ಭಾಗ್ಯದ ಲಕ್ಷ್ಮಿ ಬಾರಮ್ಮ

Share Button

ಇದು ಎಲ್ಲಾ “ಲಕ್ಷ್ಮಿ”ಯರೂ ಲಾಂಚ್‌ ಆಗುತ್ತಿರುವ ಕಾಲ! ಭಾರತೀಯ ಪರಿಕಲ್ಪನೆಯ ಲಕ್ಷ್ಮಿ ಯಾರು, ಆಕೆ ನಮ್ಮನ್ನು ಹೇಗೆ ಮುನ್ನಡೆಸಬೇಕು ಎನ್ನುವ ಚಿಂತನೆಯ ಗೀತೆ ಭಾಗ್ಯದ ಲಕ್ಷ್ಮಿ ಬಾರಮ್ಮ. ಪುರಂದರದಾಸರ ಈ ಗೀತೆ ನಮ್ಮನ್ನು ಸೂಕ್ತವಾಗಿ ಮುನ್ನಡೆಸುವ ಲಕ್ಷ್ಮಿದೇವಿಯಪರಿಕಲ್ಪನೆಯನ್ನು ತುಂಬಾ ಸೊಗಸಾಗಿ ದೃಶ್ಯಾತ್ಮಕವಾಗಿ ಚಿತ್ರಿಸಿದೆ. ಇದರ ಗತಿ ಹೀಗಿದೆ:

ಭಾಗ್ಯದ ಲಕ್ಷ್ಮಿ ಬಾರಮ್ಮ ನಮ್ಮಮ್ಮ ನೀ ಸೌಭಾಗ್ಯದ ಲಕ್ಷ್ಮೀ ಬಾರಮ್ಮ||
ಹೆಜ್ಜೆಯ ಮೇಲೊಂದು ಹೆಜ್ಜೆಯನಿಕ್ಕುತ| ಗೆಜ್ಜೆ ಕಾಲ್ಗಳ ಘಲ್‌ ಘಲ್‌ ಎನ್ನುತ|
ಸಜ್ಜನ ಸಾಧು ಪೂಜೆಯ ವೇಳೆಗೆ| ಮಜ್ಜಿಗೆಯೊಳಗಿನಬೆಣ್ಣೆಯಂತೆ||
ಕನಕ ವೃಷ್ಟಿಯ ಕರೆಯುತ ಬಾರೆ| ಮನಕೆ ಮನದ ಸಿದ್ಧಿಯ ತೋರೆ|
ದಿನಕರ ಕೋಟಿ ತೇಜದಿ ಹೊಳೆಯುವ| ಜನಕರಾಯನ ಕುಮಾರಿ ಬೇಗ||
ಶಂಕೆ ಇಲ್ಲದೆ ಭಾಗ್ಯವ ಕೊಟ್ಟು| ಕಂಕಣ ಕೈಯ ತಿರುವುತ ಬಾರೆ|
ಕುಂಕುಮಾಂಕಿತೆ ಪಂಕಜಲೋಚನೆ| ವೆಂಕಟರಮಣನ ಬಿಂಕದ ರಾಣಿ||
ಸಕ್ಕರೆ ತುಪ್ಪದ ಕಾಲುವೆ ಹರಿಸಿ| ಶುಕ್ರವಾರದ ಪೂಜೆಯ ವೇಳೆಗೆ|
ಅಕ್ಕರೆಯುಳ್ಳ ಅಳಗಿರಿ ರಂಗನ| ಚೊಕ್ಕ ಪುರಂದರ ವಿಠಲನ ರಾಣಿ||ಇದೊಂದು ಪುರಂದರ ದಾಸರ ಗೀತೆ. ಎಲ್ಲರೂ ಇಂದ್ರಿಯಪ್ರಧಾನರಾಗಿ ಹುಟ್ಟುತ್ತಾರೆ. ಅದರಿಂದ ಇಂದ್ರಿಯಗಳ ತೃಪ್ತಿ ಮುಖ್ಯವಾಗುತ್ತದೆ. ಈ ಅರ್ಥದಲ್ಲಿ ಪ್ರತಿಯೊಬ್ಬರೂ ದೇವೇಂದ್ರನೇ! ಕಡಿಮೆ ಶ್ರಮದಲ್ಲಿ ಅತ್ಯಂತ ಗರಿಷ್ಠಸೌಖ್ಯ ತಮ್ಮದಾಗಬೇಕು ಎಂದು ಎಲ್ಲರೂ ಬಯಸುತ್ತಾರೆ.ಬಹಳ ಮಂದಿ ತಮ್ಮ ಸೌಖ್ಯವನ್ನು, ಸುಖ ಸಂತೋಷಗಳನ್ನು ಹಂಚಿಕೊಳ್ಳುವ ಆಲೋಚನೆ ಮಾಡುವುದಿಲ್ಲ. ಬದಲಿಗೆ ಎಲ್ಲವೂತಮಗೊಬ್ಬರಿಗೇ ಇರಬೇಕು ಎಂದುಕೊಳ್ಳುತ್ತಾರೆ. ಯಾರಾದರೂ ತಮ್ಮ ಸುಖ ಸಂತೋಷಗಳ ಮೂಲವಾದ ಸಂಪತ್ತನ್ನು ಅಪಹರಿಸಬಹುದು,ದೋಚಬಹುದು ಎಂದು ಸಂಶಯ ಪಡುತ್ತಾರೆ. ಅದರಿಂದಾಗಿ ಅವರೂ ಸಂತೋಷವಾಗಿರುವುದಿಲ್ಲ, ಜೊತೆಯವರಿಗೂ ಸಂತೋಷವಾಗಿರಲುಬಿಡುವುದಿಲ್ಲ. ಸಂಪತ್ತನ್ನು ಯಾರಿಗೂ ಗೊತ್ತಾಗದಂತೆ ಸಂಗ್ರಹಿಸಿಟ್ಟುಕೊಳ್ಳುವ ಉಪಾಯಗಳನ್ನು, ತಂತ್ರ ಪ್ರತಿತಂತ್ರಗಳನ್ನು ಹೂಡುತ್ತಾರೆ.ಆದರೆ ಸಂಪತ್ತಿನಿಂದಲೇ ಸುತ್ತುವರೆದಿದ್ದರೂ ಒಬ್ಬನಿಗೆ ಆ ಸಂಪತ್ತನ್ನು ಸ್ವಲ್ಪವೂ ಅನುಭವಿಸಲು ಸಾಧ್ಯವಾಗದೇ ಹೋಗಬಹುದು. ಯಾವಾಗನಮ್ಮ ದಿಕ್ಕಿನಲ್ಲಿ ಲಕ್ಷ್ಮಿ ನಡೆದು ಬರುತ್ತಾಳೆಯೋ ಆಗ ಮಾತ್ರ ಸಂಪತ್ತನ್ನು ಅನುಭವಿಸಲು ಸಾಧ್ಯವಾಗುತ್ತದೆ. ಅದರಿಂದಲೇ ಪುರಂದರದಾಸರು ಭಾಗ್ಯದ ಲಕ್ಷ್ಮೀ ಬಾರಮ್ಮಾ ಎಂದು ಬೇಡಿಕೊಳ್ಳುತ್ತಿದ್ದಾರೆ, ಪ್ರಾರ್ಥಿಸುತ್ತಿದ್ದಾರೆ.

ಲಕ್ಷ್ಮಿ ಇರದಿದ್ದರೆ ದೈನಂದಿನ ಜೀವನವೇ ಅಸಾಧ್ಯ. ಆದರೆ ವ್ಯಕ್ತಿ ಲಕ್ಷ್ಮಿಗೆ ದಾಸನೂ ಆಗಿರಬಾರದು, ಆಕೆಯ ಒಡೆಯ ತಾನು ಎಂಬ ಭಾವವೂ ಅವನಲ್ಲಿಇರಬಾರದು,. ಲಕ್ಷ್ಮಿ ಒಬ್ಬನ ಪರಿಶ್ರಮದ ಫಲವಾಗಿ ಅವನ ಬಳಿ ಇರಬೇಕು. ಆಗ ಲಕ್ಷ್ಮಿಗೆ ಸೂಕ್ತ ಮರ್ಯಾದೆ ಇರುತ್ತದೆ. ಇಲ್ಲದಿದ್ದರೆ ಒಂದು ರೀತಿಯ ಅನಾದರ ಇರುತ್ತದೆ. ಅದು ತಿರಸ್ಕಾರ ಮಿಶ್ರಿತ ಧೋರಣೆಯೂ ಆಗಿರಬಹುದು ಅಥವಾ ಅಹಂಕಾರವೂ ಆಗಿರಬಹುದು. ಲಕ್ಷ್ಮಿ ಭೌತಿಕ ಸಂಪತ್ತನ್ನು ಸಂಪಾದಿಸುವುದಕ್ಕೆ ಮಾತ್ರ ಆಕರ ಅಲ್ಲ. ಸಂಪತ್ತಿನ ಬಗೆಗೆ ನಾವು ರೂಢಿಸಿಕೊಳ್ಳಬೇಕಾದ ಮನಸ್ಥಿತಿಗೂ ಆಕರ. ಆರ್ಥಿಕವಾಗಿ ಅದೃಷ್ಟ ಖುಲಾಯಿಸಿದರೆ ಜನ ಮದಾಂಧರಾಗುತ್ತಾರೆ.. ಆರ್ಥಿಕವಾಗಿ ನಿರ್ಬಲರಾದರೆ ಅತಿಯಾಗಿ ದೀನರಾಗುತ್ತಾರೆ, ಯಾರಾದರೂ ತಮ್ಮನ್ನು ಬೇಕೆಂದೇ ಅವಮರ್ಯಾದಿಸುತ್ತಾರೆ ಎಂದು ಅತಿಯಾಗಿ ಸಂದೇಹಗ್ರಸ್ತರಾಗುತ್ತಾರೆ. ಹೀಗೆ ಲಕ್ಷ್ಮಿಗೆ ನಮ್ಮನ್ನು ಆಟವಾಡಿಸಲು ಬಿಡಬಾರದು. ವಿವೇಚನಾ ತಕ್ಕಡಿಯಲ್ಲಿ ಸಂಪತ್ತನ್ನು ತೂಗಿ ನೋಡಬೇಕು. ಅದಕ್ಕೆ ಎಷ್ಟು ಮೌಲ್ಯವನ್ನು ಕೊಡಬೇಕು ಎಂಬುದನ್ನು ಮನನ ಮಾಡಿಕೊಳ್ಳಬೇಕು ಲಕ್ಷ್ಮಿಯನ್ನು ನಮ್ಮ ಮುಷ್ಟಿಯಲ್ಲಿ ಇಟ್ಟುಕೊಳ್ಳುವುದೇನೂ ಜಾಣತನ ಅಲ್ಲ. ಅದು ವಿವೇಕಯುತವಾದದ್ದೂ ಅಲ್ಲ. ಈ ಅರ್ಥದಲ್ಲಿಯೇ ಅಥರ್ವವೇದ ಮತ್ತು ಆಪಸ್ತಂಭ ಶ್ರೌತ ಸೂತ್ರಗಳು ಲಕ್ಷ್ಮಿಯು ಒಳಿತು ಕೆಡುಕುಗಳೆರಡರ ಸೂಚಕ ಎನ್ನುತ್ತವೆ .


ಕೆರೆಯ ನೀರು ತೂಬಿನಲ್ಲಿ ಹರಿದು ಸಸ್ಯಗಳಿಗೆ ಬೇಕಾದಷ್ಟು ನೀರನ್ನು ಒದಗಿಸುವಂತೆ ಸಂಪತ್ತು ಬಳಕೆಯಲ್ಲಿರಬೇಕು. ಸಂಪತ್ತಿನ ಉತ್ಪಾದನೆ ನಿಲ್ಲುವಂತಿಲ್ಲ. ಈ ದೃಷ್ಟಿಕೋನದಿಂದ ವ್ಯಕ್ತಿಯ ಅಂತರಂಗದಲ್ಲಿ ಆಗುವ ಬದಲಾವಣೆ ಸಂಪತ್ತಿನ ಮೂಲಕ ಪ್ರಗತಿಯನ್ನು ಸಾಧಿಸಲು, ಸೌಖ್ಯವನ್ನು ಅನುಭವಿಸಲು ವ್ಯಕ್ತಿಗೆ ಮಾತ್ರವಲ್ಲದೆ ಸಮುಧಾಯಕ್ಕೂಸಹಾಯಕ ಆಗುತ್ತದೆ; ವ್ಯಕ್ತಿಯನ್ನು ಬಂಧಿಸುವ ಸಣ್ಣತನಗಳಿಂದ ಬಿಡುಗಡೆ ಪಡೆಯಲು ಮಾರ್ಗದರ್ಶಕ ಆಗುತ್ತದೆ. ಇದು ಋಷಿದರ್ಶನ! ಸಂಪತ್ತು ತನಗೆ ತಾನೇ ಬರುವುದಿಲ್ಲ. ತ್ತನ್ನುತನ್ನದನ್ನಾಗಿಸಿಕೊಳ್ಳುವ ಸೂಕ್ತ ಜ್ಞಾನವೂ ವ್ಯಕ್ತಿಗೆ ಇರಬೇಕು, ಇರುವ ಸಂಪತ್ತನ್ನು ಸೂಕ್ತವಾಗಿ ಅನುಭವಿಸುವ ಮನಸ್ಥಿತಿಯೂ ಇರಬೇಕು,ಅದರಿಂದಲೇ ಲಕ್ಷ್ಮಿ ಯಾವಾಗಲೂ ಪಾರ್ವತಿ ಮತ್ತು ಸರಸ್ವತಿಯರೊಂದಿಗೆ ಇರುವ ದೇವಿಯಂತೆ ಚಿತ್ರಿತ ಆಗುತ್ತಾಳೆ.

ಯಾರು ತಮ್ಮ ಬದುಕನ್ನು ನಿಯಮಬದ್ಧವಾಗಿ ನಡೆಸುತ್ತಾ ತೃಪ್ತಿಯಿಂದಿರುತ್ತಾರೆಯೋ ಅವರ ಬಳಿಗೆ ಲಕ್ಷ್ಮಿ ತಾನೇ ತಾನಾಗಿ ನಡೆದು ಬರುತ್ತಾಳೆ. ಅಂಥವರು ಲಕ್ಷ್ಮಿಯ ಸಹಾಯದಿಂದ ಇತರರಿಗೆ ತಮ್ಮಿಂದ ಅನುಕೂಲ ಒದಗಿಸಿಕೊಡಲು ಸಾಧ್ಯವೇ ಎಂದು ಪರಿಶೀಲಿಸುತ್ತಿರುತ್ತಾರೆ. ಇದೊಂದುಲೌಕಿಕವಾಗಿ ಜೀವನವನ್ನು ಅತ್ಯುತ್ತಮವಾಗಿ ನಡೆಸುವ ಮಾರ್ಗ. ಇದಕ್ಕೆ ಒಂದು ಮಾದರಿ ಕೃಷ್ಣ. ಇನ್ನೊಂದು ರೀತಿಯ ಸಜ್ಜನರಿರುತ್ತಾರೆ. ಅವರು ಲಕ್ಷ್ಮಿಯ ಕಡೆ ತಿರುಗಿಯೂ ನೋಡುವುದಿಲ್ಲ. ಆದರೂ ಲಕ್ಷ್ಮಿ ಇವರ ಸೇವೆ ಮಾಡಲು ತಾನೇ ತಾನಾಗಿ ಬರುತ್ತಾಳೆ. ಆಕೆಯ ಸಹಾಯದಿಂದ ಅವರು ಇತರರ ದುಃಖ, ದುಗುಡ ದುಮ್ಮಾನಗಳಿಗೆ ಅತ್ಯಂತ ಅಗತ್ಯವಾದ ಸಂದರ್ಭದಲ್ಲಿ ಅತ್ಯಾವಶ್ಯಕವಾಗಿ ಸ್ಪಂದಿಸುತ್ತಾರೆ. ತಮ್ಮ ಕರ್ತವ್ಯ ಮುಗಿದ ನಂತರ ಲಕ್ಷ್ಮಿಗೂ ವಿಮುಖ, ಪ್ರಪಂಚದಲ್ಲಿದ್ದರೂ ಪ್ರಪಂಚಕ್ಕೂ ವಿಮುಖ. ಇದಕ್ಕೆ ಒಂದು ಮಾದರಿ ಶಿವ. ಪುರಂದರ ದಾಸರು ಈ ಎರಡೂ ರೀತಿಯ ಜೀವನ ರೀತಿಗಳನ್ನು ತಮ್ಮ ಭಾಗ್ಯದಾ ಲಕ್ಷ್ಮಿ ಬಾರಮ್ಮ ಗೀತೆಯಲ್ಲಿ ನಮ್ಮ ಗಮನಕ್ಕೆ ತರುತ್ತಾರೆ.

ಪುರಂದರದಾಸರು ದೈವಭಕ್ತಿ ಪ್ರಸಾರದ ಉದ್ದೇಶದಿಂದ ದಾಸ ದೀಕ್ಷೆ ಪಡೆದವರು. ಪ್ರಾಪಂಚಿಕ ಭೌತಿಕ ಸಮೃದ್ಧಿಯುಳ್ಳ ಬದುಕು ದೈವಭಕ್ತಿಗೆ ಪೂರಕವಾಗುವಂತೆ ಇರಲಿ ಎಂಬುದು ಅವರ ಆಶಯ. ಈ ಆಶಯದ ಚಿತ್ರವನ್ನೂ ಭಾಗ್ಯದಾ ಲಕ್ಷ್ಮಿ ಬಾರಮ್ಮ ಗೀತೆಯಲ್ಲಿ ಕಾಣಬಹುದು. ಈ ಆಶಯದ ಹಿನ್ನೆಲೆಯಲ್ಲಿ ಇರುವ ಲಕ್ಷ್ಮೀ ದೇವಿಯ ಪರಿಕಲ್ಪನೆ ಹಿರಿದಾದ ವ್ಯಾಪ್ತಿ ಉಳ್ಳದ್ದು. ಗೀತೆಯ ಕೇಂದ್ರ ಬಿಂದುವಾಗಿರುವ ಲಕ್ಷ್ಮಿ ಎಲ್ಲಾ ವಿಧದ ಸಂಪತ್ತು, ಸಮೃದ್ಧಿ, ಪ್ರಗತಿ, ಅಭಿವೃದ್ಧಿಯ ಅಧಿದೇವತೆ. ಈಕೆ ಅದೃಷ್ಟ, ಸುಕೃತ, ಸಾಧನ ಸಿದ್ಧಿ, ಸೌಂದರ್ಯ, ಆಕರ್ಷಕತೆ, ಮುದ, ಅಭೀಪ್ಸೆ, ಗೌರವಾದರ, ಸಾರ್ವಭೌಮತ್ವ, ಶ್ರೇಷ್ಠತೆ, ಕೃಪೆ, ಅದ್ಭುತವೇ ಮೊದಲಾದವುಗಳ ಮೂರ್ತ ರೂಪ. ಈಕೆಯ ವಿವಿಧ ರೂಪಗಳು: ಜ್ಞಾನ ಮತ್ತು ಸದ್ಗುಣದೊಂದಿಗೆ ಹಿತಕಾರಿಣಿ ಮತ್ತು ಮೋಕ್ಷದಾಯಕಿ ಆದ ಆದಿಲಕ್ಷ್ಮಿ; ಕೆಡುಕು ಮತ್ತು ಅಶುದ್ಧತೆಗಳನ್ನೆಲ್ಲ ಧ್ವಂಸ ಮಾಡುವ ಧಾನ್ಯಲಕ್ಷ್ಮಿ; ಜ್ಞಾನ ಮತ್ತು ವಿವೇಕಗಳನ್ನು ಫಲದಾಯಕವಾಗಿಸುವ ಹಾಗೂ ಎಲ್ಲಾ ರೂಪದ ಭಯಗಳನ್ನು ನಿವಾರಿಸುವ ಧೈರ್ಯಲಕ್ಷ್ಮಿ; ವಿಜಯಕಾರಕ ಶಕ್ತಿ ಸಂಪತ್ತನ್ನು ಕೊಡುವ ಗಜಲಕ್ಷ್ಮಿ; ಪ್ರಪಂಚದ ಕ್ಷೇಮಕ್ಕಾಗಿ ಮತ್ತು ಸದ್ಗುಣಗಳನ್ನು ಎತ್ತಿಹಿಡಿಯುವುದಕ್ಕಾಗಿ ಸಂತಾನರೂಪಿ ಸಂಪತ್ತನ್ನು ಕೊಡುವ ಸಂತಾನಲಕ್ಷ್ಮಿ; ವಿಜಯವನ್ನು ಮತ್ತು ಅಪಾರವಾದ ಸಂಪತ್ತನ್ನು ಕರುಣಿಸುವ, ಸತ್ಪಥದ ಮಾರ್ಗವನ್ನು ತೋರುವ, ಮುಕ್ತಿಯನ್ನು ಬಯಸುವವರಿಗೆ ಜ್ಞಾನ ವಿವೇಕಗಳನ್ನು ಕರುಣಿಸುವ, ಆರಾಧಕರಿಗೆ ಅವರ ಉಪಾಸನೆಯಲ್ಲಿ ಯಶಸ್ಸು ದೊರೆಯುವಂತೆ ಮಾಡುವ ವಿಜಯಲಕ್ಷ್ಮಿ; ನೋವು ದುಃಖ ಸಂಕಟಗಳನ್ನೆಲ್ಲಾ ನಿವಾರಿಸಿ ಉಪಾಸಕರ ಅಭೀಪ್ಸೆಗಳನ್ನು ಈಡೇರಿಸುವ, ಒಂಬತ್ತು ವಿಧದ ಸಂಪತ್ತನ್ನು ಕರುಣಿಸುವ, ದೇವಾನು ದೇವತೆಗಳಿಂದ ಪೂಜಿಸಲ್ಪಡುವ ಜ್ಞಾನ ವಿವೇಕಗಳ ಮೂರ್ತರೂಪ ಆದ ವಿದ್ಯಾಲಕ್ಷ್ಮಿ.

ಹಿತವಾಗಿರುವ ಪ್ರಾಪಂಚಿಕ ಬದುಕೇ ದೈವಭಕ್ತಿ ಸಹಜವಾಗಿ ಮೂಡುವುದಕ್ಕೆ ಅತ್ಯಗತ್ಯ ಪರಿಸರ ಎಂಬುದನ್ನು ಭಾವಿಸುವ ಭಾಗ್ಯದ ಲಕ್ಷ್ಮೀ ಬಾರಮ್ಮ ಗೀತೆಯ ಮೊದಲ ಚರಣ ಆಕೆ ಕ್ರಮಾಗತವಾಗಿ ಹೆಜ್ಜೆಯಮೇಲೊಂದು ಹೆಜ್ಜೆಯನ್ನು ಇಡುತ್ತಾ ಬರಬೇಕೆಂದು ಕೋರಿಕೊಳ್ಳುತ್ತಿದೆ. ಬಂದದ್ದು ಕಾಲ್ಗೆಜ್ಜೆಯ ಇನಿದಾದ ನಾದದಹಾಗೆ ಇರಲಿ ಎಂದೂ ಕೇಳಿಕೊಳ್ಳುತ್ತಿದೆ. ಸಾಧು ಸಜ್ಜನರನ್ನು ಸತ್ಕರಿಸಲು ಅನುವಾಗುವಂತೆ ಬರಬೇಕೆಂದು ಬಿನ್ನವಿಸಿಕೊಳ್ಳುತ್ತಿದೆ. ವ್ಯಕ್ತಿಗೆ ಬರುವ ಸೌಭಾಗ್ಯ ಮೊಸರನ್ನು ಕಡೆದಾಗ ದೇಹವನ್ನು ತಂಪುಗೊಳಿಸುವ ಮಜ್ಕಿಗೆಯ ಜೊತೆಗೆ ಶಕ್ತವರ್ಧಕ ಬೆಣ್ಣೆಯೂ ತೇಲಿಬರುವುದಕ್ಕೆ ಹೋಲಿಸುತ್ತಿದೆ. ಲಕ್ಷ್ಮೀ ದೇವಿ ಧಾವಿಸಿ ಬರಬೇಕೆಂದು ಕೇಳಿಕೊಳ್ಳದ ಈ ಚರಣ ಕಾಲುವೆಯಲ್ಲಿ ಬರುವ ನೀರು ಸಣ್ಣ ಸಣ್ಣ ಉಪಕಾಲುವೆಗಳಲ್ಲಿ ಹರಿದು ಪ್ರತಿಯೊಂದು ಸಸ್ಯಕ್ಕೂ ನೀರು ಉಣಿಸುವ ರೀತಿಯಲ್ಲಿ ವ್ಯಕ್ತಿಗೆ ಲಕ್ಷ್ಮೀದೇವಿಯಿಂದ ದೊರೆಯುವ ಭಾಗ್ಯ ಕ್ರಮಾಗತವಾಗಿ ವ್ಯವಸ್ಥಿತವಾಗಿ ಇರಲಿ; ದೊರೆತ ಸೌಭಾಗ್ಯ ವ್ಯಕ್ತಿಯ ಮತ್ತು ಸಮುದಾಯದ ಅಗತ್ಯಗಳೆರೆಡನ್ನೂ ಪೂರೈಸಲಿ ಎಂದು ಆಶಿಸುತ್ತದೆ.

ಈ ಗೀತೆಯ ಎರಡನೆಯ ಚರಣ ಸೌಭಾಗ್ಯಗಳು ಚಿನ್ನದ ಮಳೆಯನ್ನೇ ಸುರಿಸುತ್ತಾ ಬರುವ ಸಾಧ್ಯತೆಯನ್ನು ವಿವೇಚಿಸುತ್ತಿದೆ. ಇಲ್ಲಿ ಕನಕ ವೃಷ್ಟಿಯನ್ನು ಕೊಡು ಎಂದು ಬೇಡಿಕೊಳ್ಳುತ್ತಿರುವುದು ಭೂಜಾತೆಯಾದ ಸೀತಾದೇವಿಯನ್ನು, ಭೂದೇವಿಯನ್ನು. ಭೂಮಿಯನ್ನು ನಾವು ಹೇಗೆ ನಿರ್ವಹಿಸುತ್ತೇವೆಯೋ ಹಾಗೆ ಅದು ಫಲವತಿ. ಭೂಮಿ ಅಗಣಿತ ರತ್ನಗಳ ಗಣಿ. ಭೂಮಿಯಿಂದ ಪಡೆಯುವ ಸಂಪತ್ತು ಮನಸ್ಸನ್ನು ದಿಕ್ಕುತಪ್ಪಿಸಬಹುದು. ಇದನ್ನು ಭಾವಿಸುವ ಈ ಎರಡನೆಯ ಚರಣ ತನಗೆ ಯಾವುದು ಯೋಗ್ಯವೋ ಮತ್ತು ತಾನು ಯಾವುದನ್ನು ಪಡೆಯಲು ಯೋಗ್ಯನೋ ಅಂತಹ ಯೋಗ್ಯ-ಸಿದ್ಧಿಗಳನ್ನು ಪಡೆಯುವ ಹಾಗೆ ಮನಸ್ಸು ಸ್ಥಿರವಾಗಿರಲಿ, ಸುಸಜ್ಕಿತವಾಗಿರಲಿ ಎಂದು ವಿನಂತಿಸಿಕೊಳ್ಳುತ್ತಿದೆ. ಅಸಾಧ್ಯವಾದುದಕ್ಕೆ ಹಂಬಲಿಸಿ ಅದಕ್ಕಾಗಿ ಧನ ಅಪವ್ಯಯ ಆಗದಿರಲಿ ಎಂಬ ಎಚ್ಚರಿಕೆಯನ್ನೂ ಇದು ಒಳಗೊಳ್ಳುತ್ತದೆ.

ಈ ಗೀತೆಯ ಮೂರನೆಯ ಚರಣ ಯಾವುದೇ ಸಂದೇಹವನ್ನು ತೋರದೆ ಲಕ್ಷ್ಮೀದೇವಿ ಸೌಭಾಗ್ಯಗಳನ್ನು ಕರುಣಿಸಲಿ ಎಂಬ ಪ್ರಾರ್ಥನೆಯನ್ನು ಸಲ್ಲಿಸುತ್ತಿದೆ. ಈ ಚರಣಕ್ಕೆ ವ್ಯಕ್ತಿ ತನ್ನ ಸಂಪತ್ತನ್ನು ಹೇಗೆ ಸದ್ವಿನಿಯೋಗ ಮಾಡಬೇಕು ಎಂಬ ಸ್ಪಷ್ಟ ಕಲ್ಪನೆ ಇರುವವನು. ಅದರಿಂದ ಅವನಿಗೆ ಸೌಭಾಗ್ಯಗಳನ್ನು ಅನುಗ್ರಹಿಸಲು ದೇವಿ ಹಿಂದೆ ಮುಂದೆ ನೋಡಬೇಕಾಗಿಲ್ಲ ಎಂಬ ಭರವಸೆ ಈ ಚರಣದ್ದು. ಇಲ್ಲಿ ದೇವಿಯನ್ನು ವೆಂಕಟರಮಣನ ಬಿಂಕದ ರಾಣಿ ಪದ್ಮಾವತಿ ಎಂದು ಪರಿಕಲ್ಪಿಸಲಾಗಿದೆ. ನಾರಾಯಣನ ಮೇಲೆ ಸಿಟ್ಟಿಗೆದ್ದು ಭೂಲೋಕಕ್ಕೆ ಬಂದ ಶ್ರೀದೇವಿಯೇ ಪದ್ಮಾವತಿ. ಆಕೆಯನ್ನು ಹಿಂಬಾಲಿಸಿ ಅವಳನ್ನು ಓಲೈಸಿ ತನ್ನವಳನ್ನಾಗಿ ಮಾಡಿಕೊಳ್ಳಲು ಭೂಲೋಕಕ್ಕೆ ಬಂದ ಕೋಟ್ಯಧೀಶ್ವರ ವೆಂಕಟರಮಣ. ನಾರಾಯಣ ಮನುಷ್ಯ ಮಾತ್ರದವರೆಲ್ಲರ ಪರಮ ಗತಿ-ಮತಿ. ಅವನಲ್ಲಿ ನೆಲೆಗೊಂಡವಳು ಪದ್ಮಾವತಿ ಎಂದಾಗ ವ್ಯಕ್ತಿ ಅನುಭವಿಸುವ ಸೌಭಾಗ್ಯಗಳ ಅಂತಿಮ ಗುರಿ ನಾರಾಯಣನನ್ನು ಸೇರುವುದು ಎಂಬುದನ್ನು ಈ ಚರಣ ಸ್ಪಷ್ಟ ಪಡಿಸುತ್ತಿದೆ.

ಈ ಗೀತೆಯ ಕೊನೆಯ ಚರಣ ವ್ಯಕ್ತಿಯ ಬದುಕಿನ ಶುಭಾಶಯಗಳ ಸಂಕೇತವಾದ ಶುಕ್ರವಾರದ ಪೂಜೆಯನ್ನು ಪ್ರಸ್ತಾಪಿಸುತ್ತಿದೆ. ಅದನ್ನು ಸಕ್ಕರೆ ತುಪ್ಪದ ಕಾಲುವೆಗೆ ಹೋಲಿಸುತ್ತಿದೆ. ಅದು ಪರಮ ವಾಸ್ತವತೆಯಾದ ಮಧು=ಅಮೃತ=ಆನಂದಕ್ಕೆ ಸಂಕೇತವೂ ಹೌದು. ವ್ಯಕ್ತಿ ಪಡೆಯುವ ಸೌಭಾಗ್ಯಗಳು ವ್ಯಕ್ತಿಯನ್ನು ಲಕ್ಷ್ಮೀನಾರಾಯಣನಲ್ಲಿ ತನ್ಮಯ ಆಗಿಸುವಂತೆ ಇರಲಿ ಎನ್ನುವುದಕ್ಕೆ ಸಕ್ಕರೆ ತುಪ್ಪದ ಕಾಲುವೆ ಒಂದು ರೂಪಕ. ಇಡೀ ಗೀತೆಯು ಸೌಭಾಗ್ಯಗಳ ಮಾತೃತ್ವವನ್ನೂ ಪರದೈವದಲ್ಲಿ ಲೀನವಾಗುವ ದೈವಭಕ್ತಿ ಕಾರಕತ್ವವನ್ನೂ ವರ್ಣಿಸುತ್ತಿದೆ. ಅದು ವ್ಯಕ್ತಿಗೆ ಅನುಭವಗಮ್ಯವಾಗಲಿ, ವ್ಯಕ್ತಿ ಹಾಗೆ ತನ್ನ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವಂತಾಗಲಿ ಎಂದು ಆಶಿಸುತ್ತಿದೆ, ಅದನ್ನು ಸಾಧ್ಯಗೊಳಿಸು ಎಂದು ಲಕ್ಷ್ಮೀದೇವಿಗೇ ಬಿನ್ನಹ ಮಾಡಿಕೊಳ್ಳುತ್ತಿದೆ, ಪ್ರಾರ್ಥಿಸುತ್ತಿದೆ, ಬೇಡಿಕೊಳ್ಳುತ್ತಿದೆ. ಪುರಂದರ ದಾಸರು ಮಧ್ವಮತಾನುಯಾಯಿಗಳು. ಮಧ್ವಸಿದ್ಧಾಂತದಲ್ಲಿ ನಾರಾಯಣನ ಕೃಪೆಯನ್ನು ಶೀಘ್ರವಾಗಿ ಪಡೆಯಬೇಕಾದರೆ ಮೊದಲಿಗೆ ಲಕ್ಷ್ಮಿಯನ್ನೇ ಒಲಿಸಿಕೊಳ್ಳಬೇಕು ಎಂಬ ನಿಲುವುಇದೆ.

ಒಟ್ಟಾರೆಯಾಗಿ ಹೇಳುವುದಾದರೆ ಗೀತೆಯ ಚರಣಗಳೆಲ್ಲದರ ಆಶಯವು ಲೌಕಿಕ ಮತ್ತು ಪಾರಲೌಕಿಕ ಬದುಕಿನ ಔನ್ನತ್ಯವೇ ಆಗಿದೆ. ಇವೆಲ್ಲದರ ಸೂತ್ರರೂಪ “ಭಾಗ್ಯದ ಲಕ್ಷ್ಮಿ ಬಾರಮ್ಮ ನಮ್ಮಮ್ಮ ನೀ ಸೌಭಾಗ್ಯದ ಲಕ್ಷ್ಮಿ ಬಾರಮ್ಮ”

ಕೆ.ಎಲ್.‌ ಪದ್ಮಿನಿ ಹೆಗಡೆ

3 Responses

  1. ನಿಮ್ಮಂತಹ ಶಿಕ್ಷಕರನ್ನು ಪಡೆದ ವಿದ್ಯಾರ್ಥಿಗಳು ಧನ್ಯರು ಮೇಡಂ ಯಾವುದೇ ವಿಷಯವಾಗಲಿ..ಅದರ ಬಗ್ಗೆ ಬರೆದ ಲೇಖನ.. ತಲಸ್ಪರ್ಶಿಯಾಗಿರುತ್ತದೆ..ಹಾಗೇ ಭಾಗ್ಯಾದಲಕ್ಷ್ಮೀಬಾರಮ್ಮ..
    ಲೇಖನ ವೂ ಹೊರತಾಗಿಲ್ಲ..ವಂದನೆಗಳು.. ಅಭಿನಂದನೆಗಳು…

  2. ನಯನ ಬಜಕೂಡ್ಲು says:

    ಎಷ್ಟು ಚಂದ ಬರೆದಿದ್ದೀರಿ ಮೇಡಂ, ಅಪರೂಪದ, ವಿಸ್ತೃತ ಬರಹ.

  3. ಶಂಕರಿ ಶರ್ಮ says:

    ದಾಸರ ಪದದ ಅಂತರಾಳವನ್ನು ಹೊಕ್ಕು ಹೊರತೆಗೆದ ತಿರುಳನ್ನು ಉಣಬಡಿಸಿದ ಲಕ್ಷ್ಮಿಯ ಲೇಖನ ಸಮೃದ್ಧವಾಗಿದೆ…ಧನ್ಯವಾದಗಳು ಮೇಡಂ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: