ಐಸ್ ಕ್ಯಾಂಡೀ ಡಬ್ಬ…
ಬೇಸಿಗೆ ರಜೆಯ ಒಂದು ಮಧ್ಯಾಹ್ನ “ಅಮ್ಮ ಐಸ್ ಕ್ರೀಮ್ ಕೊಡ್ಸೂ,” ಅಂತ ಮಗಳ ರಾಗ ಒಂದೇ ಸಮನೆ ಶುರುವಾಯ್ತು.ಪಾಪ ಅವಳು ತಾನೇ ಏನು ಮಾಡಲು ಸಾಧ್ಯ ಬೇಸಿಗೆ ಬಿಸಿ ಅಷ್ಟೊಂದು ಕತ್ತಿಕೊಂಡು ಉರಿತಾ ಇರುವಾಗ.” ದಿನಾ ನಿನ್ನದೊಂದು ಐಸ್ ಕ್ರೀಮ್ ರಾಗ,” ಅಂತ ಬೈದರೂ ಕೊಡಿಸದೆ ಇರಲಾಗಲಿಲ್ಲ.ಡಯಾಬಿಟಿಸ್ ಅಂತ ನಾನಂತೂ ತಿನ್ನಲಾಗಲ್ಲ,ಮಕ್ಕಳು ತಿನ್ನುವಾಗ ನೋಡಿ ಖುಷಿ ಪಡೋದಷ್ಟೆ ನನ್ನ ಪಾಲಿಗೆ ಉಳಿದಿರುವುದು. “ಹೇಗೋ ತಿನ್ನೋ ಕಾಲದಲ್ಲಿ ಎಲ್ಲಾ ತರಹದ ಫ್ಲೇವರ್ ಗಳ ಐಸ್ಕ್ರೀಮ್ ತಿಂದು ಮುಗಿಸಿದ್ದಿನಲ್ಲಾ ಬಿಡು,” ಅಂತ ನನ್ನ ಮನಸ್ಸಿಗೆ ನಾನೇ ಸಮಾಧಾನ ಮಾಡಿಕೊಂಡು ಸುಮ್ಮನಾಗುತ್ತೇನೆ.
ಐಸ್ ಕ್ರೀಮ್ ಇಷ್ಟ ಪಡದಿರುವ ಪ್ರಾಣಿ ಪ್ರಪಂಚದಲ್ಲಿ ಉಂಟೇ ಹೇಳಿ. ಮಕ್ಕಳಂತೂ ಸುಡು ಬೇಸಿಗೆಯಲ್ಲಿ ಮಾತ್ರವಲ್ಲದೆ ಎಂಥಾ ಸುರಿಯುವ ಮಳೆಯಿರಲಿ,ನಡುಗುವ ಚಳಿಗಾಲವಿರಲಿ ಕೊಡಿಸಿದರೆ ಬೇಡ ಅನ್ನೋದಿಲ್ಲ. ಅದೂ ಈಗೀಗಂತು ಪ್ರಪಂಚದಲ್ಲಿರುವ ಎಲ್ಲಾ ರೀತಿಯ ಹಣ್ಣುಗಳ ಫ್ಲೇವರ್ ಗಳ ಐಸ್ಕ್ರೀಮ್ ಸಿಗುತ್ತೆ. ಹಣ್ಣುಗಳಿರಲಿ ಎಳನೀರು,ಚಾಕೊಲೇಟ್,ಕಾಫೀ ಫ್ಲೇವರ್ ಗಳೂ ಸಕ್ಕತ್ ಬೇಡಿಕೆಯಲ್ಲಿವೆ.ವಿಧ ವಿಧದ ಐಸ್ ಕ್ರೀಂ ಸ್ಟಿಕ್ ಗಳು ಮಕ್ಕಳಿಗೆ ಇನ್ನೂ ಪ್ರಿಯ.ಒಟ್ಟಾರೆ ಅಪ್ಪ ಅಮ್ಮಂದಿರ ಜೇಬು ಗಟ್ಟಿಯಾಗಿದ್ದರೆ ಬೇಸಿಗೆಯ ಕಾವು ನೀಗಲು ಐಸ್ ಕ್ರೀಮ್ ಗಿಂತ ಬೇರೆ ಉಪಾಯ ಇನ್ನೇನಿದೆ?
ಈಗಿನ ಈ ತರಹಾವರಿ ಫ್ಲೇವರ್ ಗಳ ಐಸ್ ಕ್ರೀಮ್ ಗಳು ಎಷ್ಟೇ ಖುಷಿ ಕೊಟ್ಟರೂ ಬಾಲ್ಯದಲ್ಲಿ ತಿನ್ನುತ್ತಿದ್ದ ಐಸ್ ಕ್ಯಾಂಡಿಗಳ ಮಜವೇ ಬೇರೆ.ಒಂದು ಸೈಕಲ್ ಮೇಲೆ ಒಂದು ದೊಡ್ಡ ಮರದ ಡಬ್ಬ ಕಟ್ಟಿಕೊಂಡು ” ಐಸ್ ಕ್ಯಾಂಡಿ” ಅಂತ ಕೂಗುತ್ತಾ ಸೈಕಲ್ ಹ್ಯಾಂಡಲ್ ಗೆ ಕಟ್ಟಿದ್ದ ಪೋಂ ಪೋಂ ಹಾರ್ನ್ ಬಾರಿಸುತ್ತ ಬರ್ತಿದ್ದ ಐಸ್ ಕ್ಯಾಂಡಿ ಅಣ್ಣಂದಿರು ನಗರವಾಸಿಯಾದ ಬಳಿಕ ಈಗೆಲ್ಲಾ ಎಲ್ಲೋ ನೋಡಲೇ ಸಿಕ್ತಾ ಇಲ್ಲ.ಚಿಕ್ಕಂದಿನಲ್ಲಿ ನಾನು, ನನ್ನಣ್ಣ ತಮ್ಮ ಎಲ್ಲಾ ಎಷ್ಟು ಕ್ಯಾಂಡಿ ತಿಂದಿದ್ದೇವೋ ಲೆಕ್ಕವೇ ಇಲ್ಲ.
ಬೇಸಿಗೆ ರಜೆಯಲ್ಲಿ ಹೋಗುತ್ತಿದ್ದ ಅಜ್ಜಿ ಊರಲ್ಲೂ ಕೂಡ ಒಬ್ಬ ಐಸ್ ಕ್ಯಾಂಡಿ ಅಣ್ಣ ನಮ್ಮಜ್ಜಿ ಮನೆ ಇದ್ದ ಬೀದಿಗೆ ಪೋಂ ಪೋಂ ಅಂತ ತನ್ನ ಸೈಕಲ್ ಹಾರ್ನ್ ಬಾರಿಸುತ್ತ ” ಐಸ್ ಕ್ಯಾಂಡಿ” ಅಂತ ತನ್ನದೇ ಆದ ವಿಶಿಷ್ಟ ರಾಗದಲ್ಲಿ ಕೂಗುತ್ತಾ ಬರೋನು. ನಾವೆಲ್ಲಾ ಅವ್ವ ಅಂತ ಕರಿತಾ ಇದ್ದ ನಮ್ಮಜ್ಜಿಯ ಮನೆ ನಮ್ಮಜ್ಜಿಯ ಎಲ್ಲಾ ಏಳು ಮಕ್ಕಳ ಮಕ್ಕಳಿಂದ ಬೇಸಿಗೆ ರಜೆ ಮುಗಿಯುವವರೆಗೂ ತುಂಬಿ ತುಳುಕುತಿತ್ತು. ಸೇರು ಪಾವು ಚಟಾಕು ಅನ್ನುವಂತೆ ಹೈಸ್ಕೂಲ್ ಮಕ್ಕಳಿಂದ ಹಿಡಿದು ಶಿಶುವಿಹಾರಕ್ಕೆ ಹೋಗುತ್ತಿದ್ದ ಮಕ್ಕಳವರೆಗೆ ಸುಮಾರು ಹದಿನೈದು ಜನ ಇದ್ದೆವು. ನಮ್ಮಜ್ಜಿ ಮನೆ ಅಂದ್ರೆ ಊರ ಕೊನೆಯ ತೋಟದಲ್ಲಿ ಒಂದೇ ದೊಡ್ಡ ಕಾಂಪೌಂಡ್ ಒಳಗಿದ್ದ ನಮ್ಮ ಮೂವರು ಮಾವಂದಿರ ಮನೆಗಳು.ಮನೆಗಳ ಹಿಂದೆಯೇ ಅವರಿಗೆ ಸೇರಿದ್ದ ದೊಡ್ಡ ತೆಂಗಿನ ತೋಟ.ನಮ್ಮಮ್ಮ ಹಾಗೂ ಅವರ ತಂಗಿಯರು, ಅವರ ಮಕ್ಕಳು ಎಲ್ಲಾ ಬೇಸಿಗೆ ರಜೆಯಲ್ಲಿ ನಮ್ಮ ಕೊನೇ ಮಾವನ ಮನೆಯಲ್ಲಿ ಝಂಡಾ ಊರುತ್ತಿದ್ದೆವು.ನಮ್ಮ ಜೊತೆಗೆ ನಮ್ಮ ಮೂವರೂ ಮಾವಂದಿರ ಮಕ್ಕಳು ಕೂಡ ಸೇರಿಕೊಂಡು ರಜೆ ಪೂರ್ತಿ ದಾಂಧಲೆಯೋ ದಾಂಧಲೆ.
ಬೆಳಿಗ್ಗೆ ಹೊತ್ತು ಗಬಗಬನೆ ತಿಂಡಿ ತಿಂದು ಎಲ್ಲರೂ ತೋಟ ಹೊಕ್ಕೆವೆಂದರೆ ಮಧ್ಯಾಹ್ನ ಊಟದ ಹೊತ್ತಿಗೇ ಮನೆಗೆ ಬರ್ತಾ ಇದ್ದದ್ದು.ಮತ್ತೆ ಊಟದ ಶಾಸ್ತ್ರ ಮಾಡಿ ತಿರುಗಿ ತೋಟ ಹೊಕ್ಕರೆ ಇನ್ನು ಮರಳುತ್ತಾ ಇದ್ದದ್ದು ಚೆನ್ನಾಗಿ ಕತ್ತಲಾದ ಬಳಿಕವೇ.ತೋಟದಲ್ಲಿ ಆಡದೇ ಇದ್ದ ಆಟವೇ ಇಲ್ಲ.ಹಲಸಿನ ಮರಕ್ಕೆ ಜೋಕಾಲಿ ಕಟ್ಟಿ ಜೀಕೋದು,ಪಂಪ್ ಸೆಟ್ ತೊಟ್ಟಿಯಲ್ಲಿ ಮುಳುಗು ಹಾಕೋದು,ಪಕ್ಕದ ತೋಟಕ್ಕೆ ನುಗ್ಗಿ ಅಲ್ಲಿದ್ದ ಜೀರಿಗೆ ಮಾವಿನ ಮರಕ್ಕೆ ಕಲ್ಲು ಹೊಡೆಯೋದು, ಬೆಟ್ಟುಣಿಸೆ ಹಣ್ಣು ಕೀಳೋದು,ಎಳನೀರು ಇಳಿಸೋದು,ತೋಟದ ಕೊನೆಯ ಕೊರಕಲಲ್ಲಿ ಹರಿಯುತ್ತಿದ್ದ ನೀರಿನಲ್ಲಿ ಆಟವಾಡೋದು,ಅಲ್ಲೇ ಕಲ್ಲು ಸಂಧಿಯಲ್ಲಿ ಅವುಸಿಕೊಂಡು ಇರುತ್ತಿದ್ದ ಏಡಿಗಳ ಹಿಡಿದು ತೆಂಗಿನ ಗರಿಗಳ ಒಟ್ಟುಗೂಡಿಸಿ ಬೆಂಕಿ ಹಾಕಿ ಏಡಿಗಳ ಸುಟ್ಟು ತಿನ್ನೋದು, ಬಾವಿ ಹತ್ತಿರದ ಗುಡ್ಡೆ ಹಾಕಿದ್ದ ಗೋಡು ಮಣ್ಣಲ್ಲಿ ಎತ್ತಿನ ಗಾಡಿ,ಗಣೇಶ,ಪಾತ್ರೆ ಪಗಡ ಮಾಡೋದು,ಒಂದೇ ಎರಡೇ!ದೊಡ್ಡವರು ಕೂಡ ಯಾರೂ ಮಕ್ಕಳ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ.” ರಜ ಅಲ್ವಾ, ಆಡಿಕೊಳ್ಳಲಿ ಬಿಡು,”.ಅಂತ ಸುಮ್ಮನಾಗೋರು.
ಆದರೆ ಎಷ್ಟೇ ತೋಟದ ಕೊನೆಯಲ್ಲಿದ್ದು, ಏನೇ ಆಟದಲ್ಲಿ ತೊಡಗಿದ್ದರೂ ಐಸ್ ಕ್ಯಾಂಡಿಯವನ ಪೋಂ ಪೋಂ ಮಾತ್ರ ನಮ್ಮ ಕಿವಿಗೆ ಬಿದ್ದೇ ಬೀಳ್ತಾ ಇತ್ತು.ಅಲ್ಲದೇ ಹೆಚ್ಚು ಕಡಿಮೆ ಅವನು ನಾವು ಮಧ್ಯಾಹ್ನ ಊಟದ ಹೊತ್ತಿಗೆ ಮನೆ ಸೇರೋ ಹೊತ್ತಿಗೇ ಸರಿಯಾಗಿ ಪೋಂ ಪೋಂ ಎನ್ನುತ್ತಾ ಬರೋನು.ತೊಗೊ ನಾವೆಲ್ಲ ನಮ್ಮ ಅಜ್ಜಿಗೆ, ಮಾವಂದಿರಿಗೆ ಇಲ್ಲವೇ ಅಮ್ಮ , ಚಿಕ್ಕಮ್ಮಂದಿರಿಗೆ,’ ಐಸ್ ಕ್ಯಾಂಡಿ ಕೊಡ್ಸಿ,” ಅಂತ ಪೇರಾಕಿಕೊಳ್ಳುತ್ತಿದ್ದೋ. ಆಗೇನು ಐಸ್ ಕ್ಯಾಂಡಿ ಒಂದಕ್ಕೆ ಹತ್ತು ಪೈಸೆ ಮಾತ್ರ.ಅದು ಬಣ್ಣ ಬಣ್ಣದ ಸಕ್ಕರೆ ನೀರಿನ ಕ್ಯಾಂಡಿಗೆ.ಇನ್ನೊಂದು ಕಬ್ಬಿನ ರಸದಲ್ಲಿ ಮಾಡಿರೋದು, ಅದನ್ನ ನಾವು ಕಬ್ಬಿನ ಹಾಲೈಸು ಅಂತ ಕರಿತಿದ್ದೋ.ಅದಕ್ಕೆ ಮಾತ್ರ ಇಪ್ಪತ್ತೈದು ಪೈಸೆ. ಈಗಿನ ಐಸ್ ಕ್ರೀಮ್ ಗಳಿಗೆ ಹೋಲಿಸಿದರೆ ಆ ಕ್ಯಾಂಡಿಗಳ ಬೆಲೆ,ಗುಣಮಟ್ಟ ಎರಡೂ ಅಷ್ಟಕಷ್ಟೇ.ಸಿಹಿ ಹಾಗೂ ತಣ್ಣನೆ ಗುಣ ಬಿಟ್ರೆ ಅದರಲ್ಲಿ ಇನ್ನೇನೂ ಇರ್ತಾ ಇರ್ಲಿಲ್ಲ.ಆದ್ರೆ ನಮಗೆ ಅದೇ ಅಪರೂಪದ ವಸ್ತು. ಹತ್ತು ಪೈಸೆದು ಕೊಡಿಸಿದ್ರೂ ಸಾಕಿತ್ತು,ಮುಖ ಮೂತಿಗೆಲ್ಲ ಅದರ ಬಣ್ಣ ಹತ್ತಿಕೊಳ್ಳುವಂತೆ ಚೀಪಿಕೊಂಡು ತಿನ್ನೋದೇ ಒಂದು ಸುಖ ನಮಗೆಲ್ಲ. ಎಲ್ಲೋ ಅಪರೂಪಕ್ಕೆ ಕಬ್ಬಿನ ಹಾಲೈಸು ಕೊಡಿಸೋರು.ಒಮ್ಮೊಮ್ಮೆ ಮಕ್ಕಳ ಜೊತೆಗೆ ದೊಡ್ಡವರು ಕೂಡ ತೊಗೊಳ್ಳೋರು.ಆಗಂತೂ ಐಸ್ ಕ್ಯಾಂಡಿ ಅಣ್ಣನಿಗೆ ಭರ್ಜರಿ ವ್ಯಾಪಾರ.
ನಮ್ಮಜ್ಜಿ ಊರು ಸುಮಾರಾಗಿ ದೊಡ್ಡ ಊರೇ.ಐಸ್ ಕ್ಯಾಂಡಿ ಅಣ್ಣ ದಿನಕ್ಕೊಂದು ಬೀದಿಗೆ ಹೋಗಿ ನಮ್ಮ ಬೀದಿಗೆ ಎಲ್ಲೋ ವಾರಕ್ಕೆ ಒಂದು ಇಲ್ಲ ಎರಡು ದಿನ ಬಂದರೆ ಹೆಚ್ಚು. ಹಂಗಾಗಿ ಅವನು ಬಂದಾಗೆಲ್ಲಾ ನಮ್ಮ ಕೊನೇಮಾವ ಎಲ್ಲರಿಗೂ ಕೊಡಿಸುತ್ತಿದ್ದರು.
ಒಂದು ವರ್ಷ ಏನಾಯ್ತಪ್ಪ ಅಂದರೆ ಅವನು ಹೆಚ್ಚು ಕಮ್ಮಿ ದಿನಾ ನಮ್ಮ ಬೀದಿಗೆ ಬರಲು ಶುರು ಮಾಡಿಬಿಟ್ಟ.ಅಷ್ಟು ಸುಲಭವಾಗಿ ಅಷ್ಟೋಂದು ಮಕ್ಕಳು ಮರಿ ಐಸ್ ಕ್ಯಾಂಡಿ ಕೊಳ್ಳುವ ಜಾಗ ಅವನು ಬಿಡಲು ಸಾಧ್ಯವೇ?ಆದರೆ ಎಷ್ಟೇ ಕಮ್ಮಿ ದುಡ್ಡು ಅಂದ್ರೂ ದಿನಾ ಕೊಡಿಸಲು ಸಾಧ್ಯವೇ?ಒಟ್ಟಾರೆಯಾಗಿ ಮಕ್ಕಳು ದೊಡ್ಡವರು ಅಂತ ಮೂರೂ ಮನೆ ಸೇರಿ ಕಮ್ಮಿ ಅಂದ್ರೂ ಇಪ್ಪತ್ತೈದರಿಂದ ಮೂವತ್ತು ಜನರಿದ್ದೋ.ಎಲ್ಲರಿಗೂ ಕೊಡಿಸಿದರೆ ದಿನಕ್ಕೆ ಹೆಚ್ಚು ಕಮ್ಮಿ ಐದುರೂಪಾಯಿಯಂತೆ ವಾರಕ್ಕೆ ಮೂವತ್ತರಿಂದ ನಲವತ್ತು ರೂಪಾಯಿ ಆಗೋದು.ಆಗಿನ ಕಾಲಕ್ಕೆ ಅದು ದೊಡ್ಡ ಮೊತ್ತವೇ ಸರಿ. ತಮಗಿದ್ದ ಒಂದು ಚಿಕ್ಕ ತೋಟ ಹಾಗೂ ಗದ್ದೆಗಳ ಆದಾಯದಲ್ಲಿ ಪಾಪ ಮಾವ ತಾನೇ ಎಷ್ಟು ಅಂತ ದುಡ್ಡು ಹೊಂಚಲು ಸಾಧ್ಯ? ಆದರೆ ಮಕ್ಕಳಿಗಂತೂ ಅರ್ಥವೇ ಆಗ್ತಾ ಇರ್ಲಿಲ್ಲ.ಅದರಲ್ಲೂ ಹಠಮಾರಿ ಚಿಕ್ಕಮಕ್ಕಳಂತೂ ಕೊಡಿಸದೇ ಇದ್ದರೆ ಅತ್ತು ಕರೆದು ಬೀದಿಯಲ್ಲಿ ಹೊರಳಿ ಅಕ್ಕ ಪಕ್ಕದವರ ಎದುರು ಮಾನ ಕಳೆಯುತ್ತಿದ್ದರು.ಹೆಂಗೋ ಒಂದು ವಾರ ನಮ್ಮ ಮಾವ ತಳ್ಳಿದರು.ಅಷ್ಟರಲ್ಲಿ ತಮ್ಮನ ಕಷ್ಟ ನೋಡಲಾಗದೆ ನಮ್ಮಮ್ಮನಿಗೆ ಒಂದು ಉಪಾಯ ಹೊಳೆಯಿತು. ಹೇಗೂ ಅವನು ಹೆಚ್ಚು ಕಡಿಮೆ ದಿನಾ ಒಂದೇ ಸಮಯದಲ್ಲಿ ಬರ್ತಾ ಇದ್ದದ್ದು.ಒಂದು ದಿನ ಅವನು ಬರೋ ಮುಂಚೆ ಮಕ್ಕಳನ್ನೆಲ್ಲ ಕರೆದು ಸಾಲಾಗಿ ಹಿತ್ತಲಲ್ಲಿ ಕೂರಿಸಿದರು.ನಂತರ” ನೋಡ್ರಪ್ಪ ಬೆಳಿಗ್ಗೆ ರೇಡಿಯೋ ನ್ಯೂಸ್ ನಲ್ಲಿ ಹೇಳಿದ್ರು.ನಮ್ಮೂರ್ಗೆ ಒಬ್ಬ ಮಕ್ಕಳ ಕಳ್ಳ ಬಂದವನಂತೆ.ಅವನು ಏನೋ ಮಾಟ ಮಂತ್ರ ಕಲ್ತವ್ನಂತೆ,ಯಾವ ಮಗ ಬೇಕೋ ಅದ್ರ ಹೆಸ್ರು ಮಾತ್ರ ಅದುಕ್ಕೆ ಮಾತ್ರ ಕೇಳೋ ಹಂಗೇ ಕರಿತಾನಂತೆ.ಆಗ ಆ ಮಗಿಗೇ ಗೊತ್ತಾಗದಂಗೆ ಅದು ಎದ್ದು ಅವನಿಂದೆ ಹೊಯ್ತ ದಂತೆ.ಆಮೇಲೆ ಅವ್ನು ಹಿಂಗೆ ಹಿಡಿಯೋ ಮಕ್ಳ ಬಾಂಬೆಗೆ
ಕರ್ಕೊಂಡ್ ಹೋಗಿ ಅಲ್ಲಿ ಅವ್ರ ಕೈ ಕಾಲು ಮುರಿದು ಬಿಕ್ಷೆ ಬೇಡಕ್ಕೆ ಕೂರುಸ್ತಾರಂತೆ.” ಎಂದು ಹೇಳಿಬಿಟ್ಟರು. ತಗೋ ನಮಗೆಲ್ಲಾ ಕೈ ಕಾಲುಗಳು ಗಡ ಗಡ ಗಡ ನಡುಗಲು ಶುರುವಾಗಿ ಹೋಯಿತು.” ಹಂಗಾರೆ ಏನು ಮಾಡೋದು ಈಗ!” ಅಂತ ನಮ್ಮವ್ವ ಮುಖದಲ್ಲಿ ಗಾಬರಿ ತೋರಿಸುತ್ತಾ ಕೇಳಿದಾಗ ನಮ್ಮಮ್ಮ” ಈಗ ಅವನು ಬರೋ ಹೊತ್ತು,ಎಲ್ಲಾ ಅವನು ಕರೆಯೋದು ಕೇಳದ ಹಾಗೆ ಕಿವಿ ಮುಚ್ಕಳಿ,ಅವನು ಹೋದ ಮೇಲೆ ನಾನು ಹೇಳ್ತೀನಿ,ಆಗ ತಗಿರಿ.” ಎಂದರು.ಸರಿ ಅಂತ ನಾವೆಲ್ಲ ನೆಲದ ಮೇಲೆ ಚಕ್ಕಲು ಬಕ್ಕಲು ಹಾಕಿಕೊಂಡು ಕುಳಿತು ಎರಡೂ ಕಿವಿಗಳೊಳಗೆ ಬೆರಳುಗಳ ಹಾಕಿಕೊಂಡು ಹೊರಗಡೆಯ ಯಾವುದೇ ಶಬ್ದ ಕೇಳದ ಹಾಗೆ ಚೆನ್ನಾಗಿ ಕಿವಿ ಮುಚ್ಚಿಕೊಂಡು ಕುಳಿತೆವು.ಸುಮಾರು ಹೊತ್ತಾದ ಮೇಲೆ ನಮ್ಮಮ್ಮ ಬಂದು ” ಅವ್ನು ಹೋದ ಕನಂತೆ,ಈಗ ಹೋಗಿ ಆಡ್ಕೊಳಿ,” ಎಂದಾಗಲೇ ನಾವು ಮುಚ್ಚಿದ್ದ ಕಿವಿ ತೆಗೆದಿದ್ದು.ನಮ್ಮಮ್ಮ,ನಮ್ಮವ್ವ ಮುಸಿ ಮುಸಿ ನಗುತ್ತಾ ಇದ್ರೂ ನಮ್ಮ ಬುರುಡೆಗೆ ಏನೂ ಹೊಳೆಯಲೇ ಇಲ್ಲ.ಹಿಂಗೇ ಮೂರ್ನಾಕ್ ದಿನ ಕಳಿತು.ಒಂದು ದಿನ ನಮ್ಮ ದೊಡ್ಡಮಾವನ ಮಗಳು ಯಾಕೋ ತಲೆ ಕಡಿತಾ ಇದೆ ಅಂತ ತಲೆ ಕೆರೆದುಕೊಳ್ಳಲು ಕೈ ತೆಗೆದವಳಿಗೆ ಪೋಂ ಪೋಂ ಶಬ್ದ ಕೇಳಿ ಬಿಟ್ಟಿತು.ಆಗ ಅವಳು ಅವಸರ ಅವಸರವಾಗಿ ಎಲ್ಲರಿಗೂ ಕೈ ತೆಗೆಯಲು ಹೇಳಿ ” ಲೋ ಐಸ್ ಕ್ಯಾಂಡಿ ಅಣ್ಣ ಬಂದವ್ನೆ ಕಣ್ರೋ,ಅತ್ತೆ ಸುಮ್ ಸುಮ್ನೆ ನಮ್ಗೆ ಸುಳ್ ಹೇಳದೆ,ಬನ್ನಿ ಎಲ್ಲಾ ತಗುಸ್ಕೊಳನ ” ಅಂದಾಗ ಎಲ್ಲರೂ ಎದ್ದು ಮನೆ ಮುಂದಿನ ಬೀದಿಗೆ ಓಡಿದೋ.
ಮತ್ತೆ ಮಕ್ಕಳ ಕಾಟ ತಡೆಯಲು ಆಗದೇ ನಮ್ಮ ಮಾವ ಎಲ್ಲರಿಗೂ ಐಸ್ ಕ್ಯಾಂಡಿ ಕೊಡಿಸಿ ನಂತರ ಐಸ್ ಕ್ಯಾಂಡಿ ಅಣ್ಣನಿಗೆ ಗದರಿದರು.” ಲೋ ನಿಂಗೆ ಇನ್ಯಾವ್ದೂ ಬೀದಿ ಇಲ್ವಾ,ದಿನಾ ಇಲ್ಲೇ ಬಂದ್ ಸಾಯ್ತಿಯಲ್ಲ, ಹೊಯ್ತಿಯೋ ಇಲ್ವೋ,” ಅಂದಾಗ ಅವನು ಪೆಚ್ಚು ನಗೆ ನಗುತ್ತಾ ಹೋದವನು ಒಂದೆರಡು ದಿನ ಬರಲಿಲ್ಲ.ನಮ್ಮ ಮಾವ “ಹೆಂಗೂ ಕಾಟ ತಪ್ತು” ಅಂತ ಖುಷಿಯಾದರು.
ಆದ್ರೆ ಎರಡು ದಿನದ ಬಳಿಕ ಮತ್ತೆ ಅವನ ಪೋಂ ಪೋಂ ಕೇಳಿಸಿತು. ಹೈಕಳೆಲ್ಲ ಮತ್ತೆ ನಮ್ಮಾವನ ಕಾಡಿಸ ತೊಡಗಿದೆವು.ನಮ್ಮಾವ” ಎಲ್ರು ಬನ್ನಿ ಕೊಡುಸ್ತಿನಿ” ಅಂದಾಗ ನಮಗೆಲ್ಲಾ ಖುಷಿಯೋ ಖುಷಿ.ಮಾವಾ ನಮಗೂ ಮಾತ್ರವಲ್ಲದೆ ಮನೆ ಜನಕ್ಕೆಲ್ಲ ಒಂದೊಂದು, ಅದೂ ಕಬ್ಬಿನ ಹಾಲೈಸನ್ನೇ ಕೊಡಲು ಹೇಳಿದರು.ಅವನಿಗೂ ಭರ್ಜರಿ ವ್ಯಾಪಾರ ನೋಡಿ ಖುಷಿಯೋ ಖುಷಿ.ಡಬ್ಬದಲ್ಲಿದ್ದ ಎಲ್ಲಾ ಕಬ್ಬಿನ ಹಾಲೈಸು ಖಾಲಿಯಾದವು.ಆಮೇಲೆ ನಮ್ಮ ಮಾವ ” ಲೋ ಎಷ್ಟ್ ಆಯ್ತು ಹೇಳ್ಲಾ ” ಅಂದಾಗ ಅವನು ಲೆಕ್ಕ ಹಾಕಿ ಹೇಳಿದ.ನಾವೆಲ್ಲ ಕ್ಯಾಂಡಿ ಚೀಪಿಕೊಂಡು ನೋಡ್ತಾ ನೋಡ್ತಾನೆ ಇದ್ದೀವಿ, ನಮ್ಮಾವ ದುಡ್ಡು ಕೊಡೋದರ ಬದಲು ನೆಲದಿಂದ ಒಂದು ಹಿಡಿ ಮಣ್ಣು ತೊಗೊಂಡು ” ಲೋ ಅದೇನು ದಿನಾ ನೀನು ಇದೇ ಒಂದು ಆಟ ಮಾಡ್ಕೊಂಡ್ ಇದೀಲ? ಹೇಳೋರು ಕೇಳೋರು ಯಾರೂ ಇಲ್ವಾ!ಒಂದಿನ ಸರಿ,ಎರಡ್ದಿನ ಸರಿ, ದಿನಾ ನಿಂಗೆ ಯಾರ್ಲ ದುಡ್ ಹಿಡ್ಕಂಡ್ ನಿಂತಿರೋರು, ದುಡ್ ಬೇಕಾ ನಿಂಗೆ,ಹಿಡಿ ಇಲ್ಲಿ, ಮಣ್ ತುಂಬ್ ಬುಡ್ತಿನಿ ನಿನ್ ಡಬ್ಬುಕ್ಕೆ, ಬಡ್ಡಿ ಮಗ್ನೆ ಹೋಯ್ತಿಯೋ ಇಲ್ವೋ?” ಎಂದು ಜಗಳಕ್ಕೆ ನಿಂತು ಬಿಟ್ಟರು.ನಾವೆಲ್ಲ ಕಕ್ಕಾಬಿಕ್ಕಿ.ನಮ್ಮ ಜೊತೆಗೇ ಐಸ್ ಕ್ಯಾಂಡಿ ತಿನ್ನುತ್ತಾ ನಿಂತಿದ್ದ ನಮ್ಮಮ್ಮ ಚಿಕ್ಕಮ್ಮ ಅತ್ತೆಯಂದಿರಿಗೆಲ್ಲಾ ನಗುವೋ ನಗು.ಅವನು ಮಾತ್ರ ಹಲ್ಲು ಕಿರಿಯುತ್ತ ” ಅಣ ನಿನ್ ದಮ್ಮಯ್ಯ ಕನಣ,ಇನ್ನೊಂದ್ ದಿನ ಈ ಬೀದಿ ಇರ್ಲಿ ಈ ಊರ್ಗೇ ಬರಕ್ಕಿಲ್ಲ ಕನಣ, ಇವತ್ತಿನ್ ದುಡ್ ಕೊಟ್ಬುಡು ಸಾಕು,” ಅಂತ ಗೋಗರೆಯುತ್ತಾ ನಿಂತ.ನಮಗೆಲ್ಲ ಅಳು.” ಮಾವ ಬ್ಯಾಡ ಕಣ್ ಮಾವ,ಬುಟ್ ಬುಡು ಮಾವ,” ಅಂತ ನಾವೂ ಪೇಚಾಡುತ್ತ ನಿಂತೆವು.ಆದ್ರೂ ನಮ್ಮಾವ ಒಂದು ಕೈಯಲ್ಲಿ ಅವನ ಕ್ಯಾಂಡಿ ಡಬ್ಬ ಇನ್ನೊಂದು ಕೈಯಲ್ಲಿ ಮಣ್ಣು ಹಿಡಿದು ಇನ್ನೇನು ಡಬ್ಬದೊಳಗೆ ಮಣ್ಣು ಹಾಕಿಯೇ ಬಿಟ್ಟ ಹಾಗೆ ಅಭಿನಯಿಸತೊಡಗಿದರು.ಅವನು ಎರಡೂ ಕೈಯಲ್ಲಿ ಡಬ್ಬದ ಮುಚ್ಚಳ ಬಿಗಿಯಾಗಿ ಹಿಡಿದು,” ಅಣ ಅಣ ಅಣ ಬ್ಯಾಡ ಕನಣ” ಅಂತ ಗೋಗರೆಯುತ್ತಲೇ ಇದ್ದ.ಅಷ್ಟರಲ್ಲಿ ಅಲ್ಲಿಗೆ ಬಂದ ನಮ್ಮವ್ವ ” ಲೋ ನಿನ್ ಕುಕ್ಕುರ್ಸಾ ,ಹಿಡಿ ನಿನ್ ದುಡ್ಡ,ಇನ್ನೊಂದ್ ದಿನ ಈ ಕಡಿಕ್ ಬರ್ಬೇಡ,” ಎಂದು ಅವನ ಕೈಗೆ ದುಡ್ಡು ಕೊಟ್ಟರು.ಅವನು ದುಡ್ಡು ತೆಗೆದು ಕೊಂಡವನೆ ಸತ್ತೆನೋ ಕೆಟ್ಟೇನೋ ಎನ್ನುವ ಹಾಗೆ ಸೈಕಲ್ ತಿರುಗಿಸಿಕೊಂಡು ಹತ್ತಿಕೊಂಡು ಹಾರಿ ಹೊರಟು ಹೋದ. ನಮಗೆಲ್ಲಾ ಇನ್ನು ಐಸ್ ಕ್ಯಾಂಡಿ ಸಿಗೋದಿಲ್ಲವಲ್ಲ ಅನ್ನೋದು ನೆನೆದು ಅಳುವೋ ಅಳು.ತಿನ್ನುತ್ತಿದ್ದ ಕಬ್ಬಿನ ಹಾಲೈಸು ಕೂಡ ಕಹಿಯಾಗತೊಡಗಿತು.ನಮ್ಮವ್ವ, ಅಮ್ಮ, ಚಿಕ್ಕಮ್ಮಂದಿರು, ಅತ್ತೆಯರಿಗೆಲ್ಲ ನಗುವೋ ನಗು. ಅಂತೂ ಆ ದಿನ ನಮ್ಮಾವನಿಂದ ತಪ್ಪಿಸಿಕೊಂಡು ಹೋದ ಅವನು ಮತ್ತೆಂದೂ ನಮ್ಮ ಬೀದಿ ಕಡೆಗೆ ಬರಲಿಲ್ಲ.ನಮಗೂ ಸ್ವಲ್ಪ ದಿನ ಬೇಜಾರಾಗಿ ಆಮೇಲೆ ಮರೆತು ಹೋಯಿತು.ಅವನನ್ನು ಓಡಿಸಿದ್ದಕ್ಕೆ ಪಶ್ಚಾತಾಪ ಎನ್ನುವಂತೆ ಊರಲ್ಲಿದ್ದಷ್ಟು ದಿನ ನಮ್ಮಾವ ದಿನಾ ಬೆಟ್ಟುಣಿಸೆ ಹಣ್ಣು,ಹಲಸಿನಹಣ್ಣು,ಮಾವಿನಹಣ್ಣು, ಪರಂಗಿಹಣ್ಣು, ನೆರಳೇಹಣ್ಣು ಇಲ್ಲವೇ ಎಳನೀರು ಅಂತೆಲ್ಲ ಏನಾದರೂ ಒಂದು ಮಕ್ಕಳಿಗೆ ತೋಟದಿಂದ ಪೂರೈಕೆ ಮಾಡಿತು.
ಈಗೆಲ್ಲಾ ಮಕ್ಕಳು ಚಾಕೊಬಾರ್,ಆರೆಂಜ್ ಕ್ಯಾಂಡಿ ಅಂತೆಲ್ಲ ತಿನ್ನುವಾಗ ಆ ಐಸ್ ಕ್ಯಾಂಡಿಯವನ ಪೋಂ ಪೋಂ ನೆನಪಾಗಿ ನಗು ಉಕ್ಕಿ ಬರುತ್ತದೆ.
-ಸಮತಾ ಆರ್
ಐಸ್ ಕ್ಯಾಂಡೀಯಷ್ಟೇ ಸಿಹಿ ಬರಹ. … ಅಭಿನಂದನೆಗಳು.
ಸೊಗಸಾದ ಬರಹ. ಬಾಲ್ಯ ಮತ್ತೆ ಕಣ್ಣ ಮುಂದೆ ಬಂತು. ಇವತ್ತು ಎಷ್ಟೇ ಬಗೆಯ ಐಸ್ಕ್ರೀಂ, ಐಸ್ ಕ್ಯಾಂಡಿ ಗಳಿದ್ದರೂ ಬಾಲ್ಯದ ಆ ದಿನಗಳಲ್ಲಿ ಸವಿದ ಐಸ್ ಕ್ಯಾಂಡಿ ಗಳ ರುಚಿಗೆ ಸಮ ಇಲ್ಲ. ಮಸ್ತ್ ಆರ್ಟಿಕಲ್.
ಐಸ್ಕ್ಂಡಿ ಮೂಲಕ… ತಮ್ಮ ಬಾಲ್ಯದ…ನೆನಪಿನ ಲೇಖನ..ಚೆನ್ನಾಗಿ ಮೂಡಿಬಂದಿದೆ..ಮೇಡಂ ಹಾಗೇ
ನಾವು ಚಿಕ್ಕವರಿದ್ದಾಗ…ಮನೆಯಿಂದ… ಹಾಲು ತೆಗೆದುಕೊಂಡು.. ಮಿಲ್ಕ್ ಐಸ್ ಕ್ಯಾಂಡಿ..ಮಾಡಿಸಿಕೊಂಡು ತಿನ್ನುತಿದ್ದ ಪ್ರಕರಣ ನೆನಪಿಗೆ ಬಂತು…ಮೇಡಂ.
ತುಂಬಾ ಚೆನ್ನಾಗಿದೆ ಸಮತ ಬಾಲ್ಯದ ನೆನಪು ಮರುಕಳಿಸಿತು
ಲೇಖನ ಕ್ಯಾಂಡಿ ಅಷ್ಟೇ ರಸಭರಿತ ವಾಗಿದೆ ಸಮತ ಮೇಡಂ.. ತುಂಬಾ ಇಷ್ಟ ಆಯ್ತು… ನಾನು ನಿಮ್ಮ ಅಭಿಮಾನಿ ಆಗಿಬಿಟ್ಟಿದೀನಿ… ನಿಮ್ಮ ಬರಹ ಕಾಯುತಿರುತ್ತೇನೆ.. ಬಾಲ್ಯ ನೆನಪು ಮಾಡಿದಕ್ಕೆ ಧನ್ಯವಾದಗಳು
ಚೆನ್ನಾಗಿ ಬರೆದಿದ್ದೀರಿ ನಮ್ಮನ್ನು ಬಾಲ್ಯದ ದಿನಗಳಿಗೆ ಕರೆದೊಯ್ದಿದ್ದಕ್ಕಾಗಿ ಧನ್ಯವಾದಗಳು
ಉತ್ತಮ ಬರಹ .ನಮ್ಮನ್ನು ನಾಸ್ಟಾಲ್ಜಿಯಾಕ್ಕೆ ಕೊಂಡೊಯ್ದಿದ್ದಕ್ಕಾಗಿ ಧನ್ಯವಾದಗಳು
ಚಿಕ್ಕಂದಿನಲ್ಲಿ ತಿಂದ ಐಸ್ ಕ್ಯಾಂಡಿ ಸವಿ ನೆನಪಾಗಿ ಬಾಯಿಯಲ್ಲಿ ನೀರೂರಿತಲ್ಲಾ..! ಈಗ ಏನಿದ್ರೂ ಅದರ ರುಚಿಯೇ ಶ್ರೇಷ್ಠ ಎನ್ನುವುದರಲ್ಲಿ ಎರಡು ಮಾತಿಲ್ಲ ನೋಡಿ.
ತಂಪಾದ ಲೇಖನಕ್ಕೆ ಧನ್ಯವಾದಗಳು ಮೇಡಂ.
ಐಸ್ ಕ್ರೀಮಿನಷ್ಟೇ ಸಿಹಿಯಾದ ತಂಪಾದ ಬರಹ ವಂದನೆಗಳು ಮೇಡಂ
ಓದಿ ಅಭಿಪ್ರಾಯವನ್ನು ವ್ಯಕ್ತಪಡಿಸಿದ ಎಲ್ಲರಿಗೂ ನನ್ನ ಧನ್ಯವಾದಗಳು
ಬಾಲ್ಯದ ನೆನಪುಗಳು ಮರುಕಳಿಸಿದ ಐಸ್ ಕ್ಯಾಂಡಿ ಲೇಖನ ಮನಕ್ಕೆ ಮುದ ನೀಡಿತು.