ಗಜವದನಾ ಗುಣ ಸದನ

Share Button


ಶ್ರಾವಣ ಮುಗಿಯುತ್ತಿದ್ದಂತೆ ಭಾದ್ರಪದ ಮಾಸ ಪ್ರಾರಂಭಗೊಳ್ಳುತ್ತಿದೆ. ಈ ಮಾಸದ ಮೊದಲ ಹಬ್ಬವೇ ಚೌತಿ. ಯಾವುದೇ ಕಾರ್ಯಕ್ಕೆ ಮೊದಲಾಗಿ ಪ್ರಾರ್ಥಿಸುವುದು ಮಾತ್ರವಲ್ಲ ನಾವು ಪ್ರತಿನಿತ್ಯವೂ ಮೊದಲು ವಂದಿಸುವುದು ಗಣಪತಿಗೆ.

ಪ್ರಾರ್ಥಿಸುವಾಗ ದೀಪ ಯಾಕೆ ಬೆಳಗುತ್ತೇವೆ!? ಮೊದಲನೆಯದಾಗಿ ಕತ್ತಲೆ ಹೋಗಲಾಡಿಸುವ ಶಕ್ತಿ ದೀಪಕ್ಕಿದೆ. ಹಾಗೆಯೇ ಜೀವನದಲ್ಲಿ ಸಿರಿ-ಸಂಪತ್ತು, ಸುಖ -ಸಂತೋಷಗಳನ್ನು ದೀಪ ಪ್ರತಿಪಾದಿಸುತ್ತದೆ. ಬಡತನ,ಕಷ್ಟ, ದುಃಖಗಳನ್ನು ಕತ್ತಲೆಗೆ ಹೋಲಿಸುತ್ತಾರೆ. ಯಾವುದೇ ಕಳ್ಳತನ, ವಾಮಾಚಾರಗಳು ಕತ್ತಲೆಯಲ್ಲಿ ಅಥವಾ ನ್ಯಾಯ-ಧರ್ಮದ ಹಿಂದೆ ಮರೆಯಾಗಿ ನಡೆಯುತ್ತವೆ. ದೀಪಕ್ಕೆ ಚೈತನ್ಯ, ಶಕ್ತಿ, ಬೆಳಕು ಈ ಮೂರು ಗುಣಗಳೂ ಇವೆ ಎಂದಾಯ್ತು.

ಗಣಪತಿ ಯಾಕೆ ಮೊದಲು ವಂದ್ಯನಾಗುತ್ತಾನೆ? ನೋಡೋಣ. ಗಣಪತಿ ಮೂಲಾಧಾರ ಚಕ್ರದಲ್ಲಿ ಕುಳಿತಿರುವ ಏಕಮಾತ್ರ ದೇವರು. ಮೂಲಾಧಾರ ಚಕ್ರವೆಂದರೆ ನಮ್ಮ ಪ್ರತಿಯೊಂದು ಚಲನ-ವಲನಕ್ಕೂ ಮೂಲ‌.ಅದರ ಸಹಾಯದಿಂದಲೇ ನಾವು ಎದ್ದು ಕುಳಿತು ಕೊಳ್ಳುವುದಕ್ಕೆ, ನಿಲ್ಲುವುದಕ್ಕೆ ನಡೆದಾಡುವುದಕ್ಕೆ ಸಾಧ್ಯ.

ಮುರಿದ ದಾಡೆ:- ಗರ್ವವನ್ನೂ ಅಹಂಕಾರವನ್ನೂ ಮುರಿಯಬೇಕೆಂಬುದೇ ಅದರ ಸಂಕೇತ.
ಮನುಷ್ಯ ದೇಹಕ್ಕೆ ಆನೆಯ ತಲೆ:- ಇದು ಮನುಷ್ಯನ ಬುದ್ಧಿಶಕ್ತಿ ಹಾಗೂ ಆನೆಯ ದೈಹಿಕ ಶಕ್ತಿಗಳ ಅಪೂರ್ವ ಸಂಗಮದ ಪ್ರತಿನಿಧಿ. ಆನೆ, ಹಾವು, ಇಲಿ ಒಟ್ಟಿಗೆ ಇರುವುದು ಗಮನಿಸಿದರೆ ಪರಿಸರ ರಕ್ಷಣೆ. ಸರ್ವ ಸಮನ್ವಯವೂ ಹೌದು.
ಮೊರದಗಲದ ಕಿವಿ:– ಹೆಚ್ಚು ಕೇಳಬೇಕು, ಕಡಿಮೆ ಮಾತಾಡಬೇಕು.ಮತ್ತು ಯೋಚಿಸಿ ಮಾತಾಡಬೇಕು ಎಂಬುದೇ ಬಾಯಿ ಮುಚ್ಚಿದ ಸಂಕೇತ.
ಪಾಶಾಂಕುಷ:- ಪಾಶ(ಹಗ್ಗ)ದಿಂದ ದುಷ್ಟಶಕ್ತಿಗಳನ್ನು ಬಂಧಿಸುವುದು ಮತ್ತು ದುರ್ನಡತೆಗಳನ್ನು ಅಂಕುಶದಿಂದ ತಿವಿಯುವ ಸಂಕೇತ.
ಗಣಪತಿಗೆ ಯಾಕೆ ಗರಿಕೆ ಶ್ರೇಷ್ಠ?:- ನಮ್ಮ ಬೆನ್ನು ಹುರಿಯಂತೆ ಗರಿಕೆಯ ರಚನೆ.ಗರಿಕೆಗೂ ಮನುಷ್ಯನ ಬೆನ್ನು ಹುರಿಗೂ ಸಮೀಪದ ಹೋಲಿಕೆಯಿದೆ.ಅಲ್ಲದೆ ಗರಿಕೆ ಆಯುರ್ವೇದದಲ್ಲಿ ಉತ್ತಮ ಔಷಧೀಯ ಗುಣವುಳ್ಳದ್ದಾಗಿದೆ.

ಗಣಪತಿಗೆ ಟೊಂಕ ಹಾಕುವುದೇಕೆ?:- ಇದಕ್ಕೊಂದು ಉತ್ತಮ ಪೌರಾಣಿಕ ಕಥೆಯಿದೆ. ಒಮ್ಮೆ ದೇವಲೋಕದಲ್ಲಿ ಸುರರೆಲ್ಲರೂ ಸಭೆ ಸೇರಿದ್ದಾಗ ಮಹಾವಿಷ್ಣುವಿನ ಸುದರ್ಶನ ಚಕ್ರವನ್ನು ಬಾಲಗಣಪತಿ ಆಟಾಟಕ್ಕೆ ನುಂಗಿ ಬಿಟ್ಟನಂತೆ!.ತನ್ನ ಆಯುಧ ಕಳಕೊಂಡ ಮಹಾವಿಷ್ಣು ಚಿಂತಾಕ್ರಾಂತನಾದ. ಅದನ್ನು ಗಣಪತಿಯ ಬಾಯಿಯಿಂದ ಹೊರಗೆ ಉಗುಳಿಸುವ ಉಪಾಯವನ್ನು ಚಿಂತಿಸತೊಡಗಿದ. ಕೈಮುಗಿದು ಗಣಪತಿಯಲ್ಲಿ ಬೇಡಿಕೊಂಡ. ಗಣಪತಿ ಉಗುಳಲಿಲ್ಲ. ಉದ್ದಂಡ ನಮಸ್ಕಾರ ಹಾಕಿದ. ಊಹೂಂ ಪ್ರಯೋಜನವಾಗಲಿಲ್ಲ!. ಪರಿ ಪರಿಯಾಗಿ ಬೇಡಿಕೊಂಡ. ಇಲ್ಲ ಗಣಪತಿ ಉಗುಳಲಿಲ್ಲ!!. ಕೊನೆಗೆ ವಿಷ್ಣು ಏನು ಮಾಡೋಣವೆಂದು ಯೋಚಿಸಿ ಒಂದು ಉಪಾಯ ಹೂಡಿದ. ಗಣಪತಿಗೆ ಟೊಂಕ ಹಾಕತೊಡಗಿದ. ಟೊಂಕ ಹಾಕುವುದೆಂದರೆ ಬಲಗೈ ಬೆರಳುಗಳಿಂದ ಎಡಕಿವಿಯನ್ನೂ ಎಡಗೈ ಬೆರಳುಗಳಿಂದ ಬಲಕಿವಿಯನ್ನೂ ಹಿಡಿದುಕೊಂಡು ನೆಟ್ಟಗೆ ಏಳುವುದು, ಕೂರುವುದು. ಹೀಗೆ ಒಂದು, ಎರಡು, ಮೂರು ಎಣಿಕೆಮಾಡುತ್ತಾ ಗಣಪತಿಯ ಮುಖ ನೋಡುತ್ತಾ ಬಂದ.ಇಲ್ಲ ಹನ್ನೊಂದು ಸಂಖ್ಯೆವರೆಗೂ ಗಣಪತಿಗೆ ನಗು ಬರಲಿಲ್ಲ. ಕೊನೆಗೆ ಹನ್ನೆರಡು ಸಂಖ್ಯೆ ಆದಾಗ ಗಣಪತಿಗೆ ನಗು ತಡೆಯದೆ ಘೊಳ್ಳೆಂದು ನಕ್ಕುಬಿಟ್ಟ!.ಅಷ್ಟರಲ್ಲಿ ಗಣಪತಿಯ ಹೊಟ್ಟೆಯೊಳಗಿದ್ದ ಸುದರ್ಶನ ಚಕ್ರ ಹೊರಗೆ ಬಂತು!. ಅಂದಿನಿಂದ ಗಣಪತಿಯನ್ನು ಪ್ರಸನ್ನಗೊಳಿಸಲು ಟೊಂಕಹಾಕುವುದು ರೂಢಿಯಾಯ್ತು. ಕಡಿಮೆಯೆಂದರೆ ಹನ್ನೆರಡು ಟೊಂಕಹಾಕಿದರೆ ಗಣಪತಿ ಪ್ರಸನ್ನನಾಗುವನಂತೆ.ಚೌತಿ ದಿನದ ಚಂದ್ರನನ್ನು ಏಕೆ ನೋಡಬಾರದು? ಒಮ್ಮೆ ಚೌತಿಯಂದು ಭಕ್ತಾದಿಗಳು ನೀಡಿದ ಹಬ್ಬದೂಟ ತೀರಿಸಿ; ಅವನ ವಾಹನವಾದ ಇಲಿಯ ಬೆನ್ನೇರಿ ಬರುತ್ತಿದ್ದ ಗಣೇಶನನ್ನು ನೋಡಿದ ಬಾನ ಚಂದಿರ ನಕ್ಕನಂತೆ!.ಅದು ತಿಳಿದ ಗಣಪತಿಗೆ ಮುಖಭಂಗವಾಯ್ತು!. ಆತ ಚಂದಿರನ ಮೇಲೆ ಮಣ್ಣೆರಚಿ “ಇನ್ನುಮುಂದೆ ಚೌತಿದಿನದಂದು ನಿನ್ನನ್ನು ನೋಡಿದವರಿಗೆ ಅಪವಾದ ಬರಲಿ” ಎಂದು ಬಿಟ್ಟನಂತೆ. ಸರಿ, ಈ ಅಪವಾದ ಕೃಷ್ಣನನ್ನೂ ಬಿಡಲಿಲ್ಲ!. ಅವನು ಶಮಂತಕ ಮಣಿಯನ್ನು ಕದ್ದ ಅಪವಾದ ಹೊರಬೇಕಾಯ್ತು!!.

ರಾಷ್ಟ್ರೀಯ ಹಬ್ಬ:– ಗಣೇಶೋತ್ಸವವನ್ನು ರಾಷ್ಟ್ರೀಯ ಹಬ್ಬವನ್ನಾಗಿ ,ಉತ್ಸವವನ್ನಾಗಿ ಮಾಡಿದ ಕೀರ್ತಿ ಬಾಲಗಂಗಾಧರ ತಿಲಕರಿಗೆ ಸಲ್ಲುತ್ತದೆ. ನಾವೆಲ್ಲ ಒಂದು ಎಂದು ಜನರ ಹೃದಯಕ್ಕೆ ತಲುಪಿ; ಎಲ್ಲರೂ ಆಗಾಗ ಒಂದೆಡೆ ಸೇರಬೇಕು. ಒಂದೇ ಆದರ್ಶಗಳನ್ನು ಇರಿಸಿಕೊಳ್ಳಬೇಕು.ಎಂದು ಈ ಯೋಜನೆಯನ್ನು ಕಾರ್ಯಗತಗೊಳಿಸಿ ಯಶಸ್ವಿಯಾದರು. ಇತರ ಬೇಧಗಳನ್ನು ಮರೆತು ಸಂಭ್ರಮೋಲ್ಲಾಸದಿಂದ ಸೇರಲು ಅವಕಾಶವಾಗಿದ್ದಂತೂ ಸತ್ಯ!.

|ಶ್ರದ್ಧಾಮೇಧಾಂ ಯಶಃ ಪ್ರಜ್ಞಾಂ ವಿದ್ಯಾ ಬುದ್ಧಿಂ ಶ್ರೀಯಂ ಬಲಂ ಆಯುಷ್ಯ ತೇಜಮಾರೋಗ್ಯಂ ದೇಹಿಮೇ ಗಣನಾಯಕ|
ಎಂದು ವಿನಾಯಕನಲ್ಲಿ ವಿನಮ್ರತೆಯಿಂದ ಪ್ರಾರ್ಥಿಸೋಣ.

-ವಿಜಯಾಸುಬ್ರಹ್ಮಣ್ಯ ಕುಂಬಳೆ

6 Responses

 1. Vijayasubrahmanya says:

  ಪ್ರಕಟಿಸಿದ ಅಡ್ಮಿನ್ ಹೇಮಮಾಲಾ ಹಾಗೂ ಓದುಗರಿಗೆ ಧನ್ಯವಾದಗಳು.

 2. ವಾವ್ ಮರೆತು ಹೋದಂತಿರುವ ಪುರಾಣ ಕಥೆ ಗಳು ನಿಮ್ಮಿಂದ ಮತ್ತೆ ನೆನಪಿಗೆ ಬರುತ್ತವೆ ವಿಜಯ ಮೇಡಂ.. ಮೊನ್ನೆ ಮೊನ್ನೆ ನನ್ನ ಮೊಮ್ಮಗಳು ಕೇಳಿ ದಾಗ ಕೆಲವು ಅಂಶಗಳನ್ನು ನೆನಪಿಸಿಕೊಂಡರೂ ತಲೆ ಗೆ ಬರಲು ಕಷ್ಟ ವಾಯಿತು..ಈಗ ಮತ್ತೆ ಓದಿ ಅವಳಿಗೆ ಹೇಳ ಬೇಕು… ಧನ್ಯವಾದಗಳು.

 3. ನಯನ ಬಜಕೂಡ್ಲು says:

  ಚೆನ್ನಾಗಿದೆ, ಮಾಹಿತಿ ಪೂರ್ಣ

 4. ಶಂಕರಿ ಶರ್ಮ says:

  ಹತ್ತಿರದಲ್ಲಿರುವ ಚೌತಿಹಬ್ಬಕ್ಕೆ ಪೂರಕವಾಗಿ ಬಂದ ವಿಜಯಕ್ಕನವರ ಪೌರಾಣಿಕ ಲೇಖನವು ಮಾಹಿತಿಪೂರ್ಣವಾಗಿದೆ.

 5. Padma Anand says:

  ಸಂದರ್ಭೋಚಿತ ಮಾಹಿತಿ ಪೂರ್ಣ ಲೇಖನ.

 6. Anonymous says:

  ಬಿ.ಆರ್.ನಾಗರತ್ನ ಹಾಗೂ ಎಲ್ಲಾ ಸೋದರಿಯರಿಗೆ ಧನ್ಯವಾದಗಳು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: