ವೀರ ಅಭಿಮನ್ಯು
ಮಹಾಭಾರತವು ಹಲವು ಜನ್ಮಗಳ ಪಾಪ ತೊಳೆಯುವ ಜಲವಂತೆ, ಈ ಮಹಾಪುರಾಣವು ಮೊಗೆದಷ್ಟೂ ಸಿಗುವಂತಹ ಮಹಾಸಮುದ್ರದಂತೆ. ಅದರಲ್ಲಿ ಬರುವ ಒಬ್ಬೊಬ್ಬರಿಗೂ ಒಂದೊಂದು ವಿಶೇಷತೆ. ಅದರಲ್ಲಿ ಧರ್ಮ ಸಂಸ್ಕೃತಿಗಳಿವೆ, ತತ್ವ- ನೀತಿಗಳಿವೆ. ಎಲ್ಲವನ್ನೂ ಕೊಡಬಲ್ಲ ಭಗವದ್ಗೀತೆಯೇ ಇದೆ. ಅಷ್ಟು ಮಾತ್ರವಲ್ಲ ವೈಜ್ಞಾನಿಕ (ಆಧುನಿಕವೆಂದು ಹೇಳಲ್ಪಡುವ) ವಿಚಾರಗಳೂ ಹುದುಗಿವೆ. ಈ ನಿಟ್ಟಿನಲ್ಲಿ ವಿಜ್ಞಾನಕ್ಕೆ ಸಂಬಂಧಪಟ್ಟ ವಿಚಾರವನ್ನ ಓರ್ವನ ಜೀವನದಒಂದು ಎಳೆಯನ್ನ ನೋಡೋಣ.
ಮನೆಯಲ್ಲಿ ಗರ್ಭಿಣಿ ಸ್ತ್ರೀಯರಿದ್ದರೆ ಅನುಭವೀ ಹಿರಿಯರು ಕಿವಿಮಾತು ಹೇಳುವುದಿದೆ. ಒಳ್ಳೆಯ ಮಾತನ್ನಾಡು, ಪುರಾಣ ಗ್ರಂಥಗಳನ್ನೇ ಓದು, ಒಳ್ಳೆಯದನ್ನೇ ಚಿಂತಿಸು, ಸತ್ಕಾರ್ಯವನ್ನೇ ಮಾಡು ಎಂಬುದಾಗಿ ಗರ್ಭಿಣಿಯರು ಸದಾ ತನು-ಮನಗಳಿಂದ ಸುಯೋಗ್ಯವಾದುದನ್ನೇ ಮಾಡಿದರೆ ಸಮಾಜಕ್ಕೆ ಹಿತವಾದ, ಸುಲಕ್ಷಣವುಳ್ಳ
ಸುಪುತ್ರರನ್ನು ಪಡೆಯುವುದಕ್ಕೆ ಸಾಧ್ಯ ಎಂಬುದಾಗಿ ಇಂದಿನ ವೈದ್ಯರು ಹೇಳುವುದನ್ನು ಎಷ್ಟೋ ಶತಮಾನಗಳ ಹಿಂದಿನ ಪುರಾಣ ಪುರುಷರು ಹೇಳುತ್ತಿದ್ದರು. ಇದಕ್ಕೆಆಧಾರಗಳೂ ಇವೆ. ಪ್ರಹ್ಲಾದನ ತಾಯಿ ‘ಕಯಾದು’ವು ಗರ್ಭಿಣಿಯಾಗಿದ್ದಾಗ ನಾರದ ಮಹರ್ಷಿಗಳು ಆಕೆಗೆ ಹರಿಭಕ್ತಿಯನ್ನು ಪ್ರಚೋದಿಸಿದರಂತೆ. ಶ್ರೀಕೃಷ್ಣನ ತಾಯಿಯಾದ
ದೇವಕಿಯೂ ತಾನು ಗರ್ಭಿಣಿಯಾಗಿದ್ದಾಗ ಕಂಸನ ಸೆರೆಮನೆಯಲ್ಲಿದ್ದರೂ ಹರಿಭಕ್ತಿಯಲ್ಲಿ ಕಾಲ ಕಳೆದಳಂತೆ. ಇವುಗಳ ಸತ್ಪರಿಣಾಮ ನಮಗೆ ತಿಳಿದೇ ಇದೆ. ಪ್ರಹ್ಲಾದ ಹರಿಯ ಅಂಶದಿಂದ ಜನಿಸಿದರೆ, ಕೃಷ್ಣ, ಹರಿಯ ಅವತಾರ ಪುರುಷನಾಗಿ ಜನ್ಮವೆತ್ತಿದ. ಈ ನಿಟ್ಟಿನಲ್ಲಿ ಅಭಿಮನ್ಯುವಿನ ಕಥೆ ದೃಷ್ಟಾಂತವಾಗಿ ನಮ್ಮ ಮುಂದಿದೆ.
ಈ ಅಭಿಮನ್ಯು ಎಂದರೆ ಯಾರು? ಆತನ ಕಥೆಯಲ್ಲಿ ಗರ್ಭಿಣಿಯರಿಗೆ ಹಿತವಾದ, ನೀತಿಯುಕ್ತವಾದ ಸಂದರ್ಭ ಯಾವುದು? ಎಂಬುದೆಲ್ಲ ತಿಳಿದುಕೊಳ್ಳೋಣ. ದೇವ ದೇವನಾದ ಶ್ರೀ ಕೃಷ್ಣ ಪರಮಾತ್ಮನ ಸೋದರಿಯೂ ವಸುದೇವ – ದೇವಕಿಯರ ಮಗಳೂ ಆದ ಸುಭದ್ರೆ ಹಾಗೂ ಮಧ್ಯಮ ಪಾಂಡವನಾದ ಅರ್ಜುನ ಇವರ ಮಗನೇ ವೀರ ಅಭಿಮನ್ಯು. ದ್ರೌಪದಿಯು ಪಾಂಡವರೈವರ ಮಡದಿಯಾದರೆ ಸುಭದ್ರೆ ಅರ್ಜುನನಿಗೆ ಮಾತ್ರ ಪತ್ನಿ. ಅರ್ಜುನನು ದ್ರೌಪದಿಯನ್ನು ಸ್ವಯಂವರ ಪರೀಕ್ಷೆಯಲ್ಲಿ ಗೆದ್ದು ತಂದಾಗ ಕುಂತಿಯ ಅಪ್ಪಣೆಯಂತೆ, ವ್ಯಾಸರ ನಿಯಮದಂತೆ ಐವರೂ ದ್ರೌಪದಿಯನ್ನು ಪತ್ನಿಯನ್ನಾಗಿ ಸ್ವೀಕರಿಸುತ್ತಾರೆ. ವೇದವ್ಯಾಸರ ನಿಯಮವೆಂದರೆ; ಐದೂ ಮಂದಿಗೂ ಕ್ರಮವಾಗಿ ಒಂದೊಂದು ವರ್ಷ ದ್ರೌಪದಿಯು ಪತ್ನಿಯಾಗಿರಬೇಕು, ಒಬ್ಬನ ಅವಧಿಯಲ್ಲಿ ಏಕಾಂತದ ವೇಳೆ ಮತ್ತೊಬ್ಬ ನೋಡಿದರೆ, ನೋಡಿದಾತ ಹನ್ನೆರಡು ವರ್ಷ ತೀರ್ಥಯಾತ್ರೆ ಕೈಗೊಳ್ಳಬೇಕು. ಅದೃಷ್ಟವೋ ದುರದೃಷ್ಟವೋ ಎಂಬಂತೆ ಒಂದು ರಾತ್ರಿ ಧರ್ಮರಾಯ ಮತ್ತು ದ್ರೌಪದಿ ಏಕಾಂತದಲ್ಲಿದ್ದಾಗ ಊರಿಗೆ ನುಗ್ಗಿದ ಕಳ್ಳರನ್ನು ಸದೆಬಡಿದು ಬ್ರಾಹ್ಮಣರನ್ನು ರಕ್ಷಿಸಲೋಸುಗ ಅರ್ಜುನನು ಶಸ್ತ್ರಾಸ್ತ್ರ ತರಲೆಂದು ಗಂಡ ಹೆಂಡತಿ ಮಲಗಿದ್ದ ಕೊಠಡಿಗೆ ಹೋಗುತ್ತಾನೆ. ಶಸ್ತ್ರಾಸ್ತ್ರಗಳು ಅಲ್ಲಿದ್ದುದರಿಂದ ಅವನಿಗೆ ಅಲ್ಲಿಗೆ ಹೋಗದೆ ನಿರ್ವಾಹವಿಲ್ಲದಾಗುತ್ತದೆ. ಕಳ್ಳರನ್ನೇನೋ ಸದೆಬಡಿದು ಬ್ರಾಹ್ಮಣರಿಗೆ ರಕ್ಷಣೆ ನೀಡುತ್ತಾನೆ ಅರ್ಜುನ. ಹಾಗೆಯೇ ವ್ಯಾಸರು ವಿಧಿಸಿದ ನಿಯಮದಂತೆ ತೀರ್ಥಯಾತ್ರೆಗೂ ಹೊರಡುತ್ತಾನೆ. ತೀರ್ಥ ಯಾತ್ರೆ ಮಾಡುತ್ತಾ ಸನ್ಯಾಸಿಯ ವೇಷ ಧರಿಸಿ ದ್ವಾರಕೆಗೆ ಆಗಮಿಸುತ್ತಾನೆ. ಎಲ್ಲವನ್ನೂ ಬಲ್ಲ ಶ್ರೀಕೃಷ್ಣನು ತಂತ್ರದಿಂದ ಸನ್ಯಾಸಿಯ ಸೇವೆಗೆ ತಂಗಿ ಸುಭದ್ರೆಯನ್ನು ನೇಮಿಸುತ್ತಾನೆ. ಮತ್ತೆ ಕೇಳಬೇಕೆ? ಕೃಷ್ಣನ ಮುಂದಾಲೋಚನೆ ಕ್ರಮಬದ್ಧವಾಗಿ ಅರ್ಜುನ – ಸುಭದ್ರೆಯರ ವಿವಾಹ ನಡೆಯುತ್ತದೆ.
ಅರ್ಜುನನ ಪತ್ನಿಯಾದ ಸುಭದ್ರೆ ಗರ್ಭಿಣಿಯಾಗಿ ಅಭಿಮನ್ಯುವನ್ನು ತನ್ನ ಉದರದಲ್ಲಿ ಹೊತ್ತಿದ್ದಾಗ ಒಮ್ಮೆ ಅಣ್ಣನಾದ ಶ್ರೀಕೃಷ್ಣನೊಡನೆ ಪ್ರಯಾಣ ಮಾಡುತ್ತಿದ್ದ ಸಂದರ್ಭ, ಪ್ರಯಾಣದ ವೇಳೆ ಯಾವುದಾದರೂ ಕುತೂಹಲಭರಿತ ಕತೆ ಕೇಳಲು ಎಲ್ಲರೂ ಇಷ್ಟಪಡುತ್ತಾರಲ್ಲವೇ? ಹಾಗೆಯೇ ಆಯ್ತು. ಸುಭದ್ರೆ ಅಣ್ಣ ಕೃಷ್ಣನೊಡನೆ ಕತೆ ಹೇಳೆಂದು ಒತ್ತಾಯ ಹೇರುತ್ತಾಳೆ. ಯಾವ ಕತೆ ಹೇಳಲಿ? ಕೇಳಲು ಇಷ್ಟವಾಗಿರಬೇಕಲ್ಲವೇ? ಮುಂದೆ ಮಹಾಭಾರತ ಯುದ್ಧ ನಡೆಯುತ್ತದೆ. ಅಲ್ಲಿ ಚಕ್ರವ್ಯೂಹ ಕೋಟೆಗೆ ಪ್ರವೇಶಿಸುವ ವಿಧಾನವನ್ನು ಕೂಲಂಕುಷವಾಗಿ ತಂಗಿಗೆ ತಿಳಿಸುತ್ತಿದ್ದಾನೆ ಕೃಷ್ಣ. ಚಕ್ರಾಕಾರದಲ್ಲಿ ನಿಲ್ಲಿಸಿದ ಸೇನೆ, ಪದ್ಮವ್ಯೂಹ ರಚನೆ ಹೇಳುತ್ತಾ ಇರುತ್ತಾನೆ ಅಣ್ಣ. ಕೇಳುತ್ತಾ ಇರುತ್ತಾಳೆ ತಂಗಿ ಗರ್ಭಿಣಿಯಾಗಿದ್ದರಿಂದಲೋ ಏನೋ ಆಯಾಸದಿಂದ ಅಲ್ಲಿಗೆ ಜೊಂಪು ಹತ್ತಿಬಿಡುತ್ತದೆ. ತಂಗಿಗೆ ಆಕೆ ಹೂಂಗುಟ್ಟುವುದನ್ನು ನಿಲ್ಲಿಸಿದ ಗಮನಕ್ಕೆ ಬಂದ ಅಣ್ಣ, ತಂಗಿಯನ್ನೊಮ್ಮೆ ನೋಡುತ್ತಾನೆ. ಆದರೆ ಆಕೆಯ ಬದಲಿಗೆ ಆಕೆಯ ಉದರದೊಳಗಿಂದ ಹೂಂಗುಟ್ಟುವುದು ಕೇಳಿಸುತ್ತದೆ. ಕೂಡಲೇ ತಾನು ಹೇಳುತ್ತಿದ್ದ ಕತೆಯನ್ನು ನಿಲ್ಲಿಸುತ್ತಾನೆ ಕೃಷ್ಣ. ಇಷ್ಟು ಹೊತ್ತಿನ ಕತೆಯಲ್ಲಿ ಚಕ್ರವ್ಯೂಹ ಕೋಟೆಗೆ ಪ್ರವೇಶಿಸುವ ವಿಧಾನ ವಿಶದವಾಯ್ತೆ ಹೊರತು ಅದನ್ನು ಬೇಧಿಸಿ ಹೊರಗೆ ಬರುವ ಪರಿ ಅಭಿಮನ್ಯುವಿಗೆ ತಿಳಿಯದಾಯ್ತು ಮುಂದೆ ನವಮಾಸಗಳು ತುಂಬಿ ಅಭಿಮನ್ಯುವಿನ ಜನನ ವಾಗುತ್ತದೆ. ಶ್ರೀಕೃಷ್ಣನ ಸೋದರಳಿಯನಾದ ಅಭಿಮನ್ಯುವಿನ ವಿದ್ಯಾಗುರುಗಳು ಶ್ರೀಕೃಷ್ಣಾರ್ಜುನರು.
ಅಭಿಮನ್ಯುವಿಗೆ ಇಬ್ಬರು ಪತ್ನಿಯರು, ವಿರಾಟರಾಜನ ಮಗಳಾದ ಉತ್ತರೆ ಹಾಗೂ ಬಲರಾಮನ ಮಗಳಾದ ಶಶಿರೇಖೆ. ಪಾಂಡವರು ಒಂದು ವರ್ಷದ ಅಜ್ಞಾತ ವಾಸವನ್ನು ವಿರಾಟನಗರಿಯಲ್ಲಿ ಕಳೆಯುತ್ತಾರೆ. ಆ ಸಂದರ್ಭದಲ್ಲಿ ಅರ್ಜುನನು ಬೃಹನ್ನಳೆ ವೇಷದಲ್ಲಿದ್ದು ವಿರಾಟನ ಮಗಳು ಉತ್ತರೆಗೆ ನಾಟ್ಯ ಶಿಕ್ಷಣಕ್ಕೆ ನೇಮಿಸಲ್ಪಡುತ್ತಾನೆ. ಅವರ ಅಜ್ಞಾತವಾಸ ಮುಗಿದು ಅವರು ಪಾಂಡವರೆಂದು ಗುರುತಿಸಲ್ಪಟ್ಟಾಗ ವಿರಾಟನಿಗೆ ಆಶ್ಚರ್ಯವೂ ಪಶ್ಚಾತ್ತಾಪವೂ ಉಂಟಾಗುತ್ತದೆ. ಅದು ತನಕ ತನ್ನರಮನೆಯಲ್ಲಿ ಊಳಿಗ ಮಾಡಿಕೊಂಡಿದ್ದವರು ಪಾಂಡವರೆಂದು ತಿಳಿದಾಗ ಧರ್ಮರಾಯನಲ್ಲಿ ಕ್ಷಮೆ ಯಾಚಿಸಿದನಲ್ಲದೆ ವಿರಾಟನು ತನ್ನ ಮಗಳಿಗೆ ನಾಟ್ಯವಿದ್ಯೆ ಕಲಿಸಿದ ಕನ್ಯೆ ತನಗೆ ಮಗಳಿಗೆ ಸಮಾನವೆಂದೂ ಉತ್ತರೆಯ ಸಮ್ಮತಿಯಿದ್ದಲ್ಲಿ ತನ್ನ ಮಗ ಅಭಿಮನ್ಯುವಿಗೆ ಉತ್ತರೆಯನ್ನು ವಿವಾಹ ಮಾಡಬೇಕೆಂದು ಕೇಳುತ್ತಾನೆ. ಇದರಿಂದ ಸಂತೋಷಚಿತ್ತನಾದ ವಿರಾಟನು ಸಮ್ಮತಿಯಿತ್ತು ಮುಂದೆ ಅಭಿಮನ್ಯು – ಉತ್ತರೆಯರ ವಿವಾಹವು ಅದ್ದೂರಿಯಿಂದ ನಡೆಯುತ್ತದೆ.
ಮುಂದೆ ಕುರುಕ್ಷೇತ್ರ ಸಮರಾಂಗಣದಲ್ಲಿ ತರುಣ ಅಭಿಮನ್ಯು ವೀರಾವೇಶದಿಂದ ಹೋರಾಡುತ್ತಾನೆ. ಕೌರವರ ಅನೇಕ ಮಂದಿಯನ್ನು ಸದೆಬಡಿದ ಬಾಲಕ ಅಭಿಮನ್ಯುವಿನ ಪರಾಕ್ರಮವನ್ನು ವೈರಿಗಳೂ ಮೆಚ್ಚುತ್ತಾರೆ. ಇಂತಹ ವೀರಾಗ್ರಣಿಯನ್ನು ಎದುರಿಸುವುದು ಅಸಾಧ್ಯವೆಂದು ಬಗೆದ ಕರ್ಣ ಹಿಂದಿನಿಂದ ಬಂದು ಅಭಿಮನ್ಯುವಿನ ಕೈಗಳೆರಡನ್ನೂ ತುಂಡರಿಸುತ್ತಾನೆ. ಚಕ್ರವ್ಯೂಹ ಕೋಟೆ ಒಳಹೊಕ್ಕು ಯುದ್ಧ ಮಾಡಲು ಶಕ್ತನಾಗಿದ್ದ ಬಾಲಕ ಅದರ ಬೇಧವನ್ನು ತಿಳಿಯದಾದನು. ಭೀಕರ ಕಾಳಗ ಮಾಡಿ ದುಶ್ಯಾಸನನ ಪುತ್ರನನ್ನೂ ಕೊಂದು ತಾನೂ ಪ್ರಾಣ ಬಿಡುತ್ತಾನೆ. ಗತಪ್ರಾಣನಾದ ಪ್ರಾಣಕಾಂತನನ್ನು ನೋಡಿದ ಉತ್ತರೆ ಮೂರ್ಛೆ ತಪ್ಪಿ ಬೀಳುತ್ತಾಳೆ. ಪುತ್ರನು ಅಗಲಿದ ಶೋಕಸಾಗರದ ನಡುವೆಯೂ ಸುಭದ್ರೆ ತನ್ನ ಸೊಸೆಯನ್ನು ಸಾಂತ್ವನಿಸುತ್ತಾಳೆ. ‘ಮಗಳೇ, ನೀನು ನಮ್ಮ ಕುಲದ ಲಕ್ಷ್ಮಿ, ಈ ಕುಲಕ್ಕೆ ಆಧಾರವಾಗಿರತಕ್ಕ ಒಂದೇ ಒಂದು ಕುಡಿ ಉಳಿದಿದ್ದು ಅದು ನಿನ್ನ ಉದರದಲ್ಲಿದೆ. ಆಧಾರ ಸ್ತಂಭವಾಗುವ ಆಶಾಕಿರಣವನ್ನು ನೀನು ರಕ್ಷಿಸಿ ಕಾಪಾಡಬೇಕಾಗಿದೆ. ನಿನ್ನ ಶೋಕ ದಾರುಣವಾದುದಾದರೂ ಮೆಲ್ಲ ಮೆಲ್ಲನೆ ಪತಿಪ್ರೇಮವನ್ನು ಮರೆಯುತ್ತ ಪುತ್ರ ಪ್ರೇಮಕ್ಕೆ ಹೃದಯದಲ್ಲಿ ಆಸ್ಪದ ನೀಡಬೇಕಾಗಿದೆ. ಈ ಧರ್ಮ ರಾಜ್ಯದ ಭಾಗ್ಯಲಕ್ಷ್ಮೀಯಾಗಿದ್ದ ನೀನು ಈ ರೀತಿ ಸಾಂತ್ವನಗೊಳ್ಳಲೇಬೇಕು’ ಎಂದು ಹುರಿದುಂಬಿಸುತ್ತಾಳೆ ಸುಭದ್ರೆ. ಮುಂದೆ ಪರೀಕ್ಷಿತನಿಗೆ ಜನ್ಮ ನೀಡುತ್ತಾಳೆ ಉತ್ತರೆ, ಅಭಿಮನ್ಯುವಿನ ಮೊಮ್ಮಗನೇ ಜನಮೇಜಯ ಈತನಿಗೆ ವೈಶಂಪಾಯನ
ಋಷಿಯ ಮಹಾಭಾರತ ಕತೆಯನ್ನು ಹೇಳುವುದರ ಮೂಲಕ ಮಹಾಭಾರತ ಕತೆ ಆರಂಭಗೊಳ್ಳುತ್ತದೆ. ಅಭಿಮನ್ಯುವಿನ ವೃತ್ತಾಂತದಿಂದ ತರುಣರಿಗೆ ಉತ್ಸಾಹ, ಅರಸುಗಳಿಗೆ ವೀರತ್ವ, ಮನನ ಮಾಡುವವರಿಗೆ ತತ್ವದರ್ಶನವನ್ನೂ ಅಲ್ಲದೇ ವಿಶೇಷವಾಗಿ ಗರ್ಭಿಣಿಯರಿಗೆ ನೀತಿಯನ್ನೂ ಬೋಧಿಸುತ್ತದೆ. ಗರ್ಭಿಣಿ ಸ್ತ್ರೀಯ ಯಾವುದೇ ಶಾರೀರಿಕ, ಮಾನಸಿಕ ಕ್ರಿಯೆಗಳಿಗೆ ಗರ್ಭದೊಳಗಿನ ಶಿಶುವೂ ಸ್ಪಂದಿಸುತ್ತದೆ ಎಂಬ ಅಂಶವನ್ನು ಈ ಕತೆಯು ನಿರೂಪಿಸುತ್ತಿದೆ. ಕೈಗಳೆರಡೂ ತುಂಡರಿಸಲ್ಪಟ್ಟರೂ ಕ್ಷತ್ರಿಯ ಧರ್ಮದಂತೆ ಕಾದಾಡಿ ವೈರಿಯನ್ನು ಸೆದೆಬಡಿದು ತಾನೂ ಮಡಿದ ವೀರ ಅಭಿಮನ್ಯು ಮಹಾಭಾರತದಲ್ಲಿ ಒಂದು ಮಿನುಗು ತಾರೆ.
-ವಿಜಯಾ ಸುಬ್ರಹ್ಮಣ್ಯ, ಕುಂಬಳೆ.
ಅಡ್ಮಿನ್ ಹೇಮಮಾಲಾ ಹಾಗೂ ಓದುಗ ಬಳಗಕ್ಕೆ ಧನ್ಯವಾದಗಳು.
ಅಭಿಮನ್ಯುವಿನ ಕಥೆ ಎಲ್ಲರಿಗೂ ತಿಳಿದದ್ದೇ, ಆದರೆ ಇಲ್ಲಿ ಕತೆಯ ಮೊದಲು ಬರುವ ಪೀಠಿಕೆ ಬಹಳ ಸೊಗಸಾಗಿದೆ. ಈ ಪೀಠಿಕೆ ಕತೆಯನ್ನು ಮತ್ತೆ ಓದುವಂತೆ ಪ್ರೇರೇಪಿಸುತ್ತದೆ.
ಅಭಿಮನ್ಯವಿನ ಕಥೆ ಸೊಗಸಾದ ನಿರೂಪಣೆಯಿಂದ…ಕೂಡಿದ್ದು ಮನಕ್ಕೆ ಮುದ ನೀಡಿತು ವಿಜಯ ಮೇಡಂ.. ಧನ್ಯವಾದಗಳು..
.
ಪೌರಾಣಿಕ ಕತೆಗಳನ್ನು ಪ್ರತಿ ಓದಿನಲ್ಲೂ ಹೊಸ ಹೊಳಹಿನಿಂದ ಆಸಕ್ತಿ ಮೂಡಿಸುತ್ತಾ ಬರೆಯುತ್ತೀರಿ. ಧನ್ಯವಾದಗಳು
ಸರ್ವಕಾಲಕ್ಕೂ, ವೀರಾಗ್ರಣಿಯಾದ ಅಭಿಮನ್ಯುವಿನ ಕಥೆ ಹೃದಯವನ್ನು ಕರುಣೆಯಿಂದ ಆರ್ದ್ರಗೊಳಿಸುತ್ತದೆ. ತುಂಬಾ ಸುಂದರವಾದ ಪ್ರಾರಂಭದೊಡನೆ ಆರಂಭವಾದ ಈ ನಿರೂಪಣೆ ಸೊಗಸಾಗಿ ಮೂಡಿ ಬಂದಿದೆ.
ಮಹಾಭಾರತದಲ್ಲಿ, ವೀರಾಗ್ರಣಿ ಅಭಿಮನ್ಯುವಿನ ಕಥೆಯು ಮನಕಲಕುವಂತಹುದು. ಎಂದಿನಂತೆ ಸರಳ ಸುಂದರ ಕಥಾನಕ..ಧನ್ಯವಾದಗಳು ವಿಜಯಕ್ಕ.
ಓದುಗ ಬಳಗಕ್ಕೆ ಹಾಗೂ ಸುರಹೊನ್ನೆ ಅಡ್ಮಿನ್ ಹೇಮಮಾಲಾ ಇವರಿಗೂ ಧನ್ಯವಾದಗಳು.