ಅವಿಸ್ಮರಣೀಯ ಅಮೆರಿಕ – ಎಳೆ 60

Spread the love
Share Button
ಹಡ್ಸನ್ ನದಿ ತೀರದಲ್ಲಿ

(ಹಿಂದಿನ ಸಂಚಿಕೆಯಿಂದ ಮುಂದುವರಿದುದು…)
ನ್ಯೂಯಾರ್ಕ್ ಬೀದಿಯಲ್ಲಿ ನಡೆಯುತ್ತಾ….

ಶೇರು ಮಾರುಕಟ್ಟೆಯ ಪ್ರತಿನಿಧಿಯಾದ ದುರುಗುಟ್ಟುವ ಗೂಳಿಯಿಂದ ಬೀಳ್ಕೊಂಡು ಸುಂದರ ರಸ್ತೆಯಲ್ಲಿ ಮುಂದಕ್ಕೆ ನಡೆಯುತ್ತಿದ್ದಾಗ ವಿಚಿತ್ರವಾದ ಸನ್ನಿವೇಶವೊಂದು ಎದುರಾಯಿತು. ಸಾಕಷ್ಟು ಅಗಲವಾಗಿರುವ ಕಾಲುದಾರಿಯಲ್ಲಿ ಅಲ್ಲಲ್ಲಿ  ಬಹಳ ಬಿಸಿಯಾದ ಗಾಳಿಯು, ಮುಚ್ಚಿರುವ ಮ್ಯಾನ್ ಹೋಲ್ ಮುಚ್ಚಳದ ಎಡೆಯಿಂದ ಬುಸುಗುಟ್ಟುತ್ತಾ ರಭಸದಿಂದ ಹೊರಬರುವುದು ಕಾಣಿಸಿತು. ನನಗೆ ಭಯದೊಂದಿಗೆ, ಇದು ಎಲ್ಲಿಂದ, ಯಾಕೆ ಬರುವುದೆಂದು ಅರ್ಥವಾಗಲಿಲ್ಲ. ಮಗಳಲ್ಲಿ ಕೇಳಿದಾಗ ತಿಳಿದು ಬಂದ ಸಂಗತಿ ನಿಜವಾಗಿಯೂ ಕುತೂಹಲಕಾರಿಯಾಗಿದೆ. ಭೂಗರ್ಭದಲ್ಲಿರುವ ಸಬ್ ವೇಯ ಸುರಂಗದೊಳಗೆ; ರೈಲು ಸಂಚಾರದಿಂದ, ಪ್ರಯಾಣಿಕರ ಓಡಾಟದಿಂದ, ಶಾಖ ನಿಯಂತ್ರಣ ಯಂತ್ರಗಳಿಂದ ಹೀಗೆ ಹಲವಾರು ತರಹಗಳಲ್ಲಿ ಉತ್ಪತ್ತಿಯಾಗುವ ಬಿಸಿಗಾಳಿಯನ್ನು ಇಂತಹ ರಂಧ್ರಗಳ ಮೂಲಕ ಹೊರಬಿಡಲಾಗುವುದು. ನಡೆದಾಡುವಾಗ ಗಮನಿಸದೆ ಎಲ್ಲಿಯಾದರೂ ಅದನ್ನು ಬರಿಗಾಲಲ್ಲಿ ಮೆಟ್ಟಿಬಿಟ್ಟರಂತೂ ಮತ್ತೆ ಬೇಡ ಫಜೀತಿ! ನಾನು ಶೂ ಹಾಕಿದ್ದರಿಂದ ಬಚಾವಾದೆ ಅನ್ನಿ! ಅಷ್ಟರೊಳಗೆ ನಮ್ಮೊಡನಿದ್ದ ಮೂರು ವರುಷದ ಮೊಮ್ಮಗ ಕಿಟಾರನೆ ಕಿರುಚಿದ. ಬರುತ್ತಿರುವ ಬಿಸಿಗಾಳಿಯನ್ನು  ಪರೀಕ್ಷಿಸಲು ಹೋಗಿ ಕೈ ಬೆರಳು ಸುಟ್ಟುಕೊಂಡಿದ್ದ. ನನಗೆ ನಿಜವಾಗಿಯೂ ಇಲ್ಲಿಯವರ ಬೇಜವಾಬ್ದಾರಿತನಕ್ಕೆ ಬೇಸರವೆನ್ನಿಸಿತು. ಇಂತಹ ಅಪಾಯಕಾರಿ  ಅನಿಲವನ್ನು, ಎತ್ತರದ ಕೊಳವೆಗಳಲ್ಲಿ ಮೇಲಕ್ಕೆ ಸುಸೂತ್ರವಾಗಿ ಬಿಡಬಹುದಿತ್ತು ಎನಿಸಿತು. ಆ ಬಳಿಕ, ಅಕ್ಕಪಕ್ಕದ ಸುಂದರ ಗಗನಚುಂಬಿ ಕಟ್ಟಡಗಳನ್ನು ಕಾತರದ ಕಣ್ಣುಗಳಿಂದ ನೋಡುವುದನ್ನು ಬಿಟ್ಟು, ನೆಲದ ಮೇಲೆ ದೃಷ್ಟಿ ನೆಟ್ಟು ಜಾಗರೂಕಳಾಗಿ ನಡೆಯುವುದರ ಜೊತೆಗೆ ಮಗುವನ್ನೂ ಸುರಕ್ಷಿತವಾಗಿ ನೋಡಿಕೊಳ್ಳುವ ಜವಾಬ್ದಾರಿ ಹೊತ್ತೆನೆನ್ನಿ. ಅತಿವಿರಳ ಜನ ಸಂಚಾರ ಮತ್ತು ವಾಹನ ಸಂಚಾರವಿರುವ ರಸ್ತೆ ಪಕ್ಕ ಸ್ವಲ್ಪ ಹೊತ್ತು ನಡೆಯುತ್ತಾ ನಾವು ವಿಶೇಷವಾದ ಸ್ಥಳವೊಂದಕ್ಕೆ ತಲಪಿದೆವು…ಅದುವೇ ಸಂಯುಕ್ತ ರಾಷ್ಟ್ರದ ಅಸೆಂಬ್ಲಿಯ ಪ್ರಧಾನ ಕಚೇರಿ.

ಸಂಯುಕ್ತ ರಾಷ್ಟ್ರದ ಅಸೆಂಬ್ಲಿಯ ಪ್ರಧಾನ ಕಚೇರಿ.

ಈ ಬಹುದೊಡ್ಡ ಕಟ್ಟಡವು 1951ರಲ್ಲಿ ನಿರ್ಮಿಸಲಾಗಿದ್ದು, ಸುಮಾರು 18ಎಕರೆಗಳಷ್ಟು ಪ್ರದೇಶವನ್ನು ಆವರಿಸಿದೆ.  ಅತ್ಯಂತ ಜಾಗರೂಕತೆಯ ತಪಾಸಣೆಯ ಬಳಿಕ, ಸಮಯದ ಮಿತಿಯೊಳಗೆ, ಈ ಕಟ್ಟಡವನ್ನು ನೋಡಲು ಒಳಗೆ ಬಿಡುವರು. ಕಟ್ಟಡದ ಮುಂಭಾಗದಲ್ಲಿ ಬಹು ವಿಸ್ತಾರವಾದ ಬಯಲು, ಒಳಗೆ ಅಡಿ ಇಡುತ್ತಿದ್ದಂತೆಯೇ ಎಡ ಪಕ್ಕದಲ್ಲಿರುವ ಹೊಳೆಯುವ ಲೋಹದ ವಿಶೇಷವಾದ ಬಹು ದೊಡ್ಡ ಗೋಲಾಕೃತಿಯೊಂದು ವಿಶೇಷವಾಗಿ ಗಮನ ಸೆಳೆಯುತ್ತದೆ. ಇದು, ಸಂಯುಕ್ತ ರಾಷ್ಟ್ರದ ಭೂಪಟದ ಮಾದರಿಯಂತೆ ತೋರುತ್ತದೆ. ಬಲಭಾಗದಲ್ಲಿರುವ ಕಟ್ಟಡದ ಮುಂಭಾಗದಲ್ಲಿ ಹತ್ತಾರು ವಿವಿಧ ಬಣ್ಣಗಳ ಧ್ವಜಗಳು ಎತ್ತರದ ಧ್ವಜ ಸ್ತಂಭಗಳಲ್ಲಿ ರಾಷ್ಟ್ರದ ಹಿರಿಮೆಯನ್ನು ಎತ್ತಿ ಹಿಡಿಯುವಂತೆ ಹಾರಾಡುತ್ತಿವೆ. ಕಟ್ಟಡದ ಒಳಗಡೆ ಅಡಿ ಇಡುತ್ತಿದ್ದಂತೆಯೇ, ವಿಶಾಲವಾದ ಹಜಾರದ ಎಡಭಾಗದಲ್ಲಿ ಮೊದಲನೇ ಅಂತಸ್ತಿಗೆ ಏರಿ ಹೋಗಲು ಚಂದದ ಮೆಟ್ಟಲುಗಳನ್ನು ಕಾಣಬಹುದು. ಅದರ ಕೆಳಗಡೆಯಲ್ಲಿ ಸುತ್ತಲೂ ಹಲವಾರು ವ್ಯಾಪಾರಿ ಮಳಿಗೆಗಳು ಗಮನಸೆಳೆಯುತ್ತವೆ. ನಾವು ಅದರೊಳಗೆ ಹೋಗಿ ನೋಡಿದಾಗ ಅತ್ಯಂತ ಸುಂದರ, ಬೆಲೆಬಾಳುವ ಕಲಾಕೃತಿಗಳು, ಕರಕುಶಲವಸ್ತುಗಳು ಹೊನ್ನಬೆಳಕಿನಲ್ಲಿ ಹೊಳೆಯುತ್ತಿದ್ದವು. ಪ್ರಪಂಚದಾದ್ಯಂತದಿಂದ ಸಂಗ್ರಹಿಸಿದ ವಿಶೇಷವಾದ ನಾಜೂಕಾದ ವಸ್ತುಗಳನ್ನು ನೋಡಿ ಆಶ್ಚರ್ಯವಾಯಿತು.  ಇದು ಬಹುಅಂತಸ್ತಿನ ಕಟ್ಟಡವಲ್ಲದಿದ್ದರೂ, ಅತ್ಯಂತ ಆಕರ್ಷಕ ವಿನ್ಯಾಸವನ್ನು ಹೊಂದಿದೆ. ಈ ಸುಂದರ ಸೌಧವು, 165ಅಡಿ ಉದ್ದ ಹಾಗೂ 115 ಅಡಿ ಅಗಲದ, 1800 ಆಸನಗಳುಳ್ಳ ಅಸೆಂಬ್ಲಿ ಹಾಲ್ ನ್ನು ಒಳಗೊಂಡಿದೆ. ಹಜಾರದಲ್ಲಿರುವ ಮೆಟ್ಟಲನ್ನೇರಿ, ಮೇಲಿನ ಅಂತಸ್ತಿನ ಹಜಾರದಲ್ಲಿ ಹೋಗುತ್ತಿದ್ದಂತೆಯೇ ಒಂದು ಕಡೆಯಲ್ಲಿರುವ ಗವಾಕ್ಷಿಯ ಮೂಲಕ, ನೆಲ ಅಂತಸ್ತಿನಲ್ಲಿರುವ ವಿಶಾಲವಾದ ಅಸೆಂಬ್ಲಿ ಹಾಲ್ ನ್ನು ಅಳಿಯ ತೋರಿಸಿದ. ಅಂದು ಕಾರ್ಯಕಲಾಪವಿಲ್ಲದ ದಿನವಾದ್ದರಿಂದ ಅದನ್ನು ವೀಕ್ಷಿಸುವ ಅವಕಾಶದಿಂದ ವಂಚಿತರಾದೆವು.

ಆವರಣದೊಳಗಡೆಗೆ ಸುಮಾರು ಎರಡು ತಾಸುಗಳನ್ನು  ಕಳೆದು, ಕೈಯಲ್ಲಿರುವ ತಿಂಡಿಗಳನ್ನು ಖಾಲಿ ಮಾಡಿ ಅಲ್ಲಿಂದ ಹೊರಟಾಗ ಅದಾಗಲೇ ಮಧ್ಯಾಹ್ನ ಹೊತ್ತು… ನಮ್ಮ ಸವಾರಿ ಮತ್ತೊಂದು ವಿಶೇಷ ತಾಣಕ್ಕೆ ಹೊರಟಿತು… ಅದುವೇ Rockerfeller Centre.

Rockerfeller Centre.

 48 ಮತ್ತು 51ನೇ ನಂಬರಿನ ರಸ್ತೆಗಳು ಹಾದುಹೋಗುವ ಹಾಗೂ ಸುಮಾರು 22 ಎಕರೆಗಳಷ್ಟು ವಿಸ್ತಾರವಾದ ಪ್ರದೇಶದಲ್ಲಿ ಆವರಿಸಿಕೊಂಡಿರುವ ವಾಣಿಜ್ಯ ಸಂಕೀರ್ಣಗಳ ಒಡೆಯನಾದ  Rockerfeller, ಅಮೆರಿಕದ ಶ್ರೀಮಂತರ ಪಟ್ಟಿಯಲ್ಲಿ ಮೊದಲನೇ ಸ್ಥಾನವನ್ನು ಪಡೆದಿರುವನು. ಸುಮಾರು 19 ವಾಣಿಜ್ಯ ಮಳಿಗೆಗಳನ್ನು ಹೊಂದಿರುವ ಈ ಕಟ್ಟಡ ಸಮೂಹವು 1930ರಿಂದ 1939ರ ಮಧ್ಯೆ ನಿರ್ಮಾಣಗೊಂಡಿತು. ಇದರಲ್ಲಿರುವ ಪ್ರಮುಖ ಕಟ್ಟಡವು 54 ಮಹಡಿಗಳನ್ನು ಹೊಂದಿದ್ದು ಅತ್ಯಂತ ಆಕರ್ಷಕವಾಗಿದೆ. ಮುಖ್ಯರಸ್ತೆಯಿಂದ ವಾಣಿಜ್ಯ ಸಂಕೀರ್ಣದತ್ತ ಹೋಗುವ ಸಾದಾ ರಸ್ತೆಯ ಎರಡೂ ಪಕ್ಕಗಳಲ್ಲಿ, ಟೊಂಗೆಗಳನ್ನು ವಿಸ್ತಾರವಾಗಿ ಪಸರಿಸಿ ನೆರಳು ನೀಡುವ ಸೊಗಸಾದ ಪುಟ್ಟ ಮರಗಳು, ಅವುಗಳ ಕೆಳಗಡೆಗೆ ಅಲ್ಲಲ್ಲಿ ಆಯಾಸ ಪರಿಹಸಿಕೊಳ್ಳಲು ಇರಿಸಿದ ಸಿಮೆಂಟಿನ ಬೆಂಚುಗಳು ಸ್ವಲ್ಪ ಹೊತ್ತು ಕುಳಿತು ಸುಧಾರಿಸಿಕೊಳ್ಳಲು ಕೈಬೀಸಿ ಕರೆಯುತ್ತಿದ್ದವು. ಸಹಜ ವಾತಾವರಣದಲ್ಲಿ ತಿಂಡಿ ತಿನ್ನುತ್ತಾ, ಆಟವಾಡುತ್ತಾ ನಲಿದಾಡುವ ಮಕ್ಕಳ ಕಲರವವು ಅಲ್ಲಿಯ  ಲವಲವಿಕೆಯನ್ನು ಇಮ್ಮಡಿಸಿತ್ತು. ಒಳರಸ್ತೆಯ ಕೊನೆಯಲ್ಲಿ 54 ಮಹಡಿಗಳ ಆಕಾಶದೆತ್ತರ ಸೆಟೆದು ನಿಂತಿರುವ ಕಟ್ಟಡವನ್ನು ಕಂಡು ದಿಗ್ಮೂಢಳಾದೆ! ಕೆಳಗಡೆಗೆ, ಕಟ್ಟಡದ ಮುಂಭಾಗದಲ್ಲಿ ಸುಂದರ ಕಾರಂಜಿಯಿಂದ ಚಿಮ್ಮಿವ ನೀರು, ಅಲ್ಲಿರುವ ಬಂಗಾರದ ವರ್ಣದ ಲೋಹದ ಪ್ರತಿಮೆಯ ಮೇಲೆ ಬಿದ್ದು ಸುಂದರ ಲೋಕವನ್ನೇ ಸೃಷ್ಟಿಸಿತ್ತು. ಅದರ ಪಕ್ಕದಲ್ಲಿರುವ ಹೂದೋಟವು ಬಹುವರ್ಣ ಪುಷ್ಪಗಳಿಂದ ಕಂಗೊಳಿಸುತ್ತಿತ್ತು. ಬೀಸುವ ತಂಗಾಳಿಗೆ ಮೈಯೊಡ್ಡಿ, ಪ್ರಕೃತಿ ಮಡಿಲಲ್ಲಿ ಆಗಸದೆತ್ತರ ಮೈಚಾಚಿ ನಿಂತಿರುವ ಮಾನವ ನಿರ್ಮಿತ ಅದ್ಭುತವನ್ನು ವೀಕ್ಷಿಸುತ್ತಾ ನಿಂತವಳಿಗೆ ಸಮಯ ಸರಿದ ಪರಿವೆಯೇ ಇಲ್ಲ…”ಇನ್ನು ಹೊರಡೋಣವೇ?” ಎಂದಾಗಲೇ ಎಚ್ಚರ! ಅದಾಗಲೇ ಸಂಜೆ ಗಂಟೆ ನಾಲ್ಕು.. ಮುಂದೆ ಪಯಣವಿತ್ತು…ಹಡ್ಸನ್ ನದಿ ತೀರದಲ್ಲಿರುವ ನಮ್ಮ ಕುಟುಂಬ ಸ್ನೇಹಿತರ ಮನೆಗೆ…

ಹಡ್ಸನ್ ನದಿ ತೀರದಲ್ಲಿ….

ಎರಡು ಪುಟ್ಟ ಮಕ್ಕಳ ಚೊಕ್ಕ ಸಂಸಾರದ  ಸ್ನೇಹಿತರ ಮನೆಯಲ್ಲಿ ಆದರೋಪಚಾರ ಸ್ವೀಕರಿಸಿ ಅಲ್ಲೇ ಪಕ್ಕದಲ್ಲಿರುವ ಹಡ್ಸನ್ ನದಿ ತೀರಕ್ಕೆ ನಮ್ಮ ನಡಿಗೆ ಸಾಗಿತು. ಭಾಸ್ಕರನು ದಿಗಂತದಂಚಿಗೆ ತಲಪುವ ಸಮಯ…ನೀಲಿಯಾಗಸ ಅದಾಗಲೇ ಹೊಂಬಣ್ಣಕ್ಕೆ ತಿರುಗಿತ್ತು. ಅಗಾಧ ವಿಸ್ತಾರದಲ್ಲಿ ಹಬ್ಬಿ ನಿಂತಿರುವ ನದಿಯ ಇನ್ನೊಂದು ದಂಡೆಯಲ್ಲಿರುವ ಬಹುಮಹಡಿಯ ಕಟ್ಟಡಗಳು, ಕತ್ತಲೆ ಬೆಳಕಿನಾಟದ ನಡುವೆ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿದ್ದವು. ನಮ್ಮ ಬದಿಯ ದಂಡೆಯು ಸರಕು ಸಾಗಾಣಿಕೆಯ  ಮಧ್ಯಮ ಗಾತ್ರದ ಹಡಗುಗಳು  ಲಂಗರು ಹಾಕುವ ವ್ಯವಸ್ಥೆಯನ್ನು ಹೊಂದಿತ್ತು. ಹಲವಾರು ವರುಷಗಳ ಹಿಂದೆ ಇದು ಉಪಯೋಗದಲ್ಲಿದ್ದರೂ, ಸದ್ಯದ ಪರಿಸ್ಥಿತಿಯಲ್ಲಿ ತನ್ನ ಹಳೆ ನೆನಪುಗಳನ್ನು, ಹರಿಯುವ ಅಗಾಧ ಜಲದಲ್ಲಿ ಹರಿಯಬಿಟ್ಟು,  ಮೌನವಾಗಿ ನಿಟ್ಟುಸಿರು ಬಿಡುತ್ತಾ ನಿಂತಿತ್ತು. ನದಿಯ ಅಡ್ಡಲಾಗಿ ಚಾಚಿ ನಿಂತಿದ್ದ ಅರ್ಧಸೇತುವೆಯು ಹತ್ತಾರು ಜನರಿಂದ ತುಂಬಿತ್ತು. ಸಂಜೆಯ ಸೂರ್ಯಾಸ್ತದ ಸೊಬಗನ್ನು ಸವಿಯುವವರು, ಜೋರಾದ ನಡಿಗೆಯಲ್ಲಿ ತೊಡಗಿಸಿಕೊಂಡವರು, ಮೀನು ಹಿಡಿಯಲು ತಮ್ಮ ಉದ್ದನೆಯ ಗಾಳವನ್ನು ನದಿ ನೀರಲ್ಲಿ ಬಿಟ್ಟು ಅಲುಗಾಡದೆ ಕುಳಿತವರು…ತಮ್ಮದೇ ಲೋಕದಲ್ಲಿ ವಿಹರಿಸಿದರೆ, ನಾವು ಅಲ್ಲಿರುವ ಬೆಂಚಿನಲ್ಲಿ ಕುಳಿತು ಸುಂದರ ಸೂರ್ಯಾಸ್ತವನ್ನು ಸವಿದೆವು…ಸುತ್ತಲೂ ಕತ್ತಲಾವರಿಸಿದರೂ ಏಳಲು ಮನಬಾರದು. ಸಾಮಾನ್ಯವಾಗಿ ಇಂತಹ ಪ್ರದೇಶಗಳಲ್ಲಿ ಜನರಿಗೆ ಪುಟ್ಟ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಅನುಕೂಲವಾಗುವಂತೆ ತೆರೆದ ಜಾಗಗಳನ್ನು ಬಾಡಿಗೆಗೆ ಕೊಡುವರು. ಇಲ್ಲಿ, ಕುಳಿತು ತಿಂಡಿ, ಪಾನೀಯಗಳ ಸೇವನೆಗೆ ಅನುಕೂಲತೆಯ ಜೊತೆಗೆ ಇತರ ಮೂಲಭೂತ ಸೌಕರ್ಯಗಳನ್ನೂ ಒದಗಿಸುವರು. ಹಾಗೆಯೇ, ನಾವು ಹಿಂತಿರುಗಿ ಬರುವಷ್ಟರಲ್ಲಿ ಅದಾಗಲೇ ಜಬರ್ದಸ್ತಾದ ಹುಟ್ಟುಹಬ್ಬದ ಪಾರ್ಟಿಯೊಂದು ಅಲ್ಲೇ ಪಕ್ಕದಲ್ಲಿ ನಡೆದಿತ್ತು. ಇದರಿಂದಾಗಿ ನಾವು ಹಾದು ಹೋಗುವ ದಾರಿಯು ಮುಚ್ಚಿಯೇ ಹೋಗಿತ್ತು. ಅಂತೂ ಸ್ವಲ್ಪಹೊತ್ತು ಕಾದುಕುಳಿತು ಮುಂದಕ್ಕೆ ಹೋಗಿ ಮನೆ ಸೇರಿಕೊಂಡೆವೆನ್ನಿ. ರಾತ್ರಿಯ ಊಟವನ್ನು ಆತಿಥೇಯರ ಮನೆಯಲ್ಲಿ ಮುಗಿಸಿ, ಅಲ್ಲಿಂದ ಬೀಳ್ಕೊಂಡು ಹೊರಬಂದಾಗ ರಾತ್ರಿ ಒಂಭತ್ತು ಗಂಟೆ… ಆದರೆ ತಡ ರಾತ್ರಿಯಲ್ಲೇ ನೋಡಿ ಆನಂದಿಸಬೇಕಾದ ಜಾಗವೊಂದು ನಮ್ಮನ್ನು ಕಾಯುತ್ತಿತ್ತು.. ಅದುವೇ ಅಮೆರಿಕ ಹೆಮ್ಮೆಯ ಪ್ರವಾಸಿ ತಾಣ… ಅಂಪೈರ್ ಸ್ತೇಟ್ ಬಿಲ್ಡಿಂಗ್

ಅಂಪೈರ್ ಸ್ತೇಟ್ ಬಿಲ್ಡಿಂಗ್ (Empire State Building.)

ಇದು, 1931ರಲ್ಲಿ ಕಟ್ಟಿದ, ಪಟ್ಟಣದಲ್ಲಿಯೇ ಅತೀ ಎತ್ತರದ  ಐತಿಹಾಸಿಕ ಹೆಗ್ಗುರುತಿನ ಗಗನಚುಂಬಿ ಕಟ್ಟಡವಾಗಿದೆ.  22,48, 355 ಚದರ ಅಡಿ ವಿಸ್ತೀರ್ಣವಿರುವ ಈ ಕಟ್ಟಡವು 1,454ಅಡಿ ಎತ್ತರವಿದ್ದು, ಈ ಕಟ್ಟಡದ ವಿನ್ಯಾಸವು ಅತ್ಯಂತ ಹೆಚ್ಚು ಜನಮನ್ನಣೆ ಪಡೆದಿದೆ. ಜಗತ್ತಿನ ಹಲವಾರು ಅದ್ಭುತಗಳಲ್ಲಿ ಒಂದಾಗಿರುವ ಇದು, 102 ಅಂತಸ್ತುಗಳನ್ನು ಹೊಂದಿದ್ದುದು ಮಾತ್ರವಲ್ಲದೆ, ಇಲ್ಲಿಯ ಪ್ರಖ್ಯಾತ ಸಾಂಸ್ಕೃತಿಕ ಕೇಂದ್ರವೂ ಹೌದು. ರಾತ್ರಿಯಲ್ಲಿ ಇದರ ಮೇಲಿನ ಅಂತಸ್ತಿನಿಂದ ನಗರದ ಪೂರ್ತಿ ಸೌಂದರ್ಯವನ್ನು ವೀಕ್ಷಿಸುವುದು, ಇಲ್ಲಿ ಬರುವ ಪ್ರವಾಸಿಗರು ಖಂಡಿತಾ ತಪ್ಪಿಸಿಕೊಳ್ಳಬಾರದಂತಹ ನೋಟವಾಗಿದೆ. ಇದಕ್ಕಾಗಿಯೇ ನಾವೆಲ್ಲರೂ ಸಜ್ಜಾಗಿ ಆ ಕಡೆಗೆ ಹೊರಟಾಗ, ಕಾತರದಿಂದ ಕಾಯುತ್ತಿದ್ದ ಕ್ಷಣಗಳು ಇನ್ನೇನು ಬಂದೇಬಿಟ್ಟಿತು ನೋಡಿ…ಆಹಾ..ಅದೇನು ಮುಂದುಗಡೆ..?

(ಮುಂದುವರಿಯುವುದು…..)

ಈ ಪ್ರವಾಸಕಥನದ ಹಿಂದಿನ ಎಳೆ ಇಲ್ಲಿದೆ:  https://surahonne.com/?p=38566

-ಶಂಕರಿ ಶರ್ಮ, ಪುತ್ತೂರು. 

7 Responses

 1. ಪ್ರವಾಸ ಕಥನ ಚೆನ್ನಾಗಿ ಮೂಡಿಬರುತ್ತಿದೆ ಶಂಕರಿ ಮೇಡಂ..

  • ಶಂಕರಿ ಶರ್ಮ says:

   ಪ್ರೀತಿಯಿಂದ ಓದಿ ಮೆಚ್ಚುಗೆಯ ನುಡಿಗಳನ್ನಾಡಿದ ನಾಗರತ್ನ ಮೇಡಂ ಅವರಿಗೆ ಧನ್ಯ ನಮನಗಳು.

 2. ನಯನ ಬಜಕೂಡ್ಲು says:

  Very nice

  • ಶಂಕರಿ ಶರ್ಮ says:

   ತಮ್ಮ ಪ್ರೀತಿಯ ಸ್ಪಂದನೆಗೆ ಧನ್ಯವಾದಗಳು ನಯನಾ ಮೇಡಂ

 3. ಉತ್ತಮವಾದ ಮಾಹಿತಿ ಯುಳ್ಳ, ಪ್ರವಾಸಕಥನ

 4. ಸುಚೇತಾ says:

  ತುಂಬಾ ಚೆನ್ನಾಗಿದೆ ಮೇಡಂ

 5. Padma Anand says:

  ಪ್ರವಾಸ ಕಥನ ಎಂದಿನಂತೆ ಸುಲಲಿತವಾಗಿ ಓದಿಸಿಕೊಂಡಿತು..

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: