ಕಥೆ : ತಲ್ಲಣ….ಭಾಗ 1

Share Button


ಭಾನುವಾರವಾದ್ದರಿಂದ ಕ್ಲಿನಿಕ್‌ಗೆ ರಜೆಯಿದ್ದ ಪ್ರಯುಕ್ತ ಬೆಳಗಿನ ಎಲ್ಲ ಕೆಲಸಗಳನ್ನು ಧಾವಂತವಿಲ್ಲದೆ ಮುಗಿಸಿದರು ಡಾ.ಜಯಂತ್. ಸಂಜೆ ತಮ್ಮ ಹೆಂಡತಿ ರಜನಿಯೊಡನೆ ಮನೆಯ ಮುಂಭಾಗದಲ್ಲಿನ ಕೈತೋಟದಲ್ಲಿ ಅಡ್ಡಾಡುತ್ತಾ ಆಕೆಯು ಮುತುವರ್ಜಿಯಿಂದ ಬೆಳೆಸಿದ್ದ ನಾನಾ ಬಗೆಯ ಹೂವಿನ ಗಿಡಗಳನ್ನು ವೀಕ್ಷಿಸುತ್ತ ತಮಗೆ ತಿಳಿದಂತೆ ಸಲಹೆ ಸೂಚನೆಗಳನ್ನು ಕೊಡುತ್ತಿದ್ದರು.

ಅಷ್ಟರಲ್ಲಿ ಅವರ ಮನೆಯ ಗೇಟಿನ ಹೊರಗೆ ಯಾರದ್ದೋ ನೆರಳು ಸರಿದಂತಾಯಿತು. ತಲೆಯೆತ್ತಿದ ರಜನಿ ”ರೀ, ನೋಡಿ ಅಲ್ಲಿ ಸರಿದಾಡುತ್ತಿರುವ ವ್ಯಕ್ತಿಯನ್ನು. ನಾನಿವರನ್ನು ಸುಮಾರು ಒಂದೆರಡು ತಿಂಗಳ ಅವಧಿಯಲ್ಲಿ ಅನೇಕ ಸಾರಿ ನೋಡುತ್ತಿದ್ದೇನೆ. ವಾಚ್‌ಮ್ಯಾನ್ ರಂಗಪ್ಪನನ್ನು ಏನೋ ಕೇಳುತ್ತಿರುತ್ತಾರೆ. ಒಂದೆರಡು ನಿಮಿಷ ನಿಲ್ಲುತ್ತಾರೆ. ಅತ್ತಿತ್ತ ನೋಡುತ್ತಾರೆ. ಮತ್ತೆ ಹೊರಟು ಹೋಗುತ್ತಾರೆ. ನಾನು ಅವರ ಚಲನವಲನಗಳನ್ನು ಗಮನಿಸಿದ್ದೇನೆ. ಒಂದೊಂದು ಸಾರಿ ಗಿಡಗಳಿಗೆ ನೀರು ಹಾಯಿಸುವಾಗ, ಮಾಲಿಯ ಹತ್ತಿರ ಗಿಡಗಳಿಗೆ ಗೊಬ್ಬರ ಹಾಕಿಸುತ್ತಿರುವಾಗ, ಔಷಧಿ ಸಿಂಪಡಿಸುತ್ತಿರುವಾಗ, ನಮ್ಮ ಮನೆಗ್ಯಾರಾದರೂ ಬಂದು ಅವರನ್ನು ಬೀಳ್ಕೊಡಲು ಹೊರಬಂದಾಗ ಕಾಂಪೌಂಡಿನ ಹೊರಗಡೆ ಇದೇ ವ್ಯಕ್ತಿ ಕಾಣಿಸಿಕೊಂಡಿದ್ದಾರೆ. ನೋಡುವುದಕ್ಕೆ ವಿದ್ಯಾವಂತರಂತೆ, ಅನುಕೂಲವಂತರಂತೆ ಕಾಣಬರುತ್ತಾರೆ. ಕಾರಿನಲ್ಲಿ ಬಂದು ಸ್ವಲ್ಪ ದೂರದಲ್ಲೇ ನಿಲ್ಲಿಸಿ ಇಳಿದು ನಮ್ಮ ಮನೆಯತ್ತಲೇ ಬರುವುದನ್ನು ಕಂಡಿದ್ದೇನೆ. ಆದರೆ ಒಳಕ್ಕೆ ಯಾವಾಗಲೂ ಬಂದಿಲ್ಲ. ಏನೋ ಸಮಸ್ಯೆಯಿಂದ ಒದ್ದಾಡುತ್ತಿರುವ ಹಾಗೆ ಕಾಣುತ್ತದೆ. ನೀವೊಮ್ಮೆ ಅವರನ್ನು ಕರೆದು ಮಾತನಾಡಿಸಬಾರದೇ?” ಎಂದು ಮೆಲುದನಿಯಲ್ಲಿ ಕೇಳಿದರು.

ರಜನಿಯ ಪ್ರಶ್ನೆಯನ್ನು ಕೇಳಿ ಡಾ.ಜಯಂತ್ ”ಅವರನ್ನು ನಾನು ಕರೆದು ಮಾತನಾಡಿಸಬೇಕಾದ ಆವಶ್ಯಕತೆ ಇಲ್ಲ. ಏಕೆಂದರೆ ಅವರು ಈಗಾಗಲೇ ನನ್ನ ಕ್ಲಿನಿಕ್ಕಿಗೆ ಬಂದಿದ್ದರು ”ಎಂದುತ್ತರಿಸಿದರು.

”ಏನು ಕ್ಲಿನಿಕ್ಕಿಗೆ ಬಂದಿದ್ದರೇ ! ಏನಂತೆ ಅವರ ಸಮಸ್ಯೆ? ಏನು ಹೇಳಿದರು? ಯಾಕೆ ಹೀಗೆ ಓಡಾಡುತ್ತಾರೆ?”
”ಶ್ ಮೆಲ್ಲಗೆ, ಅವರ ಹೆಸರು ರಾಘವಾ. ಬ್ಯಾಂಕೊಂದರಲ್ಲಿ ಕೆಲಸದಲ್ಲಿದ್ದು ಈಗ ಸ್ವಯಂನಿವೃತ್ತಿ ಪಡೆದಿದ್ದಾರೆ. ಒಂದು ಟ್ಯುಟೋರಿಯಲ್ ನಡೆಸುತ್ತಿದ್ದಾರೆ. ಸೈನ್ಸ್, ಮ್ಯಾಥೆಮ್ಯಾಟಿಕ್ಸ್ ಪಾಠ ಮಾಡುತ್ತಿದ್ದಾರಂತೆ. ಹೀಗೆ ಪರಿಚಯ ಮಾಡಿಕೊಂಡರು. ಸ್ವಲ್ಪ ಹೊತ್ತು ಮಾತನಾಡದೆ ಮೌನವಾಗಿ ಕುಳಿತಿದ್ದರು. ನಾನು ಯಾರಿಗೆ ಏನು ಸಮಸ್ಯೆ? ಎಂದು ಕೇಳಿದ್ದಕ್ಕೆ ಅವರು ತಡೆದೂ ತಡೆದೂ ಡಾಕ್ಟರೇ ನನಗೇ ಸಮಸ್ಯೆ. ತಪ್ಪು ತಿಳಿಯಬೇಡಿ, ಹೇಗೆ ಹೇಳಬೇಕೆಂದು ತೋಚುತ್ತಿಲ್ಲ. ಹೇಳಿಕೊಳ್ಳಬೇಕೆಂದಾಗ ನಾನೇ ಮತ್ತೆ ಬರುತ್ತೇನೆ. ನಿಮ್ಮ ಸಂದರ್ಶನದ ಸಮಯ ಹಾಳು ಮಾಡಿದ್ದಕ್ಕೆ ಕ್ಷಮೆಯಿರಲಿ ”ಎಂದು ಎದ್ದು ಹೊರಟರು. ನನ್ನ ವೃತ್ತಿಯಲ್ಲಿ ಇಂಥಹವರು, ಮತ್ತು ಇದಕ್ಕಿಂತಲೂ ವಿಚಿತ್ರವಾಗಿ ವರ್ತಿಸುವ ವ್ಯಕ್ತಿಗಳನ್ನು ಕಂಡಿದ್ದೇನೆ. ”ಅಯ್ಯೋ ಅದಕ್ಕಾಗಿ ಏಕೆ ಕ್ಷಮೆ ಕೋರುತ್ತೀರಿ. ನಿಮಗೆ ಹೇಳಬೇಕೆನ್ನಿಸಿದಾಗಲೇ ಬನ್ನಿ ಎಂದು ಹೇಳಿಕಳುಹಿದ್ದೆ. ಅಂದಿನಿಂದ ಅವರು ನನಗೂ ಅನೇಕ ಬಾರಿ ಕಾಣಿಸಿಕೊಂಡಿದ್ದಾರೆ. ಆದರೆ ನಾನು ಅವರನ್ನು ಕಂಡರೂ ಕಾಣದಂತೆ ಸುಮ್ಮನಾಗಿದ್ದೇನೆ. ಅವರನ್ನು ನಾನಾಗಿ ಮಾತನಾಡಿಸಲು ಹೋಗಿಲ್ಲ. ನಮ್ಮ ಕ್ಲಿನಿಕ್ಕಿನ ವಾಚ್‌ಮನ್ ರಂಗಪ್ಪನಿಗೂ ರಿಸೆಪ್ಷನಿಸ್ಟ್ ದೇವಪ್ಪನಿಗೂ ಅವರನ್ನು ತೋರಿಸಿ ಆ ವ್ಯಕ್ತಿ ಏನು ಕೇಳಿದರೂ, ಹೇಳಿದರೂ ಗಡುಸಾಗಿ ಮಾತನಾಡಬೇಡಿ ಎಂದು ಸೂಚನೆ ನೀಡಿದ್ದೇನೆ. ಈಗಲೂ ಅಷ್ಟೇ ನೀನೂ ಅವರ ಕಡೆ ಹೆಚ್ಚು ಗಮನ ಕೊಡಬೇಡ” ಎಂದರು.

ರಜನಿ ತನ್ನ ಪತಿಯ ಮಾತಿಗೆ” ನೀವ್ಹೇಳುವುದೂ ಸರಿ, ಆ ವ್ಯಕ್ತಿ ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳದೆ ಹೀಗೆ ಅಡ್ಡಾಡುತ್ತಾ ಕಾಲಹರಣ ಮಾಡುತ್ತಿದ್ದಾರಲ್ಲಾ ಅಂತನ್ನಿಸಿತು. ಅಲ್ಲದೆ ಏಕಾ‌ಏಕಿ ಮನೆಯೊಳಕ್ಕೆ ನುಗ್ಗಿದರೇನು ಗತಿ? ”ಎಂದು ಆತಂಕ ವ್ಯಕ್ತ ಪಡಿಸಿದರು.

‘ಛೇ..ಛೇ ಹಾಗಾಗಲಾರದು. ಏನೋ ಸುಲಭವಾಗಿ ಹೇಳಿಕೊಳ್ಳಲಾರದ ಸಂದಿಗ್ಧತೆಯಲ್ಲಿ ಸಿಲುಕಿದಂತಿದೆ. ಅವರಿಂದ ಯಾವುದೇ ಭಯವಿಲ್ಲ. ಇಲ್ಲದ ಆತಂಕಪಡಬೇಡ.’ ಎಂದು ಸಮಾಧಾನ ಹೇಳಿ ಓರೆಗಣ್ಣಿಂದ ಹೊರಗಿನ ವ್ಯಕ್ತಿಯನ್ನು ಗಮನಿಸಿ ಮನೆಯೊಳಕ್ಕೆ ನಡೆದರು ಡಾ.ಜಯಂತ್. ರಜನಿಯೂ ಗಂಡನನ್ನು ಹಿಂಬಾಲಿಸಿದರು.

ಒಳಗೆ ಬಂದ ಜಯಂತ್ ಟಿ.ವಿ.ರಿಮೋಟ್ ಹಿಡಿದು ಒಂದಾದಮೇಲೆ ಒಂದರಂತೆ ಚಾನಲ್‌ಗಳನ್ನು ಬದಲಾಯಿಸುತ್ತಾ ತಮ್ಮ ಮನಸ್ಸಿಗೊಪ್ಪುವ ಯಾವ ಕಾರ್ಯಕ್ರಮವೂ ಕಾಣದೆ ಬೇಸರದಿಂದ ರಿಮೋಟನ್ನು ಹೆಂಡತಿಯ ಕೈಯಿಗೆ ಕೊಟ್ಟು ಅಲ್ಲಿಯೇ ಟಿಪಾಯಿಯ ಮೇಲಿದ್ದ ಪುಸ್ತಕವೊಂದನ್ನು ಕೈಗೆತ್ತಿಕೊಂಡರು. ಅಷ್ಟರಲ್ಲಿ ಅವರ ಮೊಬೈಲ್ ಸದ್ದುಮಾಡಿತು. ತೆಗೆದುಕೊಂಡು ”ಹಲೋ” ಎಂದರು.

”ಡಾಕ್ಟರ್.. ನಾನು ರಾಘವ ಮಾತನಾಡುತ್ತಿದ್ದೇನೆ, ಅದೇ ಬ್ಯಾಂಕ್ ಉದ್ಯೋಗಿ, ಟ್ಯುಟೋರಿಯಲ್ ನಡೆಸುವವನು..ಒಂದೆರಡು ತಿಂಗಳ ಹಿಂದೆ ತಮ್ಮ ಬಳಿಗೆ ಬಂದಿದ್ದೆ ಸಾರ್, ನೆನಪಿದೆಯಾ?”
”ಓ..ನೆನಪಿದೆ ರಾಘವಾರವರೇ ಏನು ಸಮಾಚಾರ ಹೇಳಿ ಏಕೆ ಕರೆ ಮಾಡಿದಿರಿ?”
”ನಾಳೆ ನಾನು ನಿಮ್ಮ ಕ್ಲಿನಿಕ್ಕಿಗೆ ಬಂದು ನಿಮ್ಮನ್ನು ಭೇಟಿಮಾಡಬೇಕೆಂದಿದ್ದೇನೆ. ನಿಮ್ಮ ಬಳಿ ಪರ್ಸನಲ್ಲಾಗಿ ಮಾತನಾಡಬೇಕು. ಆ ಸಮಯದಲ್ಲಿ ಬೇರೆ ಯಾರೂ ಇರುವುದು ನನಗೆ ಇಷ್ಟವಿಲ್ಲ. ಅವರ ಮುಂದೆ ಸಂಕೋಚವಾಗುತ್ತದೆ. ದಯವಿಟ್ಟು ಅವಕಾಶ ಮಾಡಿಕೊಡುವಿರಾ ಪ್ಲೀಸ್”
”ಸಂಕೋಚಪಡುವ ಆವಶ್ಯಕತೆಯಿಲ್ಲ. ನಾನು ಒಬ್ಬ ಪೇಷೆಂಟಿನ ವಿಷಯಗಳನ್ನು ಮತ್ತೊಬ್ಬರ ಮುಂದೆ ಹೇಳುವ ಪರಿಪಾಠ ಹೊಂದಿಲ್ಲ. ಎಲ್ಲವೂ ಗೋಪ್ಯವಾಗಿರುತ್ತದೆ. ಧೈರ್ಯವಾಗಿ ಬರಬಹುದು. ಮನಸ್ಸಿನಲ್ಲೇ ಕೊರಗನ್ನಿಟ್ಟುಕೊಂಡು ಸಂಕಟ ಪಡಬಾರದು. ಎಲ್ಲ ಸಮಸ್ಯೆಗಳಿಗೂ ಪರಿಹಾರವಿದ್ದೇ ಇರುತ್ತದೆ. ನೀವು ಹತ್ತುಗಂಟೆಯ ಹೊತ್ತಿಗೆ ಕ್ಲಿನಿಕ್ಕಿಗೆ ಬನ್ನಿ” ಎಂದು ಸಮಯ ನಿಗದಿಪಡಿಸಿ ಮಾತು ಮುಗಿಸಿದರು.

ಪಕ್ಕದಲ್ಲಿಯೆ ಕುಳಿತಿದ್ದ ರಜಿನಿ ‘ಯಾರು?’ ಎಂದಳು. ”ಅದೇ ಈಗ ಗೇಟಿನ ಬಳಿ ನಮಗೆ ಕಾಣಿಸಿಕೊಂಡ ವ್ಯಕ್ತಿ ರಾಘವ. ನಿನಗೆ ಆತಂಕ ಉಂಟುಮಾಡಿದಾತ. ಎಂದುತ್ತರಿಸಿದರು” ಜಯಂತ್.

”ವ್ಹಾವ್ ! ಅಂತೂ ಆತನಿಗೆ ಜ್ಞಾನೋದಯವಾಗುತ್ತಿದೆ. ಅದೇನು ಅವರ ಪ್ರಾಬ್ಲಮ್ ಕೇಳಿ ಬಗೆಹರಿಸಿ. ಆ ಪುಣ್ಯಾತ್ಮ ನಮ್ಮ ಮನೆ ಪ್ರದಕ್ಷಿಣೆ ಹಾಕುವುದು ತಪ್ಪಿದಂತಾಗುತ್ತದೆ ”ಎಂದು ನಕ್ಕಳು.

”ಹೇ ಮಾರಾಯಿತಿ ವ್ಯಕ್ತಿಗಳ ಬಗ್ಗೆ ಹಾಗೆಲ್ಲ ಕೇವಲವಾಗಿ ಮಾತನಾಡಬಾರದು. ಸುಪ್ತ ಮನಸ್ಸಿನ ಸಮಸ್ಯೆಗಳ ಬಗ್ಗೆ ನಿನಗೆ ತಿಳಿದಿಲ್ಲ. ಅವು ಬಹುಸೂಕ್ಷ್ಮ. ಸಂಕೀರ್ಣವಾದವು. ಕೈಯಲ್ಲಿ ಹಿಡಿದುಕೊಂಡಿರುವ ಪಕ್ಷಿಯಂತೆ. ಕತ್ತನ್ನು ಬಿಗಿಯಾಗಿ ಒತ್ತಿದರೆ ಅದು ಸಾಯುತ್ತದೆ. ಸಡಿಲ ಬಿಟ್ಟರೆ ಅದು ಹಾರಿಹೋಗುತ್ತದೆ. ನಿಧಾನವಾಗಿ ಕಾಳಜಿಯಿಂದ ಸಂತೈಸುತ್ತಾ ತಹಬಂದಿಗೆ ತಂದು ವಾಸ್ತವಿಕ ಅರಿವನ್ನು ಮೂಡಿಸಬೇಕಾಗುತ್ತದೆ ”ಎಂದರು ಜಯಂತ್.

”ಏನಾದರೂ ಹೇಳಿದರೆ ಸಾಕು ನಿಮ್ಮ ಲೆಕ್ಚರ್ ಪ್ರಾರಂಭಿಸಿಬಿಡುತ್ತೀರ” ಎನ್ನುವಷ್ಟರಲ್ಲಿ ಅಡುಗೆ ಭಟ್ಟ ಮಾಧವ” ಅಮ್ಮಾ ಅದನ್ನೆಲ್ಲ ಜಯಂತಪ್ಪನವರಿಗೇ ಬಿಟ್ಟುಬಿಡಿ. ನೀವಿಲ್ಲಿ ಬನ್ನಿ ರಾತ್ರಿಗೆ ಅಡಿಗೆ ಏನುಮಾಡಬೇಕು ಹೇಳಿ” ಎಂದು ರಜನಿಯನ್ನು ಕರೆದನು.
”ಹಾ.. ಮಾಧು ನೀನು ಹೇಳುವುದೂ ಸರಿಯೇ, ಗೋಕುಲಾಷ್ಟಮಿಗೂ ಇಮಾಮ್‌ಸಾಬಿಗು ಏನು ಸಂಬಂಧ ಅನ್ನೋ ಹಾಗೆ ನಮಗ್ಯಾಕೆ ಅ ವಿಷಯ. ಅವರುಂಟು ಅವರ ಪೇಷೆಂಟುಗಳುಂಟು” ಎಂದು ಅಡುಗೆ ಮನೆಯತ್ತ ನಡೆದಳು ರಜನಿ.

ಹೆಂಡತಿ ರಜನಿ ಅತ್ತ ಹೋಗುತ್ತಿದ್ದಂತೆ ಡಾ.ಜಯಂತ್‌ರ ಮನಸ್ಸು ತಾವು ಈ ವರೆಗೆ ನಡೆದು ಬಂದ ದಾರಿಯತ್ತ ಹೊರಳಿತು. ಬೆಂಗಳೂರಿನ ಸಮೀಪದ ಗ್ರಾಮ ತಾವರೆಕೆರೆ ಅವರ ತಾತ ಚಂದ್ರಪ್ಪನವರ ಊರು. ಅಲ್ಲಿ ಅವರು ವಂಶಪಾರಂಪರ್‍ಯವಾಗಿ ಬಂದಿದ್ದ ಸ್ವಲ್ಪ ಜಮೀನನ್ನು ಸಾಗುವಳಿ ಮಾಡಿಸುವುದರೊಂದಿಗೆ ಜೊತೆಗೆ ಒಂದು ಚಿಲ್ಲರೆ ಅಂಗಡಿಯನ್ನೂ ನಡೆಸುತ್ತಿದ್ದರು. ಅವರ ಪತ್ನಿ ಸುಂದರಮ್ಮನವರು ಜಯಂತ್‌ರವರ ತಂದೆಗೆ ಜನ್ಮಕೊಟ್ಟ ವಾರದಲ್ಲಿಯೇ ದೈವಾಧೀನರಾಗಿಬಿಟ್ಟಿದ್ದರು. ಅ ನಂತರ ಚಂದ್ರಪ್ಪನವರು ಮರುಮದುವೆ ಮಾಡಿಕೊಳ್ಳದೆ ತಮ್ಮ ಕಂದನಿಗೆ ತಾಯಿ, ತಂದೆ ಎರಡೂ ಆಗಿ ಮಗು ಗಂಗಪ್ಪನನ್ನು ಪೋಷಿಸಿದರು. ಅವರು ಅಲ್ಪಸ್ವಲ್ಪ ವಿದ್ಯಾಭ್ಯಾಸ ಮುಗಿಸಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ಸಂಸಾರಸ್ಥರಾದ ಅವರೊಮ್ಮೆ ಶಿಕ್ಷಣ ಇಲಾಖೆಯ ಯಾವುದೋ ತರಬೇತಿಗೆಂದು ನಗರಕ್ಕೆ ಹೋಗಿದ್ದಾಗ ಮಗ ಜಯಂತ್ ಹುಟ್ಟಿದ್ದರಂತೆ. ಅವರ ತಾಯಿಗೆ ಬಾಣಂತಿ ಸನ್ನಿಯಾಗಿ ವಿಚಿತ್ರವಾಗಿ ನಡೆದುಕೊಳ್ಳತೊಡಗಿದಾಗ ಹೆಚ್ಚು ತಿಳುವಳಿಕೆಯಿಲ್ಲದ ಕುಟುಂಬದ ಜನರು ಅವಳಿಗೆ ಯಾವದೋ ದೆವ್ವ ಮೆಟ್ಟಿಕೊಂಡಿರಬಹುದೆಂದು ಮಂತ್ರವಾದಿಯನ್ನು ಕರೆಸಿ ಅವನಿಂದ ಪೂಜೆಮಾಡಿಸಿದರಂತೆ. ಆತ ಏನೇನೊ ಮಂತ್ರ ಹೇಳಿ ಬೇವಿನ ಸೊಪ್ಪಿನ ಬೊಂತೆಯಿಂದ ಹೇಗೆ ಬಾರಿಸಿದನೋ ಆಕೆ ಪ್ರಜ್ಞೆ ಕಳೆದುಕೊಂಡವಳು ಕೆಲವೇ ದಿನಗಳಲ್ಲಿ ಶಿವನ ಪಾದ ಸೇರಿದ್ದಳು. ದೆವ್ವವೇ ಬಿಟ್ಟುಹೋಗುವಾಗ ಅವಳ ಪ್ರಾಣತೆಗೆದುಕೊಂಡು ಹೋಯಿತೆಂದು ಕಳೇಬರಕ್ಕೆ ಸಂಸ್ಕಾರ ಮಾಡಿ ಮುಗಿಸಿದರಂತೆ. ತರಬೇತಿಯಿಂದ ಹಿಂದಿರುಗಿ ಬಂದ ಜಯಂತ್‌ರವರ ಅಪ್ಪ ಯಾರಮಾತಿಗೂ ಕಿವಿಗೊಡದೆ ಮಗನನ್ನು ಕರೆದುಕೊಂಡು ಬೆಂಗಳೂರಿಗೆ ಬಂದರಂತೆ. ಅಲ್ಲಿಯೇ ಯಾವುದೋ ಒಂದು ಖಾಸಗಿ ಶಾಲೆಯಲ್ಲಿ ಕೆಲಸಕ್ಕೆ ಸೇರಿ ಮಗುವನ್ನು ಸಾಕಿದರಂತೆ. ತಮ್ಮೂರಿನಿಂದ ಯಾರೂ ದಿಕ್ಕಿಲ್ಲದ ಮುದುಕಿಯೊಬ್ಬಳನ್ನು ಸಹಾಯಕ್ಕೆ ಕರೆತಂದು ಅವರ ನೆರವಿನಿಂದ ಮಗನನ್ನು ಬೆಳೆಸಿದರಂತೆ.

ಮಗನಿಗೆ ಯಾವುದೇ ಕೊರತೆಯಾಗದಂತೆ ಓದುಬರಹ ಕಲಿಸುತ್ತಾ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹಕರಾಗಿ ನಿಂತರು ಗಂಗಪ್ಪ ಮಾಸ್ತರು. ಅವರ ನಿರೀಕ್ಷೆಯಂತೆ ಜಯಂತ್ ಮನಶ್ಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಗಳಿಸಿ ಕೆಲವು ವರ್ಷಗಳು ಸರ್ಕಾರಿ ಕಾಲೇಜಿನಲ್ಲಿ ಪ್ರಾಧ್ಯಾಪಕನಾಗಿ ಕೆಲಸ ನಿರ್ವಹಿಸಿದರು. ಅಪ್ಪನ ಆಪ್ತ ಗೆಳೆಯರ ಮಗಳೊಬ್ಬಳನ್ನು ವಿವಾಹವಾದರು. ತಾತನವರಿಂದ ಅಪ್ಪನ ಪಾಲಿಗೆ ಬಂದಿದ್ದ ಜಮೀನನ್ನು ಅದು ವರೆಗೆ ಚಿಕ್ಕಪ್ಪನವರೇ ಸಾಗುವಳಿ ಮಾಡಿಸುತ್ತಿದ್ದರು. ಈಗ ಅದಕ್ಕೆ ಅಪ್ಪ ಬೆಲೆಕಟ್ಟಿಸಿ ಮಾರಾಟ ಮಾಡಿದರು. ಬಂದ ಹಣದಿಂದ ಒಂದು ನಿವೇಶನ ಖರೀದಿಸಿ ಈಗಿರುವ ಮನೆ ಮತ್ತು ಅದಕ್ಕೆ ಹೊಂದಿಕೊಂಡಂತೆ ಒಂದು ಕ್ಲಿನಿಕ್ ಕಟ್ಟಿಸಿಕೊಟ್ಟರು. ಅದಕ್ಕೆ ಮಾನಸಿಕ ಸಲಹಾ ಕೇಂದ್ರ ಎಂದು ನಾಮಕರಣ ಮಾಡಿದರು.

ನನಗೆ ,ಮಗಾ, ನೀನು ತಿಳಿದವನು, ನಾನು ಹೇಳಬೇಕಾದದ್ದೇನಿಲ್ಲ. ಮನುಷ್ಯನಿಗೆ ದೇಹದ ಖಾಯಿಲೆಗಳಿಗಿಂತ ಮಾನಸಿಕ ಖಾಯಿಲೆ ಸೂಕ್ಷ್ಮವಾದದ್ದು ಮತ್ತು ಹಿರಿದಾದುದು ಎಂದು ನನ್ನ ಭಾವನೆ. ಅಂಥಹವರಿಗೆ ಚಿಕಿತ್ಸೆ ನೀಡುವುದು ಪುಣ್ಯದ ಕೆಲಸ. ನೀನು ಈ ಕ್ಲಿನಿಕ್ಕಿನಲ್ಲಿ ರೋಗಿಗಳಿಗೆ ನಿಸ್ವಾರ್ಥ ಸೇವೆ ಸಲ್ಲಿಸಬೇಕೆಂಬುದು ನನ್ನ ಆಸೆ. ನಿನಗೆ ಯಶಸ್ಸು ದೊರೆಯಲೆಂದು ಆಶೀರ್ವದಿಸಿದರು. ಅವರ ಇಚ್ಛೆಯಂತೆ ನಾನು ಸರ್ಕಾರಿ ನೌಕರಿಯಿಂದ ಬಿಡುಗಡೆ ಹೊಂದಿ ಮಾನಸಿಕ ರೋಗಿಗಳಿಗೆ ಸಲಹೆ ನೀಡುವ ಕೆಲಸವನ್ನು ಕೈಕೊಂಡೆ. ಇದನ್ನು ಇಲ್ಲಿಯವರೆಗೆ ಯಶಸ್ವಿಯಾಗಿ ಮುಂದುವರೆಸಿಕೊಂಡು ಬಂದಿದ್ದೇನೆ. ಸಾಂಸಾರಿಕವಾಗಿಯೂ ಅಭಿವೃದ್ಧಿಯಾಗಿದೆ. ನನ್ನಿಬ್ಬರು ಮಕ್ಕಳು ಬೆಳೆದು ವಿದ್ಯಾವಂತರಾಗಿ, ಮದುವೆಯಾಗಿ ನೆಮ್ಮದಿಯಾಗಿ ತಮ್ಮ ಜೀವನ ರೂಪಿಸಿಕೊಂಡಿದ್ದಾರೆ. ನಾನು ಈ ಸ್ಥಿತಿಗೆ ಮುಟ್ಟಿ ಸಾಕಷ್ಟು ಕೀರ್ತಿ ಗಳಿಸುವುದನ್ನು ಅಪ್ಪ ಕಣ್ಣಾರೆ ಕಾಣುವವರೆಗೆ ನನ್ನೊಡನಿದ್ದು ಸಂತೋಷಪಟ್ಟು ತಮ್ಮ ತೊಂಬತ್ತೆಂಟನೆಯ ವಯಸ್ಸಿನಲ್ಲಿ ದೈವಾಧೀನರಾದರು. ನನ್ನ ಸಂಗಾತಿ ರಜನಿ, ಅವಳಿಗೂ ವಯಸ್ಸು ಸಾಕಷ್ಟಾಗಿದ್ದರೂ ಸ್ವಲ್ಪ ಹುಡುಗಾಟದ ಸ್ವಭಾವ ಹೋಗಿಲ್ಲ. ನನ್ನ ಕೆಲಸಕ್ಕೆ ಒತ್ತಾಸೆಯಾಗಿ ನಿಂತಿದ್ದಾಳೆ. ಈ ಮನುಷ್ಯ ರಾಘವ ಯಾವರೀತಿಯ ಸಮಸ್ಯೆಯಲ್ಲಿ ಸಿಕ್ಕಿ ಹೇಳಿಕೊಳ್ಳಲಾಗದ ಸಂದಿಗ್ಧ ಸ್ಥಿತಿಯಲ್ಲಿ ಒದ್ದಾಡುತ್ತಿದ್ದಾನೋ? ಪಾಪ ನಾಳೆಯಾದರೂ ಬಂದು ತನ್ನ ಮನಸ್ಸಿನಲ್ಲಿರುವ ಬೇಗುದಿಯನ್ನು ಹೇಳಿಕೊಳ್ಳುವಂತಾಗಲಿ ಅದನ್ನು ಸೂಕ್ತವಾಗಿ ಪರಿಹಾರ ಮಾಡುವ ಶಕ್ತಿಯನ್ನು ನನಗೆ ದೇವರು ನೀಡಲೆಂದು ಮನಸ್ಸಿನಲ್ಲೇ ಪ್ರಾರ್ಥಿಸಿಕೊಳ್ಳುತ್ತಿರುವಾಗ ”ಹಲೋ..ಡಾಕ್ಟರೇ, ಊಟಕ್ಕೆ ಬನ್ನಿ ಸಮಯವಾಗಿದೆ” ಎಂಬ ರಜನಿಯ ಕರೆ ಜಯಂತನನ್ನು ಬಹಿರ್ಮುಖಿಯಾಗಿಸಿತು.

”ಆಗಲೇ ಊಟದ ವೇಳೆಯಾಗಿಬಿಟ್ಟಿತಾ?” ಎಂದು ಗಡಬಡಿಸಿಕೊಂಡು ಎದ್ದು ಕೈತೊಳೆದು ಡೈನಿಂಗ್ ಹಾಲಿಗೆ ಬಂದ.
”ಮಾಧೂ ಇಷ್ಟಪಟ್ಟೇ ಈ ನಿಮ್ಮ ಜಯಂತಪ್ಪನನ್ನು ಮದುವೆಯಾದೆ, ಅದರಿಂದೇನೂ ತೊಂದರೆಯಾಗಲಿಲ್ಲ. ಆದರೆ ಮನೋವೈದ್ಯ ವೃತ್ತಿಯವರನ್ನು ಆರಿಸಿಕೊಂಡದ್ದು ತಪ್ಪಾಯಿತು ನೋಡು” ಎಂದು ಭಟ್ಟರಿಗೆ ರಜನಿ ಹೇಳಿದ್ದು, ಅದಕ್ಕೆ ಪ್ರತಿಯಾಗಿ ಅವನು ಗೊಳ್ಳೆಂದು ನಕ್ಕಿದ್ದು ಕೇಳಿಸಿದರೂ ಜಯಂತ್ ಪ್ರತಿಕ್ರಿಯಿಸದೆ ಊಟ ಮುಗಿಸಿ ಹೊರನಡೆದರು.

(ಮುಂದುವರಿಯುವುದು)
ಬಿ.ಆರ್,ನಾಗರತ್ನ, ಮೈಸೂರು

17 Responses

 1. ವಿದ್ಯಾ says:

  ಚೆನ್ನಾಗಿ ದೆ

 2. ನಯನ ಬಜಕೂಡ್ಲು says:

  ನಾಗರತ್ನ ಮೇಡಂ ಚೆನ್ನಾಗಿದೆ ಕಥೆ. ಮತ್ತೆ ನಿಮ್ಮ ಕಥೆ ಪ್ರಕಟಗೊಳ್ಳುತ್ತಿರುವುದು ಓದುಗರಿಗೆ ಹಬ್ಬ.

 3. ಧನ್ಯವಾದಗಳು ವಿದ್ಯಾ ಹಾಗೂ ನಯನ ಮೇಡಂ

 4. Padma Anand says:

  ಛೇ, ಎಂತಹ ಕುತೂಹಲಕರ ಘಟ್ಟದಲ್ಲಿ ಒಂದು ವಾರ ಕಾಯಬೇಕಲ್ಲಾ?
  ಚಂದದ ಕಥೆ.

 5. ಶಂಕರಿ ಶರ್ಮ says:

  ಬಹಳ ಅಪರೂಪದ ಮನೋವೈಜ್ಞಾನಿಕ ಕಥೆಯ ಮೊದಲ ಭಾಗ… ಬಹಳ ಕುತೂಹಲಕಾರಿಯಾಗಿದೆ…ಕಾತರದಿಂದ ಕಾಯುವಂತೆ ಮಾಡಿದೆ…ಧನ್ಯವಾದಗಳು ನಾಗರತ್ನ ಮೇಡಂ.

 6. ಧನ್ಯವಾದಗಳು ಪದ್ಮಾ ಹಾಗೂ ಶಂಕರಿ ಮೇಡಂ

 7. ಕಥೆ ಕುತೂಹಲವನ್ನು ಹುಟ್ಟಿಸಿದ್ದು ಮುಂದಿನ ಸಂಚಿಕೆಗಾಗಿ ಕಾಯುತ್ತಿದ್ದೇವೆ

 8. chanchala says:

  ತುಂಬಾ ಕುತೂಹಲ ದಿಂದ ಮುಂದುವರಿದಿದೆ

 9. ಧನ್ಯವಾದಗಳು ಗೆಳತಿ ಚಂಚಲ

 10. Anonymous says:

  ತುಂಬಾ ಕುತೂಹಲಕರವಾಗಿದೆ ಇನ್ನು ಒಂದು ವಾರ ಕಾಯ ಬೇಕೆ
  ಸುಜಾತಾ ರವೀಶ್

 11. ಧನ್ಯವಾದಗಳು ಸೋದರಿ

 12. ರೂಪಶ್ರೀ ಹೇಮಂತ್ says:

  ಬಿ.ಆರ್.ಎನ್‌ ಮೇಡಂ ರವರ ಬರವಣಿಗೆಯ ಶೈಲಿ ನಮ್ಮನ್ನೇ ಆ ಪಾತ್ರಗಳಲ್ಲಿ ಒಂದಾಗಿಸಿಬಿಡುವುದು. ಓದುವ ಅಷ್ಟೂ ಹೊತ್ತೂ ನಾನೂ ಕೂಡ ಡಾ.ಜಯಂತರ ಪಕ್ಕದಲ್ಲೇ ಇದ್ದೆನು. ಬಳಸುವ ಗಾದೆ ಮಾತು, ಉಪಮೆಗಳು ನಗು ತರಿಸುವುದರ ಜೊತೆಗೆ ಕಿವಿಮಾತ ಹೇಳಿದಂತಿರುವುದು.

 13. ಧನ್ಯವಾದಗಳು ಗೆಳತಿ ರೂಪಾ

 14. Anonymous says:

  ಕುತೂಹಲಕಾರಿ ಕತೆ…ಎಲ್ಲೂ ನಿಲ್ಲಿಸದ ಹಾಗೆ ಓದಿಸಿಕೊಂಡು ಹೋಯಿತು…

 15. ಸುಚೇತಾ says:

  ಕುತೂಹಲಕಾರಿ ಆರಂಭ. ಓದಿಸಿಕೊಂಡು ಹೋಯಿತು.

 16. ಧನ್ಯವಾದಗಳು ಗೆಳತಿ ಸುಚೇತಾ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: