ಅವಿಸ್ಮರಣೀಯ ಅಮೆರಿಕ – ಎಳೆ 70

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು…)

ಅಮೇರಿಕದಲ್ಲಿ ಕನ್ನಡ ಕೂಟ

ಅಮೇರಿಕದ ಕನ್ನಡ ಕೂಟ, ಉತ್ತರ ಕ್ಯಾಲಿಫೋರ್ನಿಯ, KKNC (Kannada Koota North California) ಯು ಕನ್ನಡಕ್ಕಾಗಿ ಕೆಲಸ ಮಾಡುವ, ಸುಮಾರು 3000 ಸದಸ್ಯರನ್ನೊಳಗೊಂಡ ಕನ್ನಡಿಗರ ಸಂಘ. ಕ್ಯಾಲಿಫೋರ್ನಿಯಾದ ಪಶ್ಚಿಮ ಕರಾವಳಿ(Bay Area)ಯಲ್ಲಿ ನೆಲೆಸಿರುವ  ವಿದೇಶೀಯರಲ್ಲಿ ಭಾರತೀಯರೇ ಹೆಚ್ಚು ಸಂಖ್ಯೆಯಲ್ಲಿದ್ದಾರೆ. ಈ ಸಂಘವು ಅತ್ಯುತ್ತಮ ಕಾರ್ಯಕ್ರಮಗಳನ್ನು ಈ ಆಂಗ್ಲ ರಾಷ್ಟ್ರದಲ್ಲಿ ಆಗಿಂದಾಗ್ಗೆ ಆಯೋಜಿಸುತ್ತಾ; ಅಲ್ಲಿ ನೆಲೆಸಿರುವ ಭಾರತದ ಕನ್ನಡಿಗರಿಗೆ ತಮ್ಮ ಮೂಲ ನೆಲೆಯ ನೆಲದ ಸೊಗಡನ್ನು ಉಣಿಸುತ್ತಿದೆ. ಹಿರಿಯರು ಕಿರಿಯರೆನ್ನದೆ ಸಂಘದ ಸದಸ್ಯತ್ವವನ್ನು ಹೊಂದಿ ಎಲ್ಲರೂ ಯಾವುದೇ ಕಾರ್ಯಕ್ರಮದಲ್ಲಿ ಲವಲವಿಕೆಯಿಂದ ಭಾಗವಹಿಸುವುದು ಇದರ ವಿಶೇಷತೆ. ವಾರ್ಷಿಕ ಯುವಸಮಿತಿ ರಚನೆಯಲ್ಲಿ ನನ್ನ ಮಗಳು ಮುಂದಾಳುತ್ವ ವಹಿಸಿ, ಆ ಬಳಿಕದ ಕಾರ್ಯಕ್ರಮಗಳಾದ ಸಂಕ್ರಾಂತಿ ಹಬ್ಬ, ಚಿಣ್ಣರ ಕೂಟ, ಕಾಳ್ಗಿಚ್ಚಿನಿಂದಾಗಿ ಸಂತ್ರಸ್ತರಾದ ಹಲವಾರು ಕುಟುಂಬಗಳಿಗೆ ಅಗತ್ಯ ಸಾಮಾನುಗಳ ಪೂರೈಕೆಗಾಗಿ ಸಾರ್ವಜನಿಕರಿಂದ ದೇಣಿಗೆ ಸಂಗ್ರಹ ಮತ್ತು  ಅದರನ್ನು ಸಂತ್ರಸ್ತರಿಗೆ ಹಸ್ತಾಂತರ, ಸುಗಮ ಸಂಗೀತ ಕಾರ್ಯಕ್ರಮ, Shankar’s Cancer Foundation ಸಂಸ್ಥೆಯ ಪರವಾಗಿ ಸಾರ್ವಜನಿಕರಿಂದ ದೇಣಿಗೆ ಸಂಗ್ರಹ ಮತ್ತು ಹಸ್ತಾಂತರ ಹಾಗೂ ಯುಗಾದಿ, ಜಾತ್ರೆ, ಬಯಲು ಕಾರ್ಯಕ್ರಮ ಇತ್ಯಾದಿಗಳನ್ನು ನಡೆಸಿಕೊಟ್ಟುದು ನಿಜಕ್ಕೂ ಹೆಮ್ಮೆಪಡುವಂತಿದೆ.

 ಕಥಾಕಮ್ಮಟ

ಕನ್ನಡ ಕೂಟ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಕಥಾ ಕಮ್ಮಟವೊಂದರಲ್ಲಿ ಭಾಗವಹಿಸುವ ಅವಕಾಶವೊಂದು ಅಕಸ್ಮಾತ್ತಾಗಿ ನನಗೆ ಬಂದೊದಗಿತು.

      ಪ್ರಸಿದ್ಧ ಕತೆಗಾರರಾದ ವಸುಧೇಂದ್ರರು ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯಕ್ರಮವನ್ನು ತುಂಬಾ ಚೆನ್ನಾಗಿ ನಡೆಸಿಕೊಟ್ಟರು. ಮಧ್ಯಾಹ್ನ 2ಗಂಟೆಯಿಂದ ಪ್ರಾರಂಭವಾದ ಕಾರ್ಯಕ್ರಮವು ನಿಗದಿತ ವೇಳೆಗೆ(5.30) ಮುಗಿಯುವ ಬದಲು 7.30ರ ವರೆಗೂ ಮುಂದುವರಿದಿರುವುದು ಕಮ್ಮಟದ ಯಶಸ್ಸಿಗೆ ಸಾಕ್ಷಿಯಾಯಿತು!. ಅತ್ಯುತ್ಸಾಹದಿಂದ ಪಾಲ್ಗೊಂಡ ಸದಸ್ಯರೆಲ್ಲರಿಗೂ ಕಥೆಗಳನ್ನು ಬರೆಯುವ ರೀತಿ ಹಾಗೂ ಕಥೆಗಳು ಹೇಗೆ ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿವೆ ಎಂಬುದನ್ನು ಮನದಟ್ಟು ಮಾಡಿಸಿದರು. ಕಥೆಗಳನ್ನು ಹೇಳುವುದು,  ಕೇಳುವುದು ಹಾಗೂ ನಂಬುವುದು ಬಹಳ ಮುಖ್ಯ ಮತ್ತು ಕುತೂಹಲವೆಂಬುದು ಜೀವನವನ್ನು ಹೇಗೆ ಮುಂದುವರಿಯುವಂತೆ ಮಾಡುತ್ತದೆ ಎಂಬ ವಿಷಯಗಳನ್ನು ಸಾದೋಹರಣವಾಗಿ ತಿಳಿಸಿದರು. ಕಥೆ ಹೆಣೆಯುವುದು ರಂಗೋಲಿ ಇಟ್ಟಂತೆ. ನಮ್ಮೆದುರು ನಡೆಯುವ ಘಟನೆಗಳೇ ಅದರ ಚುಕ್ಕೆಗಳು. ಅವುಗಳನ್ನು ಕ್ರಮಬದ್ಧವಾಗಿ ಜೋಡಿಸಿದರೆ ಸುಂದರ ಕಥಾ ರಂಗೋಲಿ ಸಿದ್ಧ ಎಂದ ಅವರು, ಎಲ್ಲರಿಗೂ  ಅರ್ಧಗಂಟೆಯ ಕಾಲಾವಕಾಶದಲ್ಲಿ ಕಥೆ ಹೆಣೆಯಲು ಪ್ರೋತ್ಸಾಹಿಸಿದರು. ಕಥೆ ಬರೆಯಲು ಬಾರದವರೂ ಅದನ್ನು ಬರೆದು ಶಾಭಾಷ್ ಗಿಟ್ಟಿಸಿಕೊಂಡರು. ಅವುಗಳ ವಿಮರ್ಶಾತ್ಮಕ ವಿವರಣೆಗಳೊದಿಗೆ ಅವುಗಳನ್ನು ಹೇಗೆ ಇನ್ನೂ ಚೆನ್ನಾಗಿ ಬರೆಯಬಹುದೆಂಬ ಅವರ ಸಲಹೆಗಳು ನಿಜಕ್ಕೂ ಉಪಯುಕ್ತವಾಗಿದ್ದವು.

     ಮುಂದಿನ ಮಜಲಿನಲ್ಲಿ ನಾಲ್ಕು ಜನರ ಗುಂಪು ಮಾಡಿ, ಒಬ್ಬೊಬ್ಬರಿಗೆ ಒಂದೊದು ಚಿತ್ರಗಳನ್ನು ಕೊಟ್ಟು ಅವುಗಳೆಲ್ಲವನ್ನೂ ಸೇರಿಸಿ ಕಥೆ ಹೆಣೆದ ಪರಿ ಇನ್ನೂ ಚೆನ್ನಾಗಿತ್ತು. ಕೊನೆಯದಾಗಿ ಅವರದೇ ಕಥೆ ‘ಯುಗಾದಿ’ಯನ್ನು ಭಾವಪೂರ್ಣವಾಗಿ ಓದಿ ಎಲ್ಲರ ಮನಗೆದ್ದರು. ಪ್ರಶ್ನೋತ್ತರಗಳಿಗೆ ಅವಕಾಶ ನೀಡಿ ಭಾಗವಹಿಸಿದ ಸದಸ್ಯರ ಸಂಶಯಗಳನ್ನು ನಿವಾರಿಸುವುದರೊಂದಿಗೆ ತಮ್ಮ ಅತೀ ಸರಳ ವ್ಯಕ್ತಿತ್ವ ಹಾಗೂ   ನಡವಳಿಕೆಯಿಂದ ನಿಜಕ್ಕೂ ವಂದನೀಯರೆನಿಕೊಂಡರು. ತಮ್ಮ ಸಾದೋಹರಣ ಸಹಿತ ಸುಹಾಸ್ಯ ಮಿಶ್ರಿತ ಉಪನ್ಯಾಸದಿಂದ ಕಥಾಕಮ್ಮಟದ ಅಭೂತಪೂರ್ವ ಯಶಸ್ಸಿಗೆ ಕಾರಣರಾದರು… ವಸುಧೇಂದ್ರರು.


ಯಕ್ಷಗಾನದ ಸಂಭ್ರಮ… 

      ಒಂದು ದಿನ, ಮಗಳು ಟಿಕೇಟನ್ನು ಕೈಯಲ್ಲಿಟ್ಟು, “ನಿಮ್ಮ ಪ್ರೀತಿಯ ಯಕ್ಷಗಾನ ನೋಡದೆ ತುಂಬಾ ಬೇಜಾರು ಬಂದಿರಬೇಕಲ್ಲಾ..  ಇಲ್ಲೇ ಹತ್ತಿರ ಎರಡು ದಿನ ಯಕ್ಷಗಾನ ಇದೆ, ಹೋಗಿ ಬನ್ನಿ” ಅಂದಳು. ನಮಗೋ ಅಶ್ಚರ್ಯವೋ ಆಶ್ಚರ್ಯ! ‘ಈ ಅಮೇರಿಕಾದಲ್ಲಿ ಯಕ್ಷಗಾನ ಎಲ್ಲಿಂದ ಬಂತಪ್ಪಾ?!’ ಎಂದುಕೊಂಡೆವು. ಟಿಕೇಟ್ ನೋಡಿದಾಗ ತಿಳಿಯಿತು, ಕನ್ನಡ ಕೂಟ ಕ್ಯಾಲಿಫೋರ್ನಿಯ(KKNC) ಮತ್ತು ಸನಾತನ ಯಕ್ಷರಂಗ ಕಲ್ಚರಲ್ ಸೆಂಟರ್(SYRCC) ಇವೆರಡರ ಸಹಯೋಗದಲ್ಲಿ ಎರಡು ದಿನಗಳ ಕಾಲ ಕ್ಯಾಲಿಫೋರ್ನಿಯಾದ ಸೇನೋಸೆ(San Jose)ಯಲ್ಲಿ ಯಕ್ಷಗಾನ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿತ್ತು. ಅದಕ್ಕಾಗಿ ಕರ್ನಾಟಕದ ಹಿರಿಯ ಕಲಾವಿದರನ್ನೊಳಗೊಂಡ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು. ನಮ್ಮೂರು ಪುತ್ತೂರಿನಲ್ಲಿ, ದಿನಾ ಯಕ್ಷಗಾನದಲ್ಲಿ ಮುಳುಗೇಳುತ್ತಿದ್ದ ನಮಗೆ, ಇಲ್ಲಿಯ  ಈ ಅವಕಾಶ ಖುಷಿ ಕೊಟ್ಟಿತ್ತು.

      ನಾವಿದ್ದಲ್ಲಿಂದ ಸುಮಾರು 25ಕಿ.ಮೀ ದೂರದಲ್ಲಿದ್ದ ಹೈಸ್ಕೂಲೊಂದರ ಅಡಿಟೋರಿಯಂನಲ್ಲಿ ಮಧ್ಯಾಹ್ನ3:30ಕ್ಕೆ ಆರಂಭವಾಗಲಿದ್ದ ಕಾರ್ಯಕ್ರಮಕ್ಕೆ ತಲಪಿದಾಗ ಗಂಟೆ ನಾಲ್ಕಾಗಿತ್ತು. ಎದುರಿನ ಹಜಾರದಲ್ಲಿ ತುಂಬಾ ಜನಜಂಗುಳಿ, ಕೈಯಲ್ಲಿ ತಿಂಡಿ ತಟ್ಟೆ ಹಿಡಿದು ಓಡಾಡುವುದನ್ನು ಕಂಡಾಗ, ಕಾರ್ಯಕ್ರಮ ಇನ್ನೂ ಆರಂಭವಾಗಿಲ್ಲವೆಂದು ತಿಳಿದು ಸಮಾಧಾನವಾಯ್ತೆನ್ನಿ. ಎಲ್ಲಾ ಕಡೆಗಳಿಂದಲೂ  ಭರ್ಜರಿ ಸೀರೆಗಳ ಸರಬರ ಸದ್ದು.., ಕನ್ನಡ, ತುಳು ಮಾತುಗಳು ಕೇಳಿ ಬರುತ್ತಿದ್ದವು. ಕೆಲವರು ಪರಿಚಿತರು ಸಿಕ್ಕಿದರು.., ಇನ್ನು ಕೆಲವರ ಪರಿಚಯ ಮಾಡಿಕೊಂಡೆವು. ಸುಮಾರು 500 ಆಸನಗಳಿರುವ ಮಿನಿ ಚಲನಚಿತ್ರ ಮಂದಿರದಂತಿದ್ದ ಅಡಿಟೋರಿಯಂನಲ್ಲಿ ಸಕಲ ಅನುಕೂಲತೆಗಳೂ ಇದ್ದು, ಪ್ರೇಕ್ಷಕರು ಅದಾಗಲೇ ತುಂಬಿ ಬಿಟ್ಟಿದ್ದರು.  ಗಂಟೆ 4:30, ಕಾರ್ಯಕ್ರಮ ಇನ್ನೂ ಪ್ರಾರಂಭವಾಗಿರಲಿಲ್ಲ. ಇಲ್ಲಿಯೂ ಈ ತರಹ ಆಗುವುದೆಂದರೆ? ನನಗೇಕೋ ಫಕ್ಕನೆ, ಸಮಯಪರಿಪಾಲನೆಗೆ ಹೆಸರಾದ ನಮ್ಮ ಮೂಡಬಿದ್ರೆಯ ಡಾ. ಮೋಹನ್ ಆಳ್ವರ ನೆನಪಾಯಿತು.

(ಮುಂದುವರಿಯುವುದು…..)

ಈ ಪ್ರವಾಸಕಥನದ ಹಿಂದಿನ ಎಳೆ ಇಲ್ಲಿದೆ: https://www.surahonne.com/?p=38963

-ಶಂಕರಿ ಶರ್ಮ, ಪುತ್ತೂರು               

14 Responses

 1. ನಯನ ಬಜಕೂಡ್ಲು says:

  ಪರದೇಶದಲ್ಲೂ ರಾರಾಜಿಸುವ ಕನ್ನಡದ ಕುರಿತು ಓದುವಾಗ ನಮ್ಮ ನಾಡು, ನಮ್ಮ ಭಾಷೆಯ ಮೇಲೆ ತುಂಬಾ ಹೆಮ್ಮೆಯ ಭಾವ ಮೂಡುತ್ತದೆ. ಅಲ್ಲಿ ನಡೆಯುವ ಪ್ರತಿಯೊಂದು ಚಟುವಟಿಕೆಯನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದೀರಿ ಮೇಡಂ.

  • ಶಂಕರಿ ಶರ್ಮ says:

   ಮೆಚ್ಚುಗೆಯ ಪ್ರತಿಕ್ರಿಯೆಗೆ ಧನ್ಯವಾದಗಳು….ನಯನಾ ಮೇಡಂ

 2. ಹೊರನಾಡ ಕನ್ನಡಿಗರ ಕನ್ನಡ ಪ್ರೇಮವನ್ನು ತುಂಬಾ ಸುಂದರವಾಗಿ ಕಟ್ಟಿಕೊಟ್ಟಿದ್ದೀರಿ ಧನ್ಯವಾದಗಳು

  • ಶಂಕರಿ ಶರ್ಮ says:

   ಮೆಚ್ಚುಗೆಯ ಪ್ರತಿಕ್ರಿಯೆಗೆ ಧನ್ಯವಾದಗಳು….ಗಾಯತ್ರಿ ಮೇಡಂ.

 3. ಪರದೇಶದಲ್ಲೂ ನಮ್ಮ ಭಾಷೆಯ ಸೊಗಡು…ನಿಮ್ಮ ಅನುಭವ ದ ಬುತ್ತಿ..ಸುಂದರ ವಾಗು ಅನಾವರಣ ಗೊಂಡಿದೆ ಶಂಕರಿ ಮೇಡಂ..

  • ಶಂಕರಿ ಶರ್ಮ says:

   ಪ್ರೋತ್ಸಾಹಕ ನುಡಿಗಳಿಗೆ ಧನ್ಯವಾದಗಳು… ನಾಗರತ್ನ ಮೇಡಂ

 4. Anonymous says:

  ಪರದೇಶಕ್ಕೆ ಹೋಗಿಬರುವ ಪ್ರಯಾಣ ಒಳ್ಳೆಯದೆ. ಆದರೆ ಅಲ್ಲಿಯೇ ನೆಲೆಸಿ ಅಲ್ಲಿಯ ಉದ್ಯೋಗ ಒಳ್ಳೆಯದಲ್ಲ ಎಂದು ನನ್ನ ಭಾವನೆ.

  • ಶಂಕರಿ ಶರ್ಮ says:

   ಹೌದು… ತಮ್ಮ ಅಭಿಪ್ರಾಯದೊಂದಿಗೆ ನನ್ನ ಸಹಮತವಿದೆ…ಧನ್ಯವಾದಗಳು. ಆದರೆ ಎಲ್ಲವೂ ನಾವು ಅಂದುಕೊಂಡಂತೆ ಆಗಲಸಾಧ್ಯ….ಅಲ್ಲವೇ?

 5. Padmini Hegde says:

  ವಿದೇಶೀ ನೆಲೆಯಲ್ಲಿ ಕನ್ನಡ ಸಂಸ್ಕೃತಿಯ ಕಾರ್ಯಕ್ರಮಗಳನ್ನು ನಡೆಸುವುದನ್ನು ಚೆಂದಾಗಿ ಬಣ್ಣಿಸಿದ್ದೀರಿ. ಖುಷಿ ಆಯಿತು

 6. Hema says:

  ಎಂದಿನಂತೆ ಚೆಂದದ ನಿರೂಪಣೆ. ಈ ಬಾರಿಯ ಬರಹವು ‘ಯಾವ ಮೋಹನ ಮುರಳಿ ಕರೆಯಿತೋ ದೂರ ತೀರಕೆ ನಿನ್ನನು…’ ಭಾವಗೀತೆಯನ್ನು ನೆನಪಿಸಿತು..

  • ಶಂಕರಿ ಶರ್ಮ says:

   ಬರಹಗಳನ್ನು ಸುಂದರವಾಗಿ ಪ್ರಕಟಿಸಿ, ಮೆಚ್ಚಿ, ಪ್ರೋತ್ಸಾಹಿಸುತ್ತಿರುವ ಹೇಮಮಾಲಾ ಅವರಿಗೆ ಪ್ರೀತಿಯ ಧನ್ಯವಾದಗಳು.

 7. Padma Anand says:

  ಸುಂದರ ನಿರೂಪಣೆಯೊಂದಿಗೆ ಪರದೇಶದಲ್ಲಿ ಪಸರಿಸಿದ ಕನ್ನಡದ ಕಂಪಿನ ಘಮಲನ್ನು ನಾವೂ ಆಘ್ರಾಣಿಸುವಂತೆ ಮಾಡಿದ್ದೀರಿ. ಅಭಿನಂದನೆಗಳು.

  • ಶಂಕರಿ ಶರ್ಮ says:

   ಮೆಚ್ಚುಗೆಯ ಪ್ರತಿಕ್ರಿಯೆಗೆ ಧನ್ಯವಾದಗಳು….ಪದ್ಮ ಮೇಡಂ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: