ಕಾಶ್ಮೀರದ ಶಂಕರಪೀಠ

Share Button

ನಮಸ್ತೆ ಶಾರದಾದೇವಿ ಕಾಶ್ಮೀರ ಪುರವಾಸಿನಿ
ತ್ವಾಮಹಂ ಪ್ರಾರ್ಥಯೇ ನಿತ್ಯ ವಿದ್ಯಾಂ ಬುದ್ಧಿಂ ಚ ದೇಹಿ ಮೇ


‘ಎತ್ತಣ ಮಾಮರ, ಎತ್ತಣ ಕೋಗಿಲೆ’, ಎಂಬ ಉಕ್ತಿಯಂತೆ, ಕಾಶ್ಮೀರಕ್ಕೂ ದಕ್ಷಿಣ ಭಾರತದಲ್ಲಿ ಜನಿಸಿದ್ದ ಶಂಕರರಿಗೂ ಇರುವ ಸಂಬಂಧವಾದರೂ ಏನು? ಇದರ ಹಿನ್ನೆಲೆಯನ್ನು ಕೇಳೋಣ ಬನ್ನಿ – ಶಾರದ ದೇಶ ವೆಂದೇ ಕರೆಯಲ್ಪಡುತ್ತಿದ್ದ ಕಾಶ್ಮೀರಕ್ಕೆ ಆದಿಗುರು ಶಂಕರಾಚಾರ್ಯರು, ಅಲ್ಲಿದ್ದ ಪಂಡಿತೋತ್ತಮರನ್ನು ಕಂಡು, ಅವರಿಂದ ಜ್ಞಾನ ಪಡೆಯಲು, ತಮ್ಮ ಶಿಷ್ಯರೊಂದಿಗೆ ತೆರಳುತ್ತಾರೆ. ಅಲ್ಲಿನ ಪಂಡಿತರು, ಇವರ ಪಾಂಡಿತ್ಯಕ್ಕೆ ಬೆರಗಾಗಿ, ತಮ್ಮೊಂದಿಗೆ ಕೆಲವು ಕಾಲ ಇರಲು ಕೇಳಿ ಕೊಳ್ಳುತ್ತಾರೆ. ಶಂಕರರ ಶಿಷ್ಯರು, ಅಡುಗೆ ಮಾಡಿಕೊಳ್ಳಲು ಬೇಕಾದ ಸಾಮಗ್ರಿಗಳನ್ನು, ಅಲ್ಲಿದ್ದ ಗೃಹಸ್ಥರ ಬಳಿ ಕೇಳಿ ಪಡೆಯುತ್ತಾರೆ. ಆದರೆ ಕಟ್ಟಿಗೆ ಹೊತ್ತಿಸಲು ಅವಶ್ಯವಾದ ಬೆಂಕಿಯನ್ನು ಮರೆತಿರುತ್ತಾರೆ. ಆಗ ಅಲ್ಲಿಗೆ ಬಂದ ಗೃಹಿಣಿಯೊಬ್ಬಳು, ಅಲ್ಲಿದ್ದ ನೀರನ್ನು ಕಟ್ಟಿಗೆಯ ಮೇಲೆ ಚಿಮುಕಿಸಿ, ಬೆಂಕಿ ಹೊತ್ತಿಸಿಕೊಡುತ್ತಾಳೆ. ಇದನ್ನು ಕಂಡು ಬೆರಗಾದ ಶಂಕರರು, ಈ ಸ್ಥಳದ ಮಹಾತ್ಮೆಯನ್ನು ಅರಿತು, ಇಲ್ಲಿನ ಅರಣ್ಯವೊಂದರಲ್ಲಿ ತಪೋಮಗ್ನರಾಗುತ್ತಾರೆ. ಅದ್ವೈತ ತತ್ವದ ಜ್ಞಾನವನ್ನು, ಶಂಕರರು ಪಡೆದ ಪುಣ್ಯಕ್ಷೇತ್ರವಿದು. ಭಾರತದಾಂದ್ಯಂತ ಉಪನಿಷತ್ತುಗಳ, ಬ್ರಹ್ಮಸೂತ್ರಗಳ ಮತ್ತು ಗೀತೆಯ ಸಾರವನ್ನು ಅದ್ವೈತ ಸಿದ್ಧಾಂತದ ಮೂಲಕ ಶಂಕರರು ಪಸರಿಸುತ್ತಾರೆ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಯಾತ್ರೆ ಕೈಗೊಂಡ ಶಂಕರರು, ಹಿಂದೂ ಧರ್ಮವನ್ನು ಪ್ರಚಾರ ಮಾಡುವಲ್ಲಿ ಸಫಲರಾಗುತ್ತಾರೆ. ಗಂಧದ ಮರದಿಂದ ಮಾಡಿದ ಶಾರದಾದೇವಿಯ ವಿಗ್ರಹವನ್ನು, ಶಂಕರರು ಇಲ್ಲಿಂದಲೇ ಶೃಂಗೇರಿಗೆ ತೆಗೆದುಕೊಂಡು ಹೋದರು ಎಂಬ ನ>ಬಿಕೆಯೂ ಜನರಲ್ಲಿ ಮನೆ ಮಾಡಿದೆ.

ಇಂದು, ಶಂಕರರ ತಪೋಭೂಮಿಯೇ ಶಂಕರಾಚಾರ್ಯ ಆಭಯಾರಣ್ಯವೆಂದು ಕರೆಯಲ್ಪಡುತ್ತಿದೆ, ಶಂಕರಪೀಠದಲ್ಲಿ, ಸರ್ಪದ ಮೇಲೆ ರಾರಾಜಿಸುತ್ತಿರುವ ಶಿವಲಿಂಗವು, ಅಲ್ಲಿಗೆ ಬರುವ ಯಾತ್ರಿಗಳನ್ನು ಹರಸುತ್ತಿದೆ. ಬಳಿಯಲ್ಲಿರುವ ಶಂಕರರ ಮೂರ್ತಿಯು ಅದ್ವೈತ ತತ್ವಗಳನ್ನು ಸಾರುತ್ತಿದೆ. ಸಮುದ್ರ ಮಟ್ಟದಿಂದ ೬,೦೭೭ ಅಡಿ ಎತ್ತರದಲ್ಲಿರುವ ಶಂಕರಪೀಠ, ರಮಣೀಯವಾದ ನಿಸರ್ಗದ ಮಡಿಲಲ್ಲಿ ಸ್ಥಾಪಿತವಾಗಿದೆ. ಶ್ರೀನಗರದಿಂದ ಐದು ಕಿ.ಮೀ. ದೂರದಲ್ಲಿರುವ, ಈ ಶಿವನ ದೇಗುಲದ ಸುತ್ತ ಶಂಕರಾಚಾರ್ಯ ಅಭಯಾರಣ್ಯವಿದ್ದು, ಹಿಂಭಾಗದಲ್ಲಿ ಹಿಮಾಚ್ಛಾದಿತ ಜಬರ್ ವಾನ್ ಪರ್ವತ ಶ್ರೇಣಿಗಳು ಕಂಗೊಳಿಸುತ್ತಿವೆ. ಮುಂಭಾಗದಲ್ಲಿ ವಿಸ್ತಾರವಾದ ದಾಲ್ ಸರೋವರ ಇದ್ದರೆ, ಸುತ್ತ ಕಾಶ್ಮೀರದ ವಿಹಂಗಮ ನೋಟ ಕಂಡು ಬರುತ್ತದೆ.

ನಾವು, ಅಮರನಾಥ ಯಾತ್ರೆಗೆ ಹೋದಾಗ, ನಮ್ಮ ತಂಡದೊಂದಿಗೆ ಶಂಕರಪೀಠಕ್ಕೂ ಭೇಟಿಯಿತ್ತೆವು. ಕಾರಿನಿಂದ ಇಳಿಯುತ್ತಿದ್ದ ಹಾಗೆಯೇ, ಮಿಲಿಟರಿ ಪಡೆಯವರು ನಮ್ಮೆಲ್ಲರ ತಪಾಸಣೆ ಮಾಡಿದರು. ಧರ್ಮದ ಹೆಸರಿನಲ್ಲಿ ಮತಾಂಧರು ನಡೆಸುತ್ತಿರುವ ಹಿಂಸಾಕೃತ್ಯಗಳನ್ನು ತಡೆಗಟ್ಟಲು ಸರ್ಕಾರ ಕೈಗೊಂಡ ಕ್ರಮ ಇದು. ದೇಗುಲವನ್ನು ತಲುಪಲು 243 ಮೆಟ್ಟಿಲುಗಳನ್ನು ಏರಬೇಕಿತ್ತು. ಯಾತ್ರಿಗಳ ದೈಹಿಕ ಸಧೃಢತೆ ಹಾಗೂ ಮಾನಸಿಕ ಸ್ಥಿರತೆಯನ್ನೂ ಒರೆಗೆ ಹಚ್ಚುವ ನಮ್ಮ ಪೂರ್ವಜರ ಜಾಣತನಕ್ಕೆ ತಲೆದೂಗಲೇಬೇಕಲ್ಲವೇ?

ಈ ಪುರಾತನ ದೇಗುಲದ ವಿವರಗಳು ಕಲ್ಹಣ ಎಂಬ ಇತಿಹಾಸ ತಜ್ಞನು ಬರೆದ ಐತಿಹಾಸಿಕ ಗ್ರಂಥ ರಾಜಾತರಂಗಿಣಿ ಯಲ್ಲಿ ದಾಖಲಾಗಿದೆ. ರಾಜಾ ಗೋಪಾದಿತ್ಯನು ಆರ್ಯಾವರ್ತದಿಂದ ಆಗಮಿಸಿದ್ದ ಬ್ರಾಹ್ಮಣರಿಗೆ ಈ ಪ್ರದೇಶವನ್ನು ಉಂಬಳಿಯಾಗಿ ನೀಡಿದ್ದನಂತೆ. ಹಾಗಾಗಿ ಇದನ್ನು ‘ಗೋಪ ಅಗ್ರಹಾರ’ ಎಂದೂ ಕರೆಯಲಾಗುತ್ತಿತ್ತು. ಕ್ರಿ.ಪೂ. 371 ರಲ್ಲಿ ರಾಜನು, ತನ್ನ ಮನೆದೇವರಾದ ಜ್ಯೇಷ್ಟೇಶ್ವರ ದೇಗುಲವನ್ನು ಈ ಬೆಟ್ಟದ ನೆತ್ತಿಯ ಮೇಲೆ ನಿರ್ಮಿಸಿದನು. ನಂತರದಲ್ಲಿ ಕಾಶ್ಮೀರ ಪ್ರಾಂತ್ಯವನ್ನು ಆಕ್ರಮಣ ಮಾಡಿದ ಸುಲೈಮಾನ್ ಎಂಬ ಪರ್ಶಿಯನ್ ದೊರೆ ಈ ಪ್ರದೇಶವನ್ನು ಕೊ-ಎ-ಸುಲೈಮಾನ್ ಎಂದು ಕರೆದನು. ಮೊಗಲ್ ಚಕ್ರವರ್ತಿಗಳು, ಕಾಶ್ಮೀರವನ್ನು ಇಸ್ಲಾಂ ಧರ್ಮವನ್ನು ಪ್ರಚಾರ ಮಾಡುವ ಕೇಂದ್ರವನ್ನಾಗಿ ಮಾರ್ಪಡಿಸಿದರು. ಕೆಲವರು ಯೇಸುಕ್ರಿಸ್ತನೂ ತನ್ನ ಅನುಯಾಯಿಗಳೊಂದಿಗೆ ಕಾಶ್ಮೀರಕ್ಕೆ ಆಗಮಿಸಿದ್ದನೆಂದು ಅಭಿಪ್ರಾಯ ಪಡುತ್ತಾರೆ. ಬೌದ್ಧರೂ ತಮ್ಮ ಸಂಘಗಳನ್ನು ಇಲ್ಲಿ ಸ್ಥಾಪಿಸಿದ್ದರಿಂದ, ಇದು ಪಾಸ್-ಪಹಾರ್ ಎಂದೂ ಖ್ಯಾತಿ ಪಡೆದಿತ್ತು. ಹೀಗೆ, ಶಂಕರರ ಪೀಠವು ಸರ್ವ ಧರ್ಮಗಳನ್ನು ಸಾರುವ ಸ್ಮಾರಕವಾಗಿ ನಿಲ್ಲುವುದು.

ಕಾಶ್ಮೀರದ ಶಂಕರಪೀಠ

ಶ್ರೀ ಶಂಕರ ಭಗವತ್ಪಾದರು ಎಂಟನೇ ಶತಮಾನದಲ್ಲಿ ಇಲ್ಲಿಗೆ ತಮ್ಮ ಶಿಷ್ಯರೊಂದಿಗೆ ಆಗಮಿಸಿದ್ದರು ಎಂಬ ನಂಬಿಕೆ ಕಾಶ್ಮೀರಿ ಪಂಡಿತರದು. ಶಂಕರರು ಇಲ್ಲಿಯೇ ಪಾರ್ವತೀದೇವಿಯ ಶಕ್ತಿಯ ಸವಿಸ್ತಾರ ವರ್ಣನೆಯುಳ್ಳ ಪ್ರಖ್ಯಾತ ಸಾಹಿತ್ಯ ಕೃತಿ ಸೌಂದರ್ಯ ಲಹರಿಯನ್ನು ರಚಿಸಿದರು ಎಂಬ ಪ್ರತೀತಿಯೂ ಇದೆ. ಶಂಕರರ ಅನುಯಾಯಿಗಳು ಇಲ್ಲಿ ನೆಲಸಿ, ಶೈವ ಧರ್ಮದ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡರು.

ನಾವು ಶಂಕರಪೀಠದ ಮುಂದೆ ನಿಂತಾಗ, ಮನದಲ್ಲಿ ಮೂಡಿದ ದಿವ್ಯವಾದ ಅನುಭೂತಿಯನ್ನು ಪದಗಳಲ್ಲಿ ಬಣ್ಣಿಸಲು ಸಾಧ್ಯವಿಲ್ಲ. ಬೆಟ್ಟದ ನೆತ್ತಿಯ ಮೇಲೆ ಇರುವ ಲಿಂಗಾಕೃತಿಯು ನಮ್ಮನ್ನು ಆಯಸ್ಕಾಂತದಂತೆ ಸೆಳೆಯುತ್ತಿತ್ತು. ಮನಸ್ಸು ಎಂಟನೇ ಶತಮಾನಕ್ಕೆ ಹಾರಿ ಹೋಗಿತ್ತು. ದಕ್ಷಿಣ ಭಾರತದ ಕಾಲಡಿಯಿಂದ, ಕಾಶ್ಮೀರದವರೆಗೆ ಪಯಣಿಸಿದ ಶಂಕರರ ಚಿತ್ರ ಮನದಲ್ಲಿ ಮೂಡುತ್ತಿತ್ತು. ಅದ್ವೈತ ಸಿದ್ಧಾಂತದ ಕತೃಗಳಾದ ಶಂಕರರು ಪಠಿಸಿದ, ‘ಅಹಂ ಬ್ರಹ್ಮಾಸ್ಮಿ’ ಎಂಬ ನಾಣ್ಣುಡಿ ಮನದಲ್ಲಿ ಪ್ರತಿಧ್ವನಿಸುತ್ತಿತ್ತು. ಮನೆ ಮನೆಗಳಲ್ಲಿ ಪಠಿಸಲಾಗುತ್ತಿರುವ ಸೌಂದರ್ಯಲಹರಿಯ ಕಂಪು ನನ್ನನ್ನು ಆವರಿಸಿತ್ತು.

ನಮ್ಮ ಗೈಡ್ ಹೇಳುತ್ತಿದ್ದ ಮಾತುಗಳು ನನ್ನನ್ನು ಮತ್ತೆ ವಾಸ್ತವಲೋಕಕ್ಕೆ ಕರೆತಂದವು. ನೂರಾರು ಮಿಲಿಯನ್ ವರ್ಷಗಳ ಹಿಂದೆ ಸಿಡಿದ ಜ್ವಾಲಾಮುಖಿಯಿಂದ ಉಂಟಾದ ಬೆಟ್ಟದ ಮೇಲೆ ಶಂಕರಪೀಠವನ್ನು ನಿರ್ಮಿಸಲಾಗಿದೆ ಎಂದು ಭೂವಿಜ್ಞಾನಿಗಳು ಅಭಿಪ್ರಾಯ ಪಡುತ್ತಾರೆ. ಇಪ್ಪತ್ತು ಅಡಿ ಎತ್ತರದ ಕಲ್ಲು ಬಂಡೆಗಳ ಮೇಲೆ ನಿರ್ಮಿಸಲಾಗಿರುವ ದೇಗುಲ, ಅದ್ಭುತ ಕಾಶ್ಮೀರ ವಾಸ್ತುಶಿಲ್ಪದ ಪ್ರತೀಕವಾಗಿ ನಿಂತಿದೆ. ಅಷ್ಟಭುಜಾಕೃತಿಯ ಅಡಿಪಾಯದ ಮೇಲೆ ಚೌಕಾಕಾರದ ದೇವಾಲಯವನ್ನು ಕಟ್ಟಲಾಗಿದೆ, ಹಾಗೂ ವೃತ್ತಾಕಾರದ ಗರ್ಭಗುಡಿಯಲ್ಲಿ ಸರ್ಪದ ಮೇಲೆ ಶಿವಲಿಂಗವನ್ನು ಸ್ಥಾಪಿಸಲಾಗಿದೆ. ಸಿಖ್ ರಾಜವಂಶಕ್ಕೆ ಸೇರಿದ ದೊರೆ ಗುಲಾಬ್ ಸಿಂಗ್ ಈ ದೇಗುಲಕ್ಕೆ ಮೆಟ್ಟಿಲುಗಳನ್ನು ಕಟ್ಟಿಸಿದನು. ಮೈಸೂರಿನ ಮಹಾರಾಜರು, 1925 ರಲ್ಲಿ, ದೇಗುಲದ ಸುತ್ತಲೂ ಐದು ಸರ್ಚ್‌ಲೈಟ್ ಎಲೆಕ್ಟ್ರಿಕ್ ಕಂಬಗಳನ್ನೂ ಹಾಗೂ ದೇವಾಲಯದ ನೆತ್ತಿಯ ಮೇಲೆ ಒಂದು ದೀಪದ ಕಂಬವನ್ನೂ ಹಾಕಿಸಿ, ಅದರ ಉಸ್ತುವಾರಿಯ ಖರ್ಚನ್ನೂ ಭರಿಸಿದರು. ದ್ವಾರಕಾ ಪೀಠದ ಶಂಕರಾಚಾರ್ಯರು 1961 ರಲ್ಲಿ ಆದಿಶಂಕರರ ಮೂರ್ತಿಯನ್ನು ಪ್ರತಿಷ್ಟಾಪಿಸಿದರು. ಜಮ್ಮು ಕಾಶ್ಮೀರ ಸರ್ಕಾರವು, 1974 ರಲ್ಲಿ ಶಂಕರಪೀಠದವರೆಗೆ ಉತ್ತಮವಾದ ರಸ್ತೆಯನ್ನೂ ನಿರ್ಮಿಸಿದ್ದಾರೆ.
ಶಂಕರಪೀಠದ ದರ್ಶನವನ್ನು ಮಾಡಿ ಕೆಳಗಿಳಿಯುತ್ತಿದ್ದ ಹಾಗೆಯೇ, ಅನ್ನ ದಾಸೋಹ ಮಾಡುತ್ತಿದ್ದವರು, ಆತ್ಮೀಯತೆಯಿಂದ, ‘ಆಯಿಯೇ ಬಹನ್, ಪ್ರಸಾದ್ ಲೀಜಿಯೇ’ ಎಂದು ಕರೆದಾಗ, ಇದೇ ಕೃಷ್ಣ ಪರಮಾತ್ಮನು ಹೇಳಿದ, ‘ವಸುದೈವ ಕುಟುಂಬದ’ ಸಾರ ಅಲ್ಲವೇ ಎಂದೆನ್ನಿಸಿತ್ತು. ಇಲ್ಲಿಂದ ಆರು ಕಿ.ಮೀ. ದೂರದಲ್ಲಿರುವ ಶಾರದಾಪೀಠವು, ಈಗ ಪಾಕಿಸ್ಥಾನ ಆಕ್ರಮಿತ ಕಾಶ್ಮೀರದಲ್ಲಿದೆ. ಇದು ಕೇವಲ ದೇವಾಲಯವಾಗಿರದೆ, ವಿದ್ಯಾಕೇಂದ್ರವಾಗಿತ್ತು. ವಿಶ್ವದ ನಾನಾ ಭಾಗಗಳಿಂದ ಸಾಧಕರು ಉನ್ನತ ಶಿಕ್ಷಣಕ್ಕಾಗಿ ಇಲ್ಲಿಗೆ ಧಾವಿಸಿ ಬರುತ್ತಿದ್ದರು. ಪ್ರಾಚೀನ ಕಾಲದಲ್ಲಿ, ಹಿಂದೂಗಳಿಗೂ, ಬೌದ್ಧರಿಗೂ ಶಾರದಾಪೀಠವು ಅಧ್ಯಯನ ಪೀಠವಾಗಿತ್ತು, ಅಶೋಕ ಚಕ್ರವರ್ತಿಯ ಕಾಲದಿಂದ ದೊರೆ ಲಲಿತಾದಿತ್ಯನ ಕಾಲದವರೆಗೆ ಇದು ಪ್ರಖ್ಯಾತ ಧಾರ್ಮಿಕ ಕೇಂದ್ರವಾಗಿತ್ತು. ಕಾಶ್ಮೀರದ ಶಂಕರ ಪೀಠ ಹಾಗೂ ಅದಕ್ಕೆ ಹೊಂದಿಕೊಂಡಂತಿರುವ ಶಾರದಾಪೀಠ ಪ್ರಾಚೀನ ಭಾರತದ ನಾಗರಿಕತೆಯ ಸಂಕೇತವಾಗಿ ನಿಲ್ಲುತ್ತದೆ.

-ಡಾ.ಗಾಯತ್ರಿದೇವಿ ಸಜ್ಜನ್, ಶಿವಮೊಗ್ಗ

4 Responses

  1. ಒಳ್ಳೆಯ ಮಹತ್ವಪೂರ್ಣ ವಾದ ಲೇಖನ…ಸೊಗಸಾದ ನಿರೂಪಣೆ ಯೊಂದಿಗೆ ಕೊಟ್ಟ ಗಾಯತ್ರಿ ಮೇಡಂ ಗೆ ಧನ್ಯವಾದಗಳು..

  2. ನಯನ ಬಜಕೂಡ್ಲು says:

    ಮಾಹಿತಿಪೂರ್ಣ ಬರಹ

  3. ವಂದನೆಗಳು

  4. ಶಂಕರಿ ಶರ್ಮ says:

    ಕಾಶ್ಮೀರದ ಶಂಕರ ಪೀಠದ ವರ್ಣನೆ ಹಾಗೂ ವಿವರಗಳು ಬಹಳ ಕುತೂಹಲಕಾರಿಯಾಗಿವೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: