ಗಲ್ಲಿ, ಗಂಗಾ, ಮತ್ತು ನಾನು – ಕಾಶಿ ಕ್ರಾನಿಕಲ್ಸ್‌

Share Button

ಬಹುಪಾಲು ಜನರು ಮರಣಕ್ಕೆಂದೇ ಬರುವುದು ಈ ಜಾಗಕ್ಕೇ. ಆದರೆ ಬಹಳಷ್ಟು ಜನರಿಗೆ ಈ ಜಾಗವೇ ಪುನರ್ಜನ್ಮವನ್ನು ನೀಡಿದೆ. ಹೆಣವನ್ನು ದಹಿಸುತ್ತಿರುವ ಬೆಂಕಿಯನ್ನೇ ಬೆಳಕೆಂದು ಭಾವಿಸಿ ಮಹಾಭೂತನಾಥನಿಗೆ ಅದೇ ಭಸ್ಮದಿಂದ ಅಲಂಕಾರ! ಮಹಾಸ್ಮಶಾನ ಎನಿಸಿಕೊಂಡಿರುವ ಕಾಶಿ ಅಲ್ಲದೆ ಇನ್ನಾವ ಜಾಗದಲ್ಲಿ ಈ ವೈಪರೀತ್ಯಗಳು ಕಾಣಸಿಗಬಹುದು?

ಹಿಂದೆ ಕಾಶಿಗೆ ಹೋಗುತ್ತಿದ್ದವರೆಲ್ಲರೂ ವಯಸ್ಸಾದವರೇ. ʼಅಲ್ಲಿಗೆ ಹೋಗುವುದೇ ಒಂದು ದೊಡ್ಡ ಸಾಹಸವಾಗಿತ್ತು ಆಗʼ ಎಂದು ಎಷ್ಟೋ ಮಂದಿ ಹೇಳಿರುವುದನ್ನು ನಾನು ಕೇಳಿದ್ದೀನಿ. ಈಗೇನು? ಛಂಗನೆ ದುಡ್ಡು ಖರ್ಚು ಮಾಡಿದರಾಯ್ತು. ಬೆಂಗಳೂರಿಂದ ಹಾರಿ ನೇರ ವಾರಣಾಸಿಯಲ್ಲೇ ಇಳಿಸಿಬಿಡುತ್ತದೆ. ವಾರಣಾಸಿಯಂತೂ ಯಾವ ರೀತಿಯಲ್ಲೂ ಹಿಂದುಳಿದಿಲ್ಲ. ಬಹುತೇಕ ವ್ಯವಸ್ಥೆಗಳಲ್ಲಿ ಬೇರೆ ನಗರಗಳಿಗಿಂತಲೂ ಮುಂದುವರೆದಿದೆ. ಬೆಂಗಳೂರಿನಲ್ಲಿ ಈಗೀಗ್ಗೇ ವಿದ್ಯುತ್‌ ಚಾಲಿತ ದ್ವಿಚಕ್ರವಾಹನಗಳು ಕಾಣುತ್ತಿವೆ. ಇರಲಿ, ಅಂತಹ ವಾಹನಗಳನ್ನು ತಯಾರಿಸುವ ಘಟಕಗಳೇನು, ಅದರ ಆವಿಷ್ಕಾರ ಮಾಡಿದ್ದು ಬೆಂಗಳೂರಿನ ಹುಡುಗರೇ. ಆದರೆ ವಾರಣಾಸಿಯಲ್ಲಂತೂ ಎಲ್ಲಿ ನೋಡಿದರಲ್ಲಿ ವಿದ್ಯುತ್‌ ಆಟೋಗಳು! ನೋಡಲು ಬಲು ಚಿಕ್ಕದಾಗಿ ಕಂಡರೂ ನಾಲ್ಕು ಜನ ಸುಲಭವಾಗಿ ಕುಳಿತುಕೊಳ್ಳಬಹುದಾದ ವ್ಯವಸ್ಥೆ. ಅಷ್ಟೇ ಏನು, ಗಾಡಿ ಓಡಿಸುವವನ ಆಸನವು ಬಹಳ ವಿಶಾಲವಾಗಿದ್ದು ಅಲ್ಲೂ ಒಬ್ಬರು ಸುಲಭವಾಗಿ ಕುಳಿತುಕೊಳ್ಳಬಹುದು. ಬಹುಶಃ ಆ ಗಾಡಿ ಓಡಿಸುವವನಿಂದ ಹೊಮ್ಮುತ್ತಿರುವ ದಟ್ಟ ತಂಬಾಕು ಪಾನಿನ ವಾಸನೆಯನ್ನು ತಡೆದುಕೊಳ್ಳಬೇಕಷ್ಟೆ. ರಸ್ತೆಗಳು ಚೆನ್ನಾಗಿಯೇ ಇವೆ. ಆದರೆ ಕಾಶಿಯಲ್ಲಿ ರಸ್ತೆಗಳನ್ನು ನೋಡಲು ಹೋಗುವವರು ಯಾರು? ಮನುಷ್ಯನ ದೇಹದಲ್ಲಿ ಎಪ್ಪತ್ತೆರಡು ಸಾವಿರ ನಾಡಿಗಳು ಹೇಗೋ, ಅಸಂಖ್ಯಾತ ಗಲ್ಲಿಗಳು ನಗರವನ್ನೆಲ್ಲಾ ಆವರಿಸಿಕೊಂಡುಬಿಟ್ಟಿದೆ. ಕಾಶಿಯ ಅಂತರಾತ್ಮ ವಿಶ್ವನಾಥನಾದರೆ ಅದರ ಅಂತರಾಳವೇ ಈ ಗಲ್ಲಿಗಳು. ಗಲ್ಲಿಯೊಂದರಲ್ಲಿ ನಾವು ನಡೆದು ಹೋಗುತ್ತಿದ್ದಾಗ ಸಿಕ್ಕ ಪೋಲಿಸೊಬ್ಬರು “ನಿಮಗೆ ಮಹಾನಗರಗಳಲ್ಲಿ ದೊಡ್ಡ ರಸ್ತೆಗಳಲ್ಲಿ, ಮಾಲುಗಳಲ್ಲಿ ಸಿಗುವ ವಸ್ತುಗಳಲೆಲ್ಲವೂ ಕಾಶಿಯ ಈ ಗಲ್ಲಿಗಳಲ್ಲಿ ಸಿಗುತ್ತದೆ; ಇನ್ನೂ ಹೆಚ್ಚಾಗಿಯೇ ಆನಂದವೂ ಸಿಗುತ್ತದೆ” ಎಂದು ಹೇಳಿದರು. ಅದೂ ನಿಜವೆ. ಆ ಗಲ್ಲಿಗಳಲ್ಲಿ ಕೇವಲ ಅಂಗಡಿ ಮುಂಗಟ್ಟುಗಳು ಕಾಣದು, ಅಡಿಗಡಿಗೆ ಒಂದು ಶಿವಲಿಂಗ! ಗಲ್ಲಿ ಗಲ್ಲಿಗೊಂದು ದೇವಳ! ಆ ಗಲ್ಲಿಯ ಕೊನೆಯಲ್ಲಿ ಒಂದು ಘಾಟ್!‌ ಹೀಗೆ ಒಂದಕ್ಕೊಂದು ಅಂಟಿಕೊಂಡು ಗಲ್ಲಿ ಗಲ್ಲಿಯಲ್ಲಿಯೇ ರಾರಾಜಿಸುತ್ತಿದೆ ಎಂದು ನಾವು ಗಲ್ಲಿಯಲ್ಲಿಯೆ ನಿಂತು ಮೈಮರೆತರೆ ಗಲ್ಲಿಗಳಲ್ಲಿ ಗಾಡಿಗಳನ್ನು ಓಡಿಸುವ ಅತಿರಥ ಮಹಾರಥರು ಜೋರಾಗಿ ಶಂಖಧ್ವನಿ ಮಾಡುತ್ತಾ ನುಗ್ಗುತ್ತಾರೆ. ಶಂಖದ್ವನಿಯೆಂದರೆ ಹಾರನ್ನು. ನಮ್ಮಲ್ಲಿ ಈ ಹಾರನ್‌ ಶಬ್ಧ ಕೇಳಿಸುವುದು ಏನಾದರೂ ಅಡ್ಡ ಸಿಕ್ಕಾಗ. ಆದರೆ ಕಾಶಿಯಲ್ಲಿ ಹಾಗಲ್ಲವೇ ಅಲ್ಲ. ಅಲ್ಲಿಯ ನಿವಾಸಿ ಗಾಡಿ ಓಡಿಸುತ್ತಿದ್ದಾನೆ ಎಂದರೆ ಅವನು ಹಾರನ್ನು ಸದ್ದು ಮಾಡುತ್ತಲೇ ಇರಬೇಕು. ಕಾಶಿಯಾತ್ರೆಗೆ ಹೋದವರ ಸ್ಮೃತಿಯಲ್ಲಿ ಅಚ್ಚಳಿಯದೇ ಉಳಿದುಬಿಡುವುದು ನಾಲ್ಕು ಸಂಗತಿಗಳು. ಮೊದಲನೆಯದು ಆ ವಿಶ್ವನಾಥನ ಸನಿಹದ ಶಕ್ತಿ; ಎರಡನೆಯದು ಗಂಗಾ ಮಾತೆಯು ಹರಿವ ಪರಿ, ಅದನ್ನು ನೋಡುವ ಆನಂದ; ಮೂರನೆಯದು ಗಂಗೆಯ ತಟದ ಮಣಿಕರ್ಣಿಕಾ ಘಾಟ್ನಲ್ಲಿ ಎಡಬಿಡದೆ ಸುಡುವ ಹೆಣಗಳು; ನಾಲ್ಕನೆಯದು ಈ ಗಾಡಿಗಳ ಹಾರನ್ನು! ಕಾಶಿಯಿಂದ ಹಿಂದಿರುಗುವ ನಮಗೆ ಬಹುಶಃ ಮೈಸೂರಲ್ಲಿನ ಅರ್ಥಪೂರ್ಣ ಹಾರನ್ನಿನ ಸದ್ದು ಕೂಡ ನಿಷ್ಕಾರಣ ಎಂದೆನಿಸಿಬಿಡುತ್ತದೇನೋ! ಈ ಕಾಶಿಯ ಚಾಲಕರು ಬಹಳ ಚಾಲಾಕಿಗಳು. ಕೂದಲೆಳೆಯ ಅಂತರದಲ್ಲಿ ಗಾಡಿ ಗಾಡಿಗಳ ನಡುವೆ ತಮ್ಮ ಗಾಡಿಯನ್ನು ಸುಲಭವಾಗಿ ನುಗ್ಗಿಸಿಬಿಡುತ್ತಾರೆ. ಮಹಾಭಾರತದ ಕಾಲದಲ್ಲೇನಾದರೂ ಇವರುಗಳು ಸಾರಥಿಗಳಾಗಿದ್ದರೆ ಬಹುಶಃ ರಣರಂಗದಲ್ಲಿ ವ್ಯೂಹಗಳನ್ನು ಭೇದಿಸದೆಯೇ ಒಳಹೊಕ್ಕು ಶತ್ರುಸೈನ್ಯವನ್ನು ಹಾರನ್ನಿನ ಸದ್ದಿನಿಂದಲೇ ದಿಗ್ಭ್ರಮೆಗೊಳಿಸಿ, ಹಾಗೇ ನಾಜೂಕಾಗಿ ನುಸುಳಿಕೊಂಡು ಹೊರಬಂದುಬಿಡುತ್ತಿದ್ದರೇನೋ! ಅದೂ ಈ ವಿದ್ಯುತ್‌ ಚಾಲಿತ ಆಟೋಗಳಿಗೋ ಎಲ್ಲಿಲ್ಲದ ವೇಗ, ಸುಮ್ಮನೆ ಚಾಲೂ ಮಾಡಿ ಒಂದೇ ಕ್ಷಣಕ್ಕೆ ಛಂಗನೆ ವೇಗದಲ್ಲಿ ಓಡುತ್ತಿರುತ್ತದೆ. ವಿಚಿತ್ರವೆಂದರೆ ಬೇರೆ ಗಾಡಿಗಳ ತರಹ ಈ ವಿದ್ಯುತ್‌ ಆಟೋಗಳ ಇಂಜಿನ್‌ ಸದ್ದು ಏನೇನೂ ಇಲ್ಲ. ಆದರೆ ಅದಕ್ಕಿಂತಲೂ ಹೆಚ್ಚಾಗಿ ಅದರ ಹಾರನ್‌ ಸದ್ದು! 

ಹಾರನ್‌ ಕೇಳಿಕೊಂಡು ನಾವು ದಾರಿ ಬಿಡೋಣವೆಂದು ಅತ್ತ ಇತ್ತ ಸರಿಯುವುದೂ ಅಸಾಧ್ಯವೇ; ಎಲ್ಲಾ ದಿಕ್ಕುಗಳಿಂದಲೂ ಮೂಡುತ್ತಿರುವ ವಾಹನ ಸರಪಳಿಗಳು! ಇವೆಲ್ಲವೂ ಒಂದು ಕಡೆ ಆದರೆ, ಮುಂದೆ ನೋಡಿಕೊಂಡು ನಡೆಯುತ್ತಿರುವ ನಮಗೆ ಕೆಳಗೆ ರಸ್ತೆಯ ಮೇಲೆ ಬೇರೆ ಬೇರೆ ಆಕಾರಗಳಲ್ಲಿ ಮೂಡಿರುವ ಪಾನ್‌ ಕಲೆ ಕಾಣುವುದೇ ಇಲ್ಲ. ಅಪ್ಪಿ-ತಪ್ಪಿ ನಾವೇನಾದರೂ ಬರೀಗಾಲಿನಲ್ಲಿದ್ದು, ಕೆಳಗೆ ಗಮನಿಸದೆ ನಡೆದುಬಿಟ್ಟರೆ ಆಗ ತಾನೆ ಚೆನ್ನಾಗಿ ಅಗೆದು ಹೊಸದೊಂದು ಆಕಾರದಲ್ಲಿ ಯಾರೋ ಮಹಾ ವರ್ಣಚಿತ್ರಕಾರನು ಉಗಿದು ಬಿಡಿಸಿರುವ ಪಾನ್‌ ಕಲೆ ನಮ್ಮ ಪಾದಗಳಿಗೆ ಮೆತ್ತಿಕೊಂಡಬಿಡುವ ಅವಕಾಶಗಳು ತುಂಬಾ ಹೆಚ್ಚು! ಕಾಶಿಯ ನಿವಾಸಿಗಳು ಊಟಕ್ಕಿಂತ ಹೆಚ್ಚಾಗಿ ಬಹುಶಃ ಈ ತಂಬಾಕುಯುಕ್ತ ಪಾನನ್ನೇ ಪ್ರೀತಿಸುತ್ತಾರೆ. ಧೂಮಪಾನ, ಮದ್ಯಪಾನ ಬಿಡಿ. ಇಲ್ಲಿ ಬರೀ ಬರೀ ಪಾನ(ನ್)‌ ಅಷ್ಟೆ! ಎಲ್ಲೋ ಊರಿನ ಹೊರವಲಯಗಳಲ್ಲಿ ಅಥವಾ ಮುಖ್ಯ ಬೀದಿಗಳಲ್ಲಿ ದೊರಕುವ ಅಗಲ ರಸ್ತೆಗಳ ಇಕ್ಕೆಲಗಳಲ್ಲಿ ಚಹಾ ಮಾಡುವ ಪುಟ್ಟ ಪುಟ್ಟ ಅಂಗಡಿಗಳಿರುತ್ತದೆ. ಸಾಮಾನ್ಯವಾಗಿ ಕಾಣುವ ದೃಶ್ಯವೆಂದರೆ, ಒಂದು; ಕೆಂಡದ ಒಲೆಯ ಮೇಲೆ ಇಟ್ಟಿರುವ ಚಹಾ ಪಾತ್ರೆ; ಇನ್ನೊಂದು, ಚಹಾ ಕುಡಿದು ಒಡೆದಿರುವ ಮಣ್ಣಿನ ಲೋಟಗಳು; ಮೂರನೆಯದು ಮತ್ತು ಎಲ್ಲಕ್ಕಿಂತ ವಿಸ್ಮಯಕಾರಿಯಾದುದು ಆ ಚಹಾ ಮಾಡುವವನ ಬಾಯಿಯ ಸಾಮರ್ಥ್ಯ. ಆ ಚಹಾ ಅಂಗಡಿಯಲ್ಲಿ ಕೇವಲ ಚಹಾ ಇರುವುದಿಲ್ಲ. ಬಹಳಷ್ಟು ದಿನಬಳಕೆಯ ವಸ್ತುಗಳು, ಕೆಲುವೊಮ್ಮೆ ಪೂಜಾ ಸಾಮಗ್ರಿ, ಇನ್ನೂ ಹೆಚ್ಚೆಂದರೆ ಪ್ರವಾಸಿಗರು ಹೆಚ್ಚಿರುವ ತಾಣವಾದ್ದರಿಂದ ಬಟ್ಟೆಗಳು- ಇವಿಷ್ಟೂ ಇರುತ್ತದೆ. ಇದನ್ನು ಬಿಕರಿ ಮಾಡುತ್ತಾ ಕುಳಿತಿರುವ ಆ ವ್ಯಕ್ತಿಯ ಬಾಯಲ್ಲಿ ಕನಿಷ್ಟ ಒಂದು 300 ಗ್ರಾಮಿನಷ್ಟು ಪಾನ್‌ ಇರುತ್ತದೆ. ಅವನ ತುಟಿಗಳ ಅಂಚಿನಲ್ಲಿ ಕೆಂಪಗೆ ರಸ ಸೋರುತ್ತಿರುತ್ತದೆ. ಅದನ್ನು “ಸೋರ್‌ʼ ಎಂದು ಒಳಕ್ಕೆ ಎಳೆದುಕೊಳ್ಳುತ್ತಾ ಅವನು ಮಾಡಿಕೊಡುವ ಬಿಸಿ ಬಿಸಿ ಚಹಾವನ್ನು ಕುಡಿಯದೆ ನಮಗೆ ಬೇರೆ ಗತಿಯಿಲ್ಲ. ಅವನನ್ನು ಏನಾದರೂ ಕೇಳಿಬಿಟ್ಟರೆ ಕಥೆಯೇ ಮುಗಿದುಹೋಯಿತು. ಉದಾಹರಣೆಗೆ ಚಹಾದ ಬೆಲೆ ಎಷ್ಟು ಎಂದು ನಾವು ಕೇಳಿದರೆ, ಮೊದಲು ನಮ್ಮ ಮುಖ ನೋಡುತ್ತಾನೆ, “ಇವರಿಗೇನು ಗುಲುಗು; ಅಲ್ಲಿ ಎಲ್ಲರೂ ಎಷ್ಟು ಕೊಡುತ್ತಿದ್ದಾರೋ ಅಷ್ಟನ್ನ ಇಟ್ಟು ಹೋದರೆ ಆಗೋಲ್ಲವಾ” ಎನ್ನುವಂತೆ ನಮ್ಮ ಮುಖ ನೋಡುತ್ತಾನೆ. ನಾವೋ ಶುದ್ಧಶುಂಠಿಗಳು. ಅದರ ಮೇಲೆ ಹಿಂದಿ ಬಾರದು. ಅವನು ಬಾಯಿ ತೆರೆದು “ಬೀಸ್‌ ರುಪೈ” ಎಂದು ಹೇಳುವಾಗ ಅವನ ಬಾಯಂತೂ ಓಹೋ; ಕೆಂಪು ಮಹಾಸಾಗರ. ಅದು ಜಲಪಾತ(ಪಾನಪಾತ?) ವಾಗಿ ಅವನ ತುಟಿಯ ಸಂದುಗಳಿಂದ ಸೋರಿದಾಗ ಅವನು ಅದನ್ನು ವಾಪಸ್‌ ಒಳಕ್ಕೆಳೆದುಕೊಳ್ಳಲು ಶತಪ್ರಯತ್ನ ಮಾಡುತ್ತಾನೆ. ನಾವು ವಿಸ್ಮಯದಲ್ಲೋ ಭೀಭತ್ಸದಲ್ಲೋ ಅವನ ಮುಖವನ್ನೇ ದಿಟ್ಟಿಸುತ್ತಾ ನಿಂತರೆ, ನಮಗೆ ಬಹುಶಃ ಹಿಂದಿ ಅರ್ಥವಾಗಲಿಲ್ಲವೆಂದು ಅವನು ಭಾವಿಸಿ ತಲೆಯೆತ್ತಿ ರಸ ಸೋರದಂತೆ ತೆಲುಗಿನಲ್ಲಿ “ಡಬ್ಬು” ಎನ್ನುತ್ತಾ ಬೆರಳುಗಳಲ್ಲಿ ಇಪ್ಪತ್ತು ಎಂದು ಸಂಜ್ಞೆ ಮಾಡಿ ತೋರಿಸುತ್ತಾನೆ. ಕಾಶಿಗೆ ಹೋಗುವ ದಕ್ಷಿಣ ಭಾರತದವರಿಗೆಲ್ಲಾ ತೆಲುಗು ಅರ್ಥವಾಗುತ್ತದೆ ಎಂದು ಅವರು ಭಾವಿಸಿರುವುದು ಒಂದು ವಿಷಯ; ಹಾಗಾಗಿ ಅವರು ಕಲಿತಿರುವುದು ಕೇವಲ “ಡಬ್ಬು” (ದುಡ್ಡು) ಎನ್ನುವ ಪದ! ಸದ್ಯ ಚಹಾ ಕುಡಿದ ನಾವು ಇಪ್ಪತ್ತು ರೂಪಾಯಿಗಳನ್ನು ಇಟ್ಟು ಮುನ್ನಡೆಯಬೇಕು ಅಷ್ಟೆ. ಇವಿಷ್ಟೆ ಅಲ್ಲ ಅವನ ಆಟಗಳು. ಅವನ ಅಂಗಡಿಯಲ್ಲಿನ ವಸ್ತುಗಳ ವ್ಯಾಪಾರದಲ್ಲಿ ಆ ಪಾನ್‌ ತುಂಬಿದ ಬಾಯಲ್ಲಿ ಚೌಕಾಸಿ, ವಾದ ವಿವಾದಗಳು ಬೇರೆ! 


ಸಾಮಾನ್ಯವಾಗಿ ತೀರ್ಥಕ್ಷೇತ್ರಗಳಲ್ಲಿ ತೀರ್ಥ-ಭೋಜನಗಳಿಗೆ ಏನೂ ಬರವಿಲ್ಲ. ಅಲ್ಲಿ ಸಿಗುವ ಊಟವೆಲ್ಲವೂ ಪ್ರಸಾದವೇ. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ತೀರ್ಥಯಾತ್ರೆಗಳಿಗೆ ಹೋದಾಗ ಪ್ರಸಾದಗಳೇ ಊಟ! ಅದರಲ್ಲೂ ಕಾಶಿಯು ಸಾಕ್ಷಾತ್‌ ಅನ್ನಪೂರ್ಣೇಶ್ವರಿಯ ಸ್ಥಾನ. ಅಲ್ಲಿಗೆ ಬಂದವರಿಗೆ ಹಸಿವು ನೀಗಿಸಿಯೇ ತೀರುವಳು. ಅದಕ್ಕೂ ಮುನ್ನ ಸ್ವಲ್ಪ ಗಲ್ಲಿಗಳಲ್ಲಿ ಅಡ್ಡಾಡಬೇಕು ಅಷ್ಟೆ. ಕಾಶಿಯ ಅನ್ನಪೂರ್ಣ ದೇವಸ್ಥಾನದ ಬಳಿಯಲ್ಲೇ ಅನ್ನಪೂರ್ಣ ಭೋಜನಾಲಯವನ್ನು ನಿರ್ಮಿಸಿದ್ದಾರೆ. ಭೋಜನಾಲಯವೆಂದರೆ ನಾವು ತಿರುಮಲದಲ್ಲಿರುವ ಮಾತಾ ತರಿಗೊಂಡ ವೆಂಗಮಾಂಬ ಅನ್ನಪ್ರಸಾದ ಕೇಂದ್ರವನ್ನೇ ನೆನಪಿಸಿಕೊಳ್ಳುತ್ತೇವೆ. ಅಲ್ಲಿಯ ವ್ಯವಸ್ಥೆ ಎಷ್ಟು ಅಚ್ಚುಕಟ್ಟಾಗಿದೆ? ಏನು ವಿಶಾಲ ಭವನಗಳು, ಅಲ್ಲಿಗೆ ಹೋದವರಿಗೆಲ್ಲಾ ತೃಪ್ತಿ; ಅಷ್ಟು ಜನಗಳು ಅಲ್ಲಿ ಊಟ ಮಾಡಿದರು ಎಂತಹ ಸ್ವಚ್ಛತೆ! ತಿರುಮಲ ಬೆಟ್ಟದ ಮೇಲಿದೆ ಸರಿ; ಅಲ್ಲಿಯ ಅಭಿಯಂತರರು ಒಳ್ಳೆ ಯೋಜನೆಗಳನ್ನೇ ಮಾಡಿದ್ದಾರೆ. ಆದರೆ ನಾವು ಕಾಶಿಯನ್ನು ಅದರೊಂದಿಗೆ ಹೋಲಿಸಲಾಗದು! ತಿರುಮಲೆಯ ಅನ್ನಪ್ರಸಾದ ಕೇಂದ್ರದಲ್ಲಿ ದಿನಕ್ಕೆ ಎಷ್ಟು ಜನರು ಭೋಜನ ಮಾಡುತ್ತಾರೋ, ಅಷ್ಟೇ ಜನ ಕಾಶಿಯ ಅನ್ನಪೂರ್ಣ ಭೋಜನಾಲಯದಲ್ಲೂ ಮಾಡುತ್ತಾರೆ. ಕಾಶಿಯಲ್ಲಿ ನಾನು ಗಮನಿಸಿದ ಮತ್ತೊಂದು ಸಂಗತಿಯೆಂದರೆ, ವಿಶ್ವನಾಥನ ದೇವಸ್ಥಾನ ಒಂದನ್ನು ಬಿಟ್ಟು ಬೇರೆ ಬೇರೆ ದೇವಸ್ಥಾನಗಳನ್ನು ತಮಿಳರೂ ತೆಲುಗರೂ ವಹಿಸಿಕೊಂಡುಬಿಟ್ಟಿದ್ದಾರೆ. ಒಂದು ಸಣ್ಣ ಉದಾಹರಣೆ ಎಂದರೆ, ಕಾಶಿ ವಿಶಾಲಾಕ್ಷಿ ದೇವಸ್ಥಾನದಲ್ಲಿ ಎಲ್ಲಾ ಫಲಕಗಳೂ, ದೇವರುಗಳ ಹೆಸರುಗಳೂ (ಉದಾ:‌ ವಿನಾಯಗರ್) ಮಂತ್ರಗಳೂ ದೇವಸ್ಥಾನದ ಕೆಲವು ಮಾಹಿತಿ ನಮಗೆ ತಮಿಳಿನಲ್ಲೇ ಕಾಣಸಿಗುತ್ತದೆ. ಅದೇ ಕಾಶಿ ಅನ್ನಪೂರ್ಣಾ ದೇವಸ್ಥಾನದಲ್ಲಿ ಫಲಕಗಳೂ, ದೆವರುಗಳ ಹೆಸರುಗಳೂ ನಮಗೆ ತೆಲುಗಿನಲ್ಲೇ ಕಾಣಸಿಗುತ್ತದೆ. ಅಷ್ಟೇ ಅಲ್ಲದೆ ಆ ಅನ್ನಪೂರ್ಣಾ ಭೋಜನಾಲಯದ ದಾನಿಗಳ ಪಟ್ಟಿಯನ್ನು ಗಮನಿಸಿದರೆ ಅದರಲ್ಲಿ ಬಹುಪಾಲು ಉದಾರಹೃದಯಿಗಳು ಹೈದರಾಬಾದ್‌, ವಿಶಾಖಪಟ್ಟಣ, ಮುಂತಾದ ಆಂಧ್ರ ಪ್ರದೇಶದವರೇ! ಅಲ್ಲಿ ಇಲ್ಲಿ ಒಂದೋ ಎರಡೋ ʼಬೆಂಗಳೂರುʼ ಎಂಬುದೂ ನನಗೆ ಕಂಡಿತು. ಆದರೆ ಕರ್ನಾಟಕದ ಘನತೆ ಅಲ್ಲೂ ರಾರಾಜಿಸುತ್ತಿದೆ. ಹನುಮಾನ್‌ ಘಾಟ್‌ ಹಾಗು ಹರಿಶ್ಚಂದ್ರ ಘಾಟ್‌ ಗಳ ಮಧ್ಯದಲ್ಲಿರುವ ಘಾಟ್‌ ʼಕರ್ನಾಟಕ ಘಾಟ್‌ʼ ಎಂದೇ ಹೆಸರಾಗಿದೆ. ಒಂದು ಚೆಂದದ ಫಲಕವನ್ನೂ ಅಲ್ಲಿ ಹಾಕಿದ್ದಾರೆ. 18ನೇ ಶತಮಾನದಲ್ಲಿ ಅಷ್ಟು ಭಾಗವನ್ನು ಆಗಿನ ಮೈಸೂರು ರಾಜ್ಯದ ಅರಸರು ಅದನ್ನು ಕೊಂಡುಕೊಂಡಂತೆ ಕಾಣುತ್ತದೆ. ಅಂತೂ ಕಾಶಿಯಲ್ಲಿ ದಕ್ಷಿಣ ಭಾರತೀಯರ ಹಾವಳಿ ಬೇಕಾದಷ್ಟಿದೆ. ಇನ್ನು ಅನ್ನಪೂರ್ಣಾ ಭೋಜನಾಲಯದ ವಿಷಯಕ್ಕೆ ಬರೋಣ. ಅಲ್ಲಿ ತಿರುಮಲೆಯಂತಹ ಅಚ್ಚುಕಟ್ಟು ವಿಶಾಲ ಜಾಗವಿಲ್ಲ. ಕಾಶಿಯದ್ದೇ ಎರಡು ಗಲ್ಲಿಗಳನ್ನು ಒಟ್ಟು ಸೇರಿಸಿದರೆ ಎಷ್ಟು ಜಾಗವೋ ಅಷ್ಟೇ. ಅಲ್ಲಿ ಅತ್ತ ಇತ್ತ ಎರಡು ಊಟದ ಮೇಜುಗಳು. ನಡುವೆ ಬಡಿಸುವವರಿಗೆ ಜಾಗ. ಬಡಿಸುವವರೆಲ್ಲರೂ ಚೆನ್ನಾದ ಜೀನ್ಸು ಟೀಶರ್ಟುಗಳು ಧರಿಸಿರುವವರೇ. ಬಹುತೇಕ ಎಲ್ಲರೂ ಉತ್ತರ ಭಾರತದವರೇ. ಆದರೆ ಬಡಿಸುವ ಖಾದ್ಯಗಳೆಲ್ಲವೂ ದಕ್ಷಿಣ ಭಾರತದ್ದೇ. ಸಿಹಿಯೊಂದೇ ಮೋತಿಚೂರದ ಲಡ್ಡು. ಅಷ್ಟೂ ಜನರಿಗೆ ಗಟ್ಟಿ ಮೊಸರು. ಅಲ್ಲಿ ನಿರ್ದಿಷ್ಟವಾದ ವ್ಯವಸ್ಥೆ, ಇಂತಹ ಸಮಯಕ್ಕೆ ಇಷ್ಟು ಜನವೆಂದೇನು ಇಲ್ಲ. ಬರುವವರು ಎಲ್ಲೆಲ್ಲಿ ಖಾಲಿ ಇದೆಯೋ ಅಲ್ಲಿ ಹೋಗಿ ಆಸೀನರಾಗುವುದಷ್ಟೆ. ಆ ಮೇಜಿನಲ್ಲಿ ಒಬ್ಬನು ಆಗಲೇ ಕುಳಿತು ತಿನ್ನತಿದ್ದರೂ ಸರಿಯೆ. ಪಕ್ಕದಲ್ಲಿ ಒಂದೇ ಒಂದೇ ಜಾಗ ಖಾಲಿ ಇದ್ದರೆ, ಮೇಜನ್ನು ಸರಕ್ಕನೆ ಸರಿಸಿ, ತಿನ್ನುತ್ತಿರುವವನ ಕ್ರಿಯೆಯನ್ನು ಎರಡು ಕ್ಷಣ ವಿಳಂಬಗೊಳಿಸಿ ನುಗ್ಗಿ ಕೂರುವುದು. ಎಲೆ ಹಿಡಿದ ಒಬ್ಬನು ಎಲ್ಲಾ ಕಡೆ ಓಡಾಡುತ್ತಲೇ ಇರುತ್ತಾನೆ. ಯಾವ ಮೇಜಲ್ಲಿ ಮನುಷ್ಯನಿದ್ದಾನೋ, ಮೇಜಿನ ಮೇಲೆ ಖಾಲಿ ಇದೆಯೋ, ಅಲ್ಲಿ ಎಲೆ ಹಾಕುತ್ತಾನೆ. ಅದೇ ರೀತಿಯಲ್ಲಿ ಮಿಕ್ಕ ಎಲ್ಲಾ ಖಾದ್ಯಗಳೂ. ನಾವೇನಾದರೂ ಬೇಗ ತಿನ್ನುವವರಾದರೆ ಸರಿ. ಆದರೆ ಭೋಜನ ಪ್ರಿಯರೂ, ಆಸ್ವಾದಿಸುತ್ತಾ ತಿನ್ನುವ ಭಕ್ತ ಗಿರಾಕಿಗಳಾದರೆ ಕಥೆಯೇ ಮುಗಿಯಿತು! ಅಲ್ಲಿ ತಿನ್ನುವವರ ಕಥೆ ಹಾಗಿರಲಿ, ಬಡಿಸುವವರು ಮಾತ್ರ ಭಲೇ ನಿಪುಣರು. ಯಾವ ಮಡಿ ಮೈಲಿಗೆಯೊಂದೂ ಇಲ್ಲ, ಅದು ಬೇರೆ ಪ್ರಶ್ನೆ. ಕಾಶಿಯೇ ಮಹಾಸ್ಮಶಾಣ. ಅಲ್ಲಿ ಯಾವ ಮಡಿ ಮೈಲಿಗೆ? ಅಷ್ಟೂ ಜನಕ್ಕೆ ತರುವ ರುಚಿಕರವಾದ ಅಡುಗೆ, ಗಟ್ಟಿ ಮೊಸರು, ಎಲ್ಲವೂ ಆ ವಿಶ್ವನಾಥನ ಕೃಪೆಯೇ ಸರಿ. 

ಬೆಂಗಳೂರಿನಲ್ಲಿ ಟ್ರಾಫಿಕ್‌ ಹೇಗೋ, ಕಾಶಿಯಲ್ಲಿ ದೇವಾಲಯಗಳೂ ಹಾಗೆ. ಎಲ್ಲಿ ನೋಡಿದರೂ ದೇವಾಲಯಗಳೇ. ಬೆಂಗಳೂರಿಗೆ ಹೋದರೆ ಟ್ರಾಫಿಕ್‌ ಅಲ್ಲೇ ಸಮಯ ಕಳೆದುಬಿಡುತ್ತೇವೆ; ಕಾಶಿಗೆ ಹೋದರೆ ಅಲ್ಲಿನ ದೇವಾಲಯಗಳಲ್ಲೇ ಸಮಯ ಕಳೆದುಬಿಡುತ್ತೇವೆ. ಜೊತೆಗೆ ಅದಕ್ಕೆ ಹೋಗಬೇಕಾಗಿರುವ ಗಲ್ಲಿಗಳಲ್ಲಿ. ವೃದ್ಧರೂ, ಮರಣಕ್ಕೆ ಸಮೀಪವಾಗಿರುವವರು ಮಾತ್ರವೇ ಕಾಶಿಗೆ ಹೋಗುತ್ತಾರೆ ಎಂಬುದು ಈಗ ಸಂಪೂರ್ಣ ತಪ್ಪು ಎಂದು ಆಗಿಬಿಟ್ಟಿದೆ. ಕಾಶಿಯು ವಿದ್ಯೆಯ ಸಾಗರ, ಪ್ರಕಾಶ. ಅಷ್ಟೇ ಅಲ್ಲ, ಆ ವಾರಣಾಸಿಯನ್ನು ಸಂಪೂರ್ಣ ವೀಕ್ಷಿಸಬೇಕೆಂದರೆ ನಡೆಯದೆ ಬೇರೆ ದಾರಿಯೇ ಇಲ್ಲ. ಮರಣಕ್ಕೆ ಸಮೀಪವಾಗಿರುವವರಿಗೆ ಅವೆಲ್ಲವೂ ಸಾಧ್ಯವೇ? ಯಾರಿಗೆ ಗೊತ್ತು? ಹೇಗೂ ಹೋಗೋದು ಇದ್ದೇ ಇದೆ ಎಂದು ಚೆನ್ನಾಗಿ ನಡೆದುಬಿಟ್ಟರೆ? ಬಹುಶಃ ಮಣಿಕರ್ಣಿಕಾ ಸೇರಿಕೊಂಡುಬಿಡುತ್ತಾರೆ! ತಮಾಷೆಗೆ ಇವೆಲ್ಲವಾದರೂ, ಕಾಶಿಯ ದೇಗುಲಗಳ ದಿವ್ಯಾನುಭವವನ್ನು ಅಲ್ಲಗಳೆಯುವಂತೆಯೇ ಇಲ್ಲ. ಎಂತಹ ಸೊಗಸಾದ ಭವ್ಯ ಗೋಪುರಗಳು! ಅದರೊಳಗೆ ದೇವತೆಯ ಪುಟ್ಟ ಮೂರ್ತಿ, ಇಲ್ಲವೇ ಶಿವಲಿಂಗ. ಆ ದೇವರುಗಳಿಗೆ ಎಂತೆಂತಹ ಹೆಸರುಗಳು! ದುಂಢಿರಾಜಗಣಪತಿ, ತ್ರಿಪುರಭೈರವಿ, ವಾರಾಹಿ, ಪಂಚಮುಖಿ ಹನುಮಂತ, ಗೌತಮೇಶ್ವರ, ಲಕ್ಷ್ಮಣೇಶ್ವರ, ಸೀತೇಶ್ವರ, ಕೇದಾರೇಶ್ವರ, ಶೀತಲೀ ದೇವಿ, ರತ್ನೇಶ್ವರ, ಸಾಕ್ಷಿವಿನಾಯಕ, ಕರ್ದಮೇಶ್ವರ ಮಹಾದೇವ, ಶೂಲಟಂಕೇಶ್ವರ, ಹೀಗೆ ಹೇಳುತ್ತಾ ಹೋದರೆ ಬೆಂಗಳೂರಿನಿಂದ ಕಾಶಿಯವರೆಗೂ ರೈಲಿನಲ್ಲೇ ಹೋಗಿಬಿಡುವಷ್ಟು ಸಮಯ ಹಿಡಿಯಯುತ್ತದೆಯೋ ಏನೋ! ಬಹುತೇಕ ಎಲ್ಲಾ ದೇವಸ್ಥಾನಗಳಿಗೆ ಹೊಂದಿಕೊಂಡಂತೆ ಒಂದು ಪುರಾಣಕಥೆ, ಅಥವಾ ಯಾರೋ ಒಬ್ಬ ಋಷಿಯು ಪೂಜೆ ಮಾಡಿದ್ದನೆಂಬ ಪ್ರತೀತಿ! ಈ ದೇವಾಲಯಗಳೆಲ್ಲವೂ ಗಲ್ಲಿಗಳ ವಾಣಿಜ್ಯ ವ್ಯಾಪಾರಗಳ ಗಜಿಬಿಜಿಯ ನಡುವೆ ಮರೆಯಾಗಿಬಿಟ್ಟಿದೆ. ಒಂದೊಂದನ್ನೂ ಹುಡುಕುತ್ತಾ ಹೋದರೆ ಕಾಶಿಯಾತ್ರೆಯೇ ಕಳೆದು ಹೋದೀತು! ಕನ್ನಡ ಗೊತ್ತಿರುವ, ಕಾಶಿಯೂ ಗೊತ್ತಿರುವ ಯಾರಾದರೊಬ್ಬ ಜ್ಞಾನಿಯು ನಮ್ಮೊಂದಿಗಿದ್ದರೆ ಕಾಶಿಯು ಒಂದೊಂದಾಗಿ ತನ್ನ ರೂಪಗಳನ್ನು ತೋರುತ್ತಾ ಹೋಗುತ್ತಾಳೆ. ಆ ದಿವ್ಯಾನುಭವ ಅವರ್ಣನೀಯ. ಯಾವ ಭಾವಕ್ಕೂ, ಬರಹಕ್ಕೂ ನಿಲುಕದ ಒಂದು ವಿಷಯವದು. 

ಕಾಶಿಯ ಸ್ವಚ್ಛತೆಯೇ ಆ ನಗರದ ಇನ್ನೊಂದು ಆಯಾಮ. ರಸ್ತೆಗಳ ಕುರಿತಾಗಿ ನಾನು ಹೇಳುತ್ತಿಲ್ಲ. ಇತ್ತೀಚೆಗೆ ಸರ್ಕಾರವು ತಂದ ಕ್ರಮಗಳಿಂದ ಆಗಿರುವ ಸಕಾರಾತ್ಮಕ ಬದಲಾವಣೆಗಳ ಕುರಿತಾಗಿ ಹೇಳುತ್ತಿದ್ದೇನೆ. ಗಂಗೆಯ ತಟದ ಪ್ರತಿಯೊಂದು ಘಾಟ್‌ ನಲ್ಲೂ ಬಲವಾಗಿ ನೀರು ಬಿಡುವ ಪೈಪ್‌ ಗಳನ್ನು ಬಳಸಿ ಸ್ವಚ್ಛ ಮಾಡುತ್ತಲೇ ಇರುತ್ತಾರೆ. ಗಂಗೆಯು ಸಹಜವಾಗಿ ತನ್ನ ಹರಿವಿನಿಂದಲೇ ಸ್ವಚ್ಛವಾಗುತ್ತಾಳೆ, ಸರಿ. ಆದರೆ ಜನರು ಗಂಗೆಯಲ್ಲಿ ಸ್ನಾನ ಮಾಡುವಾಗ ಸಾಬೂನು, ಶ್ಯಾಂಪೂ ಇತ್ಯಾದಿ ರಾಸಾಯನಿಕಗಳನ್ನು ಬಳಸಿ ನೀರಿನಲ್ಲಿ ಮುಳುಗುವುದಲ್ಲದೆ, ಅದರ ಪ್ಯಾಕೆಟ್ಟುಗಳನ್ನು ಆ ತಟದಲ್ಲೇ ಇಟ್ಟು ಮರೆತುಹೋಗುತ್ತಾರೆ ಪಾಪ! ವಾಯುದೇವನು ಒಮ್ಮೆ ಗಂಗೆಯ ಮೇಲೆ ಹಾಯ್ದರೆ ಮುಗಿಯಿತು, ಈ ಪ್ಲಾಸ್ಟಿಕ್ಕೆಲ್ಲವೂ ಗಂಗೆಯ ಮಡಿಲಿಗೆ! ಆದರೆ ಅದಕ್ಕೂ ಕ್ರಮಗಳಿಲ್ಲದೆ ಇಲ್ಲ. ಗಂಗೆಯಲ್ಲಿ ಯಾವುದೋ ಒಂದು ಸಮಯದಲ್ಲಿ ಸ್ವಚ್ಛ ಮಾಡುವ ಹೊಸ ತಂತ್ರಜ್ಞಾನದ ದೋಣಿಯೊಂದು ಓಡಾಡುತ್ತಿರುತ್ತದೆ. ಈ ರೀತಿಯಾಗಿ ತೇಲಾಡುವ ತ್ಯಾಜ್ಯವನ್ನೆಲ್ಲಾ ಅದು ತಿರುಗುವ ಒಂದು ಯಂತ್ರದಲ್ಲಿ ಶೇಖರಿಸಿಬಿಡುತ್ತದೆ. ಹಾಗಾಗಿ ಗಂಗೆಯಲ್ಲಿ ಕೇವಲ ಮುಳುಗು ಹಾಕುವುದಲ್ಲ, ಸ್ನಾನವನ್ನೂ ಯಾವುದೇ ಭಯವಿಲ್ಲದೆ ಮಾಡಬಹುದು. 

ಬೆಳಗಿನ ಸಮಯದಲ್ಲಿ ಈ ಘಾಟ್‌ ಗಳಲ್ಲಿ ನಡೆದಾಡಿದರೆ ಇವೆಲ್ಲವೂ ಕಾಣುತ್ತದೆಯೇನೊ. ಸಂಜೆಯಾದರೆ ಎಲ್ಲಾ ಘಟ್ಟಗಳೂ ದೀಪಗಳಿಂದ ಸಿಂಗಾರಗೊಳ್ಳುತ್ತದೆ. ಹರಿಶ್ಚಂದ್ರ ಹಾಗು ಮಣಿಕರ್ಣಿಕಾ ಘಾಟ್‌ ಗಳು ಚಿತಾಜ್ವಾಲೆಯಿಂದ ಸಿಂಗಾರಗೊಂಡಿರುತ್ತದೆಯಾದರೂ, ಎಲ್ಲವೂ ಗಂಗಾರತಿಯ ಮಹಾಸಂಭ್ರಮಕ್ಕೆ ತಯಾರಾಗಿರುತ್ತದೆ. ಮುಖ್ಯವಾಗಿ ಇದು ವಿಜೃಂಭಣೆಯಿಂದ ನಡೆವುದು ದಶಾಶ್ವಮೇಧ ಘಾಟ್‌ ನಲ್ಲಿ. ವಿವಿಧ ರೀತಿಯ ಹಲಗಾರತಿಗಳು, ಧೂಪಾರತಿಗಳನ್ನು ಸುಂದರವಾಗಿ ಆಡಿಸುತ್ತಾ ತಾಯಿ ಗಂಗೆಗೆ ಆರತಿ ಮಾಡುತ್ತಾರೆ. ಇದನ್ನು ನೋಡಲು ಗಂಗೆಯಲ್ಲೇ ನಿಲ್ಲುವ ನೂರಾರು ದೋಣಿಗಳ ದಂಡು! ಅದರ ನಡುವೆ ʼಚಾಯ್‌ ಚಾಯ್‌ʼ ಎಂದು ಕೂಗಾಡುತ್ತಾ ದೋಣಿಯಿಂದ ದೋಣಿಗೆ ಜಿಗಿಯುತ್ತಾ ಮಾರಾಟ ಮಾಡುವ ದಿಟ್ಟ ವ್ಯಾಪಾರಿ! ಜೊತೆ ಜೊತೆಗೇ ಆ ದೋಣಿಗಳಲ್ಲಿ ಬರುವ ನವವಿವಾಹಿತ ಜೋಡಿಗಳ ಕೈಗೆ ದೀಪಗಳನ್ನು ಕೊಟ್ಟು ಚಿತ್ರಗಳನ್ನು ತೆಗೆವ ಛಾಯಾಚಿತ್ರಗ್ರಾಹಕರು! ಕಾಶಿಯಲ್ಲಿರುವ ಪ್ರವಾಸಿಗಳಲ್ಲಿ ಮುಕ್ಕಾಲು ಭಾಗ ಆ ಗಂಗಾರತಿ ವೀಕ್ಷಿಸಲು ಬಂದುಬಿಟ್ಟಿರುತ್ತಾರೆ. ಮುಗಿದ ನಂತರ ಅದೇ ಗಂಗೆಯ ಮೂಲಕವೇ ಹಾಯ್ದು ತಟದಲ್ಲಿರುವ ಬೇರೆ ಬೇರೆ ಯಾತ್ರಿ ನಿವಾಸಗಳಿಗೆ ಹೋಗಿ ತಂಪಾಗಿ ಮಲಗುವುದು; ವಾರಣಾಸಿ ಪ್ರವಾಸಿಯ ಸಂಜೆಯ ಸಮಯ ಕಳೆಯುವುದು ಹೀಗೆಯೇ.

ದಶಾಶ್ವಮೇಧ ಘಾಟ್‌ ನಲ್ಲಿ ಗಂಗಾರತಿ


ಇನ್ನು ಆ ಸಾಕ್ಷಾತ್‌ ವಿಶ್ವನಾಥನ ದರ್ಶನದ ಕುರಿತು ಏನೂ ಹೇಳಲಾಗದು. ಕಾರಣ, ಅದನ್ನು ಅನುಭವಿಸಿಯಷ್ಟೆ ಅದನ್ನು ಅರಿಯಬೇಕು. ಅದನ್ನು ಕೇಳುವುದರಲ್ಲಿ ಸುಖವಿಲ್ಲ. ದೇವಾಲಯದ ಪ್ರಾಂಗಣವನ್ನಂತೂ ತುಂಬಾ ಅದ್ಭುತವಾಗಿ ನಿರ್ವಹಿಸುತ್ತಿದಾರೆ. ಸ್ವಚ್ಛವಾಗಿದೆ. ಅಮೃತಶಿಲೆಯ ನೆಲವನ್ನು ಪ್ರತಿ ಐದು ನಿಮಿಷಗಳಿಗೆ ಒಮ್ಮೆ ಒರೆಸುತ್ತಲೇ ಇರುತ್ತಾರೆ. ಕಾಶಿ ವಿಶ್ವನಾಥನ ದರ್ಶನಕ್ಕೆ ʼವಿಶ್ವನಾಥ ಗಲ್ಲಿʼ ಹುಡುಕುವ ಅಗತ್ಯವೇ ಇಲ್ಲ! ಮಧ್ಯದಲ್ಲಿ ಭವ್ಯವಾಗಿ ರಾರಾಜಿಸುತ್ತಿರುವ ಅರಮನೆಯೊಳಗೆ ಅವನೀಗ ಆಸೀನನಾಗಿದ್ದಾನೆ. 

ಕಾಶಿ ಪ್ರವಾಸಿಯಾಗಿ ಮೊದಲ ಬಾರಿ ಹೋದಾಗ ನನ್ನ ಕಪಿಮನಸ್ಸಿಗೆ ಕಂಡಿದ್ದು ಇಂತಹ ವಿಷಯಗಳೇ. ಕಾಶಿಯ ಶಕ್ತಿ ಎಂಥದ್ದು ಎಂಬುದರ ಬಗ್ಗೆ ಬೇರೆ ಬೇರೆ ಜನರು ವಿವರವಾಗಿ ಹೇಳಿರುವುದನ್ನು ನಾನು ಕೇಳಿದ್ದೇನೆ. ನಾನು ಹೇಳಿರುವುದು ತೀರಾ ಲೌಕಿಕವಾದ, ಸ್ಥೂಲ ಮಟ್ಟದ ಅನುಭವ. ಮತ್ತೊಮ್ಮೆ ಮಗದೊಮ್ಮೆ ತಾಯಿ ಗಂಗೆಯು ನಮ್ಮನ್ನು ಕರೆಸಿಕೊಂಡಾಗ ಬಹುಶಃ ಮನದ ಉನ್ನತಿಯಾಗುತ್ತದೇನೋ? ನೋಡೋಣ.

ಹರ ಹರ ಮಹಾದೇವ!

ತೇಜಸ್‌ ಎಚ್‌ ಬಾಡಾಲ, ಮೈಸೂರು

3 Responses

  1. ನಯನ ಬಜಕೂಡ್ಲು says:

    ಮಾಹಿತಿ ಪೂರ್ಣ ಅಷ್ಟೇ ಅಲ್ಲ, ಚಂದದ ಬರಹ

  2. ಸೊಗಸಾದ ಲೇಖನ… ಮುದ್ದಾದ ಬರವಣಿಗೆ…ಶುಭವಾಗಲಿ ತೇಜಸ್..

  3. ಶಂಕರಿ ಶರ್ಮ says:

    ಕಾಶಿಯ ಕುರಿತ ಈ ಲೇಖನವು; ಕರ್ಕಶವಾಗಿ ಎಡೆಬಿಡದೆ ಹಾರ್ನ್ ಹಾಕುತ್ತಾ ಸಾಗುವ ಅಟೋದಲ್ಲಿ ನಮ್ಮನ್ನು ಕುಳ್ಳಿರಿಸಿ, ಗಲ್ಲಿ ಗಲ್ಲಿಗಳಲ್ಲಿ ಸುತ್ತಾಡಿಸಿತ್ತಾ ಎಲ್ಲಾ ಘಾಟ್ ಗಳಿಗೆ ಕೊಂಡೊಯ್ದಿತು..!

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: