ಕಾದಂಬರಿ : ‘ಸುಮನ್’ – ಅಧ್ಯಾಯ 18

Spread the love
Share Button


(ಹಿಂದಿನ ಸಂಚಿಕೆಯಿಂದ ಮುಂದುವರಿದುದು..)
ಮುಂದೇನು?

ತಿಂಗಳು ಉರುಳಿ ವಿದ್ಯುಚ್ಛಕ್ತಿ ಹಾಗೂ ನೀರಿನ ಬಿಲ್ ಬಂದು ಬಿದ್ದಿತ್ತು. ಸುಮನ್ ಕೈಗೆತ್ತಿಕೊಂಡು ಶನಿವಾರ ಇವನ್ನು ಕಟ್ಟಬೇಕು ಎಂದುಕೊಳ್ಳುತ್ತ ಅವುಗಳನ್ನು ನೋಡಿದಳು. ಇಸಿಎಸ್ (ಎಲೆಕ್ಟ್ರಾನಿಕ್ ಕ್ಲಿಯರೆನ್ಸ್ ಸೇವೆ) ಮುಖಾಂತರ ಅವರಪ್ಪನ ಬ್ಯಾಂಕಿನಿಂದ ಅವನ್ನು ಆಗಲೇ ಕಟ್ಟಲಾಗಿತ್ತು. ಇಷ್ಟು ದಿನ ಬಿಲ್ ಬಂದ ತಕ್ಷಣ ಓಡೋಡಿ ಹೋಗಿ ಅದನ್ನು ಕಟ್ಟಿ ಬರುತ್ತಿದ್ದ ಅವಳಪ್ಪ ಮಗಳಿಗೆ ಕಷ್ಟವಾಗಬಾರದು ಎಂದು ಹೋಗುವ ಮುಂಚೆ ಈ ವ್ಯವಸ್ಥೆ ಮಾಡಿದ್ದರು. ಸುಮನ್‍ಗೆ ಅದರ ಅರಿವಾದ ತಕ್ಷಣ ಅಳು ಉಕ್ಕಿ ಬಂತು. ಬಿಕ್ಕಲಾರಂಭಿಸಿದಳು. ಅವರಿಬ್ಬರು ಇಲ್ಲದಾಗಲೂ ಮಗಳನ್ನು ವಾತ್ಸಲ್ಯದಿಂದ ನೋಡಿಕೊಳ್ಳುತ್ತಿದ್ದರು. ಗಿರೀಶನ ಬಿಟ್ಟು ಬಂದಾಗಿನಿಂದ ಸುಮನ್ ತನ್ನ ದುಃಖದಲ್ಲೆ ಮುಳುಗಿ ಹೋಗಿದ್ದಳು. ಮೊದಲಿನ ಹಾಗೆ ಮಾತಿಲ್ಲ ಕತೆಯಿಲ್ಲ. ನಗುವಂತೂ ಇಲ್ಲವೇ ಇಲ್ಲ. ಅವರುಗಳ ಮುಂದೆ ಅಳುವೂ ಇಲ್ಲ. ಆದರೂ ಮನೆಯಲ್ಲಿ ಅಮ್ಮ ಇದಾರೆ ಅಪ್ಪ ಇದಾರೆ ಎಂಬುದೇ ಮನಸ್ಸಿಗೆ ಒಂದು ನೆಮ್ಮದಿ, ಒಂದು ಆಸರೆ. ಇದು ಮಾಡಿದರೆ ಅವಳಿಗೆ ನೋವಾಗುವುದು ಹೀಗೆ ಹೇಳಿದರೆ ಅವಳಿಗೆ ನೋವಾಗುವುದು ಎಂದು ಯೋಚಿಸಿ ಬಹಳ ಕಕ್ಕುಲತೆಯಿಂದ ಜಾಗರೂಕತೆಯಿಂದ ಹೆಜ್ಜೆ ಇಡುತ್ತಿದ್ದರು. ಎಲ್ಲವನ್ನು ನೆನೆದು ತುಂಬ ಅತ್ತಳು ಸುಮನ್. ಅವಳ ಕೆಂಪು ಕಣ್ಣು ಮೂಗು ನೋಡಿ ಅಂದು ಲಕ್ಷ್ಮಿಯ ಉತ್ಸಾಹ ಜರ್ರನೆ ಇಳಿಯಿತು. ಹೊಟ್ಟೆಯಲ್ಲಿ ಸಂಕಟ. ಮೌನವಾಗಿ ಟಿವಿ ನೋಡಿ ಮಲಗಿದಳು. ಮಾರನೆಯ ದಿನ ಗಿರಿಜಮ್ಮನ ಮುಂದೆ ಸುಮನ್ ಬಗ್ಗೆ ವಿವರಿಸಿ ಕಣ್ಣೀರಿಟ್ಟಳು. ಗಿರಿಜಮ್ಮ ತಾವೂ ಕಣ್ಣು ಒರೆಸಿಕೊಂಡರು. 

ಅಮ್ಮ ಅಪ್ಪನ ಕರೆಗಾಗಿ ಬಹಳವಾಗಿ ಹಪಹಪಿಸತೊಡಗಿದಳು ಸುಮನ್. ಅವರ ಧ್ವನಿಗೆ ಮೈ ಪುಳಕಗೊಳ್ಳುತ್ತಿತ್ತು. ಮನಸ್ಸು ಪ್ರಫುಲ್ಲವಾಗುತ್ತಿತ್ತು. ಆದರೆ ಕೆಲವೊಮ್ಮೆ ಅವರ ಕಕ್ಕುಲತೆಗೆ ವಾತ್ಸಲ್ಯಕ್ಕೆ ಗಂಟಲು ಕಟ್ಟಿ ಮಾತೇ ಹೊರಡದು. ಕಣ್ಣುಗಳಿಂದ ನೀರು ಒಂದೇ ಸಮ ಸುರಿಯುತ್ತಿತ್ತು. ಫೋನ್ ಪಕ್ಕ ಕರವಸ್ತ್ರ ಹಿಡಿದು ಕೂರಲು ಶುರು ಮಾಡಿದಳು. ಮೊದಮೊದಲು ಶ್ವೇತ ಗೆಳತಿ ಒಬ್ಬಳೆ ಇರುವಳು ಎಂದು ಬೇಗ ಬೇಗ ಕರೆ ಮಾಡುತ್ತಿದ್ದಳು ಆದರೆ ಹೊಸ ಪರಿಸರದ ಹೊಸ ಪ್ರಶ್ನೆಗಳಲ್ಲಿ ಅವಳು ಮುಳುಗಿದಳು. ತಪ್ಪದೆ ಉದ್ದವಾದ ಇಮೇಲ್ ಮಾತ್ರ ಕಳುಹಿಸುತ್ತಿದ್ದಳು. ಬಿಡುವಾದಾಗಲೆಲ್ಲ ಲತಾ ಮೊಬೈಲಿನಲ್ಲಿ  ಮಾತಾಡುತ್ತಿದ್ದಳು. ಸುಮನ್ ಈಗ ನಿಜವಾಗಲೂ ಒಂಟಿ.

ಇಷ್ಟು ದಿನ ಯಾವ ಯೋಚನೆಗಳನ್ನು ಮನಸ್ಸಿನ ಒಂದು ಮೂಲೆಯಲ್ಲಿ ನೂಕಿ ಬಾಗಿಲು ಹಾಕಿ ಬೀಗ ಜಡಿದ್ದಿದಳೋ, ಯಾವ ಯೋಚನೆಗಳನ್ನು ಮರೆಯಲು ಕೆಲಸ ಹಾಗೂ ಓದಿನಲ್ಲಿ ತನ್ನನ್ನು ತಾನು ಮುಳಗಿಸಿಕೊಂಡಿದ್ದಳೋ ಈಗ ಅವು ಅವಳನ್ನು ಎಲ್ಲಾ ದಿಕ್ಕಿನಿಂದ ಮುತ್ತಿದವು. ಒಂದೇ ಸಮನೆ ಒಂದರ ಹಿಂದೆ ಒಂದು ಕಹಿ ಘಟನೆ ಜ್ಞಾಪಕವಾಗಿ ನೋವು ಅವಮಾನ ಎಲ್ಲಾ ಮತ್ತೆ ಅನುಭವಿಸಿದಳು. ಆ ಘಟನೆಗಳು ಈಗ ನಡೆಯುತ್ತಿವೆಯೋ ಅನ್ನುವಷ್ಟು ತೀವ್ರವಾಗಿ ಹಿಂಸೆ ಅನುಭವಿಸಿದಳು. ಎದ್ದರೆ ಕೂತರೆ ಅವುಗಳನ್ನು ಭಿನ್ನ ಭಿನ್ನವಾದ ಕೋನಗಳಿಂದ ನೋಡಲು ಪ್ರಯತ್ನಿಸಿದಳು. ಹೇಗೆ ವಿಮರ್ಶಿಸಿದರೂ ಆ ಘಟನೆಗಳಲ್ಲಿ ಅವಳ ತಪ್ಪು ಕಾಣಲಿಲ್ಲ, ಅವಳಿಗೆ ಗಿರೀಶನ ಕೀಲು ಗೊಂಬೆಯಾಗಿ ಜೀವನ ನಡೆಸಲು ಸಾಧ್ಯವಾಗದ ಮಾತು. ಅವನ ಹಾಗೂ ಅವನ ಗೆಳೆಯರ ಜೀವನಶೈಲಿ ಹಾಗೂ ವರ್ತನೆ ಅವಳಿಗೆ ಒಪ್ಪದು. ಅವಳು ಅಂತಹ ವಾತಾವರ್ಣದಲ್ಲಿ ಬೆಳದಿರಲಿಲ್ಲ ಅನ್ನುವುದಕ್ಕಿಂತ ಅವಳ ಮನಸ್ಸು ಅದನ್ನು ಒಪ್ಪದು. ಅದು ಅಸಂಸ್ಕೃತ ಹಾಗೂ ಅನಾಗರಿಕ ವರ್ತನೆ. ಇನ್ನು ಹೆಣ್ಣು ಒಂದು ಭೋಗದ ವಸ್ತು, ಚೆನ್ನಾಗಿ ಅಲಂಕಾರ ಮಾಡಿಕೊಂಡು ವಿಲಾಸಿ ಜೀವನ ನಡೆಸಬೇಕು ಎಂಬ ತತ್ವ ಅವಳು ಎಂದೂ ನಂಬಿರಲಿಲ್ಲ. ಗಿರೀಶ ಅವಳನ್ನು ಅವನ ಗೆಳೆಯರ ಹೆಂಡತಿಯರ ಹಾಗೆ ಅವಳನ್ನು ಪರಿವರ್ತಿಸಲು ಮಾಡಿದ ಪ್ರಯತ್ನ ಹಾಗೂ ಅವಳು ಅದಕ್ಕೆ ಮಣಿಯದಿದ್ದಾಗ ಅವನ ತಿರಸ್ಕಾರ ಜ್ಞಾಪಕವಾಗಿ ಮೈ ಉರಿಯುತ್ತಿತ್ತು. ಈಗಲೂ ಬುಸುಗುಟ್ಟುತ್ತಿದ್ದಳು. ಈ ಎಲ್ಲ ಭಾವನೆಗಳು ಒಂದರ ನಂತರ ಒಂದು ಬಂದು ಹೋಗುತ್ತಿದ್ದವು.  ಆದರೇ ಅವಳ ಕನಸ್ಸಿನ ಗೋಪುರ ನೆಲಕಚ್ಚಿತ್ತು. ಗಿರೀಶ ಒಬ್ಬನ ವರ್ತನೆಯಿಂದ ಇಷ್ಟು ದಿನ ಇದ್ದ ದೇವರ ಮೇಲಿನ ನಂಬಿಕೆ ಗಾಳಿಪಟವಾಗಿತ್ತು. ಒಂದು ಅವಳ ಜೀವನದ ಆಸೆಯಾಗಿದ್ದರೆ ಇನ್ನೊಂದು ಅದರ ಅಡಿಪಾಯ. ಈಗ ಒಂದೇ ಏಟಿನಲ್ಲಿ ಎರಡೂ ಇಲ್ಲ. ಬರಿ ಶೂನ್ಯ. ಆ ನೋವನ್ನು ತಡೆಯಲಾರದೆ ತತ್ತರಿಸಿದಳು.

ನಿನ್ನ ವೈಯಕ್ತಿಕ ಜೀವನ ಮುಗಿಯಿತು. ಅದಕ್ಕೆ ಇನ್ನು ಅರ್ಥವಿಲ್ಲ ಎಂದು ಪದೇ ಪದೇ ಸಾರುವ ಆ ಕನಸುಗಳು ಮತ್ತೆ ಬೀಳತೊಡಗಿದವು. ಒಂದರಲ್ಲಿ ಸುಮನ್ ಕಾಲಿಟ್ಟ ಕಡೆ ಭೂಮಿ ಬಾಯಿ ತೆರೆಯುತ್ತಿತ್ತು. ಅವಳು ಅವಳಮ್ಮ ಅಪ್ಪನ ಕೈ ಹಿಡಿದು ಅದನ್ನು ತಪ್ಪಿಸಿಕೊಂಡು ಎರಡು ಹೆಜ್ಜೆ ನಡೆಯುತ್ತಿದ್ದ ಹಾಗೆ ಅಲ್ಲೂ ಭೂಮಿ ಬಾಯಿ ತೆರೆಯುತ್ತಿತ್ತು. ಇನ್ನೊಂದರಲ್ಲಿ ಆಗಂತುಕ ಬಾಹ್ಯಾಕಾಶ ನೌಕೆಗಳು ಅವರನ್ನು ಅಟ್ಟಿಸಿಕೊಂಡು ಬಂದು ಅವರ ಮೇಲೆ ಬಾಂಬ್‍ಗಳ ಮಳೆಗರಿಯುತ್ತಿತ್ತು. ಮತ್ತೊಂದರಲ್ಲಿ ನದಿಯ ಸುಳಿಯಲ್ಲಿ ಸಿಕ್ಕಿ ಅದರಿಂದ ತಪ್ಪಿಸಿಕೊಳ್ಳಲು ಸೆಣಸಾಡುತ್ತಿದ್ದಳು. ಹೀಗೇ ತರಾವರಿ. ಬೆಳಗ್ಗಿನ ಎರಡು ಮೂರು ಗಂಟೆಗೆ ಈ ಕನಸುಗಳಿಂದ ಅಳುತ್ತ ಏಳುತ್ತಿದ್ದಳು. ಲಕ್ಷ್ಮಿಗೆ ಎಚ್ಚರವಾಗದಂತೆ ಮೆತ್ತಗೆ ಅಳುತ್ತ ಕಿಟಕಿಯ ಆಚೆ ನೋಡುತ್ತ ಕುಳಿತಿರುತ್ತಿದ್ದಳು. ಎಷ್ಟೋ ರಾತ್ರಿ ಹೊರಗಡೆ ಮಳೆ, ಮಳೆಯ ಸದ್ದನ್ನು ಆಲಿಸುತ್ತ ಕುಳಿತಿರುತ್ತಿದ್ದಳು ಬೆಳಕಾಗುವವರೆಗು.

ಪ್ರಾಜೆಕ್ಟ್ ತುಂಬ ಚೆನ್ನಾಗಿ ನಡೆಯುತ್ತಿತ್ತು. ಪಾಠಗಳಿಗೆ ಕಾಲೇಜಿನಲ್ಲಿ ತಯಾರಾದರೆ ಮನೆಯಲ್ಲಿ ಬಿಡುವು, ಮನೆಯಲ್ಲಿ ತಯಾರಾದರೆ ಕಾಲೇಜಿನಲ್ಲಿ ಬಿಡುವು. ವಿದ್ಯಾರ್ಥಿಗಳ ಮುಂದೆ ನಿಂತು ಪಾಠ ಮಾಡುವಾಗ ಎಲ್ಲವನ್ನು ಮರೆಯುತ್ತಿದ್ದಳು. ಅವರುಗಳ ಮಧ್ಯ ಒಂದು ಹುರುಪು, ಒಂದು ಚೈತನ್ಯ. ಅವಳ ವೈಯಕ್ತಿಕ ಜೀವನದಲ್ಲಿ ನಡೆಯುತ್ತಿರುವ ಸಂಕಟದ ಅರಿವು ಯಾರಿಗೂ ಆಗುತ್ತಿರಲಿಲ್ಲ. ಅವಳ ತುಡಿತವನ್ನು ಹೇಳಿಕೊಳ್ಳಲು ಯಾರೂ ಇಲ್ಲ. ಹೀಗೆ ಇನ್ನೊಂದು ತಿಂಗಳು ಕಳೆಯಿತು. ಭಾನುವಾರ ತಪ್ಪದೆ ಅವಳಮ್ಮ ಅಪ್ಪನ ಕರೆ ಬರುತ್ತಿತ್ತು. ಅದೊಂದೇ ಕತ್ತಲಾದ ಅವಳ ಜೀವನದಲ್ಲಿ ಒಂದು ಪುಟ್ಟ ಬೆಳಕು. ಆದರೇ ಎಷ್ಟು ಪ್ರಖರವಾಗಿತ್ತು ಅದರಲ್ಲಿ ಅಡಗಿದ್ದ ವಾತ್ಸಲ್ಯ, ಹೆತ್ತ ಕರುಳಿನ ಮಮತೆ. ಅದರಲ್ಲಿ ಮಿಂದ ಸುಮನ್ ಇನ್ನೊಂದು ವಾರವನ್ನು ಎದುರಿಸಲು ತಯಾರಾಗುತ್ತಿದ್ದಳು.

‘ಪುನರಪಿ ಮರಣಂ ಪುನರಪಿ ಜನನಂ’ ಎಂದು ಮರೆಯಾಗಿ ಮತ್ತೆ ಜ್ಞಾಪಕವಾಗುವ ಆ ಘಟನೆಗಳನ್ನು ಅವು ಹುಟ್ಟಿಸುವ ಭಾವನೆಗಳ ತೀವ್ರತೆ ಕಡಿಮೆಯಾಗಲು ಇನ್ನು ಸಮಯ ಬೇಕು. ನಿನ್ನ ಭವಿಷ್ಯದ ಬಗ್ಗೆ ಯೋಚಿಸು. ಈ ಎರಡು ತಿಂಗಳಲ್ಲಿ ಒಂಟಿತನ ಏನು  ಎನ್ನುವುದು ಚೆನ್ನಾಗಿ ಅರ್ಥವಾಗಿದೆ ನಿನಗೆ. ಎಷ್ಟು ದೊಡ್ಡ ಜಗತ್ತು, ಜಗತ್ತಿನ ತುಂಬ ಜನ. ಆದರೆ ನಿನ್ನವರು, ನಿನ್ನದು ಎಂಬುದು ಯಾರೂ ಇಲ್ಲ. ನಿನ್ನ ಭಾವನೆಗಳಿಗೆ ಸ್ಪಂದಿಸುವ ಅವನ್ನು ಅರ್ಥ ಮಾಡಿಕೊಳ್ಳುವವರು ಯಾರೂ ಇಲ್ಲ. ಜೀವನ ತುಂಬ ಉದ್ದಕ್ಕಿದೆ. ಅದಕ್ಕೆ ಒಂದು ಅರ್ಥ ಕಲ್ಪಿಸ್ಕೋ. ಅದಕ್ಕೆ ಒಂದು ನೆಲೆ ಹುಡುಕು. ಮನಸ್ಸು ಸುಮನಳನ್ನು ಎಚ್ಚರಿಸತೊಡಗಿತು.

ಗಿರೀಶ ಮನೆ ಬಿಟ್ಟು ಬಂದಾಗಿನಿಂದ ನಡೆದ ಎಲ್ಲಾ ಘಟನೆಗಳು ಈಗ ಹಿಂದಕ್ಕೆ ಹೋಗಿ ಬರಿ ಅವಳ ವೈವಾಹಿಕ ಜೀವನದ ಕಹಿ ನನೆಪುಗಳೇ ಅವಳನ್ನು ಆವರಿಸಿತ್ತು. ಕೊನೆಗೆ ಕಷ್ಟಪಟ್ಟು ತಾನು ಮದುವೆ ಎಂಬ ವ್ಯವಸ್ಥೆ ಹಾಗೂ ಅದರ ಬಂಧನದಲ್ಲಿ ಏನ್ನನ್ನು ಹುಡುಕಲು ಪ್ರಯತ್ನಿಸುತ್ತಿದ್ದೆ ಎಂಬ ವಿಚಾರ ಅವಳನ್ನು ಕಾಡತೊಡಗಿತು. ಪ್ರೀತಿ, ರೋಮಾಂಚನ, ತನ್ನನ್ನು ಅರ್ಥ ಮಾಡಿಕೊಂಡು ತನ್ನ ವ್ಯಕ್ತಿತ್ವವನ್ನು ಮೆಚ್ಚುವ ಒಬ್ಬ ಸಂಗಾತಿಯನ್ನು. ಕಷ್ಟದಲ್ಲಿ ಸುಖದಲ್ಲಿ ಹೆಗಲಿಗೆ ಹೆಗಲು ಕೊಟ್ಟು ನಡೆಯುವ ಗೆಳೆಯನನ್ನು. ನನಗೆ ನೀನು ನಿನಗೆ ನಾನು ಎಂದು ಜೀವ ಇರುವಷ್ಟು ದಿನ ಜೊತೆಯಿರುವ ಬಾಳ ಸಂಗಾತಿ. ಇದೆಲ್ಲದರ ಮೇಲೆ ಭಾವನಾತ್ಮಕ ಬೆಸುಗೆ, ಭಾವನಾತ್ಮಕ ಸುರಕ್ಷತೆ ಹಾಗೂ ಸ್ಥಿರತೆ. ಮನಸ್ಸು ಹಿಂದಕ್ಕೆ ಹೋಗಿ ಕಾಲೇಜಿನಲ್ಲಿದ್ದಾಗ ಅವಳು ತನ್ನ ಗಂಡ, ತನ್ನ ಮಕ್ಕಳು ನಮ್ಮ ಸಂಸಾರ ಎಂದು ಎಷ್ಟು ಕನಸು ಕಂಡಿದ್ದಳು. ಅದಕ್ಕೆ ರಂಗು ಹಚ್ಚಿ, ಅಲಂಕಾರ ಮಾಡಿ ಎಷ್ಟು ಸಂತಸಪಟ್ಟಿದ್ದಳು. ಆ ಕನಸು ಚೂರು ಚೂರಾಗಿ ಇನ್ನು ಅದು ಒಂದು ಕಲ್ಪನೆಯಾಗೆ ಉಳಿಯುವುದು. ಎಷ್ಟು ಯೋಚನೆ ಮಾಡಿ ಮನ ಒಲಿಸಲು ಪ್ರಯತ್ನ ಪಟ್ಟರೂ ಘಾಸಿಯಾದ ಅವಳ ಮನಸ್ಸು ಮರುಮದುವೆಗೆ ಒಪ್ಪದೇ ಹೋಯಿತು. ಅವಳು ಈ ಜನ್ಮದಲ್ಲಿ ಇನ್ನು ಮದುವೆ ಮಾಡಿಕೊಳ್ಳುವುದಿಲ್ಲ. ಇನ್ನು ಅವಳು ಯಾರನ್ನೂ  ಗಂಡ ಎಂದು ನಂಬಿ ಬದುಕಲಾರಳಲು. ಅಷ್ಟು ಘಾಸಿಯಾಗಿತ್ತು ಅವಳಿಗೆ. ಮುಗ್ಧ ಹುಡುಗಿಯ ಗಂಡ, ಮಕ್ಕಳು ಎಂಬ ಕನಸು ನನಸಾಗದೆ ಉಳಿಯುವುದು. ಇದು ಇಷ್ಟು ದಿನ ಅವಳ ಹೃದಯಕ್ಕೆ ಮಾತ್ರ ತಿಳಿದ ಸತ್ಯ ಇಂದು ಅವಳಿಗೆ ತಿಳಿಯಿತು. ಬೆಳೆಯುತ್ತಿರುವಾಗ ಮದುವೆ ಎಂದು ಕಟ್ಟಿದ ಆಶಾಗೋಪುರ ನೆಲ ಕಚ್ಚಿತು. ಅವಳ ಕಣ್ಣಿನಲ್ಲಿ ಮನಸ್ಸಿನಲ್ಲಿ ಗಂಡ ಎಂಬ ಅಸ್ಪಷ್ಟವಾಗಿದ್ದ ಆಕೃತಿ ನನಸಾದಾಗ ಗಿರೀಶ ಆಗಿದ್ದ. ಆದರೆ ಎಷ್ಟು ಪ್ರಯತ್ನಪಟ್ಟರೂ ಗಿರೀಶ ಅವಳ ಆ ಕನಸಿನ ರೂಪಕ್ಕೆ ಸರಿಸಾಟಿಯಾಗಲಿಲ್ಲ. ಆ ಎರಕದ  ಆಕಾರವನ್ನು ಅವನು ಪಡೆಯಲಿಲ್ಲ.  ಅವಳಿಗೆ ಒಪ್ಪದ ಜೀವನಶೈಲಿಯನ್ನು ಒಪ್ಪಲು ಗಿರೀಶನ ಬಲವಂತ, ಅವನಿಂದಾಗಿ ಅವಮಾನ, ತಿರಸ್ಕಾರ, ಅವಳ ಸ್ವಾಭಿಮಾನಕ್ಕೆ ಬರೆ ಏಳೆದ ಅವನ ಮಾತು, ಕೊನೆಗೆ ನಂಬಿಕೆ ದ್ರೋಹ ಎಲ್ಲಾ ಒಂದರ ಮೇಲೆ ಒಂದು ನೆನಪಾಗಿ ಮತ್ತೆ ಹೃದಯಕ್ಕೆ ಗಾಯವಾಯಿತು. ಹಸಿ ಗಾಯದಿಂದ ರಕ್ತ ಹರಿಯಿತು. ಆ ಹುಣ್ಣು ಮಾಯಲು ತಿಂಗಳಾಯಿತು. 

ಒಮ್ಮೆ ಹೀಗೆ ಕುಳಿತಾಗ ಮನುಷ್ಯ ಸೇರಿದಂತೆ ಎಲ್ಲ ಜೀವ ರಾಶಿ ಸಂತತಿಯನ್ನು ಏಕೆ ಬಯಸುತ್ತವೆ ಎಂಬ ಯೋಚನೆ ಸುಮನಳನ್ನು ಕಾಡತೊಡಗಿತು. ಬರಿ ತಮ್ಮ ವಂಶಾಭಿವೃದ್ಧಿ ಆಗಲೆಂದೇ ಅಥವಾ ತಮ್ಮ ಸಂತತಿ ನಶಿಸಿ ಹೋಗದಿರಲಿ ಎಂಬ ಆಸೆಯೇ? ತಮ್ಮ ಜೀವಕೋಶಗಳನ್ನು ಹೊತ್ತು ತಮ್ಮ ಗುಣ ಅವಗುಣಗಳನ್ನು ಹೊಂದಿ ತಮ್ಮ ವಿಚಾರಧಾರೆಯನ್ನು, ತಮ್ಮ ಸಂಸ್ಕೃತಿಯನ್ನು, ತಮ್ಮ ಜೀವನಶೈಲಿಯನ್ನು ಮೆರಸಲಿ ಎಂದೇ? ಇದು ಬರಿ ಜೈವಿಕ ಹಂಬಲವೋ ಅಥವಾ ಅದರಿಂದಾಗಿ ಮಾನಸಿಕ ಹಾಗೂ ಭಾವನಾತ್ಮಕ ಹಂಬಲವೋ? ತಂದೆ ತಾಯಿ ಮನುಷ್ಯನ ಭೂತಕಾಲವಾದರೇ ಮಕ್ಕಳು ಅವರ ಭವಿಷ್ಯ. ಒಬ್ಬ ಮನುಷ್ಯ ತಾನು ಬದುಕಿದ್ದ ಎಂದು ಭವಿಷ್ಯಕ್ಕೆ ಸಾಬೀತು ಮಾಡಲು ಮಕ್ಕಳೇ ಅವನ ಪ್ರತಿನಿಧಿ. ಸರ್ವಕಾಲಕ್ಕು ಅವನ ಕುರುಹು. ಇದು ಒಂದು ತರಹ ಅಮರತ್ವದ ಬಯಕೆಯೇ? ಉತ್ತರ ಏನೇ ಇರಲಿ ಸುಮನ್ ಮಕ್ಕಳನ್ನು ಬಯಸಿದಳು.

ಒಂದು ಶನಿವಾರ ಸುಮನ್ ಕಾಲೇಜಿನಿಂದ ನಡೆದು ಬರುತ್ತಿದ್ದಳು. ಒಂದು ಹೊಸ ಮನೆಯ ನಿರ್ಮಾಣ ನಡೆದಿತ್ತು.  ಮನೆ  ಕಟ್ಟುತ್ತಿದ್ದ ಆಳುಗಳ ಪುಟ್ಟ ಪುಟ್ಟ ಮಕ್ಕಳು ಮರಳು ಗುಡ್ಡೆಯ ಮೇಲೆ ಸಂತೋಷದಿಂದ ಆಡುತ್ತಿದ್ದರು. ಸುಮನ್‍ಗೆ ಏನೋ ಹೊಳೆಯಿತು. ಮೂಲೆ ಅಂಗಡಿಗೆ ಹೋಗಿ ಒಂದು ಪುರಿ ಪ್ಯಾಕೆಟ್ ತೆಗೆದುಕೊಂಡು ಬಂದು ಅವುಗಳ ಕೈಗಿತ್ತಳು. ಮಕ್ಕಳು ಆಡುವುದನ್ನು ನಿಲ್ಲಿಸಿ ಪುರಿ ಕವರನ್ನು ಕೈಯಲ್ಲಿ ಹಿಡಿದು  “ಮಂಡಾಳ ಮಂಡಾಳ” ಎನ್ನುತ್ತ ಕುಣಿಯುತ್ತ ಮನೆಗೆ ಓಡಿದವು. ಸುಮನಳ ಹೃದಯಕ್ಕೆ ಹಾಲೆರದ ಅನುಭವ. ಮನೆಗೆ ಹೊರಟಳು. ಇಷ್ಟು ದಿನ ಮದುವೆಯೇ ಇಲ್ಲವೆಂದ ಮೇಲೆ ಮಕ್ಕಳೂ ಇಲ್ಲ ಎಂದು ಯೋಚಿಸುತ್ತಿದ್ದ ಅವಳ ಮನಸ್ಸಿನ ಮೂಲೆಯಲ್ಲಿ ಒಂದು ಪುಟ್ಟ ಬೆಳಕು ಹತ್ತಿತು. ಏನೋ ಹೊಳೆದು ಭಾವಾವೇಶದಿಂದ ಲತಾಗೆ ಫೋನ್ ಮಾಡಿ ತನ್ನ ನಿರ್ಣಯದ ಬಗ್ಗೆ ಅವಳ ಅಭಿಪ್ರಾಯ ಕೇಳಿದಳು. ಲತಾ ಅದನ್ನು ಮನ:ಪೂರ್ವಕವಾಗಿ ಬೆಂಬಳಿಸಿದಳು.

ಸರಿ ಕಾಲೇಜಿನಲ್ಲಿ ಬಿಡುವಿದ್ದಾಗಲೆಲ್ಲ ಅವಳ ನಿರ್ಣಯದ ಬಗ್ಗೆ ಅಂತರ್ಜಾಲದಲ್ಲಿ ಮಾಹಿತಿ ಹುಡುಕಿದಳು. ಅದರ ಬಗ್ಗೆ ತರಾವರಿ ಅಭಿಪ್ರಾಯಗಳನ್ನು ಓದಿ ಅರ್ಥ ಮಾಡಿಕೊಂಡಳು, ಎಲ್ಲಾ ಮಾಹಿತಿಯನ್ನು ಒಂದು ಕಡತಕ್ಕೆ ಹಾಕಿ ತಯಾರು ಮಾಡಿದಳು. ಭಾರತದ ಕಾನೂನು ಅದರ ಬಗ್ಗೆ ಏನು ಹೇಳುತ್ತದೆ ಎಂದು ವಿಚಾರಿಸಿ ತಿಳಿದುಕೊಂಡಳು. ಹಲವಾರು ಬಾರಿ ಲತಾ ಜೊತೆ ಚರ್ಚಿಸಿ ಅವಳು ಕೊಟ್ಟ ಎಲ್ಲಾ ಮಾಹಿತಿಯನ್ನು ತನ್ನ ಕಡತಕ್ಕೆ ಸೇರಿಸಿ ಅವಳಮ್ಮ ಅಪ್ಪನ ಬರುವಿಕೆಗಾಗಿ ಕಾಯುತ್ತ ಕುಳಿತಳು. ಕೊನೆಯ ಆ ಒಂದು ತಿಂಗಳು ಬಹಳ ಬೇಗ ಕಳೆಯಿತು.

ಈ ಕಾದಂಬರಿಯ ಹಿಂದಿನ ಅಧ್ಯಾಯವನ್ನು ಓದಲು ಇಲ್ಲಿ ಕ್ಲಿಕ್ಕಿಸಿhttp://surahonne.com/?p=38641

(ಮುಂದುವರಿಯುವುದು)

-ಸುಚೇತಾ ಗೌತಮ್.‌

10 Responses

 1. Rajashree says:

  ಸರಳ ಭಾಷೆ, ಆತ್ಮೀಯ ನಿರೂಪಣೆ, ಕೃತಿ ಸುಂದರವಾಗಿ ಮೂಡಿಬರುತ್ತಿದೆ. ಅಭಿನಂದನೆಗಳು

 2. ನಯನ ಬಜಕೂಡ್ಲು says:

  ಮದುವೆಯ ಕನಸು ನುಚ್ಚು ನೂರಾಯಿತು ನಿಜ, ಆದರೂ ಬದುಕು ಅಲ್ಲಿಗೇನೇ ಮುಗಿಯಲಿಲ್ಲ ಅಲ್ಲವೇ? ಸುಮನ್ ಳ ಬದುಕಲ್ಲಿ ತೆರೆದುಕೊಳ್ಳಲಿರುವ ಹೊಸ ಅಧ್ಯಾಯ ಒಂದು ಒಳ್ಳೆಯ ತಿರುವು ಕಾದಂಬರಿಯಲ್ಲಿ.

 3. ಕಾದಂಬರಿಯ ನಾಯಕಿಯ ಒಂಟಿತನದ ಬವಣೆಯ..ಅಭಿವ್ಯಕ್ತಿ.. ಬಹಳ..ಚೆನ್ನಾಗಿ ಪಡಿಮೂಡಿಸಿದ್ದೀರಾ..ಗೆಳತಿ.. ಕಾದಂಬರಿಯು.. ಕುತೂಹಲವನ್ನು.. ಉಳಿಸಿಕೊಂಡು ಹೋಗುತ್ತಿದೆ..ಮುಂದಿನ ಕಂತಿಗಾಗಿ ಕಾಯುವಂತೆ ಮಾಡಿದೆ…

 4. ಶಂಕರಿ ಶರ್ಮ says:

  ಒಂದು ಮಹತ್ತರವಾದ ನಿರ್ಧಾರದತ್ತ ಸಾಗುತ್ತಿರುವ ಸುಮನ್ ಳ ಜೀವನದ ಮುಂದಿನ ಘಟ್ಟದ ಬಗ್ಗೆ ಕುತೂಹಲ ಮೂಡಿದೆ.. ಧನ್ಯವಾದಗಳು ಸುಚೇತಾ ಮೇಡಂ.

 5. Padma Anand says:

  ಸುಮನಳ ಮನದ ತುಮುಲಗಳು ಅತ್ಯಂತ ಪರಿಣಾಮಕಾರಿಯಾಗಿ ಅಭಿವ್ಯಕ್ತಿ ಗೊಂಡು, ಒಂದು ನಿರ್ಧಾರದೆಡೆಗೆ ಮನಸ್ಸನ್ನು ಕೇಂದ್ರೀಕೃತಗೊಳಿಸಿಕೊಳ್ಲುತ್ತಿರುವುದು ಸಮಂಜಸವೆನಿಸುತ್ತಿದೆ. ಕಥೆಯ ಓಘ ಸೊಗಸಾಗಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: