ಐರ್‌ಲ್ಯಾಂಡಿನ ಶಾಂತಿ ಸೌಹಾರ್ದತೆಯ ಗೋಡೆ

Share Button

ರಾಬರ್ಟ್ ಫ್ರಾಸ್ಟ್ ಬರೆದಿರುವ ಮೆಂಡಿಗ್ ವಾಲ್. ಕವನದ ಸಾಲುಗಳು ನೆನಪಾದವು ಗುಡ್ ಫೆನ್ಸಸ್ ಮೇಕ್ ಗುಡ್ ಫ್ರೆಂಡ್ಸ್ (Good fences make good friends). ಐರ್‌ಲ್ಯಾಂಡಿನ ರಾಜಧಾನಿ ಬೆಲ್‌ಫಾಸ್ಟ್‌ನಲ್ಲಿ ಕೋಮುಗಲಭೆಯನ್ನು ನಿಯಂತ್ರಿಸಲು ನಗರದ ವಿವಿಧ ಭಾಗಗಳಲ್ಲಿ ಸುಮಾರು ಇಪ್ಪತ್ತು ಕಿ.ಮೀ. ಉದ್ದವಿರುವ ಅರವತ್ತು ಶಾಂತಿ ಗೋಡೆಗಳನ್ನು ಕಟ್ಟಿದ್ದಾರೆ. ಉಕ್ಕಿನ ತಡೆಗೋಡೆಗಳ ಮೇಲೆ ಮುಳ್ಳು ತಂತಿಯ ಬೇಲಿಯನ್ನು ಹಾಕಿ ಪರಸ್ಪರ ಹೊಡೆದಾಟದಲ್ಲಿ ತೊಡಗಿದ್ದ ಜನರ ಮಧ್ಯೆ ಸಂಘರ್ಷವನ್ನು ನಿಲ್ಲಿಸಲು ಸರ್ಕಾರ ಮಾಡಿದ ಪ್ರಯತ್ನದ ಫಲವೇ ಈ ಶಾಂತಿ ಗೋಡೆಗಳು. ದಿ ಟ್ರಬಲ್ಸ್ ಎಂದೇ ಹೆಸರಾದ, 1969 ರಲ್ಲಿ ಜರುಗಿದ ಅಂರ್ತಯುದ್ಧದಲ್ಲಿ ಸುಮಾರು ಮೂರು ಸಾವಿರ ಜನರು ಮೃತಪಟ್ಟು, ಐವತ್ತು ಸಾವಿರ ಜನರು ಗಾಯಗೊಂಡಾಗ, ಈ ಹಿಂಸಾತ್ಮಕ ಗಲಭೆಯನ್ನು ತಡೆಯಲು ಈ ತಡೆಗೋಡೆಗಳನ್ನು ಬ್ರಿಟನ್ ಸರ್ಕಾರದ ಆದೇಶದ ಮೇರೆಗೆ ಕಟ್ಟಲಾಯಿತು. ಫಾಲ್ಸ್ ರಸ್ತೆ ಮತ್ತು ಶಾಂಕಿಲ್ ರಸ್ತೆಯ ಮಧ್ಯೆ ನಿರ್ಮಿಸಲಾಗಿರುವ ತಡೆಗೋಡೆ ಮೂರು ಮೈಲಿ ಉದ್ದವಿದ್ದು ಎಂಟು ಮೀಟರ್ ಎತ್ತರವಾಗಿದೆ. ಈ ಗೋಡೆ ಪ್ರವಾಸಿಗರ ಆಕರ್ಷಣೆಯ ಕೇಂದ್ರಬಿಂದುವಾಗಿದೆ. ಗೋಡೆಯ ಮೇಲೆಲ್ಲಾ ಗ್ರಾಫಿಟಿಯದೇ ಮೇಲುಗೈ, ಇವರ ಸಂಸ್ಕೃತಿಯನ್ನು ಬಿಂಬಿಸುವ ಮ್ಯೂರಲ್ ವರ್ಣಚಿತ್ರಗಳು ಎಲ್ಲೆಡೆ ರಾರಾಜಿಸುತ್ತಿವೆ. ಈ ತಡೆಗೋಡೆಯ ಒಂದು ಭಾಗದಲ್ಲಿ ಶಾಂತಿ ಸೌಹಾರ್ದತೆಯನ್ನು ಕಾಪಾಡಿ ಎಂಬ ಸಂದೇಶವಿದ್ದರೆ ಮತ್ತೊಂದೆಡೆ ಶೋಷಣೆಯ ವಿರುದ್ಧದ ಕೂಗು ಕೇಳಿಬರುವುದು. ಅಲ್ಲಲ್ಲಿ, ಇಂಗ್ಲೆಂಡ್ ನಮ್ಮ ಶತ್ರು ಎಂಬ ಬರಹ ಎದ್ದು ಕಾಣುವುದು. ಮಧ್ಯೆ ಮಧ್ಯೆ ಸ್ವಾತಂತ್ರ್ಯ ಸಂಗ್ರಾಮದ ಹಲವು ಚಿತ್ರಗಳನ್ನೂ ಬಿಡಿಸಲಾಗಿದ್ದು, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹುತಾತ್ಮರಾದ ದೇಶಭಕ್ತರ ಚಿತ್ರಗಳನ್ನೂ ಕಾಣಬಹುದು.

ಸ್ಕಾಟ್‌ಲ್ಯಾಂಡಿನಲ್ಲಿ ವಾಸವಾಗಿದ್ದ ಮಗನ ಮನೆಗೆ ಹೋದಾಗ ಐರ್‌ಲ್ಯಾಂಡ್ ನೋಡುವ ಸದವಕಾಶ ಒದಗಿತ್ತು. ಮಗನ ಮನೆಯಿಂದ ನಾಲ್ಕು ಗಂಟೆ ಪಯಣ ಸಿ ಕೆಯ್ನ್‌ರಿಯನ್ (Cairnryan) ಎಂಬ ಸ್ಥಳದಲ್ಲಿ ಫೆರ್ರಿಯ ಮೇಲೇರಿ ನಮ್ಮ ಪಯಣ ಮುಂದುವರೆಸಿದೆವು. ಆ ಬೃಹತ್ತಾದ ಹತ್ತು ಅಂತಸ್ತಿನ ಫೆರ್ರಿಯಲ್ಲಿ ನೂರಾರು ವಾಹನಗಳನ್ನೂ ಹಾಗೂ ಪ್ರಯಾಣ ಕರನ್ನೂ ಕರೆದೊಯ್ಯುವ ವ್ಯವಸ್ಥೆಯಿತ್ತು. ಸುಮಾರು ಎರಡು ಗಂಟೆಗಳ ಪ್ರಯಾಣದ ಬಳಿಕ ಲೈರ್‍ನ್ (Lairne)) ನಗರವನ್ನು ತಲುಪಿದೆವು. ಅಲ್ಲಿಂದ ನಾವು ಸಾಗಿದ್ದು ಯು.ಕೆ.ಯ ಭಾಗವಾಧ ಉತ್ತರ ಐರ್‌ಲ್ಯಾಂಡಿನ ರಾಜಧಾನಿಯಾದ ಬೆಲ್‌ಫಾಸ್ಟ್ ಕಡೆಗೆ. ಮೊದಲೇ ಕಾದಿರಿಸಿದ್ದ (ಏರ್ ಬಿ ಅಂಡ್ ಬಿ) ಹೋಮ್‌ಸ್ಟೇ ನಲ್ಲಿ ತಂಗಿದೆವು. ಅಡಿಗೆ ಮಾಡಿಕೊಳ್ಳುವ ವ್ಯವಸ್ಥೆ ಇದ್ದುದರಿಂದ ದೂರದ ಊರಿನಲ್ಲಿ ಪುಳಿಯೋಗರೆ, ಮೊಸರನ್ನ ಮಾಡಿಕೊಳ್ಳುವ ಅವಕಾಶ ಇತ್ತು.

ಐರ್‌ಲ್ಯಾಂಡ್ ಕಡಲ ತಿರದಲ್ಲಿರುವ ಪ್ರಾಕೃತಿಕ ಸೌಂದರ್ಯದ ಬೀಡು. ಹಲವು ಬಾರಿ ಪರಕೀಯರ ದಾಳಿಗೆ ತುತ್ತಾದ ನಾಡು ವೈಕಿಂಗ್ಸ್, ಟ್ಯೂಡರ್‍ಸ್, ನಾರ್ಮನ್ಸ್, ಬ್ರಿಟಿಷ್ ಹಾಗೂ ಫ್ರೆಂಚರು ಮೇಲಿಂದ ಮೇಲೆ ದಾಳಿ ಮಾಡಿದರು. ಸುಮಾರು ಎಂಟು ನೂರು ವರ್ಷಗಳ ಕಾಲ ತಮ್ಮ ಸ್ವಾತಂತ್ರ್ಯ ಉಳಿಸಿಕೊಳ್ಳಲು ಹೋರಾಡಿದ ವೀರರು ಇವರು. ಆದರೆ ಬ್ರಿಟಿಷರ ಕುತಂತ್ರಗಳಿಗೆ ಸಿಲುಕಿದ ಐರ್‌ಲ್ಯಾಂಡ್ ತನ್ನ ಏಕತೆಯನ್ನು ಉಳಿಸಿಕೊಳ್ಳಲಾಗಲಿಲ್ಲ. ಒಡೆದು ಆಳುವ (Divide and Rule policy) ನೀತಿಯಲ್ಲಿ ನಿಷ್ಣಾತರಾದ ಬ್ರಿಟಿಷರ ತಂತ್ರಗಾರಿಕೆಯಿಂದ ಐರ್‌ಲ್ಯಾಂಡ್ ಇಬ್ಭಾಗವಾಯಿತು, ಉತ್ತರ ಐರ್‌ಲ್ಯಾಂಡ್ ಬ್ರಿಟಿಷ್ ಸಾಮ್ರಾಜ್ಯದ ಒಂದು ಭಾಗವಾಯಿತು. ದಕ್ಷಿಣ ಐರ್‌ಲ್ಯಾಂಡ್ ರಿಪಬ್ಲಿಕ್ ಆಫ್ ಐರ್‌ಲ್ಯಾಂಡ್ ಎಂಬ ಸ್ವತಂತ್ರ ರಾಷ್ಟ್ರವಾಯಿತು. ಆದರೆ ಬ್ರಿಟಿಷರ ಆಳ್ವಿಕೆಯಲ್ಲಿರುವ ಉತ್ತರ ಐರ್‌ಲ್ಯಾಂಡಿನಲ್ಲಿ ಸ್ವಾತಂತ್ರ್ಯ ಪಡೆಯುವ ಹಂಬಲ ಜ್ವಾಲಾಮುಖಿಯಂತೆ ಕುದಿಯುತ್ತಲೇ ಇದೆ. ೧೯೧೬ ರಲ್ಲಿ ಈಸ್ಟರ್ ದಂಗೆ ಎಂದೇ ಹೆಸರಾದ ಹೋರಾಟದಲ್ಲಿ ಐರಿಷ್ ಪ್ರಜೆಗಳು ಬ್ರಿಟಿಷರ ಎದುರು ಸೋತು ಹೋದರು. ಕ್ರಿಶ್ಚಿಯನ್ ಧರ್ಮದ ಒಳಪಂಗಡಗಳಾದ ಕ್ಯಾಥೊಲಿಕ್ ಹಾಗೂ ಪ್ರೊಟೆಸ್ಟೆಂಟ್ ಪಂಥಗಳ ನಡುವೆ ಬಿರುಕನ್ನು ಉಂಟು ಮಾಡಿ, ೧೯೪೯ ರಲ್ಲಿ ಐರ್‌ಲ್ಯಾಂಡನ್ನು ವಿಭಜನೆ ಮಾಡುವುದರಲ್ಲಿ ಸಫಲರಾದರು. ನಮ್ಮ ಗೈಡ್ ಐರ್‌ಲ್ಯಾಂಡಿನ ಇತಿಹಾಸವನ್ನು ಹೇಳುವಾಗ ನೆನಪಾದದ್ದು ಭಾರತದ ಸ್ವಾತಂತ್ರ್ಯ ಸಂಗ್ರಾಮ ಹಾಗೂ ಬ್ರಿಟಿಷರು ನಮ್ಮ ನಾಡಿನಲ್ಲಿ ಹಿಂದೂ ಮುಸ್ಲಿಮ್ ಎಂಬ ದ್ವೇಷದ ಕಿಡಿಯನ್ನು ಹೊತ್ತಿಸಿ, ನಮ್ಮ ದೇಶವನ್ನು ಭಾರತ ಮತ್ತು ಪಾಕಿಸ್ತಾನವಾಗಿ ವಿಭಜನೆ ಮಾಡಿದ ಸಂಗತಿ.

ಉತ್ತರ ಐರ್‌ಲ್ಯಾಂಡಿನಲ್ಲಿ ಬ್ರಿಟಿಷ್ ಅಧಿಕಾರಿಗಳ ದುರ್ವತನೆಗೆ ಬೇಸತ್ತ ಐರಿಷ್ ನ್ಯಾಷನಲಿಸ್ಟ್ ಒಂದೆಡೆಯಾದರೆ, ಬ್ರಿಟಿಷ್ ಆಧಿಪತ್ಯಕ್ಕೆ ಬೆಂಬಲ ಸೂಚಿಸುವ ಯೂನಿಯನಿಸ್ಟ್ ಮತ್ತೊಂದೆಡೆ. ಇವರೀರ್ವರ ನಡುವೆ ಸುದೀರ್ಘ ಕಾಲ ಹೋರಾಟ ನಡೆಯಿತು. ೧೬೯೦ ರಲ್ಲಿ ನಡೆದ ಬಾಯ್ನ್ ಯುದ್ಧದಲ್ಲಿ ಪರಾಭವಗೊಂಡ ಐರಿಷ್ ನ್ಯಾಷನಲಿಸ್ಟ್ ಮೇಲೆ ಹಲವು ನಿರ್ಭಂಧಗಳನ್ನು ಹೇರಲಾಯಿತು. ಕ್ಯಾಥೊಲಿಕ್ ಧರ್ಮದ ಅನುಯಾಯಿಗಳಾದ ಐರಿಷ್ ಜನರನ್ನು ಸರ್ಕಾರೀ ಕಛೇರಿಗಳಿಂದ ಅಮಾನತು ಮಾಡಲಾಯಿತು, ಶಾಲಾ ಕಾಲೇಜುಗಳಲ್ಲಿ ಸೀಟುಗಳ ಸಂಖ್ಯೆಯನ್ನು ಕಡಿತಗೊಳಿಸಲಾಯಿತು, ಇವರ ಆಸ್ತಿಯನ್ನು ಬ್ರಿಟಿಷ್ ಅನುಯಾಯಿಗಳಾದ ಪ್ರಾಟೆಸ್ಟೆಂಟರಿಗೆ ವರ್ಗಾಯಿಸಲಾಯಿತು, ಜೊತೆಗೆ ಅವರ ಧರ್ಮವನ್ನು ಆಚರಿಸಲು ಅನೇಕ ತಡೆಗಳನ್ನು ಒಡ್ಡಲಾಯಿತು. ಇದರಿಂದ ಕುಪಿತಗೊಂಡ ಐರಿಷ್ ಜನರು ಗೆರಿಲ್ಲಾ ಯುದ್ಧದಲ್ಲಿ ಹಲವು ಬ್ರಿಟಿಷ್ ಅಧಿಕಾರಿಗಳನ್ನು ಹತ್ಯೆ ಮಾಡಿದರು. ೧೯೬೯ ರಲ್ಲಿ ಟ್ರಬಲ್ಸ್ ಎಂದೇ ಖ್ಯಾತಿಯಾಗಿರುವ ಸಿವಿಲ್ ವಾರ್ ನಡೆದ ಬಳಿಕ, ಬ್ರಿಟಿಷರು ನ್ಯಾಷನಲಿಸ್ಟ್ ಯೋಧರು ನೆಲೆಸಿದ್ದ ಸ್ಥಳಗಳನ್ನು ಗುರುತಿಸಿ, ಈ ಸಂಘರ್ಷಗಳನ್ನು ತಡೆಯಲು ಶಾಂತಿ ಗೋಡೆಗಳನ್ನು ನಿರ್ಮಿಸಲಾಯಿತು. ಆದರೆ ಸೌಹಾರ್ದ ನೆಲೆಸಬೇಕಾಗಿದ್ದ ಸ್ಥಳದಲ್ಲಿ ಅಶಾಂತಿ, ಹಿಂಸಾಚಾರ ತಾಂಡವವಾಡತೊಡಗಿದವು. ಇದರಿಂದ ಎರಡೂ ಕಡೆ ಅಪಾರವಾದ ಸಾವು ನೋವು ಉಂಟಾಯಿತು. ೧೯೯೮ ರಲ್ಲಿ ಗುಡ್ ಫ್ರೈಡೆಯಂದು ಶಾಂತಿ ಸಂಧಾನಕ್ಕೆ ಎರಡೂ ಕಡೆಯವರು ಸಹಿ ಹಾಕಿದರು. ಬಂದೂಕಿನಿಂದ ಸಿಡಿಯುವ ಗುಂಡಿನ ಮೊರೆತವೇನೋ ನಿಂತಿತು, ಆದರೆ ಅವರ ಹೃದಯದಲ್ಲಿ ಮನೆಮಾಡಿದ್ದ ದ್ವೇಷ, ಕೋಪ ಕೊನೆಯಾಗಲಿಲ್ಲ. ಜಗತ್ತಿನ ಮೂಲೆ ಮೂಲೆಗಳಲ್ಲಿ ನಡೆಯುತ್ತಿರುವ ಶೋಷಣೆಯನ್ನು ವಿರೋಧಿಸಲು ದಮನಿತರ, ಶೋಷಿತರ ಧ್ವನಿಯಾಗಿ ನಿಲ್ಲುವ ಪ್ರಯತ್ನ ಇವರದು.

ಇತ್ತೀಚಿನ ದಿನಗಳಲ್ಲಿ, ಬೆಲ್‌ಫಾಸ್ಟ್‌ನಲ್ಲಿ ಶಾಂತಿ ನೆಲೆಸಿರುವುದರಿಂದ ೨೦೨೩ ರ ಹೊತ್ತಿಗೆ ಎಲ್ಲಾ ಶಾಂತಿಗೋಡೆಗಳನ್ನು ಕೆಡವಬೇಕೆಂಬ ಕೂಗೂ ಕೇಳಿ ಬರುತ್ತಿದೆ. ಆದರೆ ಆ ಗೋಡೆಗಳ ಸನಿಹದಲ್ಲಿ ವಾಸಿಸುತ್ತಿರುವ ಪ್ರಾಟೆಸ್ಟೆಂಟ್ ಐರಿಷ್ ಜನರಿಗೆ ಆ ಗೋಡೆಗಳು ತಮ್ಮನ್ನು ರಕ್ಷಿಸುತ್ತಿವೆ ಎಂಬ ಭಾವ ಇದೆ. ಜರ್ಮನಿಯನ್ನು ವಿಭಜಿಸಿದ್ದ ಬರ್ಲಿನ್ ಗೋಡೆಗಿಂತಲೂ ಹೆಚ್ಚು ಕಾಲ ನಿಂತಿರುವ ಈ ಗೋಡೆ ಅವರ ಸ್ವಾತಂತ್ರ್ಯ ಸಂಗ್ರಾಮದ ರೂಪಕವಾಗಿ ನಿಂತಿದೆ, ಅವರ ಸಂಸ್ಕೃತಿ, ಇತಿಹಾಸದ ಪುಟಗಳನ್ನು ತೆರೆದಿಟ್ಟಿರುವ ಈ ಗೋಡೆಗಳು ಪ್ರವಾಸಿಗರಿಗೆ ಆಕರ್ಷಣೆಯ ಕೇಂದ್ರಬಿಂದುವಾಗಿದೆ. ಎರಡು ಕೋಮುಗಳ ಮಧ್ಯೆ ನಡೆದಿದ್ದ ಸಂಘರ್ಷಕ್ಕೆ ತಡೆಯೊಡ್ಡಲು ನಿರ್ಮಿಸಿದ ಈ ಶಾಂತಿಗೋಡೆ ಇಂದು ಇವರಿಬ್ಬರ ನಡುವೆ ಶಾಂತಿ ಸೌಹಾರ್ದ ಮೂಡಿಸಲು ನಾಂದಿ ಹಾಡಬೇಕಾಗಿದೆ.

ಮಾನವರ ನಡುವೆ ಕಂದಕ ಮೂಡಿಸುವ ಈ ಗೋಡೆಗಳು ಅವರ ಮಧ್ಯೆ ಸಾಮರಸ್ಯ ಶಾಂತಿ ಮೂಡಿಸಲು ಸಾಧ್ಯವೇ? ರಾಬರ್ಟ್ ಫ್ರಾಸ್ಟ್ ಬರೆದಿರುವ ಮೆಂಡಿಗ್ ವಾಲ್.ಕವನದ ಸಾಲುಗಳಲ್ಲಿನ ವಿಡಂಬನಾತ್ಮಕ ನೋಟ ಕಣ್ಣೆದುರು ಮೂಡಿಬಂತು. ಗುಡ್ ಫೆನ್ಸಸ್ ಮೇಕ್ ಗುಡ್ ಫ್ರೆಂಡ್ಸ್ ಈ ಸಾಲುಗಳು ಎಷ್ಟು ಸರಿ? ಮನುಜರ ನಡುವಿನ ಬಾಂಧವ್ಯ ಬೆಳೆಯಬೇಕಾದರೆ, ಇವರಿಬ್ಬರ ನಡುವಿನ ಒಡನಾಟ, ಸ್ನೇಹ, ವಿಶ್ವಾಸ ಇರಬೇಕಲ್ಲವೇ? ಬದಲಿಗೆ ಇವರಿಬ್ಬರನ್ನೂ ದೂರಮಾಡುವ ಈ ಗೋಡೆಗಳು ಸಮಾಜದಲ್ಲಿ ಜನರ ನಡುವೆ ಮಧುರ ಬಾಂಧವ್ಯವನ್ನು ಮೂಡಿಸಲು ಹೇಗೆ ತಾನೆ ಸಾಧ್ಯ?

-ಡಾ.ಗಾಯತ್ರಿದೇವಿ ಸಜ್ಜನ್

4 Responses

  1. ನಿಮ್ಮ ಮಗ ವಿದೇಶದಲ್ಲಿ ಇರುವುದು..ನೀವು ಅಲ್ಲಿಗೆ ಆಗಾಗ್ಗೆ ಹೋಗಿ ಸುತ್ತ ಮುತ್ತಲಿನ ಜಾಗಗಳನ್ನು ನೋಡಿ ಕೊಂಡುಬಂದ ಅನುಭವ ವನ್ನು ವ್ಯಕ್ತಪಡಿಸುವುದು… ವಾವ್ ನಮ್ಮ ಸೌಭಾಗ್ಯ ವೇ ಸರಿ…ಧನ್ಯವಾದಗಳು ಮೇಡಂ

  2. ನಯನ ಬಜಕೂಡ್ಲು says:

    ಚೆನ್ನಾಗಿದೆ

  3. ವಂದನೆಗಳು

  4. ಶಂಕರಿ ಶರ್ಮ says:

    ಮನುಷ್ಯ ಮನುಷ್ಯರ ನಡುವೆ ಇರುವ ಗೋಡೆಯು ಸ್ನೇಹ ಸೇತುವಾಗಲು ಹೇಗೆ ಸಾಧ್ಯವೆಂದು ತಿಳಿಯುವುದಿಲ್ಲ. ಅನುಭವಾತ್ಮಕ ಮಾಹಿತಿಯುಕ್ತ ಲೇಖನವು ಚೆನ್ನಾಗಿದೆ ಮೇಡಂ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: