡುಗಿಯ ಮೇಲೆ ಬಿದ್ದಿತು. ಅವಳ ಕಣ್ಣುಗಳಲ್ಲಿದ್ದ ತಿರಸ್ಕಾರ ಗಿರೀಶ ಕಣ್ಣಿನಲ್ಲಿದ್ದ ತಿರಸ್ಕಾರದ ಸಾವಿರ ಪಟ್ಟು ಹೆಚ್ಚು ಇತ್ತು. ಹೋದ ಕಡೆಯಲ್ಲ ತಮ್ಮ ಬಡತನದ ಪ್ರದರ್ಶನ ಮಾಡಿ ಅವಮಾನ ಮಾಡ್ತಾರೆ. ಗಿರೀಶನಿಗೆ ತಲೆ ಸಿಡಿದು ಹೋಗುವಷ್ಟು ಸಿಟ್ಟು.

ಆ ಚಿಕ್ಕ ಕೂದಲಿನ ಬೆಡಗಿ ಅನುಪಮಾ. ಮುಂದೆ ಅವನ ಸಹಪಾಠಿ. ಶ್ರೀಮಂತ ಮನೆತನದಿಂದ ಬಂದ ಅನುಪಮಾಗೆ ಮೈಯಲ್ಲಾ ಕೊಬ್ಬು. ಆಳುಕಾಳುಗಳ ಮಧ್ಯ ಬೆಳೆದ ಅವಳಿಗೆ ದರ್ಪ ಹೇಳ ತೀರದು. ಕಾರಿನಲ್ಲಿ ಬಂದು ಹೋಗುವ ಆ ಚಿಟ್ಟೆಗೆ ಯಾವಾಗಲೂ ದುಂಬಿಗಳು ಸುತ್ತಿರುತ್ತಿದ್ದವು. ಅವಳ ತಳುಕಿಗೆ, ಅವಳ ಬಿನ್ನಾಣಕ್ಕೆ ಸೋತವರು ಬಹಳ ಜನ. ದುರದೃಷ್ಟವಷಾತ್ ಗಿರೀಶ ಹೃದಯ ಕೂಡ ಅವಳನ್ನು ಕಂಡರೆ ವೇಗವಾಗಿ ಓಡುತ್ತಿತ್ತು. ಆದರೇ ಅವಳು ಅವನನ್ನು ನೋಡುವ ಅಥವ ಮಾತಾನಾಡುವ ಕೃಪೆ ತೋರಿದಾಗ  ಅವಳ ಕಣ್ಣಲ್ಲಿ, ಹಾವಭಾವದಲ್ಲಿ ಆ ಮೊದಲ ಭೇಟಿಯ ನೋಟದ ಛಾಯೆಯೇ ಎದ್ದು ಕಾಣುತ್ತಿತ್ತು. ಅದರ ಅರಿವಾದ ಕ್ಷಣ ಅವನು ಹಿಂಡಿ ಹೋಗುತ್ತಿದ್ದ. ಒಳಗೊಳಗೆ ಕುಗ್ಗಿ ಹೋಗುತ್ತಿದ್ದ. ಹೀಗೇ ಎರಡು ವರ್ಷ ಕಳೆದು ಹೋಯಿತು. ಅವನು ಸಮಾಜದಲ್ಲಿ ಯಾವ ಸ್ಥಾನವನ್ನು ಅಲಂಕರಿಸಬೇಕೆಂದು ಆಸೆಪಟ್ಟಿದನೋ ಅನುಪಮಾ ಆ ಸ್ಥಾನದಿಂದ ಎಲ್ಲರನ್ನು ಬಗ್ಗಿ ನೋಡುತ್ತಿದ್ದಳು. ಆ ಎರಡು ವರ್ಷವೂ ಅವಳನ್ನು ಆರಾಧಿಸಿದ ಆದರೆ ಅವಳಿಗೆ ಅವನ ಲೆಕ್ಕವೇ ಇಲ್ಲ.  ಸಮಾಜದಲ್ಲಿ ಶ್ರೀಮಂತರ ಸಾಲಿನಲ್ಲಿ ತಾನು ಮೊದಲಿಗನಾಗಬೇಕೆಂಬ ಛಲ ಇಮ್ಮಡಿಯಾಯಿತು. ಶ್ರೀಮಂತನು ಆಗುವುದಲ್ಲದೇ ಅವರ ಹಾವಭಾವ ಅವರ ನಡೆನುಡಿ ಅವರ ದರ್ಪ ಬೆಡಗು ಎಲ್ಲಾ ಮೈಗೂಡಿಸಿ ಕೊಳ್ಳುವ ನಿರ್ಧಾರ ಗಟ್ಟಿಯಾಯಿತು.

ಅನುಪಮಾ ಎಮ್.ಬಿ.ಎ. ಮುಗಿಸಿ ಅಮೆರಿಕಾಗೆ ಹಾರಿದಳು ಗಿರೀಶನನ್ನು ಒಮ್ಮೆಯೂ ಕ್ಯಾರೆ ಅನ್ನದೆ. ಅವಳ ಆರಾಧನೆ  ಗಿರೀಶನ ತುಟಿಯ ಮೇಲೆ ಬರಲಿಲ್ಲ. ಬಹುರಾಷ್ಟ್ರೀಯ ಕಂಪನಿಯ ಕೆಲಸಕ್ಕೆ ಸೇರುವ ಮುಂಚೆ ಗಿರೀಶ ಊರಿಗೆ ಬಂದಿದ್ದ. ಅವರಮ್ಮ ಮಗನಿಗೆ ಇಡ್ಲಿ ಇಷ್ಟ, ದೋಸೆ ಇಷ್ಟ ಎಂದು ತರಾವರಿ ಅಡುಗೆ ಮಾಡಿ ಬಡಿಸಿ ಸಂತೋಷಪಟ್ಟರು. ಚಿಕ್ಕವನಿದ್ದಾಗ ಆಸೆಯಿಂದ ತಿನ್ನುತ್ತಿದ್ದ ರಾಗಿ ಹುರಿಟ್ಟು, ಅಕ್ಕಿ ಹುರಿಟ್ಟು ಕಲಿಸಿ ಒಮ್ಮೆ ಅವನಿಗೆ ಕೊಡಲು ಹೋದರು. ಛೀ ಥೂ ಎನ್ನುತ್ತ ಗಿರೀಶ ಅಂಗಡಿಗೆ ಹೋಗಿ ಬ್ರೆಡ್ ತಂದು ತಿಂದಾಗ ಜಯಮ್ಮ ಪೆಚ್ಚಾಗಿ ಹುರಿಟ್ಟಿನ ತಟ್ಟೆ ತಮ್ಮ ಮುಂದೆ ಇಟ್ಟುಕೊಂಡು ಅದೆಷ್ಟೋ ಹೊತ್ತು ಕುಳಿತ್ತಿದರು. ಹೆಂಡತಿಯ ಮುಖ ನೋಡಲಾಗದೆ ನಾಗರಾಜರಾಯರು ಹುರಿಟ್ಟನ್ನು ತಾವೇ ತಿಂದರು. ಮಗನ ತಾತ್ಸರದ ಮೇಲೆ ಏನೋ ಜಿಗುಪ್ಸೆ. ಆದರೂ ಅವನನ್ನು ಬಯ್ಯಲಿಲ್ಲ. ಗಿರೀಶ ಹೊಸ ಕೆಲಸಕ್ಕೆ ಸೇರಲು ಸಿಂಗಾಪುರ್‌ಗೆ ಹೊರಟು ಹೋದ ಸ್ವಲ್ಪ ದಿನದಲ್ಲಿ.

ಈ ಕಾದಂಬರಿಯ ಹಿಂದಿನ ಅಧ್ಯಾಯವನ್ನು ಓದಲು ಇಲ್ಲಿ ಕ್ಲಿಕ್ಕಿಸಿ: http://surahonne.com/?p=38295

(ಮುಂದುವರಿಯುವುದು)

-ಸುಚೇತಾ ಗೌತಮ್.‌

8 Responses

 1. Prarthana says:

  Girish’s character is developing well. Now we get to know the reason for his behavior. Good job Sucheta.

 2. Anonymous says:

  ಚೆನ್ನಾಗಿ ಮೂಡಿ ಬರುತಿದೆ

 3. ಸುಚೇತಾ says:

  ಧನ್ಯವಾದಗಳು.

 4. ಆ…ಕಾದಂಬರಿಯ ನಾಯಕ ಗಿರೀಶನ .. ಬಾಲ್ಯದ…ಅನುಭವದ ಅನಾವರಣ… ಕುತೂಹಲ ಹುಟ್ಟಿಸುತ್ತಾ ಮುಂದಿನ ಕಂತಿಗೆ..ಕಾಯುವಂತೆ ಮಾಡಿದೆ…

 5. ನಯನ ಬಜಕೂಡ್ಲು says:

  ಸುಪರ್ಬ್

 6. Padma Anand says:

  ಗಿರೀಶನ ಬಾಲ್ಯದ ಚಿತ್ರಣ ಸೊಗಸಾಗಿ ಮೂಡಿ ಬಂದಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: