ಅವಿಸ್ಮರಣೀಯ ಅಮೆರಿಕ – ಎಳೆ 58

Share Button


(ಹಿಂದಿನ ಸಂಚಿಕೆಯಿಂದ ಮುಂದುವರಿದುದು…)
ಪ್ರತಿಮೆಯನ್ನೇರಿ….!

ಕ್ರೂಸ್ ಒಳಗಡೆ ಹೋಗುವ ಮೊದಲು ನಮ್ಮನ್ನು, ನಮ್ಮ ಬ್ಯಾಗ್ ಗಳ ಸಹಿತ ತಪಾಸಣೆಗೆ ಒಳಪಡಿಸುತ್ತಾರೆ. ಈ ಮೊದಲೇ ತಿಳಿಸಿದಂತೆ ಸುಮಾರು ಮುನ್ನೂರು ಜನ ಪ್ರಯಾಣಿಕರನ್ನು ಹೊತ್ತೊಯ್ಯಬಲ್ಲ ಈ ಸುಂದರ, ಸ್ವಚ್ಛ ಕ್ರೂಸ್ ನಲ್ಲಿ ಸೊಗಸಾದ ಸುಖಾಸೀನಗಳಲ್ಲಿ ಕುಳಿತು, ಗೌಜಿ ಗದ್ದಲಗಳಿಲ್ಲದೆ ಪ್ರಯಾಣಿಸುವ ಜನರನ್ನು ನೋಡಲು ಖುಷಿಯೆನಿಸಿತು, ಆದರೆ ಮಕ್ಕಳ ಓಡಾಟ ಮಾತ್ರ ಜೋರಾಗಿಯೇ ಇತ್ತು. ಬಸ್ಸಿನಲ್ಲಿ ಕಿಟಿಕಿ ಪಕ್ಕದಲ್ಲಿ ಕುಳಿತುಕೊಳ್ಳಲು ತವಕಿಸುವ ಮಕ್ಕಳಂತೆ, ಕ್ರೂಸಿನ ಪಕ್ಕದ ಸೀಟಿಗಾಗಿ ನಾನು ಕಣ್ಣು ಹಾಯಿಸಿದಾಗ ಅದಾಗಲೇ ಭರ್ತಿಯಾಗಿತ್ತು. ಇದ್ದುದರಲ್ಲೇ ಸುಧಾರಿಸಲು ಸಜ್ಜಾದೆ. ಯಾಂತ್ರೀಕೃತ ಕ್ರೂಸ್ ರಭಸದಿಂದ ಹಡ್ಸನ್ ನದಿಯ ಆಳವಾದ ನೀಲಿ ನೀರನ್ನು ಸೀಳುತ್ತಾ ಮುಂದೋಡಿತು… ಪ್ರಖ್ಯಾತ ಪ್ರತಿಮೆಯತ್ತ….

ಈ ಸ್ಟೇಚ್ಯೂ ಆಫ್ ಲಿಬರ್ಟಿ ಯನ್ನು ಸ್ಥಾಪಿಸಲ್ಪಟ್ಟ ಎಲ್ಲಿಸ್ ದ್ವೀಪವು 27.5 ಎಕರೆಯಷ್ಟು ವಿಸ್ತಾರವಾಗಿದ್ದು; ಇದು 1892ರಿಂದ 1954ರ ವರೆಗೆ ವಲಸೆಗಾರರನ್ನು ತಪಾಸಣೆಗೆ ಒಳಪಡಿಸುವ ಅತ್ಯಂತ ಮುಖ್ಯ ಹಾಗೂ ಬಹು ಜನದಟ್ಟಣೆಯ ಕೇಂದ್ರವಾಗಿತ್ತು…ಅಂದರೆ ಆ ಸಮಯದಲ್ಲಿ ಸುಮಾರು 12ಮಿಲಿಯದಷ್ಟು ಜನರು ನ್ಯೂಯಾರ್ಕ್ ಮತ್ತು ನ್ಯೂಜೆರ್ಸಿ ಕಡೆಗೆ ವಲಸೆ ಬಂದಿದ್ದರು! ಇಲ್ಲಿ, 1900ರಲ್ಲಿ, ದೊಡ್ಡದಾದ ಮುಖ್ಯ ಕಟ್ಟಡವೊಂದನ್ನು ಕಟ್ಟಿ, ಅದನ್ನು ಜಾಗತಿಕ ಯುದ್ಧದ ಸಮಯದ ಯುದ್ಧ ಕೈದಿಗಳಿಗೆ ಕಾರಾಗೃಹವನ್ನಾಗಿ ರೂಪಿಸಲಾಯಿತು. 1911ರಲ್ಲಿ ದ್ವೀಪದ ದಕ್ಷಿಣ ಭಾಗದಲ್ಲಿ ವಲಸೆಗಾರರಿಗಾಗಿ ಆಸ್ಪತ್ರೆಯ ನಿರ್ಮಾಣವನ್ನೂ ಮಾಡಲಾಯಿತು. ಅನಂತರದ ದಿನಗಳಲ್ಲಿ, ದ್ವೀಪದ ಉತ್ತರ ಭಾಗದಲ್ಲಿ, ರಾಷ್ಟ್ರೀಯ ವಸ್ತು ಸಂಗ್ರಹಾಲಯವನ್ನು ನಿರ್ಮಿಸಲಾಯಿತು. ಬಳಿಕ, 19ನೇ ಶತಮಾನದಲ್ಲಿ, ಇದು ಒಂದು ಪ್ರಮುಖ ಬಂದರಾಗಿ ಪರಿವರ್ತಿತವಾಯಿತು. ಆಮೇಲೆ ಇದನ್ನು ನೌಕಾದಳದ ಕೇಂದ್ರವನ್ನಾಗಿ ರೂಪಾಂತರಿಸಿದರು.

ನಾವು ಕುಳಿತಿರುವ ಕ್ರೂಸ್ ಮುಂದೆ ಸಾಗುತ್ತಿದ್ದಂತೆಯೇ ಮುಂಭಾಗದಲ್ಲಿ ಅನತಿ ದೂರದಲ್ಲಿ ಕಂಡಿತು, ದೀವಟಿಗೆ ಹಿಡಿದ ಹಸಿರು ಬಣ್ಣದ ಎತ್ತರದ ಪ್ರತಿಮೆ. ಎಲ್ಲಿಸ್ ದ್ವೀಪಕ್ಕೆ ಸುತ್ತು ಹೊಡೆಯುತ್ತಾ ಸಾಗುತ್ತಿದ್ದ ಕ್ರೂಸ್ ಪಕ್ಕದಲ್ಲೇ ಪ್ರತಿಮೆಯು ಎಲ್ಲಾ ಕೋನಗಳಿಂದಲೂ ಬಹು ದೊಡ್ಡದಾಗಿ, ಸುಂದರವಾಗಿ ಕಾಣತೊಡಗಿತು. ನನಗಂತೂ ಅತ್ಯಂತ ಸಂಭ್ರಮ… ಬರೇ ಚಿತ್ರದಲ್ಲಿ ಮಾತ್ರ ನೋಡಿದ್ದ ಪ್ರತಿಮೆಯು ಇದೀಗ ನನ್ನ ಮುಂದಿದೆ!! ನಮ್ಮ ಕ್ರೂಸ್, ದ್ವೀಪದ ಪಕ್ಕದಲ್ಲಿ ನಿಂತೊಡನೆಯೇ ಇಳಿಯುವ ಕಾತರ.. ಅದಾಗಲೇ ತಂಡ ತಂಡವಾಗಿ ಇಳಿಯುವ ಅನುಕೂಲಕರವಾದ ವ್ಯವಸ್ಥೆ ರೂಪುಗೊಂಡಿತ್ತು. ನಾವು ಕೆಳಗಿಳಿದ ತಕ್ಷಣ, ಕಾದು ಕುಳಿತಿದ್ದ ನೂರಾರು ಜನರಲ್ಲಿ ಮುಂಭಾಗಲ್ಲಿದ್ದವರನ್ನು ಅಚ್ಚುಕಟ್ಟಾಗಿ, ಸರತಿಸಾಲಿನಲ್ಲಿ ಕ್ರೂಸಿನೊಳಗೆ, ಅದರಲ್ಲಿರುವ ಸಾಮರ್ಥ್ಯಕ್ಕೆ ಅನುಗುಣವಾಗಿ ಹತ್ತಿಸಿಕೊಳ್ಳಲಾಯಿತು.

ದ್ವೀಪದ ಒಳಗಡೆಗೆ ಕಾಲಿಟ್ಟಂತೆಯೇ; ಮುಂಭಾಗದಲ್ಲಿರುವ ಪ್ರತಿಮೆಯನ್ನು ನೋಡುತ್ತಿದ್ದಂತೆಯೇ ಮೈಯೆಲ್ಲಾ ಪುಳಕ! ಅತ್ಯಂತ ಸಮೀಪದಿಂದ ತಲೆ ಎತ್ತಿ ನೋಡಿದಾಗ ಎತ್ತರದ ವೇದಿಕೆಯ ಮೇಲಿರುವ ಪ್ರತಿಮೆಯ ಪಾದ ಮಾತ್ರ ಗೋಚರಿಸಿತು. ದ್ವೀಪದ ಮಧ್ಯ ಭಾಗದಲ್ಲಿ ಪ್ರತಿಮೆಯಿದ್ದು ಅದರ ಸುತ್ತಲೂ ಪ್ರವಾಸಿಗರಿಗೆ ಓಡಾಡಲು ಅತ್ಯಂತ ಅಗಲವಾದ, ಸೊಗಸಾದ ರಸ್ತೆಯಿದೆ. ಇಲ್ಲಿ ಪ್ರವಾಸಿಗರ ದಟ್ಟಣೆ ಈಗಾಗಲೇ ಸಾಕಷ್ಟು ಇದ್ದುದನ್ನು ಕಂಡು, ನಾವು ಅತ್ಯಂತ ಜಾಗರೂಕರಾಗಿ ಇರಬೇಕೆಂದು ಅಳಿಯ ಸೂಚನೆ ಕೊಟ್ಟುದೂ ಅಲ್ಲದೆ, ನಮ್ಮಿಬ್ಬರ ಕೈಯಲ್ಲಿ ಅವಶ್ಯಕತೆ ಇರುವಾಗ ಬಳಸಲು ಚರವಾಣಿಗಳನ್ನೂ ಕೊಟ್ಟಿದ್ದ. ನನ್ನಲ್ಲಿದ್ದ ದೊಡ್ಡ ಕೈಚೀಲವನ್ನು ಶುಲ್ಕ ತೆತ್ತು, ಅದಕ್ಕಾಗಿಯೇ ಇರುವ ಭದ್ರವಾದ ಕಪಾಟಿನಲ್ಲಿ ಇರಿಸಿ, ಸಣ್ಣ ಕೈಚೀಲದೊಂದಿಗೇ ನಮ್ಮ ನಡಿಗೆ ಸಾಗಿತು. ಪ್ರತಿಮೆಯ ಸುತ್ತಲೂ ಇರುವ ಎಕರೆಗಟ್ಟಲೆ ಖಾಲಿ ಜಾಗವು ಆತ್ಯಂತ ಸುಂದರ ಹುಲ್ಲುಹಾಸು, ಚಂದದ ಹೂದೋಟಗಳಿಂದ ತುಂಬಿದೆ. ಅದರಲ್ಲಿ ಓಡಾಡುವ ನೂರಾರು ಬಾತುಕೋಳಿಗಳು ಮಕ್ಕಳ ಆಕರ್ಷಣೆಯ ಕೇಂದ್ರವಾಗಿದ್ದವು. ಎಡಪಕ್ಕದಲ್ಲಿ ಘನಗಂಭೀರವಾಗಿ ಹರಿಯುವ ಹಡ್ಸನ್ ನದಿಯ ಅಗಾಧ ಜಲರಾಶಿಯ ವಿಹಂಗಮ ನೋಟ ಅತ್ಯಂತ ಚೇತೋಹಾರಿಯಾಗಿದೆ.  

ಪ್ರತಿಮೆಯ ಆವರಣದಲ್ಲಿ ಸುತ್ತಾಡಿದ ಬಳಿಕ; ಅದರ ಪಾದದ ಬಳಿಗೆ ಹೋಗಲು ಆ ವಿಸ್ತಾರವಾದ ವೇದಿಕೆಯ ಒಳಭಾಗದಿಂದ 354 ಮೆಟ್ಟಲುಗಳನ್ನು ಏರಬೇಕಾಗುವುದು, ಎಂದರೆ, ಈ ಪ್ರತಿಮೆಯ ಅಡಿಪಾಯದ ಅಗಾಧತೆ ಮತ್ತು ಅದರ ಶಕ್ತಿಯ ಅರಿವು ಉಂಟಾಗುವುದು. ಮೇಲೇರಲು ಲಿಫ್ಟ್ ಕೂಡಾ ಇರುವುದರಿಂದ; ಅಷ್ಟು ಮೆಟ್ಟಲುಗಳನ್ನು ಏರುವ ಸಾಹಸ ಮಾಡದೆ, ನಾವಿಬ್ಬರು ಮತ್ತು ನಮ್ಮ ಇಬ್ಬರು ಪುಟ್ಟ ಮೊಮ್ಮಕ್ಕಳು ಲಿಫ್ಟಿನ ಆನಂದ ಪಡೆದೆವು. ಮೇಲ್ಗಡೆಗೆ, ಪ್ರತಿಮೆಯ ಸುತ್ತಲೂ, ಬಹು ವಿಸ್ತಾರವಾದ ಕಾಂಕ್ರೀಟ್ ಬಯಲಿನಂತಹ ಪ್ರದೇಶದ ಒಂದು ಭಾಗದಲ್ಲಿ ನಿಂತರೆ ಕಾಣುವ ಇಡೀ ನ್ಯೂಯಾರ್ಕ್ ನಗರದ ಗಗನಚುಂಬಿ ಕಟ್ಟಡಗಳ ವಿಹಂಗಮ ನೋಟ, ಇನ್ನೊಂದು ಭಾಗದಿಂದ ಕಾಣುವ ಹಡ್ಸನ್ ನದಿಯ ವಿಸ್ತಾರವಾದ ಹರಿವು…ಅದರ ಮೇಲೆ ಓಡಾಡುವ ಹತ್ತಾರು ಹಾಯಿದೋಣಿಗಳು ಹಾಗೂ ಮೋಟರ್ ದೋಣಿಗಳು ಜಲದಲ್ಲಿ ಬಿಡಿಸುವ  ಸುಂದರ ಚಿತ್ತಾರಗಳು.. ಆಹಾ..ನೋಡಲು ಎರಡು ಕಣ್ಣುಗಳು ಸಾಲದೇನೋ ಎನಿಸುತ್ತದೆ! ಮೇಲ್ಗಡೆ ಬೀಸುವ ರಭಸದ ಕುಳಿರ್ಗಾಳಿಯ ಹೊಡೆತವನ್ನು ತಾಳಿಕೊಂಡು ನೋಡುವುದೇ ಒಂದು ಖುಷಿ. ಅಲ್ಲಿಯ ಪ್ರವಾಸಿಗರಲ್ಲಿ ನಮ್ಮ ದೇಶವಾಸಿಗಳೂ ಕೆಲವರು ಸಿಕ್ಕಿದುದು ನಮ್ಮ ಸಂತೋಷವನ್ನು ಇಮ್ಮಡಿಸಿತು. ತಾಸುಗಳು ಕಳೆದುದೇ ತಿಳಿಯಲಿಲ್ಲ.. ನಮ್ಮ ಕೈಚೀಲದಿಂದ ಸ್ವಲ್ಪ ಹಣ್ಣು, ಬಿಸ್ಕೇಟ್ ಗಳು ಖಾಲಿಯಾದವು… ಈ ಸುಂದರ ನೋಟಗಳನ್ನು ಸವಿಯುತ್ತಾ. ನಾವು ಸಂಜೆ 5ಗಂಟೆ ವರೆಗೆ ಅಲ್ಲಿದ್ದು, ಹಡ್ಸನ್ ನದಿಯ ಹಿನ್ನೆಲೆಯಲ್ಲಿ ಕಾಣುವ ನ್ಯೂಯಾರ್ಕ್ ನಗರದ ಗಗನಚುಂಬಿ ಕಟ್ಟಡಗಳ ಚಂದದ ನೋಟವನ್ನು ಕಣ್ತುಂಬಿಕೊಂಡು,  ಬೇಕಾದಷ್ಟು ಫೋಟೋ ಕ್ಲಿಕ್ಕಿಸಿದೆವು…ಸುಂದರ ಕ್ಷಣಗಳ ಸವಿನೆನಪಿಗೋಸ್ಕರ. 

ಹಿಂತಿರುಗುವ ಸಮಯಕ್ಕೆ ಜನಸಂದಣಿ ಬಹಳ ಇದ್ದುದರಿಂದ; ಅಲ್ಲಿಂದ ಕೆಳಗಿಳಿಯಲು ಲಿಫ್ಟನ್ನು ಬಳಸಲು ಸ್ವಲ್ಪ ಹೆಚ್ಚು ಸಮಯ ಕಾಯಬೇಕಾಯಿತು…ಸರತಿ ಸಾಲಿನಿಂದಾಗಿ. ಇದರಿಂದಾಗಿ, ನಾವು ಕೆಳಗೆ ತಲಪುವ ಮೊದಲೇ ಮಗಳು ಮತ್ತು ಅಳಿಯ ಮೆಟ್ಟಲ ಮೂಲಕ ಕೆಳಗಡೆ ತಲಪಿ, ಗೆಲುವಿನ ನಗೆ ಬೀರಿದರು. ಪ್ರತಿಮೆಯ ಸುತ್ತಲೂ ಕೆಳಗಡೆಗೆ ಪುನ: ಇನ್ನೊಮ್ಮೆ ಸುತ್ತಾಡುತ್ತಿದ್ದಾಗ  ಪ್ರವಾಸಿಗರ ದಟ್ಟಣೆ ಇನ್ನಷ್ಟು ಹೆಚ್ಚಾಯಿತು. ಜೊತೆಗೇ, ನಾನು ನೋಡುವುದರಲ್ಲೇ ತನ್ಮಯಳಾಗಿ, ನಮ್ಮೂರಲ್ಲಿ ಜಾತ್ರೆ ಸಮಯದಲ್ಲಿ ಇರುವಂತಹ ಜನಸಾಗರದ ಮಧ್ಯೆ  ಎರಡೆರಡು ಸಲ ಮನೆಯವರಿಂದ ಬೇರೆಯಾಗಿಬಿಟ್ಟೆ. ಆದರೆ ಈ ಸಲ ನನಗೇನೂ ಹೆದರಿಕೆ, ಗಾಬರಿ  ಆಗಲಿಲ್ಲ ಬಿಡಿ…ಯಾಕೆಂದು ತಿಳಿಯಿತಲ್ಲಾ..  ನನ್ನಲ್ಲಿರುವ ಮೊಬೈಲ್ ನನ್ನ ರಕ್ಷಕ ಭಟನಂತೆ ಕಾರ್ಯನಿರ್ವಹಿಸಿತ್ತು! ಅಂತೂ ಈ ಸಲ ನಾನು ಬಚಾವಾದೆ ಅನ್ನಿ!   ಕ್ರೂಸ್ ನಲ್ಲಿ ಹಿಂತಿರುಗಿದಾಗ, ಆ ಪ್ರತಿಮೆಯು ಕಣ್ಣಿನಿಂದ ದೂರವಾದಂತೆ, ನಮ್ಮ ನೆನಪಿನ ಕಣ್ಣಿಗೆ ಹತ್ತಿರವಿರಿಸಲು ಪ್ರಯತ್ನಿಸಿದೆವು…ಇನ್ನೂ ಪ್ರಯತ್ನಿಸುತ್ತಲೇ ಇರುವೆವು..ನಾವು ಕುಳಿತ ಕ್ರೂಸ್ ಸ್ವಲ್ಪ ಹೊತ್ತಿನಲ್ಲಿ ಇನ್ನೊಂದು ಪುಟ್ಟ ದ್ವೀಪವನ್ನು ತಲಪಿತು. ಕುಳಿತಲ್ಲೇ ಸುಂದರ ವಿಶೇಷವಾದ ದೃಶ್ಯಗಳು..! ನಮ್ಮ ಕಾಶ್ಮೀರದಂತೆ ಇಲ್ಲಿಯ ಸಣ್ಣ ನದಿಗಳೇ ರಸ್ತೆಗಳು..ಅದರಲ್ಲಿ ಸಿಟಿ ಬಸ್ಸುಗಳು ಚಲಿಸುವಂತೆ ಸಾಗುವ ಹತ್ತಾರು ದೋಣಿಗಳು..ಅಂದರೆ ಕ್ರೂಸ್ ಗಳು..ಆಹಾ…ತುಂಬಾ ಸುಂದರ!! ನಮ್ಮ ಕ್ರೂಸ್ ನಿಂತಲ್ಲಿ ಮುಂಭಾಗದಲ್ಲಿ ಹಸಿರು ಸಿರಿ ನಡುವೆ ಚಂದದ ಶಾಲೆ…ಅದಕ್ಕೆ ಹೋಗಿ ಬರುವ ಮಕ್ಕಳು ಈ ಕ್ರೂಸ್ ಗಳಲ್ಲೇ ಪ್ರಯಾಣಿಸಬೇಕು. ಪುಟ್ಟ ಪುಟಾಣಿಗಳ ಓಡಾಟ.. ಅಲ್ಲಿರುವ ಹತ್ತಾರು ಅಂಗಡಿಗಳು.. ಕ್ರೂಸ್ ನಿಂದ ಹತ್ತಿಳಿದ ಹಲವಾರು ಸ್ಥಳೀಯ ಪ್ರಯಾಣಿಕರು…ಇವೆಲ್ಲಾ ನೋಡಲು ಬಹಳ ವಿಶೇಷವೆನಿಸಿತು.

ಅದಾಗಲೇ ಸಂಜೆಗತ್ತಲು ಆವರಿಸಿತ್ತು…ಮುಂದಕ್ಕೆ ಇಲ್ಲಿಯ ಪ್ರಸಿದ್ಧ ಟೈಮ್ ಸ್ಕ್ವೇರ್ (Time Square) ನತ್ತ ನಮ್ಮ ಸವಾರಿ ಹೊರಟಿತು. ಇದಕ್ಕಾಗಿ ಹತ್ತಿರದಲ್ಲೇ ಇದ್ದಂತಹ ಸಬ್ ವೇಯತ್ತ ಸಾಗಿತು ನಮ್ಮ ನಡಿಗೆ. ಅಮೆರಿಕದ ಇತರ ಎಲ್ಲಾ ಕಡೆಗಳಲ್ಲಿ ಇರುವ ಸ್ವಚ್ಛತೆಗಿಂತ, ಈ ನಗರದಲ್ಲಿ ಸ್ವಲ್ಪ ಮಟ್ಟಿಗೆ ಅದರ ಕೊರತೆ ಕಾಣುತ್ತದೆ. ಇದರಿಂದಾಗಿ ನನ್ನ ಮನಸ್ಸು ಕಸಿವಿಸಿಗೊಂಡದ್ದಿದೆ. ಸಬ್ ವೇ ಒಳಗೆ ಮೆಟ್ಟಲಿಳಿದು ಹೋಗುತ್ತಿದ್ದಂತೆಯೇ, ಹೆಚ್ಚೇನೂ ಪ್ರಯಾಣಿಕರಿಲ್ಲದ ಹಳೆಯದಾದ ರೈಲು ನಿಲ್ದಾಣವು  ಕಂಡುಬಂತು,  ಆದರೆ ರೈಲು ಹಳಿಯೇ ಕಂಡುಬರಲಿಲ್ಲ. ಇದ್ದ ನಸು ಬೆಳಕಿನಲ್ಲೇ ವೇಗವಾಗಿ ಮುಂದೆ ಸಾಗುತ್ತಿದ್ದ ಅಳಿಯನ ಹಿಂದೆಯೇ ನಸುಗತ್ತಲೆಯಲ್ಲಿ  ಓಡೋಡಿ ಹೋಗುತ್ತಲೇ ಆಚೀಚೆ ದೃಷ್ಟಿ ಹಾಯಿಸಿದಾಗ, ಚಾವಣಿ ಮೇಲೆ ಅಡ್ಡಾದಿಡ್ಡಿಯಾಗಿ ಹತ್ತಾರು ದಪ್ಪನೆಯ ಕಪ್ಪನೆಯ ಪೈಪುಗಳು ಇದ್ದುದು ಕಂಡುಬಂತು. ಹಾಗೆಯೇ  ನಮಗೆ ಟಿಕೆಟ್ ಕೊಳ್ಳಲಾಗಲೀ, ಅಥವಾ ಬೇರೆ ಯಾವುದೇ ವಿಚಾರಣೆಗಾಗಲೀ ಒಂದು ನರಪಿಳ್ಳೆಯೂ ಕಾಣಲಿಲ್ಲ.  ಅಳಿಯನಲ್ಲಿ ವಿಚಾರಿಸಲಾಗಿ ಇಲ್ಲಿಯ ವಿಶೇಷವಾದ ವ್ಯವಸ್ಥೆಯ ಬಗ್ಗೆ ತಿಳಿಯಿತು. ಹೊರಗಡೆಗೆ ಮೊದಲೇ ಪಾವತಿಸಿ ಪಡೆದ ಕಾರ್ಡ್ ಗಳನ್ನು ಒಂದೊಂದು ನಮ್ಮ ಕೈಯಲ್ಲಿರಿಸಿದ. ರೈಲು ನಿಂತಿರುವ ಪ್ಲಾಟ್ ಫಾರ್ಮ್ ಕಡೆ ಒಬ್ಬರೇ ಹಾದು ಹೋಗಬಹುದಾದಂತಹ ಮೂರ್ನಾಲ್ಕು ಇಕ್ಕಟ್ಟಾದ ಎಡೆಗಳಲ್ಲಿ ಒಂದೇ ಕಡೆಗೆ ತೆರೆಯಲ್ಪಡುವಂತಹ ಗಟ್ಟಿಯಾದ ಕಬ್ಬಿಣದ ಅಡ್ಡಗೋಲು; ಪ್ರತಿಯೊಂದು ಎಡೆಯ ಪಕ್ಕದಲ್ಲಿರುವ ರಂಧ್ರದೊಳಗೆ ಕಾರ್ಡನ್ನು ತೂರಿಸಿ ತೆಗೆದಾಗ ಅಡ್ಡಗೋಲು ತನ್ನಿಂದ ತಾನಾಗಿಯೇ ತೆರೆದುಕೊಳ್ಳುವುದು. ಇಲ್ಲಿ ಮೊದಲಾಗಿ ಅಳಿಯ ತನ್ನ ಕಾರ್ಡನ್ನು ಬಳಸಿದಾಗ ತೆರೆದುಕೊಳ್ಳಲೇ ಇಲ್ಲ. ಮೂರ್ನಾಲ್ಕು ಕಡೆಗಳಲ್ಲಿ ಪ್ರಯತ್ನಿಸಿದರೂ ಇದೇ ಕಥೆ! ಮುಂದಕ್ಕೆ ಹೋಗಲು ಸಾಧ್ಯವೇ ಇಲ್ಲದಂತಾಯಿತು. ಈ ವೇಳೆಗೆ ನಮ್ಮ ಕಾರ್ಡ್ ಗಳನ್ನು ಬಳಸಿದಾಗ ಅಡ್ಡಗೋಲು ತೆರೆದು ನಾವೆಲ್ಲರೂ ಪ್ಲಾಟ್ ಫಾರ್ಮ್ ಒಳಗೆ ಹೋದರೂ ಅಳಿಯನೊಬ್ಬನೇ ಇನ್ನೊಂದು ಪಕ್ಕದಲ್ಲಿ ಉಳಿದುಬಿಟ್ಟ… ನಮಗೋ ಆತಂಕ! ಅಂತೂ ಸಹಾಯವಾಣಿಗೆ ಕರೆಮಾಡಿದ ಬಳಿಕ ಅಲ್ಲಿಗೆ ಬಂದ ಸಿಬ್ಬಂದಿಯ ಸಹಾಯದಿಂದ ಅವನ ಬಳಿ ಇದ್ದ ಕಾರ್ಡ್ ಸರಿ ಇಲ್ಲವೆಂದು ತಿಳಿದು, ಅದರ ಬದಲಾಗಿ ಬೇರೊಂದು ಕಾರ್ಡ್ ನೀಡಲಾಯಿತು. ಅಂತೂ ಅವನು ನಮ್ಮೊಡನೆ ಸೇರಿಕೊಂಡಾಗ, ಹೋಗಿದ್ದ ಉಸಿರು ಬಂದಂತಾಯ್ತು ಬಿಡಿ! ನಾವು ಬಂದ ಈ ಪ್ಲಾಟ್ ಫಾರಂ ಬೆಳಕು ತುಂಬಿ ಝಗಮಗಿಸುತ್ತಿತ್ತು.

ರಭಸದಿಂದ ಬಂದ ರೈಲಿನೊಳಗಡೆಗೆ ನುಗ್ಗಿದಾಗ ಅಷ್ಟೇನೂ ಚೆನ್ನಾಗಿರದ ಆಸನಗಳನ್ನು ಕಂಡು ಸ್ವಲ್ಪ ಭ್ರಮನಿರಸನವಾದುದು ಸುಳ್ಳಲ್ಲ. ಕಿರಿದಾದ ಆಸನಗಳು, ಚಿಕ್ಕದಾದ ಒಳಾವಕಾಶದಲ್ಲಿ ಈಗಾಗಲೇ ಕಿಕ್ಕಿರಿದು ತುಂಬಿದ ಜನರು… ನಮ್ಮೂರ ಸಿಟಿ ಬಸ್ಸಿನ ನೆನಪಾಯ್ತು. ನಾವು ಹೇಗೋ ಮಕ್ಕಳೊಂದಿಗೆ ಸೀಟ್ ಹಿಡಿದರೂ ಮಗಳಿಗೆ ನಟರಾಜ ಸರ್ವೀಸೇ ಗತಿಯಾಯ್ತು. ನಮ್ಮೆಲ್ಲರ ಕೈಗಳಲ್ಲೂ ಪುಟ್ಟ ಕೈಚೀಲಗಳ ಜೊತೆಗೆ ನಾಲ್ಕೈದು ನೀರಿನ ಬಾಟಲಿಗಳೂ ಪ್ರಯಾಣಿಸುತ್ತಿದ್ದವು. ಕೇವಲ ಐದು ನಿಮಿಷಗಳಲ್ಲಿ ನಾವು ಇಳಿಯುವ ತಾಣ ಬಂದಾಗ ಎಲ್ಲರೂ ಗಡಿಬಿಡಿಯಿಂದ ನೂಕುನುಗ್ಗಲು ನಡುವೆ ನುಗ್ಗಿ ಕೆಳಗಿಳಿದೆವು…ಅಷ್ಟರೊಳಗೆ ಮಗಳ ಕೈಯಲ್ಲಿದ್ದ ನೀರಿನ ಬಾಟಲಿಯೊಂದು ಧರಾಶಾಯಿಯಾಯಿತು. ಪ್ರತೀ ನಿಲ್ದಾಣದಲ್ಲೂ ಕೇವಲ 30ರಿಂದ 50 ಸೆಕೆಂಡುಗಳಷ್ಟು ಸಮಯ ಮಾತ್ರ ರೈಲು ನಿಲ್ಲುವುದರಿಂದಾಗಿ ನಮ್ಮ ಈ ತುರಾತುರಿಯಲ್ಲಿ ಬಾಟಲಿ ಹೆಕ್ಕಲು ಮಗಳು ಪ್ರಯತ್ನಿಸಿದ ತಕ್ಷಣ ರೈಲು ಹೊರಟೇ ಬಿಟ್ಟಿತು! ನಮಗೋ ಒಮ್ಮೆಲೇ ಆಘಾತ! ಮುಂದಿನ ನಿಲ್ದಾಣದಲ್ಲಿ ಇಳಿದು ಹಿಂತಿರುಗಿ ಬರಬಹುದೆಂಬ ನಂಬಿಕೆಯಲ್ಲಿ ನಾವಿದ್ದರೂ; ಮಕ್ಕಳಿಬ್ಬರ ಅಳು ಮುಗಿಲುಮುಟ್ಟಿತು. ಅಂತೂ ಅವರಿಬ್ಬರನ್ನು ಸಮಾಧಾನಿಸಿ ನಾವು ಅಲ್ಲೇ ಪಕ್ಕದಲ್ಲಿರುವ ಟೈಮ್ ಸ್ಕೇರ್ ನತ್ತ ಹೆಜ್ಜೆ ಹಾಕಿದರೂ ನನ್ನ ಎದೆ ಇನ್ನೂ ಡವಡವ ಹೊಡೆದುಕೊಳ್ಳುತ್ತಲೇ ಇತ್ತು… 

(ಮುಂದುವರಿಯುವುದು…..)

ಈ ಪ್ರವಾಸಕಥನದ ಹಿಂದಿನ ಎಳೆ ಇಲ್ಲಿದೆ:  https://surahonne.com/?p=38511

-ಶಂಕರಿ ಶರ್ಮ, ಪುತ್ತೂರು. 

6 Responses

 1. ವಿವಾರಾತ್ಮಕವಾದ ಪ್ರವಾಸ ಕಥನ ಮುದಕೊಟ್ಟಿತು ಶಂಕರಿ ಮೇಡಂ.

  • ಶಂಕರಿ ಶರ್ಮ says:

   ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು ….ನಾಗರತ್ನ ಮೇಡಂ.

 2. ನಯನ ಬಜಕೂಡ್ಲು says:

  Very nice

 3. ಸುಚೇತಾ says:

  ತುಂಬಾ ಇಷ್ಟವಾಯಿತು ನಿಮ್ಮ ಪ್ರವಾಸ ಕಥನ.

 4. ಆಶಾನೂಜಿ says:

  ಚಂದದ ಪ್ರವಾಸ ಕಥನ ಅಕ್ಕೋ ಹೋದಾಂಗೆ ಆವುತ್ತು ಆತೋ ….

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: