ವೇದವ್ಯಾಸ ಪುತ್ರ ಶುಕ ಮಹರ್ಷಿ

Share Button


ವಿಶ್ವದಲ್ಲೇ ಅತಿಪುರಾತನ ಗ್ರಂಥಗಳು ನಮ್ಮ ಪುರಾಣಗಳಾದ ರಾಮಾಯಣ, ಮಹಾಭಾರತ, ಭಾಗವತ ಮೊದಲಾದ ಗ್ರಂಥಗಳು. ಅನಾದಿಕಾಲದಿಂದಲೂ ಅವುಗಳಿಂದ ತಿಳುವಳಿಕೆಯನ್ನೂ ಸ್ಫೂರ್ತಿಯನ್ನೂ ಪಡೆಯುತ್ತಾ ಬಂದಿದ್ದೇವೆ. ಅವುಗಳಲ್ಲಿ ಉಲ್ಲೇಖಿಸಲ್ಪಟ್ಟ ಕಥೆಗಳು ಎಷ್ಟೋ ಸಾವಿರ ಹಿಂದಿನ ಕಥೆಗಳಾದರೂ ಇಂದಿಗೂ ನಿತ್ಯ ನೂತನವಾಗಿ ಮೆರೆಯುತ್ತವೆ. ಅವುಗಳು ನಮ್ಮ ಬುದ್ಧಿ ಶಕ್ತಿಯನ್ನು ವೃದ್ಧಿಸಿ ವಿವೇಕವನ್ನುನೀಡುತ್ತಿವೆ.

ಕಥೆ ಬರೆಯುವವರು ಒಬ್ಬರಾದರೆ ಅದನ್ನು ಲೋಕಕ್ಕೆ ಪ್ರಚುರಪಡಿಸುವವರು ಅಂದರೆ… ಪ್ರಕಾಶಕರು ಇನ್ನೊಬ್ಬರು ಬೇಕು. ಅಂತೆಯೇ ಶ್ರೀಮದ್ಭಾಗವತವೆಂಬ ಮಹಾಪುರಾಣವನ್ನು ಮಹರ್ಷಿ ವೇದವ್ಯಾಸರು ರಚಿಸಿದರೆ; ಲೋಕಕ್ಕೆ ತಿಳಿಯಪಡಿಸಿದವರು ‘ಶುಕ’ ಮಹರ್ಷಿಗಳು. ವೇದವ್ಯಾಸರೆಂದರೆ ಯಾರು? ಯಾವ ಯಾವ ಪುರಾಣಗಳನ್ನು ಬರೆದರು? ಅವರಿಗೆ ಯಾಕೆ ಆ ಹೆಸರು ಬಂತು ಎಂದು- ಮುಂತಾದ ವಿಚಾರಗಳನ್ನು ಇದೇ ಅಂಕಣದ ಪ್ರಾರಂಭದ ಹಂತದಲ್ಲಿ ಅವರ ಬಗ್ಗೆ ತಿಳಿಸಿದ್ದೇನೆ. ಇನ್ನೀಗ ‘ಶುಕ’ ಮಹರ್ಷಿಗಳ ಬಗ್ಗೆ? ಲೋಕಕ್ಕೆ ಯಾರ ಮೂಲಕ ಶ್ರೀಮದ್ಭಾಗವತವನ್ನು ಪ್ರಚುರಪಡಿಸಿದರು? ಅವರ ಶ್ರೇಷ್ಠತೆಗಳೇನು ಎಂಬ ಬಗ್ಗೆ ಒಂದಿಷ್ಟು ತಿಳಿಯೋಣ.

ನಾವು ಯಾವುದಾದರೊಂದು ಕಾರ್ಯ ಸಾಧನೆಗೆ ಹೊರಟರೆ ಅದರ ಕಡೆಗೇ ಗಮನಹರಿಸುತ್ತೇವೆ. ಒಂದು ವೇಳೆ ಏನಾದರೂ ಅಡ್ಡಿ-ಆತಂಕಗಳನ್ನು ಗಣನೆಗೆ ತಾರದೆ ನಾವು ಹಿಡಿದ ಕಾರ್ಯವನ್ನು ವಿಮುಖಗೊಳಿಸದೆ ಏಕಮುಖದತ್ತ ಕೊಂಡೊಯ್ದು ಕೆಲಸ ಸಾಧಿಸುವಲ್ಲಿ ಸಫಲರಾಗಬೇಕು ಎಂಬಂಶವನ್ನು ‘ಶುಕ’ ಮಹರ್ಷಿಗಳ ಜೀವನದರ್ಶನದಿಂದ ನಾವು ಪಡೆಯಬಹುದು.

‘ಶುಕ’ ಮಹರ್ಷಿ ಕೃಷ್ಣದೈಪಾಯನನ ಮಗ ಅರ್ಥಾತ್ ವೇದವ್ಯಾಸರ ಪುತ್ರ . ‘ಧೃತಾಜಿ’ ಎಂಬ ಅಪ್ಸರೆಯು ‘ಶುಕಿ’ ಎಂದರೆ ಹೆಣ್ಣು ಗಿಳಿಯ ರೂಪದಲ್ಲಿ ವೇದವ್ಯಾಸರಲ್ಲಿಗೆ ಬಂತು. ಇದಕ್ಕೆ ಮೊದಲು ಒಬ್ಬ ಸುಪುತ್ರನ ಜನನಕ್ಕಾಗಿ ವೇದವ್ಯಾಸರು ತಪಸ್ಸು ಮಾಡುತ್ತಿದ್ದರು. ಈ ಘತಾಜಿ ಎಂಬ ಶುಕಿಯು ವೇದವ್ಯಾಸರಿಂದ ಪಡೆದ ಮಗನಿಗೆ ‘ಶುಕ’ ಎಂದು ನಾಮಕರಣ ಮಾಡಿದನು. “ಪಿತೃ’ ಎಂಬ ಋಷಿಯ ಮಗಳಾದ ‘ಪೀಪರಿ’ಯು ಈತನ ಪತ್ನಿ, ಈ ದಂಪತಿಗಳ ಮಗನೇ ಬ್ರಹ್ಮದತ್ತ. ಶುಕಮುನಿಗೆ ಪೀವರಿಯಲ್ಲಿ ‘ಕೃಷ್ಣ’ ಗೌರಪ್ರಭ, ಭೂರಿ, ದೇವುತರೆಂಬ ನಾಲ್ವರು ಮಕ್ಕಳಾದರು.ಹಾಗೆಯೇ ಕೀರ್ತಿ ಎಂಬ ಮಗಳೂ ಜನಿಸಿದಳು.


ಶುಕನು ಜನಕರಾಜನಿಂದ ವಿದ್ಯಾಭ್ಯಾಸ ಪಡೆದನು. ಹಾಗೆಯೇ ನಾರದ ಮಹರ್ಷಿಯಿಂದ ಉಪದೇಶ ಹೊಂದಿ ವೈರಾಗ್ಯಶಾಲಿಯಾದನು. ಶುಕನು ತಪಸ್ಸು ಮಾಡುತ್ತಿದ್ದಾಗ ಅದನ್ನು ಭಂಗಗೊಳಿಸುವುದಕ್ಕಾಗಿ ದೇವಲೋಕದ ವೇಶ್ಯೆಯರಲ್ಲಿ ಸುಪ್ರಸಿದ್ದಳೆನಿಸಿದ ರಂಭೆಯು ಹಲವು ಬಾರಿ ಪ್ರಯತ್ನಪಟ್ಟಳು. ಆದರೆ ಶುಕ ಮಹರ್ಷಿಯ ತಪಸ್ಸು ಕೆಡಿಸಲು ಆಕೆಯಿಂದಾಗದೆ ಆಕೆಯೇ ಹತಾಶಳಾಗಬೇಕಾಯಿತು. ಶುಕಮಹರ್ಷಿಯು ಭಾಗವತ ಪುರಾಣವನ್ನು ಪರೀಕ್ಷಿತ್ ರಾಜನಿಗೆ ಹೇಳಿದನು. ಈ ಮೂಲಕ ಶ್ರೀಮದ್ಭಾಗವತವು ಲೋಕದಲ್ಲಿ ಪ್ರಚಾರವಾಯಿತು.

ಪರೀಕ್ಷಿತ್ ರಾಜನು ಬೇಟೆಯಾಡುತ್ತಾ ಒಮ್ಮೆ ಕಾಡಿನಲ್ಲಿ ಸಂಚರಿಸುತ್ತಿದ್ದಾಗ  ‘ಶಮೀಕ” ನೆಂಬ ಋಷಿಯು ತಪಸ್ಸು ಮಾಡುತ್ತಿದ್ದುದನ್ನು ಕಂಡನು. ವಿನೋದಕ್ಕಾಗಿ ಸತ್ತ ಹಾವನ್ನು ಶಮೀಕನ ಕೊರಳಿಗೆ ಹಾಕಿ ಅರಮನೆಗೆ ತೆರಳಿದ್ದನ್ನು ತಿಳಿದ ಶಮೀಕನ ಮಗ ಶೃಂಗಿಯು ‘ಪರೀಕ್ಷಿತನನ್ನು ಏಳು ದಿನಗಳೊಳಗೆ ಹಾವು ಕಚ್ಚಿ ಮರಣಿಸಲಿ’ ಎಂದು ಶಾಪವಿತ್ತನು. ಈ ಚಿಂತೆಯಿಂದ ನೊಂದು ಬೆಂದ ಪರೀಕ್ಷಿತನಿಗೆ ಶುಕಮಹಾಮುನಿಯು ಶ್ರೀಮದ್ಭಾಗವತವನ್ನು ಹೇಳುತ್ತಾನೆ ಎಂದು ಭಾಗವತದಿಂದ ತಿಳಿದು ಬರುತ್ತದೆ. ಹಾಗೆಯೇ ಶುಕನು ಮಹಾಭಾರತವನ್ನು ಯಕ್ಷ, ರಾಕ್ಷಸ, ಗಂಧರ್ವರಿಗೆ ಹೇಳಿದನು ಎಂದು ತಿಳಿದು ಬರುತ್ತದೆ. ಕಾರ್ಯ ಸಾಧಿಸುವ ಕಲೆಯನ್ನೂ ಗ್ರಂಥ ಪ್ರಕಾಶನ ಕಲೆಯನ್ನೂ ನಾವು ಶುಕ ಮಹರ್ಷಿಯಿಂದ ಕಲಿಯಬಹುದು. ಮನುಷ್ಯ ಜೀವನದ ಅರ್ಥವೇನು? ಧರ್ಮವೇನು? ಸಾರಭೂತವಾದ ಗುಣವೇನು? ಈ ಪ್ರಶ್ನೆಗಳಿಗೆಲ್ಲ ಪುರಾಣಗಳಿಂದ ಉತ್ತರ ಪಡೆಯಬಹುದು.

-ವಿಜಯಾ ಸುಬ್ರಹ್ಮಣ್ಯ, ಕುಂಬಳೆ

5 Responses

 1. Anonymous says:

  ಅಡ್ಶ್ರಿನ್ ಶ್ರೀ ಮತಿ ಹೇಮಮಾಲಾ ಹಾಗೂ ಓದುಗರಿಗೆ ಧನ್ಯವಾದಗಳು.

 2. ಪುರಾಣ ಕಥೆ ಗಳನ್ನು ಬರೆದು ನೆನಪಿಸುವ ನಿಮಗೆ ನನ್ನ ನಮನಗಳು ವಿಜಯಾ ಮೇಡಂ

 3. Padma Anand says:

  ಶುಕ ಮುನಿಯ ವಿವರಗಳನ್ನು ಲೇಖನ ಸಂಕ್ಷೇಪವಾಗಿ ತೆರೆದಿಟ್ಟಿದೆ.

 4. ಶಂಕರಿ ಶರ್ಮ says:

  ಪೌರಾಣಿಕ ಕಥೆಗಳನ್ನು ಪ್ರಚುರ ಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಶುಕ ಮುನಿಗಳ ಕುರಿತ ಕಥೆ ಬಹಳ ಕುತೂಹಲಕಾರಿಯಾಗಿದೆ ವಿಜಯಕ್ಕ.

 5. Anonymous says:

  ಚೆನ್ನಾಗಿದೆ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: