ಅವಿಸ್ಮರಣೀಯ ಅಮೆರಿಕ – ಎಳೆ 56

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು…)
ಬ್ರೈಡಲ್ ವೇಲ್ ಜಲಪಾತದತ್ತ….

ನಾವು ಪಾರ್ಕಿನ ಒಳಗಡೆಯೇ ನಿರ್ಮಿಸಿರುವ ಸೊಗಸಾದ ರಸ್ತೆ, ಇಕ್ಕೆಲಗಳಲ್ಲೂ ಹಸಿರುಸಿರಿ ಹೊತ್ತ ಎತ್ತರೆತ್ತರ ಮರಗಳು, ಪುಟ್ಟ ನದಿಯಲ್ಲಿ ಜುಳುಜುಳು ಹರಿಯುವ ಸ್ಫಟಿಕಜಲ , ನದಿಗಡ್ಡವಿರುವ ವಿಸ್ತಾರವಾದ ಸೇತುವೆಯನ್ನು ದಾಟಿ, ಒಟ್ಟಾಗಿ ಸುಮಾರು ಹದಿನೈದು ನಿಮಿಷಗಳ ಕಾಲ ಕಾಲ್ನಡಿಗೆಯಿಂದ ಸಾಗಿದಾಗ ಹಳೆಯದೆಂತೆನಿಸುವ ಕಟ್ಟಡವೊಂದು ಕಾಣಿಸಿತು. ಇಲ್ಲಿ  ಜಲಪಾತದ ನೇರ ಕೆಳಭಾಗಕ್ಕೆ ಹೋಗಲು, ಅಂದರೆ, ಮೇಲಿನ ನೆಲಮಟ್ಟದಿಂದ ಜಲಪಾತದ ಕೆಳಗಿನ ನದಿ ಮಟ್ಟಕ್ಕೆ ಇಳಿಯಲು, ಸುಮಾರು ಎಂಟು ಅಂತಸ್ತುಗಳಷ್ಟು ಎತ್ತರದಿಂದ ಕೆಳಗೆ ಇಳಿಯಬೇಕಾಗುತ್ತದೆ. ಇದಕ್ಕಾಗಿ ಇರುವ ಲಿಫ್ಟ್ ನಲ್ಲಿ ಕೆಳಗಿಳಿದು ಅಲ್ಲಿಂದ ನೀರು ಜಿನುಗುತ್ತಿರುವ ಸಣ್ಣ ಸುರಂಗದೊಳಗೆ ಮುಂದಕ್ಕೆ ಸಾಗಿದಾಗ, ನಾವಿದ್ದೆವು… ನಯಾಗರ ನದಿಯ ದಡದಲ್ಲಿ… ಬ್ರೈಡಲ್ ವೇಲ್ ಜಲಪಾತದ ತಳದಲ್ಲಿ.

ಈ ಜಲಪಾತವು, ಇತರ ಎರಡೂ ಜಲಪಾತಗಳಿಗಿಂತ ಗಾತ್ರದಲ್ಲಿ ಚಿಕ್ಕದು; ಆದರೆ ಬಹಳ ಸುಂದರ. ಹೆಸರೇ ಸೂಚಿಸುವಂತೆ;  ಒನಪು, ಒಯ್ಯಾರ ತುಂಬಿದ ಮದುಮಗಳ ಬಿಳಿಯ ದಿರುಸಿನಂತೆ!. ಇದರ ನೀರಿನ ಹರಿವಿನ ಅಗಲ 56 ಅಡಿಗಳು ಮತ್ತು ಎತ್ತರ 181 ಅಡಿಗಳು. ನಾವು ಜಲಪಾತದತ್ತ ಹೋಗುತ್ತಿದ್ದಂತೆ ನಮಗೆಲ್ಲರಿಗೂ ಹಳದಿ ಬಣ್ಣದ ರೈನ್ ಕೋಟುಗಳನ್ನು ನೀಡಲಾಯಿತು. ಮಾತ್ರವಲ್ಲದೆ, ನಮ್ಮ ಚಪ್ಪಲಿ, ಶೂಗಳನ್ನೆಲ್ಲಾ ಕಳಚಿಟ್ಟು ಅವರು ಕೊಡುವ ಚಪ್ಪಲಿಗಳನ್ನು ಧರಿಸಬೇಕಾಯಿತು. ಚಪ್ಪಲಿಗಳು ನೀರಲ್ಲಿ ನಡೆಯಲು ಅನುಕೂಲಕರವಾಗಿದ್ದು, ತಾತ್ಕಾಲಿಕ ಉಪಯೋಗಕ್ಕಾಗಿ ನೀಡಲಾಗುವುದು ಮತ್ತು ಇವುಗಳನ್ನು ಹಿಂತಿರುಗಿಸಬೇಕಾಗಿಲ್ಲ. ಆದರೆ ಇವುಗಳನ್ನು ಧರಿಸಿ ನೆಲದ ಮೇಲೆ ನಡೆದರೆ ಸ್ವಲ್ಪ ಹೊತ್ತಿನಲ್ಲೇ ಕಿತ್ತು ಬರುವಂತಿವೆ… ಅಷ್ಟೂ ನಾಜೂಕು! ಅಂತೂ ವಿಶೇಷ ವೇಷ ಭೂಷಣ ತೊಟ್ಟು ಮುನ್ನಡೆದಾಗ; ನದಿ ದಡದಲ್ಲಿರುವ ಕರಿ ಬಂಡೆಗಳ ಮೇಲೆ ಬೆಳ್ಳಗಿನ ನೂರಾರು ಕಡಲಪಕ್ಷಿಗಳು ಸಭೆ ಸೇರಿದ್ದವು. ಅವುಗಳ ಕಲರವವು ಜಲಪಾತದ ನೀರಿನ ಭೋರ್ಗರೆತದ ಸದ್ದಿನೊಂದಿಗೆ ಮಿಳಿತಗೊಂಡು  ಪರಿಸರದಲ್ಲಿ ವಿಶೇಷವಾದ ಅಹ್ಲಾದಕರ ವಾತಾವರಣವೊಂದು ಸೃಷ್ಟಿಯಾಗಿತ್ತು. ಮುಂದಕ್ಕೆ ನಡೆದಂತೆ, ಮೇಲೇರಲು ಎತ್ತರೆತ್ತರ ಮೆಟ್ಟಲುಗಳು ಗೋಜರಿಸಿದವು. ಇದುವೇ Cave of the winds… ಇಲ್ಲಿಯ ಇನ್ನೊಂದು ಆಕರ್ಷಣೆ!    


ಇಲ್ಲಿ ಜಲಪಾತದ ತಳಭಾಗದಿಂದ ಅಂದರೆ, Goat Islandನಿಂದ Luna Islandಗೆ ಉಕ್ಕಿನ ಏರು ಮೆಟ್ಟಲುಗಳನ್ನು ರಚಿಸಲಾಗಿದೆ. ಇವುಗಳು ಅತ್ಯಂತ ಬಲಿಷ್ಟ ಹಾಗೂ ಸುರಕ್ಷಿತವಾಗಿದ್ದು ನದಿ ದಡದಿಂದ ಮೇಲೇರಿ ಜಲಪಾತದ ಜಲಧಾರೆ ಬೀಳುವಲ್ಲಿ ವರೆಗೆ ಹೋಗಬಹುದಾಗಿದೆ. ಇಲ್ಲಿ ಮೇಲೇರುತ್ತಾ ಸಾಗಿದಂತೆ; ಮೆಟ್ಟಲುಗಳ ಮೇಲೆ ಜಲಪಾತದ ನೀರು ಸಿಡಿದು, ರಭಸದಿಂದ ಹರಿಯುತ್ತಿರುವ ನೀರಿನ ಮೇಲಿಂದ ಬಹಳ ಜಾಗರೂಕತೆಯಲ್ಲಿ ಹೆಜ್ಜೆಯ ಮೇಲೆ ಹೆಜ್ಜೆಯನಿಕ್ಕುತ ಸಾಗಬೇಕು… ಸ್ವಲ್ಪ ತಪ್ಪಿದರೂ ಉರುಳುವುದು ಖಚಿತ! 

ಇಲ್ಲಿಯ ವಿಶೇಷತೆಯೆಂದರೆ; ಉಳಿದೆರಡು ಜಲಪಾತಗಳಲ್ಲಿ ಸಿಗದಿರುವ ಅವರ್ಣನೀಯ ಆನಂದ, ಅನುಭವವನ್ನು  ನಾವು ಪಡೆಯಬಹುದು.  ಈ ಜಲಪಾತದ ನೀರು ನೇರವಾಗಿ ನದಿಗೆ ಬೀಳದೆ, ಮೇಲಿನಿಂದ ಅತ್ಯಂತ ರಭಸವಾಗಿ ಬಂಡೆಗಳ ಮೇಲೆ ಬೀಳುತ್ತದೆಯಾದರೂ; ರಭಸವಾದ ಗಾಳಿಯ ಹೊಡೆತಕ್ಕೆ ಜಲಧಾರೆಯು ಓಲಾಡುತ್ತಾ, ಒಂದು ಪಕ್ಕದಿಂದ ನಾವು ಏರುತ್ತಿರುವ ಮೆಟ್ಟಲುಗಳ ಮೇಲೂ ಪ್ರಚಂಡ ವೇಗದಿಂದ ಬೀಳುತ್ತದೆ. ಅದೇ ಸಮಯಕ್ಕೆ ಅದರ ಕೆಳಗಿರುವ ನಮ್ಮ ಮೇಲೂ ಬಿದ್ದು ಒದ್ದೆಯಾಗಿಸಿ ಮೆಟ್ಟಲಿನಿಂದ ಕಾಲಿನ ಹಿಡಿತವನ್ನು ತಪ್ಪಿಸಿ ಗಾಳಿಗೆ ನಮ್ಮನ್ನು ತೂರಿಬಿಡಲು ಯತ್ನಿಸುತ್ತದೆ! ಇಲ್ಲಿ ಒಂಟಿಯಾಗಿ ಗಟ್ಟಿಯಾಗಿ ನಿಂತವರೇ ಗಟ್ಟಿಗರು! ನಾನು ಮಗಳನ್ನು ಬಿಗಿಯಾಗಿ ಹಿಡಿದಿಲ್ಲವಾಗಿದ್ದರೆ ಖಂಡಿತಾ ಎಲ್ಲೋ ಬಿದ್ದು ಹೋಗುತ್ತಿದ್ದೆನೇನೋ! ಇಲ್ಲಿ ಊಹಾತೀತವಾದ  ನೀರಿನ ವೇಗದ ಹೊಡೆತಕ್ಕೆ ರಾಚುವ ಜಲಧಾರೆಗೆ ಮೈಯೊಡ್ಡಿ, ಶುಭ್ರ ಬಿಳಿ ನೊರೆಯ ಅಗಾಧ ಮೊರೆತವನ್ನು ಮನಸಾರೆ ಸವಿದು ಆನಂದಿಸಬಹುದು. ಅದರ ರಭಸದಿಂದಾಗಿ ನಮಗೆ ನೇರವಾಗಿ ನಿಲ್ಲುವುದು ಕೂಡಾ ದುಸ್ತರವೆನಿಸುತ್ತದೆ. ಪುಟ್ಟ ಚಿಣ್ಣರ ನೀರಿನಲ್ಲಿಯ ನಲಿದಾಟ,  ನೀರಿನ ಧಾರೆಗೆ ಮೈಯೊಡ್ಡಿ ಸುಖಿಸುತ್ತಿರುವ ದೊಡ್ಡ ಮಕ್ಕಳ ಕುಣಿದಾಟ, ಬೆಳ್ನೊರೆಯ ಅಗಾಧ ಜಲಧಾರೆ ನೋಡುತ್ತಾ ಮೈಮರೆತೆ…ಸಮಯ ಸರಿದುದೇ ತಿಳಿಯಲಿಲ್ಲ… ಅಲ್ಲಿರುವ ಎಲ್ಲರ ಮೈಮೇಲಿನ ಚಿನ್ನದ ಬಣ್ಣದ ಮಳೆ ಅಂಗಿಗಳು ತಮ್ಮ ಕರ್ತವ್ಯವನ್ನು ನಿಭಾಯಿಸಲು ಶಕ್ತವಾಗದೆ ನಿಟ್ಟುಸಿರು ಬಿಡುತ್ತಿದ್ದವು. ಪಕ್ಕದಲ್ಲಿದ್ದ ಮಗುವೊಂದು ಅಟ್ಟಹಾಸಗೈದು ಅಳುತ್ತಿದ್ದರೂ ಅದರ ಹೆತ್ತವರಿಗೆ ಇನಿತೂ ಕೇಳಿಸುತ್ತಿರಲಿಲ್ಲ…ಜಲಪಾತದ ಅಟ್ಟಹಾಸದ ನಡುವೆ! ಆ ನೀರಿನ ರಭಸಕ್ಕೆ ನನಗೆ ಬಹಳ ಭಯವಾದರೂ ಮಗಳು ಜೊತೆಗಿದ್ದು ನನಗೆ ಧೈರ್ಯ ತುಂಬುತ್ತಾ, ನೀರಿನ ಹೊಡೆತಕ್ಕೆ ನನ್ನನ್ನೊಡ್ಡುವಲ್ಲಿ ಯಶಸ್ವಿಯಾದಳು!  ಹಾಗೆಯೇ ಒಂದು ತಾಸು ನೀರಾಟವಾಡಿ ಕೆಳಗಿಳಿದೆವು. ಜಲಪಾತದಿಂದ ಬಂಡೆ ಮೇಲೆ ಅಪ್ಪಳಿಸಿದ ನೀರು ನೊರೆ ಕಾರುತ್ತಾ ಕೆಳಗಡೆಗಿರುವ ನಯಾಗರ ನದಿಗೆ ಹರಿದು ಹೋಗುವ ಸುಂದರ ದೃಶ್ಯವನ್ನು ವೀಕ್ಷಿಸಲು ಅನುಕೂಲವಾಗುವಂತೆ ಅಲ್ಲೇ ಕೆಳಗಿಳಿದು ಹೋಗಲು ಮೆಟ್ಟಲುಗಳು ಹಾಗೂ ಸಣ್ಣಗಿನ ಸೇತುವೆಯಿದೆ. ಈ ಜಾಗದಲ್ಲೂ ಜನರ ದಟ್ಟಣೆ ಸಾಕಷ್ಟಿತ್ತು.

ವರ್ಷವೊಂದಕ್ಕೆ ಸುಮಾರು 8ಮಿಲಿಯದಷ್ಟು ಪ್ರವಾಸಿಗರು ಭೇಟಿ ನೀಡುವ ಈ ನಯಾಗರ ಜಲಪಾತದ ಪ್ರದೇಶವು, ಮೂಲಭೂತ ಸೌಕರ್ಯಗಳನ್ನು ಒಳಗೊಂಡು, ಅತ್ಯಂತ ಸುವ್ಯವಸ್ಥಿತವಾಗಿ ಸ್ವಚ್ಛತೆಯಿಂದ ಕೂಡಿರುವುದು ನಿಜಕ್ಕೂ ಮನಮೆಚ್ಚುವಂತಿದೆ. ಜೊತೆಗೆ ಈ ವಿಶಾಲವಾದ ಪ್ರದೇಶವನ್ನು ಸುತ್ತಾಡಲು, ಉಚಿತ ಬಸ್ಸಿನ ವ್ಯವಸ್ಥೆಯನ್ನು ಕಲ್ಪಿಸಿರುವರು.  ಕಲ್ಪನೆಗೆ ನಿಲುಕದ, ಪ್ರಕೃತಿಯ ಈ ಅಗಾಧ ಸೌಂದರ್ಯವನ್ನು ವೀಕ್ಷಿಸುವ ಅವಕಾಶವನ್ನು ಪಡೆದ ಪ್ರತಿಯೊಬ್ಬರಿಗೂ ಇದೊಂದು ಅವಿಸ್ಮರಣೀಯ ಅನುಭವವಾಗುವುದರಲ್ಲಿ ಸಂಶಯವಿಲ್ಲ. ವಿಪರೀತ ಚಳಿಗಾಲದಲ್ಲಿ ಕೆಲವೊಮ್ಮೆ ಇಲ್ಲಿಯ ನೀರು, ಹರಿವಿನ ಹಂತದಲ್ಲೇ ಹೆಪ್ಪುಗಟ್ಟುವುದೂ ಇದೆ. ಆಗ ಅದರ ಸೌಂದರ್ಯದ ಪರಿಯೇ ಬೇರೆ! ರಜತ ಪರದೆಯನ್ನೊಡ್ಡಿ ನಿಶ್ಶಬ್ದ ಮೌನದಲ್ಲಿ, ಸೂರ್ಯದೇವನ ದಯೆಗಾಗಿ ಕಾಯುತ್ತಾ  ಜಲಪಾತವು ನಿಂತಿರುತ್ತದೆ…ತನ್ನ ಮೊದಲಿನ ಲವಲವಿಕೆ, ಗೌಜಿ, ಗದ್ದಲ, ಗಲಾಟೆಗಳನ್ನು ನೆನೆಯುತ್ತಾ!  ಕೆಲವು ಅಪರೂಪದ ಸಾಹಸಿಗರು ಅದರ ಮೇಲೆ ನಡೆದಾಡುವ ದುಸ್ಸಹಾಸಕ್ಕೆ ತೊಡಗಿ ದುರಂತವಾದುದೂ ಇದೆ ಎಂದು ತಿಳಿದುಬಂತು.

ಮುಂದಕ್ಕೆ, ನಾವು ಬಂದಿದ್ದ ಮಾರ್ಗದಲ್ಲೇ ಹಿಂತಿರುಗಿ ಜಲಪಾತದ ಮೇಲಿನ ಸ್ತರಕ್ಕೆ ತಲಪಿದೆವು… ವಿಸ್ತಾರವಾದ ಸೊಗಸಾದ ರಸ್ತೆಯಲ್ಲಿ  ಸಾಗುತ್ತಾ ಹಾರ್ಸ್ ಶೂ ಜಲಪಾತದ ಮೇಲ್ಭಾಗಕ್ಕೆ. ಬಹು ವಿಸ್ತಾರವಾದ ನದಿಯ ನೀರು ಹರಿಯುತ್ತಾ ಕೆಳಗೆ ಬೀಳುವ ದೃಶ್ಯವು  ಸ್ವಲ್ಪಾಂಶ ಮಾತ್ರ ನಮಗೆ ಕಾಣಸಿಗುವುದು. ಆದರೂ ಅದರ ವೈಭವವನ್ನು ಏನು ಹೇಳಲಿ? ನದಿ ದಡದ ಸಮೀಪದಲ್ಲಿಯೇ ರಕ್ಷಣೆಗಾಗಿ ಕಬ್ಬಿಣದ ಬಲವಾದ ಬೇಲಿ.. ಅಲ್ಲೇ ಪಕ್ಕದಲ್ಲಿ ಜಲಧಾರೆಯ ಅಂದವನ್ನು ಸವಿಯಲು ಆರಾಮ ಆಸನಗಳು, ಸ್ವಚ್ಛ, ಸುಂದರ ಪರಿಸರ…ಇನ್ನೇನು ಬೇಕು..??!  ನದಿಯಲ್ಲಿ ಹರಡಿ ಹಾಸಿದ ದೊಡ್ಡ ದೊಡ್ಡ ಕರಿಬಂಡೆಗಳ ಎಡೆಯಿಂದ ಹಾಗೂ ಮೇಲಿಂದ, ಕಿ.ಮೀ. ಗಟ್ಟಲೆ ಅಗಲಕ್ಕೆ ಹರಿಯುತ್ತಾ ಬಂದು ಕೆಳಕ್ಕೆ ಬೀಳುವ ಅಗಾಧ ಶುಭ್ರ ಜಲರಾಶಿಯ ರುದ್ರರಮಣೀಯ ನೋಟ, ಜಲಪಾತದಲ್ಲಿ ಆರ್ಭಟಿಸುತ್ತಾ ಕೆಳಗೆ ನೆಗೆಯುವ ದೃಶ್ಯವನ್ನು ಕಣ್ತುಂಬಿಕೊಳ್ಳುತ್ತಾ, ಅದರ ಭೋರ್ಗರೆತದ ಸದ್ದನ್ನು ಸವಿಯುತ್ತಾ ಅಲ್ಲಿ ಕುಳಿತವಳಿಗೆ ಇಹಲೋಕದ ಪರಿವೆಯೇ ಇಲ್ಲ…ಸಮಯ ಸರಿದುದೇ ತಿಳಿಯಲಿಲ್ಲ! ಅದಾಗಲೇ ಸಂಜೆಗೆಂಪು ಹರಡಲಾರಂಭಿಸಿತು…ನಮಗೂ ಹಿಂತಿರುಗುವ ಸಮಯವನ್ನು ತಿಳಿಸತೊಡಗಿತು. ಸುಮಾರು ಸಂಜೆ ಐದು ಗಂಟೆಗೆ ನಾವು ಬಾಡಿಗೆಗೆ ಪಡೆದ ಕಾರಿನಲ್ಲಿ ನಮ್ಮ ಪಯಣ ಮುಂದಕ್ಕೆ ಹೊರಟಿತು…ಅತ್ಯಂತ ಸುಂದರ ಗಂಭೀರ ಜಲಪಾತಕ್ಕೆ ವಿದಾಯ ಹೇಳುತ್ತಾ…ಅಮೆರಿಕದ ಇನ್ನೊಂದು ಮುಖ್ಯ ಪಟ್ಟಣದೆಡೆಗೆ …

ಅಮೆರಿಕದ ರಾಜಧಾನಿಯತ್ತ…

ಹೌದು…ಜಗತ್ತಿನ ಅತಿದೊಡ್ಡ ಬಂದರು ಹಾಗೂ ಅಮೆರಿಕದ ರಾಜಧಾನಿಯಾದ ನ್ಯೂಯಾರ್ಕ್ ಮಹಾನಗರ ವೀಕ್ಷಣೆಗೆ ಹೋಗುತ್ತಿರುವುದನ್ನು ಯೋಚಿಸಿಯೇ ಮನ ಪುಳಕಗೊಂಡಿತು… ಯಾಕೆ ಗೊತ್ತಾ?..ನನ್ನ ಜೀವನದ ಪ್ರಮುಖ ಘಟ್ಟಗಳಲ್ಲಿ ಒಂದಾಗಿ ಈ ಕ್ಷಣವು ಸೇರ್ಪಡೆಗೊಳ್ಳುವುದರಲ್ಲಿತ್ತು. ಎಂದಿನಂತೆ, ಅಸಾಮಾನ್ಯ ಸುಂದರ ರಸ್ತೆಯಲ್ಲಿ ಮುಂದಿನ ಏಳು ತಾಸುಗಳ, ಸುಮಾರು 380 ಮೈಲು ದೂರದ ಪಯಣದ ಹಾದಿ ಕ್ರಮಿಸುತ್ತಾ ನಮ್ಮ ವಾಹನ ಸಾಗಿತು. ರಾತ್ರಿ ಗಂಟೆ 9:30.. ಮಾರ್ಗ ಮಧ್ಯೆ ರಾತ್ರಿಯೂಟದ ವ್ಯವಸ್ಥೆಗಾಗಿ, ಇಂತಹ ಜಾಗಗಳಲ್ಲಿ ಅಲಭ್ಯವಾದ ಶಾಕಾಹಾರಿ ಹೋಟೇಲ್ ಗಳ ನಡುವೆಯೂ ಅದು ಹೇಗೋ ಅಳಿಯ ಒಂದು ಕಡೆಗೆ ಒಳ್ಳೆಯ ಸಸ್ಯಾಹಾರ ಸಿಗುವಂತಹ ಜಾಗವನ್ನು ಕಂಡುಹಿಡಿದೇ ಬಿಟ್ಟಿದ್ದ. ಅದಾಗಿತ್ತು Endicott ಎನ್ನುವ ಪುಟ್ಟ ಪಟ್ಟಣ. ಅಲ್ಲಿಯ Taj Tanduri ಹೆಸರಿನ ಹೋಟೇಲ್ ಅದಾಗಲೇ ವ್ಯಾಪಾರ ಮುಗಿಸಿ ಮುಚ್ಚುವ ಹಂತದಲ್ಲಿತ್ತು. ಒಳಗೆ ಹೋದಾಗ ಪ್ರೀತಿಯ ಸ್ವಾಗತವೇ ಸಿಕ್ಕಿತು.  ನಮಗಾಗಿ ಲಭ್ಯ ಆಹಾರವನ್ನು ಬುತ್ತಿ ಕಟ್ಟಿಕೊಡಲು ಕೇಳಿಕೊಂಡಾಗ ಸಂತೋಷದಿಂದಲೇ ಒಪ್ಪಿಕೊಂಡರು. ಇಲ್ಲಿ ಇದನ್ನು To Go ಎನ್ನುವರು. ಈ ಸಮಯದಲ್ಲಿ ನಡೆದ ಮಾತುಕತೆಯಿಂದ ವಿಶೇಷವಾದ ಸಂಗತಿಯೊಂದು ತಿಳಿದು ಬಂತು. IBM ಎಂಬ ಅಂತಾರಾಷ್ಟ್ರೀಯ ಬೃಹತ್ ಕಂಪೆನಿ ಬಗ್ಗೆ ಸಾಮಾನ್ಯವಾಗಿ ಎಲ್ಲರಿಗೂ ತಿಳಿದೇ ಇದೆ. ಈ ಕಂಪೆನಿಯ ಹುಟ್ಟು 1911 ರ ಜೂನ್ ತಿಂಗಳಲ್ಲಿ ಇದೇ ಪಟ್ಟಣದಲ್ಲಿಯೇ  ಆಗಿತ್ತೆನ್ನುವ ವಿಷಯ ತಿಳಿದು ಬಹಳ ಆಶ್ಚರ್ಯ ಹಾಗೂ ಸಂತೋಷವೂ ಆಯಿತು. ಮುಂದಕ್ಕೆ ನಮ್ಮ ಕಾರು ನಿಶ್ಶಬ್ದ ಮೌನದಲ್ಲಿ ಕತ್ತಲೆಯನ್ನು ಹೊದ್ದು ಮಲಗಿದ ನೀಳವಾದ ರಸ್ತೆಯ ಮೇಲೆ ವೇಗವಾಗಿ ಸಾಗಿದಾಗ; ಬೃಹತ್ ಸುಂದರ ಮಹಾನಗರವನ್ನು ನೋಡುವ ಕನಸು ಕಾಣುತ್ತಾ… ನಾನು ಸಣ್ಣ ನಿದ್ರೆಗೆ ಜಾರಿದ್ದು ತಿಳಿಯಲೇ ಇಲ್ಲ….

(ಮುಂದುವರಿಯುವುದು…..)

ಈ ಪ್ರವಾಸಕಥನದ ಹಿಂದಿನ ಎಳೆ ಇಲ್ಲಿದೆ: surahonne.com/?p=38412

-ಶಂಕರಿ ಶರ್ಮ, ಪುತ್ತೂರು. 

6 Responses

  1. ನಯನ ಬಜಕೂಡ್ಲು says:

    Very nice. ಪ್ರವಾಸದಲ್ಲಿ ನಿಮಗಾದ ಉಲ್ಲಾಸ, ಸಂತೋಷ ಓದುವಾಗ ನಮ್ಮಲ್ಲೂ ಒಂದು ಖುಷಿ.

    • ಶಂಕರಿ ಶರ್ಮ says:

      ತಮ್ಮ ಪ್ರೀತಿಯ ಸ್ಪಂದನೆಗೆ ಧನ್ಯವಾದಗಳು ನಯನಾ ಮೇಡಂ.

  2. ನಿಮ್ಮ ಪ್ರವಾಸ ಕಥನ… ನನಗಂತುಉಲ್ಲಾಸದಾಯಕವಾಗಿದೆ..ನಿಮ್ಮ ಜೊತೆಗೆ ನಾನು..ಹೆಜ್ಜೆ ಹಾಕುತ್ತಾ.. ಸಾಗುತಿದ್ದೇನೆ..ಧನ್ಯವಾದಗಳು ಶಂಕರಿ ಮೇಡಂ

    • ಶಂಕರಿ ಶರ್ಮ says:

      ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು ….ನಾಗರತ್ನ ಮೇಡಂ.

  3. ಸುಚೇತಾ says:

    ತುಂಬಾ ಚೆನ್ನಾಗಿದೆ ಜಲಪಾತದ ವೈಭವ ಹಾಗೂ ಚಿತ್ರಣ.

  4. Padmini Hegade says:

    ಅನುಭವ ಕಥನ ಚೆನ್ನಾಗಿದೆ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: