ನಿವೃತ್ತರು

Spread the love
Share Button


ಆ ಹೋಟೆಲಿನ ಮುಂದಿನ ವಿಶಾಲವಾದ ಮರದ ಸುತ್ತ ಕಟ್ಟಿದ್ದ ಕಟ್ಟೆಯ ಮೇಲೆ ದಿನಾ ಸಾಯಂಕಾಲ ಆ ಮೂರು ಮಂದಿ ನಿವೃತ್ತರು ಜಮಾಯಿಸುತ್ತಿದ್ದುದು ಸರ್ವೇಸಾಧಾರಣವಾಗಿತ್ತು. ಭಿನ್ನ ಸ್ವಭಾವದ, ವೃತ್ತಿಯ ಅವರುಗಳು ಅದು ಯಾವ ಕಾರಣವೋ ಏನೊ ಅಂತೂ ದಿನಾ ತಪ್ಪದೆ ಅಲ್ಲಿ ಹಾಜರಿರುತ್ತಿದ್ದರು. ಅವರಾರೂ ಹಳೆ ಪರಿಚಯದವರಲ್ಲ,ಸಹಪಾಠಿಗಳಂತೂ ಅಲ್ಲವೇ ಅಲ್ಲ. ಶ್ರೀಪಾದರಾಯ ಬಿ ಎಸ್‌ಎನ್‌ಎಲ್‌ ನಿವೃತ್ತ ಅಧಿಕಾರಿಯಾಗಿದ್ದರೆ, ಪರಾಶರನ್‌ ಬ್ಯಾಂಕ್‌ನಲ್ಲಿದ್ದವನು. ಇನ್ನು ನಿರಂಜನ ಕಾರ್ಖಾನೆಯಲ್ಲಿ ಕೆಲಸ ಮಾಡಿ ನಿವೃತ್ತನಾದವನು. ಆಗಾಗ್ಗೆ ಬಂದು ಹೋಗುತ್ತಿದ್ದ ಕಂದಸ್ವಾಮಿ ಹೆಚ್ಚೂ ಕಡಮೆ ಇದೇ ವಯೋಮಾನದವನಾದರೂ ಇನ್ನೂ ತನ್ನ ಸ್ವಂತ ವ್ಯಾಪಾರದಲ್ಲಿ ಮುಂದುವರೆದಿರುವ ಆಸಾಮಿ.

“ಎಷ್ಟು ದಿನಾ ಹೀಗೆ ದುಡೀತೀಯಯ್ಯ ಕಂದ,ನಿನಗೂ ವಯಸ್ಸಾಯಿತಲ್ಲವೆ? ಅಂತ ಅಪರೂಪಕ್ಕೆ ಹಾಜರಾಗುತ್ತಿದ್ದ ಕಂದಸ್ವಾಮಿಯನ್ನು ಒಂದು ದಿನ  ಶ್ರೀಪಾದರಾಯ ಕೇಳಿದ್ದಾಗ  “ಗೊತ್ತಿದ್ದೂ  ಕೇಳ್ತಿಯಲ್ಲ  ಶ್ರೀಪಾದ, ನನಗೆ ನಿನ್ನ ತರಹ ಪೆನ್ಷನ್‌ಭಾಗ್ಯ  ಇಲ್ಲವೆ?” ಎಂದು ಹಲುಬಿದ್ದ ಕಂದಸ್ವಾಮಿ.

ಪೆನ್‌ಷನ್‌ ಪಡೆಯುತ್ತಿದ್ದ ಆ ಮೂವರಲ್ಲಿ ಶ್ರೀಪಾದರಾಯನೇ ಭಾರಿ ಮೊತ್ತ ಪಡೆಯುತ್ತಿದುದು.ಸ್ವಂತ ಮನೆ, ಜತೆಗೆ ಒಂದು ಮನೆ ಬಾಡಿಗೆ,ಅಮೆರಿಕದಲ್ಲಿ ಒಳ್ಳೆ ಹುದ್ದೆಯಲ್ಲಿದ್ದ ಒಬ್ಬನೇ ಮಗ ಶ್ರೀಕಾಂತ. ಒಟ್ಟಾರೆ ನಿಶ್ಚಿಂತ. ಪರಾಶರನ್‌ ನದು ನಂತರದ ಸರದಿ.ಶ್ರೀಪಾದರಾಯನ ಅರ್ಧದಷ್ಟು ಪಿಂಚಣಿ. ಇಬ್ಬರು ಹೆಣ್ಣುಮಕ್ಕಳ ಮದುವೆ ಜವಾಬ್ದಾರಿಯನ್ನು ಸರ್ವಿಸಿನಲ್ಲಿದ್ದಾಗಲೇ ಮುಗಿಸಿದ್ದ.ಸ್ವಂತ ಸಣ್ಣ ಮನೆಯನ್ನೂ ಹೊಂದಿದ್ದ.ಪಾಪ ನಿರಂಜನ ಬಡಪಾಯಿ.ಬರುವ ಇ ಪಿ ಎಫ್‌ಪೆನ್ಷನ್ನು ಅರೆಕಾಸಿನ ಮಜ್ಜಿಗೆ ಸಮಾನ.ಅವನಿಗೂ ಒಬ್ಬನೇ ಮಗ, ಒಳ್ಳೆ ಕೆಲಸದಲ್ಲಿದ್ದ. ಒಟ್ಟಾರೆ ಒಂದೇ ವಯೋಮಾನದವರಾದರೂ ವರಮಾನದ ದೃಷ್ಟಿಯಲ್ಲಿ ಆ ನಿವೃತ್ತರುಗಳ ನಡುವೆ ಒಂದು ‌ಭಾರಿ ಕಂದಕವೇ ಇತ್ತು.

ನಿತ್ಯ ಅವರ ಭೇಟಿಯ ಮೊದಲ ಭಾಗದಲ್ಲಿ ಲೋಕಾಭಿರಾಮ ವಿಷಯಗಳು, ರಾಜಕೀಯ ವಿದ್ಯಮಾನಗಳು, ಇಂದಿನ ಪೇಟೆಧಾರಣೆ, ಬೆಲೆ ಏರಿಕೆಗೆ ಕಾರಣರಾದವರು, ಪಿಂಚಣಿ ಸುದ್ಧಿ ಇಂಥವುಗಳ ಬಗ್ಗೆಯೇ ಮಾತುಗಳು ಹಾರಾಡುತ್ತಿದ್ದವು. ಎರಡನೆಯ ಸುತ್ತಿನಲ್ಲಿ ದೇವರ ತಲೆಯ ಮೇಲೆ ಹೂವು ತಪ್ಪಿದರೂ ಶ್ರೀಪಾದರಾಯ ಅಮೆರಿಕದಲ್ಲಿರುವ ತನ್ನ ಮಗನ ಗುಣಗಾನ ತಪ್ಪಿಸುತ್ತಿರಲಿಲ್ಲ.

ಶ್ರೀಪಾದರಾಯನ  ಈ ಬಡಿವಾರ  ಉಳಿದಿಬ್ಬರಿಗೂ ಅಷ್ಟೊಂದು ಸಮ್ಮತ  ಎನಿಸುತ್ತಿರಲಿಲ್ಲ. ಬೇರೊಂದು ವಿಷಯ ತೆಗೆದು  ಅವರ ಮಾತಿಗೆ ಕಡಿವಾಣ ಹಾಕಲು  ಅವರು ಕೈಲಾದಷ್ಟೂ ಪ್ರಯತ್ನಿಸುತ್ತಿದ್ದರು.

ಹೋಟೆಲಿನವ ಒಂದು ಕಾಫಿಗೆ ಹದಿನೈದು ರೂಪಾಯಿಗೆ ಏರಿಸಿದ್ದು ಅಂದಿನ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿತ್ತು.

 “ಹಾಲು,ಕಾಫಿಪುಡಿ ಬೆಲೆ ಏರಿದೆಯಂತಯ್ಯ ಅದಕ್ಕೇ ಹದಿನೈದು ರೂಪಾಯಂತೆ.”ನಿರಂಜನ ಹೇಳುತ್ತಿದ್ದಂತೆ ಶ್ರೀಪಾದರಾಯ “ಅದೆಷ್ಟು ಮಹಾ ಜಾಸ್ತಿ ಆಗಿದ್ಯಂತೆ, ಕಾಫಿ ಬೆಲೆ ಏರಿಸೋಕೆ? ಹೀಗಾದ್ರೆ  ನಮ್ಮಂಥ ಪಿಂಚಣಿದಾರರು ಬದುಕೋದು ಹೇಗೆ ಅಂತ?”ಎಂದ.

 “ನಿನ್ನಂಥವರು ಅಂದರೇನಯ್ಯ ಶ್ರೀಪಾದ ? ಇನ್ನೂ ನನ್ನಂಥವರು ಎಂದರೆ ಸರಿ. ನಿನ್ನ ಪೆನ್ಷನ್‌ ಮೊತ್ತಕ್ಕೆ ಈ ಏರಿಕೆ ಇರುವೆ ಲೆಕ್ಕ ಅಷ್ಟೆ.”ಪರಾಶರನ್‌ ವಾದಿಸಿದ.‌

“ಸರಿ ಸರಿ ನನ್ನಂಥವರು ಮತ್ತೆ ಯಾವ ವರಮಾನ ಇಲ್ಲದವರು ಹೇಗ್ರಯ್ಯಾ ಜೀವನ ನಡೆಸೋದು.?”ನಿರಂಜನ ಪರಿತಪಿಸಿದ.

ಹಿಂದೆಯೂ ಅಷ್ಟೆ .ಯಾವುದೇ ಚರ್ಚೆ ಹೇಗೇ ಆರಂಭವಾದರೂ ಅಂತಿಮವಾಗಿ ಅವರುಗಳ ಪೆನ್ಷನ್‌ ಮೊತ್ತದತ್ತಲೇ ಗಿರಕಿ ಹೊಡೆಯುತ್ತಿತ್ತು.”ಯೋಗಿ ತಂದದ್ದು ಯೋಗಿಗೆ,ಭೋಗಿ ತಂದದ್ದು ಭೋಗಿಗೆ” ಎಂಬ ಒಣ ವೇದಾಂತದೊಂದಿಗೆ ಅವರ ಸಭೆ ಬರಾಖಾಸ್ತಾಗುತ್ತಿತ್ತು.

ಇವೆರಲ್ಲರ ನಿತ್ಯದ ಭೇಟಿ ಹೀಗೇ ನಡೆದಿತ್ತು. ಭಿನ್ನ ವೃತ್ತಿಯಲ್ಲಿದ್ದ,ಪಿಂಚಣಿ ವರಮಾನದಲ್ಲೂ ಅಗಾಧ ಕಂದಕವಿರುವ ಈ ಗುಂಪನ್ನು ತೊರೆದುಹೋಗಲು ಆಗಾಗ ಪ್ರತಿಯೊಬ್ಬರಿಗೆ  ಅನ್ನಿಸುತ್ತಿದ್ದರೂ ಸಾಯಂಕಾಲ ಆರು ಗಂಟೆಯಾದರೆ ಸಾಕು ಯಾವುದೋ ಅವ್ಯಕ್ತ ಶಕ್ತಿ ಅವರನ್ನು ಹೋಟೆಲಿನ ಮುಂದಿನ ಕಟ್ಟೆಯತ್ತ ದೂಡುತ್ತಿತ್ತು.

ಅವತ್ತು ಈ ಮೂವರು ಎಂದಿನಂತೆ ತಮ್ಮ ಹರಟೆಕಟ್ಟೆಯಲ್ಲಿ ಕೂತು ಮಾತಿನ ಮಂಟಪ ಕಟ್ಟುತ್ತಿದ್ದಾಗ ಸೂಟುಬೂಟು ಧರಿಸಿದ್ದ ಆ ವಯಸ್ಸಾದ ವ್ಯಕ್ತಿ ಕಷ್ಟಪಟ್ಟು ವಾಕಿಂಗ್‌ ಸ್ಟಿಕ್‌ ಊರಿಕೊಂಡು ಬಂದು.”ಸಾರ್‌ ಈ ಮ್ಯಾಜಿಕ್‌ ಸ್ಲೇಟ್‌ ಕೊಂಡುಕೊಳ್ಳಿ ದಯವಿಟ್ಟು. ಒಂದಕ್ಕೆ ನೂರು ರೂಪಾಯಿ ಅಷ್ಟೆ.ನಿಮ್ಮ ಮೊಮ್ಮಕ್ಕಳಿಗೆ ಉಪಯೋಗಕ್ಕೆ ಬರತ್ತೆ”ಎಂದು ಗೋಗೆರೆದ.

 “ನನಗೆ ಬೇಡಪ್ಪ .ನನ್ನ ಮಗ ಅಮೆರಿಕಾದಲ್ಲಿದ್ದಾನೆ. ಇನ್ನೂ ಚೆನ್ನಾಗಿರೋ ಸ್ಲೇಟು ಅಲ್ಲಿ ಮಾಲ್‌ ಗಳಲ್ಲಿ ಸಿಗತ್ತೆ”ಎಂದ ಶ್ರೀಪಾದರಾಯ.

“ನಮಗೂ ಬೇಡಪ್ಪ”ಎಂದರು ಉಳಿದಿಬ್ಬರು.

“ಸಾರ್‌,ಹಾಗೆನ್ನಬೇಡಿ.ನನ್ನ ಹೆಂಡತಿಗೆ ಹುಷಾರಿಲ್ಲ ,ನನಗೂ ಮಂಡಿನೋವು,ಮಕ್ಕಳು ಸಹಾಯವೂ ಇಲ್ಲ. ಪಿಂಚಣಿ ಅಂಥವು ಕೂಡ ಇಲ್ಲ. ಹೇಗೋ ಕಷ್ಟ ಪಟ್ಟು ಜೀವನ ಸಾಗಿಸ್ತಾ ಇದೀನಿ.ನೀವು ಒಂದೊಂದು ಕೊಂಡುಕೊಳ್ಳಿ.ನನ್ನ ಸಂಸಾರಕ್ಕೆ ಸಹಾಯ ಮಾಡಿ”ಮತ್ತೆ ಇನ್ನೂ ದೈನ್ಯವಾಗಿ ಯಾಚಿಸಲು ಆರಂಭಿಸಿದ ಆ ಮುದುಕ.

 “ನೋಡಿ ಸ್ವಾಮಿ.ನಾವು ಪಿಂಚಣಿದಾರರು ಏನೋ ಅಲ್ಪ ವರಮಾನದಲ್ಲಿ ಸಂಸಾರ ಸಾಗಿಸುತ್ತಿದ್ದೇವೆ.ಸುಮ್ಮನೆ ಕಾಡಬೇಡಿ.”ಎಂದ ಶ್ರೀಪಾದರಾಯ.ಹೀಗೆ ಬಡತನವನ್ನು ನಟಿಸುವುದರಲ್ಲಿ ಅವನನ್ನು ಮೀರಿಸಿದವರು ಯಾರೂ ಇರಲಿಲ್ಲ.

ಆ ಮುದುಕ ಬಿಡದೆ ತನ್ನ ಅಹವಾಲು ಮುಂದುವರೆಸಿದ್ದ.ಶ್ರೀಪಾದರಾಯ ಮತ್ತು ಪರಾಶರನ್‌ ಅದನ್ನು ಲೆಕ್ಕಿಸದಂತೆ ಏನೋ ಮಾತುಕತೆಯಲ್ಲಿ ತೊಡಗಿಕೊಂಡಿದ್ದರು. ಈ ಆಸಾಮಿ ಹೋಗುವವನಲ್ಲ ಎಂದು ನಿರಂಜನನಿಗೆ ಮನದಟ್ಟಾಯಿತು.ಜೇಬಿಗೆ ಕೈ ಹಾಕಿ ತನ್ನಲ್ಲಿದ್ದ ಇನ್ನೂರು ರೂಪಾಯಿಯಲ್ಲಿ ನೂರು ಕೊಟ್ಟು ಅ ಸ್ಲೇಟ್‌  ಖರೀದಿಸಿದ.ಅ ಮುದುಕ ಮತ್ತೊಂದೆಡೆ ತನ್ನ ಅದೇ ವ್ಯಥೆಯ ಕಥೆ ನಿವೇದನೆಗೆ ಹೊರಟ.

ಅವನು ಹೋದದ್ದನ್ನು ಗಮನಿಸಿದ ಶ್ರೀಪಾದರಾಯ “ಇಂಥವರನ್ನು ನಂಬಬಾರದು.ನೋಡಿದ್ರಾ ಅವನು ಸೂಟು ಬೂಟು,ದುಬಾರಿ ವಾಕಿಂಗ್‌ ಸ್ಟಿಕ್ಕು.ನಾನು ಸರ್ವೀಸಿನಲ್ಲಿ ಇದ್ದಾಗಲೂ ಇಂಥ ಡ್ರೆಸ್ಸು ಧರಿಸಿರಲಿಲ್ಲ.”ಎಂದ.

“ಅಲ್ಲ ನಿರಂಜನ್‌,ನಿಮ್ಮ ಮನೇಲಿ ಯಾವ ಮಕ್ಕಳು ಇದ್ದಾರೆ?ಈ ಸ್ಲೇಟ್‌ ಕೊಂಡೆಯಲ್ಲ.” ಪರಾಶರನ್‌ ಪ್ರಶ್ನಿಸಿದ.

“ಇಲ್ಲ ಕಣಯ್ಯ.ನಮ್ಮ ಮನೆ ಕೆಲಸದವಳ ಮಗಳಿಗೆ ಇದು.ಆಗಾಗ್ಗೆ ನನ್ನ ಹತ್ತಿರ ಲೆಕ್ಕ ಹೇಳಿಸ್ಕೊಳ್ಳತ್ತೆ ಅದು.ಈ ಸ್ಲೇಟು ಅದಕ್ಕೆ ಅನುಕೂಲವಾಗತ್ತೆ.” ಎಂದ ನಿರಂಜನ್.‌

“ಬಹಳ ಸಂತೋಷ ಕಣಯ್ಯ.ನಾನೂ ಹೀಗೆ ಮಾಡಬಹುದಿತ್ತು ಅನಿಸುತ್ತೆ.”ಎಂದ ಪರಾಶರನ್.‌ ಶ್ರೀಪಾದರಾಯ ಏನೂ ಪ್ರತಿಕ್ರಯಿಸಲಿಲ್ಲ.

ಎಂಟು ಗಂಟೆಯಾಗತೊಡಗಿತ್ತು .”ಪುಟ್ಟಗೌರಿ” ಸೀರಿಯಲ್‌ ನೋಡುವ ತವಕದಿಂದ ಮೂವರೂ  ಅಂದಿನ ಸಭೆ ಮುಗಿಸಿ ಮನೆಯತ್ತ ಹೆಜ್ಜೆ ಹಾಕಿದರು.

 -ಕೆ ಎನ್‌ ಮಹಾಬಲ

5 Responses

 1. ಲೋಕೋಭಿನ್ನ ರುಚಿಹಃ..ಎಂಬಂತೆ ಅವರವರ ಮನೊಧರ್ಮ..ಉತ್ತಮ ನಿರುಪಣೆ ವಾಸ್ತವಿಕ ಬದುಕಿನ ಚಿತ್ರ.. ಚೆನ್ನಾಗಿ ದೆ ಸಾರ್…

 2. ನಯನ ಬಜಕೂಡ್ಲು says:

  ಅರ್ಥ ಪೂರ್ಣ ಕಥೆ

 3. Anonymous says:

  ಧನ್ಯವಾದ

 4. ಶಂಕರಿ ಶರ್ಮ says:

  ನಿವೃತ್ತ ಜೀವನ ನಡೆಸುವ ಹಿರಿಯರ ವಿಭಿನ್ನ ಮನೋಧರ್ಮಗಳನ್ನು ಕಥಾರೂಪದಲ್ಲಿ ಚಿತ್ರಿಸಿದ ಪರಿ ಬಹಳ ಚೆನ್ನಾಗಿದೆ ಸರ್….ಧನ್ಯವಾದಗಳು.

 5. ಹೃದಯ ಶ್ರೀಮಂತಿಕೆಗೆ ಮುಂದೆ ಬೇರೆ ಯಾವ ಶ್ರೀಮಂತಿಕೆಯು ಗೌಡ ಎಂಬ ನೀತಿಯನ್ನು ಸಾರುವ ಸಣ್ಣ ಕಥೆ
  ಅಭಿನಂದನೆಗಳು ಸರ್

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: