ಪುಸ್ತಕ ಸಂಸ್ಕೃತಿ – ಭುವನದ ಭಾಗ್ಯ

Share Button


ಮೈಸೂರು ವಿಶ್ವವಿದ್ಯಾನಿಲಯದ ಗ್ರಂಥಾಲಯದಲ್ಲಿ ಮುಖ್ಯ ಗ್ರಂಥಪಾಲಕರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿರುವ ಹಿರಿಯರಿಗೆ ಎಂಬತ್ತು ವರ್ಷ ಆದ ಸಂದರ್ಭದಲ್ಲಿ ಒಂದು ಅಭಿನಂದನ ಗ್ರಂಥ ಹೊರತರುವ ಆಶಯವಿರುವುದನ್ನು ಸವಿಗನ್ನಡ ಪತ್ರಿಕೆಯ ಸಂಪಾದಕ ಶ್ರೀ ರಂಗನಾಥರವರು ವ್ಯಕ್ತಪಡಿಸಿದ್ದರು. ಈಗ ಗ್ರಂಥಾಲಯದ ಸಪ್ತಾಹ ನಡೆದಿದೆ. ಇವು ಗ್ರಂಥ ಮತ್ತು ಗಂಥಾಲಯ ನನ್ನ ಮೇಲೆ ಬೀರಿದ ಪ್ರಭಾವವನ್ನು ಮೆಲುಕು ಹಾಕುವಂತೆ ಮಾಡಿತು. ಗ್ರಂಥ ಎನ್ನುವುದಕ್ಕಿಂತ ಪುಸ್ತಕ ಎನ್ನುವುದು ನಮಗೆ ಹೆಚ್ಚು ಪರಿಚಿತವಾದ ಪದ. ಓದುವ ಆಸಕ್ತಿ, ಅಭ್ಯಾಸ, ಹವ್ಯಾಸಗಳು ಪುಸ್ತಕಗಳನ್ನು ಗಂಭೀರವಾಗಿ ಪರಿಗಣಿಸುವಂತೆ ಮಾಡುತ್ತವೆ. ಪುಸ್ತಕಕ್ಕೂ ಓದುವುದಕ್ಕೂ ಅಂಟು ನಂಟು. ಬಿಳಿಯ ಹಾಳೆಯ ಮೇಲೆ ಕರಿ ಅಕ್ಷರಗಳು ಕಾಣಿಸಿದರೆ ಸಾಕು ಹಾಳೆಯನ್ನು ತೆಗೆದುಕೊಳ್ಳಲು ಕೈ, ಅಕ್ಷರಗಳನ್ನು ಓದಲು ಕಣ್ಣು ಮುಂದಾಗುತ್ತಿದ್ದವಂತೆ – ನಾನು ಹೀಗೆ ಇದ್ದೆನೆಂದು ನಮ್ಮ ತಾಯಿ ನನ್ನ ಬಾಲ್ಯವನ್ನು ಒಮ್ಮೊಮ್ಮೆ ನೆನಪಿಸಿಕೊಳ್ಳುತ್ತಾರೆ. ಇದೊಂದು ಮನಸ್ಥಿತಿ. ಇದು ಅವತ್ತಿನದೂ ಹೌದು, ಇವತ್ತಿನದೂ ಹೌದು.
ಓದಿ ಓದಿ ಮರುಳಾದ ಕೂಚುಭಟ್ಟ ಎನ್ನುವುದೊಂದು ಗಾದೆಯ ಮಾತು. ಅದು ಹೇಗೋ ಓದುವುದು ಸುಗಮವಾದ ಜೀವನನಿರ್ವಹಣೆಗೆ ಅಗತ್ಯವೇ ಇಲ್ಲ ಎಂಬ ಅಭಿಪ್ರಾಯ ದಟ್ಟವಾಗಿದ್ದ ಐವತ್ತರ ದಶಕದಲ್ಲಿ ನಾನು ಏನಾದರೂ ಸರಿ, ಓದಲೇ ಬೇಕು ಎಂದುಕೊಂಡದ್ದಕ್ಕೆ ನನ್ನ ಮನೆಯ ಪರಿಸರವೇ ಮುಖ್ಯ ಪ್ರೇರಣೆ. ತಂದೆ ಪ್ರೌಢಶಾಲೆಯಲ್ಲಿ ಉಪಾಧ್ಯಾಯರು, ತಾಯಿ ಎಸ್.ಎಸ್.ಎಲ್.ಸಿ.ಯಲ್ಲಿ ಬೆಳ್ಳಿ ಪದಕ ವಿಜೇತೆ, ಚಿಕ್ಕಮ್ಮಂದಿರು ಮತ್ತೆ ಮಾವಂದಿರು ಬೆಂಗಳೂರು, ಮೈಸೂರಿನಲ್ಲಿ ವಿದ್ಯಾಭ್ಯಾಸ ಮುಂದುವರೆಸುತ್ತಿದ್ದವರು – ಇವೆಲ್ಲಾ ಓದುವುದಕ್ಕೆ ಮಹತ್ವ ಇದೆ ಎಂದು ಹೇಳಿದರೆ ನಮ್ಮ ಅಜ್ಜಿ ತಾತ ಇದ್ದ ಊರಿನಲ್ಲಿಯೇ ನಾವೂ ಇದ್ದದ್ದು, ಅವರ ಮನೆಗೆ ಬಾಲಮಿತ್ರ, ಚಂದಮಾಮ, ಕಂದ, ಜೀವನ, ಉತ್ಥಾನಗಳು ಬರುತ್ತಿದ್ದದ್ದು ಓದುವುದಕ್ಕೆ ಪರಿಕರಗಳನ್ನು ಒದಗಿಸಿ ಓದುವ ಚಟವನ್ನು ಕಲಿಸಿದವು. ಇದಕ್ಕೆ ಪೂರಕವಾದದ್ದು ಆಗ ಸ್ವಾರಸ್ಯಕರವಾಗಿ ಕಥಾನಕದಂತೆ ಪಠ್ಯವನ್ನು ಬೋಧಿಸಬೇಕು ಎಂಬ ಯೋಜನೆ ಜಾರಿಗೆ ಬಂದು ಅದರಂತೆ ಪಠ್ಯಪುಸ್ತಕಗಳು ಬಂದದ್ದು.

ಪಠ್ಯಪುಸ್ತಕಗಳಲ್ಲದೆ ಓದಬಹುದಾದ ಪುಸ್ತಕಗಳು ಗ್ರಂಥಾಲಯದಲ್ಲಿ ದೊರೆಯುತ್ತವೆ ಎಂಬುದು ನಮ್ಮ ಚಿಕ್ಕಮ್ಮ ಮತ್ತೆ ಮಾವಂದಿರರಿಂದ ನನಗೆ ನಾನು ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾಗಲೇ ಗೊತ್ತಿತ್ತು. ಆದರೆ ಗ್ರಂಥಾಲಯದ ನೇರ ಪರಿಚಯ ಇರಲಿಲ್ಲ. ನಮ್ಮ ತಂದೆಗೆ ತುಮಕೂರಿಗೆ ವರ್ಗವಾದ ಮೇಲೆ ನಾನು ಹೋಗುತ್ತಿದ್ದ ಪ್ರೌಢಶಾಲೆಯ ದಾರಿಯಲ್ಲಿಯೇ ಸಾರ್ವಜನಿಕ ಗ್ರಂಥಾಲಯ ಇದ್ದದ್ದು, ಅಲ್ಲಿಯೇ ಕುಳಿತು ವರ್ತಮಾನ ಪತ್ರಿಕೆಗಳು ಮಾತ್ರವಲ್ಲದೆ ಅಲ್ಲಿ ಇರುವ ಯಾವ ಪುಸ್ತಕಗಳನ್ನಾದರೂ ಓದಬಹುದಾದ ಅವಕಾಶ ಇದ್ದದ್ದು ನನ್ನ ಓದುವ ಚಟಕ್ಕೆ ಒಂದು ಗೊತ್ತನ್ನು ಕಂಡುಕೊಳ್ಳಲು ಅವಕಾಶವನ್ನು ಕಲ್ಪಿಸಿತು. ಆ ಸಾರ್ವಜನಿಕ ಗ್ರಂಥಾಲಯದಲ್ಲಿ ಓದುಗರ ಪರವಾಗಿದ್ದ ಗ್ರಂಥಪಾಲಕರು ಇದ್ದರು. ಗ್ರಂಥಾಲಯವು ಮುಚ್ಚುವ ಸಮಯವಾದರೂ ಓದುತ್ತಲೇ ಕುಳಿತಿರುತ್ತಿದ್ದ ನನಗೆ ಶಿವರಾಮ ಕಾರಂತ, ಮಾಸ್ತಿ, ರಾಜರತ್ನಂ ಮುಂತಾದವರ ಸಾಂಸ್ಕೃತಿಕ ಕಾಳಜಿಯುಳ್ಳ ಪುಸ್ತಕಗಳನ್ನು ಅವರೇ ಹುಡುಕಿ ಕೊಡುತ್ತಿದ್ದರು. ಅಲ್ಲಿಯೇ ಕುಳಿತು ಓದಿ ಮುಗಿಸಲು ಸಾಧ್ಯವಿಲ್ಲದಿದ್ದುದರಿಂದ ಅಮ್ಮ ಅಪ್ಪನನ್ನು ಬೇಡಿ ಅದಕ್ಕೆ ಸದಸ್ಯಳಾದೆ. ನಾನೊಬ್ಬಳೆ ಅದರ ಸದಸ್ಯ ಆಗಿದ್ದರೂ ಅದರ ಪುಸ್ತಕಗಳಿಗೆ ಮನೆಯವರೆಲ್ಲರೂ ಗ್ರಾಹಕರಾದರು. ನನ್ನ ಓದುವ ಚಟ ಎಲ್ಲರಿಗೂ ಹತ್ತಿತು. ಮೊದಲು ನಾನೊಬ್ಬಳೇ ಗ್ರಂಥಾಲಯಕ್ಕೆ ತಪ್ಪದೆ ದಿನವೂ ಸಂಜೆ 5 ರಿಂದ 7 ಗಂಟೆಯವರೆಗೂ ಹಾಜರಿ ಹಾಕುತ್ತಿದ್ದೆ. ನನ್ನ ಶಾಲೆ ಮೊದಲಿಗೆ ಮಧ್ಯಾಹ್ನ 1 ಗಂಟೆಗೇ ಮುಗಿಯುತ್ತಿತ್ತು. ಆನಂತರ ನನ್ನ ಅಕ್ಕ, ನನ್ನ ತಂಗಿಯೂ ನನ್ನೊಂದಿಗೆ ಸೇರಿಕೊಂಡರು.

PC : Internet

ನನಗೆ ನೆನಪಿರುವಂತೆ ನಾನು ಮೊಟ್ಟ ಮೊದಲಿಗೆ ಓದಿ ಆನಂದಿಸಿದುದು ಕುವೆಂಪುರವರ ಮಲೆನಾಡಿನ ಚಿತ್ರಗಳು. ನನ್ನ ಶಾಲೆಯ ಪಠ್ಯಕ್ಕಿಂತ ಭಿನ್ನವಾದ ಭಾಷೆ, ಭಿನ್ನವಾದ ವಸ್ತು, ಭಿನ್ನವಾದ ನಿರೂಪಣೆ ಅದರದು. ನಮ್ಮ ಮನೆಯಲ್ಲಿದ್ದುಕೊಂಡು ಎಸ್.ಎಸ್.ಎಲ್.ಸಿ ಓದುತ್ತಿದ್ದ ಬಂಧುವಿನ ಹತ್ತಿರ ಇದ್ದ ಕನ್ನಡ ಪಠ್ಯಪುಸ್ತಕಗಳು, ಆತ ಆಗಾಗ ಯಾರಿಂದಲೋ ತಂದು ಓದುತ್ತಿದ್ದ ಉತ್ಥಾನ ಮಾಸಪತ್ರಿಕೆ, ನಮ್ಮ ಮನೆಗೆ ಬರುತ್ತಿದ್ದ ಸಂಯುಕ್ತ ಕರ್ನಾಟಕ ಪತ್ರಿಕೆಗಳಿಂದ ನನ್ನ ಓದುವ ಕುತೂಹಲವನ್ನು ಮೊದಲಿಗೆ ತಣಿಸಿಕೊಳ್ಳುತ್ತಿದ್ದೆ. ಮೂರನೇ ತರಗತಿಗೆ ಬರುವ ವೇಳೆಗೆ ನಮ್ಮ ಮನೆಯಿಂದ ಒಂದು ಕಿಲೋಮೀಟರ್ ದೂರ ಇದ್ದ ನಮ್ಮ ಅಜ್ಜಿಯ ಮನೆಗೆ ಶಾಲೆ ಬಿಟ್ಟ ನಂತರ ಸಂಜೆ ಒಬ್ಬಳೇ ಹೋಗುವ ಧೈರ್ಯ ಬಂತು. ಅದು ಬಗೆ ಬಗೆಯ ಆಸಕ್ತಿಯ ಜನರು ಇದ್ದ ಅವಿಭಕ್ತ ಕುಟುಂಬ. ಕಂದ, ಜೀವನದಂತಹ ಮಾಸಪತ್ರಿಕೆಗಳು, ಪೋಲಿ ಕಿಟ್ಟಿ, ನೆಹರು ಬಂದರುನಂತಹ ನಾಟಕಗಳು ಬೆಕ್ಕಿನ ಕಣ್ಣು, ಚಿತ್ರಲೇಖ, ಮುದ್ರಾ ಮಂಜೂಷದಂತಹ ಕಾದಂಬರಿಗಳು, ರತ್ನನಪದಗಳಂತಹ ಕವನ ಸಂಕಲನ, ತಾಯಿನಾಡುವಿನಂತಹ ದಿನಪತ್ರಿಕೆ – ಹೀಗೆ ಬಗೆ ಬಗೆಯಾಗಿ ಓದಲು ಅಲ್ಲಿ ಸಿಗುತ್ತಿದ್ದವು. ಆದರೆ ಕತ್ತಲಾಗುತ್ತಿದ್ದಂತೆ ಮನೆಗೆ ಹಿಂದಿರುಗಿ ದೇವರ ಸ್ತೋತ್ರ ಹೇಳಿ, ಹೋಂ ವರ್ಕ ಮಾಡಬೇಕು ಎನ್ನುವ ಒತ್ತಡ ಒಂದು ಕಡೆ. ವಯಸ್ಸಿಗೆ ಮೀರಿದ ಪುಸ್ತಕಗಳನ್ನು ಓದುತ್ತಾಳೆ ಎಂದು ಹಿರಿಯರಿಂದ ಬೈಸಿಕೊಳ್ಳಬೇಕಲ್ಲ ಎನ್ನುವ ಭಯ, ಆತಂಕ ಇನ್ನೊಂದು ಕಡೆ. ಇವುಗಳ ಮಧ್ಯೆ ನನ್ನ ಓದುವ ಆಟ! ದಿನಾ ಅಜ್ಜಿಯ ಮನೆಯಿಂದ ಬೈಸಿಕೊಂಡೇ ಹೊರಬೀಳುತ್ತಿದ್ದೆ, ಅಮ್ಮನಿಂದ ಬೈಸಿಕೊಂಡೇ ಮನೆಯೊಳಗೆ ಕಾಲಿಡುತ್ತಿದ್ದೆ. ಆದರೂ ಓದುವ ಆಸೆಗೆ ಯಾವ ಭಂಗವೂ ಇರಲಿಲ್ಲ.

ನಮ್ಮ ತಂದೆ ತಾಯಿ ಭವನ್ಸ್ ಜರ್ನಲ್ ತಪ್ಪದೇ ಓದುತ್ತಿದ್ದರೂ, ಶಾಲಾ ಪಠ್ಯದಲ್ಲಿ ಇಂಗ್ಲಿಷ್ ಕಡ್ಡಾಯವಾಗಿದ್ದರೂ ನನಗೆ ಇಂಗ್ಲಿಷ್ ಅರ್ಥವಾಗುವ ಭಾಷೆ ಎಂದೆನ್ನಿಸಲಿರಲಿಲ್ಲ. ಇಂಗ್ಲಿಷ್ ಭಾಷೆಯ ಪುಸ್ತಕಗಳೂ ನನ್ನನ್ನು ಆಕರ್ಷಿಸುತ್ತವೆ ಎಂಬುದು ಗೊತ್ತಾದದ್ದು ಕಾಲೇಜಿಗೆ ಸೇರಿದ ಮೇಲೆ. ಆಗ ಬರ್ಟಾಂಡ್ ರಸೆಲ್ಲನ ಲೆಟ್ ದಿ ಪೀಪಲ್ ಥಿಂಕ್ ಎಂಬ ಪ್ರಬಂಧ ಸಂಕಲನ ಪಠ್ಯ ಆಗಿತ್ತು. ಅದು ನಾನ್ ಡಿಟೈಲ್ಡ್ ಟೆಕ್ಸ್ಟ್ ಎಂದು ಅಧ್ಯಾಪಕರು ಅಲ್ಲಲ್ಲಿ 3-4 ಸಾಲುಗಳನ್ನು ಓದಿ ಪ್ರಬಂಧದ ಒಟ್ಟಾರೆ ಸಾರಾಂಶ ಹೇಳಿ ಪಾಠ ಮುಗಿಸಿಬಿಡುತ್ತಿದ್ದರು. ಅದೇ ಷೇಕ್ಸ್‌ಪಿಯರನ ಒಥೆಲೋ ನಾಟಕವನ್ನು ಪಾಠ ಮಾಡುವ ಅಧ್ಯಾಪಕರಿಗೆ ವಿಪರೀತ ಉತ್ಸಾಹ. ಅವರ ಉತ್ಸಾಹದ ಸೋಂಕು ನನಗಂತೂ ತಾಗಿತು. ಪ್ರತಿಯೊಂದು ಪದಕ್ಕೂ ಅರ್ಥವನ್ನು ಡಿಕ್ಷನರಿಯಲ್ಲ್ಷಿ ಹುಡುಕುತ್ತಾ, ಒಂದು ಇಡೀ ಪ್ಯಾರಾವೇ ಒಂದು ವಾಕ್ಯ ಆಗುತ್ತಿದ್ದ ರಸೆಲ್ಲನ ಪ್ರಬಂಧಗಳನ್ನು ಓದುತ್ತಾ ಹೋದೆ. ಡಿಕನ್ಸನ ಹೃದಯ ಕಲಕುವ ಡೇವಿಡ್ ಕಾಪರ್ ಫೀಲ್ಡ್ ಓದಿ ಕಣ್ಣೀರು ಸುರಿಸಿದಂತೆ ರಸೆಲ್ಲನ ಕ್ಯಾನ್ ಮೆನ್ ಬಿ ರ್‍ಯಾಷನಲ್, ಆನ್ ಅಡ್‌ವರ್‌ಟೈಸ್‌ಮೆಂಟ್ಸ್ ಮುಂತಾದ ಪ್ರಬಂಧಗಳನ್ನು ಓದಿ ನನಗೆ ತಿಳಿದಂತೆ ವಿಚಾರ ಮಂಥನ ನಡೆಸಿದೆ. ಓದುವ ಅಭಿರುಚಿಗೆ ಅಧ್ಯಾಪಕರ ಬೋಧನೆಯೂ ಪೂರಕವಾಗುತ್ತದೆ ಎಂಬುದನ್ನು ಹೇಳಲೇ ಬೇಕು.

ಓದುಗರನ್ನು ಹುಟ್ಟುಹಾಕುವುದರಲ್ಲಿ ಗ್ರಂಥಪಾಲಕರ ಪಾತ್ರ ಎಷ್ಟು ಹಿರಿದಾದದ್ದು ಎನ್ನುವ ಅರಿವನ್ನು ಮೂಡಿಸಿದುದು ನಾನು ಉದ್ಯೋಗಿಯಾಗಿದ್ದ ಕಾಲೇಜಿನ ಸದಭಿರುಚಿಯ ಕಾಲೇಜು-ಗ್ರಂಥಪಾಲಕ. ಆತ ಯಾವ ಪಠ್ಯದ ಬೋಧನೆಗೆ ಯಾವ ಪುಸ್ತಕ ರೆಫೆರೆನ್ಸ್ ಪುಸ್ತಕ ಆಗುತ್ತದೆ ಎಂಬುದನ್ನು ಕ್ಯಾಟಲಾಗ್ ತರಿಸಿ ಆಯ್ಕೆ ಮಾಡಿಕೊಳ್ಳುತ್ತಿದ್ದರು. ಪುಸ್ತಕಗಳು ಬಂದ ಮೇಲೆ ಪ್ರತಿಯೊಬ್ಬ ಅಧ್ಯಾಪಕನನ್ನೂ ಕರೆದು ಮುಂದೆ ಕೂಡಿಸಿಕೊಂಡು ಅವರಿಗೆ ಸಂಬಂಧಿಸಿದ ಪುಸ್ತಕಗಳನ್ನು ಕೈಗೆ ಕೊಡುತ್ತಿದ್ದರು, ಅದರಲ್ಲಿ ಯಾವ ವಿಶೇಷ ವಿಷಯಗಳಿವೆ ಎಂಬುದನ್ನೂ ಹೇಳುತ್ತಿದ್ದರು, ಓದುವ ಕುತೂಹಲವನ್ನು ಹುಟ್ಟಿಸುವುದರಲ್ಲಿ ಯಶಸ್ವಿಯಾಗುತ್ತಿದ್ದರು. ಅಧ್ಯಾಪಕರು ಅವರು ಕೊಟ್ಟದ್ದರಲ್ಲಿ ಎರಡು ಮೂರನ್ನಾದರೂ ತಮ್ಮ ಹೆಸರಿಗೆ ಬರೆಸಿ ಮನೆಗೆ ತೆಗೆದುಕೊಂಡು ಹೋಗುತ್ತಿದ್ದರು. ಆ ಗ್ರಂಥಪಾಲಕರು ವಿದ್ಯಾರ್ಥಿಗಳಲ್ಲೂ ಸದಭಿರುಚಿಯನ್ನು ಮೂಡಿಸುವ ಉತ್ಸಾಹದಲ್ಲಿ ಹಿಂದೆ ಬೀಳುತ್ತಿರಲಿಲ್ಲ. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸುತ್ತಿದ್ದರು. ಗ್ರಂಥಾಲಯದ ಪುಸ್ತಕಗಳನ್ನು ಜೋಡಿಸಿಡುವುದರಲ್ಲಿ ಅವರ ಸಹಾಯವನ್ನು ತೆಗೆದುಕೊಳ್ಳುತ್ತಿದ್ದರು. ಅವರಿಗೆ ಉಳಿದ ವಿದ್ಯಾರ್ಥಿಗಳಿಗಿಂತ ಹೆಚ್ಚು ಪುಸ್ತಕಗಳನ್ನು ಪರೀಕ್ಷೆಗೆ ಸಿದ್ಧವಾಗಲು ಕೊಡುತ್ತಿದ್ದರು. ಗ್ರಂಥಾಲಯದ ಕೆಲಸವನ್ನೂ ಕಲಿಸುತ್ತಿದ್ದರು, ಹೆಚ್ಚು ಅಂಕಗಳನ್ನು ಪಡೆಯಲು ಸಹಾಯಕರೂ ಆಗುತ್ತಿದ್ದರು. ಮುಂದಿನ ವಿದ್ಯಾಭ್ಯಾಸಕ್ಕೆ ಬೇರೆ ಕಡೆ ಹೋದವರಿಗೂ ಅವರ ಮೇಲೆ ಭರವಸೆ ಇದ್ದರೆ ತಮ್ಮ ಹೆಸರಿನಲ್ಲಿಯೇ ಪುಸ್ತಕಗಳನ್ನು ಕೊಟ್ಟು ಅವರ ಉನ್ನತ ವಿದ್ಯಾಭ್ಯಾಸ ಸಮರ್ಪಕವಾಗಿ ಸಂಪನ್ನಗೊಳ್ಳಲು ಪೂರಕ ಆಗುತ್ತಿದ್ದರು.

ಅವರು ಪಠ್ಯಪುಸ್ತಕಗಳ ಜೊತೆಗೆ ಪಠ್ಯೇತರ ಪುಸ್ತಕಗಳನ್ನೂ ತರುತ್ತಿದ್ದರು. ಅವು ಬಹುಮಾನಿತ, ಪ್ರಶಸ್ತಿ ಪಡೆದ ಪುಸ್ತಕಗಳೂ ಆಗಿರುತ್ತಿದ್ದವು, ಅನುವಾದಿತ ಕೃತಿಗಳೂ ಆಗಿರುತ್ತಿದ್ದವು. ಅವು ಒಟ್ಟಾರೆ ಸಾಂಸ್ಕೃತಿಕ, ಮಾನವಿಕ ಕಾಳಜಿಯನ್ನು ಆಶಯವಾಗಿ ಉಳ್ಳ ಕಥಾ ಸಂಕಲನ, ಕಾದಂಬರಿ, ವಿಮರ್ಶೆ, ಅಭಿನಂದನ ಗ್ರಂಥ, ವಿಶ್ವಕೋಶ, ಸಂಶೋಧನಾ ಪ್ರಬಂಧಗಳ ಸಂಕಲನ ಇತ್ಯಾದಿ ಆಗಿರುತ್ತಿದ್ದವು. ಒಂದು ಮಿನಿ ವಿಶ್ವವಿದ್ಯಾನಿಲಯ-ಗ್ರಂಥಾಲಯವೇ ಆಗಿದ್ದ ಕಾಲೇಜು ಗ್ರಂಥಾಲಯದಿಂದ ಆದ ಒಂದು ಮುಖ್ಯ ಪ್ರಭಾವ ಓದುವ ಪುಸ್ತಕದ ವಿಷಯ ಇಂತಹುದೇ ಆಗಿರಬೇಕು ಎಂದು ಈಗಲೂ ನಾನು ನಿರ್ಣಯಿಸದೇ ಇರುವುದು. ನನಗೆ ಗೊತ್ತಿಲ್ಲದಿರುವುದನ್ನು ತಿಳಿಸುವ, ಇರುವ ತಿಳುವಳಿಕೆಯನ್ನು ಹೆಚ್ಚಿಸುವ, ಹೊಸ ಆಲೋಚನೆಗಳನ್ನು ಪ್ರೇರೇಪಿಸುವ ವಿಷಯ ಪುಸ್ತಕವೊಂದರಲ್ಲಿ ಇದ್ದರೆ ಆಯಿತು. ನನಗೆ ಬುದ್ಧಿಗೆ ಕೆಲಸ ಕೊಡುವುದು ಪ್ರಿಯವಾದದ್ದು. ಕಣ್ಣಿಗೆ ಕಂಡದ್ದು, ಕೈಗೆ ಸಿಕ್ಕಿದುದನ್ನು ಓದುವುದು ಒಂದು ಹವ್ಯಾಸ, ಪ್ರವೃತ್ತಿ, ಒಂದು ರೀತಿಯ ಅನಿವಾರ್ಯತೆ. ಎಲ್ಲಾದರೂ ಹೋದಾಗ ಅವರ ಮನೆಯಲ್ಲಿ ಓದಲು ಏನೂ ಇರದಿದ್ದರೆ ನನಗೆ ಸರಿಯಾಗಿ ನಿದ್ದೆಯೇ ಬರುತ್ತಿರಲಿಲ್ಲ. ಈಗ ಮೊಬೈಲ್ ಈ ಒದ್ದಾಟಕ್ಕೆ ವಿರಾಮ ಹಾಕಿದೆ. ಇಂಥ ಓದುಗಳಾದ ನನಗೆ ನಾನು ಮೆಚ್ಚುವ ಪುಸ್ತಕ ಯಾವುದು ಎಂದು ಪ್ರತ್ಯೇಕವಾಗಿ ಹೆಸರಿಸುವುದೇ ಕಷ್ಟ.

ನಾನು ಓದಿದ ವೈವಿಧ್ಯಮಯ ಪುಸ್ತಕಗಳು ಏನನ್ನು ಹೇಳುವ ಉದ್ದೇಶ ಹೊಂದಿವೆ ಎಂದು ಕೇಳಿಕೊಳ್ಳುವುದು ಕುತೂಹಲಕಾರಿ ಪ್ರಶ್ನೆಯೇ. ಇಡೀ ಬದುಕಿನ ಇತಿಹಾಸವು ಬಗೆ ಬಗೆಯ ಶೋಷಣೆಗಳ ಇತಿಹಾಸವೇ ಆಗಿದೆ; ಪ್ರಾಚೀನ ಶೋಷಕ-ಶೋಷಿತ ವರ್ಗಗಳು ಈಗಲೂ ಉಳಿದುಕೊಂಡು ಬಿಟ್ಟಿವೆ; ಶೋಷಿತ ವರ್ಗಕ್ಕೆ ದೊರೆತಿರುವ ದುಸ್ಥಿತಿಯೇ ಶೋಷಕವರ್ಗದವರಿಗೂ ಸಿಗಬೇಕು ಎನ್ನುವುದು ಕೆಲವು ಪುಸ್ತಕಗಳ ತಿರುಳು. ಇದಕ್ಕೆ ವಿರುದ್ಧವಾಗಿ ಇತಿಹಾಸಕ್ಕೆ ದೊರೆತ ಆಯಾಮಗಳೆಲ್ಲಾ ಮಹಾಪುರುಷರು ನಿರ್ವ್ಯಾಜ ಪ್ರೀತಿಯಿಂದ ಸಮಾಜಕ್ಕೆ ಸಲ್ಲಿಸಿದ ಸೇವೆಯೇ ಆಗಿವೆ; ಅವರ ಆದರ್ಶಗಳು, ಆಚಾರಗಳು, ವಿಚಾರಗಳು ಸಾರ್ವತ್ರಿಕವಾಗಿ ಸರ್ವಮಾನ್ಯ; ಇದನ್ನು ಅರ್ಥಮಾಡಿಕೊಳ್ಳದೆ ನಮ್ಮ ಕಾಲ ಮೇಲೆ ನಾವೇ ಕಲ್ಲು ಎತ್ತಿಹಾಕಿಕೊಂಡಿದ್ದೇವೆ ಎನ್ನುವುದು ಇನ್ನು ಕೆಲವು ಪುಸ್ತಕಗಳ ಆಶಯ. ಭೂತ ವರ್ತಮಾನ, ಭವಿಷ್ಯತ್ತುಗಳನ್ನು ವಿಮರ್ಷಾತ್ಮಕವಾಗಿ ಒಟ್ಟಾರೆ ಪರಿಸರದ ಸಹಜತೆಯನ್ನು ಉಳಿಸಿಕೊಳ್ಳುವಂತೆ ಗಮನಿಸಬೇಕು ಎನ್ನುವ ಎಚ್ಚರಿಕೆ ಕೊಡುವುದು ಮತ್ತೆ ಕೆಲವು ಪುಸ್ತಕಗಳ ಉದ್ದೇಶ. ಭೌತಶಾಸ್ತ್ರ, ರಸಾಯನ ಶಾಸ್ತ್ರಗಳಂತಹ ವಿಜ್ಞಾನ ವಿಭಾಗಗಳು ಪಠ್ಯವಾಗಿ ಮಾತ್ರ ಅಭ್ಯಾಸ ಮಾಡುವಂತಹುದಲ್ಲ ಅವು ಆನ್ವಯಿಕ, ಮಾನವಿಕ ವಿಜ್ಞಾನಗಳು ಎಂಬುದರ ಕಡೆಗೆ ಗಮನ ಸೆಳೆಯುವುದು ಇನ್ನು ಕೆಲವು ಪುಸ್ತಕಗಳ ಅಭೀಪ್ಸೆ. ಯಾಂತ್ರಿಕ ಜೀವನ ವಿಧಾನದಿಂದ ಡಿಪ್ರೆಸ್ ಆದ ಮನಸ್ಸಿಗೆ ಉಲ್ಲಾಸ, ಆರೋಗ್ಯ ಭಾಗ್ಯ ಹೇಗೆ ಸಾಧ್ಯ ಎನ್ನುವುದನ್ನು ಮನದಟ್ಟು ಮಾಡಿಸಿಕೊಡುವುದು ಮತ್ತೆ ಕೆಲವು ಪುಸ್ತಕಗಳ ಉದ್ದೇಶ.

ಹೀಗೆ ಪರಸ್ಪರ ಭಿನ್ನ ಆಗಿರುವ ವಿಷಯಗಳನ್ನು ಅದೊಂದೇ ಸತ್ಯ ಎನ್ನುವ ಹಾಗೆ ಪುಸ್ತಕಗಳು ನಿರೂಪಿಸುತ್ತವೆಯಲ್ಲ, ಇವುಗಳ ಬೆಲೆ ಏನು? ಇದಕ್ಕೆ ಇರುವ ಉತ್ತರವೂ ವಿಭಿನ್ನವೇ. ಪಾಶ್ಚಾತ್ಯರನೇಕರಿಗೆ ಮತ್ತು ಅವರನ್ನು ಅನುಕರಿಸುವವರಿಗೆ ಮನೆಯಲ್ಲೊಂದು ಗ್ರಂಥಾಲಯವಿರುವುದು ಮನೆಯಲ್ಲಿ ದೇವರ ಕೋಣೆ ಇರುವಷ್ಟೇ ಮುಖ್ಯವಾದದ್ದು, ಪವಿತ್ರವಾದದ್ದು. ಪುಸ್ತಕದ ಒಂದು ಹಾಳೆಯನ್ನೂ ತಿರುವಿ ಹಾಕದವರಿಗೂ ಅವರ ಮನೆಯಲ್ಲಿ ಪುಸ್ತಕಗಳ ಕಪಾಟುಗಳು ಇರುವುದು ಮರ್ಯಾದೆ, ಪ್ರತಿಷ್ಠೆಯ ವಿಷಯ. ಜರ್ಮನ್ನರಿಗೆ ಉತ್ತಮ ಪುಸ್ತಕ ಎಂದು ಪ್ರಸಿದ್ಧಿ ಪಡೆದವುಗಳೆಲ್ಲಾ ಅವರ ಮನೆಯ ಗ್ರಂಥಭಂಡಾರಕ್ಕೆ ಸೇರಲೇ ಬೇಕಂತೆ. ಜಪಾನೀಯರಿಗಾದರೋ ಪುಸ್ತಕವೊಂದನ್ನು ಒಮ್ಮೆ ಓದಿಮುಗಿಸಿದರೆ ಸಾಕಂತೆ. ಓದಿದವರು ಸಾರ್ವಜನಿಕ ಸ್ಥಳದಲ್ಲಿ ಅದನ್ನು ಬಿಟ್ಟು ಹೋಗುತ್ತಾರಂತೆ, ಬೇಕಾದವರು ಓದಿಕೊಳ್ಳಲಿ ಎಂದು. ಕಮ್ಯೂನಿಸ್ಟರಂತಹ ನಿರ್ದಿಷ್ಟ ಬದ್ಧತೆಯ ದೀಕ್ಷೆಯನ್ನು ಹೊಂದಿದವರಿಗೆ ಅವರವರ ಮೂಗಿನ ನೇರಕ್ಕೆ ಇರುವವುಗಳು ಮಾತ್ರ ಸಂಗ್ರಹಯೋಗ್ಯ. ಆಕಾಶವಾಣಿಯಲ್ಲಿ ನಲ್ನುಡಿ ಕಾರ್ಯಕ್ರಮ ಕೊಟ್ಟೆ ಎಂದು ಒಬ್ಬರಿಗೆ ಹೇಳಿದಾಗ 40-50 ಪುಟಗಳಷ್ಟು ಕಾರ್ಯಕ್ರಮ ಆದ ಮೇಲೆ ಅವನ್ನು ಪ್ರಕಟಿಸಿ; ಪುಸ್ತಕಗಳೇ ನಮ್ಮ ಹೆಸರನ್ನು ಉಳಿಸುವುದು ಎಂದರು ಆ ಹಿರಿಯರು. ವ್ಯಕ್ತಿಯನ್ನು ನೋಡಬೇಡಿ ಆತ ಬರೆದ ಪುಸ್ತಕಗಳನ್ನು ನೋಡಿ ಎಂದಿದ್ದರು ಪ್ರಸಿದ್ಧ ಕವಿವರ್ಯರೊಬ್ಬರು.

ನಮ್ಮೊಂದಿಗಿನ ಪ್ರಸಿದ್ಧ ಸಾಹಿತಿ ಸಿ.ಪಿ. ಕೃಷ್ಣಕುಮಾರ್ ಪುಸ್ತಕ ಸಂಸ್ಕೃತಿ-ಭುವನದಭಾಗ್ಯ ಎನ್ನುವ ಕೃತಿಯನ್ನು ಬರೆದಿದ್ದಾರೆ. ಅವರು ಗಮನಿಸಿದಂತೆ ಪುಸ್ತಕಗಳು ವಿದ್ಯಾದೇವತೆ, ಜ್ಞಾನದಾಯಿನಿ ಆದ ಸರಸ್ವತಿಯ ವಾಣಿಯ ಒಂದು ಅಭಿವ್ಯಕ್ತಿ; ಶಬ್ದದಲ್ಲಿ ನಿಶ್ಶ ಆಗಿರುವ ದೈವವಾಣಿ; ಪ್ರಬುದ್ಧ ಮನಸ್ಸಿನ ಅನುಪಮ ಸೃಷ್ಟಿ; ವರ್ತಮಾನ ಭವಿಷ್ಯತ್ತುಗಳೆರೆಡನ್ನೂ ಸಮನ್ವಯಿಸುವ, ಕಗ್ಗಂಟಾಗಿರುವ ಸಮಸ್ಯೆಗಳಿಂದ ಪಾರಾಗುವ ದಾರಿದೀಪ. ಯಾರನ್ನೂ ತಿರಸ್ಕರಿಸದೆ, ಅಪಹಾಸ್ಯ ಮಾಡದೆ, ಕೈಬಿಡದೆ ಒಪ್ಪಿಕೊಳ್ಳುವ, ಮೇಲಕ್ಕೆತ್ತುವ. ಎಂತಹ ಕಟುಕ ಮನಸ್ಸನ್ನೂ ಸಹನಶೀಲ ಆಗಿಸುವ, ಬೆತ್ತ ಹಿಡಿಯದೆ ಕಲಿಸುವ ಪುಸ್ತಕಗಳು ಖಡ್ಗಕ್ಕಿಂತಲೂ ಹೆಚ್ಚು ಸಶಕ್ತ. ಪುಸ್ತಕಗಳಲ್ಲಿಯ ಅಂತಸ್ಸತ್ವದಿಂದ ಓದುಗನಿಗೆ, ಓದುಗನಿಂದ ಅವುಗಳ ಅಂತಸ್ಸತ್ವಕ್ಕೆ ಮಹತ್ವ ದೊರೆಯುತ್ತದೆ.

ನಮ್ಮ ಭೌತಿಕ, ಮಾನಸಿಕ, ಬೌದ್ಧಿಕ ಪರಿಸರವನ್ನು ಸ್ವಾಭಾವಿಕವಾಗಿ ಉಲ್ಲಾಸದಾಯಕವಾಗಿಸುವ ಪುಸ್ತಕಗಳಿಗೆ ನಮ್ಮೊಂದಿಗಿನ ಹೃದಯಸಂವಾದಕ್ಕೆ ಹಾತೊರೆಯುವ ಒಂದು ವ್ಯಕ್ತಿತ್ವ ಇದೆ. ಅದನ್ನು ಗುರುತಿಸುವ ಮನಸ್ಥಿತಿಯೇ ಪುಸ್ತಕ ಸಂಸ್ಕೃತಿ. ಇದರ ಪ್ರಮುಖ ವಾಹಕ ಗ್ರಂಥಾಲಯ. ಬದುಕಿರುವವರು-ಸತ್ತಿರುವವರು, ಸಾಮಾನ್ಯರು-ಅಸಾಮಾನ್ಯರು, ಲೇಖಕರು-ಓದುಗರು, ದಾರ್ಶನಿಕರು-ಸಂತ್ರಸ್ತರು, ವಿಜ್ಞಾನಿಗಳು-ಜನಸಾಮಾನ್ಯರು ಇವರ ನಡುವೆ ಸಂಪರ್ಕ ಏರ್ಪಡಿಸುವ ಪುಸ್ತಕಗಳು ಎಲ್ಲಾ ಗಡಿರೇಖೆಗಳನ್ನು ಮೀರುವ ಕಾಲಸಮುದ್ರದ ಮೇಲೆ ನಿರ್ಮಿತವಾಗಿರುವ ಭಾಷಾಸೇತುವೆ. ಇದರಿಂದಾಗಿ ಪುಸ್ತಕ-ವಿಮಾನವನ್ನೇರಿ ಜಗತ್ತಿನ ಮೂಲೆ ಮೂಲೆಗೂ ಹೋಗುತ್ತೇವೆ. ಅಲ್ಲಲ್ಲಿಯ ಪ್ರಾಕೃತಿಕ – ನಾಗರಿಕ ಸೊಬಗನ್ನು ಕಣ್ತುಂಬಿಸಿಕೊಳ್ಳುತ್ತೇವೆ; ಅಲ್ಲಲ್ಲಿಯ ಸಮಸ್ಯೆಗಳನ್ನು ಎದುರಿಸುವ ಹೋರಾಟದಲ್ಲಿ ಭಾಗಿಯಾಗುತ್ತೇವೆ, ಮಾನವೀಯ ಮಿಡಿತದ ಹೃದಯಸ್ಪಂದನೆಯೊಂದಿಗೆ ಮುಖಾಮುಖಿಯಾಗುತ್ತೇವೆ. ಪ್ರಪಂಚದ ವೈವಿಧ್ಯಮಯ ಜನಜೀವನ ಒಳಗೊಳ್ಳುವ ಎಲ್ಲವುಗಳಿಗೆ ಸಾಕ್ಷಿಪ್ರಜ್ಞೆಯಾಗುತ್ತೇವೆ, ಇಂಥ ಪುಸ್ತಕಗಳಲ್ಲದೆ ಭುವನದ ಭಾಗ್ಯ ಬೇರೆ ಏನಿರಲು ಸಾಧ್ಯ !

ಕೆ.ಎಲ್. ಪದ್ಮಿನಿ ಹೆಗಡೆ

10 Responses

 1. ನಯನ ಬಜಕೂಡ್ಲು says:

  ಸೊಗಸಾಗಿದೆ ಲೇಖನ

 2. ಪುಸ್ತಕಗಳ ಮಹತ್ವವನ್ನು ಓದುಗರಿಗೆ ಸೊಗಸಾಗಿ ಉಣಪಡಿಸಿದ್ದೀರಿ ಧನ್ಯವಾದಗಳು

 3. ವಾವ್ ಮೇಡಂ ಅದ್ಬುತ.. ಅಷ್ಟೊಂದು ಓದಿರುವುದರಿಂದಲೇ..ನಿಮ್ಮ ನ್ನು ನೋಡಿದರೆ ವೀಣಾಪಾಣಿಯನ್ನೇ ನೋಡಿದ ಹಾಗೆ ಆಗುತ್ತೆ…ನಿಮ್ಮಂಥವರ ಒಡನಾಟದಲ್ಲಿ ಇದ್ದೇವೆ ಎನ್ನುವುದೇ ನಮ್ಮ ಪುಣ್ಯ.

 4. Hema says:

  ತಮಗೆ ಬಾಲ್ಯದಿಂದಲೇ ಲಭಿಸಿದ ಪುಸ್ತಕ ಸಂಸ್ಕೃತಿಯನ್ನು ಬಹಳ ಸೂಕ್ತವಾಗಿ ಬಳಸಿಕೊಂಡು, ಉಳಿಸಿಕೊಂಡು, ಬೆಳೆಸಿಕೊಂಡು, ಈ ಸದಭಿರುಚಿಯ ‘ಭುವನದ ಭಾಗ್ಯ’ವನ್ನು ನಮಗೂ ಹಂಚುತ್ತಿರುವ ನಿಮಗೆ ಧನ್ಯವಾದಗಳು ಮೇಡಂ.

 5. Padma Anand says:

  ಓದುವ ಒಳ್ಳೆಯ ಹವ್ಯಾಸ, ಜೀವನದಲ್ಲಿ, ಅದರಲ್ಲೂ ವಿದ್ಯಾರ್ಥಿ ಜೀವನದಲ್ಲಿ ಗ್ರಂಥಾಲಯದ ಪಾತ್ರ, ಒಳ್ಳೆಯ ಗ್ರಂಥಪಾಲಕ ಇದ್ದರೆ ಆಗುವ ಸದುಪಯೋಗ ಮುಂತಾದ ವಿಷಯಗಳ ಮೇಲೆ ಬೆಳಕು ಚೆಲ್ಲುವ ಪ್ರಬುದ್ಧ ಲೇಖನ.

 6. ಸುಜಾತಾ says:

  ಸೊಗಸಾದ ಲೇಖನ. ಆಪ್ತವೆನಿಸಿತು

 7. ಶಂಕರಿ ಶರ್ಮ says:

  ಚಿಕ್ಕಂದಿನಲ್ಲಿ ಓದುವ ಹವ್ಯಾಸವು ತಗಲಿಕೊಂಡರೆ, ಅದು ವ್ಯಕ್ತಿಯನ್ನು ಎಷ್ಟು ಉನ್ನತಮಟ್ಟಕ್ಕೆ ಒಯ್ಯಬಹುದೆಂಬುದಕ್ಕೆ ನೀವೇ ಸಾಕ್ಷಿ ಮೇಡಂ…ಸೊಗಾಸಾದ ಬರಹ.

 8. Padmini Hegde says:

  ಆಕರ್ಷಕ ಚಿತ್ರಗಳೊಂದಿಗೆ ಲೇಖನವನ್ನು ಪ್ರಕಟಿಸಿ ಆತ್ಮೀಯವಾಗಿ ಸ್ಪಂದಿಸಿದ. ಹೇಮಮಾಲಾ ಮೇಡಂಗೆ, ಪ್ರೀತಿಯಿಂದ ಲೇಖನವನ್ನು ಓದಿ ಮೆಚ್ಚಿಕೊಂಡ ನಯನ ಬಜಕೂಡ್ಲು ಮೇಡಂಗೆ, ಗಾಯತ್ರಿ ಸಜ್ಜನ್ ಮೇಡಂಗೆ, ಬಿ.ಆರ್.ನಾಗರತ್ನ ಮೇಡಂಗೆ, ಪದ್ಮ ಆನಂದ್ ಮೇಡಂಗೆ, ಸುಜಾತ ಮೇಡಂಗೆ, ಶಂಕರಿ ಶರ್ಮ ಮೇಡಂಗೆ, ಅನಾಮಿಕ ಓದುಗರಿಗೆ ಹೃತ್ಪೂರ್ವಕ ಧನ್ಯವಾದಗಳು!

 9. ಕ ಚ ಪಾಟೀಲ says:

  ಧನ್ಯವಾದಗಳು, ಪ್ರಬಂಧ ಗ್ರಂಥಾಲಯದ ಮಹತ್ವ ವನ್ನು
  ಆಕರ್ಷಕವಾಗಿ ವಿವರಿಸಿದೆ.

 10. ಎಂ.ಜಿ.ಚಂದ್ರಶೇಖರಯ್ಯ says:

  ಲೇಖನ ಚೆನ್ನಾಗಿದೆ. ನೀವು ಕೆಲಸ ಮಾಡಿದ ಕಾಲೇಜು ಮತ್ತು ಗ್ರಂಥಾಲಯದ ಗ್ರಂಥ ಪಾಲಕರನ್ನು ಹೆಸರಿಸಬಹುದಿತ್ತು.
  ನನ್ನ ನೆನಪು ಇರಲಾರದು. ನಾನು ಮೇಷ್ಟ್ರ ಶಿಷ್ಯ. ಕೆಲವು ತಿಂಗಳ ಹಿಂದೆ ಅವರೊಂದಿಗೆ ಮಾತನಾಡಿದೆ.
  ಅಭಿನಂದನೆಗಳು ಮೇಡಂ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: