ನಕುಲ-ಸಹದೇವರ ಶ್ರೇಷ್ಠತೆ-ವಿಶಿಷ್ಟತೆ

Share Button

ಒಬ್ಬ ರಾಜನಿಗೋ ಅಥವಾ ಗೃಹಸ್ಥನಿಗೋ ಇಬ್ಬರು ಪತ್ನಿಯರಿದ್ದರೆ; ಒಬ್ಬರು ಬಲತಾಯಿ, ಇನ್ನೊಬ್ಬರು ಮಲತಾಯಿ -ತಂದೆಯ ಹಿರಿ ಪತ್ನಿಯೊಂದಿಗೆ ಹಾಗೂ ಕಿರಿ ಪತ್ನಿಯೊಂದಿಗೆ ಮಕ್ಕಳಿಗೂ ಏಗುವುದು ಕಷ್ಟ ಎಂಬ ಭಾವನೆ ಲೋಕದಲ್ಲಿ ಇರುವಂತಾದ್ದು, ಅರ್ಥಾತ್ ಹೆಣ್ಣಿಗೆ ತಾನು ಹೆತ್ತ ಮಕ್ಕಳಲ್ಲಿರುವಷ್ಟು ಅಕ್ಕರೆ ಇನ್ನೋರ್ವಾಕೆಯ ಮಕ್ಕಳಲ್ಲಿ ಇರುವುದಿಲ್ಲ ಎಂಬುದೇ ತಾತ್ಪರ್ಯ. ಆದರೆ ಈ ಮಾತಿಗೆ ವಿರೋಧವೆಂಬಂತೆ ತನ್ನ ಮಕ್ಕಳೆಂದೇ ಮಮಕಾರ ತೋರಿ; ಆ ಮಕ್ಕಳು ಬೇರೆಯಲ್ಲ ಎಂಬ ಅನುಮಾನ ಲೋಕಕ್ಕೆ ಬಾರದಂತೆ ಸಾಕಿ, ಸಲಹಿ, ಬೆಳೆಸಿ ಅವರ ಕಷ್ಟ ಸುಖಗಳಿಗೆ ತನ್ನ ತನು-ಮನವನ್ನರ್ಪಿಸಿ ಅವರ ಸರ್ವಾಂಗೀಣ ಅಭಿವೃದ್ಧಿಯಲ್ಲಿ ತಾನೂ ಸಹಭಾಗಿಯಾದ ಮಾತೆಯರೂ ಇಲ್ಲದಿಲ್ಲ. ಈ ನಿದರ್ಶನವನ್ನು ಮಹಾಭಾರತದ ನಕುಲ-ಸಹದೇವರ ಕತೆಯಲ್ಲಿ ಕಾಣಬಹುದು.

ಪಾಂಡವರು ಐವರ ಪೈಕಿ ಯುಧಿಷ್ಠಿರ, ಭೀಮ, ಅರ್ಜುನ ಈ ಮೂವರ ಕತೆಯನ್ನು ಇದೇ ಅಂಕಣದಲ್ಲಿ ಹಿಂದೆ ಬರೆದಿದ್ದೇನೆ. ಈಗ ನಕುಲ-ಸಹದೇವರ ಬಗ್ಗೆ ಒಂದಿಷ್ಟುತಿಳಿಯೋಣ.

ಪಾಂಡುರಾಜನ ಹಿರಿಯ ಪತ್ನಿ ಕುಂತಿಯಾದರೆ ಎರಡನೇ ಮಡದಿಯೇ ‘ಮಾದ್ರಿ’.  ಮದ್ರ ದೇಶಾಧಿಪತಿಯಾದ ‘ಋತಾಯನ’ ಎಂಬ ಅರಸನ ಮಗಳು, ಶಲ್ಯನ ಒಡಹುಟ್ಟಿದವಳು. ಆಕೆ ತುಂಬ ರೂಪವತಿಯೂ ಸದ್ಗುಣಿಯೂ ಆಗಿದ್ದಳೆಂದು ಪ್ರಸಿದ್ದಿ ಪಡೆದುದರಿಂದ ಭೀಷ್ಮನು ಅವಳನ್ನು ಪಾಂಡುವಿಗೆ ಮದುವೆ ಮಾಡಿಸಿದ್ದನು. ಪಾಂಡುವಿಗೆ ಕುಂತಿ, ಮಾದ್ರಿ ಎಂಬ ಇಬ್ಬರು ಪತ್ನಿಯರಿದ್ದು ಮಕ್ಕಳಾಗಿರಲಿಲ್ಲ. ಅದು ಕಿಂದಮ ಋಷಿಯ ಶಾಪ ಎಂಬುದನ್ನೂ ಬಲ್ಲೆವು, ಯುಧಿಷ್ಠಿರ, ಭೀಮ, ಅರ್ಜುನ ಈ ಮೂವರೂ ಕುಂತಿಯ ಮಕ್ಕಳು. ಆಕೆಗೆ ದೂರ್ವಾಸರು ಹಿಂದೆ ನೀಡಿದಂತಹ ವರಪ್ರಸಾದಿಂದ ಪಾಂಡುವಿನ ಅನುಮತಿ ಮೇರೆಗೆ ಕ್ರಮವಾಗಿ ಯಮಧರ್ಮರಾಯನಿಂದ ಯುಧಿಷ್ಠಿರ ವಾಯುದೇವನಿಂದ ಭೀಮಸೇನ, ದೇವೇಂದ್ರನಿಂದ ಅರ್ಜುನನೂ ಜನಿಸುತ್ತಾರೆ ಎಂಬುದನ್ನು ತಿಳಿದಿದ್ದೇವೆ. ಹಾಗಾದರೆ ‘ಮಾದ್ರಿ’ಗೆ ಮಕ್ಕಳಾಗುವುದು ಹೇಗೆ..? ನೋಡೋಣ.

ನಕುಲ-ಸಹದೇವರ ಜನನ: ಅಕ್ಕನಿಗೆ ವಿವಿಧ ದೇವತೆಗಳ ವರದಿಂದ ಮೂವರು ಮಕ್ಕಳಾದರೆ ಸ್ತ್ರೀ ಸಹಜ ಗುಣವಾದ ಸಂತಾನ ವಾಂಛೆ ಮಾದ್ರಿಯಲ್ಲೂ ಮೂಡುತ್ತದೆ. ಪರಿಣಾಮವಾಗಿ ಮಾದ್ರಿಯು ಪಾಂಡುವಿನಲ್ಲಿ ನಿವೇದಿಸುತ್ತಾಳೆ. ರಾಜಾ… ಸವತಿಗೆ ಮಕ್ಕಳಾಗಿ ನನಗೆ ಆಗಿಲ್ಲವೆಂಬ ಕೊರಗಾಗಲೀ, ಈರ್ಷ್ಯೆಯಾಗಲೀ ಇಲ್ಲ. ಆದರೆ ತನಗೂ ಹೀಗೆ ಮಂತ್ರೋಪದೇಶದಿಂದ ಮಕ್ಕಳಾಗದೇ ಎಂಬ ಸ್ತ್ರೀ ಸಹಜ ಅಭಿಲಾಶೆಯಿಂದ ಹೇಳುತ್ತಿದ್ದೇನೆ. ಅದಕ್ಕಾಗಿ ಕುಂತಿಯೊಡನೆ ನನಗೂ ಮಂತ್ರೋಪದೇಶ ಮಾಡಲು ಹೇಳಿರಿ ಎಂದು ಭಿನ್ನವಿಸುತ್ತಿದ್ದೇನೆ’ ಎಂದಳು, ಸಂತಾನಾಪೇಕ್ಷಿಯಾಗಿ ಹೆಂಡತಿಯು ಗಂಡನಲ್ಲಿ ಪ್ರಾರ್ಥಿಸಿದಾಗ ಅದನ್ನು ಪೂರೈಸಬೇಕಾದ್ದು ಗಂಡನ ಧರ್ಮ!ಆದರೆ ಋಷಿ ಶಾಪದಿಂದ ತಾನು ಆ ಇಷ್ಟಾರ್ಥವನ್ನು ಪೂರೈಸಲಾಗುವುದಿಲ್ಲ. ಪ್ರತ್ಯಕ್ಷವಾಗಿ ಅಲ್ಲದಿದ್ದರೆ ಪರೋಕ್ಷವಾಗಿಯಾದರೂ ತಾನು ಮಡದಿಯ ಆಸೆಯನ್ನು ಈಡೇರಿಸಬೇಕು. ಪಾಂಡುವು ಮಾದ್ರಿಯ ಇಷ್ಟವನ್ನು ಕುಂತಿಗೆ ತಿಳಿಸುತ್ತಾನೆ. ದೂರ್ವಾಸರು ನೀಡಿದ ಐದು ಮಂತ್ರೋಪದೇಶದಲ್ಲಿ ತಾನು ಕನ್ಯೆಯಾಗಿದ್ದಾಗ ಹೆತ್ತ ಕರ್ಣನ ಸಹಿತ ನಾಲ್ಕು ಮಂತ್ರೋಪದೇಶಗಳು ಮುಗಿದಿತ್ತು. ಇನ್ನು ಒಂದು ಬಾಕಿ ಇತ್ತು. ಈ ರೀತಿಯಾಗಿ ಯೋಚಿಸಿದ ಕುಂತಿಯು ಮಾದ್ರಿಗೆ ಒಂದೊಳ್ಳೆ ಮುಹೂರ್ತದಲ್ಲಿ ಮಂತ್ರೋಪದೇಶ ಮಾಡುತ್ತಾಳೆ. ಮಾದ್ರಿಯು ಚೆನ್ನಾಗಿ ಯೋಚಿಸಿ ಅಶ್ವಿನೀ ದೇವತೆಗಳನ್ನು ನೆನೆಯುತ್ತಾಳೆ.ಮಿಂದು ಮಡಿಯುಟ್ಟು ಅಶ್ವಿನೀ ದೇವತೆಗಳನ್ನು ಭಕ್ತಿಯಿಂದ ಪ್ರಾರ್ಥಿಸಿದಾಗ ಪ್ರತ್ಯಕ್ಷರಾದ ಅಶ್ವಿನೀ ದೇವತೆಗಳು ಆಕೆಗೆ ಸರ್ವಾಂಗ ಸುಂದರವಾದ ಲೋಕಮೋಹಕರಾದ ಅವಳಿ ಮಕ್ಕಳನ್ನು ಕರುಣಿಸುತ್ತಾರೆ. ಅವರಲ್ಲಿ ಮೊದಲನೆಯವನು ಅಪ್ರತಿಮ ರೂಪಾತಿಶಯದಿಂದ ಇನ್ನಿತರರಿಗೆ ಹೋಲಿಸಲು ಸಾಧ್ಯವಾಗದಷ್ಟು ಸುಂದರನಾಗಿರುವುದರಿಂದ `ನಕುಲ’ ಎಂದು ಹೆಸರಿಡುತ್ತಾರೆ. ಎರಡನೆಯವನು ಭವಿಷ್ಯವನ್ನು ನುಡಿಯುವ ಅಗಾಧ ಜ್ಞಾನವುಳ್ಳವನಂತಿರುವುದರಿಂದ ‘ಸಹದೇವ’ನೆಂದು ನಾಮಕರಣ ಮಾಡುತ್ತಾರೆ. ಹೀಗೆ ಪಂಚಪಾಂಡವರು ಉದಿಸಿ ದೊಡ್ಡವರಾಗುತ್ತಾ ಬಂದರು. ಮಕ್ಕಳಿಲ್ಲವೆಂದು ವೈರಾಗ್ಯದಿಂದ ಕಾಡಿಗೆ ಬಂದ ಚಕ್ರವರ್ತಿ ಪಾಂಡುವು ಸುಖದಲ್ಲಿ ತೇಲಾಡುತ್ತಿದ್ದ.

ಹೀಗಿರಲು ಸುಂದರಿಯಾದ ಮಡದಿ ಮಾದ್ರಿಯ ಬಳಿಯಲ್ಲಿ ಸುತ್ತಾಡುತ್ತಿರಲು ಆಕೆಯನ್ನು ಭೋಗಿಸಬೇಕೆಂಬ ಮನಸ್ಸಾಗುತ್ತದೆ. ಋಷಿ ಶಾಪದ ಮರವೆಯುಂಟಾಗಿ ಪತ್ನಿಯ ಸನಿಹ ಬರುತ್ತಾನೆ. ಚಿತ್ತದ ನಿಯಂತ್ರಣ ತಪ್ಪಿ ಹೋಗಿ ಕೂಡುತ್ತಾನೆ. ಕೂಡಲೇ ಪಾಂಡುರಾಜನ ನಿಧನವಾಗುತ್ತದೆ. ತನ್ನ ದೇಹದ ಮೇಲೆ ಬಿದ್ದ ಪತಿಯು ಮರಣವನ್ನಪ್ಪಿದ್ದರಿಂದ ತನ್ನ ಸುತರಿಬ್ಬರನ್ನೂ ಕುಂತಿಗೊಪ್ಪಿಸಿ ತಾನು ಪತಿಯ ಚಿತೆಯ ಮೇಲೆ ಪ್ರಾಣತ್ಯಾಗ ಮಾಡುತ್ತಾಳೆ ಮಾದ್ರಿ.

ಮುಂದೆ ಪಾಂಡವರೈವರಿಗೂ ಕುಂತಿಯೇ ಹೆತ್ತ ಮಾತೆಯಾಗಿ ನಿಲ್ಲುತ್ತಾಳೆ. ಮಹಾಭಾರತ ಕತೆಯು ಮೇಲ್ನೋಟಕ್ಕೆ ಮುಂದಿನ ಪರ್ವಗಳಲ್ಲಿ ಪಾಂಡವರೈವರ ತಾಯಿ ಕುಂತಿಯೆಂದೇ ಘೋಷಿಸುತ್ತಾ ನಕುಲ – ಸಹದೇವರ ಹೆತ್ತ ತಾಯಿ ‘ಮಾದ್ರಿ’ ಮರೆಯಾಗಿ ನಿಲ್ಲುತ್ತಾಳೆ. ಮುಂದೆ ಕುಂತಿಗೆ ಯುಧಿಷ್ಠಿರ, ಭೀಮ, ಅರ್ಜುನ ಬೇರೆಯಲ್ಲ. ನಕುಲ- ಸಹದೇವರು ಬೇರೆಯಲ್ಲ, ಪುತ್ರರತ್ನರು ಐವರೂ ತನ್ನ ಹಸ್ತದ ಐದುಬೆರಳುಗಳಂತೆ. ಮಹಾಭಾರತದ ಕಥೆಯುದ್ದಕ್ಕೂ ಒಂದಿನಿತೂ ಬೇಧ ಭಾವವಾಗಲೀ ಸವತಿ ಮಾತ್ಸರ್ಯವಾಗಲೀ ಕಾಣಸಿಗುವುದಿಲ್ಲ.

ನಕುಲನ ಶ್ರೇಷ್ಠತೆ:  ನಕುಲನು ಪಾಂಡವರು ಐವರಲ್ಲಿ ಅತೀ ಸುಂದರನು, ಇವನು ಏಕರಥ ಹೊಂದಿದವನು. ಚಿತ್ರಯುದ್ಧದಲ್ಲಿ ನಿಪುಣನೆನಿಸಿ ಪ್ರಖ್ಯಾತಿ ಪಡೆದವನು. ಅಜ್ಞಾತವಾಸ ಕಾಲದಲ್ಲಿ ಅಶ್ವಪಾಲಕನಾಗಿದ್ದ ಇವನಿಗೆ ಜಯತ್ಸೇನನೆಂಬ ಗುಪ್ತನಾಮವಿತ್ತು. ದಾಯಾದಿಗಳಾದ ಕೌರವರೊಡನೆ ಆದಷ್ಟು ಹೊಂದಿಕೊಂಡು ಬಾಳಬೇಕೆಂಬ ಅಭಿಲಾಶೆಯಿಂದ ನಕುಲನು; ಶ್ರೀಕೃಷ್ಣನು ದುರ್ಯೋಧನನ ಆಸ್ಥಾನಕ್ಕೆ ರಾಯಭಾರಿಯಾಗಿ ಹೊರಟಾಗ ಸಂಧಾನವನ್ನೇ ಸೂಚಿಸಿದನು. ನಕುಲನಿಗೆ ಇಬ್ಬರು ಹೆಂಡತಿಯರು, ದ್ರೌಪದಿ ಹಾಗೂ ದೃಷ್ಟಕೇತುವಿನ ಸೋದರಿಯಾದ ರೇಣುಮತಿ. ಈತನಿಗೆ ದ್ರೌಪದಿಯಲ್ಲಿ ಶತಾನೀಕನೂ ರೇಣುಮತಿಯಲ್ಲಿ ನಿರಮಿತ್ರನೆಂಬ ಮಗನೂ ಜನಿಸಿದರು. ರಾಜಸೂಯ ಯಾಗ ಕಾಲದಲ್ಲಿ ಪಶ್ಚಿಮ ದಿಕ್ಕಿನ ವಿಜಯ ಯಾತ್ರೆಯನ್ನು ಕೈಗೊಂಡ ನಕುಲನು ರೋಹಿತ, ತ್ರಿಗರ್ತ, ಶಿಬಿ, ಮದ್ರಾದಿ ದೇಶಗಳನ್ನು ಗೆದ್ದು ಕಪ್ಪಗಳನ್ನು ತಂದು ಧರ್ಮರಾಜನಿಗೆ ಒಪ್ಪಿಸಿದನು. ನಕುಲನ ಶಂಖದ ಹೆಸರು ಸುಘೋಷ .ನಕುಲನು, ಮಹಾಪ್ರಸ್ಥಾನ ಕಾಲದಲ್ಲಿ ದ್ರೌಪದಿ ಮತ್ತು ಸಹದೇವನೂ ದೇಹಬಿಟ್ಟು ಮಡಿದ ಮೇಲೆ ಅವರಂತೆಯೇ ದೇಹಬಿಟ್ಟನು. ಎಲ್ಲರೂ ಮಡಿದ ಮೇಲೆ ಧರ್ಮರಾಜನು ಸುರಗಂಗೆಯಲ್ಲಿ ಮಿಂದು ಮನುಷ್ಯ ದೇಹವನ್ನು ಕಳಚಿ ದೇವತೆಗಳಿಗೆ ಯೋಗ್ಯವಾದ ದೇಹದೊಂದಿಗೆ ಇಂದ್ರನೊಡನೆ ಸ್ವರ್ಗಕ್ಕೆ ಹೋಗುವಾಗ ಅಶ್ವಿನಿ ದೇವತೆಗಳೊಡನೆ ಸ್ವರ್ಗಸುಖವನ್ನು ಅನುಭವಿಸುತ್ತಿದ್ದ ನಕುಲನನ್ನು ಕಂಡನಂತೆ.

ಸಹದೇವನ ವಿಶಿಷ್ಟತೆ:  ಪಾಂಡವರಲ್ಲಿ ಕಿರಿಯವನಾದ ಸಹದೇವನು ಮೇಲೆ ಹೇಳಿದಂತೆ ಅಶ್ವಿನಿ ದೇವತೆಗಳ ಅಂಶದವನು. ದ್ರೌಪದಿಯ ಸ್ವಯಂವರ ಕಾಲದಲ್ಲಿ ದುಶ್ಯಾಸನನನ್ನು ಸೋಲಿಸಿದನು. ಈತನಿಗೆ ಧರ್ಮಪತ್ನಿ ದ್ರೌಪದಿಯಾದರೆ ಎರಡನೆಯವಳು ಶಲ್ಯನ ಮಗಳಾದ ವಿಜಯೆ. ಮೂರನೆಯಾಕೆ ಭಾನುವಿನ ಮಗಳಾದ ಭಾನುಮತಿ, ದ್ರೌಪದಿಯಲ್ಲಿ ಶ್ರುತಸೇನನೂ ವಿಜಯೆಯಲ್ಲಿ ಸುಹೋತ್ರನೂ ಮಕ್ಕಳು.

ಇವನು ರಾಜಸೂಯಯಾಗ ಕಾಲದಲ್ಲಿ ದಕ್ಷಿಣ ಭಾರತ ವಿಜಯ ಯಾತ್ರೆಯಲ್ಲಿ ಶೂರಸೇನ, ಮಾಹಿಷ್ಮತಿ (ಈಗಿನ ಮೈಸೂರು) ಮೊದಲಾಗಿ ದೇಶಗಳನ್ನು ಗೆದ್ದನು. ರಾಜಸೂಯ ಮುಗಿದ ಮೇಲೆ ಶ್ರೀಕೃಷ್ಣನಿಗೆ ಭೀಷ್ಮನ ಅಭಿಪ್ರಾಯದಂತೆ ಅಗ್ರಪೂಜೆ ಸಲ್ಲಿಸಿದನು. ಇವನು ಘಟೋತ್ಕಚನನ್ನು ಲಂಕೆಗೆ ಕಳುಹಿಸಿ ವಿಭೀಷಣನಿಂದ ಕಪ್ಪವನ್ನು ತರಿಸಿಕೊಂಡನಂತೆ.

ಅಜ್ಞಾತವಾಸ ಕಾಲದಲ್ಲಿ ತಂತ್ರೀಪಾಲನೆಂಬ ಹೆಸರಿನಿಂದ ಗೋ ರಕ್ಷಕನಾಗಿದ್ದನು. ಆಗ ಅವನಿಗೆ ಜಯದ್ಭಲನೆಂಬ ಗುಪ್ತನಾಮವೂ ಇತ್ತು. ಆನೆ – ಕುದುರೆಗಳನ್ನು ಪಳಗಿಸುವುದರಲ್ಲಿ ಸಮರ್ಥನಾಗಿದ್ದನಂತೆ. ಸಹದೇವನ ಶಂಖದ ಹೆಸರು ‘ಮಣಿಪುಷ್ಪಕ’. ದೇವೇಂದ್ರನಿಂದ ನೀತಿಶಾಸ್ತ್ರವನ್ನು ಪಡೆದ ಈತನಿಗೆ ಭೂತ – ಭವಿಷ್ಯದ್ವಿಚಾರಗಳನ್ನು ತಿಳಿಯುವ ಶಕ್ತಿ ಇತ್ತೆಂದು ತಿಳಿದು ಬರುತ್ತದೆ. ಮಹಾಭಾರತ ಯುದ್ಧದಲ್ಲಿ ಬಂಧು ಬಾಂಧವರನ್ನೂ ಪ್ರಜೆಗಳನ್ನೂ ಅಗಲಿಕೆಯ ನೋವಿನಿಂದ ಕಡುನೊಂದು ನಾಡಿಗೆ ಹೋಗದೆ ವನವಾಸದ ಇಚ್ಛೆ ವ್ಯಕ್ತಪಡಿಸಿದ ಧರ್ಮರಾಜನಿಗೆ; ತನ್ನವರೆಂಬ ಸ್ವಾರ್ಥವನ್ನು ತ್ಯಜಿಸಿ ಲೋಕಧರ್ಮವನ್ನನುಸರಿಸಿ ಉತ್ತಮ ಕ್ಷತ್ರಿಯನಂತೆ ರಾಜ್ಯಪಾಲನೆ ಮಾಡುವುದರಿಂದ ಧರ್ಮದ ಪಾಲನೆಯೂ ಆಗುವುದಲ್ಲದೇ ಆತ್ಮಸುಖವೂ ಲಭಿಸುತ್ತದೆ ಎನ್ನುತ್ತಾನೆ.

ಮಹಾಪ್ರಸ್ಥಾನ ಕಾಲದಲ್ಲಿ ದ್ರೌಪದಿಯ ಅನಂತರ ನಕುಲನಂತೆ ಈತನು ನೆಲಕ್ಕೊರಗಿದನು. ಧರ್ಮರಾಜನು ಸ್ವರ್ಗದಲ್ಲಿ ನಕುಲನನ್ನು ಕಂಡಂತೆ ಸಹದೇವನನ್ನೂ ಅಶ್ವಿನಿ ದೇವತೆಗಳ ಬಳಿಯಲ್ಲಿರುವುದನ್ನು ಕಂಡನಂತೆ, ಈಜುವುದೋ ಮುಳುಗುವುದೋ ಯಾವುದೇ ಆಗಲಿ ಅದು ಅಣ್ಣಂದಿರ ಜೊತೆಗೆ ಎಂದು ನಂಬಿದ ನಕುಲ-ಸಹದೇವರ ಸಂಘಟನೆ ಪಾಂಡವ ಸಮೂಹಕ್ಕೆ ಶ್ರೇಷ್ಠತೆ – ವಿಶಿಷ್ಟತೆಗಳನ್ನು ತಂದುಕೊಟ್ಟಿತು ಎಂಬುದು ಗಮನಾರ್ಹ.

ವಿಜಯಾಸುಬ್ರಹ್ಮಣ್ಯ ಕುಂಬಳೆ.

5 Responses

 1. ನಕುಲ ಸಹದೇವರ ಬಗ್ಗೆ ತಿಳಿಸಿ ಕೊಟ್ಟ ನಿಮಗೆ ಧನ್ಯವಾದಗಳು ವಿಜಯಾ ಮೇಡಂ

 2. Anonymous says:

  ಧನ್ಯವಾದಗಳು. ಅಡ್ಮಿನ್ ಹೇಮಮಾಲಾ ಹಾಗೂ ಓದುಗ ಬಳಗಕ್ಕೆ….

 3. ನಯನ ಬಜಕೂಡ್ಲು says:

  Nice

 4. Padma Anand says:

  ನಕುಲ, ಸಹದೇವರ ಶ್ರೇಷ್ಟತೆಯನ್ನು ಸಾರುವ ಸುಂದರ ಲೇಖನ.

 5. ಶಂಕರಿ ಶರ್ಮ says:

  ನಕುಲ ಮತ್ತು ಸಹದೇವರ ವಿಶೇಷ ಗುಣಗಳನ್ನು ತಿಳಿದುಕೊಂಡಂತಾಯಿತು…ಧನ್ಯವಾದಗಳು ವಿಜಯಕ್ಕ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: