ದೊಡ್ಡನೆಕ್ಕರೆ- ಇರಲಿ ಅಕ್ಕರೆ

Share Button

“ನೀನು ಮುತ್ತೈದೆಯೇ ಆಗಿದ್ದರೆ, ನನ್ನನ್ನು ನೋಡಿದ ಕೂಡಲೇ ಗಿಡದಿಂದ ಕೊಯಿದು(ಕಿತ್ತು) ನಿನ್ನ ತಲೆಯಲ್ಲಿ ಮುಡಿಯುವೆ” ಅಂತ ಈ ಗಿಡ ಹೇಳುತ್ತದೆಯೆಂದು ನನ್ನಮ್ಮ ಹೇಳುತ್ತಿದ್ದರು. ಆಹಾ! ಎಂತಹ ಒಂದು ಸುಂದರ ಕಲ್ಪನೆ! ಹಾಗಾದರೆ, ಹೂವಿನ ಗಿಡಗಳಿಗೂ ಗೊತ್ತು ಹೂವುಗಳೆಂದರೆ ಹೆಣ್ಣಿಗೆ ಇಷ್ಟ, ಹೂವುಗಳನ್ನು ಮುಡಿಯುವುದು ಇಷ್ಟ ಎಂದಾಯಿತು ತಾನೇ? ಹೂವುಗಳಿಗೂ ಕನಸಿದೆ. ಅದು ಎಂತಹ ಕನಸು?  ದೇವರ ಮುಡಿಯೇರಿ ಸಾರ್ಥಕ್ಯ ಪಡೆಯುವ ಕನಸು! ಎಂದೆಲ್ಲಾ ಕವಿಮನಗಳು ಬರೆದಿರುವುದನ್ನು ಓದಿಯಾದರೂ ಗೊತ್ತು. ಜನಸಾಮಾನ್ಯರ ಆಡುಮಾತಿನಲ್ಲಿ ಗಿಡವೊಂದು ತನ್ನ ಹೂವನ್ನು ಮುತ್ತೈದೆಯಾದವಳು ಮುಡಿಯದೆ ಮುಂದೆ ಸಾಗಲಾರಳೆಂದು ಅಂದುಕೊಳ್ಳುವ ಆ ಕಲ್ಪನೆಯೇ ಅತಿ ಅದ್ಭುತವೆಂದು ಅನ್ನಿಸಿದ್ದು ಅದೆಷ್ಟೋ ಸಲ.   ಪ್ರಕೃತಿ ಮಾತೆಯ ಮಡಿಲಲ್ಲಿ ಅದೆಷ್ಟು ತರದ ಬಣ್ಣ ಬಣ್ಣದ ಹೂವುಗಳು! ಪ್ರತಿಯೊಂದು ಹೂವೂ ಭಿನ್ನ. ಬಣ್ಣ, ಸುವಾಸನೆ, ಸೌಂದರ್ಯ, ಗಾತ್ರ, ಆಯುಷ್ಯದಲ್ಲಿ ಸಾಮ್ಯತೆ ಕಡಿಮೆಯೇ. ಕೆಲವೊಂದು ಬಣ್ಣ ಮನಮೋಹಕ. ಈ ಬಗ್ಗೆ ನಾನು ವಿಶೇಷವಾಗಿ ಬರೆಯುವ ಅಗತ್ಯವಿಲ್ಲ.

ಯಾವ ಗಿಡ ಆ ರೀತಿ ಮಾತನಾಡಲು ಯೋಚಿಸಿರಬಹುದು ಅನ್ನುವ ಪ್ರಶ್ನೆ ನಿಮ್ಮ ಮನದಲ್ಲಿ ಬಂತಲ್ವಾ? ಅದುವೇ ದೊಡ್ಡನೆಕ್ಕರೆ.  ಅಂಕರ್ಕೆ, ನೆಕ್ಕರಿಕ, ನೆಕ್ಕರೆ, ಕೆಂಕರಿಕೆ ಅನ್ನುವ ಬೇರೆ ಬೇರೆ ಹೆಸರುಗಳು ಕೂಡಾ ಇವೆ. ಮಲಬಾರ್ ಮೆಲಸ್ಟೋಮ್ ಅಥವಾ ಇಂಡಿಯನ್ ರೋಡೋಡೆಂಡ್ರನ್ ಎಂದು ಕರೆಯುವರು. ಹೂವುಗಳು ಐದು ದಳಗಳನ್ನು ಹೊಂದಿದ್ದು, ಮನಮೋಹಕ ನೇರಳೆ ಯಾ ತಿಳಿಗುಲಾಬಿ ಬಣ್ಣದಲ್ಲಿರುತ್ತವೆ. ಅಪೂರ್ವವಾಗಿ ಬಿಳಿ ಬಣ್ಣದಲ್ಲಿ ಕಾಣಸಿಗುವುದೂ ಉಂಟು. 


ಮೆಲಸ್ಟೊಮೇಟೇಸಿ ಕುಟುಂಬಕ್ಕೆ ಸೇರಿದ ಸಸ್ಯ- ಮೆಲಸ್ಟೋಮಾ ಮಲಬಾತ್ರಿಕಮ್ ಅನ್ನುವುದು ಸಸ್ಯಶಾಸ್ತ್ರೀಯ ಹೆಸರು.  ರಸ್ತೆ ಬದಿಗಳಲ್ಲಿ, ಕಾಡುಗಳಲ್ಲಿ, ತೋಟಗಳಲ್ಲಿ, ಕೆರೆಗಳ ಪಕ್ಕದಲ್ಲಿ ಗುಂಪುಗುಂಪಾಗಿ ಹೇರಳವಾಗಿ ಕಾಣಸಿಗುತ್ತದೆ. ಸುಮಾರು ಮೂರು ಮೀಟರ್ ಎತ್ತರಕ್ಕೆ ಬೆಳೆಯಬಲ್ಲ ಸಸ್ಯಗಳಿವು. ಎಲೆಗಳ ಎರಡೂ ಬದಿಗಳು ಸ್ವಲ್ಪ ಒರಟೆಂದೇ ಹೇಳಬಹುದು. ಎಲೆಗಳ ಮೇಲೆ, ಕಾಂಡದ ಮೇಲೆ, ಕೂದಲಿನಂತಹ ರಚನೆಗಳು ಕಂಡುಬರುತ್ತವೆ. ಈ ಸಸ್ಯವು ಔಷಧೀಯ ಗುಣಗಳ ಆಗರ. ಭಾರತ, ಮಲೇಶಿಯಾ, ಇಂಡೋನೇಶಿಯಾ,  ಚೀನಾ, ಥಾಯ್ಲೆಂಡ್, ಜಪಾನ್, ಆಸ್ಟ್ರೇಲಿಯಾ, ಫೆಸಿಫಿಕ್ ದ್ವೀಪಗಳು ಹಾಗೂ ಪ್ರಪಂಚದ ಇತರ ಭಾಗಗಳಲ್ಲಿ ಈ ಗಿಡಗಳು ಕಂಡುಬರುತ್ತವೆ. ಸಾಂಪ್ರದಾಯಿಕ ಔಷಧ ತಯಾರಿಯಲ್ಲಿ ಹಿಂದಿನಿಂದಲೂ ಬಳಸಲ್ಪಡುತ್ತಿರುವ ಸಸ್ಯವಿದು.

ಈ ಸಸ್ಯದ ಎಲೆ, ಹೂವು, ಕಾಂಡ, ಬೇರು ಎಲ್ಲವುಗಳನ್ನು ಔಷಧ ತಯಾರಿಯಲ್ಲಿ ಬಳಸುವರು. ಈ ಸಸ್ಯದ ಚಿಗುರೆಲೆಗಳನ್ನು ಬಳಸಿ ತಯಾರಿಸಿದ ತಂಬುಳಿ ಯಾ ಚಟ್ನಿಯನ್ನು ಸೇವಿಸುವುದರಿಂದ ಜೀರ್ಣಕ್ರಿಯೆ ಸರಾಗವಾಗುವುದು. ಅಜೀರ್ಣದ ಸಮಸ್ಯೆಯನ್ನು ದೂರಮಾಡಬಹುದು. ಅತಿಸಾರ, ಭೇಧಿ ನಿಯಂತ್ರಿಸಲು ಸಹಕಾರಿಯೂ ಹೌದು. ಸುಟ್ಟ ಗಾಯ, ಹುಣ್ಣು, ಬೇರಾವುದೇ ಗಾಯ ವಾಸಿಯಾಗಲು ಈ ಗಿಡದ ಎಲೆಯ ರಸವನ್ನು ಜಜ್ಜಿ ಅಥವಾ ಅರೆದು ಗಾಯಕ್ಕೆ ಹಚ್ಚಬಹುದು, ಅಥವಾ ಎಲೆಯ ರಸವನ್ನು ತೆಂಗಿನೆಣ್ಣೆಗೆ ಹಾಕಿ ಕುದಿಸಿ ನಂತರ ಗಾಯಕ್ಕೆ ಹಚ್ಚಬಹುದು. ಉರಿಯೂತ ಇರುವಲ್ಲಿಗೆ ಎಲೆಗಳ ರಸವನ್ನು ಹಚ್ಚಿದರೆ, ಊತ ಕಡಿಮೆಯಾಗುವುದು. ಇದರ ಎಲೆಗಳನ್ನು ಹಾಕಿ ಮಾಡಿದ ಕಷಾಯ ಸೇವನೆಯಿಂದ ಸಾಮಾನ್ಯ ಜ್ವರ, ತಲೆನೋವು ಕಡಿಮೆಯಾಗುವುದು. ಈ ಸಸ್ಯದ ಕಡ್ಡಿ ಹಾಗೂ ಬೇರುಗಳನ್ನು ಹಾಕಿ ಕುದಿಸಿದ ಕಷಾಯವನ್ನು ಸೇವಿಸುವುದರಿಂದ ಹಲ್ಲುನೋವು ನಿವಾರಿಸಬಹುದು. ಹಾಗೆಯೇ ಸ್ತ್ರೀಯರ ಬಿಳಿಸೆರಗಿನ ಸಮಸ್ಯೆಗೂ ಉಪಯೋಗಿಸಬಹುದು. ಬಾಣಂತಿಯರಿಗೆ ವಿವಿಧ ಔಷಧೀಯ ಸಸ್ಯಗಳನ್ನು ಬಳಸಿ ತಯಾರಿಸುವ ಕೊಡಿಗಟ್ಟಿ (ಕುಡಿಗಳನ್ನು ಬಳಸಿ ತಯಾರಿಸಿದ ಗಟ್ಟಿ ಚಟ್ನಿ)ಯಲ್ಲಿಯೂ ನೆಕ್ಕರಿಕ ಗಿಡದ ಎಲೆಗಳನ್ನು ಬಳಸುವರು. ಗಾಯ ಬೇಗ ವಾಸಿಯಾಗಲು ಹಾಗೂ ಗರ್ಭಕೋಶವು ಬೇಗನೇ ತನ್ನ ಸಹಜ ಸ್ಥಿತಿಗೆ ಮರಳಲು ಇದು ಸಹಾಯಕಾರಿ. ಬಾಣಂತಿಯರಿಗೆ ಹಲ್ಲುನೋವು ಉಂಟಾದರೆ, ಈ ಗಿಡದ ಕಡ್ಡಿ ಹಾಗೂ ಬೇರುಗಳನ್ನು ಹಾಕಿ ಕುದಿಸಿದ ಕಷಾಯವನ್ನು ಬಾಯಿ ಮುಕ್ಕುಳಿಸಲು ಕೊಡುವ ಕ್ರಮವೂ ರೂಢಿಯಲ್ಲಿತ್ತು ಎಂಬುದನ್ನು ಕೇಳಿದ್ದೇನೆ.

ಈ ಗಿಡದ ಕಾಯಿ ಹಣ್ಣಾದಾಗ ಗಾಢನೀಲಿಯ ಬಣ್ಣದ್ದಾಗಿದ್ದು, ಅದನ್ನು ತಿನ್ನಬಹುದು ಕೂಡಾ. ಬಾಲ್ಯದಲ್ಲಿ ಆ ಹಣ್ಣುಗಳನ್ನು ಹುಡುಕಿ ಹುಡುಕಿ ತಿಂದು ಬಾಯಿ ನೀಲಿ ಮಾಡಿಕೊಂಡವರ ಸಂಖ್ಯೆಯೂ ಕಡಿಮೆಯೇನಲ್ಲ. ದೇಹಕ್ಕೆ ತಂಪು ನೀಡುವ ಗುಣ ಹಣ್ಣಿಗಿದೆಯೆಂಬುದು ಅನುಭವಸ್ಥರ ಮಾತು. ಆದರೆ ನಾನು ತಿಂದಿಲ್ಲ. ಗಿಡದ ಎಲೆ, ಹೂವು, ಹಣ್ಣುಗಳನ್ನು ಬಟ್ಟೆಗಳಿಗೆ ಬಣ್ಣ ಹಾಕಲು ವರ್ಣಕಾರಕವಾಗಿ ಬಳಸುವರು. ಗಾಢನೇರಳೆ ಬಣ್ಣದ ಹೂವುಗಳುಳ್ಳ ಈ ಸಸ್ಯಗಳನ್ನು ಅಲಂಕಾರಿಕ ಸಸ್ಯವಾಗಿ ಸಹಾ ಬೆಳೆಯುವರು.


ಬಾಲ್ಯದಿಂದಲೂ ಈ ಹೂವುಗಳ ಪರಿಚಯ ಇರುವ ಕಾರಣ, 2014-17 ರ ಅವಧಿಯಲ್ಲಿ ನಾನು ಸಂಶೋಧನಾ ಕಾರ್ಯದಲ್ಲಿ ನಿರತಳಾಗಿದ್ದಾಗ,  ಚಿನ್ನದ ನ್ಯಾನೋ ಕಣಗಳ, ಬೆಳ್ಳಿಯ ನ್ಯಾನೋಕಣಗಳ ಹಾಗೂ ಚಿನ್ನ-ಬೆಳ್ಳಿ ಮಿಶ್ರಿತ ನ್ಯಾನೋಕಣಗಳ ಸಂಶ್ಲೇಷಣಾ ಕ್ರಿಯೆಯಲ್ಲಿ ಈ ಹೂವುಗಳ ಸಾರವನ್ನು ಅಪಕರ್ಷಣಕಾರಿಯಾಗಿ ಬಳಸಿಕೊಂಡಿದ್ದೇನೆ. ಇದಕ್ಕೆ ಸಂಬಂಧಿಸಿದ ಮೂರು ಸಂಶೋಧನಾ ಲೇಖನಗಳು ಅಂತರಾಷ್ಟ್ರೀಯ ಜರ್ನಲುಗಳಲ್ಲಿ ಪ್ರಕಟವಾಗಿರುವುದು ನಾನು ಹೆಮ್ಮೆಪಡುವ ಸಂಗತಿಯೂ ಹೌದು. ಈ ಸಸ್ಯದ ಬಗೆಗಿನ ಅನೇಕ ವಿಚಾರಗಳನ್ನು ತಿಳಿದುಕೊಳ್ಳುವ ಸುಯೋಗ ನನ್ನದಾಯಿತು. ಈ ಸಸ್ಯಗಳಿರುವಲ್ಲಿ ನೀರಿನ ಮೂಲವಿದ್ದೇ ಇರುತ್ತದೆ ಅನ್ನುವರು. ಅಲ್ಯೂಮೀನಿಯಂ ಲೋಹವನ್ನು ಸಂಗ್ರಹಿಸುವ ವಿಶೇಷ ಸಾಮರ್ಥ್ಯವಿರುವ ಈ ಸಸ್ಯವನ್ನು ಅಲ್ಯೂಮೀನಿಯಮ್ ಅಕ್ಯುಮುಲೇಟರ್ ಅನ್ನುವರು.. ಈ ಸಸ್ಯದ ಎಲೆ ಹಾಗೂ ಹೂವುಗಳಿಗೆ ಕ್ಯಾನ್ಸರ್ ಪ್ರತಿರೋಧಕ ಗುಣಗಳಿವೆಯೆಂಬುದು ಸಂಶೋಧನೆಗಳಿಂದ ಸಾಬೀತಾಗಿದೆ.  ಮ್ಯಾಂಗನೀಸ್, ಸತು, ಕಬ್ಬಿಣ, ತಾಮ್ರ, ಸೋಡಿಯಂ ಮುಂತಾದ  ಖನಿಜಾಂಶಗಳನ್ನು ಹೊಂದಿದೆ.   

ಇಷ್ಟೆಲ್ಲಾ ಗುಣಗಳನ್ನು ತನ್ನೊಡಲಲ್ಲಿ ಬಚ್ಚಿಟ್ಟುಕೊಂಡಿರುವ, ನಮ್ಮ ಪ್ರಕೃತಿಯಲ್ಲಿ ಲಭ್ಯವಿರುವ ಈ ಔಷಧೀಯ ಸಸ್ಯವನ್ನು ಕಳೆಗಿಡವೆಂದು ದೂರವಿಡದೆ, ನಮ್ಮ ಮನೆಯಂಗಳದಲ್ಲಿ ಬೆಳೆದುಕೊಂಡು, ಅದರ ಆರೋಗ್ಯವರ್ಧಕ ಗುಣಗಳನ್ನು ಬಳಸಿಕೊಳ್ಳುವುದು ನಮ್ಮ ಬುದ್ಧಿಗೆ, ವಿವೇಕಕ್ಕೆ ಬಿಟ್ಟದ್ದು.  ದೊಡ್ದನೆಕ್ಕರೆಯ ಮೇಲೆ ಇರಲಿ ಅಕ್ಕರೆ, ಆಗದೇ?

ಡಾ. ಕೃಷ್ಣಪ್ರಭ ಎಂ, ಮಂಗಳೂರು

16 Responses

 1. ಮಹೇಶ್ವರಿ ಯು says:

  ಮಾಹಿತಿ ಪೂಣ೯ ಸುಂದರ ಬರಹ.

 2. ಮಾಹಿತಿಯನ್ನು ಒಳಗೊಂಡ ಲೇಖನ… ಚೆನ್ನಾಗಿ ದೆ…ಧನ್ಯವಾದಗಳು ಮೇಡಂ

 3. ದೊಡ್ಡ ನೆಕ್ಕರೆ ಹೂವಿನ ಬಗ್ಗೆ ಅದ್ಭುತವಾದ ಮಾಹಿತಿ ಉಳ್ಳ ಲೇಖನ
  ವಂದನೆಗಳು

 4. Hema says:

  ‘ದೊಡ್ಡ ನೆಕ್ಕರೆ’ಯೂ ನಿಮ್ಮ ಸಂಶೋಧನಾ ಬರಹವೂ….ಬಲು ಸೊಗಸು. ಫಿಸಿಕ್ಸ್ ಮೇಡಂರವರ ‘ ಬಾಟನಿ’ ಪಾಠ ‘ ಇನ್ನೂ ಸೂಪರ್ !

  • ನಯನ ಬಜಕೂಡ್ಲು says:

   ಬಹಳ ಚಂದದ ಪ್ರತಿಕ್ರಿಯೆ.

  • Krishnaprabha M says:

   ಬಾಟನಿ ಇಷ್ಟದ ವಿಷಯ….ಚಂದದ ಪ್ರತಿಕ್ರಿಯೆಗೆ ಹಾಗೂ ಸದಾ ಪ್ರೋತ್ಸಾಹ ನೀಡುತ್ತಿರುವ ನಿಮಗೆ ಧನ್ಯವಾದಗಳು

 5. ನಯನ ಬಜಕೂಡ್ಲು says:

  ಸೊಗಸಾದ ಬರಹ

 6. Dear Dr. Krishnaprabha,

  Your words have a way of bringing vibrant colours, delicate fragrances, and intricate details of flowers to life in the reader’s mind. Your descriptions are so vivid and evocative that I could almost feel the soft petals and smell the sweet scents as I read. Your passion for and knowledge of flowers shine through in every sentence, and your writing has given me a newfound appreciation for the beauty and complexity of these incredible plants.

  Your ability to weave together scientific facts, historical anecdotes, and personal reflections adds depth and richness to your work. It’s clear that you have done extensive research and have a deep understanding of the subject matter, and this comes through in the quality and authenticity of your writing.

  I just wanted to say thank you for sharing your talent and passion with the world. Your writing has brought joy and beauty into my life, and I am sure it has done the same for many others. I look forward to reading more of your work in the future.

  Warm regards,
  Dr. Mahesh K.B.

 7. Geetha Poornima K says:

  Very nice madam

 8. Padma Anand says:

  ದೊಡ್ಡನೆಕ್ಕರೆಯ ಮೇಲೆ ನಿಮಗಿರುವ ಅಕ್ಕರೆಯನ್ನು ನಮ್ಮೆಲ್ಲರಿಗೂ ಪಸರಿಸುವಲ್ಲಿ, ಲೇಖನ ಯಶಸ್ವಿಯಾಗಿದೆ.

 9. ಶಂಕರಿ ಶರ್ಮ says:

  ಅಲ್ಲಲ್ಲಿ ಕಾಣುವ ನೆಕ್ಕರಿಕ ಗಿಡದ ಚಿಗುರೆಲೆಗಳನ್ನು ಸ್ವಾದಿಷ್ಟವಾದ ತಂಬುಳಿ ಮಾಡಿ ಉಂಡದ್ದಿದೆ. ಆದರೆ ಇದರ ಬಹು ಉಪಯೋಗಗಳ ಮಾಹಿತಿ ಹೊತ್ತ ಲೇಖನ ಖುಷಿಕೊಟ್ಟಿತು ಮೇಡಂ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: