ಪರಿಸರಸ್ನೇಹಿ ಶವದಹನ ಪೆಟ್ಟಿಗೆ
ಜುಲೈ 24,2023 ಸೋಮವಾರ
ಸದ್ದು ಮಾಡಿತೆಂದು ಮೊಬೈಲ್ ಪರದೆ ನೋಡಿದಾಗ ತಮ್ಮನ ಮಗಳ ಕರೆ. ಯಾವತ್ತೂ ಕರೆ ಮಾಡದ ಅವಳಿಂದ ಕರೆ ಬಂದದ್ದನ್ನು ನೋಡಿ ಎದೆಯೊಳಗೆ ಡವಡವ. ತಮ್ಮನ ಹೆಂಡತಿಯ ಧ್ವನಿ “ನೀವು ಎಲ್ಲಿದ್ದೀರಿ?”. “ಕಾಲೇಜಿನಲ್ಲಿ” ಎಂದೆ. “ಏನಾಯಿತು?” ಎಂದಾಗ ಆ ಕಡೆಯಿಂದ ಬಿಕ್ಕಳಿಕೆಯ ಧ್ವನಿ. “ನಿಮ್ಮಮ್ಮ ಮಾತಾಡ್ತಾ ಇಲ್ಲ” ಅಂದಳು. “ಡಾಕ್ಟರನ್ನು ಕರೆತಂದ್ರಾ?” ಕೇಳಿದಾಗ ಹೌದೆಂದಳು. ಏನೋ ಆಗಿದೆ ಅನ್ನುವುದು ಖಚಿತವಾಯಿತು. “ಏನು ಹೇಳಿದರು ಹೇಳು” ಅಕ್ಷರಶಃ ಕಿರುಚಿದ್ದೆ. “ಅವರಿನ್ನಿಲ್ಲ” ವೆಂದಾಗ ಅರಗಿಸಿಕೊಳ್ಳಲು ಮನ ನಿರಾಕರಿಸಿತ್ತು. ಪ್ರಾಂಶುಪಾಲರ ಬಳಿ ವಿಷಯ ತಿಳಿಸಿ, ಮನೆಯತ್ತ ಹೊರಟೆ. ತವರು ಮನೆಗೆ ಹೊರಡಬೇಕಿತ್ತು. ಎರಡು ಮೂರು ದಿನದಿಂದ ಧಾರಾಕಾರವಾಗಿ ಮಳೆ ವಿರಾಮವಿಲ್ಲದೆ ಸುರಿಯುತ್ತಿತ್ತು. ಮಳೆಯ ನಡುವೆ ಶವಸಂಸ್ಕಾರ ನಡೆಸಬೇಕಿತ್ತು. ಜಡಿಮಳೆ, ಮಡುಗಟ್ಟಿದ ದುಃಖ ಇವುಗಳ ನಡುವೆಯೂ ಶವಸಂಸ್ಕಾರ ನಡೆಸುವ ಬಗ್ಗೆ ನಮಗ್ಯಾರಿಗೂ ಯೋಚನೆ ಇರಲಿಲ್ಲ. ಇವಳೇನು ಹೀಗೆ ಹೇಳ್ತಿದ್ದಾಳೆ ಅಂದ್ಕೊಂಡ್ರಾ? ಇಷ್ಟು ನಿರಾಳವಾಗಿರಲು ಕಾರಣ ಅಮ್ಮನ ಮೃತದೇಹ ದಹನ ಮಾಡಲು ನಾವೆಲ್ಲ ನೆಚ್ಚಿದ್ದು ಶವದಹನ ಪೆಟ್ಟಿಗೆ. ಇದಕ್ಕೂ ಕಾರಣವಿದೆ.
ಅಂದು ಅಕ್ಟೋಬರ್ 17,2019. ಆ ದಿನವೂ ವಿಪರೀತ ಮಳೆ. ಬೆಳಿಗ್ಗೆಯೇ ನಮ್ಮ ತೀರ್ಥರೂಪರು ಕೊನೆಯುಸಿರೆಳೆದಿದ್ದರು. ಅವರ ಮೃತದೇಹದ ಅಂತಿಮ ಸಂಸ್ಕಾರಕ್ಕೆ ಸಿದ್ಧತೆಗಳು ನಡೆಯುತ್ತಿದ್ದವು. ಆಕಾಶವೇ ತೂತಾದಂತೆ ಮಳೆ ಸುರಿಯುತ್ತಲೇ ಇತ್ತು. ಶವಸಂಸ್ಕಾರ ನಡೆಸಲು ಉದ್ದೇಶಿಸಿದ ಜಾಗದಲ್ಲಿ ನೀರು ಹರಿಯುತ್ತಲೇ ಇತ್ತು ಮತ್ತು ಆ ಜಡಿಮಳೆಯಲ್ಲಿ ಮೃತದೇಹವನ್ನು ಅಲ್ಲಿಗೆ ಸಾಗಿಸುವುದು ಹೇಗೆಂಬ ಯೋಚನೆಯಲ್ಲಿರುವಾಗ ಒಬ್ಬರು ಈ ಶವದಹನ ಪೆಟ್ಟಿಗೆ ಬಳಸಿದರೆ ಹೇಗೆಂಬ ಪ್ರಸ್ತಾಪವನ್ನು ಮುಂದಿಟ್ಟರು. ಆ ಮಳೆಯಲ್ಲಿ ಬೇರೆ ವ್ಯವಸ್ಥೆ ಮಾಡುವುದೂ ಕಷ್ಟಸಾಧ್ಯವಾಗಿತ್ತು. ಹಾಗಾಗಿ ಶವದಹನ ಪೆಟ್ಟಿಗೆಯನ್ನು ತರಿಸುವುದು ನಿರ್ಧಾರವಾಗಿ, ಆ ಪೆಟ್ಟಿಗೆಯಲ್ಲಿ ತೀರ್ಥರೂಪರ ಮೃತದೇಹವನ್ನು ದಹನ ಮಾಡಲಾಗಿತ್ತು. ಆ ಪೆಟ್ಟಿಗೆಯನ್ನು ಒಮ್ಮೆ ಬಳಸಿ ಗೊತ್ತಾದ ಕಾರಣ ಅಮ್ಮನ ಮೃತದೇಹವನ್ನು ಅದೇ ರೀತಿ ದಹನ ಮಾಡಲಾಯಿತು.
ಏನಿದು ಶವದಹನ ಪೆಟ್ಟಿಗೆ?
ಯಾವುದೇ ಕಟ್ಟಿಗೆ ಬೇಡದೆ, ಕೇವಲ ತೆಂಗಿನಕಾಯಿ ಗೆರಟೆ ಹಾಗೂ ಕರ್ಪೂರದ ಸಹಾಯದಿಂದ ಶವದಹನ ಮಾಡುವ ಕಬ್ಬಿಣದ ಪೆಟ್ಟಿಗೆ. ಕರ್ಪೂರದ ಬದಲು ಎಳ್ಳೆಣ್ಣೆಯನ್ನೂ ಸಹಾ ಬಳಸುವರು. ಬೇಕೆಂದರಲ್ಲಿ ಇದನ್ನು ಒಯ್ಯಬಹುದು. ಗ್ರಾಮೀಣ ಭಾಗಗಳಲ್ಲಿ ಜನಪ್ರಿಯವಾಗುತ್ತಿರುವ ಶವದಹನ ಪೆಟ್ಟಿಗೆಯು ಪರಿಸರಸ್ನೇಹಿಯೂ ಹೌದು. ಪರಿಸರ ಸಹ್ಯವೂ ಹೌದು. ಮರಗಳನ್ನು ಕಡಿಯುವ ಅಗತ್ಯವೂ ಇಲ್ಲ, ಹಾಗಾಗಿ ಸೂಕ್ತ-ಯುಕ್ತ-ಅನುಕೂಲವೂ ಹೌದು. ಕಟ್ಟಿಗೆಗೆ ತಗಲುವ ಖರ್ಚಿನ ಅರ್ಧದಷ್ಟು ಖರ್ಚು ಸಾಕು.
ಸುಮಾರು ಹತ್ತು ಅಡಿ ಉದ್ದವಿರುವ ಕಬ್ಬಿಣದ ಪೆಟ್ಟಿಗೆಯ ತಳಭಾಗದಲ್ಲಿ ಸುಮಾರು 5 ಗೋಣಿಯಷ್ಟು ತೆಂಗಿನಕಾಯಿಯ ಗೆರಟೆಗಳನ್ನು (ಸುಮಾರು 150 ತೆಂಗಿನಕಾಯಿಯ ಗೆರಟೆಗಳು) ಹರಡಿ, ಆ ನಂತರ ಮೃತದೇಹವನ್ನಿಡಲಾಗುತ್ತದೆ. ಆ ಬಳಿಕ ಮೂರು ಭಾಗ ಹೊಂದಿರುವ ಮುಚ್ಚಳವನ್ನು ಮುಚ್ಚಲಾಗುತ್ತದೆ. ದಹನಕ್ರಿಯೆಯನ್ನು ಉತ್ತೇಜಿಸಲು ಗೆರಟೆಗಳಲ್ಲಿ ಕರ್ಪೂರದ ಬಿಲ್ಲೆಗಳನ್ನು ಅಥವಾ ಎಳ್ಳೆಣ್ಣೆಯನ್ನು ಹಾಕಲಾಗುತ್ತದೆ. ಪೆಟ್ಟಿಗೆಯ ತಳಭಾಗದಲ್ಲಿರುವ ಕಿಂಡಿಗಳ ಮೂಲಕ ಅಗ್ನಿಸ್ಪರ್ಶ ಮಾಡಲಾಗುತ್ತದೆ. ಮುಚ್ಚಳದ ಮೇಲೆಲ್ಲಾ ಬೆಂಕಿಯ ಜ್ವಾಲೆ ಹೊರಬರಲು ಅನುಕೂಲವಾಗುವಂತೆ ಕೆಲವು ಕಿಂಡಿಗಳಿರುತ್ತವೆ. ಬೆಂಕಿಯ ಜ್ವಾಲೆಗಳು ಸಹಾ ತುಂಬಾ ಮೇಲೇರುವುದಿಲ್ಲ. ದಹನಕ್ರಿಯೆಗೆ ಮೂರರಿಂದ ನಾಲ್ಕು ಘಂಟೆಗಳು ಸಾಕು. ದಹನಕ್ರಿಯೆ ಎಷ್ಟು ಪರಿಪೂರ್ಣವಾಗಿರುತ್ತದೆಯೆಂದರೆ ಕೊನೆಗೆ ಸಿಗುವುದು ಹಿಡಿ ಬೂದಿ ಮಾತ್ರ. ಎಲುಬಿನ ತುಂಡುಗಳು ಕಾಣಸಿಗುವುದು ಕಡಿಮೆಯೇ. ಇಂತಹ ಒಂದು ವ್ಯವಸ್ಥೆ ನಮ್ಮ ಗ್ರಾಮೀಣಭಾಗದಲ್ಲಿದೆಯೆಂಬ ವಿಷಯ ಹೆಮ್ಮೆಯ ವಿಚಾರವೇ ಸರಿ. ಇಂತಹ ಪರಿಸರಸ್ನೇಹಿ ಶವಪೆಟ್ಟಿಗೆ ಪ್ರತಿಯೊಂದು ಗ್ರಾಮಪಂಚಾಯತಿನಲ್ಲಿಯೂ ಇದೆಯೆಂಬ ಮಾಹಿತಿ ಕೂಡಾ ಸಿಕ್ಕಿತು. ಸಾಂಪ್ರದಾಯಿಕ ವಿಧಿವಿಧಾನಗಳಿಗೆ ಯಾವುದೇ ಚ್ಯುತಿ ತರದೇ, ಮರಗಳನ್ನು ಕಡಿಯದೇ, ಕೇವಲ ತೆಂಗಿನಕಾಯಿಯ ಗೆರಟೆಗಳನ್ನು ಬಳಸಿ ಶವದಹನ ಮಾಡುವ ಇಂತಹ ಪೆಟ್ಟಿಗೆಗಳ ಸದುಪಯೋಗವಾಗಲಿ ಎಂಬ ಹಾರೈಕೆ.
ಈ ಲೇಖನ ಮುಗಿಸುವ ಮುನ್ನ
ಶವದಹನ ಪೆಟ್ಟಿಗೆಯ ಬಗ್ಗೆ ಇನ್ನಷ್ಟು ಮಾಹಿತಿ ತಿಳಿದುಕೊಳ್ಳಬೇಕೆಂಬ ಬಯಕೆಯಿಂದ ಗೂಗಲ್ ಹುಡುಕಾಟ ನಡೆಸಿದಾಗ, ಸಿಕ್ಕ ವಿಷಯವಿದು. ತೆಂಗಿನಕಾಯಿಯ ಚಿಪ್ಪುಗಳ ಹುಡಿ ಬಳಸಿ ಶವದಹನ ಮಾಡುವ ಬಗ್ಗೆ ತಿಳಿದುಕೊಂಡೆ. ವಿಶ್ವನಾಥನ ಕ್ಷೇತ್ರವಾದ ಕಾಶಿಯಲ್ಲಿ ದೇಹತ್ಯಾಗ ಮಾಡಬೇಕೆನ್ನುವುದು ಹಲವರ ಅಭಿಲಾಷೆ. ಲಭ್ಯವಿರುವ ಅಂಕಿ ಅಂಶಗಳ ಪ್ರಕಾರ ಪ್ರತಿ ದಿನ ಅಂದಾಜು 400 ಮೃತದೇಹಗಳ ದಹನ ಇಲ್ಲಿ ನಡೆಯುತ್ತದೆ. ಒಂದು ಮೃತದೇಹ ಸುಡಲು ಸುಮಾರು 350 ಕಿಲೋ ಕಟ್ಟಿಗೆ ಬೇಕಾಗುತ್ತದೆ. ಹಾಗಾಗಿ ಇಡೀ ವರ್ಷದಲ್ಲಿ 5 ಲಕ್ಷ ಮರಗಳನ್ನು ಕಡಿಯಬೇಕಾಗುತ್ತದೆಯೆನ್ನುವ ವಿಷಯವನ್ನು ಅರಿತುಕೊಂಡು, ಮರಗಳನ್ನು ಉಳಿಸಬೇಕಾದರೆ ಯಾವ ಪರ್ಯಾಯ ವ್ಯವಸ್ಥೆ ಮಾಡಬಹುದೆಂದು ಆಲೋಚನೆ ಮಾಡಿದವರು ಕೊಯಮತ್ತೂರಿನ ಶ್ರೀ ನಿತ್ಯಾನಂದಮ್ ಅವರು. ಕಟ್ಟಿಗೆಯ ಬದಲು ತೆಂಗಿನಕಾಯಿ ಚಿಪ್ಪುಗಳನ್ನು ಬಳಸಿದರೆ ಹೇಗೆ ಎಂಬ ಆಲೋಚನೆ ಮೊದಲಿಗೆ ಕಾರ್ಯರೂಪಕ್ಕೆ ತಂದರು. ಗೆರಟೆಗಳನ್ನೇ ಸುಡುವುದಕ್ಕಿಂತ, ಚಿಪ್ಪುಗಳನ್ನು ಪುಡಿ ಮಾಡಿ ಬಳಸಿದರೆ ಉತ್ತಮ ಅನ್ನುವುದನ್ನು ಕಂಡುಕೊಂಡರು. 50 ಕಿಲೋ ತೆಂಗಿನಕಾಯಿ ಚಿಪ್ಪಿನ ಹುಡಿ ಹಾಗೂ 50 ಕಿಲೋ ಕಟ್ಟಿಗೆ ಬಳಸಿ ಒಂದು ಹೆಣವನ್ನು ಪರಿಪೂರ್ಣವಾಗಿ ದಹಿಸಬಹುದು. ಪರಿಸರದ ಮೇಲೆ ಅಪಾರ ಕಾಳಜಿ ಹಾಗೂ ಸಸ್ಯರಾಶಿಗಳ ಮೇಲೆ ಅತೀವ ಒಲವು ಹೊಂದಿದ್ದ ಭಾರತದ ಮಾಜಿ ರಾಷ್ಟ್ರಪತಿಗಳಾದ ಡಾ ಎ ಪಿ ಜೆ ಅಬ್ದುಲ್ ಕಲಾಂ ಅವರ ವಾರ್ಷಿಕ ಪುಣ್ಯತಿಥಿಯ ಸಂದರ್ಭ (2016) ಈ ಯೋಜನೆಗೆ ಚಾಲನೆ ನೀಡಲಾಯಿತು. ಮನೆ, ಹಾಸ್ಟೆಲ್, ಹೋಟೆಲ್, ಇತ್ಯಾದಿ ಕಡೆಗಳಲ್ಲಿ ಬಳಸಿ ಬಿಸಾಡಿದ ಗೆರಟೆಗಳ ಸಂಗ್ರಹ ಮಾಡುವ ಕಾರ್ಯ ಆರಂಭಿಸಿ “ಕಾಶಿ ಪಸುಮಾಯಿ ಯಾತ್ರಾ” ಅನ್ನುವ ಪರಿಕಲ್ಪನೆಯಲ್ಲಿ ಮೊದಲಿಗೆ 140 ಟನ್ನುಗಳಷ್ಟು ತೆಂಗಿನಕಾಯಿ ಚಿಪ್ಪಿನ ಹುಡಿಯನ್ನು ಕೊಯಮತ್ತೂರಿನಿಂದ ವಾರಣಾಶಿಗೆ ಸಾಗಿಸಿದರು. ಮರಗಳ ಸಂರಕ್ಷಣೆ, ಸ್ವಚ್ಛ ಕಾಶಿ ನಿರ್ಮಾಣ, ಗಂಗೆಯ ಶುದ್ಧ ಮಡಿಲು,..ಎಲ್ಲದಕ್ಕೂ ಕಾರಣ ತೆಂಗಿನಕಾಯಿ ಚಿಪ್ಪು! ಕಲ್ಪವೃಕ್ಷವೆನ್ನುವುದು ಅದಕ್ಕೇ ಅಲ್ಲವೇ?
-ಡಾ. ಕೃಷ್ಣಪ್ರಭ ಎಂ, ಮಂಗಳೂರು
ನೋವಿನ ನಡುವೆಯೂ ಪರಿಸರದ ಕಾಳಜಿ…..
ನೋವಿನ ನಡುವೆಯೂ ಎಷ್ಟೊಂದು ವಿಚಾರಗಳ ಪರಿಚಯ ಮಾಡಿ ಕೊಟ್ರಿ ಮೇಡಂ.
ನಿಮ್ಮ ನೋವಿನ ನಡುವೆಯೂ ಪರಿಸರ ದ ನಿಮ್ಮ ಕಾಳಜಿ.ಕಳೆದ ವರ್ಷ ನಮ್ ಮನೆಯವರ ಕಾರ್ಯಕ್ಕೂ ಇದನ್ನೇ ಬಳಸಿದ್ದು.ಬಹಳ ಒಳ್ಳೆಯದಾಗುತ್ತದೆ.ನಾವು ಯಾರೂ ಇಲ್ಲದೆ ಬಂಧು ಬಳಗದವರ ಸಹಾಯದಿಂದ ರೆಡಿ ಆಯಿತು.ಇದು ಬಹಳ ಒಳ್ಳೆಯದು ಮರ ಕಡಿಯಲುಜನರನ್ನು ಹುಡುಕುವ ಕೆಲಸವಿಲ್ಲ..ಮರಗಳೂ ಕಡಿಮೆ.ಗೆರಟೆಯ ಉಪಯೋಗವೂ ಆಯಿತು.ಚಂದದ ವಿವರಣೆಯೂ ಹೌದು.
ಅತ್ಯಂತ ಉಪಯುಕ್ತ ಮಾಹಿತಿ.ಪರಿಸರ ಸಂರಕ್ಷಣೆ ಜೊತೆ ಜೊತೆಗೇ ಅತಿ ಸುಲಭ ಮತ್ತು ಕೈಗೆಟುಕುವ ವ್ಯವಸ್ಥೆ!!!. ನೋವಿನಲ್ಲೇ ಮುಳುಗದೆ…ಈ ಸಾರ್ವತ್ರಿಕ ನೋವು ಎಂದಾದರೂ ಯಾರಿಗಾದರೂ ಶತಸಿದ್ಧ.. ಆದರೆ ಆ ಹೊತ್ತಿನಲ್ಲಿ ನಡೆಯಬೇಕಾದ ಕಾರ್ಯಕ್ಕೆ ಉಪಯುಕ್ತ ಮಾಹಿತಿ ನೀಡಿದ್ದೀರಿ.ಇದೇ ಮೊದಲು ಕೇಳಿದ್ದು.
ಚೆನ್ನಾಗಿದೆ ಬರಹ ಪ್ರಭಾ …ಯಾವರೀತಿ ದಹನದ ಕಾರ್ಯ ಮಾಡಬಹುದು ಮತ್ತು ಪರಿಸರವನ್ನು ಹೇಗೆ ರಕ್ಷಿಸುವುದು ಎಂದು ತಿಳಿಸಿದಿರಿ
ಉತ್ತಮ ವಾದ ಮಾಹಿತಿ ಕೊಟ್ಟ ನಿಮಗೆ ನಮೋನಮಃ..ಮೇಡಂ
Tumbane walleya vishaya tilisiddiri, idna navu kuda kelawarige gottaguwa hage madle bekadaddu, dhanyawadagalu maam
ನಮ್ಮ ತಂದೆಯ ದಹನಕ್ರಿಯೆಯೂ ಐದಾರು ವರ್ಷದ ಹಿಂದೆ ಪೆಟ್ಟಿಗೆ ಮೂಲಕವೇ ಆಗಿತ್ತು.
ಉತ್ತಮ ಮಾಹಿತಿ ಮೇಡಂ ಚೆನ್ನಾಗಿ ಇದೆ
ಧನ್ಯವಾದಗಳು
uththama salahe haguu mahithi
ಮನಸ್ಸು ದುಃಖತಪ್ತವಾಗಿದೆ.
ಪರಿಸರ ಸ್ನೇಹಿ ಶವದಹನ ಪೆಟ್ಟಿಗೆಯ ಬಗ್ಗೆ ನನ್ನ ಅಕ್ಕ ಡಾ.ಕೃಷ್ಣಪ್ರಭಾ ಅವರು ಮಂಡಿಸಿದ ಈ ಲೇಖನ ಅತ್ಯಂತ ಉಪಯುಕ್ತವಾಗಿದೆ. ಹಾಗಾಗಿ ಈ ಲೇಖನವನ್ನು ನಿಮ್ಮೊಂದಿಗೆ ಹಂಚಿಕೊಂಡಿರುವೆ.
ನಮ್ಮ ತೀರ್ಥರೂಪರು ಮತ್ತು ಮಾತೃಶ್ರೀ ಯವರನ್ನು ಅತ್ಯಂತ ಒಳ್ಳೆಯ ರೀತಿಯಿಂದ ನಾವು ಕಳುಹಿಸಿಕೊಟ್ಟೆವು ಅನ್ನುವ ತೃಪ್ತಿಯನ್ನು ನೀಡಿತು ಈ ಶವದಹನ ಪೆಟ್ಟಿಗೆ.ಧೋ ಎಂದು ಸುರಿಯುವ ಮಳೆಯ ಮಧ್ಯೆ ಹೇಗಪ್ಪಾ ಅಂತ್ಯಸಂಸ್ಕಾರ ಮಾಡುವುದು ಅನ್ನುವ ಚಿಂತೆಯನ್ನು ದೂರ ಮಾಡಿದ್ದು ಈ ಪೆಟ್ಟಿಗೆಯೇ.ಸಂಪ್ರದಾಯವಾದಿಗಳು ಈ ವ್ಯವಸ್ಥೆಯನ್ನು ಇನ್ನೂ ಪೂರ್ತಿಯಾಗಿ ಒಪ್ಪಲು ಮನಸ್ಸು ಮಾಡುತ್ತಾರೋ ಇಲ್ಲವೋ ತಿಳಿಯದು.ಆದರೆ ನಮ್ಮ ಪ್ರೀತಿಪಾತ್ರರನ್ನು ನಾವು ಕಳೆದುಕೊಂಡಾಗ ಅವರ ಅಂತ್ಯ ಸಂಸ್ಕಾರವನ್ನು ಇಷ್ಟು ಸುಸೂತ್ರವಾಗಿ, ಯಾವುದೇ ಆಚರಣೆಗಳಿಗೆ ಚ್ಯುತಿ ಬಾರದಂತೆ ನಡೆಸಲು ಸಾಧ್ಯವಿರುವಾಗ ಇಂತಹ ಒಳ್ಳೆಯ ವ್ಯವಸ್ಥೆಯ ಬಗ್ಗೆ ಕೊಂಕು ನುಡಿಯದೆ,ಸವಿಸ್ತಾರ ಆಲೋಚನೆ ಮಾಡಿ ಧನಾತ್ಮಕವಾಗಿ ಮುಂದುವರಿಯುವುದು ಅತ್ಯಂತ ಸೂಕ್ತ.ಮರಗಳನ್ನು ಕಡಿಯಬೇಕಾಗಿಲ್ಲ,ಕಡಿದ ಮೇಲೆ ಹಸಿಮರ ಸುಡುವುದಿಲ್ಲ ಎಂಬ ಚಿಂತೆ ಇಲ್ಲ.ಪದೇ ಪದೇ ಸರಿಯಾಗಿ ಉರಿ ಹತ್ತಿದೆಯೇ ಎಂದು ಪರೀಕ್ಷಿಸಬೇಕಾಗಿಲ್ಲ, ಉರಿಯುತ್ತಿರುವ ಚಿತೆಯಿಂದ ಶವದ ಕೈಕಾಲುಗಳು ಅಥವಾ ತಲೆಯ ಭಾಗ ಚದುರಿ ಹೋಗಬಹುದು ಎಂಬ ಚಿಂತೆಯಿಲ್ಲ, ದೇಹ ಅರ್ಧಂಬರ್ಧ ಸುಟ್ಟಿತೆಂಬ ಚಿಂತೆಯಿಲ್ಲ.ಎಲ್ಲದಕ್ಕಿಂತ ಹೆಚ್ಚಾಗಿ ಊರಿಡೀ ಹರಡುವ ಧೂಮವಿಲ್ಲ.ವಾಸನೆಯಿಲ್ಲ.ಪರಿಸರ ಸಂರಕ್ಷಣೆ ಹಲವು ರೀತಿಯಲ್ಲಿ ಮಾಡಲು ಸಾಧ್ಯ.ಇಷ್ಟು ಉಪಯೋಗವಿರುವ ಈ ಪರಿಸರ ಸ್ನೇಹಿ ಪೆಟ್ಟಿಗೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಬೇಕಾದ ಅಗತ್ಯವಿದೆ..
ಪರಿಸರ ಕಾಳಜಿಯ ನಿಟ್ಟಿನಲ್ಲಿ ಉತ್ತಮ ಮಾಹಿತಿ ಇದು.
ಉತ್ತಮವಾದ ಮಾಹಿತಿ
ಹೌದು, ಇದನ್ನು ನಾನೂ ನೋಡಿದ್ದೆ. ಪರಿಸರ ಸಂರಕ್ಷಣೆಯಲ್ಲಿ ಇದರ ಮಹತ್ತರ ಪಾತ್ರವನ್ನು ತಾವು ಸವಿಸ್ತಾರವಾಗಿ ತಿಳಿಸಿದ ಪರಿ ಅನನ್ಯ!
ಅತ್ಯತ್ತಮವಾದ ಲೇಖನ
ಉತ್ತಮ, ಉಪಯುಕ್ತ ಮಾಹಿತಿ
ಲೇಖನ ಮೆಚ್ಚಿ ಪ್ರತಿಕ್ರಿಯಿಸಿದ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು
ಮೊದಲ ಸಲ ಇಂಥ ಅಪರೂಪದ ವಿಚಾರ ತಿಳಿಯಿತು. ಕಲ್ಪವೃಕ್ಷದ ಮಹತ್ವ, ಇಂಧನದ ಅಪವ್ಯಯವಿಲ್ಲದಿರುವಿಕೆ, ಪರಿಪೂರ್ಣ ದಹನ ಪ್ರಕ್ರಿಯೆ….. ತಿಳಿದುಕೊಳ್ಳುವ ವಿಚಾರ ಹಲವಾರಿದೆ. ವಿದ್ವತ್ಪೂರ್ಣ ಲೇಖನ.