ಒಂದು ಚಿಟ್ಟೆಯ ಆತ್ಮಕಥೆ

Share Button

ಅಬ್ಬಾ!! ಎಂಥಾ , ತಣ್ಣಗಿನ ಗೂಡು ಇದು. ಇಲ್ಲೊಂದು ಜೀವ ಇದೆ ಎಂದು ಜಗತ್ತಿಗೆ ಗೊತ್ತೇ ಆಗದಷ್ಟು ಶಾಂತತೆ. ಹಾಗಿದ್ದಾಗ್ಯೂ ನನ್ನೊಳಗಡೆಯೇ ಎಷ್ಟೊಂದು ರಚನಾತ್ಮಕ ಹಾಗೂ ವಿಚ್ಛೇದಕ ಬದಲಾವಣೆಗಳನ್ನು ಮಾಡಿಕೊಳ್ಳುತ್ತಿದ್ದೇನೆ ಎಂದು ನನಗೆ ಮಾತ್ರ ಅರಿವಿದೆ. ನನ್ನ ಭವಿಷ್ಯಕ್ಕೆ ಅವಶ್ಯಕವಾದ ಎಲ್ಲಾ ಅಂಗಾಂಗ ರಚನೆಯ ಜೊತೆ ಜೊತೆಗೇ, ಇಷ್ಟು ದಿನ ನಾನು ಉಪಯೋಗಿಸಿದ, ಮುಂದೆ ಬೇಡವಾದ ಅಂಗಗಳ ವಿನಾಶ- ಹೀಗೆ ಮೇಲೆ ಶೀತಲವಾಗಿ ಗೋಚರಿಸಿದರೂ ಸಮುದ್ರದ ಆಳದಲ್ಲಿ ಕೊತಕೊತನೆ ಕುದಿಯುತ್ತಿರುವ ಜ್ವಾಲಾಮುಖಿಯಂತೆ! ನನ್ನ ಎಲ್ಲಾ ತಯಾರಿಗಳೂ ಮುಗಿದ ಮೇಲೆ ಇನ್ನೇಕೆ ಈ ಕತ್ತಲ ಕೋಣೆಯ ಹಂಗು? ಎನಿಸಿಬಿಟ್ಟಾಗ ಬಾಗಿಲು ತೆರೆದು ಹೊರಬರುವ ಸಾಹಸ ಆರಂಭವಾಯ್ತು. ಪ್ರತಿಯೊಂದು ಕ್ಷಣವೂ ಅದೇ ಧ್ಯಾನ. ನನಗೀಗ ಆರು ಕಾಲುಗಳು, ಪಟಪಟನೆ ಹಾರಿ ನಲಿಯಲು ಎರಡು ಜೋಡಿ ರೆಕ್ಕೆಗಳು, ಹೂವಿಂದ ಹೂವಿಗೆ ಹಾರಿ ಮಕರಂದ ಹೀರುವ ಕೊಳವೆಯಂತಹ ಸಾಧನ, ಅತ್ಯಂತ ನಾಜೂಕಾದ ಕಣ್ಣುಗಳು, ಸಂಗಾತಿಯನ್ನು ಆರಿಸಲು ಬೇಕಾದ ಬಣ್ಣಗಳ ಚಿತ್ತಾರ, ಸುವಾಸನಾಯುಕ್ತ —- ಇಷ್ಟೆಲ್ಲಾ ಇದ್ದ ಮೇಲೆ ಹೊರಪ್ರಪಂಚಕ್ಕೆ ಹಾರಿ ಹೋಗಲು ನನಗಿನ್ನಾವ ರಹದಾರಿ ಬೇಕು! ಸ್ವತಂತ್ರ ಜೀವನದ ತುಡಿತ ಎಷ್ಟು ಸುಖ ನೀಡಬಲ್ಲದೋ, ಆದರೆ ಅದನ್ನು ಸಾಧಿಸುವ ಹಾದಿ ಅಷ್ಟೇ ಕಠಿಣ. ಅಂತೂ ಇಂತೂ ಬಾಗಿಲು ತೆರೆದು ಆ ಕತ್ತಲಿನಿಂದ ಬೆಳಕಿನ ಲೋಕಕ್ಕೆ ಕಾಲಿಟ್ಟ ಆ ಕ್ಷಣ ಎಂಥಾ ಮಧುರ! ಮೊದಲಿಗೆ ಏನೋ ಪುಳಕ, ಆದರೆ ಅಷ್ಟೇ ಬಲಹೀನತೆ, ನಡುಕ. ಕೆಲ ಹೊತ್ತಿನಲ್ಲಿಯೇ ರೆಕ್ಕೆಯ ನರನರಗಳಲ್ಲಿ ಚೈತನ್ಯ ತುಂಬಿದಂಥ ಅನುಭವ. ಅದೇನಾಯ್ತೋ ಗೊತ್ತಿಲ್ಲ, ಇದ್ದಕ್ಕಿದ್ದಂತೆ ನಾನು ಹಾರಬೇಕು ಎಂಬ ಹಂಬಲ ಹುಟ್ಟಿ ಬಲವಾಗುತ್ತಿದ್ದಂತೆ ಒಮ್ಮೆಲೇ ರೆಕ್ಕೆ ಬಡಿಯುತ್ತಾ ಹಾರಿಯೇಬಿಟ್ಟೆ. ಆಹಾ! ಎಷ್ಟು ಹಗುರಾಗಿ, ವೇಗವಾಗಿ ಬೇಕೆಂದಲ್ಲಿ ಹೋಗಬಹುದು ಎಂದೆನಿಸಿ ಪರಮಾನಂದವಾಯ್ತು. ಹಾದಿಯಲ್ಲಿ ಕಂಡ ಬಣ್ಣಬಣ್ಣದ ಹೂವುಗಳು ನನ್ನನ್ನು ನೋಡಿ ನಕ್ಕಂತಾಯ್ತು. ನಕ್ಕು ಕೈಬೀಸಿ ಕರೆದಾಗ ನನ್ನ ಆನಂದಕ್ಕೆ ಪಾರವೇ ಇರಲಿಲ್ಲ. ಎಂಥಾ ಪ್ರೀತಿಯ ಆತಿಥ್ಯ! ಮಧುರವಾದ ಮಕರಂದ ಹೀರುವ ಅವಕಾಶ. ಬದಲಾಗಿ ನಾನೇನು ಕೊಡಲಿ ಎಂದೆನಿಸಿದಾಗ ಆ ಹೂವುಗಳಿಗೆ ಪರಾಗಸ್ಪರ್ಶದ ಸುಖವನ್ನು ನೀಡಬಲ್ಲೆನೆಂಬ ಧನ್ಯತಾಭಾವ ಮೂಡಿತು.

ದಿನಗಳೆದಂತೆ ತಿರುಗಾಟ, ಹಾರಾಟ, ರಸದೂಟ- ಇವೆಲ್ಲದರ ನಡುವೆಯೇ ಸಂಗಾತಿಯ ಬಯಕೆ ನನಗರಿವಿಲ್ಲದೆಯೇ ಹುಟ್ಟಿಬಿಟ್ಟಿತಲ್ಲಾ! ಆದರೆ ನನ್ನ ನಲ್ಲನನ್ನು ಹುಡುಕುವ ಪರಿ ಎಂತು? ಪ್ರೇಮನಿವೇದನೆ ಹೇಗೆ? ಎಂಬ ಸವಾಲು ಎದುರಾಯಿತು. ಪ್ರಕೃತಿಯ ವಿಸ್ಮಯ- ಗಂಡು ಹೆಣ್ಣಿನ ದೇಹದಿಂದ ಸ್ರವಿಸಲ್ಪಡುವ ಫಿರೋಮೋನುಗಳ ಮೂಲಕ ನಮ್ಮ ಪ್ರಣಯದಾಟ ನಡೆದೇ ಹೋಯಿತಲ್ಲ!

ಮುಂದೆ ವಂಶಾಭಿವೃದ್ಧಿಯ,ಸಂಸಾರದ ಬೆಳವಣಿಗೆಯ ಯೋಚನೆ ಶುರು. ನಾಳೆ ಮೊಟ್ಟೊಯೊಡೆದು ಹೊರಬಂದಾಗ ನನ್ನ ಎಳೆ ಕಂದಮ್ಮಗಳಿಗೆ ಯೋಗ್ಯ ಆಹಾರ, ನೆರಳು, ರಕ್ಷಣೆ ಎಲ್ಲಿ ಸಿಗಬಹುದು. ಎಂದು ಆಲೋಚಿಸಿ ಹುಡುಕಿಯೇ ನಾನು ಮೊಟ್ಟೆ ಇಡಬೇಕು. ಏನೋ ಸಿಕ್ಕಿದ್ದನ್ನೆಲ್ಲಾ ತಿಂದುಬಿಡುವ ಜಾಯಮಾನದವರಲ್ಲವಲ್ಲ ನನ್ನ ಕಂದಮ್ಮಗಳು. ಅವಕ್ಕೆ ಒಗ್ಗುವ ಆಹಾರವಾದ ಎಲೆ- ಅದೂ ಮೃದು ಹಾಗೂ ಎಳೆಯ-ಗಿಡಮರಗಳನ್ನು ಹುಡುಕಿ, ಎಲೆಯ ಕೆಳಭಾಗದಲ್ಲಿ ಅಥವಾ ಕಾಂಡದ ಮೇಲೆ ಮೊಟ್ಟೆಗಳನ್ನಿಟ್ಟು ಅವನ್ನು ಸ್ಥಿರವಾಗಿ ಅಲ್ಲಿ ನೆಲೆ ನಿಲ್ಲಿಸುವುದಷ್ಟೇ ನನ್ನಿಂದ ಮಾಡಲು ಸಾಧ್ಯ. ಮನುಷ್ಯ ಮತ್ತು ಇನ್ನಿತರ ಪ್ರಾಣಿವರ್ಗಗಳಂತೆ ಮಕ್ಕಳ, ಮರಿಗಳ ಲಾಲನೆ ಪಾಲನೆ ಮಾಡುವ ಭಾಗ್ಯ ನನಗಿಲ್ಲವಲ್ಲ. ಪ್ರಕೃತಿ ಮಾತೆಯ ಕೃಪೆಗೆ ಆ ಮೊಟ್ಟೆಗಳನ್ನು ಬಿಟ್ಟು ಎಲ್ಲಾ ಮರಿಗಳೂ ಸುಖವಾಗಿ ಜನಿಸಿ, ಯಾವ ವೈರಿಗೂ ಆಹಾರವಾಗದೆ ಯಶಸ್ವಿಯಾಗಿ ಬದುಕಿ ಬಾಳಲಿ ಎಂದು ಹರಸುತ್ತಾ ಮುಂದೆ ಸಾಗದೆ ನನಗೆ ಬೇರೆ ದಾರಿಯಿಲ್ಲ.

PC: Internet

ಹಲವಾರು ದಿನಗಳು – ಪರ ಜೀವಿಗಳಿಗೆ ಆಹಾರವಾಗದೆ, ಮಳೆ ಬಿಸಿಲುಗಳ ಹೊಡೆತವನ್ನು ತಡೆದುಕೊಂಡು ಉಳಿದರೆ ಪುಟ್ಟ ದಾರದ ತುಂಡಿನಂತಹ ಮರಿಯೊಂದು ಈ ಮೊಟ್ಟೆಯಿಂದ ಹೊರಬರುತ್ತದೆಂದು ಸ್ವಾನುಭವದ ಆಧಾರದ ಮೇಲೆ ಹೇಳಬಲ್ಲೆ. ಆ ತುಂಟ ಮರಿಯೋ ಒಂದೇ ಕಡೆ ನಿಲ್ಲಲಾರದು. ಸದಾ ಹರಿದಾಡಿಕೊಂಡು ಚಟುವಟಿಕೆಯಿ೦ದಿರುವ ಅದು ಎಂಥಾ ಬಕಾಸುರನ ಅಪರಾವತಾರ! ತಿನ್ನುವುದು, ತಿನ್ನುತ್ತಲೇ ಇರುವುದೊಂದೇ ಕಾಯಕವಾಗಿ ಹೋಯಿತಲ್ಲಾ ಅದಕ್ಕೆ. ತಿಂದು ತಿಂದು ಮೈ ಬೆಳೆದಾಗ ಅದರ ಮೇಲ್ಮೈಯ ಅಂಗಿ ಚಿಕ್ಕದಾಗಿ ಹೋಗುವುದು. ಆದರೇನು ಮಾಡುವುದು, ಹಸಿವು ತೀರಲಿಲ್ಲವಲ್ಲ. ತನ್ನ ಹಳೆಯ ಅಂಗಿಯನ್ನು ಕಳಚಿ ಬಿಸುಟು ಹೊಸದಾದ, ದೊಡ್ಡದಾದ ಮತ್ತೊಂದು ಅಂಗಿ ಧರಿಸಿದರೆ ಮತ್ತಷ್ಟು ಮುಕ್ಕಲು ಅವಕಾಶ ಸಿಕ್ಕಂತಾಯ್ತು. ಮತ್ತೊಂದಷ್ಟು ದಿನ ಬಿಡುವಿಲ್ಲದೆ ತಿನ್ನುವಾಟ ಶುರು. ಹೀಗೆ ನಾಲ್ಕಾರು ಬಾರಿ ತಿಂದು ಮೈ ಬೆಳೆಸುವುದು, ಹಳೆ ಅಂಗಿ ಬಿಸುಟು ಹೊಸದನ್ನು ಧರಿಸಿ ಮತ್ತೆ ತಿನ್ನುವುದು ಇಷ್ಟೇ ಕೆಲಸ. ಸಣ್ಣ ದಾರದ ಗಾತ್ರವಿದ್ದ ಮರಿಗೆ ಮನುಷ್ಯನ ಕಿರುಬೆರಳಿನ ಗಾತ್ರದ ವರೆಗೂ ಬೆಳೆವುದೊಂದೇ ಗುರಿ. ಈ ತಿನ್ನುವಾಟದಲ್ಲಿ ಎಲೆಯಿಂದ ಎಲೆಗೆ ಹರಿದು ಚಲಿಸಬೇಕಾದ ಹಂತದಲ್ಲಿ ನನ್ನ ಎಷ್ಟೋ ಮರಿಗಳು ಪಕ್ಷಿಗಳ ಅಥವಾ ಇತರ ಪ್ರಾಣಿಗಳ ಆಹಾರವಾಗಿ ಬಿಡುವುದುಂಟು. ಅನೇಕ ಬಾರಿ ಪರಾವಲಂಬಿ ಕೀಟಗಳು ಈ ಕಂದಮ್ಮಗಳ ಮೈಮೇಲೆಲ್ಲಾ ಮೊಟ್ಟೆಯಿಟ್ಟು ಅದರಿಂದ ಹೊರಬರುವ ಮರಿಗಳು ಇವುಗಳ ದೇಹವನ್ನೇ ಕಬಳಿಸಿಕೊಳ್ಳುವುದುಂಟು. ಇಂತಹ ಎಲ್ಲ ಪರೀಕ್ಷೆಗಳನ್ನುಾ ದಾಟಿ, ಸಾಯದೆ ಬದುಕುಳಿಯುವ ನನ್ನ ಕಂದಮ್ಮಗಳೆಷ್ಟು ಎಂದು ನಾನಾದರೂ ಹೇಗೆ ಹೇಳಲಿ?

ಪೂರ್ತಿ ತಿಂದು ದೇಹ ಬೆಳೆದ ಮೇಲೆ, ಜೀವನದ ಒಂದು ಹಂತ ಮುಗಿಸಿದಾಗ ರೂಪಾಂತರಗೊಳ್ಳುವ ತವಕ, ಬಯಕೆ ತನ್ನಿಂತಾನೇ ಮೂಡಿಬಿಟ್ಟಿತೇ? ಅಚಾನಕ್ಕಾಗಿ ಎಲ್ಲಾ ಚಟುವಟಿಕೆಗಳನ್ನೂ ನಿಲ್ಲಿಸಿ, ವೈರಾಗ್ಯ ಬಂದವರಂತೆ ಒಳಸರಿದು ಕತ್ತಲೆಯ, ಬೆಚ್ಚಗಿನ ಗೂಡು ಸೇರಿಬಿಟ್ಟಾಯಿತು. ಮತ್ತೊಮ್ಮೆ ಪ್ರಕೃತಿಯ ಚಮತ್ಕಾರ ಶುರುವಾಯಿತು. ಏನನ್ನೋ ಕಟ್ಟುವ, ಮತ್ತೇನನ್ನೋ ಕೆಡವುವ ಅದೇ ಜೀವನದಾಟ. ನನ್ನ ಮಕ್ಕಳೀಗ ಅವರ ಕಂದಮ್ಮಗಳ ಜೀವನಕ್ಕೆ ಮುನ್ನುಡಿ ಬರೆಯಲು ತಯಾರಿ ನಡೆಸಿದ್ದಾರೆ ಎಂದು ಸಂತೋಷವಾಗಿದೆ. ವಂಶದ ಅಭಿವೃದ್ಧಿಯ ಪ್ರಕ್ರಿಯೆಯಲ್ಲಿ ನಾನು ನಿರ್ವಹಿಸಿದ ಪಾತ್ರದ ಬಗ್ಗೆ ನನಗೆ ಆತ್ಮತೃಪ್ತಿ ಇದೆ.

ಡಾ.ರೂತ್ ಶಾಂತಕುಮಾರಿ, ಮೈಸೂರು

11 Responses

 1. S.sudha says:

  Hello Ruth shanthakumari. Nice to read your story. Long time no see. Sudha, principal (ex),maharani s

 2. ನಯನ ಬಜಕೂಡ್ಲು says:

  Beautiful. ಮಾಹಿತಿ ಪೂರ್ಣ ಕೂಡಾ

 3. ಬಣ್ಣ ಬಣ್ಣದ ಚಿಟ್ಟೆ ಯಷ್ಟೇ ಸುಂದರವಾದ ಲೇಖನ ಧನ್ಯವಾದಗಳು ಮೇಡಂ

 4. ತುಂಬಾ ನವಿರಾಗಿ ಬಂದಿರುವಚಿಟ್ಟೆಯ ಆತ್ಮಕಥನ ಮೇಡಂ

 5. Nirmala says:

  Excellent narration of moulting in the life cycle of butterfly. Congratulations

 6. Hema says:

  ವಿಶೇಷ ಮಾಹಿತಿಯುಳ್ಳ ಸ್ವಗತ…ಸೊಗಸಾದ ಬರಹ.

 7. Padma Anand says:

  ಪ್ರಪಂಚದ ಸುಂದರ ಅದ್ಭುತಗಳಲ್ಲಿ ಒಂದಾದ ಚಿಟ್ಟೆಯ ಜೀವನಗಾಥೆಯನ್ನು ನವಿರಾಗಿ ಹೆಣೆದಿರುವ ಚಂದದ ಲೇಖನ

 8. ಶಂಕರಿ ಶರ್ಮ says:

  ಸುಂದರವಾದ ಚಿಟ್ಟೆಯ ಆತ್ಮಕಥನವು ಅಷ್ಟೇ ಸುಂದರವಾಗಿ, ನವಿರಾಗಿ ಮೂಡಿಬಂದಿದೆ…ಧನ್ಯವಾದಗಳು ಮೇಡಂ.

 9. Padmini Hegde says:

  ಆಕರ್ಷಕ ನಿರೂಪಣೆ!

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: