ವಾಟ್ಸಾಪ್ ಕಥೆ 30: ಕಷ್ಟಪಡದೆ ಫಲಸಿಗದು.

Share Button

ಒಮ್ಮೆ ರೈತನೊಬ್ಬ ಭಗವಂತನಲ್ಲಿ ಹೀಗೆ ಪ್ರಾರ್ಥಿಸಿಕೊಂಡ. ‘ದೇವರೇ, ನಾವು ರೈತರು. ನಮಗೆ ಬೇಕಾದ ಮಳೆ, ಗಾಳಿಗಳನ್ನು ನೀನೇ ಕೊಡುತ್ತೀಯೆ. ನಾವು ಇವುಗಳನ್ನು ಬಳಸಿಕೊಂಡು ಬೆಳೆ ತೆಗೆದು ಜೀವಿಸುತ್ತೇವೆ. ಆದರೆ ನೀನು ನಿನಗಿಷ್ಟ ಬಂದಾಗ ಮಳೆಯನ್ನು ತರುತ್ತೀಯೆ, ಗಾಳಿಯನ್ನೂ ನಿನ್ನಿಷ್ಟದಂತೆ ಬೀಸುತ್ತೀಯೆ. ಸಕಾಲದಲ್ಲಿ ಇವುಗಳು ಸಿಗದೆ ನಮಗೆ ನಿರೀಕ್ಷಿಸಿದಂತೆ ಫಲ ಬರುತ್ತಿಲ್ಲ. ಒಂದು ವರ್ಷ ಚೆನ್ನಾಗಿದ್ದರೆ ಇನ್ನೊಂದು ವರ್ಷ ಅರ್ಧಂಬರ್ಧ, ಇನ್ನೂ ಕೆಲವು ವರ್ಷಗಳಲ್ಲಿ ಬರಗಾಲವೂ ಬರುತ್ತದೆ. ನಮ್ಮ ಕಷ್ಟ ನಿನಗೆ ತಿಳಿಯುತ್ತಿಲ್ಲ. ಆದ್ದರಿಂದ ಈ ಗಾಳಿ, ಮಳೆಗಳನ್ನು ನಿಯಂತ್ರಣವನ್ನು ನಮಗೇ ಕೊಟ್ಟುಬಿಡು. ನಾವು ಬೇಕಾದಾಗ ಮಾತ್ರ ಅವುಗಳನ್ನು ಬರಿಸಿಕೊಂಡು ಹಾಯಾಗಿರುತ್ತೇವೆ’ ಎಂದನು.

ಭಗವಂತನ ಮುಖದಲ್ಲಿ ನಗು ಕಾಣಿಸಿತು. ‘ಹಾಗೇ ಆಗಲಿ ತಥಾಸ್ತು’ ಎಂದುಬಿಟ್ಟ.

ಆ ವರ್ಷ ರೈತನು ತನ್ನ ಹೊಲಗಳನ್ನೆಲ್ಲ ಚೆನ್ನಾಗಿ ಉಳುಮೆ ಮಾಡಿ ತನಗೆ ಬೇಕಾದಾಗ ಗಾಳಿ ಮಳೆಗಳನ್ನು ತರಿಸಿಕೊಂಡು ಬೀಜಗಳನ್ನು ಬಿತ್ತಿದ. ಪೈರುಗಳು ಹುಲುಸಾಗಿ ಬೆಳೆದವು. ಅವುಗಳನ್ನು ನೋಡಿ ರೈತ ಸಂತೋಷಪಟ್ಟ. ತೆನೆಗಳು ಕಾಣಿಸಿಕೊಂಡವು. ಅವು ಮಾಗಿದ ಮೇಲೆ ಕತ್ತರಿಸಿ ಒಕ್ಕಣೆ ಮಾಡಲು ಹೋದ ರೈತನಿಗೆ ಆಶ್ಚರ್ಯವೇ ಕಾದಿತ್ತು. ಅವುಗಳಲ್ಲಿ ಕಾಳುಗಳೇ ಇರಲಿಲ್ಲ. ರೈತನಿಗೆ ಆಘಾತವಾಯಿತು.

ಅವನು ಮತ್ತೆ ಭಗವಂತನನ್ನು ಪ್ರಾರ್ಥಿಸಿದ ‘ಭಗವಂತಾ ಇದೇನು ಮಾಡಿಬಿಟ್ಟೆ. ಮಳೆ ಗಾಳಿಗಳ ನಿಯಂತ್ರಣವನ್ನು ನನಗೆ ಕೊಟ್ಟೆ. ನಾನೂ ಸಕಾಲದಲ್ಲಿ ಅವನ್ನು ಬಳಸಿಕೊಂಡು ವ್ಯವಸಾಯ ಮಾಡಿದೆ. ಬೆಳೆಯೂ ಹುಲುಸಾಗಿ ಬಂದಿತು. ಆದರೆ ತೆನೆಗಳಲ್ಲಿ ಕಾಳುಗಳೇ ಇಲ್ಲದಂತೆ ಮಾಡಿದ್ದೀಯಲ್ಲಾ ಇದು ನ್ಯಾಯವೇ?’ ಎಂದು ಗೋಳಾಡಿದ.

ಆಗಲೂ ಭಗವಂತನ ಮುಖದಲ್ಲಿ ನಗುವಿತ್ತು. ‘ರೈತನೇ ನನ್ನ ನಿಯಂತ್ರಣವಿದ್ದಾಗ ನನಗೆ ಬೇಕಾದಂತೆ ಮಳೆ, ಗಾಳಿಗಳನ್ನು ನೀಡುತ್ತಿದ್ದೆ. ಪೈರುಗಳು ತಮ್ಮ ಉಳಿವಿಗಾಗಿ ಬೇರುಗಳನ್ನು ಕಷ್ಟಪಟ್ಟು ಭೂಮಿಯೊಳಕ್ಕೆ ಆಳವಾಗಿ ಇಳಿಸಿ ತಮಗೆ ಬೇಕಾದ ಪೋಷಕಾಂಶಗಳನ್ನು ಹೀರಿಕೊಂಡು ಸೂರ್ಯನ ಶಾಖದಿಂದ ಅಹಾರ ತಯಾರಿಸಿ ಕಾಳುಗಳಾಗಿ ಸಂಗ್ರಹಿಸಿಡುತ್ತಿದ್ದವು. ನಿನ್ನ ಕೋರಿಕೆಯಂತೆ ಮಳೆ, ಗಾಳಿಗಳನ್ನು ನಿನ್ನ ಅಧೀನಕ್ಕೆ ಕೊಟ್ಟೆ. ನೀನು ನಿನ್ನ ಇಷ್ಟದಂತೆ ಅವುಗಳನ್ನು ಬಳಸಿಕೊಂಡೆ. ಯಾವುದೂ ಕಷ್ಟವಿಲ್ಲದೇ ಬೆಳೆಗಳಿಗೆ ನೀರನ್ನೂ ಕೊಟ್ಟೆ, ಗಾಳಿಯನ್ನೂ ಸುಳಿದಾಡಿಸಿದೆ. ಅವುಗಳಿಗೆ ಯಾವುದೇ ಶ್ರಮವಾಗಲಿಲ್ಲ. ಅವುಗಳ ಬೇರುಗಳು ಆಳಕ್ಕೆ ಇಳಿಯುವ ಅಗತ್ಯವೇ ಇಲ್ಲ. ಅವುಗಳು ಭೂವಿಯೊಳಕ್ಕೆ ಇಳಿದು ಪೋಶಕಾಂಶಗಳನ್ನು ಸಂಗ್ರಹಿಸಲೇ ಇಲ್ಲ. ಸೋಮಾರಿಯಾಗಿ ಬಿಟ್ಟವು. ಹೀಗಾಗಿ ತೆನೆಗಳು ಮೂಡಿದರೂ ಅವುಗಳೊಳಗೆ ಕಾಳುಗಳೇ ಇಲ್ಲ. ಇದು ನಿನ್ನದೇ ಆಡಳಿತ ಕಾಣಪ್ಪಾ’ ಎಂದನು.

ರೈತನಿಗೆ ತನ್ನ ತಪ್ಪು ಗೊತ್ತಾಯಿತು. ‘ಭಗವಂತಾ ನಾನು ನನ್ನ ಅನುಕೂಲವನ್ನಷ್ಟೇ ಆಲೋಚಿಸಿದೆ. ನೀನು ಇಡೀ ಲೋಕದ ಹಿತವನ್ನೆಲ್ಲಾ ಕಾಯುವ ಜವಾಬ್ದಾರಿ ಹೊತ್ತವನು. ನಿನ್ನ ಕೆಲಸ ನನಗೆ ಕೊಟ್ಟರೆ ನಾನು ಹೇಗೆ ನಿಭಾಯಿಸಬಲ್ಲೆ. ನೀನು ಕೊಟ್ಟ ವರವನ್ನು ಈಗಲೇ ಹಿಂದಕ್ಕೆ ಪಡೆ. ನನಗೆ ಕಷ್ಟಪಟ್ಟು ವ್ಯವಸಾಯ ಮಾಡುವ ಕರ್ತವ್ಯವೇ ಸಾಕು. ಗಾಳಿ, ಮಳೆ, ಸೂರ್ಯನ ಶಾಖವೆಲ್ಲವೂ ನಿನ್ನದೇ ನಿಯಂತ್ರಣದಲ್ಲಿದ್ದರೇ ಛಂದ. ನನ್ನನ್ನು ಕ್ಷಮಿಸಿಬಿಡು’ ಎಂದು ಬೇಡಿಕೊಂಡ.

ಭಗವಂತನು ‘ಹಾಗೇ ಆಗಲಿ, ಕಷ್ಟಪಡದೆ ಯಾವುದೇ ಫಲ ದಕ್ಕದು. ಅದು ಮನುಷ್ಯನಿಗೇ ಆಗಲಿ, ಮರಗಿಡಗಳು, ಪ್ರಾಣಿಪಕ್ಷಿಗಳಿಗೇ ಆಗಲಿ. ಒಂದೇ ನಿಯಮ’ ಎಂದು ಅಧೃಶ್ಯನಾದನು.

ವಾಟ್ಸಾಪ್ ಕಥೆಗಳು
ಸಂಗ್ರಹ ಬಿ.ಆರ್ ನಾಗರತ್ನ, ಮೈಸೂರು

8 Responses

  1. Padmini Hegde says:

    ಒಳ್ಳೆಯ ಚಿಂತನೆ

  2. ಧನ್ಯವಾದಗಳು ಪದ್ಮಿನಿ ಮೇಡಂ

  3. ನಯನ ಬಜಕೂಡ್ಲು says:

    ನೀತಿಯುಕ್ತ ಕಥೆ

  4. ಧನ್ಯವಾದಗಳು ನಯನಮೇಡಂ.

  5. ಶಂಕರಿ ಶರ್ಮ says:

    ಅನಾಯಾಸವಾಗಿ ಒದಗುವಂತಹುದು ಯಾವುದೂ ಫಲ ನೀಡಲಾರದು… ಉತ್ತಮ ಸಂದೇಶ ಹೊತ್ತ ಕಥೆ ಎಂದಿನಂತೆ ಚಂದ ನಾಗರತ್ನ ಮೇಡಂ.

  6. ಧನ್ಯವಾದಗಳು ಶಂಕರಿ ಮೇಡಂ

  7. ಸುಚೇತಾ says:

    ತುಂಬಾ ಚೆನ್ನಾಗಿದೆ ಮೇಡಂ

  8. ಧನ್ಯವಾದಗಳು ಗೆಳತಿ ಸುಚೇತ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: