ಅವಿಸ್ಮರಣೀಯ ಅಮೆರಿಕ – ಎಳೆ 64

Share Button


(ಹಿಂದಿನ ಸಂಚಿಕೆಯಿಂದ ಮುಂದುವರಿದುದು…)
ವಾಷಿಂಗ್ಟನ್ ಡಿ.ಸಿ. (Washigton D. C.)

    ಸುಂದರ ಪಟ್ಟಣ ಫಿಲಡೆಲ್ಫಿಯಾದಿಂದ ಸುಮಾರು 140 ಮೈಲು ದೂರದ ದೇಶದ ರಾಜಧಾನಿಯತ್ತ ನಮ್ಮ ಪಯಣ ಹೊರಟಿತು. ಸುಮಾರು ಎರಡೂವರೆ ಗಂಟೆಗಳ ಪ್ರಯಾಣ… ಅತ್ಯಂತ ಅಚ್ಚುಕಟ್ಟಾದ ರಸ್ತೆ, ಇಕ್ಕೆಲಗಳಲ್ಲಿ ನಗುವ ಹಸಿರು ವನರಾಶಿ…ನಮ್ಮ ಚಾಲಕ ಮಹಾಶಯರಿಗೆ(ಅಳಿಯ!) ಅಲ್ಲಲ್ಲಿ, ಆಗಾಗ ಸಿಗುತ್ತಿದ್ದ ಸ್ಟಾರ್ ಬಕ್ಸ್ (Starbucks)ನಲ್ಲಿ ಸವಿ, ರುಚಿ ಕಾಫಿ! ಇನ್ನೇನು ಬೇಕು ಸುಖ ಪ್ರಯಾಣಕ್ಕೆ? 

ನಾನು ಈ ಮೊದಲೇ, ವಾಷಿಂಗ್ಟನ್  ಮತ್ತು ವಾಷಿಂಗ್ಟನ್ ಡಿ.ಸಿ. ಎರಡೂ ಒಂದೇ ಎಂಬುದಾಗಿ ತಿಳಿದುಕೊಂಡಿದ್ದೆ. ಆದರೆ ಅದು ತಪ್ಪಾಗಿತ್ತು… ವಾಷಿಂಗ್ಟನ್ ಎನ್ನುವುದು ರಾಜ್ಯದ ಹೆಸರಾಗಿದ್ದು, ವಾಷಿಂಗ್ಟನ್ ಡಿ.ಸಿ.ಯು ಒಂದು ಜಿಲ್ಲೆ ಹಾಗೂ ದೇಶದ ರಾಜಧಾನಿಯೂ ಆಗಿದೆ. ಅಮೆರಿಕ ದೇಶವನ್ನು ಕಂಡು ಹಿಡಿದ ಕೊಲಂಬಸ್ ನ  ಗೌರವಾರ್ಥವಾಗಿ, District of Columbia (D.C.) ಸೂಚಕವನ್ನು ವಾಷಿಂಗ್ಟನ್ ಹೆಸರಿನ ಜೊತೆ  ಸೇರಿಸಲಾಯಿತು. ಜಗತ್ಪ್ರಸಿದ್ಧ ಅಮೆರಿಕನ್ ಕಾಂಗ್ರೆಸ್, ಅಮೆರಿಕದ ಸುಪ್ರೀಂ ಕೋರ್ಟ್, ಅಮೆರಿಕದ ಅಧ್ಯಕ್ಷರ ನಿವಾಸವಾದ ವೈಟ್ ಹೌಸ್ ಇತ್ಯಾದಿಗಳು ಇಲ್ಲಿಯ ವಿಶೇಷ ಆಕರ್ಷಣೆಗಳಾಗಿವೆ. ಸುಮಾರು 177 ಚ. ಕಿ.ಮೀಗಳಷ್ಟು ವಿಸ್ತಾರವಾಗಿರುವ ಈ ಪ್ರದೇಶದಲ್ಲಿ  ಸುಮಾರು 6.9 ಲಕ್ಷ ಜನರು ವಾಸಿಸುವರು.  1790ರಲ್ಲಿ ಹೊರಜಗತ್ತಿಗೆ ಪರಿಚಯವಾದ ಈ ಪ್ರದೇಶವು ಈಗಲೂ ವರ್ಷವೊಂದರ 20 ಮಿಲಿಯ ಪ್ರವಾಸಿಗರನ್ನು ಆಕರ್ಷಿಸುತ್ತಿರುವುದು ನಿಜಕ್ಕೂ ಆಶ್ಚರ್ಯದ ಸಂಗತಿಯಾಗಿದೆ.

       ಸಂಜೆ ಏಳು ಗಂಟೆ ಹೊತ್ತಿಗೆ ಪಟ್ಟಣದ ಸರಹದ್ದಿನಲ್ಲಿರುವ  ಹೋಟೇಲ್ Comfort Inn & Suits ನಮ್ಮನ್ನು ಸ್ವಾಗತಿಸಿತು. ಅತ್ಯಂತ ಸುಸಜ್ಜಿತ, ವೈಭವೋಪೇತ , ವಿಶಾಲವಾದ ರೂಮುಗಳುಳ್ಳ ಈ ಹೋಟೇಲ್ ಕಟ್ಟಡವು ಬಹು ಅಂತಸ್ತುಗಳನ್ನು ಹೊಂದಿದ್ದು, ಸುತ್ತಲೂ ಬಹಳ ಸುಂದರ ಹೂದೋಟವನ್ನು ಒಳಗೊಂಡಿದೆ. ಇಲ್ಲಿ ಉಳಕೊಳ್ಳುವ ಪ್ರವಾಸಿಗರಿಗಾಗಿ ಆವರಣದೊಳಗಡೆಗೆ ಇರುವ ದೊಡ್ಡ ಈಜುಕೊಳ, ಮಕ್ಕಳಿಗಾಗಿ ಕಟ್ಟಡದ ಒಳಗಡೆಗೆ ಇರುವ ಪುಟ್ಟ ಈಜುಕೊಳಗಳಲ್ಲಿ ಹದವಾಗಿ ಹಬೆಯಾಡುವ ಸ್ವಚ್ಛ ಬಿಸಿನೀರು, ಕೊಕ್ಕರೆಯ ಗರಿಗಳಂತೆ ಬೆಳ್ಳಗಿನ ಮೈ ಒರಸುವ ದಪ್ಪಗಿನ ಟವೆಲುಗಳು…ಆಹಾ.. ಈಜು ಬಾರದಿದ್ದರೇನಂತೆ..ಸುಮ್ಮನೆ ನೀರಲ್ಲಿ ಕಾಲಾಡಿಸುತ್ತಾ ಕೂರುವ ಮನಸ್ಸಾಗುತ್ತದೆ!

        ಸಾಮಾನುಗಳನ್ನೆಲ್ಲಾ ರೂಮಿನಲ್ಲಿರಿಸಿ ಹೊರಬಂದಾಗ ಸಂಜೆ ಏಳೂವರೆಯಾಗಿದ್ದರೂ ಇನ್ನೂ ಹಗಲು ಬೆಳಕಿದ್ದುದರಿಂದ ಕೆಲವು ಮುಖ್ಯವಾದ ಜಾಗಗಳಿಗೆ ಭೇಟಿ ಕೊಡಲು ಹೊರಟೆವು… ಮೊತ್ತ ಮೊದಲನೆಯದೇ …. 

ಲೈಬ್ರರಿ ಆಫ್ ಕಾಂಗ್ರೆಸ್ (Library of Congress)

      ಈ ಅದ್ಭುತ ವಾಚನಾಲಯದಲ್ಲಿ, ಒಂದಕ್ಕೊಂದು ಹೊಂದಿಕೊಂಡಂತಿರುವ ಮೂರು ಬಹು ದೊಡ್ಡ ಕಟ್ಟಡಗಳಲ್ಲಿ ಸುಮಾರು 171 ಮಿಲಿಯಕ್ಕೂ ಅಧಿಕ ತರೆಹೇವಾರು ವಿಷಯಗಳ ಬಗೆಗೆ ಬೃಹತ್ ಸಂಗ್ರಹಗಳಿರುವುದು ಇದರ ಹೆಗ್ಗಳಿಕೆ! ಇವುಗಳಲ್ಲಿ ಪ್ರಪಂಚದಾದ್ಯಂತ ಎಲ್ಲಾ ಭಾಷೆಗಳ ಪುಸ್ತಕಗಳು, ಧ್ವನಿ ಮುದ್ರಿಕೆಗಳು, ಫೊಟೋಗಳು, ವಾರ್ತಾಪತ್ರಿಕೆಗಳು, ಭೂಪಟಗಳು, ಭಾಷಾಂತರಿಸಿದ ಬರಹಗಳು ಮುಂತಾದವುಗಳಿವೆ. 450ಕ್ಕೂ ಹೆಚ್ಚಿನ ಭಾಷೆಗಳಲ್ಲಿ ಸಂಶೋಧನಾ ಗ್ರಂಥಗಳು ಲಭ್ಯವಿವೆ. ಇವುಗಳ ಉಪಯೋಗವನ್ನು ಜಗತ್ತಿನಾದ್ಯಂತ ಎಲ್ಲಾ ರಾಷ್ಟ್ರಗಳೂ ಪಡೆಯುತ್ತವೆ. ಪ್ರಪಂಚದಾದ್ಯಂತ ಪ್ರಮುಖವಾದ ಲೇಖನಗಳ ಹಕ್ಕು ಪಡೆಯುವ ಪ್ರಕ್ರಿಯೆಯು(Copy Right) ಇಲ್ಲಿಯೇ ನಡೆಯುವುದು. ಇಲ್ಲಿರುವ 3000ಕ್ಕೂ ಮಿಕ್ಕಿ  ಸಿಬ್ಬಂದಿ ವರ್ಗದವರು ಈ ಲೈಬ್ರರಿಯ ನಿರ್ವಹಣೆಗಾಗಿ ದುಡಿಯುವರು. 1800ರ ಮೊದಲು ಈ ಲೈಬ್ರರಿಯು ನ್ಯೂಯಾರ್ಕಿನಲ್ಲಿತ್ತು. ಆ ನಂತರ ಇಲ್ಲಿಗೆ ಸ್ಥಳಾಂತರಿಸಲಾದರೂ, 1812ರ ಜಾಗತಿಕ ಮಹಾ ಯುದ್ಧದ ಸಮಯದಲ್ಲಿ ಹೆಚ್ಚಿನ ಮೂಲ ಪ್ರತಿಗಳು ಸುಟ್ಟುಹೋದವು.  ಆ ನಂತರದ ದಿನಗಳಲ್ಲಿ ಇದರ ಅಭಿವೃದ್ಧಿ ಕಾರ್ಯಗಳು ನಡೆದು, ಈಗ ಇದು ಪ್ರಪಂಚದಲ್ಲೇ ಮೊದಲನೇ ಸ್ಥಾನದಲ್ಲಿದೆ! 

        ನಾವು ಈ ಬೃಹದಾಕಾರ ಸಾಂಸ್ಕೃತಿಕ ಕಟ್ಟಡದ ಮುಂಭಾಗಕ್ಕೆ ತಲಪಿದಾಗ ಸಮಯ ಮೀರಿತ್ತು…ಅದಾಗಲೇ ಮುಚ್ಚಲ್ಪಟ್ಟಿತ್ತು! ಇದರಿಂದ ಬಹಳ ನಿರಾಶೆಯಾದುದು ನಿಜ. ನನಗಾಗಿ ಕನ್ನಡ ಪುಸ್ತಕಗಳೂ ಸಿಗುವುವು ಎಂದು ಅಳಿಯ ಹೇಳಿದಾಗ ಅಭಿಮಾನವೆನಿಸಿತು. ಕಟ್ಟಡದ ಮುಂಭಾಗದಲ್ಲಿ ಸುಂದರವಾದ ಕಾರಂಜಿಯು ಸೊಗಸಾದ ಆನಂದದಾಯಕ ವಾತಾವರಣವನ್ನು ಸೃಷ್ಟಿಸಿತ್ತು. ಎತ್ತರಕ್ಕಿರುವ ಲೈಬ್ರರಿ ಕಟ್ಟಡಕ್ಕೆ ಏರಲು ಎರಡೂ ಕಡೆಗಳಲ್ಲಿ ವಿಶಾಲವಾದ ಕಲ್ಲಿನ ಮೆಟ್ಟಿಲುಗಳು ಕಟ್ಟಡದ ಕಳೆಯನ್ನು ಇಮ್ಮಡಿಸಿದ್ದವು. ಒಳಗಡೆಗೆ ನೋಡಲಾಗಲಿಲ್ಲವಲ್ಲ ಎಂಬ ಬೇಸರವಿದ್ದರೂ, ಇಷ್ಟಾದರೂ ಲಭಿಸಿತಲ್ಲ ಎನ್ನುವ ತೃಪ್ತಿಯಿಂದಲೇ ಮುಂದುವರಿದೆವು…ಸುಪ್ರೀಂ ಕೋರ್ಟಿನತ್ತ…

ಇಲ್ಲಿ ಇಂದು ವಿಶೇಷವಾದ ಮಾಹಿತಿಯನ್ನು ಹಂಚಿಕೊಳ್ಳಲು ಇಚ್ಛಿಸುತ್ತೇನೆ. ಅದು, ಲೈಬ್ರರಿ ಆಫ್ ಕಾಂಗ್ರೆಸ್ ಮತ್ತು ನಮ್ಮ ಕನ್ನಡಕ್ಕೆ ಇರುವ ಮಹತ್ವಪೂರ್ಣ ಸಂಬಂಧ! ‘ಧರಣಿ ಮಂಡಲ ಮಧ್ಯದೊಳಗೆ…` ಎಂಬ ಮಕ್ಕಳ ಗೋವಿನ ಹಾಡು ಕೇಳದವರಾರು ಅಲ್ಲವೇ? ಈ ಸುಪ್ರಸಿದ್ಧ, ಭಾವನಾತ್ಮಕ ಹಾಡನ್ನು ಬರೆದವರು ಯಾರೆಂದು ಇತ್ತೀಚೆಗಿನ ವರೆಗೂ ನನಗೆ ತಿಳಿದಿರಲಿಲ್ಲ. ಯಾವುದೋ ಕಾರಣಕ್ಕಾಗಿ ಇದರ ಲೇಖಕರ ಕುರಿತು ಅರಿತುಕೊಳ್ಳುವ ಆಸಕ್ತಿ ಮೂಡಿದಾಗ ಎಲ್ಲರಂತೆ ನಾನೂ ಅಂತರ್ಜಾಲದ ಮೊರೆ ಹೊಕ್ಕೆ. ಅತ್ಯಾಶ್ಚರ್ಯವೆಂಬಂತೆ ದೊರೆತ ಮಾಹಿತಿ ಅತ್ಯಂತ ಕುತೂಹಲಕಾರಿಯಾಗಿದೆ.

150 ವರ್ಷಗಳ ಹಿಂದೆ ಚೆನ್ನಪಟ್ಟಣದ ವಾಸುದೇವಯ್ಯ ಎಂಬವರು ಬರೆದ ಪದ್ಯ ಇದಾಗಿದ್ದು; ಆ ಬಳಿಕ ಇದು ಬರಹ ರೂಪದಲ್ಲಿ ಎಲ್ಲೂ ಲಭ್ಯವಾಗಲಿಲ್ಲ. ಪ್ರಸ್ತುತ ಅವರ ಮೊಮ್ಮಕ್ಕಳು ಮತ್ತು ಮರಿಮಕ್ಕಳು ಅವರ ಈ ಪದ್ಯದ ಬಗ್ಗೆ ಆಸಕ್ತಿ ತಾಳಿ ಅದರ ಮೂಲವನ್ನು ಹುಡುಕುತ್ತಾ ಹೋದಂತೆ ಅವರಿಗೆ ಇದರ ಮೂಲ ಪ್ರತಿಯು ಇದೇ ಲೈಬ್ರರಿ ಆಫ್ ಕಾಂಗ್ರೆಸ್ ನಲ್ಲಿ ಲಭ್ಯವಾಯಿತು! ಅತ್ಯದ್ಭುತ ಮಕ್ಕಳ ಸಾಹಿತ್ಯವನ್ನು ನಮಗೆ ಸರಿಯಾಗಿ ಕಾಪಿಡಲಾಗದಿರುವುದು ನಿಜಕ್ಕೂ ವಿಷಾದದ ಸಂಗತಿಯಾಗಿದೆ ಅಲ್ಲವೇ?

ಚೆನ್ನಪಟ್ಟಣದ ವಾಸುದೇವಯ್ಯ


ಸುಪ್ರೀಂ ಕೋರ್ಟ್ 

      ದೇಶದ ಅತ್ಯುನ್ನತ ಕೋರ್ಟ್ ವ್ಯವಹಾರಗಳೆಲ್ಲಾ ಇಲ್ಲೇ ನಡೆಯುತ್ತವೆ. ಅತ್ಯಂತ ಶುಭ್ರ ಶ್ವೇತ ವರ್ಣದ ಅಮೃತಶಿಲೆಯನ್ನು ಬಳಸಿ ರಚಿಸಿದ ಈ ಭವನದ ನಿರ್ಮಾಣ ಕಾರ್ಯವು 1935ರಲ್ಲಿ ಪೂರ್ಣಗೊಂಡಿತು. ಐದು ಅಂತಸ್ತುಗಳುಳ್ಳ ಈ ಕಟ್ಟಡವು ಸೋಮವಾರದಿಂದ ಶುಕ್ರವಾರದ ವರೆಗೆ ಬೆಳಗ್ಗೆ 9ರಿಂದ ಸಂಜೆ 4:30ರ ವರೆಗೆ; ಕೋರ್ಟ್ ವ್ಯವಹಾರಗಳು ಇಲ್ಲದ ಸಮಯದಲ್ಲಿ ಸಾರ್ವಜನಿಕ ವೀಕ್ಷಣೆಗಾಗಿ ತೆರೆದಿರುತ್ತದೆ. ಸುಂದರ ವಾಸ್ತುವಿನ್ಯಾಸಕ್ಕಾಗಿ ‘ಅಮೃತಶಿಲೆಯ ಅರಮನೆ` ಎನ್ನುವ ಹೆಗ್ಗಳಿಕೆಯನ್ನೂ ಇದು ಪಡೆದಿದೆ. 

  ಮುಂದೆ ಸ್ವಲ್ಪ ದೂರದಲ್ಲೇ ಇತ್ತು… ಈ ಸುಪ್ರೀಂ ಕೋರ್ಟ್ ಕಟ್ಟಡ. ರಸ್ತೆಯಿಂದ ಬಹು ಎತ್ತರದಲ್ಲಿ ನಿರ್ಮಿಸಲಾದ ಈ ಭವನದ ಬಳಿ ತಲಪಲು ಬಹು ವಿಶಾಲವಾದ ಕಲ್ಲಿನ ಮೆಟ್ಟಲುಗಳನ್ನು ಏರಬೇಕು. ಸುಮಾರು ಮೂವತ್ತು ಮೆಟ್ಟಲುಗಳನ್ನು ಏರಿದ ಬಳಿಕ ಅತ್ಯಂತ ವಿಶಾಲವಾದ ಕಲ್ಲಿನ ಅಂಗಳದ ಇಕ್ಕೆಲಗಳಲ್ಲಿ ವೃತ್ತಾಕಾರದ  ಕಲ್ಲಿನ ಪುಟ್ಟ ಕೊಳಗಳು… ಅವುಗಳಲ್ಲಿ ಚಿಮ್ಮುವ ನೀರಿನ ಕಾರಂಜಿಗಳು ಮನಕ್ಕೆ ಮುದನೀಡುವಂತಿವೆ. ಮುಂದಕ್ಕೆ’ ಮತ್ತಷ್ಟು ಮೆಟ್ಟಲನ್ನೇರಿ ಮೇಲೆ ಹೋದಾಗ ಎತ್ತರೆತ್ತರದ ಸೊಗಸಾದ  ಅಮೃತಶಿಲೆಯ ಕಂಬಗಳು ಗೋಚರಿಸುತ್ತವೆ. ಅದರ ಮೇಲ್ಛಾವಣಿಯಲ್ಲಿ ಬಹು ಚಂದದ ಕೆತ್ತನೆಗಳು ನೋಡುಗರನ್ನು ಆಕರ್ಷಿಸುತ್ತವೆ. 

ನಾವು ಅಲ್ಲಿಗೆ ತಲಪಿದಾಗ ವಿರಳ ಸಂಖ್ಯೆಯಲ್ಲಿದ್ದ ಪ್ರವಾಸಿಗರು ಕುತೂಹಲದಿಂದ ಓಡಾಡುತ್ತಿದ್ದರು… ಭದ್ರತಾ ಸಿಬ್ಬಂದಿಗಳ ಕಣ್ಗಾವಲಿನ ನಡುವೆ.  ಸಮಯ ಮೀರಿದ್ದರಿಂದ ಒಳಗಡೆಗೆ ನೋಡುವ ಅವಕಾಶ ಇಲ್ಲಿಯೂ ಒದಗಲಿಲ್ಲ. ಸಂಜೆ ಸೂರ್ಯನ ಹೊಂಬಣ್ಣದ ಕಿರಣಗಳು ಈ ಕಟ್ಟಡದ ಮೇಲೆ ಬಿದ್ದು ಪೂರ್ತಿ ಬಂಗಾರದ ಬಣ್ಣದಿಂದ ಹೊಳೆಯುವ ಅಂದವನ್ನು ನೋಡಲು ಎರಡೂ ಕಣ್ಣುಗಳು ಸಾಲವು. ಕಟ್ಟಡದ ಸುತ್ತಲು ಇರುವ ಅಗಲವಾದ ಜಗುಲಿಯಲ್ಲಿ ಓಡಾಡಿ, ಹಿಂಭಾಗದಲ್ಲಿರುವ ಸೊಗಸಾದ ಹೂದೋಟವನ್ನು ವೀಕ್ಷಿಸುವಾಗಲೇ ಕತ್ತಲಾಗತೊಡಗಿತು. ಬೀಸುವ ತಂಗಾಳಿ, ಚಿಮ್ಮುವ ಕಾರಂಜಿಯ ತುಂತುರು ಹನಿಗೆ ಮೈಯೊಡ್ಡಿ ಸ್ವಲ್ಪ ಸಮಯ ಕುಳಿತು ಮುಂದಕ್ಕೆ ಹೊರಟೆವು…

ಪಾರ್ಲಿಮೆಂಟ್ ಹೌಸ್(Parliament House)

ಈ ಕಟ್ಟಡದ ಅಡಿಪಾಯ ಪ್ರದೇಶದ ವಿಸ್ತೀರ್ಣವೇ ಸುಮಾರು 16.5 ಎಕರೆಗಳು. ಇದರಿಂದಲೇ ಈ ಭವ್ಯ ಕಟ್ಟಡದ ಅಗಾಧತೆಯನ್ನು ತಿಳಿಯಬಹುದು. ಇದರ ನಿರ್ಮಾಣವು 1793ರಲ್ಲಿ ಪ್ರಾರಂಭಗೊಂಡು 1800ರಲ್ಲಿ ಪೂರ್ಣಗೊಂಡಿತು. ಮಧ್ಯದಲ್ಲಿ ಗೋಲಾಕಾರದ ಬಹು ದೊಡ್ಡ ಬುರುಜು ಹಾಗೂ ಅದರ ಇಕ್ಕೆಲಗಳಲ್ಲಿ ಹಬ್ಬಿರುವ ಕಟ್ಟಡ ಸಮುಚ್ಚಯಗಳು ಅತ್ಯಂತ ಸುಂದರ. ಪಾರ್ಲಿಮೆಂಟ್ ಅಧಿವೇಶನಗಳು ನಡೆಯುವ ಸಮಯ ಬಿಟ್ಟು ಉಳಿದಂತೆ ಸಾರ್ವಜನಿಕ ವೀಕ್ಷಣೆಗೆ ಅವಕಾಶವಿದೆ.

    ಈ ಪಾರ್ಲಿಮೆಂಟ್ ಹೌಸ್  ಮುಂಭಾಗದ ಅನತಿ ದೂರದಲ್ಲಿರುವ ಸಾರ್ವಜನಿಕ ರಸ್ತೆಯಿಂದ, ವಿದ್ಯುದ್ದೀಪದಿಂದ ಅಲಂಕೃತಗೊಂಡು ಬೆಳಗುವ ಈ ಅದ್ಭುತ ಕಟ್ಟಡದ ನೋಟವು ಅತ್ಯಂತ ರಮಣೀಯ. ಅದಾಗಲೇ ಕತ್ತಲಾವರಿಸಿದ್ದರಿಂದ ಹೆಚ್ಚು ಬೆಳಕಿಲ್ಲದ, ನಸುಗತ್ತಲೆ ರಸ್ತೆಯಲ್ಲಿ ಅಡ್ಡ ಹಾದು ಭವನದ ಪ್ರಾಂಗಣದೊಳಕ್ಕೆ ಕಾಲಿರಿಸಲು ಸುಮಾರು ಒಂದು ಕಿ.ಮೀ. ನಡೆಯಬೇಕು. ಅಲ್ಲಲ್ಲಿ ಕಾಣಸಿಗುವ ಭದ್ರತಾ ಸಿಬ್ಬಂದಿಗಳು ಪ್ರವಾಸಿಗರನ್ನು ಸರಿಯಾಗಿ ತಪಾಸಣೆ ಮಾಡಿಯೇ ಒಳಗೆ ಬಿಡುವರು. ಅಂಗಳದಲ್ಲಿ ಕೆಳಹಂತದಿಂದ ಮೇಲಿನ ಹಂತಕ್ಕೆ ಹೋಗಲು ಲಿಫ್ಟ್ ವ್ಯವಸ್ಥೆಯೂ ಇದೆ. ಎಕರೆಗಟ್ಟಲೆ ವಿಸ್ತಾರದ ಎದುರಿನ ಪ್ರಾಂಗಣದಲ್ಲಿ ಬಹುದೊಡ್ಡದಾದ ಕಾರಂಜಿ ಕೊಳದಲ್ಲಿ ಚಿಮ್ಮುವ ನೀರು ಅಲ್ಲಿಯ ನೆಲವನ್ನಿಡೀ ಒದ್ದೆ ಮಾಡಿಬಿಟ್ಟಿತ್ತು. ಕತ್ತಲಾಗಿದ್ದರೂ ಎಲ್ಲೆಲ್ಲೂ ಝಗಝಗಿಸುವ ವಿದ್ಯುದ್ದೀಪದ ಬೆಳಕಿನಲ್ಲಿ ನೋಡುವುದು ಇನ್ನೊಂದು ರೀತಿಯ ಆನಂದ! ಮುಂದಕ್ಕೆ ಪಾರ್ಲಿಮೆಂಟ್ ಹೌಸ್ ನ ಅತ್ಯದ್ಭುತ ಕಟ್ಟಡದತ್ತ ನಡೆದಾಗ ಅದಾಗಲೇ ಅಲ್ಲಿ ಸಾಕಷ್ಟು ಸಂಖ್ಯೆಯಲ್ಲಿ  ಪ್ರವಾಸಿಗರು ನೆರೆದಿದ್ದರೂ, ವಿಶಾಲವಾದ  ಅಂಗಳದಲ್ಲಿ ಬಹು ವಿರಳವೆನ್ನಿಸುತ್ತಿತ್ತು. ಭವನದ ಸುತ್ತಲೂ ಇರುವ ದೊಡ್ಡದಾದ, ಸೊಗಸಾದ ಹೂದೋಟವನ್ನು ಸುತ್ತಾಡಲು ಹೊರಟು, ನಾನಂತೂ ಕಾಲು ಸೋತು ಹಿಂತಿರುಗಿದೆ! 

ರಾತ್ರಿ 8:30… ಹಿಂತಿರುಗುವ ಸಮಯವಾದರೂ ನಮ್ಮವರೊಬ್ಬರೂ ಕಾಣುತ್ತಿಲ್ಲ…ಒಬ್ಬೊಬ್ಬರೂ ಒಂದೊಂದು ಕಡೆಗೆ ಹರಡಿ ಹೋಗಿದ್ದರು. ಅಂತೂ ಎಲ್ಲರೂ ಒಗ್ಗೂಡಿ ಹೊಟ್ಟೆ ತುಂಬಿಸಲು ಹೋಟೇಲ್ ಹುಡುಕುತ್ತಾ ಹೊರಟಾಗ ಹೆಚ್ಚಿನ ಪ್ರವಾಸಿಗರು ಅವರವರ ದಾರಿ ಹಿಡಿದಿದ್ದರು. ರಾತ್ರಿ ಹತ್ತು ಗಂಟೆ..ಹೆಚ್ಚಿನ ಹೋಟೇಲ್ ಗಳು ತಮ್ಮ ವ್ಯಾಪಾರ ಮುಗಿಸಿದ್ದವು. ಕೊನೆಗೆ ನಮಗಾಗಿಯೇ ಎನ್ನುವಂತೆ “ರಸಂ” ಹೆಸರಿನ ಹೋಟೇಲ್ ಅರ್ಧ ತೆರೆದು ನಿಂತಿತ್ತು! 

ಅದರ ಒಳಗೋಡೆ ತುಂಬಾ ಇರುವ ಪ್ರಕೃತಿಯ ರಮ್ಯ ಚಿತ್ರಗಳ ಜೊತೆ ಕೃಷ್ಣ ರಾಧೆಯರನ್ನೂ ಕಂಡು ಖುಷಿಯಾಯಿತು. ಒಮ್ಮೆಗೆ, ನಾವು ನಮ್ಮದೇ ದೇಶದಲ್ಲಿರುವ ಭಾವನೆ ಮೂಡಿದ್ದು ಸುಳ್ಳಲ್ಲ.  ನಸುಗತ್ತಲೆಯಲ್ಲಿ ಖಾಲಿ ಕುರ್ಚಿ ಹುಡುಕಿ ಕುಳಿತಾಗ ವೃದ್ಧ ಮಹಿಳೆಯೊಬ್ಬಳು ಆ ತಡ ರಾತ್ರಿಯಲ್ಲಿಯೂ ನಮ್ಮ ಬೇಡಿಕೆಗಳಿಗೆ ನಗು ನಗುತ್ತಾ ಸ್ಪಂದಿಸುವುದನ್ನು ಕಂಡು ಸ್ವಲ್ಪ ಕನಿಕರವೆನಿಸಿದರೂ  ಅವಳ ಶ್ರದ್ಧೆಯು ಮೆಚ್ಚುವಂತಿತ್ತು. ಅಬ್ಬಾ…ಅಂತೂ ಸ್ವಲ್ಪವಾದರೂ  ಅನ್ನ ಇಲ್ಲಿ ಸಿಗಬಹುದೆಂಬ ಆಸೆಯಿಂದ ಇಣುಕಿದ ನನಗೆ, ಎಂದಿನಂತೆ ಹಸಿಯಾದ ಕೋಸು ಎಲೆಗಳನ್ನು ಇರಿಸಿದ ತಟ್ಟೆಯು ನನ್ನ ಮುಂದೆ ನಗುತ್ತಾ ಕುಳಿತೊಡನೆ, ಅಳುಬರುವುದೊಂದು ಬಾಕಿ!  ಮಗಳು ನನ್ನ ಪರಿಸ್ಥಿತಿ ಅರಿತು ತರಿಸಿದ ಹಣ್ಣಿನ ರಸದೊಂದಿಗಿನ  ಶುದ್ಧ ಸಸ್ಯಾಹಾರವು ನನ್ನ ಆ ದಿನಕ್ಕೆ ಮುಕ್ತಾಯ ಹಾಡಿತು… ದಣಿದ ದೇಹಕ್ಕೆ ಹೋಟೇಲ್ ಹಾಸಿಗೆಯು ಸುಖನಿದ್ರೆ ನೀಡಿತು….

(ಮುಂದುವರಿಯುವುದು…..)

ಈ ಪ್ರವಾಸಕಥನದ ಹಿಂದಿನ ಎಳೆ ಇಲ್ಲಿದೆ:   https://surahonne.com/?p=38762

-ಶಂಕರಿ ಶರ್ಮ, ಪುತ್ತೂರು. 

5 Responses

  1. ಪ್ರವಾಸ ಕಥನ ಎಂದಿನಂತೆ ಓದಿಸಿಕೊಂಡು ಹೋಯಿತು… ನಿಮ್ಮ ಜೊತೆ ನಾವೂ…ಸುತ್ತುತ್ತಾ ಇದ್ದೇವೆ…ಧನ್ಯವಾದಗಳು ಮೇಡಂ

  2. ನಯನ ಬಜಕೂಡ್ಲು says:

    Nice

  3. Padma Anand says:

    ಉಪಯುಕ್ತ ಮಾಹಿತಿಗಳನ್ನೊಳಗೊಂಡ ಚೆಂದದ ಪ್ರವಾಸೀ ಕಥನ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: