ಜ್ವಾಲಾಮುಖಿಯಿಂದ ಅರಳಿದ ಶಿಲೆಗಳು
ಉತ್ತರ ಐರ್‌ಲ್ಯಾಂಡಿನ ಕಡಲ ಕಿನಾರೆಯಲ್ಲಿ ಕಂಡು ಬರುವ ಚಪ್ಪಟೆಯಾದ ಆರುಭುಜದ ಶಿಲೆಗಳು ಒಂದು ಪ್ರಾಕೃತಿಕ ವಿಸ್ಮಯವೇ ಸರಿ. ಕರ್ನಾಟಕದ ಉಡುಪಿಯಲ್ಲಿರುವ ಮಲ್ಪೆ ಬೀಚಿನ ಬಳಿ ಇರುವ ಸೇಂಟ್ ಮೇರೀಸ್ ದ್ವೀಪದಲ್ಲಿಯೂ ಇಂತಹದೇ ಆರುಮೂಲೆಯುಳ್ಳ ಎರಡು ಅಡಿ ವಿನ್ಯಾಸವುಳ್ಳ ಶಿಲೆಗಳು ಸಮುದ್ರ ತೀರದಲ್ಲಿ ರಾಶಿ ರಾಶಿ ಬಿದ್ದಿವೆ. ರೇಖಾಗಣಿತದ ಪ್ರದರ್ಶನದಂತಿರುವ ಈ ಶಿಲೆಗಳು ಸಮುದ್ರ ತೀರಕ್ಕೆ ಬಂದಿದ್ದಾದರೂ ಹೇಗೆ? ಉತ್ತರ ಐರ್‌ಲ್ಯಾಂಡಿನಲ್ಲಿರುವ ಜಯಂಟ್ಸ್ ಕಾಸಾವೇಗೂ ಉಡುಪಿಯಲ್ಲಿರುವ ಸೇಂಟ್ ಮೇರೀಸ್ ದ್ವೀಪಕ್ಕೂ ಎಲ್ಲಿಂದೆಲ್ಲಿಯ ಸಂಬಂಧ? ಹಾಗಿದ್ದಲ್ಲಿ ಬನ್ನಿ ಈ ಎರಡೂ ತಾಣಗಳ ಕತೃವನ್ನು ಹುಡುಕೋಣ.
ದೈತ್ಯನ ಹೆಸರಿನಿಂದಲೇ ಕರೆಯಲ್ಪಡುವ ಜಯಂಟ್ಸ್ ಕಾಸಾವೇಯ ವೈಶಿಷ್ಠೈವಾದರೂ ಏನು? ಸ್ಕಾಟ್ಲ್ಯಾಂಡಿನಲ್ಲಿ ನೆಲೆ ಕಂಡುಕೊಂಡಿರುವ ಮಗ ಸೊಸೆಯೊಟ್ಟಿಗೆ ಈ ಪ್ರವಾಸಿತಾಣವನ್ನು ನೋಡಲು ಹೊರಟಿದ್ದೆ. ಉತ್ತರ ಐರ್‌ಲ್ಯಾಂಡಿನಲ್ಲಿರುವ ಸಮುದ್ರ ತೀರದಲ್ಲಿ ಆಂಟ್ರಿಮ್ ಎಂಬ ಊರಿನಲ್ಲಿ ಭೂವಿಜ್ಞಾನಿಗಳಿಗೆ ಸವಾಲು ಒಡ್ಡುವಂತಹ ಬಂಡೆಕಲ್ಲುಗಳಿವೆ.. ದಾರಿಯುದ್ದಕ್ಕೂ ಒಂದೆಡೆ ಬೆಟ್ಟಗುಡ್ಡಗಳು, ಇನ್ನೊಂದೆಡೆ ಆಗಸದ ನೀಲವರ್ಣವನ್ನು ಪ್ರತಿಫಲಿಸುತ್ತಿದ್ದ ಸಮುದ್ರ. ಸಮುದ್ರದ ಬಳಿ ಸಾಗುತ್ತಿದ್ದಂತೆಯೇ ಅಲ್ಲಿ ಕಂಡ ದೃಶ್ಯ ನೋಡಿ ಬೆರಗಾಗಿ ನಿಂತೆ. ಬಹುಭುಜಾಕೃತಿಯ ಶಿಲೆಗಳನ್ನು ಒಂದಕ್ಕೊಂದು ಹೆಣೆದುಕೊಂಡಂತೆ ಜೋಡಿಸಲಾಗಿತ್ತು – ಹೆಚ್ಚಿನವು ಆರುಕೋನಗಳನ್ನು ಹೊಂದಿದ್ದರೆ, ಮತ್ತೆ ಕೆಲವು ತ್ರಿಭುಜ, ಚರ್ತುಭುಜ, ಪಂಚಭುಜ, ಅಷ್ಟಭುಜ ಆಕೃತಿಗಳನ್ನೂ ಹೊಂದಿದ್ದವು. ಈ ಶಿಲೆಗಳಿಂದ ಕಡಲತೀರದಲ್ಲಿ ಒಂದು ಸಮತಟ್ಟಾದ ವೇದಿಕೆ ಉಂಟಾಗಿತ್ತು. ಆ ಶಿಲೆಗಳ ಮಧ್ಯೆ ಪುಟ್ಟ ಪುಟ್ಟ ಶಂಖದ ಹುಳಗಳು ಗೂಡನ್ನು ಕಟ್ಟಿಕೊಳ್ಳುತ್ತಿದ್ದವು. ಪಕ್ಕದಲ್ಲಿದ್ದ ಶಿಲೆಗಳು ಮೆಟ್ಟಿಲು ಮೆಟ್ಟಿಲಾಗಿ ಜೋಡಿಸಲ್ಪಟ್ಟಿದ್ದವು. ಬೆಟ್ಟದ ಬದಿಯಲ್ಲಿದ್ದ ಶಿಲೆಗಳು ಸಾಲು ಸಾಲು ಕಂಬಗಳಂತೆ ಮಾರ್ಪಾಡಾಗಿದ್ದವು. ಸುಮಾರು ನಲವತ್ತು ಸಾವಿರ ಬೆಸಾಲ್ಟ್ ಶಿಲೆಯ ಕಂಬಗಳು ಸಮುದ್ರರಾಜನ ಅಬ್ಬರವನ್ನು ನೋಡುತ್ತಾ ನಿಂತಿವೆ. ಈ ತಾಣವು ಐರ್‌ಲ್ಯಾಂಡಿನ ಹೆಮ್ಮೆಯ ರಾಷ್ಟ್ರೀಯ ಚಿಹ್ನೆಯಾಗಿದೆ. ಕಡಲ ತೀರದಲ್ಲಿ ಈ ಕಲ್ಲುಗಳನ್ನು ಹೀಗೆ ಹೊಂದಿಸಿ ಜೋಡಿಸಿದವರಾರಿಬಹುದು, ಎಂಬ ಪ್ರಶ್ನೆಗೆ ಸ್ವಾರಸ್ಯಕರವಾದ ದಂತಕಥೆಯ ಉತ್ತರ ಹೀಗಿದೆ.
ಹಿಂದೆ ದೈತ್ಯಾಕಾರದ ಮನುಷ್ಯರು ಇಲ್ಲಿ ವಾಸಿಸುತ್ತಿದ್ದರಂತೆ. ನಾವು ಕುಳಿತಿದ್ದ ಮರದ ಬೆಂಚಿನ ಮೇಲಿನ ಒಕ್ಕಣೆ ಹೀಗಿತ್ತು ಐರ್‌ಲ್ಯಾಂಡನ್ನು ಆಳುತ್ತಿದ್ದ ದೈತ್ಯ ಫಿನ್ ಮೆಕಾಲೋವಿನ ಎತ್ತರ ಓಕ್ ಮರದ ನಾಲ್ಕು ಪಟ್ಟು ಎತ್ತರವಿತ್ತು. ಸ್ಕಾಟ್‌ಲ್ಯಾಂಡನ್ನು ಆಳುತ್ತಿದ್ದ ದೈತ್ಯ ಬೆನಾನ್‌ಡೋನರ್, ಫಿನ್ ಮೆಕಾಲೋವನ್ನು ಪದೇ ಪದೇ ಕೆಣಕುತ್ತಿದ್ದ. ಇದರಿಂದ ಕುಪಿತಗೊಂಡ ಫಿನ್, ಸಮುದ್ರ ತೀರದಲ್ಲಿದ್ದ ಬೆಟ್ಟಗಳಿಂದ ಕಲ್ಲುಗಳನ್ನು ಕಿತ್ತು ಸಮುದ್ರದೆಡೆ ಎಸೆದು ಒಂದು ಸೇತುವೆಯನ್ನು ನಿರ್ಮಿಸಿ, ತನ್ನ ಶತ್ರುವನ್ನು ಸದೆಬಡಿಯಲು ಹೊರಟ. ಆದರೆ ಸ್ಕಾಟ್‌ಲ್ಯಾಂಡನ್ನು ಆಳುತ್ತಿದ್ದ ಬೆನ್, ಫಿನ್‌ಗಿಂತ ಬಲಿಷ್ಟನಾಗಿದ್ದ. ಬೃಹದಾಕಾರದ ದೈತ್ಯನನ್ನು ನೋಡಿ ಬೆದರಿದ ಫಿನ್, ಓಡಿ ಬಂದು ತನ್ನ ಗುಹೆಯಲ್ಲಿ ಅಡಗಿಕೊಂಡ. ಫಿನ್ ಪತ್ನಿ ತನ್ನ ಗಂಡನನ್ನು ಸ್ಕಾಟಿಷ್ ದೈತ್ಯನಿಂದ ರಕ್ಷಿಸಲು, ಒಂದು ಮಗುವನ್ನಾಗಿ ಮಾರ್ಪಡಿಸುವಳು. ಅಲ್ಲಿಗೆ ಬಂದ ಬೆನ್ ಮಗುವನ್ನು ನೋಡಿ ಗಾಬರಿಯಾಗುವನು ಮಗುವಿನ ಗಾತ್ರವೇ ಇಷ್ಟು ದೊಡ್ಡದಾಗಿದ್ದರೆ, ತಂದೆಯ ಗಾತ್ರ ಎಷ್ಟಿರಬಹುದು ಎಂದು ಭಾವಿಸಿ, ಅಲ್ಲಿಂದ ಪಲಾಯನ ಮಾಡುವನು. ಹಿಂತಿರುಗುವಾಗ, ಸೇತುವೆಯ ಕಲ್ಲುಗಳನ್ನು ಕಿತ್ತೆಸೆಯುತ್ತಾ ತನ್ನ ರಾಜ್ಯಕ್ಕೆ ಹಿಂತಿರುಗುವನು. ಈ ದೈತ್ಯರಿಬ್ಬರ ಕಲಹವೇ ಜಯಂಟ್ ಕಾಸಾವೇಯ ಸೃಷ್ಟಿಗೆ ಕಾರಣವಾಯಿತಂತೆ.
ಈ ಪ್ರಕೃತಿಯ ವಿಸ್ಮಯಕ್ಕೆ ಕಾರಣವಾದ ವೈಜ್ಞಾನಿಕ ವಿವರಗಳನ್ನು ಹುಡುಕೋಣ ಬನ್ನಿ. ಸುಮಾರು ಅರವತ್ತು ಮಿಲಿಯ ವರ್ಷಗಳ ಹಿಂದೆ ಕಡಲಾಳದಿಂದ ಸ್ಫೋಟಿಸಿದ ಜ್ವಾಲಾಮುಖಿಯಿಂದ ಚಿಮ್ಮಿದ ಲಾವಾರಸ ದಿಢೀರನೆ ಘನೀಕೃತವಾದಾಗ ಈ ಬೆಸಾಲ್ಟ್ ಶಿಲೆಗಳು ರಚನೆಯಾದವು. ಜಿಗ್‌ಸಾ ಪಜಲ್‌ನಂತೆ ಈ ಶಿಲೆಗಳು ಭೂ ವಿಜ್ಞಾನಿಗಳಲ್ಲಿ ಕುತೂಹಲ ಮೂಡಿಸಿವೆ. ಒಂದು ಕಲ್ಲುಬಂಡೆ ದೈತ್ಯಾಕಾರದ ಶೂ ಆಕಾರದಲ್ಲಿದ್ದರೆ, ಮತ್ತೊಂದು ಶಿಲೆ ಕೆಂಪು ವರ್ಣದ ಕಣ ನಾಕಾರದಲ್ಲಿದೆ. ಇನ್ನೊಂದು ಶಿಲೆ ವೀಣೆಯ ಆಕಾರದಲ್ಲಿದ್ದು, ಜನರು ಈ ಶಿಲೆಗಳನ್ನು ದಂತಕಥೆಯ ನಾಯಕ ಫಿನ್‌ಗೆ ಸೇರಿದ್ದು ಎಂದು ನಂಬುತ್ತಾರೆ. ಈ ಶಿಲೆಗಳಲ್ಲಿ ಒಂದು ಜೇನುಗೂಡಿನ ಆಕಾರದಲ್ಲಿದ್ದರೆ, ಇನ್ನೊಂದು ಒಂಟೆಯ ಡುಬ್ಬದಂತಿದೆ, ಮತ್ತೊಂದು ಹೊಗೆಯುಗುಳುವ ಚಿಮಣಿಯಾಕಾರದಲ್ಲಿದೆ. ಈ ತಾಣವನ್ನು, ವಿಶ್ವದ ಪಾರಂಪರಿಕ ತಾಣವೆಂದು ಗುರುತಿಸಲಾಗಿದ್ದು ಇದರ ಉಸ್ತುವಾರಿಯನ್ನು ಯುನೈಟೆಡ್ ಕಿಂಗ್‌ಡಮ್‌ನ ನ್ಯಾಷನಲ್ ಟ್ರಸ್ಟ್‌ನವರು ವಹಿಸಿಕೊಂಡಿರುತ್ತಾರೆ.
ಈ ಪ್ರಾಕೃತಿಕ ವಿಸ್ಮಯವನ್ನು ಮೆಲುಕು ಹಾಕುತ್ತಾ ಮನೆಗೆ ಹಿಂದಿರುಗುವಾಗ, ತಟ್ಟನೇ ನೆನಪಾದದ್ದು ಉಡುಪಿಯ ಬಳಿಯಿರುವ ಸೆಂಟ್ ಮೇರೀಸ್ ದ್ವೀಪ, ಆರು ತಿಂಗಳ ಹಿಂದೆಯಷ್ಟೇ ನೋಡಿದ್ದ ಚಿತ್ತಾರದಂತೆ ಕಂಡ ಕಲ್ಲುಬಂಡೆಗಳ ದೃಶ್ಯ. ಅರೇಬಿಯನ್ ಸಮುದ್ರ ತೀರದಲ್ಲಿ ಆರುಭುಜಗಳ ಆಕೃತಿ ಹೊಂದಿರುವ ಚಪ್ಪಟೆಯಾದ ಕಲ್ಲುಗಳು, ಕಂಬಗಳಂತೆ ನಿಂತಿರುವ ಬಹುಭುಜಾಕೃತಿಯ ಶಿಲೆಗಳು. 1498 ರಲ್ಲಿ ಇಲ್ಲಿಗೆ ಆಗಮಿಸಿದ ವಾಸ್ಕೋ-ಡ-ಗಾಮಾ, ಈ ದ್ವೀಪದ ಸೌಂದರ್ಯಕ್ಕೆ ಮಾರುಹೋಗಿ ಸಮುದ್ರ ತೀರದಲ್ಲಿ ಒಂದು ಶಿಲುಬೆಯನ್ನು ನೆಟ್ಟು ‘Padrao de Sante Maria’ಎಂದು ಉದ್ಗಾರ ಮಾಡಿದನಂತೆ. ಅಂದಿನಿಂದ ಈ ದ್ವೀಪಕ್ಕೆ ಸೆಂಟ್ ಮೇರೀಸ್ ದ್ವೀಪ ಎಂಬ ಹೆಸರು ಬಂತು. ಸ್ಥಳೀಯರು ಈ ದ್ವೀಪಕ್ಕೆ ಥಾನ್ಸೆಪಾರ್ ಎನ್ನುವರು, ಇಲ್ಲಿ ತೆಂಗಿನ ಮರಗಳು ಹೆಚ್ಚಾಗಿರುವುದರಿಂದ ಪ್ರವಾಸಿಗರು ಕೋಕೋನಟ್ ಐಲ್ಯಾಂಡ್ ಎನ್ನುವರು.
ಸೆಂಟ್ ಮೇರೀಸ್ ದ್ವೀಪದಲ್ಲಿರುವ ಈ ಶಿಲೆಗಳ ರಚನೆಯಾಗಿದ್ದು ಕಡಲಾಳದಿಂದ ಸ್ಫೋಟವಾದ ಜ್ವಾಲಾಮುಖಿಯಿಂದಲೇ. ಲಾವಾರಸವು ಘನೀಕೃತವಾದಾಗ ಈ ಶಿಲೆಗಳು ಉದ್ಭವಿಸಿದವು. ಈ ಬೆಸಾಲ್ಟ್ ಶಿಲೆಗಳಿಗೆ, Colomnar Joints ಅಥವಾ Laminar Lava ಎನ್ನುವರು. ಸುಮಾರು 88 ಮಿಲಿಯನ್ ವರ್ಷಗಳ ಹಿಂದೆ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದ ಭಾರತದ ಭೂಪ್ರದೇಶಕ್ಕೆ ಹೊಂದಿಕೊಂಡ್ಡಿದ್ದ ಮಡಗಾಸ್ಕರ್, ಭಾರತದಿಂದ ಬೇರ್ಪಟ್ಟಿತ್ತು. ಮಡಗಾಸ್ಕರ್‌ನಲ್ಲಿಯೂ ಜ್ವಾಲಾಮುಖಿಯಿಂದ ರಚನೆಯಾದ ಇಂತಹದೇ ಬೆಸಾಲ್ಟ್ ಶಿಲೆಗಳನ್ನು ಕಾಣಬಹುದು.
ಭೂದೇವಿಯನ್ನು ಸಿಂಗರಿಸಿರುವ ಈ ಶಿಲೆಗಳು ಸಮುದ್ರ ರಾಜನ ಅಬ್ಬರವನ್ನು ವೀಕ್ಷಿಸುತ್ತಾ ಸಾವಿರಾರು ವರ್ಷಗಳಿಂದ ನಿಂತಿವೆ. ಐರ್‌ಲ್ಯಾಂಡ್‌ನ ಉತ್ತರದ ಸಮುದ್ರದಲ್ಲಿರುವ ಬೆಸಾಲ್ಟ್ ಶಿಲೆಗಳು, ಉಡುಪಿಯಲ್ಲಿರುವ ಅರಬ್ಬೀ ಸಮುದ್ರ ತೀರದಲ್ಲಿಯೂ ಕಂಡುಬರುವುದು ಅಚ್ಚರಿಯಲ್ಲವೇ? ನಿಸರ್ಗದಲ್ಲಿ ಕಂಡು ಬರುವ ಅದ್ಭ್ಭುತಗಳನ್ನು ಕಣ್ಣಿಂದ ಕಂಡಾಗಲೇ, ಇಲ್ಲಿನ ದಂತಕಥೆಗಳ ಸೊಬಗು ಇಮ್ಮಡಿಸುವುದು. ಬನ್ನಿ ಮೊದಲು ನಮ್ಮ ಸೆಂಟ್ ಮೇರೀಸ್ ದ್ವೀಪದಲ್ಲಿರುವ ಈ ಶಿಲೆಗಳ ರಹಸ್ಯವನ್ನು ತಿಳಿಯೋಣ, ನಂತರ ಅವಕಾಶ ದೊರೆತಾಗ ಐರ್‌ಲ್ಯಾಂಡಿನತ್ತ ತೆರಳೋಣ.
-ಡಾ. ಗಾಯತ್ರಿದೇವಿ ಸಜ್ಜನ್, ಶಿವಮೊಗ್ಗ.
ಸೊಗಸಾದ ಮಾಹಿತಿಪೂರ್ಣ ಲೇಖನ.
Thank you Nayana
ಆಕರ್ಷಕ ರಚನೆ ಹೊಂದಿದ ಕಲ್ಲುಗಳನ್ನು ಸೈಂಟ್ ಮೇರೀಸ್ ಐಲ್ಯಾಂಡ್ ನಲ್ಲಿ ನೋಡಿದ್ದಾಗ ಆಶ್ಚರ್ಯವಾಗಿತ್ತು. ಅದರ ರಚನೆಯ ಹಿಂದಿರುವ ರಹಸ್ಯವನ್ನು ಬಯಲಿಗೆಳೆದ ಗಾಯತ್ರಿ ಮೇಡಂ ಅವರಿಗೆ…ಧನ್ಯವಾದಗಳು.
ಮಹತ್ವಪೂರ್ಣ ವಾದ ಲೇಖನ… ಧನ್ಯವಾದಗಳು ಮೇಡಂ
ಪ್ರಾಕೃತಿಕವಾಗಿಯೇ ಶಿಲ್ಪಕಲೆ ನಿರ್ಮಾಣವಾದ ವೈಖರಿಯನ್ನು ಮಾಹಿತಿಪೂರ್ಣವಾಗಿ ತಿಳಿಯಪಡಿಸುವ ಸುಂದರ ಲೇಖನ.