ಅವಿಸ್ಮರಣೀಯ ಅಮೆರಿಕ – ಎಳೆ 55
(ಹಿಂದಿನ ಸಂಚಿಕೆಯಿಂದ ಮುಂದುವರಿದುದು…)
ಹಾರ್ಸ್ ಶೂ ಜಲಪಾತದತ್ತ ತೇಲುತ್ತ ….
ಕೇವಲ ಅರ್ಧಗಂಟೆಯ ರಸ್ತೆ ಪಯಣದಲ್ಲಿ ನಾವು ನಯಾಗರದ ಸರಹದ್ದಿನ ಬಳಿ ತಲಪಿಯಾಗಿತ್ತು. ಅತ್ಯಂತ ಕುತೂಹಲ… ಮೈಯೆಲ್ಲಾ ಪುಳಕ…ಹೇಳಲಾಗದ ಸಂತಸದ ಅನುಭವ! ನಾವು ಪಯಣಿಸುತ್ತಿದ್ದ ರಸ್ತೆಯ ಎಡ ಪಕ್ಕಕ್ಕೆ ಇದ್ದಂತಹ ಅತ್ಯಂತ ವಿಶಾಲವಾದ ನದಿಯ ಹರಿವು ಮುಂದಕ್ಕೆ ಚಲಿಸುತ್ತಿದ್ದಂತೆ ನೀರಿನ ಭೋರ್ಗರೆತದ ಸದ್ದು ಕೇಳಿಸತೊಡಗಿತು…ನಾವು ಜಲಪಾತದ ಬಳಿ ತಲಪಿಯೇ ಬಿಟ್ಟಿದ್ದೆವು! ಈ ಸ್ಟೇಟ್ ಪಾರ್ಕ್ ಸಮತಟ್ಟಾದ ಪ್ರದೇಶವಾಗಿದ್ದು ಎತ್ತರೆತ್ತರದ ಮರಗಳು, ಅಲ್ಲಲ್ಲಿ ಸಣ್ಣಪುಟ್ಟ ಕಟ್ಟಡಗಳಿಂದ ಕೂಡಿದೆ. ನೂರಾರು ಪ್ರವಾಸಿಗರು ಓಡಾಡುತ್ತಿದ್ದರೂ ಎಲ್ಲಾ ಕಡೆಗಳಲ್ಲಿಯೂ ಕಾಣುವ ಅತ್ಯಂತ ಸ್ವಚ್ಛ, ಸುಂದರ ಪರಿಸರವು ನಮ್ಮನ್ನು ಚಕಿತರನ್ನಾಗಿಸುತ್ತದೆ… ಮೆಚ್ಚುಗೆಯಿಂದ ಮನ ಅರಳುತ್ತದೆ. ಜಲಪಾತದೆಡೆಗೆ ಹೋಗುವ ಮಾರ್ಗದ ಒಂದು ಪಕ್ಕದಲ್ಲಿರುವ ಕಟ್ಟಡದಲ್ಲಿರುವ ಬಿಗಿ ಭದ್ರತಾ ತಪಾಸಣಾ ಕೇಂದ್ರವು ಎಲ್ಲಾ ಮೂಲಭೂತ ಸವಲತ್ತುಗಳನ್ನೂ ಒಳಗೊಂಡಿದ್ದು; ಇಲ್ಲಿ ನಾವು ತಪಾಸಣೆಯನ್ನು ಎದುರಿಸಬೇಕಾಗುತ್ತದೆ. ಈ ಕಟ್ಟಡದಲ್ಲಿ ಒಂದು ಸಣ್ಣ ವ್ಯಾಪಾರ ಮಳಿಗೆಯೂ ಇದ್ದು; ನೆನಪಿನ ಉಡುಗೊರೆಗಳು, ಫ್ರಿಜ್ ಮ್ಯಾಗ್ನೆಟ್ ನಂತಹ ಸಣ್ಣಪುಟ್ಟ ವಸ್ತುಗಳು, ಟೀ ಶರ್ಟ್ ಗಳು, ಇತ್ಯಾದಿಗಳು ಇಲ್ಲಿ ಲಭ್ಯ. ಜಲಪಾತದ ವೀಕ್ಷಣೆಯು ಉಚಿತವಾಗಿದ್ದರೂ ಕ್ರೂಝ್ (ಬೃಹದಾಕಾರದ ದೋಣಿ) ಗಾಗಿ ಮುಂಗಡ ಹಣ ಪಾವತಿಸಬೇಕಾಗುತ್ತದೆ. ಬಳಿಕ ಪ್ರತಿಯೊಬ್ಬರ ಕೈಗೂ ಗುರುತಿನ ಚೀಟಿ ಲಗತ್ತಿಸುವರು. ನಾವು ಈ ನಯಾಗರದ ಪರಿಸರದೊಳಗೆ ಇರುವಷ್ಟು ಹೊತ್ತು ಇದನ್ನು ತೆಗೆಯುವ ಹಾಗಿಲ್ಲ. ಅಲ್ಲದೆ, ನಾವಿಲ್ಲಿ ಎಲ್ಲಿ ಬೇಕೆಂದರಲ್ಲಿ ಸುತ್ತಾಡಿ ವೀಕ್ಷಿಸಲು ಸರ್ವತಂತ್ರ ಸ್ವತಂತ್ರರು! ಕಟ್ಟಡದ ಒಳಭಾಗದಿಂದ ಮೆಟ್ಟಲುಗಳ ಮೂಲಕ ಕೆಳಗಿಳಿದರೆ ಮುಂಭಾಗದಲ್ಲಿಯೇ ಜಲಪಾತದ ಕಣಿವೆಯೊಳಕ್ಕೆ ಚಾಚಿ ನಿಂತ ಅಗಲವಾದ ಸೇತುವೆಯು ನಮ್ಮನ್ನು ಸ್ವಾಗತಿಸುತ್ತದೆ. ಮೂರೂ ಜಲಪಾತಗಳಿಂದ ಹರಿದು, ಒಟ್ಟಾಗಿ ಸೇರಿ, ಮುಂದಕ್ಕೆ ದಟ್ಟ ನೀಲಿ ಬಣ್ಣದಲ್ಲಿ,, ವಿಶಾಲ ಪಾತಳಿಯಲ್ಲಿ, ಕಣ್ಣೋಟದ ಅರಿವಿನಿಂದಲೂ ದೂರಕ್ಕೆ ಗಂಭೀರವಾಗಿ ಹರಿಯುವ ನಯಾಗರ ನದಿಯನ್ನು ಈ ಸೇತುವೆ ಮೇಲೆ ನಿಂತು ನೋಡಲು ಬಹು ಅಂದ! ಅದಾಗಲೇ ಸೇತುವೆಯ ಮುಂಭಾಗ ಹಾಗೂ ಎರಡೂ ಪಕ್ಕಗಳಲ್ಲಿ ಜನಜಾತ್ರೆ! ಎಡಭಾಗದಲ್ಲಿ; ಅವರ ನಡುವೆ ನುಗ್ಗಿ ದೂರಕ್ಕೆ ದಿಟ್ಟಿಸಿದಾಗ, ಆಹಾ… ಅದೇನು..? ಬಹು ದೂರದಲ್ಲಿ ಬಿಳಿ ಮಂಜಿನ ನಡುವೆ ಭೋರ್ಗರೆವ ಜಲಪಾತದ ಹರಿವು ಅರ್ಧಂಬರ್ಧ ಕಾಣಿಸಿತು. ಕೆಳಗಡೆಗೆ ಆಳ ನೀರಿನ ಮೇಲೆ ಪುಟ್ಟ ಆಟಿಕೆಗಳಂತೆ ಕಾಣುತ್ತಿದ್ದವು..ಕೆಂಪು ಮತ್ತು ನೀಲಿ ಬಣ್ಣದ ಜನರನ್ನು ತುಂಬಿರುವ ನೌಕೆಗಳು… ನಾನಾಗಲೇ ಆ ನೌಕೆಯಲ್ಲಿ ವಿಹರಿಸುವ ಕನಸನ್ನೂ ಕಂಡಾಯ್ತು ಅನ್ನಿ! ಅಲ್ಲಿಂದ ಕೆಳಗಡೆಗೆ ಹೋಗಿ ನದಿಯ ಪಕ್ಕಕ್ಕೇ ತಲಪಿಬಿಟ್ಟೆವು. ಅಲ್ಲಿರುವ ಪುಟ್ಟ ಕೌಂಟರಿನಲ್ಲಿ ರಾಶಿ ರಾಶಿ ಮಳೆ ಕೋಟುಗಳು ಕಂಡವು. “ಇದ್ಯಾಕಪ್ಪಾ ಇಲ್ಲಿ?”.. ಎಂದು ನನಗೆ ಆಶ್ಚರ್ಯವೂ ಆಯ್ತು. ಸಾಕಷ್ಟು ಜನದಟ್ಟಣೆಯಿಂದಾಗಿ ನಮ್ಮ ನೌಕಾಯಾನದ ಸರತಿ ಸಾಲು ಉದ್ದುದ್ದವಾಗಿತ್ತು. ಸಾಲು ಮುಂದುವರಿದಂತೆಯೇ, ನಮ್ಮ ಸರದಿ ಬಂದಾಗ ನಮಗೆಲ್ಲರಿಗೂ ಬಹು ತೆಳ್ಳಗಿನ, ನೀಲಿ ಬಣ್ಣದ, ತಲೆಭಾಗವೂ ಮುಚ್ಚುವಂತಹ ಮಳೆ ಕೋಟುಗಳನ್ನು ನೀಡಲಾಯಿತು. ಚಿಕ್ಕ ಮಕ್ಕಳಿಗೆ ಸಣ್ಣ ಅಳತೆಯ ಕೋಟುಗಳೂ ಸಿಕ್ಕಿದವು! ಅವುಗಳನ್ನು ಧರಿಸಿ ಮುಂದುವರಿದರೆ… ಅಲ್ಲಿ ಕ್ರೂಝ್ ಸಿದ್ಧವಾಗಿರಲಿಲ್ಲ. ಆದ್ದರಿಂದ ಅದಕ್ಕಾಗಿ ಕಾಯುತ್ತಾ ನಿಂತೆವು…ಬಹು ಕಾತರದಿಂದ.
ಇಲ್ಲಿನ ಜಲಪಾತಗಳಲ್ಲಿ ಮೊದಲನೆಯದು ಅಮೆರಿಕನ್ ಫಾಲ್ಸ್. ಅದರ ಹರಿವು 950 ಅಡಿಗಳಷ್ಟು ಅಗಲವಾಗಿದ್ದು, ಅದರ ಕೆಳಗಡೆಗೆ ಕೊರಕಲು ಬಂಡೆಗಳ ಪ್ರಪಾತವಿದೆ. ಇದರ ಎತ್ತರವು ಕೆಲವು ಕಡೆಗಳಲ್ಲಿ 70ಅಡಿಗಳಷ್ಟು ಕಡಿಮೆಯೂ, ಇನ್ನು ಕೆಲವೆಡೆ 110 ಅಡಿಗಳಷ್ಟು ಜಾಸ್ತಿಯೂ ಇದೆ. ನಯಾಗರದಲ್ಲಿರುವ ಮೂರು ಜಲಪಾತಗಳಲ್ಲಿ ಇದು ಗಾತ್ರದಲ್ಲಿ ಎರಡನೆಯದು. ಹಾರ್ಸ್ ಶೂ ಫಾಲ್ಸ್ ಮತ್ತು ಇದರ ನಡುವೆ Goat Islanad ಎಂಬ ನಡುಗುಡ್ಡೆಯಿದ್ದು ಅದರ ಮೇಲ್ಭಾಗದಲ್ಲಿ ನಿಂತು ಜಲಪಾತದ ಅಂದವನ್ನು ವೀಕ್ಷಿಸಬಹುದು, ಆದರೆ ಜಲಪಾತದ ಕೆಳಭಾಗಕ್ಕೆ ಹೋಗುವ ವ್ಯವಸ್ಥೆಯಿಲ್ಲ. ಉಳಿದೆರಡು ಜಲಪಾತಗಳ ಸೊಬಗನ್ನು ಕೆಳಭಾಗದಿಂದಲೂ ವೀಕ್ಷಿಸಲು ಅನುಕೂಲವಿದೆ. ನಯಾಗರ ನದಿಯ 10% ನೀರು ಮಾತ್ರ ಈ ಜಲಪಾತದಲ್ಲಿ ಮತ್ತು ಬ್ರೈಡಲ್ ವೇಲ್ ಜಲಪಾತಗಳಲ್ಲಿ ಹರಿದು; ಉಳಿದ 90% ನೀರೆಲ್ಲವು ಹಾರ್ಸ್ ಶೂ ಜಲಪಾತದಲ್ಲಿ ವಿಜೃಂಬಿಸುವುದು. ಮೂರೂ ಜಲಪಾತಗಳೆಲ್ಲಾ ಸೇರಿ ಆಗುವ ನಯಾಗರ ಜಲಪಾತದ ಪೂರ್ತಿ ಅಗಲವು ಸುಮಾರು 6.7 ಮೈಲುಗಳಷ್ಟು!
ಹಾರ್ಸ್ ಶೂ ಜಲಪಾತವು, ತನ್ನ ಹೆಸರಿನಂತೆ, ಕುದುರೆ ಲಾಳದ ಆಕಾರದಲ್ಲಿದ್ದು, ಅತ್ಯಂತ ಅಗಲವಾಗಿದೆ, ಅಂದರೆ ಸುಮಾರು 2,700 ಅಡಿಗಳಷ್ಟು… ಅಂದರೆ ಯೋಚಿಸಿ..ಇದರ ಅಗಾಧತೆಯನ್ನು! ಇದರ ಸೌಂದರ್ಯವನ್ನು ಅಕ್ಷರಗಳ ರೂಪದಲ್ಲಿ ಮನವರಿಕೆ ಮಾಡಿಸುವುದು ಬಹಳ ಕಷ್ಟಸಾಧ್ಯ.. ನೋಡಿಯೇ ತಿಳಿಯಬೇಕಷ್ಟೆ! ನಾವಿರುವ ಸ್ಥಳದಿಂದ ಜಲಪಾತದ ಹರಿವಿನ ಬಹು ಸ್ವಲ್ಪ ಭಾಗವನ್ನು ಮಾತ್ರ ವೀಕ್ಷಿಸಲು ಸಾಧ್ಯವಿದೆ. ನದಿಯ ಮೇಲ್ಭಾಗವು ಕೆನಡಾ ದೇಶಕ್ಕೆ ಸೇರಿದುದರಿಂದ, ಆ ಕಡೆಯಿಂದ ವೀಕ್ಷಿಸಲು ಕೆನಡಾದ ವೀಸಾ ಪಡೆಯುವ ಅಗತ್ಯವಿದೆ. ಈ ಜಲಪಾತವು 90% ಕೆನಡ ದೇಶದ ಭೂಭಾಗದಲ್ಲೂ 10% ಅಮೆರಿಕ ದೇಶದ ಭೂಭಾಗದಲ್ಲೂ ಇದೆ! ಕಣ್ಣಳತೆಯ ದೂರದಲ್ಲಿಯೇ, ಕೆನಡಾವನ್ನು ಸಂಪರ್ಕಿಸುವ ದೊಡ್ಡದಾದ ಸೇತುವೆಯು ಕಂಡುಬಂತು. ನಮ್ಮಲ್ಲಿ ಕೆನಡಾದ ವೀಸಾ ಇಲ್ಲದುದರಿಂದ ಜಲಪಾತದ ಇನ್ನೊಂದು ಪಕ್ಕದ ನೋಟವನ್ನು ಸವಿಯಲಾಗಲಿಲ್ಲ. ಕೆನಡದ ಕಡೆಯಿಂದ ಈ ಹಾರ್ಸ್ ಶೂ ಜಲಪಾತದ ನೋಟವು ಅತ್ಯದ್ಭುತ ಎಂಬ ಮಾಹಿತಿಯಿದೆ. ಇದನ್ನು ತಿಳಿದ ಮೇಲೆ ಅಸಹಾಯಕತೆಯಿಂದ ನನ್ನ ಹೊಟ್ಟೆ ಉರಿದದ್ದಂತೂ ನಿಜ. ನಮಗೆ ಜಲಪಾತದ ಪೂರ್ಣ ನೋಟ ಅಸಾಧ್ಯವಾದರೂ, ಅದರಲ್ಲಿಯೇ ತೃಪ್ತಿ ಪಟ್ಟುಕೊಳ್ಳಬೇಕಾಯಿತೆನ್ನಿ! ಹಾರ್ಸ್ ಶೂ ಜಲಪಾತದ ಮೇಲಿನಿಂದ ಒಂದು ತರಹದ ರುದ್ರ ರಮಣೀಯ ದೃಶ್ಯ ಗೋಚರಿಸಿದರೆ, ಕ್ರೂಝ್ ಗಳಲ್ಲಿ ಜಲಪಾತದ ಕೆಳಗಡೆಯಿಂದ ವೀಕ್ಷಿಸುವಾಗ ಸಿಗುವ ಅನುಭವ ಇನ್ನೂ ಅತ್ಯದ್ಭುತ!
ಅಂತೂ ಸ್ವಲ್ಪ ಸಮಯದಲ್ಲೇ ಜಲ ಪಯಣ ಮುಗಿಸಿ ಬಂದ ಕ್ರೂಝ್ ನಮ್ಮ ಮುಂದೆ ನೀಲಿ ಜನರನ್ನು ಇಳಿಸಿ; ನಮ್ಮ ಈ ನೀಲಿ ಜನರನ್ನು ಏರಿಸಿಕೊಂಡಿತು. ನಾವಿದ್ದ ಕ್ರೂಝ್ ನಲ್ಲಿ ಸುಮಾರು ಮುನ್ನೂರು ಮಂದಿ ಪ್ರವಾಸಿಗರಿದ್ದೆವು. ದೋಣಿ ಮುಂದೆ ಸಾಗಿದಂತೆ ಕ್ರೂಝ್ ನ ಸಿಬಂದಿ ವರ್ಗದವರು ಪೂರ್ತಿ ವೀಕ್ಷಕ ವಿವರಣೆಯನ್ನು ನೀಡುತ್ತಿದ್ದರು. ಕ್ರೂಝ್ ನ ಒಳಗಿರುವ ಆಸನಗಳಲ್ಲಿ ಕುಳಿತುಕೊಂಡವರು ಬಹಳ ಕಡಿಮೆ ಮಂದಿ… ನಾವೆಲ್ಲರೂ ಸಹಿತ ಆನಂದದ ಕ್ಷಣಗಳನ್ನು ಸವಿಯಲು ಕ್ರೂಝ್ ನೊಳಗೆ ಅದರ ಗೋಡೆ ಪಕ್ಕಗಳಲ್ಲೇ ನಿಂತುಬಿಟ್ಟೆವು. ಇದರಿಂದಾಗಿ ಅದರೊಳಗಡೆಗೆ ಜನದಟ್ಟಣೆ ಹೆಚ್ಚಾಗಿ, ಸರಿಯಾಗಿ ನೋಡಲೂ ಸರತಿ ನಿಲ್ಲುವಂತಾಯಿತು!. ಕ್ರೂಝ್ ಮುಂದೆ ಸಾಗಿದಂತೆ, “ದೋಣಿ ಸಾಗಲಿ…” ಹಾಡು ತನ್ನಿಂದ ತಾನಾಗಿಯೇ ನಮ್ಮ ಮನದಿಂದ ಹೊರಹೊಮ್ಮಿತು. ನಮ್ಮ ಜಲವಿಹಾರಿಯು ನದಿಯ ಮಧ್ಯಭಾಗದಲ್ಲಿ ಹಾದು ಹೋಗುತ್ತಿತ್ತು… ನೇರವಾಗಿ ಹಾರ್ಸ್ ಶೂ ಜಲಪಾತದ ಕೆಳಭಾಗಕ್ಕೆ.
ಮುಂಭಾಗದಲ್ಲಿ ಹಾಗೂ ಎಡ ಪಕ್ಕದಲ್ಲಿ ಬಹು ದೂರದಲ್ಲಿ ಕಾಣುತ್ತಿದ್ದವು ಜಲಪಾತಗಳು…ಜೊತೆಗೇ ಕಿವಿಗಡಚಿಕ್ಕುವಂತೆ ಅವುಗಳ ಭೋರ್ಗರೆತ! ಅಷ್ಟೂ ಜಲಪಾತಗಳು ಒಟ್ಟಾಗಿ ವೀಕ್ಷಣೆಗೆ, ತಿರುಗಿಸಿಟ್ಟಿರುವ U ಆಕಾರದ ಭೂ ಪ್ರದೇಶದಲ್ಲಿದ್ದು; ಅದರ ಮೊದಲ ಭಾಗದ ಎಡಪಕ್ಕದಲ್ಲಿ ರಭಸದಲ್ಲಿ ಬೀಳುವ ಅಮೆರಿಕನ್ ಫಾಲ್ಸ್ ಕಾಣಸಿಗುತ್ತದೆ. ಕಲ್ಲು ಬಂಡೆಗಳ ಮೇಲೆ ರಭಸದಿಂದ ಬೀಳುತ್ತಾ ಬೊಬ್ಬಿಡುವ ಭೋರ್ಗರೆತವು ಮೈ ನವಿರೇಳಿಸುತ್ತದೆ. ಹಾಗೆಯೇ, ಅದರ ಮೇಲ್ಭಾಗದಲ್ಲಿದ್ದ ನೂರಾರು ಪ್ರವಾಸಿಗರು,ಸರಿದಾಡುವ ಸಣ್ಣ ಸಣ್ಣ ಮಾನವ ಗೊಂಬೆಗಳಂತೆ ಕಂಡುಬಂದರು! ಮುಂದಕ್ಕೆ ಸಾಗಿದಂತೆ, ಅತ್ಯಂತ ರಭಸದಲ್ಲಿ ಬೀಳುವ ನೀರು ಕೆಳಗಡೆ ನದಿ ನೀರಿಗೆ ತಲಪುವ ಮೊದಲೇ ಬೆಳ್ಳಗಿನ ತುಂತುರು ಹನಿಗಳಾಗಿ ದಟ್ಟ ಹೊಗೆಯಂತೆ ಗಾಳಿಯಲ್ಲಿ ತೇಲಿ ಬರುತ್ತಾ ನಮ್ಮೆಲ್ಲರನ್ನು ಕವಿದುಬಿಟ್ಟಿತು! ಇದರಿಂದಾಗಿ, ನಮ್ಮ ನೌಕೆಯು ಮುಂದಕ್ಕೆ ಹೋಗುತ್ತಿರುವಾಗ ರಭಸದಿಂದ ಬೀಸುವ ಗಾಳಿಗೆ ಅದರಲ್ಲಿರುವ ಪ್ರವಾಸಿಗರು ಪೂರ್ತಿ ಒದ್ದೆಯಾಗಿ ಬಿಡುವ ಸಂಭವವಿರುವುದರಿಂದ ನಮಗೆ ಈ ಮೊದಲೇ ಕೊಟ್ಟಿರುವ ಮಳೆ ಕೋಟುಗಳು ಬಹಳ ಉಪಯೋಗಕ್ಕೆ ಬಂದವು. ಪಕ್ಕದಲ್ಲೇ ತೇಲಾಡುತ್ತಿದ್ದ ಕ್ರೂಝ್ ನಲ್ಲಿರುವ ಪ್ರವಾಸಿಗರು ಧರಿಸಿದ ಕೆಂಪು ಬಣ್ಣದ ಮಳೆ ಕೋಟುಗಳು ವಿಶೇಷವಾಗಿ ಕಂಡುಬಂದವು. ಇಲ್ಲಿ ಅಮೆರಿಕ ಮತ್ತು ಕೆನಡ, ಎರಡೂ ದೇಶಗಳ ಪ್ರವಾಸಿಗರ ಮುಕ್ತ ವೀಕ್ಷಣೆಗಳಿಗೆ ಅವಕಾಶವಿದೆ ಹಾಗೂ ಕ್ರಮವಾಗಿ ಈ ನೀಲಿ ಮತ್ತು ಕೆಂಪು ಬಣ್ಣದ ಮಳೆ ಕೋಟುಗಳನ್ನು ಧರಿಸುವ ನಿಯಮವೂ ರೂಢಿಯಲ್ಲಿದೆ ಹಾಗೂ ಕಟ್ಟುನಿಟ್ಟಾಗಿ ಪಾಲಿಸಲ್ಪಡುತ್ತದೆ…ಯಾಕೆ ಗೊತ್ತೇ? ಇದರಿಂದಾಗಿಯೇ ಆಯಾ ನಾಡಿನ ಪ್ರವಾಸಿಗರೆಂದು ಗುರುತಿಸಲ್ಪಡುತ್ತದೆ. ನದಿ ನೀರಿನಲ್ಲಿ ತೇಲುವ ನೀಲಿ ಮತ್ತು ಕೆಂಪು ಜನರು ತುಂಬಿದ ಈ ಕ್ರೂಝ್ ಗಳನ್ನು ಮೇಲಿನಿಂದ ನೋಡುವುದೇ ಕಣ್ಣಿಗೊಂದು ಹಬ್ಬ. ಹಾರ್ಸ್ ಶೂ ಜಲಪಾತ ವೈಭವದ ಪೂರ್ತಿ ನೋಟವು ಕೆಳಗಿನಿಂದ ನಮ್ಮ ಕಣ್ಣು ತುಂಬುತ್ತಿತ್ತು. ಎಷ್ಟು ನೋಡಿದರೂ ತೃಪ್ತಿ ಇಲ್ಲ! ಇದರ ನೀರಿನ ರಭಸಕ್ಕೆ, ಅದರ ತೀರಾ ಕೆಳಗಡೆಗೆ ಹೋಗುವುದು ಅಸಾಧ್ಯವಾಗಿತ್ತು. ನಮ್ಮ ನೌಕೆಯು ಜಲಪಾತದಿಂದ ಸುಮಾರು ಎರಡು ಕಿ.ಮೀ.ದೂರದಲ್ಲಿಯೇ ನಿಂತು ಅದರ ಅಂದವನ್ನು ಸವಿಯುವ ಭಾಗ್ಯವನ್ನು ನೀಡಿತು. ನಮ್ಮ ಬಲಗಡೆ ಮೇಲ್ಭಾಗದಿಂದ ನದಿಗೆ ಅಗಾಧ ರಾಶಿಯಲ್ಲಿ ಬೀಳುವ ನೀಲಿ ಜಲವು ತನ್ನ ಪ್ರಚಂಡ ಶಕ್ತಿಯನ್ನು ನಮ್ಮ ಅತ್ಯಂತ ಸಮೀಪ ತೆರೆದಿಟ್ಟಿತ್ತು…ದಿಟ್ಟಿಸಿ ನೋಡಲೇ ಭಯವಾಗುವಂತೆನಿಸಿತು!! ಇದರೊಂದಿಗೇ, ನೀರ ಹರಿವಿನ ಅಗಾಧ ಶಕ್ತಿಯ ಜೊತೆಗೆ ಬೀಸುವ ತೀವ್ರ ರಭಸದ ಗಾಳಿಯಿಂದಾಗಿ ನಾವೆಯು ಹೊಯ್ದಾಡತೊಡಗಿತು. ನೀರ ಹನಿ ಮಿಶ್ರಿತ ಶೀತ ಗಾಳಿಯ ವೇಗಕ್ಕೆ ನಾವೆಯೊಳಗೆ ನಾವೂ ಓಲಾಡುತ್ತಾ, ಮುಖ, ಕಣ್ಣು ತೆರೆಯಲಾಗದೆ ಕಷ್ಟ ಪಡುತ್ತಾ ಸೊಬಗನ್ನು ನೋಡಲು ಹೆಣಗಾಡಬೇಕಾಯಿತು. ಇದರೊಂದಿಗೆ, ಜಲಪಾತದ ವೈಭವವನ್ನು ಸರಿಯಾಗಿ ನೋಡಲಾಗದಂತೆ ನೀರಹನಿಗಳ ದಟ್ಟ ಹೊಗೆಯು ಆಗಾಗ ಪೂರ್ತಿಯಾಗಿ ಜಲಪಾತವನ್ನು ಮುಚ್ಚಿಬಿಟ್ಟಿತು ಸುಮಾರು ಹದಿನೈದು ನಿಮಿಷಗಳ ಕಾಲ ನಾವು ನಯಾಗರದ ಮುಖ್ಯ ಜಲಪಾತದ ಧೀರ, ಗಂಭೀರ, ರುದ್ರ ರಮಣೀಯ ನೋಟವನ್ನು ಕಣ್ತುಂಬಿಕೊಂಡೆವು. ಹಾಗೆಯೇ, ಸುತ್ತು ಬಳಸಿ ತಿರುಗುತ್ತಾ ನಾವೆಯು ಸ್ವಸ್ಥಾನಕ್ಕೆ ಹಿಂತಿರುಗಿತು. ಮಳೆ ಕೋಟನ್ನು ಹಾಕಿದರೂ ಅಲ್ಪಸ್ವಲ್ಪ ಒದ್ದೆಯಾಗಿಸಿಕೊಂಡು ಬಂದ ನಮ್ಮ ಆ ಕೋಟನ್ನು ಇಲ್ಲಿ ಹಿಂತಿರುಗಿಸಬೇಕಾಗಿಲ್ಲ.
ಮುಂದಕ್ಕೆ, ಇನ್ನೊಂದು ಜಲಪಾತ, ಬ್ರೈಡಲ್ ವೇಲ್ ನ ಕಡೆಗೆ ನಮ್ಮ ಗಮನ. ಇದು ಅಮೆರಿಕದ ಭೂಭಾಗಕ್ಕೆ ಸೇರಿರುವುದರಿಂದ ನಮಗೆ ಆರಾಮವಾಗಿ ವೀಕ್ಷಿಸಲಡ್ಡಿಯಿಲ್ಲ. ಇದರಲ್ಲಿ ನೀರು 56 ಅಡಿಗಳಷ್ಟು ಅಗಲಕ್ಕೆ ಹರಿಯುತ್ತಿದ್ದು; 181 ಅಡಿಗಳಷ್ಟು ಎತ್ತರದಿಂದ ನೇರ ಕೆಳಕ್ಕೆ ಬೀಳುವುದು. ಎರಡೂ ಪಕ್ಕಗಳಲ್ಲಿರುವ ನಡುಗುಡ್ಡೆಯ ಮೂಲಕ ಅದರ ಮೇಲ್ಭಾಗಕ್ಕೆ ಹೋಗಬಹುದಾಗಿದೆ…ಇಲ್ಲಿಗೆ ಕಾಲ್ನಡಿಗೆಯಿಂದಲೇ ಹೋಗಬೇಕಾದುದರಿಂದ, ನಮ್ಮ ನಡಿಗೆ ಅತ್ತ ಕಡೆಗೆ…. ಬನ್ನಿ… ಹೋಗೋಣ…!!
(ಮುಂದುವರಿಯುವುದು…..)
ಈ ಪ್ರವಾಸಕಥನದ ಹಿಂದಿನ ಎಳೆ ಇಲ್ಲಿದೆ: surahonne.com/?p=38382
-ಶಂಕರಿ ಶರ್ಮ, ಪುತ್ತೂರು.
ನಿಮ್ಮ ಅಮೇರಿಕಾದ ಪ್ರವಾಸ ಕಥನ ಓದುವುದರ ಜೊತೆಗೆ…ನಿಮ್ಮೊಡನೆ ನಾವೂ..ಹೆಜ್ಜೆ ಹಾಕುತ್ತಾ ಸಾಗುವಂತಹ ಅನುಭವ ಮೂಡಿಬರುವಂತೆ ಇರುತ್ತದೆ ನಿಮ್ಮ ನಿರೂಪಣೆ… ಧನ್ಯವಾದಗಳು.. ಶಂಕರಿ ಮೇಡಂ
ಧನ್ಯವಾದಗಳು ನಾಗರತ್ನ ಮೇಡಂ
Nice
ಧನ್ಯವಾದಗಳು
ಈಗಲೂ ನೀಲಿ ಕೋಟಿ ಇದೆ. Souvenir.
ತಮ್ಮ ಪ್ರೀತಿಯ ಸ್ಪಂದನೆಗೆ ಧನ್ಯವಾದಗಳು ಮೇಡಂ.