ಪುಸ್ತಕ ಪರಿಚಯ : ‘ಸ್ವಯಂಗತಂ’ ಲೇಖಕರು :- ಮುರಳೀಧರ ಕಾಸರಗೋಡು

Share Button

ಪುಸ್ತಕ :- ಸ್ವಯಂಗತಂ (ನೆನಪಿನ ಬುತ್ತಿ)
ಲೇಖಕರು :- ಮುರಳೀಧರ ಕಾಸರಗೋಡು
ಪ್ರಕಾಶಕರು:- ವಿಜಯ ಸಂಗೀತ  ಪ್ರತಿಷ್ಠಾನ ತಾಳಿಪಡ್ಪು ಕಾಸರಗೋಡು.

‘ಸ್ವಯಂಗತಂ – ನೆನಪಿನ ಬುತ್ತಿ ‘  ಆತ್ಮಕಥನದ ಶೀರ್ಷಿಕೆಯೇ  ಬಹಳ ಆಕರ್ಷಕ, ಜೊತೆಗೆ  ಅದ್ಭುತ, ಯುವ ಚಿತ್ರಕಾರ ಪ್ರತೀಕ್ ಎಲ್ಲಂಗಳ ರಚಿಸಿರುವ ಸುಂದರವಾದ ಮುಖಪುಟ ಹೊಂದಿರುವ ಪುಸ್ತಕ ಎಂತಹವರನ್ನಾದರೂ  ತನ್ನತ್ತ ಸೆಳೆದು ಪುಸ್ತಕದ  ಪುಟಗಳನ್ನು ಒಮ್ಮೆಯಾದರೂ ತಿರುವಿ ಹಾಕುವಂತೆ ಮಾಡುತ್ತದೆ. 

ಸಾಹಿತ್ಯ ಕ್ಷೇತ್ರದಲ್ಲಿ ಬರಹಕ್ಕೆ  ಬೆಂಬಲ ಎಷ್ಟು ಮುಖ್ಯ ಹಾಗೂ ಸಿಗುವ ಬೆಂಬಲ ಬರಹಗಾರರಲ್ಲಿ ಹೇಗೆ ಸ್ಪೂರ್ತಿ ತುಂಬುತ್ತದೆ ಅನ್ನುವುದನ್ನು  ಮುರಳೀಧರ ಕಾಸರಗೋಡು  ಅವರು “ಸ್ವಯಂಗತಕ್ಕೂ ಮುನ್ನ”   ಅನ್ನುವ ತಮ್ಮ ಮಾತುಗಳಲ್ಲಿ  ಬಹಳ ಸೊಗಸಾಗಿ ವಿವರಿಸಿದ್ದಾರೆ.  ಈ ಮಾತುಗಳು ಸತ್ಯ ಕೂಡ.  ಒಬ್ಬ ಬರಹಗಾರನಿಗೆ ಸಿಗುವ ಅತಿ ಚಿಕ್ಕ ಪ್ರೋತ್ಸಾಹವೂ  ಅವನನ್ನು/ ಅವಳನ್ನು ಬಹಳ ಎತ್ತರಕ್ಕೆ ಕೊಂಡೊಯ್ಯುವ ಸಾಧ್ಯತೆಗಳು ಬಹಳ ಇವೆ. 

ಇನ್ನೊಂದು ಇಲ್ಲಿ ಮನ ಸೆಳೆಯುವುದು  ಸುಕುಮಾರ ಆಲಂಪಾಡಿ ಅವರು ಈ ಪುಸ್ತಕಕ್ಕೆ ಬರೆದ  ಬೆನ್ನುಡಿ.  ಆತ್ಮಕಥನಗಳು ಹೇಗೆ ಚರಿತ್ರೆಯಾಗುತ್ತವೆ ಅನ್ನುವ ಅಂಶವನ್ನು ಅವರು ಇಲ್ಲಿ ತಿಳಿಸಿದ್ದಾರೆ. 

ಈ ಆತ್ಮಕಥನದಲ್ಲಿ ಬರುವ ಹೆಚ್ಚಿನವರು ನನಗೆ  ಪರಿಚಿತರು.  ಕೃಷ್ಣ  ಟಾಕೀಸು,  ಸಿನಿಮಾ ತೋರಿಸುವುದು ಎಲ್ಲ ಘಟನೆಗಳು ಚಿರಪರಿಚಿತ.  ಹೇಗೆಂದರೆ ಈ  ಟಾಕಿಸಿನ ಓನರ್ ಸುಬ್ರಾಯ ಶಾನುಭಾಗರು  ಹಾಗೂ ನನ್ನ ಮಾವ (ಗಂಡನ ಅಪ್ಪ)  ಲಕ್ಷ್ಮೀನಾರಾಯಣ ಶಾನುಭಾಗರು  ಸಂಬಂಧಿಕರಷ್ಟೇ ಅಲ್ಲದೆ ಒಳ್ಳೆಯ ಸ್ನೇಹಿತರು ಆಗಿದ್ದರು.  ಕಾಸರಗೋಡಿನ ಕೃಷ್ಣ ಥಿಯೇಟರ್ ನಲ್ಲಿ ಬಹಳ ಸಮಯದವರೆಗೆ ಜೊತೆಯಲ್ಲಿ ಕೆಲಸ ಮಾಡಿದ್ದರು ಕೂಡ.  ಅಷ್ಟೇ ಅಲ್ಲದೆ ಇಲ್ಲಿ ಬರುವ ಮುಕಾರಿಗದ್ದೆ  ಶಂಕರನಾರಾಯಣ ಶಾನುಭಾಗರ  ಪತ್ನಿ ಸುಶೀಲ ಅವರು ನನ್ನ ಮಾವನವರ ಒಡಹುಟ್ಟಿದ ಅಕ್ಕ,  ಹಾಗಾಗಿ ಮಾವ ಎಲ್ಲ ಘಟನೆಗಳನ್ನು ನೆನಪಾದಾಗಲೆಲ್ಲ ಮೆಲುಕು  ಹಾಕುತ್ತಿದ್ದರು.  ಮಾವನಿಗಿಂತ ಹೆಚ್ಚಾಗಿ ನನ್ನ ಅತ್ತೆ (ನನ್ನ ಗಂಡನ ಅಮ್ಮ)  ಸುಶೀಲಾ ಅವರ  ಅತ್ತಿಗೆಯಂದಿರ ಬಗ್ಗೆ ಮಾವ ಹಾಗು ಇಲ್ಲೇ ಮನೆಯಲ್ಲೇ ಇದ್ದ ಅವರ ಅತ್ತಿಗೆ ಶಾರದಾ  ಅವರಿಂದ  ಅರಿತ  ವಿಷಯಗಳನ್ನು ಹೇಳುತ್ತಿದ್ದರು ಹಾಗೂ ಈಗಲೂ ಹಲವಾರು ಹಳೆಯ ವಿಚಾರಗಳನ್ನು ಹೇಳುತ್ತಿರುತ್ತಾರೆ. ಸಂಬಂಧಗಳನ್ನು, ಸಂಬಂಧಿಕರನ್ನು, ತನ್ನ ಬಂಧು ಬಳಗವನ್ನು ಬಹಳ ಇಷ್ಟ ಪಡುವವರು ನನ್ನ ಅತ್ತೆ, ಹಾಗಾಗಿ ಅವರಿಗೆ ಎಲ್ಲ ಸಂಬಂಧಗಳು, ಸಂಬಂಧಿಕರು ಚಿರಪರಿಚಿತ. ಇವರಿಂದಾಗಿ ನಾನೂ ಅಲ್ಪಸ್ವಲ್ಪ ಸಂಬಂಧಗಳ ಬಗ್ಗೆ, ಸಂಬಂಧಿಕರ ಬಗ್ಗೆ ಅರಿತಿರುವೆ.

ಇಲ್ಲಿ ಉಲ್ಲೇಖಸಿರುವ ಹಿಂದೆ ನಡೆದ ಘಟನೆಗಳು ಇಂದು ಇತಿಹಾಸ. ಆ ಕಾಲಕ್ಕೂ ಇವತ್ತಿನ ದಿನಕ್ಕೂ ಅಜಗಜಾoತರ ವ್ಯತ್ಯಾಸವಿದೆ. ಆದರೂ ಆ ಹಳೆಯ ಕಳೆದು ಹೋದ ಸಂಗತಿಗಳು ಸ್ವಾರಸ್ಯಕರವಾಗಿವೆ.  ಹಿಂದಿನ ಘಟನೆಗಳು ಇವತ್ತು ಕಥೆಯಾದರೂ ಇಂದಿನ ಪೀಳಿಗೆಗೆ ಮೊದಲು ಏನೆಲ್ಲಾ ನಡೆದಿತ್ತು  ಅನ್ನವುದರ ಮಾಹಿತಿಯನ್ನು  ಒದಗಿಸಬಲ್ಲುದು  ಈ ನೆನಪಿನ ಬುತ್ತಿ.  ಆ ಕಾಲದಲ್ಲಿ ನಡೆದ ಮದುವೆಗಳು,  ಸಮಾರಂಭಗಳಿಗೂ ಇವತ್ತು ನಡೆಯುವ ಕಾರ್ಯಕ್ರಮಗಳ ರೀತಿಗೂ  ಬಹಳ ವ್ಯತ್ಯಾಸವಿದೆ.  ಕಾಲ  ಬದಲಾದಂತೆ ಪರಿಸ್ಥಿತಿಗಳು ಬದಲಾಗುತ್ತವೆ.  ಇದೇ ಜಗತ್ತಿನ ನಿಯಮ.  ಅಂದಿಗೆ ಅದು ಚಂದ ಇಂದಿಗೆ ಇದು. 

ಎಷ್ಟೋ ಬಾರಿ ನಮಗೆ ನಮ್ಮ ಹಿರಿಯರ ಬಗ್ಗೆ,  ಮನೆತನದ ಬಗ್ಗೆ,  ಅವರ ಇತಿಹಾಸದ ಬಗ್ಗೆ ಅರಿವು ಇರುವುದಿಲ್ಲ.  ಅರಿಯಬೇಕು ಅನ್ನುವ  ಕುತೂಹಲ ಹುಟ್ಟುವ ಕಾಲಕ್ಕೆ ಅದರ ಬಗ್ಗೆ ಹೇಳುವವರೂ  ಯಾರೂ  ಇರುವುದಿಲ್ಲ ಆದರೆ “ಸ್ವಯಂಗತಂ” ದಂತಹ  ಆತ್ಮಕಥೆಗಳು ನಮ್ಮ ಹಿರಿಯರು ಬಾಳಿ ಬದುಕಿದ ದಿನಗಳ ಮೇಲೆ,  ಇತಿಹಾಸದ ಮೇಲೆ ಬೆಳಕು ಚೆಲ್ಲಬಲ್ಲದು. ಮುರಳೀಧರ  ಕಾಸರಗೋಡು ಅವರು ಇಂತಹ ಆತ್ಮಕಥೆ ಬರೆದು ಒಳ್ಳೆಯ ಕೆಲಸ ಮಾಡಿದ್ದಾರೆ.  ಹಿಂದೆ ಏನು ನಡೆಯಿತು ಅನ್ನುವುದನ್ನು ತಿಳಿಯುವಲ್ಲಿ  ಈ ಪುಸ್ತಕ ಒಂದು ಕೈಪಿಡಿ ಅನ್ನಬಹುದು. 

ಬಸ್ಸು ಕಾರುಗಳು ಇಲ್ಲದ ಆ ಬಹಳ ಹಿಂದಿನ ಕಾಲ,  ಸುಂದರವಾದ ಹಳ್ಳಿಯ ಪರಿಸರ,  ಕೂಡು ಕುಟುಂಬ,  ಬಂದು ಬಾಂಧವರೆಲ್ಲ ಬೆರೆಯುತ್ತಿದ್ದ ಪರಿ,  ಆ ಕಾಲದಲ್ಲಿ ನಡೆಯುತ್ತಿದ್ದ ಮದುವೆಗಳ ವೈಭವ,  ಕೃಷ್ಣ ಟಾಕಿಸಿನ  ಇತಿಹಾಸ,  ಅದು ಇರುವ ಕಾಸರಗೋಡಿನ ಪರಿಚಯ,  ಲೇಖಕರ ಬಾಲ್ಯದ ದಿನಗಳು,  ಆಟ ತುಂಟಾಟಗಳು,  ಚಂದ್ರಗಿರಿ ಹೊಳೆ ಹೀಗೆ ಕಾಸರಗೋಡಿನಿಂದ ಹಿಡಿದು ನಮ್ಮ ಪೆರ್ಲ ಬಜಕೂಡ್ಲಿನವರೆಗಿನ  ಪೂರ್ಣ ಪರಿಚಯವನ್ನು ಒಳಗೊಂಡ,  ನಮ್ಮ ಹಿರಿಯರು ಅವರ ಜೀವನ ಕಥೆಗಳನ್ನು ಒಳಗೊಂಡ ಒಂದು ಸುಂದರ ಕೃತಿ “ಸ್ವಯಂಗತಂ”. 

ಇದು ಹಲವಾರು ಬಣ್ಣಗಳನ್ನು ಒಳಗೊಂಡ ಆಕರ್ಷಕ ನೆನಪಿನ ಬುತ್ತಿಯೇ ಸರಿ.  ನಮ್ಮ ಇತಿಹಾಸವನ್ನು ಅರಿಯುವುದರಲ್ಲೂ  ಕುತೂಹಲದ ಜೊತೆಗೆ ಒಂದು ಖುಷಿ ಇದೆ.  ಆ ಖುಷಿ ಈ ಪುಸ್ತಕವನ್ನು ಓದುವಾಗಲೂ ಸಿಗುತ್ತದೆ.  ಕೇವಲ ಸೊಸೆಯಾಗಿ   ಬೇರೆ ಕಡೆಯಿಂದ ಬಂದ ನನಗೆ ಈ ಪುಸ್ತಕದಲ್ಲಿ ನಮ್ಮ( ನನ್ನ ಗಂಡನ ಮನೆಯ)  ಹಿರಿಯರ ಬಗ್ಗೆಯೂ ಓದುವಾಗ ಬಹಳ ಸಂತೋಷವಾಗುವಾಗ ಇಲ್ಲಿ ಬರುವ ಕುಟುಂಬಕ್ಕೆ ಸಂಬಂಧಪಟ್ಟವರಿಗೆ ಅದೆಷ್ಟು ಸಂತೋಷವಾಗಲಿಕ್ಕಿಲ್ಲ?. ಇಂದಿನ ಪೀಳಿಗೆಗೆ  ತಮ್ಮ ಇತಿಹಾಸವನ್ನು ಅರಿಯುವಲ್ಲಿ  ಈ ಪುಸ್ತಕ ಖಂಡಿತಾ ನೆರವಾಗ ಬಲ್ಲದು.  ನಾವು ಎಷ್ಟೇ ಮುಂದುವರಿದರು ನಮ್ಮ ವಂಶ ಬೆಳೆದು ಬಂದ ಚರಿತ್ರೆಯತ್ತ ಒಮ್ಮೆಯಾದರೂ ನಮ್ಮ ಮನಸ್ಸು ತಿರುಗಿ ನೋಡದೆ ಇರಲಾರದು, ಹಾಗೆ ಮನಸು ಬಂದಾಗ ಇಂತಹ ಆತ್ಮ ಕಥೆಗಳು ನಮ್ಮ ನೆರವಿಗೆ ಬರುತ್ತವೆ. ಇನ್ನೊಂದು ಈ ಕೃತಿಯ ವಿಶೇಷತೆ ಎಂದರೆ ಲೇಖಕರು ತಮ್ಮ ಆಡು ಭಾಷೆಯನ್ನು ಬರಹದಲ್ಲೂ ಬಳಸಿರುವುದು. ಇದು ಕೃತಿಯನ್ನು ಹೆಚ್ಚು ಆಪ್ತ ಅನ್ನಿಸುವಂತೆ ಮಾಡುತ್ತದೆ, ಓದುಗರನ್ನು ಸೆಳೆಯುತ್ತದೆ.

ಬದುಕೆಂದ ಮೇಲೆ ಅಲ್ಲಿ ಸಿಹಿ ಕಹಿ ಎರಡೂ ಸಂಧರ್ಭಗಳು ಇದ್ದೇ ಇರುತ್ತದೆ. ಆದರೆ ಇಲ್ಲಿ ಲೇಖಕರು ಹೆಚ್ಚಾಗಿ ಧನಾತ್ಮಕ ಚಿಂತನೆ, ಘಟನೆಗಳಿಗಷ್ಟೇ ಮಹತ್ವ ನೀಡಿ ಸವಿ ನೆನಪುಗಳನ್ನು ಹಂಚಿಕೊಂಡಿರುವ ರೀತಿ ಒಂದು ಉತ್ತಮ ಸಂದೇಶವನ್ನು ನೀಡುತ್ತದೆ – ನಾವು ಬದುಕಿನಲ್ಲಿ ಸದಾ ಉತ್ತಮ, ಸಕಾರಾತ್ಮಕ ಹಾಗೂ ಧನಾತ್ಮಕ ಯೋಚನೆ, ವಿಚಾರಗಳಿಗೆ ಮಹತ್ವ ನೀಡಿ ಸಾಗುತ್ತಿರಬೇಕು ಅನ್ನುವುದು. ಒಟ್ಟಿನಲ್ಲಿ “ಸ್ವಯಂಗತಂ” ಒಂದು ಸುಂದರ ಕೃತಿ. ಇನ್ನೂ ಯಾವುದಾದರೂ ಇಂತಹ ಸುಂದರ ನೆನಪುಗಳ ಗುಚ್ಛ ಇದ್ದಲ್ಲಿ ಅವುಗಳನ್ನೂ ಕೂಡಾ ಹೀಗೆಯೇ ನಮ್ಮೊಂದಿಗೆ ಬರಹ ರೂಪದಲ್ಲಿ ಲೇಖಕರು ಹಂಚಿಕೊಳ್ಳಲಿ ಅನ್ನುವ ಆಶಯದೊಂದಿಗೆ… 

– ನಯನ ಬಜಕೂಡ್ಲು

3 Responses

  1. ಮಹೇಶ್ವರಿ ಯು says:

    ಒಂದೊಳ್ಳೆಯ ಪುಸ್ತಕ ವನ್ನು ಚೆನ್ನಾಗಿ ಪರಿಚಯ ಮಾಡಿದ್ದೀರಿ

  2. ಪುಸ್ತಕ ಪರಚಯ ಚೆನ್ನಾಗಿಮೂಡಿ ಬಂದಿದೆ ನಯನ ಮೇಡಂ

  3. ಶಂಕರಿ ಶರ್ಮ says:

    ತಮ್ಮ ಪರಿಚಿತ ಬಂಧುಗಳ ಆತ್ಮಕಥನವನ್ನು ಒಳಗೊಂಡ ಪುಸ್ತಕವನ್ನು ಬಹಳ ಆತ್ಮೀಯವಾಗಿ, ಸರಳವಾಗಿ ಕಟ್ಟಿಕೊಟ್ಟ ಪರಿ ಬಹಳ ಇಷ್ಟವಾಯ್ತು…ಧನ್ಯವಾದಗಳು, ನಯನಾ ಮೇಡಂ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: