ನೇತಾಜಿಯವರ ಕರ್ಮಭೂಮಿಯಾದ ನಾಗಾಲ್ಯಾಂಡಿನ ಕೊಹಿಮಾ

Share Button


ಅಂಗೈ ಅಗಲ ಭೂಮಿಗಾಗಿ ಹಿಡಿ ಚಿನ್ನಕ್ಕಾಗಿ ಯುದ್ಧಗಳು ನಡೆಯುತ್ತಲೇ ಇವೆ. ಯುದ್ಧಗಳಲ್ಲಿ ಅತ್ಯಂತ ಭೀಕರವಾದ, ಮಾನವ ಸಮಾಜಕ್ಕೆ ಅಪಾರವಾದ ಸಾವು ನೋವು ತಂದ ಯುದ್ಧಗಳು – ಮೊದಲನೇ ಪ್ರಪಂಚದ ಮಹಾಯುದ್ಧ ಹಾಗೂ ಎರಡನೇ ಮಹಾಯುದ್ಧ. ಈ ಸಮಯದಲ್ಲಿ ಇಡೀ ವಿಶ್ವವೇ ಇಬ್ಭಾಗವಾಗಿತ್ತು, ಒಂದೆಡೆ ಆಲ್ಲೀಸ್ ಗುಂಪಿಗೆ ಸೇರಿದ ಅಮೆರಿಕ, ಇಂಗ್ಲೆಂಡ್, ಫ್ರಾನ್ಸ್, ರಷ್ಯ ಮುಂತಾದ ರಾಷ್ಟ್ರಗಳು ಮತ್ತೊಂದೆಡೆ ಆಕ್ಸಿಸ್ ರಾಷ್ಟ್ರಗಳಾದ ಜರ್ಮನಿ, ಜಪಾನ್ ಮತ್ತು ಇಟಲಿ. ಜೊತೆಗೆ ವಸಾಹತು ರಾಷ್ಟ್ರಗಳು ಇವರ ಜೊತೆಗೂಡಿ ಹೋರಾಡಲೇ ಬೇಕಿತ್ತು. ಮೊದಲನೇ ಮಹಾಯುದ್ಧವಾದ ಮೇಲೆ ಇಂಗ್ಲಿಷ್ ಕವಿ ವಿಲ್‌ಫ್ರೆಡ್ ಒವೆನ್ ರಚಿಸಿದ ಕವಿತೆ ಸ್ಟ್ರೇಂಜ್ ಮೀಟಿಂಗ್ ಬಹಳ ಅರ್ಥಪೂರ್ಣವಾಗಿದೆ. ಯುದ್ಧದಲ್ಲಿ ಮಡಿದ ಎರಡು ಪಕ್ಷದ ಸೈನಿಕರು ಹೇಳುವ ಮಾತುಗಳು ಹೃದಯಸ್ಪರ್ಶಿಯಾಗಿವೆ – I am the enemy you killed my friend

ಅಂದು ನಡೆದ ಭೀಕರ ಯುದ್ಧದಲ್ಲಿ ಅಜನ್ಮ ವೈರಿಗಳಂತೆ ಹೋರಾಡಿ ಮಡಿದ ಸೈನಿಕರಿಬ್ಬರು ಹೇಳುವ ಮಾತುಗಳಿವು. ಇವರಿಬ್ಬರು ಶತ್ರುಗಳೋ ಮಿತ್ರರೋ ಹೇಳಿ. ಅಂದು ಎಲ್ಲಾ ರಾಷ್ಟ್ರಗಳ ನಾಯಕರ ಗುರಿ ಒಂದೇ ಆಗಿತ್ತು – ತಮ್ಮ ಎಲ್ಲಾ ಸಂಪನ್ಮೂಲಗಳನ್ನೂ ಬಳಸಿ ರಾಜ್ಯವನ್ನು ವಿಸ್ತರಿಸುವುದು, ಇದಕ್ಕಾಗಿ ಎಷ್ಟು ಜನರ ಬಲಿಯಾದರೂ ಸರಿಯೇ, ಸಮುದ್ರದಲ್ಲಿ ಹಡಗುಗಳನ್ನು ಕಟ್ಟಿಕೊಂಡು ಬಂದು ಪ್ರಪಂಚದ ಮೂಲೆಮೂಲೆಗೂ ತೆರಳಿ, ಅಲ್ಲಿನ ದೊರೆಗಳನ್ನು ತಮ್ಮ ಆಧುನಿಕ ಶಸ್ತ್ರಾಸ್ತ್ರಗಳಿಂದ ಪರಾಭವಗೊಳಿಸಿ, ಆ ದೇಶಗಳನ್ನು ತಮ್ಮ ವಸಾಹತುಗಳನ್ನಾಗಿ ಮಾರ್ಪಡಿಸಿದರು. ಇಂತಹ ಕ್ರೌರ್ಯಕ್ಕೆ ಸಾಕ್ಷಿಯಾಗಿ ನಿಂತಿರುವ ನಾಗಾಲ್ಯಾಂಡಿನ ರಾಜಧಾನಿಯಾಗಿರುವ ಕೊಹಿಮಾ ಯುದ್ಧ ಸಮಾಧಿಗಳಿಗೆ ಭೇಟಿ ನೀಡೋಣ ಬನ್ನಿ.

ಎರಡನೇ ಮಹಾಯುದ್ಧದ ಸಮಯದಲ್ಲಿ ಜಪಾನೀಯರು ಬಿರುಗಾಳಿಯಂತೆ ಮುನ್ನುಗ್ಗುತ್ತಾ ಒಂದೊಂದೇ ದೇಶಗಳನ್ನು ಆಕ್ರಮಿಸತೊಡಗಿದರು – ಮಲಯ, ಸಿಂಗಪೂರ್, ಮಂಚೂರಿಯ, ಇಂಡೋಚೈನಾ ಹಾಗೂ ಬರ್ಮಾ. ಜಪಾನೀಯರೊಡನೆ ಸ್ನೇಹ ಬೆಳೆಸಿದ ವೀರ ಸೇನಾನಿ ನೇತಾಜಿಯವರು ತಮ್ಮ ತಾಯ್ನಾಡಾದ ಭಾರತವನ್ನು ಬ್ರಿಟಿಷರ ಕಪಿಮುಷ್ಠಿಯಿಂದ ಪಾರು ಮಾಡಲು ಯುದ್ಧಭೂಮಿಗೆ ಧುಮಿಕಿದರು. ‘ಆಜಾದ್ ಹಿಂದ್’ ಎಂಬ ಸೈನ್ಯವನ್ನು ಕಟ್ಟಿದ್ದ ಸುಭಾಷ್‌ಚಂದ್ರ ಬೋಸ್‌ರವರು ಜಪಾನೀಯರ ನೆರವಿನೊಂದಿಗೆ ಅಭೇದ್ಯವಾದ ನಾಗಾಲ್ಯಾಂಡಿನ ಗುಡ್ಡಗಾಡುಗಳ ಮೂಲಕ ದೆಹಲಿಯನ್ನು ತಲುಪಿ, ಭಾರತವನ್ನು ಸ್ವತಂತ್ರಗೊಳಿಸುವ ಕನಸನ್ನು ಕಂಡಿದ್ದರು. ಏಪ್ರಿಲ್ 4,1944 ರಲ್ಲಿ ಜಪಾನೀಯರ ಸೈನ್ಯದ ಜೊತೆಗೇ ಆಜಾದ್ ಹಿಂದ್ ಪಡೆ ಈ ನಿರ್ಣಾಯಕ ಕಾಳಗಕ್ಕೆ ಸಿದ್ಧವಾಗಿತ್ತು. ನೇತಾಜಿಯವರ ಗಂಭೀರ ವ್ಯಕ್ತಿತ್ವ ಹಾಗೂ ಅವರ ದೇಶಭಕ್ತಿಗೆ ಮಾರು ಹೋದ ನಾಗಾ ಬುಡಕಟ್ಟು ಜನರು ಇವರ ಜೊತೆಗೂಡಿದರು. ಸೈನಿಕರಿಗೆ ಅವಶ್ಯಕವಾದ ಆಹಾರ ಪದಾರ್ಥಗಳು, ನೀರು, ಉರುವಲು ಹಾಗೂ ವಸತಿ ಸೌಕರ್ಯಗಳನ್ನು ಒದಗಿಸಿದರು. ಇವರ ಸೈನ್ಯ ಸಾಗುವ ಹಾದಿಯಲ್ಲಿ ಯಾವುದೇ ರಸ್ತೆಗಳಿರಲಿಲ್ಲ, ಕಡಿದಾದ ಬೆಟ್ಟಗುಡ್ಡಗಳ ನಡುವೆ ಸಾಗಬೇಕಿತ್ತು. ನೇತಾಜಿಯವರು 85,000 ಸೈನಿಕರ ಪಡೆಯೊಂದಿಗೆ ನಾಗಾಲ್ಯಾಂಡಿನ ರಾಜಧಾನಿಯಾದ ಕೊಹಿಮಾ ಮತ್ತು ಮಣಿಪುರದ ರಾಜಧಾನಿಯಾದ ಇಂಪಾಲದ ಮೇಲೆ ಒಟ್ಟಿಗೇ ಆಕ್ರಮಣ ಮಾಡಿದರು. ಯುದ್ಧದಲ್ಲಿ ಪರಿಣಿತಿ ಹೊಂದಿದ್ದ ಜಪಾನೀಯರು ಸೈನ್ಯವನ್ನು ಮೂರು ವ್ಯೂಹಗಳನ್ನಾಗಿ ರಚಿಸಿದ್ದರು. ಹೊರಗಿನ ಸುತ್ತಿನಲ್ಲಿ ಜಪಾನೀ ಸೈನಿಕರು, ಒಳಗಿನ ಸುತ್ತಿನಲ್ಲಿ ಐ.ಎನ್.ಎ. ತಂಡ ಮತ್ತು ನಾಗಾಗಳು ಹಾಗೂ ಮಧ್ಯೆ ಆಯ್ದ ಸೈನಿಕರ ಪಡೆಯೊಂದಿಗೆ ನೇತಾಜಿಯವರು ಇದ್ದರು. ಜಪಾನೀಯರು ನೇತಾಜಿಯವರ ಸುರಕ್ಷತೆಗೆ ಆದ್ಯತೆ ನೀಡಿದ್ದರು. ಕೊಹಿಮಾದ ಗ್ಯಾರಿಸನ್ ಬೆಟ್ಟದ ಶಿಖರದ ಮೇಲೆ ತಮ್ಮ ಸೈನ್ಯವನ್ನು ನಿಲ್ಲಿಸಿ ಯುದ್ಧ ಆರಂಭಿಸಿದರು. ಆರಂಭದಲ್ಲಿ ಇವರದೇ ಮೇಲುಗೈಯಾಗಿತ್ತು, ಬ್ರಿಟಿಷ್ ಸೈನ್ಯವನ್ನು ಸುಲಭವಾಗಿ ಹಿಮ್ಮೆಟ್ಟಿಸಿದರು. ಇಂತಹ ಭಾರೀ ಆಕ್ರಮಣವನ್ನು ನಿರೀಕ್ಷಿಸದಿದ್ದ ಬ್ರಿಟಿಷ್ ಪಡೆಗಳು ಸೋತು ಹೆಮ್ಮೆಟ್ಟಿದವು. ಆಗ ಎಚ್ಚೆತ್ತ ಬ್ರಿಟಿಷರು, ಹೆಚ್ಚಿನ ಸೈನಿಕರ ತಂಡಗಳನ್ನೂ ಹಾಗು ಶಸ್ತ್ರಾಸ್ತ್ರಗಳನ್ನು ತಮ್ಮ ಸೈನ್ಯಕ್ಕೆ ಪೂರೈಸಿದರು. ಈ ಕಾಳಗವನ್ನು ‘ಅತ್ಯಂತ ಭೀಕರವಾದ ಬ್ರಿಟಿಷ್ ಯುದ್ಧ’ ಎಂದೇ ಬಿಂಬಿಸಲಾಗಿದೆ. ಬ್ರಿಟಿಷ್ ಡಿ.ಸಿ. ಆಫೀಸಿನ ಮುಂದಿದ್ದ ಟೆನ್ನಿಸ್ ಕೋರ್ಟ್ ಬಳಿ ನಡೆದ ಬೀಕರವಾದ ಕಾಳಗದಲ್ಲಿ ಎರಡೂ ಕಡೆ ಅಪಾರವಾದ ಸಾವು ನೋವು ಸಂಭವಿಸಿತು, ದುರದರಷ್ಟವಶಾತ್ 22 ಜೂನ್, 1944 ರಲ್ಲಿ ಜಪಾನೀಯರು ಸೋತು ಹಿಮ್ಮೆಟ್ಟಬೇಕಾಯಿತು. ಸುಭಾಷ್ ಚಂದ್ರಬೋಸ್‌ರವರ ಸ್ವತಂತ್ರ ಭಾರತದ ಕನಸು ಭಗ್ನವಾಯಿತು.

ಕೊಹಿಮಾ ಯುದ್ಧ ಸ್ಮಾರಕವು ಎತ್ತರವಾದ ಪ್ರದೇಶದಲ್ಲಿದ್ದು, ಸುತ್ತಲೂ ರಮಣೀಯವಾದ ಹಸಿರುಹೊದ್ದ ಬೆಟ್ಟ ಗುಡ್ಡಗಳು ಕಂಗೊಳಿಸುತ್ತಿವೆ. ಇಲ್ಲಿರುವ ಚೆರ್ರಿ ವೃಕ್ಷವು ಎರಡನೇ ಮಹಾಯುದ್ಧದ ಸಮಯದಲ್ಲಿ ನಡೆದ ಭೀಕರ ಕಾಳಗಕ್ಕೆ ಸಾಕ್ಷಿಯಾಗಿ ನಿಂತಿದೆ. ಅಂದು ಅಲ್ಲಿದ್ದ ಚೆರ್ರಿ ವೃಕ್ಷದ ಕಾಂಡವು ಜಪಾನೀಯರ ಟಾರ್ಗೆಟ್ಟಾಗಿ ಮಾರ್ಪಟ್ಟಿತ್ತು, ಇಂದು ಅದೇ ಚೆರ್ರಿ ವೃಕ್ಷದ ಕೊಂಬೆಯಿಂದ ಮರವನ್ನು ಬೆಳೆಸಿ ಈ ಕದನಕ್ಕೆ, ‘ಚೆರ್ರಿವೃಕ್ಷದ ಅಡಿಯಲ್ಲಿ ನಡೆದ ಕಾಳಗ’ ಎಂದೂ ಹೆಸರಿಸಿದ್ದಾರೆ. ಈ ಕದನವು ಭಾರತೀಯ ಇತಿಹಾಸದಲ್ಲಿ ಒಂದು ಮಹತ್ತರವಾದ ಘಟ್ಟ ಎಂದೇ ಹೇಳಲಾಗಿದೆ, ಒಂದು ವೇಳೆ ಯುದ್ಧದಲ್ಲಿ ಜಪಾನೀಯರು ಜಯಗಳಿಸಿದ್ದಿದ್ದರೆ, ಅಂದೇ ವೀರ ಸೇನಾನಿ ಸುಭಾಷ್ ಚಂದ್ರ ಭೋಸರ ಸ್ವತಂತ್ರ ಭಾರತದ ಕನಸು ನನಸಾಗುವ ಸಾಧ್ಯತೆ ಇತ್ತು. ಆದರೆ ಜಪಾನ್ ಸೋತು ಹಿನ್ನೆಡೆದಾಗ ಭಾರತವು ಸ್ವಾತಂತ್ರಕ್ಕಾಗಿ ಇನ್ನೂ ಮೂರು ವರ್ಷಗಳ ಕಾಲ ಕಾಯಬೇಕಾಯಿತು. ಯುದ್ಧದಲ್ಲಿ ಸುಮಾರು 1,50,000 ಸೈನಿಕರು ವೀರ ಮರಣವನ್ನಪ್ಪಿದರು. ನಾಗಾಲ್ಯಾಂಡಿನ ಗುಡ್ಡಗಾಡುಗಳ ತುಂಬೆಲ್ಲಾ ಸೈನಿಕರ ಹೆಣದ ರಾಶಿಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಗಂಭೀರವಾಗಿ ಗಾಯಗೊಂಡವರ ಆಕ್ರಂದನ ಕೇಳುವವರಿಲ್ಲ. ನೀರು, ಊಟ ಇಲ್ಲದೆ ಪ್ರಾಣ ತೆತ್ತವರ ಲೆಕ್ಕವಿಟ್ಟವರಾರು? ಯುದ್ಧದಲ್ಲಿ ಪಾಲ್ಗೊಂಡ ಕುದುರೆಗಳ ಮಾರಣ ಹೋಮವಾಗಿತ್ತು. ಬ್ರಿಟಿಷರು ಹಾರಿಸಿದ ಬಾಂಬ್‌ಗಳಿಗೆ ಬಲಿಯಾದವರ ಕಥೆಯನ್ನು ಹೇಳುತ್ತಿವೆ ಬಾಂಬ್‌ನಿಂದ ಉಂಟಾದ ಪ್ರಪಾತಗಳು. ಸುಭಾಷ್ ಚಂದ್ರ ಭೋಸ್‌ರವರು 18 ಆಗಸ್ಟ್ 1945 ರಲ್ಲಿ ವಿಮಾನದ ದುರ್ಘಟನೆಯಲ್ಲಿ ಮಡಿದರು. ಆದರೆ ಸ್ವಾತಂತ್ರಕ್ಕಾಗಿ ಅವರು ಮಾಡಿದ ಹೋರಾಟವನ್ನು ಮರೆಯಲು ಸಾಧ್ಯವೇ?

PC: Internet

ಯುದ್ಧದ ನಂತರ ಆಲ್ಲೀಸ್ ಪಕ್ಷದವರು, ಯುದ್ಧದಲ್ಲಿ ಹುತಾತ್ಮರಾದ ಕಾಮನ್‌ವೆಲ್ತ್ ರಾಷ್ಟ್ರಗಳಿಗೆ ಸೇರಿದ ಸೈನಿಕರಿಗಾಗಿ ಸ್ಮಾರಕಗಳನ್ನು ನಿರ್ಮಿಸಿದರು. ಈ ಯುದ್ಧದಲ್ಲಿ ಮಡಿದ ಬ್ರಿಟಿಷ್ ಸೇನಾಧಿಕಾರಿ ಗ್ಯೂಬನ್ ಹೆನ್ರಿ ದಮಾಂತ್‌ನ ಸಮಾಧಿಯೂ ಅಲ್ಲಿದೆ. ಕೊಹಿಮಾ ಯುದ್ಧ ಸ್ಮಾರಕದಲ್ಲಿ – 1420 ಯೋಧರ ಸಮಾಧಿಗಳನ್ನು ಹಾಗೂ ಅವರ ಜೊತೆ ಹೋರಾಡಿ ಮಡಿದ 917 ಸಿಖ್ ಮತ್ತು ಹಿಂದೂ ಸಮುದಾಯಕ್ಕೆ ಸೇರಿದ ಯೋಧರ ಗೋರಿಗಳನ್ನೂ ಹಚ್ಚ ಹಸಿರಾದ ಹುಲ್ಲು ಹಾಸಿನ ನಡುವೆ ಸಾಲು ಸಾಲಾಗಿ ಸವಿವರಗಳೊಂದಿಗೆ ನಿರ್ಮಿಸಲಾಗಿದೆ. ಆದರೆ ಈ ಭೀಕರ ಕಾಳಗದಲ್ಲಿ ಭಾರತದ ಸ್ವಾತಂತ್ರಕ್ಕಾಗಿ ಹೋರಾಡಿ ಮಡಿದ 1,50,000 ಜನರ ಸಮಾಧಿಗಳು ಇಲ್ಲಿಲ್ಲ. ಇಲ್ಲೊಂದು ಅಚ್ಚರಿ ಮೂಡಿಸುವ ಸಂಗತಿ ನಮ್ಮ ಮನ ಕಲಕಿತ್ತು, ಬ್ರಿಟಿಷ್ ಸೈನ್ಯ ಸೇರಿದ್ದ ಭಾರತೀಯರು ನೇತಾಜಿಯವರ ಸೈನ್ಯ ಸೇರಿದ್ದ ಭಾರತೀಯರೊಂದಿಗೇ ನಡೆಸಿದ ಯುದ್ಧ, ನಾಗಾಗಳು ತಮ್ಮ ಜನಾಂಗದವರೊಂದಿಗೇ ಹೋರಾಡಿದ ಯುದ್ಧ ಇದಾಗಿತ್ತು. ಬ್ರಿಟಿಷರ ‘ಒಡೆದು ಆಳುವ ನೀತಿಯ’ ಪರಿಚಯ ನಮಗಾಗಿತ್ತು.

ಈ ಸಮಾಧಿಗಳ ಮೇಲ್ಭಾಗದಲ್ಲಿ ಮತ್ತು ಕೆಳಭಾಗದಲ್ಲಿ ಪವಿತ್ರವಾದ ಶಿಲುಬೆಗಳನ್ನು ನಿಲ್ಲಿಸಲಾಗಿದೆ. ಪ್ರತಿಯೊಂದು ಸಮಾಧಿಯ ಬಳಿ ನಿಂತಾಗ, ಅವರ ಕುಟುಂಬದವರ ಆಕ್ರಂದನ ಕೇಳಿ ಬರುತ್ತಿತ್ತು. ವೀರ ಯೋಧರ ತಂದೆ ತಾಯಿಗಳ ನೋವು, ಮಡದಿಯರ ಚೀರಾಟ, ಅನಾಥರಾದ ಮಕ್ಕಳ ಗೋಳು ಅಲ್ಲಿ ಪ್ರತಿಧ್ವನಿಸುತ್ತಿತ್ತು. ದೂರದೂರಿನಲ್ಲಿ ನೆಲೆಸಿರುವ ಬಂಧು ಬಾಂಧವರ ಪರವಾಗಿ ಅಲ್ಲಿ ನೆಡಲಾಗಿರುವ ಗುಲಾಬಿ ಗಿಡಗಳು ತಮ್ಮ ರೆಂಬೆಕೊಂಬೆಗಳಲ್ಲಿ ಅರಳುವ ಸುಂದರವಾದ ಪುಷ್ಪಗಳನ್ನು ಪ್ರೀತಿಯಿಂದ ಅರ್ಪಣೆ ಮಾಡುವಂತಿವೆ. ನಾವು ತಲೆಬಾಗಿ ವಂದಿಸಿ ಅಲ್ಲಿಂದ ಹೊರಟೆವು. ಆ ಸ್ಮಾರಕಗಳ ಮುಂದಿರುವ ಒಕ್ಕಣೆ ನಮ್ಮ ಅಂತರಂಗವನ್ನು ಕಲಕಿತ್ತು –

‘When you go home, tell them of us and say for your tomorrow, we gave our today’.

ಈ ಯುದ್ಧಗಳಲ್ಲಿ ನಡೆಯುತ್ತಿರುವ ಮಾರಣಹೋಮ ನಿಲ್ಲುವುದೆಂದು? ಕಳಿಂಗದ ಮಹಾಯುದ್ಧದಲ್ಲಿ ಜಯ ಗಳಿಸಿದ ನಂತರ ಚಕ್ರವರ್ತಿ ಅಶೋಕನ ಹಾಗೆ ನಾನು ಇನ್ನು ಮುಂದೆ ಯುದ್ಧ ಮಾಡುವುದಿಲ್ಲ ಎಂದು ಪ್ರತಿಜ್ಞೆ ಮಾಡುವ ಮಹಾಪುರುಷರು ಬರುವುದೆಂದಿಗೆ?

-ಡಾ.ಗಾಯತ್ರಿದೇವಿ ಸಜ್ಜನ್

8 Responses

 1. SHARANABASAVEHA K M says:

  ತುಂಬಾ ಚೆನ್ನಾಗಿ ಮೂಡಿ ಬಂದಿದೆ. ನಮ್ಮವರೊಂದಿಗೆ ಹೋರಾಡಿ ಮಡಿದ 150000 ಜನರ ಕಥೆ. ಯುದ್ಧ ಎಷ್ಟು ಭೀಕರ. ಕೊನೆಯ ಸಾಲು‌ ಸೈನಿಕರೆಲ್ಲರಿಗೂ ಕೈ ಎತ್ತಿ ಮುಗಿಯುವ ಹಾಗೇ ಮಾಡಿತು. ಧನ್ಯವಾದಗಳು ಮೇಡಂ

 2. ನಯನ ಬಜಕೂಡ್ಲು says:

  Very nice

 3. ಶಂಕರಿ ಶರ್ಮ says:

  ಸ್ಮಾರಕದ ಮುಂಭಾಗದ ಒಕ್ಕಣೆ ಮನಕಲಕುವಂತಿದೆ. ಇದು ಜಗತ್ತಿನ ಎಲ್ಲಾ ಯೋಧರ ಧ್ವನಿಯೂ ಆಗಿದೆ! ವೀರ ಸ್ವಾತಂತ್ರ್ಯ ಸೇನಾನಿ ನೇತಾಜಿಯವರ ಕರ್ಮಭೂಮಿಯ ಕುರಿತು ಅರಿತು ಮನ ಕರಗಿತು…ಒಳ್ಳೆಯ ಲೇಖನ… ಧನ್ಯವಾದಗಳು ಗಾಯತ್ರಿ ಮೇಡಂ.

 4. ಬಹಳ ಬಹಳ ಚೆನ್ನಾಗಿ ಮೂಡಿಬಂದಿದೆ ಲೇಖನ ..ಹೃದಯ ತುಂಬಿಬಂತು ಮೇಡಂ.. ಧನ್ಯವಾದಗಳು ಮೇಡಂ

 5. ನಯನ, ನಾಗರತ್ನ ಮೇಡಂ, ಶಂಕರಿ ಶರ್ಮರವರಿಗೆ ವಂದನೆಗಳು

 6. Padma Anand says:

  ನಿಜಕ್ಕೂ ಮನಕಲಕುವ ಲೇಖನ. ಲಿವ್ ಅಂಡ್ ಲೆಟ್ ಲಿವ್ ಎಂಬ ಮನೋಭಾವ ಎಂದು ಮೂಡುವುದೋ.

 7. ಬದುಕಿ ಬದುಕಲು ಬಿಡಿ ಈ ಭಾವ ಎಂದು ಮೂಡುವುದು ಕಾಯಬೇಕು
  ವಂದನೆಗಳು ಪದ್ಮ ಮೇಡಂ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: