ಪುರಾಣ ಶ್ರೇಷ್ಠ ಕಪಿಲ ಮಹಾಮುನಿ

Share Button


ಕಪಿಲ, ಪತಂಜಲ, ಗೌತಮ, ಜಿನನುತ ಭಾರತ ಜನನಿಯ ತನುಜಾತೆ! ಜಯಹೇ ಕರ್ನಾಟಕ ಮಾತೆ!‘ ಇದು ನಾಡಗೀತೆ-ಸುಪ್ರಸಿದ್ಧ ಕವಿ ಕುವೆಂಪುರವರ ರಚನೆ, ಕಪಿಲ, ಪತಂಜಲ, ಗೌತಮ ಮೊದಲಾದ ಪುರಾಣ ಶ್ರೇಷ್ಠ ಮಹರ್ಷಿಗಳಿಗೆ ಜನ್ಮ ನೀಡಿದ ನಾಡು ನಮ್ಮದು. ಹೌದು, ಈ ‘ಕಪಿಲ’ ಮಹರ್ಷಿ ಎಂದರೆ ಯಾರು? ಈತನ ಹೆಗ್ಗಳಿಕೆಯೇನು? ಯಾವ ರೀತಿಯ ಸಾಧನೆ? ಎಂಬುದನ್ನು ಒಂದಿಷ್ಟು ತಿಳಿಯಬೇಡವೇ? ಇವರಲ್ಲಿ ‘ಕಪಿಲ’ರು ಸಾಂಖ್ಯ ದರ್ಶನಕಾರರು, ಪತಂಜಲಿ ಮುನಿ ಅಷ್ಟಾಂಗ ಯೋಗ ಪ್ರವರ್ತಕರು ‘ಗೌತಮರು’ ಬುದ್ಧ ಮತ ಸ್ಥಾಪಕರು. ಮಹಾವೀರ ಜೈನ ಮತ ಸ್ಥಾಪಕರು.

‘ಕರ್ದಮ’-‘ದೇವಹೂತಿ’ಯರ ಮಗನೇ ಕಪಿಲ ಮಹರ್ಷಿ, ಈತನು ಶ್ರೀಮನ್ನಾರಾಯಣನ ಅಂಶದಿಂದಲೇ ಅವತಾರವೆತ್ತಿದ  ಕಾರಣ ದೈವಾಂಶ ಸಂಭೂತ ಮಹರ್ಷಿ, ದುಷ್ಟರಾದ ಅರುವತ್ತು ಸಾವಿರ ಸಾಗರರನ್ನು ದಗ್ಧರಾಗಿ ಹೋಗುವಂತೆ ಮಾಡಿದವ, ಸಾಂಖ್ಯಶಾಸ್ತ್ರ ಪ್ರವರ್ತಕ. ಮಾತ್ರವಲ್ಲದೆ ತನ್ನಮ್ಮನ ಇಚ್ಛೆಯಂತೆ ಆಕೆಗೆ ಆಧ್ಯಾತ್ಮ ಬೋಧನೆ ಮಾಡಿದವ.

ಕರ್ದಮ ಪ್ರಜಾಪತಿ ಹಾಗೂ ಸ್ವಾಯುಂಭುವ ಮನುವಿನ ಪುತ್ರಿಯಾದ ದೇವಹೂತಿಯವರು ಶ್ರೇಷ್ಠ ಮುನಿ ದಂಪತಿಗಳು ಅವರಿಗೆ ಅರುಂಧತಿ, ಅನುಸೂಯ, ಶಾಂತಿ, ಖ್ಯಾತಿ, ಗತಿ, ಕಲೆ, ಶ್ರದ್ಧೆ, ಹವಿರ್ಭುಕ್, ಕ್ರಿಯೆ ಹೀಗೆ ಒಂಬತ್ತು ಮಂದಿ ಪುತ್ರಿಯರು ಜನಿಸಿದರು. ಇವರಿಂದ ಸಂತೃಪ್ತಿಯಾಗದ ದೇವಹೂತಿಯು ಆಧ್ಯಾತ್ಮಿಕ ಚಿಂತಕನಾದ ಒಬ್ಬ ಶ್ರೇಷ್ಠ ಪುತ್ರ ರತ್ನನನ್ನು ಪಡೆಯಬೇಕೆಂದು ಬಯಸಿದಳು. ತನ್ನ ಮಹದಾಸೆಯನ್ನು ಪತಿ ದೇವರಲ್ಲಿ ತೋಡಿಕೊಂಡಳು. ಪತ್ನಿಯ ಇಚ್ಛೆಯಂತೆ ‘ಕರ್ದಮ’ರು ಮಹಾವಿಷ್ಣುವನ್ನು ಸರಿಸಿಕೊಂಡು ದೇವಹೂತಿಗೆ “ನೀನು ಅನೇಕ ಪ್ರಕಾರದ ವ್ರತಗಳನ್ನು ಪಾಲಿಸಿದ್ದೀಯೇ, ಅದರಿಂದ ಮಹಾವಿಷ್ಣು ಪ್ರಸನ್ನಗೊಂಡು ನಿನ್ನ ಗರ್ಭದಲ್ಲಿ ಅವತರಿಸಿ ಬರುವನು. ಇನ್ನೂ ಶ್ರದ್ಧೆಯಿಂದ ಭಗವಂತನನ್ನು ಭಜಿಸುತ್ತಿರು” ಎಂದರು.  ಹೀಗಿರಲು ಸ್ವಲ್ಪ ಕಾಲ ಕಳೆಯಲು ಬ್ರಹ್ಮದೇವರು ಕರ್ದಮರ ಮುಂದೆ ಪ್ರತ್ಯಕ್ಷರಾಗಿ  ‘ವತ್ಸಾ ಕರ್ದಮ,ಶ್ರೀ ಮಹಾವಿಷ್ಣುವೇ ಜ್ಞಾನ-ವಿಜ್ಞಾನಗಳ ಮೂಲಕ ಕರ್ಮಗಳ ವಾಸನೆಯನ್ನು ನಿರ್ಮಲಗೊಳಿಸಲು ನಿಮ್ಮೀರ್ವರ ಮಗನಾಗಿ ಬರುವನು, ಇವನು ಸಿದ್ಧರಿಗೂ, ಸಾಂಖ್ಯಾಚಾರ್ಯರಿಗೂ ಸಮಾನ ಯೋಗ್ಯನಾಗುವನು. ‘ಕಪಿಲ’ ಎಂಬ ಹೆಸರಿನಿಂದ ಪ್ರಸಿದ್ಧನಾಗಿ ನಿಮ್ಮ ಕೀರ್ತಿಯನ್ನು ಹೆಚ್ಚಿಸುವನು ಎಂದು ಅಭಯ ನೀಡಿ ತೆರಳಿದರು.

ಕಪಿಲರ ಅವತಾರ:

ಕರ್ದಮರು ಪ್ರಾಯಕ್ಕೆ ಬಂದ ತಮ್ಮ ಮಗಳಂದಿರಲ್ಲಿ ಅರುಂಧತಿಯನ್ನು ವಸಿಷ್ಠರಿಗೂ ಅನುಸೂಯಳನ್ನು ಅತ್ರಿಮುನಿಗೂ,  ಶಾಂತಿಯನ್ನು ‘ಅಥಾರ್ವಾ’ ಮುನಿಗೂ, ಖ್ಯಾತಿಯನ್ನು ಭೃಗುವಿಗೂ,  ಮಹರ್ಷಿ ‘ಪುಲಹ’ರಿಗೆ ‘ಗತಿ’ ಎಂಬಾಕೆಯನ್ನು,  ‘ಕಲೆ’ಯನ್ನು ಮರೀಚಿಗೂ, ‘ಶ್ರದ್ಧೆ’ಯನ್ನು ಅಂಗೀರಸನಿಗೂ, ಹವಿರ್ಭುವನ್ನು ಪುಲಸ್ತ್ಯರಿಗೂ, ಕ್ರಿಯೆಯನ್ನು  ‘ಕ್ರತು’ ಎಂಬ ಋಷಿಗಳಿಗೂ ವಿವಾಹ ಮಾಡಿಕೊಟ್ಟರು. ಮುಂದೆ ಒಂದು ದಿನ ಸಾಕ್ಷಾತ್ ಶ್ರೀಹರಿಯ ಅಂಶದಿಂದ ದೇವಹೂತಿಯ ಗರ್ಭದಲ್ಲಿ ಪುತ್ರರತ್ನನು ಜನಿಸಿದನು. ಪರಮಾತ್ಮನ ಅವತಾರವೆನಿಸಿದ ಈ ಮಗುವನ್ನು ಕಂಡ ಕರ್ದಮರು ವಿಷ್ಣುವಿನ ಸಹಸ್ರನಾಮದಿಂದ ಕೊಂಡಾಡಿದಲ್ಲದೆ ಬ್ರಹ್ಮದೇವನು ಅಪ್ಪಣೆ ಕೊಟ್ಟಂತೆ ‘ಕಪಿಲ’ ಎಂಬ ಹೆಸರಿನಲ್ಲಿ ನಾಮಕರಣ ಮಾಡಿದರು. ‘ಕಪಿಲ’ನು ತಾನು ಅವತಾರವೆತ್ತಿದ ಮಹತ್ವವನ್ನು ಪರಮಾತ್ಮ ಸ್ವರೂಪಿಯಾಗಿ ವಿಶದಪಡಿಸಿದನು. ಕರ್ದಮರು ಕೈ ಜೋಡಿಸಿ ‘ಸ್ವಾಮಿ, ನಾನು ನಿಮ್ಮ ಕೃಪೆಯಿಂದ ಮೂರು ಋಣಗಳಿಂದ ಮುಕ್ತನಾಗಿರುವೆ. ನನ್ನ ಎಲ್ಲ ಮನೋರಥಗಳೂ ಈಡೇರಿದುವು. ನಿನ್ನನ್ನೇ ಚಿಂತಿಸುತ್ತಾ ಶೋಕರಹಿತನಾಗಿ ಸಂಚರಿಸುವೆನು. ನೀನು ಸಮಸ್ತ ಪ್ರಜೆಗಳ ಒಡೆಯನಾಗಿರುವೆ. ಅದಕ್ಕಾಗಿ ನಿನ್ನ ಅನುಮತಿಯನ್ನು ಪ್ರಾರ್ಥಿಸುತ್ತೇನೆ’ ಎಂದನು.

ಆಗ ‘ಕಪಿಲ’ನು ‘ಎಲೈ…. ಮುನಿಂದ್ರನೇ ಲಿಂಗ ಶರೀರದಿಂದ ಬಿಡುಗಡೆ ಹೊಂದುವ ಬಯಕೆಯುಳ್ಳ ಮುನಿಗಳಿಗೆ ಆತ್ಮ ದರ್ಶನಕ್ಕೆ ಉಪಯೋಗವಾಗುವ ಪ್ರಕೃತಿಯೇ ಮುಂತಾದ ತತ್ವಗಳನ್ನು ವಿವೇಚನೆ ಮಾಡುವುದಕ್ಕಾಗಿಯೇ ನನ್ನ ಅವತಾರವಾಗಿದೆ. ಆತ್ಮಜ್ಞಾನದ ಸೂಕ್ಷ್ಮವಾದ ಈ ಮಾರ್ಗವು ಬಹಳ ಕಾಲದಿಂದ ಗುಪ್ತವಾಗಿ ಬಿಟ್ಟಿದೆ. ಅದನ್ನು ಮತ್ತೆ ಮತ್ತೆ ಪ್ರವರ್ತನೆ ಮಾಡುವುದಕ್ಕಾಗಿಯೇ ನಾನು ಈ ರೀತಿಯಾಗಿ ಅವತಾರವೆತ್ತಿರುವೆನು ಎಂದು ತಿಳಿ. ನೀನು ನನ್ನ ಇಷ್ಟಾನುಸಾರ ಸಂನ್ಯಾಸ ಮಾರ್ಗವನ್ನು ಹಿಡಿಯಬಹುದು ಎಂದನು, ಭಗವಾನ್ ‘ಕಪಿಲ’ನು ಹೀಗೆ ಹೇಳಿದೊಡನೆ ಅವನಿಗೆ ಪ್ರದಕ್ಷಿಣೆ ಮಾಡಿದ ಕರ್ದಮರು ಕಾಡಿಗೆ ಹೊರಟು ಹೋದರು.

ತಾಯಿ ದೇವಹೂತಿಯು ‘ಕಪಿಲರಲ್ಲಿ ಮಗನೆಂದು ತಿಳಿಯದೆ ಪರಮಾತ್ಮನೆಂದು ತಿಳಿದು ಆತ್ಮಜ್ಞಾನವನ್ನು ಕರುಣಿಸಲು ಕೇಳಿಕೊಂಡಳು. ಆಗ ಅವರಿಗೆ ಆ ಮಹಾತಾಯಿಯ ಮೇಲೆ ಕರುಣೆ ಉಕ್ಕಿ ಬಂತು. ಆಕೆಗೆ ಪ್ರಕೃತಿಯೇ ಮೊದಲಾದ ತತ್ವಗಳನ್ನು ನಿರೂಪಣೆ ಮಾಡಿ ‘ಸಾಂಖ್ಯ’ವೆಂಬ ಜ್ಞಾನವನ್ನು ನಿರೂಪಣೆ ಮಾಡಿದರು. ‘ನನ್ನ ನಿರ್ಭಯ ಚರಣಕಮಲಗಳನ್ನೇ ಆಶ್ರಯಿಸಿ ಚಿತ್ತವು ತೀವ್ರವಾದ ಭಕ್ತಿಯೋಗದಿಂದ ನನ್ನಲ್ಲಿ ಸುಲಗ್ನವಾಗಿ ಸ್ಥಿರವಾಗಿಸುವುದೇ ಪ್ರಪಂಚದಲ್ಲಿ ಮನುಷ್ಯನಿಗೆ ಎಲ್ಲಕ್ಕಿಂತ ದೊಡ್ಡ ಶ್ರೇಯಸ್ಕರ’ ಎಂದು ಹೇಳುತ್ತಾ ಮಹತ್ತು ಮುಂತಾದ ಬೇರೆ ಬೇರೆ ತತ್ವಗಳ ಉತ್ಪತ್ತಿಯ ವರ್ಣನೆ, ಪ್ರಕೃತಿ-ಪುರಷರ ವಿವೇಕದಿಂದ ಮೋಕ್ಷ ಪ್ರಾಪ್ತಿಯ ವರ್ಣನೆ, ಅಷ್ಟಾಂಗ ಯೋಗದ ವಿಧಿ, ಭಕ್ತಿ ಯೋಗಧ ಮರ್ಮ ಮತ್ತು ಕಾಲದ ಮಹಿಮೆ, ಗರ್ಭಸ್ಥ ಜೀವಿಯ ಬೆಳವಣಿಗೆ ಅದೂ ಹಂತ-ಹಂತವಾಗಿ; ಹೀಗೆ ಅನೇಕಾನೇಕ ವಿಚಾರವನ್ನು ಕಪಿಲ ಮಹರ್ಷಿ ತನ್ನ ತಾಯಿಯಾದ ದೇವಹೂತಿಗೆ ಹೇಳುವುದರ ಮೂಲಕ ಲೋಕಕ್ಕೆ ವಿಶದಪಡಿಸುತ್ತಾರೆ. ಒಟ್ಟಿನಲ್ಲಿ ಇದು ಪಾರ್ಥನಿಗೆ ಪಾರ್ಥಸಾರಥಿಯಾದ ಶ್ರೀಕೃಷ್ಣ ಉಪದೇಶಪಡಿಸಿದ ಭಗವದ್ಗೀತೆಯಂತೆ ಶ್ರೀಮದ್ಭಾಗವತದಲ್ಲಿ ಭಗವದ್ ಸ್ವರೂಪವಾದ ಕಪಿಲ ಮಹರ್ಷಿಯು ತನ್ನ ತಾಯಿಗೆ ಬೋಧಿಸಿದ ತತ್ವಜ್ಞಾನವಾಗಿದೆ. ಇದರಿಂದಾಗಿ ದೇವಹೂತಿಗೆ ತತ್ವಜ್ಞಾನವುಂಟಾಗಿ ಮೋಕ್ಷ ಪದವಿ ಪ್ರಾಪ್ತವಾಗುತ್ತದೆ.

PC: Internet

ಸಾಗರರನ್ನು ಸುಟ್ಟು ಬೂದಿ ಮಾಡಿದುದು:-

ಸೂರ್ಯವಂಶದಲ್ಲಿ ‘ಬಾಹುಕ’ನೆಂಬವನ ಮಗನಾಗಿ ‘ಸಗರ’ ಚಕ್ರವರ್ತಿಯಿದ್ದ ಅವನಿಗೆ ಇಬ್ಬರು ಹೆಂಡಿರು. ‘ಕೇಶಿನಿ’ ಮತ್ತು ‘ಸುಮತಿ’ ಸುಮತಿಗೆ ಅರವತ್ತು ಸಾವಿರ ಸಗರ ಕುಮಾರರು ಜನಿಸಿದರೆ ಕೇಶಿನಿಗೆ ‘ಅಸಮಂಜಸ’ನೆಂಬ ಒಬ್ಬ ದುಶ್ಚರಿತ ಮಗನಿದ್ದ. ಈತನಿಂದಾಗಿ ಅರವತ್ತು ಸಾವಿರ ಮಕ್ಕಳೂ ದುಶ್ಚಟಕ್ಕೆ ಬಲಿಯಾದರು. ಅಷ್ಟು ಮಾತ್ರವಲ್ಲ ಋಷಿಮುನಿಗಳ ಯಜ್ಞ ಯಾಗಾದಿಗಳಿಗೆ ವಿಘ್ನವನ್ನು ತಂದೊಡ್ಡುತ್ತಾ ಸದಾ ಪರಪೀಡನೆಯಲ್ಲಿ ನಿರತರಾಗಿದ್ದರು. ಈ ಉಪಟಳವನ್ನು ತಡೆಯಲಾರದ ಋಷಿಮುನಿಗಳು ದೇವತೆಗಳ ಮೊರೆ ಹೊಗಲು, ಅವರು ‘ಶ್ರೀಹರಿ ಸಂಭೂತನಾದ ಕಪಿಲ ಮಹಾಮುನಿಗೆ ನಮಸ್ಕರಿಸಿ ಪ್ರಾರ್ಥಿಸಲು ಕಪಿಲಮುನಿಯು ಅವರ ನಾಶವು ಸ್ವಲ್ಪದರಲ್ಲೇ ಇದೆ. ನೀವು ನಿಶ್ಚಿಂತೆಯಿಂದಿರಿ’ ಎಂದು ಭರವಸೆಯಿತ್ತನು. ಹೀಗೆ ಸ್ವಲ್ಪ ಕಾಲದಲ್ಲಿ ಸಗರ ಚಕ್ರವರ್ತಿಯು ಅಶ್ವಮೇಧ ಯಾಗವನ್ನು ಕೈಗೊಂಡನು. ಆಗ ಈ ಆರವತ್ತು ಸಾವಿರ ಸಾಗರರು ಯಾಗದ ಕುದುರೆಯ ರಕ್ಷಕರಾಗಿ ಸಾಗಿದರು.ದೇವೇಂದ್ರನು ಯಜ್ಞಾಶ್ವವನ್ನು ಅಪಹರಿಸಿ ಒಂದು ಬಿಲವನ್ನು ಹೊಕ್ಕನು. ಭೂಮಿಯಲ್ಲೆಲ್ಲೂ ಯಜ್ಞಾಶ್ವವು ಕಾಣದಿರಲು ಸಾಗರರು ಪಾತಾಳವನ್ನು ಶೋಧಿಸುವುದಕ್ಕಾಗಿ ಪ್ರತಿಯೊಬ್ಬರೂ ಯೋಜನಾ ಪ್ರಮಾಣದಲ್ಲಿ ಭೂಮಿಯನ್ನಗೆಯಲು ಅಲ್ಲಿ ಶರತ್ಕಾಲದ ಸೂರ್ಯನಂತೆ ಕಪಿಲ ಮಹರ್ಷಿಯನ್ನು ಕಂಡರು. ಈತನೇ ಕುದುರೆ ಕಳ್ಳನೆಂದು ಅವನಿಗೆ ಹೊಡೆಯಲು ಕಪಿಲ ಮಹರ್ಷಿ ಅವರನ್ನೆಲ್ಲ ತೆರೆದ ಕಣ್ಣಿನಿಂದ ನೋಡಲು ಅವರ ದೇಹದಿಂದಲೇ ಅಗ್ನಿ ಉತ್ಪತ್ತಿಯಾಗಿ ದಗ್ಧರಾಗಿ ಹೋದರು. ಅರವತ್ತು ಸಾವಿರ ಸಾಗರರು ತೋಡಿದ ಹೊಂಡವೇ ಮತ್ತೆ ಸಾಗರವಾಯಿತು ಎಂಬ ಉಲ್ಲೇಖವೂ ಪುರಾಣದಲ್ಲಿದೆ.

ಹೀಗೆ  ಪುರಾಣ ಕೋಶದೊಳಗೆ ಮಾತ್ರವಲ್ಲದೆ ನಾಡಗೀತೆಯ ಮೂಲಕವೂ ಮಿಂಚುವ ಕೆಲವೇ ಕೆಲವು ಪುರುಷರಲ್ಲಿ ಕಪಿಲರು ಒಬ್ಬರು. ಇಂತಹ ಶ್ರೇಷ್ಠ ಪುತ್ರ ರತ್ನರನ್ನು ನೀಡಿದ ಮಾತೆಗೆ ಹಾಗೂ ನಾಡಿಗೆ ನಮೋನಮಃ.

-ವಿಜಯಾ ಸುಬ್ರಹ್ಮಣ್ಯ, ಕುಂಬಳೆ

5 Responses

 1. Vijayasubrahmanya says:

  ಅಡ್ಮಿನ್ ಹೇಮಮಾಲಾ ಹಾಗೂ ಓದುಗರಿಗೆ ಧನ್ಯವಾದಗಳು.

 2. ನಯನ ಬಜಕೂಡ್ಲು says:

  ಚೆನ್ನಾಗಿದೆ

 3. ಮರೆತ ಪುರಾಣ ಕಥೆಗಳನ್ನು ನೆನಪಿಸುವ ನಿಮಗೆ ಧನ್ಯವಾದಗಳು ವಿಜಯಾ ಮೇಡಂ.

 4. Padmini Hegde says:

  ಕಪಿಲರ ಪರಿಚಯ ಚೆನ್ನಾಗಿದೆ

 5. ಶಂಕರಿ ಶರ್ಮ says:

  ದುಷ್ಟ ಸಗರರ ಮೋಕ್ಷಕ್ಕೆ ಕಾರಣರಾದ ಕಪಿಲ ಮಹರ್ಷಿಗಳ ಪೌರಾಣಿಕ ಹಿನ್ನೆಲೆ ಬಹಳ ಚೆನ್ನಾಗಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: