”ಸತ್ಯಂ ಶಿವಂ ಸುಂದರಂ”
ಹಂಬಲಿಸಿ ತಂದ ಹೊಸ ವಾಹನದ ಸಂತಸ ಉಳಿಯುವುದು ಅದು ಮಾಸಲಾಗುವ ತನಕ
ಹಪಹಪಿಸಿ ಕಟ್ಟಿಸಿದ ಮನೆಯ ಖುಷಿ ಇರುವುದು ಅದಕ್ಕಿಂತ ದೊಡ್ಡ ಮನೆ ನೋಡುವ ತನಕ
ಅಂಗಡಿ ಅಂಗಡಿ ತಿರುಗಿ ತಂದ ಹೊಸ ವಿನ್ಯಾಸದ ಅಂಗಿಯ ಮೇಲಿನ ಅಕ್ಕರೆ ಒಂದೆರಡು ಬಾರಿ ಉಡುವ ತನಕ
ಇಷ್ಟಪಟ್ಟು ಸವಿಯಲು ಮಾಡಿಸಿಕೊಂಡ ಪಂಚ ಭಕ್ಷ್ಯ ಪರಮಾನ್ನದ ರುಚಿ ತೇಗುವ ತನಕ
ಹರಕೆ ಹೊತ್ತು ಪಡೆದ ಮಕ್ಕಳ ಹೆಮ್ಮೆ ಅವರು ತಿರುಗಿ ಬೀಳುವ ತನಕ
ಯಾವುದರಲ್ಲಿಯೂ ಎಂದೂ ಅಳಿಯದ ಆಸಕ್ತಿ ಇಲ್ಲ
ನಿತ್ಯ ನೂತನ ಅನಿಸುವ ಮೋಹಕ ಸೌಂದರ್ಯದ ಸುಳಿವಿಲ್ಲ
ಎಷ್ಟು ಕೇಳಿದರೂ ಪುನಃ ಪುನಃ ಕೇಳಬೇಕೆಂಬ ಬಯಕೆ ಆ ಭಗವಂತನ ಲೀಲೆಯದು
ಎಷ್ಟು ನೋಡಿದರೂ ಮತ್ತೆ ಮತ್ತೆ ನೋಡಬೇಕೆಂಬ ಭಾವ ಮೂಡಿಸುವ ಮೂರ್ತಿ ಆ ಕರುಣಾನಿಧಿಯದು
ದರ್ಶನ ಮಾಡಿದಾಗಲೆಲ್ಲಾ ಹೊಸ ಭಾವನೆ ಈ ಮನಕೆ
ಕಣ್ಣು ತುಂಬಿಕೊಂಡಂತೆಲ್ಲಾ ನವ ರೂಪ ಈ ಭಕ್ತಿಗೆ
ಕಾಲಾತೀತ ಈ ಶಕ್ತಿಯು ಎಂದೂ ಕೆಡದು ಸುಡದು
ಭಾವಾತೀತ ಈ ಅನುಭೂತಿಯು ಎಂದೂ ಬೇಸರ ತರದು
ಹೊಸ ತಿರುಳು ಹೊಸ ತಿರುವು ಪಡೆಯ ಬನ್ನಿ
ನವನವೀನ ಅನುಭವದ ಖೀರು ಸವಿಯಲು ನಿಮ್ಮವರ ಕರೆ ತನ್ನಿ
ಮೌಲ್ಯಗಳ ರೂಢಿಸಿಕೊಂಡು ಮೌಢ್ಯಗಳ ಝಾಡಿಸಿಕೊಂಡು
ಕ್ಷಣಿಕ ಸುಖಕ್ಕೆ ಹಾತೊರೆಯುವ ಮನವ ಅಂಕೆಯಲ್ಲಿಟ್ಟುಕೊಂಡು
ತನ್ನೊಳಗೆ ತಾನಿಳಿದು ತನ್ನನ್ನು ತಾನೇ ಅರಿತುಕೊಂಡು
ಅನು ದಿನವೂ ಪರಮ ಮಂಗಳ ರೂಪವ ನೆನೆಯುತಿರೆ
ಈ ಜಗವೇ ಸೋಜಿಗದ ಸೊಬಗಿನ ಖನಿಯೆನಿಸುವುದು
ಯಾವತ್ತೂ ಕುಂದದ ಪ್ರಭೆ ಮೈ ಮನಗಳ ತುಂಬುವುದು
–ಕೆ.ಎಂ ಶರಣಬಸವೇಶ
ಅನುಭವೀ ಬರಹ ಚೆನ್ನಾಗಿದೆ.
ಹೇಮಾಮಾಲ ಮೇಡಂ ಗೆ ಧನ್ಯವಾದಗಳು. ನಮ್ಮ ಬರಹವನ್ನು ಪ್ರಕಟಿಸಿದ್ದಕ್ಕೆ.
ಯೋಚನೆಗೆ ಹಚ್ಚುವ ಕವನ ಅದರಲ್ಲೂ ಈಗಿನ.. ಪೀಳಿಗೆಯವರಿಗೆ ಸಾರ್..
ಕ್ಷಣಿಕ ಸುಖಕ್ಕಾಗಿ ಹಾತೊರೆಯದೆ; ನಿತ್ಯನೂತನವಾದ ಆ ಭಗವಂತನ ನಾಮಸ್ಮರಣೆಯಲ್ಲೇ ಸವಿಯನ್ನು ಕಾಣಲು ಕರೆನೀಡಿದ ಸೊಗಸಾದ ಕವನ.
ಅರ್ಥ ಪೂರ್ಣ ಕವನ
ನಿಸರ್ಗದ ಚೆಲುವನ್ನು ಮತ್ತೆ ಮತ್ತೆ ಸವಿಯುವ ಮನ
ಆಧ್ಯಾತ್ದದ ಅರಿವನ್ನು ಮೂಡಿಸುವ ಕವನ
ಪ್ರಪಂಚದ ಸುಖವನ್ನು ಹೀಗಳೆಯುವ ಕವನ ಮನಕ್ಕೆ ಮುದ ನೀಡಿದೆ
ಭಕ್ತಿಯ ಶಕ್ತಿಯನ್ನು ಸಾರುವ ಸುಂದರ ಸಾಲುಗಳು.
ನಮ್ಮ ಸುರಹೊನ್ನೆ ಬಳಗದ ಮೂರು ಮುತ್ತುಗಳು ನಾಗರತ್ನ, ನಯನ ಬಜಕೂಡ್ಲು, ಹಾಗೂ ಶಂಕರಿ ಶರ್ಮ ಅವರಿಗೆ. ಸುರಹೊನ್ನೆ ಬಳಗದ ಪ್ರತಿಭಾವಂತ ಬರಹಗಾರರಾದ ವಿಜಯಾ ಸುಬ್ರಹ್ಮಣ್ಯ, ಪದ್ಮ ಆನಂದ್, ಗಾಯತ್ರಿ ದೇವಿ ಸಜ್ಜನ್ ಅವರಿಗೆ ಧನ್ಯವಾದಗಳು