ಕಾದಂಬರಿ : ‘ಸುಮನ್’ – ಅಧ್ಯಾಯ 15

Spread the love
Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು..)

ಮುಗಿದ ಅಧ್ಯಾಯ

ರಜೆಗಳು ಮುಗಿದು ಎರಡನೆಯ ಸೆಮಿಸ್ಟರ್ ಶುರುವಾಗಿತ್ತು. ಅಂದು ಸಂಜೆ ಫಲಿತಾಂಶ ನೋಡಿದ ಸುಮನ್‍ಗೆ ಆಘಾತವಾಯಿತು. ಅವಳ ನಿರೀಕ್ಷೆಗಿಂತ ಬಹಳ ಕಮ್ಮಿ ಅಂಕಗಳು ಬಂದಿದ್ದವು. ರಾತ್ರಿಯೆಲ್ಲಾ ಯೋಚಿಸಿ ಕೊನೆಗೆ ಮುಖ್ಯಸ್ಥರ ಬಳಿ ಹೋಗಿ ತನ್ನ ಫಲಿತಾಂಶದ ಬಗ್ಗೆ ವಿವರಿಸಿದಳು. ಅದರಲ್ಲೂ ಅವಳು ಪಾಠ ಮಾಡುವ ವಿಷಯ ಆಧಾರಿತ ಉನ್ನತ ವಿಷಯದಲ್ಲಿ ಅವಳಿಗೆ ಕೇವಲ 57 ಬಂದಿತ್ತು  “ಸರ್ ನಾನು ಪಾಠ ಮಾಡಿದ ವಿಧ್ಯಾರ್ಥಿಗಳಿಗೇ ಇದರಲ್ಲಿ ಎಂಬತ್ತು ತೊಂಬತ್ತು ಬಂದಿದೆ. ನನಗೆ ನೋಡಿದ್ರೇ ಐವತ್ತೇಳು”, ಸುರೇಶ ಅವರಿಗೆ ಅವಳು ಹೇಳುತ್ತಿರುವುದು ನಿಜ ಎನಿಸಿತು. “ಎಮ್. ಟೆಕ್ ಉತ್ತರ ಪತ್ರಿಕೆಗಳನ್ನು ಇಬ್ಬರು ಮೌಲ್ಯ ಮಾಪನೆ ಮಾಡಿರುತ್ತಾರೆ. ಅವರಿಬ್ಬರೂ ನೀಡಿದ ಅಂಕಗಳಲ್ಲಿ ಹದಿನೈದು ಅಂಕಗಳಷ್ಟು ವೈತ್ಯಾಸವಿದ್ದರೆ ಮೂರನೆಯವರ ಮೌಲ್ಯ ಮಾಪನೆಗೆ ಹೋಗುತ್ತೆ” ತಮ್ಮನ್ನೇ ಸಮಾಧಾನಗೊಳಿಸುವಂತೆ ಹೇಳಿದರು. ಬೇರೆ ಹುಡುಗರೂ ಹೀಗೇ ಹೇಳಿದ್ದರು. ಸರಿ ನೋಡೇ ಬಿಡುವ ಎಂದುಕೊಂಡು “ಸುಮನ್ ಒಂದು ಕೆಲ್ಸ ಮಾಡು. ಮರುಮೌಲ್ಯಮಾಪನಕ್ಕೆ ಹಾಕು ನೋಡುವ” ಸೂಚಿಸಿದರು ಸುಮನ್ ಕಳೆಗುಂದಿದ ಮುಖವನ್ನು ನೋಡಲಾಗದೆ. ಐದು ಸಾವಿರ ಶುಲ್ಕ ಕಟ್ಟಿ ಸುಮನ್ ಮರುಮೌಲ್ಯಮಾಪನಕ್ಕೆ ಹಾಕಿದಳು.

ಈಗ ಓದಲು ಮೊದಲಿನಷ್ಟು ಹುರುಪು ಇರಲಿಲ್ಲ. ಎಷ್ಟು ಕಷ್ಟಪಟ್ಟು ಓದಿದರೇ ಏನು ಪ್ರಯೋಜನ ಅದಕ್ಕೆ ತಕ್ಕ ಪ್ರತಿಫಲ ಸಿಗದಿದ್ದ ಮೇಲೆ ಎಂಬ ನಿರಾಸೆ. ನಿಷ್ಠೆಯಿಂದ ಪಾಠ ಮಾಡುವುದನ್ನು ಮಾತ್ರ ನಿಲ್ಲಿಸಲಿಲ್ಲ. ಅದನ್ನು ಮೊದಲಿನಷ್ಟೇ ಶ್ರದ್ದೆಯಿಂದ ಮಾಡುತ್ತಿದ್ದಳು. ಒಂದು ತಿಂಗಳಲ್ಲಿ ಮರುಮೌಲ್ಯಮಾಪನೆಯ ಫಲಿತಾಂಶ ಬಂತು. ಅದು ಇನ್ನೂ ಅಧ್ವಾನ. ಈಗ ಅವಳಿಗೆ ನಲ್ವತೆರಡು ಬಂದಿತ್ತು. ಅದನ್ನು ಕೇಳಿ ಸುರೇಶ ಅವರಿಗೆ ಖಚಿತವಾಯಿತು ಎಲ್ಲೋ ಏನೋ ಸರಿಯಿಲ್ಲ. ಆದರೆ ಏನು? ಸ್ವಲ್ಪ ತನಿಖೆ ಮಾಡಬೇಕೆಂದುಕೊಂಡರು. ಸುಮನ್‍ದು ಒಂದೇ ಪ್ರಶ್ನೆ. ಮೊದಲನೆಯ ಸಲಿ ಇಬ್ಬರು ಮೌಲ್ಯ ಮಾಪನೆ ಮಾಡಿ ಐವತ್ತೇಳು ನೀಡಿದ್ದರು. ಈಗ ಇನ್ನೊಬ್ಬರು ಅದೇ ಉತ್ತರ ಪತ್ರಿಕೆಗೆ ನಲ್ವತ್ತೆರಡು ನೀಡಿದ್ದಾರೆ. ಇದೆಂತಹ ಮೌಲ್ಯಮಾಪನೆ? ಮೂರು ಜನರ ಮೌಲ್ಯಮಾಪನೆ ಅಂಕಗಳಲ್ಲಿ ಇಷ್ಟು ವ್ಯತ್ಯಾಸ ಹೇಗೆ? ಇದೆಂತಹ ಗುಣಮಟ್ಟದ ಮೌಲ್ಯಾಮಾಪನೆ? ಹಾಗಿದ್ದರೆ ಈ ಉತ್ತರ ಪತ್ರಿಕೆ ಇನ್ನೊಬ್ಬರು ಕರೆಕ್ಟ್ ಮಾಡಿದರೇ ಐವತ್ತೇಳಕ್ಕಿಂತ ಇನ್ನೂ ಹದಿನೈದು ಹೆಚ್ಚು ಬರಬಹುದಲ್ವಾ? ದೂಃಖದಿಂದ ಮುಖ್ಯಸ್ಥರಿಗೆ ಹೀಗೇ ಕೇಳಿದ್ದಳು. ಏನು ಹೇಳುವರು ಅವರು. ಅವರಿಗೇ ಸೋಜಿಗ. ಮರುಮೌಲ್ಯಮಾಪನೆಯ ನಂತರ ವಿಶ್ವವಿದ್ಯಾಲಯ ಇನ್ನೊಂದು ಮೌಲ್ಯ ಮಾಪನೆಯ ಸೌಲಭ್ಯ ಕೊಡುವಿದಿಲ್ಲ. ಅಷ್ಟು ನಂಬಿಕೆ ಇತ್ತು ಅದಕ್ಕೆ ತನ್ನ ವ್ಯವಸ್ಥೆಯ ಮೇಲೆ. ಇಲ್ಲಿ ನೋಡಿದರೇ ಐದು ಸಾವಿರವೂ ದಂಡ, ಅನ್ಯಾಯವೂ ಆಗಿದೆ. ವ್ಯವಸ್ಥೆಯಲ್ಲೇ ಹುಳುಕು. ಗೆದ್ದಲು ಹಿಡಿಯುತ್ತಿದೆ. ಇಷ್ಟೊಂದು ಕಾಲೇಜುಗಳನ್ನು ಒಂದೇ ವಿಶ್ವವಿದ್ಯಾಲಯದಡಿ ಇರುವ ಬದಲು ಮೊದಲಿನ ಹಾಗೆ ವಿಕೇಂದ್ರಿಕರಣ ಮಾಡುವುದೇ ಲೇಸು ಯೋಚಿಸುತ್ತ ಕುಳಿತರು.

ಈ ಏಟಿನಿಂದ ಚೇತರಿಸಿಕೊಳ್ಳಲು ಸುಮನ್‍ಗೆ ಇನ್ನೊಂದು ತಿಂಗಳು ಹಿಡಿಯಿತು. ಓದುವುದನ್ನು ನಿಲ್ಲಿಸಿದ್ದಳು. ಶ್ವೇತ ಸಂಸಾರ ಇವಳ ಮನೆಯ ಹತ್ತಿರ ಬಂದು ನೆಲಸಿದ್ದರು. ಸಮಯ ಸಿಕ್ಕಾಗಲೆಲ್ಲ ಅವರ ಮಕ್ಕಳ ಜೊತೆ ಆಟವಾಡುತ್ತ ಸಮಯ ಕಳೆಯುತ್ತಿದ್ದಳು. ಕೊನೆಗೆ ಒಂದು ನಿರ್ಣಯ ಮಾಡಿದಳು ಬಹಳ ಯೋಚನೆ ಮಾಡಿ. ಯಾರು ಎಷ್ಟೇ ಅಂಕಗಳನ್ನು ಕೊಡಲಿ ಅದು ಅವರ ಧರ್ಮ. ನಾನು ತೆಗೆದುಕೊಂಡ ವಿಷಯಗಳು ನನಗೆ ಇಷ್ಟ. ಅವುಗಳಲ್ಲಿ ನನಗೆ ಆಸಕ್ತಿಯಿದೆ ನಾನು ಅವನ್ನು ಓದುತ್ತೇನೆ. ಚೆನ್ನಾಗಿ ಓದುವೆ. ಬರಿ ಜ್ಞಾನಾರ್ಜನೆಯ ದೃಷ್ಟಿಯಿಂದ ಓದುವೆ. ಅವತ್ತಿನಿಂದ ಮತ್ತೆ ಓದತೊಡಗಿದಳು.

**

ಪರೀಕ್ಷೆಗೆ ಒಂದು ತಿಂಗಳು ಇದೆ ಎನ್ನುವಾಗ ಕೋರ್ಟಿನಿಂದ ಕೊನೆಯ ಬುಲಾವು ಬಂದಿತು. ಶ್ರೀಧರ ಮೂರ್ತಿಗಳು ತಮ್ಮ ಕಾರಿನಲ್ಲಿ ಸುಮನ್ ಹಾಗೂ ಅವಳ ತಂದೆಯನ್ನು ತಾವೇ ಖುದ್ದಾಗಿ ಕರೆದೊಯ್ದರು. ನ್ಯಾಯಾಧೀಶರು ಒಮ್ಮೆ ನೋಡಿದರು, ಎಡಕ್ಕೆ ನಿಂತ ಗಿರೀಶ ಅವನಿಗೆ ಜೋತು ಬಿದ್ದ ಅನುಪಮಾ ಹಾಗೂ ಅವನ ವಕೀಲರು. ಅವನ ವಕೀಲರು ನಿಂತಿದ್ದು ಅವನ ಬಳಿ ಆದರೆ ಅವರ ಆತ್ಮ ಸುಮನ್ ಪರ. ಬಲಕ್ಕೆ ನಿಂತ ಸುಮನ್ ಮುಖದಲ್ಲಿ ಏನು ಗಾಂಭೀರ್ಯ, ಘನತೆ. ಕರೆದಾಗಲೆಲ್ಲ ಹೀಗೇ ಬಂದು ನಿಂತಿದ್ದಳು. ಆ ತಾಯಿಯ ಒಡಲು ಹತ್ತಿ ಉರಿಯ ಬೇಕಾದರೆ ಮುಖದಲ್ಲಿ ಏನು ಪ್ರಶಾಂತ ಭಾವನೆ. ಮುಖ ಕಳೆಗುಂದಿದೆ ಹೌದು, ನೋವಿದೆ ಹೌದು ಆದರೇ ಏನು ಸಂಸ್ಕಾರ? ಏನು ಸಂಸ್ಕೃತಿ?  ಅದೆಷ್ಟು ಚೆನ್ನಾಗಿ ಬೆಳಸಿದ್ದೀರಾ ಮಗಳನ್ನು. ಅವಳನ್ನು ಹೆತ್ತ ಅಶ್ವತನಾರಾಯಣರೇ ನೀವೇ ಧನ್ಯ. ಇದೊಂದು ವಿಚಿತ್ರ ಮೊಕದ್ದಮೆ. ಪರಿಹಾರ ಧನದ ಜಗಳವಿಲ್ಲ. ಹುಡುಗಿ ಸ್ತ್ರೀಧನ ವಾಪಸ್ಸು ತೆಗೆದುಕೊಂಡಿದ್ದಾಳೆ. ಫೋಟೋದಲ್ಲಿ ನಡೆದ ಸಂಗತಿ ಸತ್ಯವೇ ಎಂದು ಕೇಳುವ ಪ್ರಮೇಯವೇ ಇಲ್ಲ್ಲ. ಮೊದಲ ದಿನದಿಂದ ಆ ಹೆಂಗಸು ಹುಡುಗನ ಜೊತೆ ಬರುತ್ತಿದ್ದಾಳೆ. ಇಬ್ಬರಿಗೂ ವಿಚ್ಛೇದನೆ ಬೇಕು. ಇನ್ನು ಒಟ್ಟಿಗೆ ಇರಿ ಎಂದು ಯಾರನ್ನು ಮತ್ತು ಹೇಗೆ ಹೇಳುವುದು. ಮಲ್ಲಿಗೆಯ ಸಂಗವನ್ನು ಬಿಟ್ಟು  ಕಾಕಾಡದ ಸಂಗ ಬಯಸಿದ ಮುಠ್ಠಾಳ ಎಂದುಕೊಳ್ಳುತ್ತ ನ್ಯಾಯಾಧೀಶರು ವಿಚ್ಛೇದನೆಯ ಆದೇಶ ಹೊರಡಿಸಿದರು.

ಮನೆಗೆ ಹಿಂದುರಿಗಿದ ಅಶ್ವತನಾರಾಯಣರಿಗೆ ಒಂದು ತರಹ ನಿಶ್ಚಿಂತೆ. ಮನಸ್ಸಿನ ಮೂಲೆಯಲ್ಲಿ ಏನೋ ಒಂದು ಹೊಸ ಆಸೆ. ನಿಟ್ಟುಸಿರು ಬಿಟ್ಟರು ಎರಡು ವರ್ಷದ ಕಹಿ ಘಟನೆಗಳನ್ನು ಹೊರ ಹಾಕುವಂತೆ. ಇನ್ನಾದರು ಮಗಳ ಸುತ್ತ ಕವಿದ ನೋವಿನ ವಾತಾವರ್ಣ ತಿಳಿಯಾಗಬಹುದು. ಗಿರೀಶನ ಛಾಯೆ ಕೂಡ ಇರಬಾರದು. ಮಗಳು ಇನ್ನು ಹಿಂದಿನದನ್ನು ಮರೆಯಬೇಕು. ಮುಂದೆ ಉದ್ದಕ್ಕೆ ಜೀವನವಿದೆ. ಅದರ ಬಗ್ಗೆ ಯೋಚಿಸಬೇಕು. ಸಂತಸದಿಂದ ಹಾರಾಡಲು ಆಗದ ಹಾಗೆ ಕಾಲಿಗೆ ಹಾಕಿದ ಬೇಡಿ ಕಳಚಿ ಬಿದ್ದಿದೆ ಇಂದು. ಹಾರಾಡು ಕಂದ ಸ್ವಚ್ಛಂದವಾಗಿ ಬಾನಾಡಿನಲ್ಲಿ. ಮುಂದೆ ಎಂದೂ ನಿನ್ನ ಜೀವನದಲ್ಲಿ ಕತ್ತಲು ಬರದಿರಲಿ. ಕಣ್ಣು ಒರೆಸಿಕೊಂಡರು. ರಾಜಲಕ್ಷ್ಮಿಯವರಿಗೆ ಇಂತಹದೇ ಯೋಚನೆ. ಎರಡು ವರ್ಷದಿಂದ ಆಚರಿಸದ ಹಬ್ಬವನ್ನು ಇಂದು ಸಿಹಿ ಮಾಡಿ ಆಚರಿಸಲೇ ಎನ್ನುವ ಭಾವನೆ. ತಲೆಯ ಮೇಲಿದ್ದ ಚಪ್ಪಡಿ ಕಲ್ಲು ಕೆಳಗೆ ಬಿದ್ದ ಹಾಗೆ. ಕತ್ತಲು ಗವಿಯಿಂದ ಹೊರ ಬಂದು ಸ್ವಚ್ಛಂದವಾದ ಗಾಳಿ ಬೆಳಕನ್ನು ಆಸ್ವಾದಿಸಿದಷ್ಟು ಸಂತಸ. ಮನಸ್ಸು ತಿಳಿಯಾದ ಹಾಗೆ ಅನಿಸಿ ಮಗಳು ಇನ್ನು ತನ್ನ ಮುಂದಿನ ಜೀವನವನ್ನು ನಿರ್ಮಿಸಲಿ ಅದರಲ್ಲಿ ಅವಳಿಗೆ ಮುಕ್ತವಾದ ಪ್ರೀತಿ, ಆದರ, ಸಂತೋಷವೇ ಇರಲಿ ಮನಸ್ಸಿನಲ್ಲೇ ಹರಸಿದರು.

ಸುಮನ್‍ಗೂ ಒಂದು ತರಹ ನಿರಾಳ ಭಾವ. ಕಹಿ ಘಟನೆಗೆ ಒಂದು ಅಂತ್ಯ. ಕೋರ್ಟಿಗೆ ಹೋಗಬೇಕು ಎನ್ನುವ ಹಿಂಸೆ ಇಲ್ಲ,  ಅಮ್ಮ ಅಪ್ಪನಿಗೂ ಇದರಿಂದ ಸ್ವಲ್ಪವಾದರೂ ಸಮಾಧಾನವಾಗಿರುತ್ತದೆ ಎಂಬ ನಂಬಿಕೆ.  ಅವಳ ಹೃದಯಕ್ಕೆ ಆದ ಗಾಯ ತುಂಬುವುದೇ ಇಲ್ಲ. ಮದುವೆಯ ಸಂಕೋಲೆ ಅವಳಿಗೆ ಒಂದು ಕಹಿ ನೆನಪು ಮಾತ್ರ. ಜನರ ಮೇಲಷ್ಟೇ ಅಲ್ಲ ದೇವರ ಮೇಲೆ ಕೂಡ ನಂಬಿಕೆ ಇಲ್ಲದಂತೆ ಮಾಡಿತ್ತು ಅದು. ಸುಮನ್ ಯೋಚಿಸುತ್ತ ಕುಳಿತ್ತಿದ್ದಳು. ಹೌದು ಸುಮನ್ ಮೂವತ್ತು ವರ್ಷದಿಂದ ಬೆಳಸಿ ಆರೈಕೆ ಮಾಡಿದ್ದ ನಿನ್ನ ದೇವರ ಮೇಲಿನ ನಂಬಿಕೆ ಒಂದೇ ವರ್ಷದಲ್ಲಿ ಅಲ್ಲಾಡಿ ಹೋಯಿತೇ? ಅಷ್ಟು ಅಸ್ಥಿರವಾಗಿತ್ತೇ ಆ ನಂಬಿಕೆ ಅಥವಾ ಅದು ನಿಂತ ಬುನಾದಿಯೇ ಸರಿ ಇರಲಿಲ್ಲವೇ? ಮನಸ್ಸಿನ ಪ್ರಶ್ನೆಗೆ ಸುಮನ್ ಬಳಿ ಉತ್ತರವಿಲ್ಲ.
**

ಇನ್ನು ಯೋಚಿಸಿ ಕೊರಗಲು ಸುಮನ್ ಬಳಿ ಸಮಯವಿಲ್ಲ. ಪರೀಕ್ಷೆಗೆ ಇನ್ನು ಒಂದೇ ತಿಂಗಳು. ತನ್ನ ವಿದ್ಯಾರ್ಥಿಗಳಿಗೆ ಪಠ್ಯಸೂಚಿ ಮುಗಿಸಿ ಅವರ ಆಂತರಿಕ ಪರೀಕ್ಷೆಗಳ ಅಂಕಗಳ ಪಟ್ಟಿ ಮಾಡಬೇಕು. ಇತ್ತ ಪರೀಕ್ಷೆಗೆ ಓದಬೇಕು. ಬಿಡುವಿನಲ್ಲಿ ಶ್ವೇತ ಮಕ್ಕಳನ್ನು ಅರಸಿ ಹೋಗುವುದನ್ನು ನಿಲ್ಲಿಸಿದಳು. ತಾನಾಯಿತು ತನ್ನ ಪುಸ್ತಕಗಳು ಆಯಿತು. ಕೊರಗದೆ ಕೋಣೆಯ ಕಿಟಕಿಯಿಂದಾಚೆ ನೋಡದೇ ಓದಿನಲ್ಲಿ ಮಗಳನ್ನು ನೋಡಿ ಅಶ್ವತನಾರಾಯಣರು ಹಾಗೂ ರಾಜಲಕ್ಷ್ಮಿ ಸ್ವಲ್ಪ ನಿರಾಳವಾಗಿದ್ದರು. ಈ ಸಲಿಯ ಪರೀಕ್ಷೆಯನ್ನೂ ಸುಮನ್ ತುಂಬ ಚೆನ್ನಾಗಿ ಮಾಡಿದಳು. ಮೂರನೆಯ ಸೆಮಿಸ್ಟರ್ ಆರಂಭವಾಗಲು ಇನ್ನು ಒಂದು ತಿಂಗಳು. ಸರಿಯಾಗಿ ಅದೇ ಸಮಯಕ್ಕೆ ಸಂಜು ಅಮೆರಿಕಾದಿಂದ ಬಂದ. ಸಂದೀಪ ಇಲ್ಲಿಂದ ಹೋದ ಮೇಲೆ ಇವರುಗಳ ಬಗ್ಗೆ ಸಂಕಟದಿಂದ ಸಂಜುಗೆ ಇಮೇಲ್ ಕಳುಹಿಸಿದ್ದ. ಇಬ್ಬರ ಮಧ್ಯ ಹಲವಾರು ಇಮೇಲುಗಳು ಓಡಾಡಿದ್ದವು. ಅಕ್ಕ ಮತ್ತೆ ಮದುವೆಯಾಗಬೇಕು. ಅವಳು ಸಂತೋಷದಿಂದ ಇರಬೇಕು. ಅವಳಿಗೆ ತಂದೆ ತಾಯಿಯ ಜವಾಬ್ದಾರಿ ಬೇಡ. ಅವಳು ಅವರಿಗೆ ಆಸರೆಯಾಗಿ ಮದುವೆಯಾಗದೆ ಹೀಗೇ ಉಳಿದು ಬಿಡುವುದು ಸುತಾರಾಂ ಬೇಡ. ಇದನ್ನು ಹೇಗಾದರೂ ಮಾಡಿ ಅಮ್ಮ ಅಪ್ಪನಿಗೆ ತಿಳಿಸಬೇಕು. ಅವಳು ಆದಷ್ಟು ಬೇಗನೆ ಒಂದು ಇತ್ಯರ್ಥಕ್ಕೆ ಬರುವ ಹಾಗೆ ಅವಳ ಮನವೊಲಿಸಬೇಕು. ಈ ನಿರ್ಧಾರಕ್ಕೆ ಬಂದ್ದದ್ದೇ ತಡ ಸಂಜು ಕೆಲಸಕ್ಕೆ ರಜ ಹಾಕಿ ಊರಿಗೆ ಬಂದಿಳಿದ. ಅವರ ನಿರ್ಧಾರವನ್ನು ಕಾರ್ಯಗತಗೊಳಿಸುವುದು ಅವನ ಏಕೈಕ ಉದ್ದೇಶ.

ಬಂದಾಗಿನಿಂದ ಅಮ್ಮ ಅಪ್ಪನ ಹಿಂದೆ ಮುಂದೆ ಓಡಾಡಿ ಅವರನ್ನು ಮಾತಿಗೆಳೆದು ನಡೆದ ದುರಂತದ ಬಗ್ಗೆ ಕೇಳಿ ತಿಳಿದುಕೊಂಡ. ಅವರಿಗೆ ತಮ್ಮ ದುಃಖವನ್ನು ಹಂಚಿಕೊಳ್ಳಲು, ಅರ್ಥಮಾಡಿಕೊಳ್ಳಲು ಒಂದು ಜೀವ ಸಿಕ್ಕಿದ ಹಾಗಾಯಿತು. ಸುಮನ್ ಇಲ್ಲದ ಹೊತ್ತಿನಲ್ಲಿ ಮಾತು ಎಲ್ಲಿಂದಲೋ ಶುರುವಾಗಿ ಅವಳ ಕಡೆಗೇ ಹೋಗುತ್ತಿತ್ತು. ಅವರಮ್ಮನಿಗೆ ತಮ್ಮ ದುಗುಡವನ್ನು ಎಷ್ಟು ಹೇಳಿದರೂ ಸಾಲದು. ಅವರ ದುಃಖ ಅಕ್ಷಯವೆನಿಸುತ್ತಿತ್ತು. ಅವರಪ್ಪ ಹೆಂಡತಿಯ ಮಾತಿಗೆ ತಲೆ ಅಲ್ಲಾಡಿಸುತ್ತ ಅಲ್ಲೊಂದು ಇಲ್ಲೊಂದು ತಮ್ಮ ಅನಿಸಿಕೆ ಸೇರಿಸುತ್ತ ಕುಳಿತಿರುತ್ತಿದ್ದರು. ಅವರಿಬ್ಬರನ್ನು ಸಮಾಧಾನ ಮಾಡುತ್ತ ಮೆಲ್ಲಗೆ ಸಂಜು  ಅವನ ಹಾಗೂ ಸಂದೀಪನ ವಿಚಾರವನ್ನು ಅವರ ಮುಂದೆ ಇಡುತ್ತ ಬಂದ. ಹೇಗಾದರೂ ಮಾಡಿ ಅವಳನ್ನು ಇನ್ನು ಕೊರಗಲು ಬಿಡಬಾರದು ಆದಷ್ಟು ಬೇಗ ಈ ಕೂಪದಿಂದ ಹೊರ ತೆಗೆಯಬೇಕು. ನೀವು ಹೂಂ ಅಂದರೆ ಸಾಕು ಅವಳಿಗೆ ಬೇಕಾದರೇ ಅಮೆರಿಕಾದಲ್ಲಿರುವ ಹುಡುಗನನ್ನು ಹುಡುಕುತ್ತೇವೆ ನಾವಿಬ್ಬರು. ಹೀಗೆ ಮೆಲ್ಲಗೆ ಅವರಿಬ್ಬರನ್ನು ಆ ಕೂಪದಿಂದ ಹೊರ ಬಂದು ಮತ್ತೆ ಭವಿಷ್ಯದ ಕಡೆಗೆ ಮುಖ ಮಾಡುವಂತೆ ಮಾಡಿದ. ಅವರಲ್ಲೂ ಒಂದು ಪುಟ್ಟ ಆಸೆ ಚಿಗುರಲಾರಂಬಿಸಿತು.

ಸಂದೀಪ ಕಳುಹಿಸಿದ್ದ ಅವನ ಪ್ರವಾಸದ ಫೋಟೋಗಳಲ್ಲಿ ಸುಮನಳನ್ನು ನೋಡಿ ದಂಗಾಗಿದ್ದ ಸಂಜು. ಅವಳ ಹೊಳೆಯುವ ಕಣ್ಣೆಲ್ಲಿ? ನಗುವ ತುಟಿಗಳೆಲ್ಲಿ? ಹುಡುಕಿ ಸೋತಿದ್ದ. ಕಳೆಗುಂದಿದ ಮುಖದಲ್ಲಿ ಸೋತ ಭಾವನೆ ಅವನ್ನನ್ನು ಬಹಳವಾಗಿ ನೋಯಿಸಿತ್ತು. ಈಗ ವಾಸ್ತವದಲ್ಲೂ ಅವಳ ಸುತ್ತ ಒಂದು ನೋವಿನ ಛಾಯೆ ಅವಳನ್ನು ಆವರಿಸಿದಂತೆ ಇತ್ತು, ಅವಳನ್ನು ಹಿಂಬಾಲಿಸಿವಂತೆ ತೋರುತ್ತಿತ್ತು. ಅವಳು ಎಲ್ಲರ ಜೊತೆ ನಗುತ್ತಲೇ ಮಾತಾಡಿದರೂ ಕಣ್ಣು ಮಾತ್ರ ನಗುತ್ತಿರಲಿಲ್ಲ. ಅವಳ ಅವ್ಯಕ್ತವಾದ ನೋವಿನ ನೆರಳು ಅದರಲ್ಲಿ ನಿರಂತರವಾಗಿ ಮನೆ ಮಾಡಿತ್ತು. ಇನ್ನು ಮದುವೆಯ ಪ್ರಸ್ತಾಪ ಮಾಡುವುದು ಹೇಗೆ ಅವಳ ಮುಂದೆ ಎಂದು ಬಹಳವಾಗಿ ತೊಳಲಾಡಿದ. ಯೋಚಿಸಿ ಕೊನೆಗೆ ಒಂದು ಉಪಾಯ ತೋರಿತು. ಮೂವರನ್ನು ಅಮೆರಿಕಾಗೆ ಕರೆದುಕೊಂಡು ಹೋಗುವುದು. ಎಲ್ಲರಿಗೂ ಹೊಸ ವಾತಾವರ್ಣ. ಅದರಲ್ಲಿ ಅವಳ ಮರುಮದುವೆಯ ಪ್ರಸ್ತಾಪ ಮಾಡುವುದು ಎಂದು ಯೋಚಿಸಿ ಎಲ್ಲರಿಗೂ ಅಮೆರಿಕಾಗೆ ಬರಲು ಅಹ್ವಾನಿಸಿದ. ಸುಮನ್ ತಾನು ಬರುವುದಿಲ್ಲ ಆದರೆ ಅಮ್ಮ ಅಪ್ಪನನ್ನು ಕರೆದುಕೊಂಡು ಹೋಗು. ಅವರಿಗೆ ಒಂದು ಛೇಂಜ್ ಬೇಕಾಗಿದೆ ಎಂದು ಅವನಿಗೇ ಬುದ್ಧಿ ಹೇಳಿದಳು. ಎಷ್ಟು ಪ್ರಯತ್ನಪಟ್ಟರೂ ಅವಳು ಒಪ್ಪಲಿಲ್ಲ. ಏನೋ ಮಾಡಲು ಹೋಗಿ ಏನೋ ಆಗಿತ್ತು.  ಸಂಜು ಯೋಚನೆ ಮಾಡಿದ. ಅವಳಿಗೆ ಒಂಟಿ ಜೀವನದ ಬಿಸಿ ತಾಕಿದರೆ ಏನಾದರು ಮರುಮದುವೆಯ ಯೋಚನೆ ಮಾಡುವಳೇನೋ. ಅಪ್ಪ ಅಮ್ಮ ಇಲ್ಲದೆ ತಮ್ಮಂದಿರೂ ಇಲ್ಲದೆ ಒಬ್ಬಳೆ ಬಿಕೋ ಎನ್ನುವ ಮನೆ. ಬೆಳಗ್ಗೆಯಾದರೆ, ಸಂಜೆಯಾದರೆ, ಸಂತಸವಾದರೆ, ನೋವಾದರೆ ನಾಲ್ಕು ಗೋಡೆಗಳೇ ಅವಳಿಗೆ ಸಂಗಾತಿ. ಇಂತಹ ಪರಿಸ್ಥಿತಿಯಲ್ಲಿ ಅವಳು ತನ್ನ  ಭವಿಷ್ಯದ ಬಗ್ಗೆ ಯೋಚನೆ ಮಾಡುವಳೇನೋ. ಅವನ ಯೋಚನೆ ತಿಳಿಯದ ಸುಮನ್ ಅವಳಮ್ಮ ಅಪ್ಪನ್ನನ್ನು ಅಮೆರಿಕಾಗೆ ಹೋಗಲು ಮನವೋಲಿಸಿದಳು.

ಮಗ ಬಂದ ಎಂದು ಸಂಭ್ರಮದಿಂದ ರಾಜಲಕ್ಷ್ಮಿ ಅವನಿಗೆ ಅದು ಇಷ್ಟ ಇದು ಇಷ್ಟ ಎಂದು ನೆಪ ಮಾಡಿ ಸುಮನ್‍ಗೆ ಇಷ್ಟವಾದ ಸಿಹಿ ತಿಂಡಿ, ಚಕ್ಕುಲಿ, ಕೋಡಬಳೆ ಮಾಡಿ ಸಂತಸಪಟ್ಟರು. ಸುಮನ್ ಕೂಡ ಸಂತೋಷದಿಂದಲೇ ಅವರ ನೆರವಿಗೆ ನಿಲ್ಲುತ್ತಿದ್ದಳು. ಇವತ್ತು ಆ ದೇವಸ್ಥಾನಕ್ಕೆ ಹೋಗೋಣ, ಇವತ್ತು ಈ ಸಿನಿಮಾ, ಒಂದು ದಿನ ಬೇಲೂರು ಹಳೇಬೀಡು, ಇನ್ನೊಂದೆರೆಡು ದಿನ ಶೃಂಗೇರಿ, ಧರ್ಮಸ್ಥಳ ಎನ್ನುತ್ತ ಎಲ್ಲರು ಓಡಾಡಿ ಸಂತಸಪಟ್ಟರು. ಕೊನೆಗೆ ಅಮ್ಮ ಅಪ್ಪನಿಗೆ ಅಮೆರಿಕಾಕ್ಕೆ ಬರಲು ಟಿಕೆಟು ಕಳಸುತ್ತೇನೆ ನನ್ನ ಪ್ರಾಜೆಕ್ಟ್ ಮುಗಿಯುವದ್ರೊಳಗೆ ಎಂದು ಹೇಳಿ ಅಮೆರಿಕಾಗೆ ಹಾರಿದ ಸಂಜು.

**

ಹೆತ್ತ ಕರುಳು ಭಾರಿ ಏಟಿನಿಂದ ಚೇತರಿಸಿಕೊಳ್ಳುತ್ತಿದ್ದ ಮಗಳನ್ನು ಒಬ್ಬಳನ್ನೆ ಬಿಟ್ಟು ಹೋಗಲು ಮನಸ್ಸು ಬರದೆ ಒಂದು ದಿನ ಅಶ್ವತನಾರಾಯಣರು ಮಗಳನ್ನು ಕೂರಿಸಿಕೊಂಡು ಸೂಕ್ಷ್ಮವಾಗಿ “ಮರಿ ಇನ್ನು ಭವಿಷ್ಯದ ಯೋಚನೆ ಮಾಡು. ಆದುದ್ದನ್ನೇ ಯಾಕಾಯ್ತು ಹೇಗಾಯ್ತು ನನಗೆ ಯಾಕಾಯ್ತು ಅಂತ ಯೋಚನೆ ಮಾಡುವುದು ಇನ್ನು ಸಾಕು. ವಿಧಿ ಬರಹ ಅದನ್ನು ಯಾರಿಂದಲೂ ತಪ್ಪಿಸಲು ಆಗದು. ನೀನು ನಮಗೆ ಆಸರೆಯಾಗಿ ಹೀಗೇ ಇದ್ದು ಬಿಡ್ತೀನಿ ಅಂತ ಮಾತ್ರ ನಿರ್ಧಾರ ಮಾಡಬೇಡ. ನೀನು ಏನು ನಿರ್ಧಾರ ಮಾಡಿದ್ರು ಸರಿ, ನಾವು ಅದನ್ನ ಒಪ್ಪುತ್ತೇವೆ. ಆದರೆ ನಿಂದೇ ಒಂದು ಜೀವನ ಕಲ್ಪಿಸ್ಕೋ ಹೊಸ ಜೀವನ ನಿರ್ಮಾಣ ಮಾಡು ನಾವೇ ನಿನಗೆ ಯಾವತ್ತೂ ಆಸರೆಯಾಗಿ ನಿಲ್ತೀವಿ” ಹೇಳಿ ಕಣ್ಣು ಒರೆಸಿಕೊಂಡರು.  . 

“ಹೂಂ ಅಪ್ಪ” ಸುಮನ್ ತಲೆದೂಗಿದಳು. ಸ್ವಲ್ಪ ಸಮಯದ ನಂತರ ತಾನೇ ಮಂದುವರೆಸಿದಳು “ನೀವು ನಿಶ್ಚಿಂತೆಯಿಂದ ಅಮೆರಿಕಾಗೆ ಹೋಗಿ ಬನ್ನಿ. ಪಾಪ ಅವರಿಬ್ರು ಅಷ್ಟು ಕರೀತಾ ಇದಾರೆ. ಇನ್ನೂ ಪಾಸ್‍ಪೋರ್ಟ್ ಮಾಡಿಸಿಲ್ಲ. ಅದು ಬಂದು, ವೀಸಾ ಬಂದು ನೀವು ಹೋಗೋದ್ರಲ್ಲಿ ನನ್ನ ಎಮ್.ಟೆಕೇ ಮುಗಿದು ಹೋಗತ್ತೇನೋ. ನೀವು ಹೋದಾಗ ಚೆನ್ನಾಗಿ ಯೋಚನೆ ಮಾಡಿ ಖಂಡಿತ ಒಂದು ನಿರ್ಧಾರಕ್ಕೆ ಬರ್ತೀನಿ. ಸರೀನಾ? ಈಗ ಪಾಸ್ಪೋರ್ಟ್‌ಗೆ ಅರ್ಜಿ ತರ್ತೀನಿ ಪೋಸ್ಟ್ ಆಫೀಸಗೆ ಹೋಗಿ” ಸುಮನ್ ಹೊರ ನಡೆದಳು. ದಾರಿ ಉದ್ದಕ್ಕು ತಲೆ ಬಗ್ಗಿಸಿ ಯೋಚಿಸುತ್ತಲೇ ಹೋದಳು. ಅಮ್ಮ ಅಪ್ಪ ತಾನು ಮರುಮದುವೆ ಆಗಬೇಕು ಎಂದು ಹೇಳುತ್ತಿದ್ದಾರೆ ಅಷ್ಟು ಅರ್ಥವಾಗಿತ್ತು ಅವಳಿಗೆ.

ಯೋಚನೆಯಲ್ಲಿ ಮಗ್ನಳಾಗಿದ್ದ ಸುಮನ್ “ಹಲೋ ಮ್ಯಾಮ್ ” ಕೇಳಿ ಬೆಚ್ಚಿ ಬಿದ್ದಳು.

“ಓ ಹಲೋ ಸ್ವರೂಪ ಏನು ಇಲ್ಲಿ?” 

“ಪಾಸ್ಪೋರ್ಟ್ ಅರ್ಜಿ ಫಾರಮ್ ತರಕ್ಕೆ ಬಂದೆ ಮ್ಯಾಮ್” ಉತ್ತರಿಸಿದಳು ಸ್ವರೂಪ. “ಮ್ಯಾಮ್ ನನಗೆ ಮದುವೆ ಗೊತ್ತಾಗಿದೆ. ವಿಪ್ರೋದಲ್ಲಿ ಕೆಲಸ ನನ್ನ ಫಿಯಾನ್ಸಿಗೆ. ಮದುವೆ ಆದ ಮೇಲೆ ಯು.ಕೆ ಗೆ ಪ್ರಾಜೆಕ್ಟ್ ಮೇಲೆ ಇಬ್ಬರು ಹೋಗ್ತಾ ಇದೀವಿ. ಪ್ರಾಜೆಕ್ಟ್ ಅವರಿಗೆ, ನಾನು ಅವರ ಜೊತೆ.”

“ಕಂಗ್ರಾಜ್ಯೂಲೇಷನ್ಸ್ ಸ್ವರೂಪ. ತುಂಬ ಸಂತೋಷ” ಸುಮನ್ ಸ್ವರೂಪನ ಕೈ ಕುಲಕಿ ಅಭಿನಂಧಿಸಿದಳು. “ಏನ್ ಆನ್ನತ್ತೆ ಕಾಲೇಜು?”

“ಹಾಗೇ ಇದೆ ಮ್ಯಾಮ್. ಏನೂ ಬದಲಾಗಿಲ್ಲ. ನಿಮ್ಮ ವಿದ್ಯಾರ್ಥಿಗಳು ಮಾತ್ರ ನಿಮ್ಮನ್ನ ತುಂಬ ಜ್ಞಾಪಿಸಿಕೊಳ್ತಾರೆ. ಮ್ಯಾಮ್ ನೀವು ಹೇಳಿಕೊಟ್ರಲ್ಲ ಆ ವಿಷಯದಲ್ಲಿ ಎಂಬತ್ತೈದು ಪರಸೆಂಟ್ ಫಲಿತಾಂಶ ಬಂತು. ವಿಶ್ವವಿದ್ಯಾಲಯದ ಫಲಿತಾಂಶ ಅರವತ್ತು ಪರಸೆಂಟ್. ನೀವು ತುಂಬ ಮುತವರ್ಜಿಯಿಂದ ಪಾಠ ಮಾಡಿದ್ರಿ ಅಂತ ಆ ಹುಡುಗರು ಯಾವಗಲೂ ಹೇಳ್ತಾ ಇರ್ತಾರೆ.”

ಸುಮನ್‍ಗೆ ಬಹಳ ಸಂತೋಷವಾಯಿತು. ಅಷ್ಟು ಕಷ್ಟಪಟ್ಟಿದಕ್ಕೆ ಫಲ ಸಿಕ್ಕಿತು. ಹೀಗೇ ಮಾತಾಡುತ್ತ ಇಬ್ಬರು ಅರ್ಜಿ ತೆಗೆದುಕೊಂಡು ಹೊರ ಬಿದ್ದರು. ಸ್ವರೂಪ ಬೈ ಹೇಳಿ ಕಾಲೇಜಿನತ್ತ ಹೊರಟಳು. ಸುಮನ್ ಮನೆಗೆ ಬಂದು ಅಮ್ಮ ಅಪ್ಪನ ಕೈಯಲ್ಲಿ ಅದನ್ನು ತುಂಬಿಸಿ ಅವರ ಫೋಟೋ ತೆಗೆಸಿ ಅದಕ್ಕೆ ಲಗತ್ತಿಸಿ ಬೇಕಾದ ಕಾಗದ ಪತ್ರಗಳನ್ನು ತಯಾರು ಮಾಡಿ ಎಲ್ಲವನ್ನು ಮತ್ತೆ ಪೋಸ್ಟ್ ಆಫೀಸಿನಲ್ಲಿ ಕೊಟ್ಟು ಬಂದಳು ಒಂದು ವಾರದ ನಂತರ.

********

ಈ ಕಾದಂಬರಿಯ ಹಿಂದಿನ ಅಧ್ಯಾಯವನ್ನು ಓದಲು ಇಲ್ಲಿ ಕ್ಲಿಕ್ಕಿಸಿ: http://surahonne.com/?p=38562

(ಮುಂದುವರಿಯುವುದು)

-ಸುಚೇತಾ ಗೌತಮ್.‌

8 Responses

  1. ಕಾದಂಬರಿ ಯ ನಾಯಕಿಗೆ ಗಂಡನಿಂದ ಕಾನೂನು ರೀತಿಯಲ್ಲಿ ಬೆಡುಗಡೆ..ವಿದೇಶದಿಂದ ಸೋದರ ನ ಆಗಮನ ..ಮರುಮದುವೆಗಾಗಿ ಮನೆಯವರ ಪ್ರಯತ್ನ.. ಈ ಅಂತರದಲ್ಲಿ..ಪೋಷಕ ರನ್ನು ಒಪ್ಪಿಸಿ ಸೋದರನೊಡನೆ ಕಳಿಸುವಿಕೆ..ಬರುವಷ್ಟರಲ್ಲಿ ನಿರ್ಧಾರ ..ತಿಳಿಸು ತ್ತೇನೆಂಬ..ಮಾತುಗಳು..ಕುತೂಹಲ ಕೆರಳಿಸಿವೆ ಗೆಳತಿ ಸುಚೇತ

  2. ಶಂಕರಿ ಶರ್ಮ says:

    ಸುಮನ್ ಳ ಜೀವನ ಒಂದು ಘಟ್ಟಕ್ಕೆ ತಲಪಿದುದು ಕಂಡು ನೆಮ್ಮದಿಯೆನಿಸಿತು…ಎಂದಿನಂತೆ ಸುಂದರ ನಿರೂಪಣೆ …ಧನ್ಯವಾದಗಳು ಸುಚಿತ್ರಾ ಮೇಡಂ.

  3. ನಯನ ಬಜಕೂಡ್ಲು says:

    ಬದುಕು ಎಲ್ಲೂ ನಿಲ್ಲುವುದಿಲ್ಲ. ನೋವಿರಲಿ, ನಲಿವಿರಲಿ ಅದರ ಪಾಡಿಗದು ಸಾಗುತ್ತಲೇ ಇರುತ್ತದೆ. ಮನಸು ಮಾತ್ರ ಕನ್ನಡಿಯಂತೆ, ಒಡೆದು ಚೂರಾದರೆ ಮತ್ತೆ ಮೊದಲಿನ ರೂಪ ಬರುವುದು ಕಷ್ಟ.

  4. Padma Anand says:

    ಸುಂದರ ಬದುಕಿನ ಆಸೆಯಿಂದ ಆದ ಮದುವೆ, ಬಂಧನವಾಗಿ ಮಾರ್ಪಟ್ಟಾಗ ಅನುಭವಿಸಿದ ಯಾತನೆಗಳಿಂದ ಸುಮನ್ ಗೆ ಬಿಡುಗಡೆ ದೊರೆತದ್ದು ಓದುಗರಿಗೂ ನಿರಾಳವಾದಂತಾಯಿತು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: