ಜಮ್ಮು ಕಾಶ್ಮೀರ :ಹೆಜ್ಜೆ – 1

Share Button


ಹೆಜ್ಜೆ – 1
ಭೂಮಿಯ ಮೇಲಿರುವ ಸ್ವರ್ಗ ಕಾಣಬೇಕೆ, ಬನ್ನಿ ಹಾಗಿದ್ದಲ್ಲಿ, ಕಾಶ್ಮೀರಕ್ಕೆ ಹೋಗೋಣ. ಹಚ್ಚ ಹಸಿರು ಹೊದ್ದ ಹುಲ್ಲುಗಾವಲುಗಳು, ಅಲ್ಲಲ್ಲಿ ಹುಲ್ಲು ಮೇಯುತ್ತಿರುವ ಪಾಶ್ಮೀನ ಉಣ್ಣೆ ಹೊದ್ದ ಕುರಿಗಳು, ವಿಚಿತ್ರವಾಗಿ ಕಾಣುವ ಯಾಕ್ ಮೃಗಗಳು, ದಟ್ಟವಾದ ಕೋನಿಫೆರಸ್ ಅರಣ್ಯಗಳು, ಪ್ರಶಾಂತವಾದ ಸರೋವರಗಳು, ಸುತ್ತಲೂ ನಿಂತ ಹಿಮಾಚ್ಛಾದಿತ ಪರ್ವತಗಳೂ – ಸುಂದರವಾದ ವರ್ಣಚಿತ್ರದಂತೆ ತೋರುತ್ತಿದ್ದವು. ಯಾವ ಚಿತ್ರಕಾರ ಬಿಡಿಸಿದನೋ ಈ ಅದ್ಭುತವಾದ ಚಿತ್ರವನ್ನು? ಕಾಶ್ಮೀರದ ಪ್ರೇಕ್ಷಣೀಯ ಸ್ಥಳಗಳ ಒಂದು ಪಕ್ಷಿ ನೋಟ ನೋಡೋಣ ಬನ್ನಿ – ಕಾಶ್ಮೀರದ ಬೇಸಿಗೆಯ ರಾಜಧಾನಿ ಶ್ರೀನಗರವಾದರೆ, ಜಮ್ಮು ಚಳಿಗಾಲದ ರಾಜಧಾನಿ. ಪೂರ್ವದ ವೆನಿಸ್ ಎಂದೇ ಪ್ರಖ್ಯಾತವಾಗಿರುವ ಶ್ರೀನಗರ, ಕಾಶ್ಮೀರದ ಅಮೂಲ್ಯ ರತ್ನವೆಂದೇ ಖ್ಯಾತಿ ಪಡೆದಿರುವ ದಾಲ್ ಲೇಕ್, ಭಾರತದ ಸ್ವಿಟ್ಸರ್‌ಲ್ಯಾಂಡ್ ಎಂದು ಹೆಸರಾಗಿರುವ ಗುಲ್‌ಮಾರ್ಗ್, ಚಿನ್ನದ ಹುಲ್ಲುಗಾವಲೆಂದೇ ಕರೆಯಲಾಗುವ ಸೋನೋಮಾರ್ಗ್, ಭತ್ತದ ಕಣಜಗಳೆಂದೇ ಪ್ರಸಿದ್ಧಿಯಾಗಿರುವ ಫುಲ್ವಾಮಾ, ಅನಂತ್‌ನಾಗ್ ಜಿಲ್ಲೆಗಳು, ಲೋಕದೊಡೆಯನಾದ ಮಹಾದೇವನ ಆಲಯ ಅಮರನಾಥ, ಲೋಕಮಾತೆಯಾದ ಪಾರ್ವತಿಯ ನೆಲೆಯಾದ ವೈಷ್ಣೋದೇವಿ, ರಮ್ಯವಾದ ಜಲಪಾತ ಡ್ರಂಗ್ ಫಾಲ್ಸ್, ಮೊಗಲ್ ಗಾರ್ಡನ್ಸ್, ಇತ್ಯಾದಿ.

ಇದ್ದಕಿದ್ದಂತೆ, ಎಲ್ಲಿಂದಲೋ ಬಂತು ಗುಂಡು ಹಾರಿಸಿದ ಶಬ್ದ, ಓಡುವ ಜನ, ರಕ್ತದ ಮಡುವಿನಲ್ಲಿ ಬಿದ್ದು ಹೊರಳಾಡುತ್ತಿರುವ ನಾಲ್ಕಾರು ಮಂದಿ, ಬಂದೂಕು ಹಿಡಿದು ಜನರ ರಕ್ಷಣೆಗೆ ಧಾವಿಸುವ ಸೈನಿಕರು, ಗೋಳಾಡುತ್ತಿರುವ ಬಂಧು ಬಾಂಧವರು. ಸುಂದರವಾದ ಕಾಶ್ಮೀರಿ ಕಣಿವೆಯಲ್ಲಿ ಜನರ ಬದುಕನ್ನು ನರಕ ಮಾಡುತ್ತಿರುವ ರಕ್ಕಸರು, ಯಾರಿವರು? ಈ ರಮ್ಯವಾದ, ಪ್ರಶಾಂತವಾದ ಕಾಶ್ಮೀರಿ ಕಣಿವೆಗಳಲ್ಲಿ ಶಾಂತಿ ಎಂದು ನೆಲಸೀತು? ಅಖಂಡ ಭಾರತದ ವಿಭಜನೆಯಾದ ನಂತರ ಈ ಪ್ರದೇಶದಲ್ಲಿ ಸದಾ ಆತಂಕ, ಹಿಂಸಾಚಾರ ನಡೆಯುತ್ತಲೇ ಇದೆ. ನಾವು ಕಾಶ್ಮೀರದ ಒಂದು ಭಾಗವನ್ನು ಪಾಕ್ ಆಕ್ರಮಿತ ಪ್ರದೇಶವೆಂದು ಕರೆದರೆ, ಪಾಕಿಸ್ಥಾನದವರು ನಮ್ಮ ದೇಶದ ಭಾಗವಾದ ಕಾಶ್ಮೀರವನ್ನು ‘ಆಜಾದ್ ಕಾಶ್ಮೀರವೆಂದು’ ಪರಿಗಣಿಸಿ, ಪ್ರತಿಭಟನೆ ಮಾಡುತ್ತಲೇ ಬಂದಿದ್ದಾರೆ. ಭಾರತಕ್ಕೆ ಸ್ವಾತಂತ್ರ್ಯ ಬಂದು ಎಪ್ಪತ್ತೈದು ವರ್ಷಗಳೇ ಕಳೆದರೂ, ಕಾಶ್ಮೀರ ಕಣಿವೆಯಲ್ಲಿ, ಪಾಕ್ ಪ್ರಚೋದಿತ ದಾಳಿಗಳು ನಿರಂತರವಾಗಿ ನಡೆಯುತ್ತಲೇ ಇವೆ. ಅಮಾಯಕ ಜನರು ಬಲಿಯಾಗುತ್ತಲೇ ಇದ್ದಾರೆ.

ಚರಿತ್ರೆಯ ಪುಟಗಳನ್ನು ತಿರುಗಿಸಿ ನೋಡಿದರೆ ಅನೇಕ ರಾಜಕೀಯ ಪಲ್ಲಟಗಳು ಕಂಡು ಬರುವುದು. ಮೊದಲಿಗೆ ಕಾಶ್ಮಿರವನ್ನು ಆಳುತ್ತಿದ್ದ ಹಿಂದೂ ರಾಜರ ಕಾಲದಲ್ಲಿ ಹಿಂದೂ ಧರ್ಮವು ಉತ್ತುಂಗಕ್ಕೇರಿತ್ತು. ನಂತರ ಬಂದ ಮೌರ್ಯರು, ಕುಶಾನರ ಕಾಲದಲ್ಲಿ ಹಿಂದೂ ಧರ್ಮದ ಜೊತೆ ಜೊತೆಗೇ ಬೌದ್ಧ ಧರ್ಮವೂ ಪ್ರಚಲಿತವಾಯಿತು. ಹದಿನಾಲ್ಕನೇ ಶತಮಾನದಲ್ಲಿ ದಂಡೆತ್ತಿ ಬಂದ ಪರ್ಶಿಯನ್ ನಂತರ ಬಂದ ಮೊಗಲ್ ಅರಸರ ಕಾಲದಲ್ಲಿ ಇಸ್ಲಾಂ ಧರ್ಮವು ಮುನ್ನೆಲೆಗೆ ಬಂತು. ಹತ್ತೊಂಬತ್ತನೇ ಶತಮಾನದಲ್ಲಿ ಸಿಖ್ಖರು ಕಾಶ್ಮೀರವನ್ನು ವಶಪಡಿಸಿಕೊಂಡರು. ನಂತರದಲ್ಲಿ ಬಂದ ಡೋಗ್ರಾ ರಾಜರಾದ ಗುಲಾಬ್‌ಸಿಂಗ್ ಮತ್ತು ರಾಜಾ ಹರಿಸಿಂಗ್ ಕಾಲದಲ್ಲಿ ಹಿಂದೂ ಧರ್ಮವನ್ನು ಪುನರುತ್ಥಾನ ಮಾಡಲಾಯಿತು. ಅನೇಕ ದೇಗುಲಗಳನ್ನು ನಿರ್ಮಿಸಲಾಯಿತು. ಸ್ವಾತಂತ್ರ್ಯಾನಂತರ, ಡೋಗ್ರಾ ರಾಜನಾದ ಹರಿಸಿಂಗ್ ಕಾಲದಲ್ಲಿ ಕಾಶ್ಮೀರವನ್ನು ಅಕ್ಟೋಬರ್ 7, 1947 ರಂದು ಭಾರತದ ಜೊತೆ ಒಗ್ಗೂಡಿಸಿಲಾಯಿತು.

ಭಾರತ ಸರ್ಕಾರ ಅಗಸ್ಟ್ 5, 2019 ರಂದು ಜಮ್ಮು ಮತ್ತು ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಿ, ಲಡಾಕ್ ಪ್ರಾಂತ್ಯವನ್ನು ಪ್ರತ್ಯೇಕ ರಾಜ್ಯವನ್ನಾಗಿ ಪರಿಗಣಿಸಿದ್ದು ಒಂದು ಐತಿಹಾಸಿಕ ದಾಖಲೆ. ಅಕ್ಟೋಬರ್ 31, 2019 ರಂದು, ಜಮ್ಮು ಮತ್ತು ಕಾಶ್ಮೀರಕ್ಕೆ, 370 ಆರ್ಟಿಕಲ್ ಪ್ರಕಾರ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದ್ದು ಮತ್ತೊಂದು ಚಾರಿತ್ರಿಕ ಮೈಲಿಗಲ್ಲೆಂದು ಪರಿಗಣಿಸಲಾಗಿದೆ. ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಈ ಘಟನೆ ದೊಡ್ಡ ವಿವಾದವನ್ನೇ ಸೃಷ್ಟಿಸಿದೆ. ಭಾರತ ಮಾತ್ರ, ಈ ವಿಷಯ ಭಾರತದ ಆಂತರಿಕ ವಿದ್ಯಮಾನವೆಂದೂ, ಪರಕೀಯರ ಹಸ್ತಕ್ಷೇಪ ಸಲ್ಲದೆಂದೂ ಕಡ್ಡಿ ತುಂಡು ಮಾಡಿದಂತೆ ಹೇಳುತ್ತಿದೆ. ಭಾರತದ ಮಿಲಿಟರಿ ಪಡೆಯವರು ಈ ಪ್ರದೇಶದಲ್ಲಿ ಶಾಂತಿ ಸ್ಥಾಪಿಸಲು, ಹಗಲಿರಿಳೂ ಶ್ರಮಿಸುತ್ತಿವೆ. ಹಾಗಾಗಿ, ಇತ್ತೀಚೆಗೆ ಪ್ರವಾಸಿಗರು, ಚೆಲುವಾದ ಕಾಶ್ಮೀರ ಕಣಿವೆಯತ್ತ ಮುಖ ಮಾಡುತ್ತಿದ್ದಾರೆ.

ನಾವು ಐದಾರು ವರ್ಷಗಳಿಂದ ಕಾಶ್ಮೀರಕ್ಕೆ ಭೇಟಿ ನೀಡಲು ಪ್ರಯತ್ನ ನಡೆಸಿದ್ದೆವು. ಪ್ರತಿಷ್ಠಿತ ಪ್ರವಾಸಿ ಸಂಸ್ಥೆಯಾದ ನಿರ್ಮಲ ಟ್ರಾವೆಲ್ಸ್‌ನಲ್ಲಿ ಮುಂಗಡವನ್ನೂ ನೀಡಿ ಸೀಟು ಕಾಯ್ದಿರಿಸಿದ್ದೆವು. ಆದರೆ, ಒಮ್ಮೆ ಭಾರೀ ಮಳೆಯಾದ ಕಾರಣ, ಪ್ರವಾಸವನ್ನು ರದ್ದುಗೊಳಿಸಿದರು, ಮತ್ತೊಮ್ಮೆ ಭಯೋತ್ಪಾದಕರ ಆಕ್ರಮಣದ ಕಾರಣ ಪ್ರವಾಸವನ್ನು ರದ್ದುಗೊಳಿಸಲಾಗಿತ್ತು. ನಮಗೂ, ದಿನ ನಿತ್ಯ ನಡೆಯುತ್ತಿದ್ದ ಮತೀಯ ಗಲಭೆ, ದೊಂಬಿ, ಕಲ್ಲೆಸೆತ, ಬಂದ್, ಅಶ್ರುವಾಯು, ಗುಂಡಿನ ಚಕಮಕಿ ಇತ್ಯಾದಿ ಸುದ್ಧಿಯನ್ನು ಕೇಳಿ ಕೇಳಿ ಮನಸ್ಸು ರಾಡಿಯಾಗಿತ್ತು. ಆದರೂ, ಬಾಲಿವುಡ್ ಸಿನೆಮಾಗಳಲ್ಲಿ ನೋಡಿದ್ದ ಕಾಶ್ಮೀರದ ದೃಶ್ಯಗಳು ನೆನಪಾದಾಗಲೆಲ್ಲಾ, ಕಾಶ್ಮೀರದ ಚೆಲುವನ್ನು ಕಣ್ತುಂಬಿಕೊಳ್ಳಲು ಮನಸ್ಸು ಕಾತರಿಸುತ್ತಿತ್ತು.


ನಮ್ಮ ಕನಸುಗಳನ್ನು, ಗಿರಿಜಕ್ಕನ ಮಗ ವಾಗೀಶ, ನನಸು ಮಾಡಿದ್ದ. ಒಂದೇ ವಾರದಲ್ಲಿ, ಎಲ್ಲಾ ಪೂರ್ವಸಿದ್ಧತೆಯನ್ನೂ ಮಾಡಿ ಎಂಟು ಜನರ ತಂಡವನ್ನು ಹೊರಡಿಸಿದ್ದ. ಮಾರ್ಚ್ 2019 ರಂದು ಬೆಂಗಳೂರಿನ ವಿಮಾನ ನಿಲ್ದಾಣದಿಂದ ಡೆಲ್ಲಿಯ ಮೂಲಕ ಶ್ರೀನಗರವನ್ನು ಸೇರಿದೆವು. ವಿಮಾನ ನಿಲ್ದಾಣದಿಂದ ನಾವು ಕಾಯ್ದಿರಿಸಿದ್ದ ಹೊಟೇಲಿಗೆ ಬರುವ ಹಾದಿಯಲ್ಲಿ, ದಾರಿಯುದ್ದಕ್ಕೂ ಸೈನಿಕರು ಬಂದೂಕು ಹಿಡಿದು ನಿಂತಿದ್ದರು. ಉದ್ದನೆಯ ನಿಲುವಂಗಿ ಧರಿಸಿ, ಅಲ್ಲಲ್ಲಿ ಗುಂಪು ಗುಂಪಾಗಿ ನಿಂತಿದ್ದ ಕಾಶ್ಮೀರಿ ನಾಗರಿಕರು, ಅವರ ಎತ್ತರವಾದ ನಿಲುವು, ನೀಳವಾದ ಮೂಗು, ಮೆಹಂದಿ ಲೇಪಿತ ಗಡ್ಡ, ಏನನ್ನೋ ಅರಸುತ್ತಿರುವ ಕಣ್ಣುಗಳು – ನಮಗಂತೂ ಎಲ್ಲರೂ ಭಯೋತ್ಪಾದಕರಂತೆ ಕಾಣುತ್ತಿದ್ದರು. ಹೊಟೇಲಿನವರು, ‘ಸಂಜೆಯಾದ ಮೇಲೆ ಹೊರಗೆ ತಿರುಗಾಡಲು ಹೋಗಬೇಡಿ’ ಎಂಬ ಎಚ್ಚರಿಕೆಯನ್ನೂ ನೀಡಿದ್ದರು. ಮೊದಲೆರೆಡು ದಿನ, ಯಾರನ್ನು ನೋಡಿದರೂ, ಅವನು ತನ್ನ ಉಡುಪಿನೊಳಗಿಂದ ಪಿಸ್ತೂಲ್ ತೆಗೆದು ಗುಂಡು ಹಾರಿಸಬಹುದೇನೋ ಎಂಬ ಆತಂಕ ಮೂಡುತ್ತಲೇ ಇತ್ತು. ಆದರೆ ಎರಡು ದಿನ ಕಳೆಯುವಷ್ಟರಲ್ಲಿ, ನಮ್ಮ ಅನುಮಾನಗಳು ದೂರಾದವು. ಅವರು ಹೇಳಿದ ಮೊದಲ ಮಾತು – ‘ಪ್ರವಾಸಿಗರು ನಮ್ಮ ಅನ್ನದಾತರು, ಅವರೇ ನಮ್ಮ ಪಾಲಿನ ದೇವರು. ಅವರ ಸುರಕ್ಷತೆ ನಮ್ಮ ಮೊದಲ ಆದ್ಯತೆ.’ ವರ್ಷದಲ್ಲಿ ಆರು ತಿಂಗಳು, ಚಳಿ, ಮಳೆ, ಹಿಮಪಾತ ಆಗುವ ನಾಡಿದು. ಇವರ ಆದಾಯದ ಮೂಲಗಳು – ವ್ಯವಸಾಯ ಹಾಗೂ ಪ್ರವಾಸೋದ್ಯಮ. ಅದೃಷ್ಟವಶಾತ್ 2022 ರಲ್ಲಿ, ಅಮರನಾಥ ಯಾತ್ರೆಗೆ ತೆರಳಿದಾಗ, ಮತ್ತೊಮ್ಮೆ ಕಾಶ್ಮೀರ ನೋಡುವ ಸೌಭಾಗ್ಯ ದೊರೆಯಿತು. ಒಮ್ಮೆ ಚಳಿಗಾಲದಲ್ಲಿ, ಹಿಮಪಾತವಾಗುತ್ತಿದ್ದ ನಾಡನ್ನು ಕಂಡರೆ, ಮತ್ತೊಮ್ಮೆ ಬೇಸಿಗೆಯಲ್ಲಿ ಹಚ್ಚ ಹಸಿರು ಹುಲ್ಲುಗಾವಲುಗಳು, ನಳನಳಿಸುತ್ತಿದ್ದ ಬಣ್ಣ ಬಣ್ಣದ ಹೂಗಳು, ಸೇಬು ಹಣ್ಣುಗಳನ್ನು ಹೊತ್ತು ತೂಗುತ್ತಿದ್ದ ಮರಗಳೂ, ಕೇಸರಿ ಹೊಲಗಳು ಹಾಗೂ ಲ್ಯಾಂವೆಂಡರ್ ಸಸ್ಯಗಳ ಪರಿಮಳವನ್ನೂ ಹೀರಿ ಸಂಭ್ರಮಿಸಿದೆವು.

(ಮುಂದುವರಿಯುವುದು)

– ಡಾ.ಗಾಯತ್ರಿ ದೇವಿ ಸಜ್ಜನ್ , ಶಿವಮೊಗ್ಗ

8 Responses

 1. ಉತ್ತಮ ಲೇಖನ ಗಾಯತ್ರಿ ಮೇಡಂ ಅದರಲ್ಲಿ ಆಶಯ …ನೆರವೇರಲೆಂದು ನಾನೂ ಆಶಿಸುತ್ತೇನೆ…

 2. ನಯನ ಬಜಕೂಡ್ಲು says:

  ಚೆನ್ನಾಗಿದೆ ಲೇಖನ. ಹಾಗೆಯೇ ಕಾಶ್ಮೀರ ಎಂದೊಡನೆ ಅಲ್ಲಿ ನಡೆದ /ನಡೆಯುತ್ತಿರುವ ಹೃಧಯ ವಿದ್ರಾವಕ ಘಟನೆಗಳು ಕಣ್ಣ ಮುಂದೆ ಬಂದು ಒಂದು ನೋವಿನ ಅಲೆ ಮನಸ್ಸನ್ನು ಆವರಿಸುತ್ತದೆ.

 3. ವಂದನೆಗಳು

 4. SHARANABASAVEHA K M says:

  ತುಂಬಾ ಚೆನ್ನಾಗಿ ಮೂಡಿ ಬಂದಿದೆ ಲೇಖನ. ಪ್ರವಾಸ ಹೋಗಲು ಆಗದ ನಮ್ಮಂತಹವರಿಗೆ ಕಣ್ಣಿಗೆ ಕಟ್ಟುವಂತಿದೆ ಈ ಬರಹ. ಪ್ರತಿವಾರ ಕಾಯುವಂತೆ ಮಾಡಿದೆ. ಅಭಿನಂದನೆಗಳು ಮೇಡಂ

 5. Harish NS says:

  Wonderful read.

 6. Padma Anand says:

  ಅತ್ಯಂತ ಸುಂದರವಾಗಿ ಮೂಡಿಬಂದಿದೆ, ಸುಂದರವಾದ ಕಾಶ್ಮೀರದ ವರ್ಣನೆ.

 7. ಶಂಕರಿ ಶರ್ಮ says:

  ಚೆಲುವಾದ ಕಾಶ್ಮೀರದ ಮಡಿಲಿನಲ್ಲಿ ಭಯೋತ್ಪಾದಕರ ಅಟ್ಟಹಾಸವು ಮನದಲ್ಲಿ ಭೀತಿಯನ್ನು ಉಂಟುಮಾಡುತ್ತದೆ… ಚಂದದ ಲೇಖನ ಮೇಡಂ.

 8. ಸಹ್ರುದಯ ಓದುಗರ ಪ್ರತಿಕ್ರಿಯೆಗೆ ನನ್ನ ಹೃದಯಪೂರ್ವಕ ವಂದನೆಗಳು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: