ಆಶಾವಾದಿಗಳ ಸುತ್ತ

Share Button

ಆಶಾವಾದಿಗಳನ್ನು ಆಂಗ್ಲಭಾಷೆಯಲ್ಲಿ ‘OPTMIST’ ಎಂದೂ ನಿರಾಶಾವಾದಿಗಳನ್ನು ‘PESSIMIST’ ಎಂದೂ ಕರೆಯುತ್ತಾರೆ. ಈ ಲೇಖನದ ಪ್ರಾರಂಭವನ್ನು ಒಂದು ಪ್ರಖ್ಯಾತವಾದ ಹೇಳಿಕೆಯ ಮೂಲಕ ಪ್ರಾರಂಭಿಸಿದರೆ ಹೆಚ್ಚು ಅರ್ಥಪೂರ್ಣವಾದೀತು. ‘AN OPTIMISIT INVENTS A AEROPLANE AND A PESSIMIST A PARACHUTE’ ಅಂದರೆ ಓರ್ವ ಆಶಾವಾದಿ ವಿಮಾನವನ್ನು ಕಂಡು ಹಿಡಿದರೆ ಓರ್ವ ನಿರಾಶಾವಾದಿ ಕೂಡ ಕೊಡೆ ವಿಮಾನವನ್ನು ಕಂಡು ಹಿಡಿಯುತ್ತಾನೆ. ಅಂದರೆ ಜೀವ ಉಳಿಸುವ ಸಾಧನದ ಸಂಶೋಧಕ ಇಬ್ಬರೂ ಸಮಾಜಕ್ಕೆ ಬೇಕು ಎಂದಾಯಿತು. ಆದರೆ ನಿರಾಶಾವಾದಿಗಳನ್ನು ಈಗ ಸದ್ಯಕ್ಕೆ ಪಕ್ಕಕ್ಕಿಡೋಣ.

ಲಾವೋತ್ಸೆ ಎಂಬುವವನು ಹೇಳುತ್ತಾನೆ. ಕಂಬಳಿಹುಳು ತನ್ನ ಅಂತ್ಯ (ನಿರಾಶಾವಾದಿ) ಎಂದಾಗ ಪತಂಗವು ತನ್ನ ಆರಂಭ ಎನ್ನುತ್ತದೆ (ಆಶಾವಾದಿ) ಅಲ್ಲಿಗೆ ಪತಂಗವು ಆಶಾವಾದಿ. ಪ್ರಪಂಚದಲ್ಲಿ ಆಶಾವಾದಿಗಳ ಸಂಖ್ಯೆ ಅಪಾರ. ಬ್ರೆನ್‌ಜಾನ್‌ಸನ್, ವಾರನ್ ಬಫಟ್, ಬಿಲ್‌ಗೇಟ್ಸ್ ಅಂಬಾನಿ, ಟಾಟಾಸಮೂಹ, ಬಿರ್ಲಾ ಇವರೆಲ್ಲಾ ಆಶಾವಾದಿಗಳಾಗಿದ್ದರಿಂದಲೇ ಪ್ರಪಂಚದ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ರಾರಾಜಿಸುತ್ತಿದ್ದಾರೆ. ವಿಶ್ವವಿಖ್ಯಾತ APPLE ಕಂಪನಿಯ ಸಂಸ್ಥಾಪಕ ಸ್ಟೀವ್‌ ಜಾಬ್ ಓರ್ವ ಅನಾಥನಾಗಿ ಬೆಳೆದ ಬಡ ಬಾಲಕ. ಈ ದಿನ ವಿಶ್ವದ ಅತ್ಯಂತ ಶ್ರೀಮಂತರ ಪಟ್ಟಿ ಸೇರಿದ್ದಾನೆ. ಇವರೆಲ್ಲಾ ಪ್ರಚಂಡ ಆಶಾವಾದಿಗಳು. ಪ್ರಾರಂಭದಲ್ಲಿ ಸೋಲಿನ ರುಚಿ ಕಂಡರೂ ಛಲಬಿಡದ ತ್ರಿವಿಕ್ರಮನಂತೆ ಮುಂದೆ ಬಂದವರು. ಇನ್ನೂ ಆಶಾವಾದಿಗಳಿಗೆ ಶಬ್ಧಕೋಶದಲ್ಲಿ ಆತ್ಮಹತ್ಯೆ ಎಂಬ ಪದ ಹತ್ತಿರವೂ ನುಸುಳದು.

ಪ್ರಾಣಿ ಜಗತ್ತಿನಲ್ಲಿ ಈ ಆಶಾವಾದದ ಅರಿವು ನಿಜಕ್ಕೂ ಬೆರಗು ಮೂಡಿಸುವಂತಹುದು. ಇದಕ್ಕೆ ಕೆಲವು ಉದಾಹರಣೆಗಳನ್ನು ನೀಡಬಹುದು. ಜಪಾನ್‌ನಲ್ಲಿ ಮೀನು ಮುಖ್ಯವಾದ ಆಹಾರ. ಇದಕ್ಕಾಗಿ ಹಡಗಿನಲ್ಲಿ ಸಾವಿರರು ಮೀನುಗಳನ್ನು ಆಮದು ಮಾಡಿಕೊಳ್ಳುತ್ತಿದ್ದರು. ಆದರೆ ಹಡಗು ಹೊರಟಾಗ ಬದುಕಿದ್ದರೂ, ಜಪಾನ್ ತಲುಪುವುದರಲ್ಲಿ ಹಲವಾರು ಮೀನುಗಳು ಸಾಯುತ್ತಿದ್ದವು. ಇದರಿಂದ ಅಲ್ಲಿನ ಜನ ಸತ್ತ ಮೀನುಗಳನ್ನು ಅಷ್ಟಾಗಿ ಇಷ್ಟಪಡುತ್ತಿರಲಿಲ್ಲ. ಓರ್ವ ಬುದ್ಧವಂತ ಈ ಮೀನುಗಳು ಪ್ರಯಾಣದ ವೇಳೆ ತಟಸ್ಥವಾಗಿರುವುದೇ ಇದಕ್ಕೆ ಕಾರಣ ಎಂದು ಇದಕ್ಕೊಂದು ಉಪಾಯವನ್ನು ಕಂಡು ಹಿಡಿದ ಹಡಗಿನಲ್ಲಿ ಮೀನುಗಳಿರುವ ದೊಡ್ಡ ದೊಡ್ಡ ತೊಟ್ಟಿಗಳಿಗೆ ದೊಡ್ಡದಾದ ಭಕ್ಷಕ ಮೀನುಗಳನ್ನು ತಲಾ ಒಂದರಂತೆ ತೊಟ್ಟಿಗಳಿಗೆ ಹಾಕಿದ. ಈಗ ಉಳಿದ ಮೀನುಗಳು ಆಶಾವಾದಿಗಳು ಬದಕಲು ಸೆಣಸಾಡುತ್ತಿದ್ದವು. ಜಪಾನ್ ತಲುಪುವವರೆಗೂ ದೊಡ್ಡ ಮೀನಿನಿಂದ ರಕ್ಷಿಸಿಕೊಳ್ಳಲು ಓಡಾಡತೊಡಗಿದವು ಇದರಿಂದ. ಜಪಾನ್ ತಲುಪಿದ ಮೇಲೂ ಎಲ್ಲಾ ಮೀನುಗಳು ಜೀವಂತವಾಗಿದ್ದವು. ತಾಜಾ ಮೀನಿನ ಸಮಸ್ಯೆ ಈ ರೀತಿ ಬಗೆ ಹರಿಯಿತು. ಜಪಾನೀಯರೂ ತೃಪ್ತರಾದರು.

ಇನ್ನೂ ಜೇನು ನೊಣಗಳು ನಿಜವಾದ ಆಶಾವಾದಿಗಳು. ಇವುಗಳು ಜೇನು ಸಂಗ್ರಹಿಸಲು ಪಡುವ ಪಾಡು ಅಷ್ಟಿಷ್ಟಲ್ಲ. ಉದಾಹರಣೆಗೆ ಒಂದು ಜೇನು ನೊಣ ಒಂದು ಪೌಂಡ್ ಜೇನು ಸಂಗ್ರಹಿಸಲು ಸುಮಾರು 90,000 ಮೈಲುಗಳಿಷ್ಟು ಹಾರುತ್ತವೆ ಎಂದರೆ ಆಶಾವಾದದ ಪರಕಾಷ್ಟೆಯಲ್ಲವೇ?

‘Game Theory’ ಅಂದರೆ, ಆಟದ ವಿಚಾರ ಸರಣಿ ಎಂಬ ಗಣಿತದ ವಿಭಾಗ ಪ್ರಾಯಶಃ ಜಗತ್ತಿನ ಎಲ್ಲಾ ವಿಭಾಗಕ್ಕೂ ಅನ್ವಯಿಸುವಂಥಹ ಒಂದು ಅಧ್ಬುತವಾದ ಶೋಧನೆ. ಇದನ್ನ ಪ್ರಾಣಿ ಪ್ರಪಂಚದ ಆಶಾವಾದದ ಒಂದು ಸಂಕಲ್ಪ ಹಾಗೂ ಪ್ರಯತ್ನಕ್ಕೆ ಹೋಲಿಸಬಹುದು. ನಾವೆಲ್ಲಾ ಜಿಂಕೆಗಳು, ಕಾಡುಕೋಣ, ಆನೆಗಳು, ಪಕ್ಷಿಗಳು ಎಲ್ಲಾ ಗುಂಪಿನಲ್ಲಿ ವಲಸೆ ಹೋಗುವುದನ್ನು ಅಥವಾ ಆಹಾರದ ಅನ್ವೇಷಣೆಗೆ ಹೋಗುವುದನ್ನು ಗಮನಿಸಿರಬಹುದು. ಇವೆಕ್ಕೆಲ್ಲಾ ಭಕ್ಷಕ ಪ್ರಾಣಿಗಳ (PREDATORS) ಭಯ ಇದ್ದೇ ಇರುತ್ತದೆ. ಇವೆಲ್ಲಾ ಬದುಕಬೇಕೆಂಬ ಆಶಾವಾದಿಗಳು. ಗುಂಪಿನಲ್ಲಿದ್ದರೆ ಈ ಭಕ್ಷಕಗಳ ಭಯ ತೀರ ಕಡಿಮೆ. ಯಾರು ಅಂತ ಬಲಹೀನರೋ ಅವರು ಮಾತ್ರ ಬಲಿಯಾಗಿ ಉಳಿದವರು ಪಾರಾಗುತ್ತಾರೆ. ಅಂಥವರು ಗುಂಪಿನ ಮಧ್ಯೆ ಇದ್ದರೆ ಬದುಕುಳಿಯುವ ಸಾಧ್ಯತೆ ಇನ್ನೂ ಅಧಿಕ. ಆಶಾವಾದಿಗಳಿಗೆ ಈ ಪ್ರಾಣಿಗಳು ನಿಜವಾದ ಉದಾಹರಣೆ.

ಈ ಆಶಾವಾದಿಗಳ ಗುಂಪಿಗೆ ಉಗ್ರವಾದಿಗಳು ಸೇರುತ್ತಾರೆ ಎಂಬುದು ನಿಜಕ್ಕೂ ಅಘಾತಕಾರಿ ಸಂಗತಿ. ಉಗ್ರವಾದಿಗಳು ಬಹಳ ನಿರ್ದಿಷ್ಟ ಆಶಾವಾದಿಗಳು. ಸಂಘಟನೆ ಹೇಳಿದ ಒಂದು ದುಷ್ಕೃತ್ಯವನ್ನೇ ಗುರಿಯಾಗಿಸಿಕೊಂಡು ಅದನ್ನು ಸಾಧಿಸುವ ಒಂದು ಛಲ ಹಾಗೂ ಹಂಬಲ. ಹಲವು ಬಾರಿ ಅದು ನಿಷ್ಫಲವಾಗಿ ಜೀವ ಕಳೆದುಕೊಳ್ಳುತ್ತಾರೆ. ಈ ತರಹದ ಹಲವಾರು ಸಂಘಟನೆಗಳು ವಿಶ್ವದಾದ್ಯಂತ ಕ್ರಿಯಾಶೀಲವಾಗಿರುತ್ತದೆ ಎಂಬುದು ನಿಜಕ್ಕೂ ಆತಂಕಕಾರಿ ಬೆಳವಣಿಗೆ. ಇಂಥಹ ಕೆಟ್ಟ ಆಶಾವಾದಿ ಸಂಘಟನೆಗಳನ್ನು ಹತ್ತಿಕ್ಕಲು ಪ್ರಪಂಚದಾದ್ಯಂತ ಪ್ರಯತ್ನಗಳು ನಡೆಯುತ್ತಲೇ ಇದೆ.

ಸರಕಾರದಲ್ಲಿ ಆಶಾವಾದಿಗಳ ಸಂಸ್ಥೆಗಳಿಗೇನೋ ಕೊರತೆಯಿಲ್ಲ ಜಾರಿ ನಿರ್ದೇಶನಾಲಯ ಕೇಂದ್ರ ತನಿಖಾದಳ, ಎನ್.ಐ.ಎ. ಗುಪ್ತಚಾರ ವಿಭಾಗ ಪೊಲೀಸ್ ಇಲಾಖೆ, ಬೇಹುಗಾರಿಕೆ ವಿಭಾಗದಂತಹ ಸಂಸ್ಥೆಗಳು ಎಲ್ಲ ಪ್ರಚಂಡ ಆಶಾವಾದಿಗಳು. ಈಗಲ್ಲ ಇಂದು, ಇಂದಲ್ಲ ನಾಳೆ, ನಾಳೆಯಲ್ಲ ನಾಡಿದ್ದು, ಎಂಬ ಆಶಾವಾದದೊಂದಿಗೆ ತಮ್ಮ ಕಾರ್ಯಮುಂದುವರಿಸಿ ನೂರಕ್ಕೆ ನೂರರಷ್ಟು ಯಶಸ್ಸುಗಳಿಸುತ್ತದೆ. ಇವರು ಆಶಾವಾದಿ ಗುಣಕ್ಕೆ ಕೊಡಲಿ ಏಟು ಹಾಕದೆ ಪ್ರಯತ್ನಿಸುವುದರಿಂದಲೇ ಈ ಯಶಸ್ಸು.
ಆಶಾವಾದದ ಬಗ್ಗೆ ಒಂದೆರಡು ಉದಾಹರಣೆಗಳನ್ನು ನೀಡಬಹುದು. ಓರ್ವ ಕಟ್ಟಿಗೆ ಡಿಪೋ ಇಟ್ಟಿದ್ದನಂತೆ. ಅದಕ್ಕೆ ಒಮ್ಮೆ ಬೆಂಕಿ ಬಿದ್ದು ಸುಟ್ಟು ಕರಕಲಾಯಿತು. ಡಿಪೋ ಮಾಲಿಕ ತಲೆ ಕೆಡಿಸಿಕೊಳ್ಳಲಿಲ್ಲ. ಇಲ್ಲಿ ಉತ್ತಮ ಇದ್ದಿಲು ಸಿಗುತ್ತದೆ ಎಂಬ ಫಲಕ ಹಾಕಿದನಂತೆ ವ್ಯಾಪಾರ ಎಂದಿಗಿಂತ ಉತ್ತಮವಾಗಿ ಮುಂದುವರಿಯುತಂತೆ. ಇದಲ್ಲವೇ ಆಶಾವಾದಿಯ ನಿಜವಾದ ಮುಖ?ಕೆಲವು ವರ್ಷದ ಹಿಂದೆ ಬ್ರಿಟನ್‌ ನ ವೇಲ್ಸ್‌ನಲ್ಲಿ ಒಂದು ಅತೀ ಎತ್ತರದ ಮರ ಸಿಡಿಲು ಬಡಿದು ಸುಟ್ಟು ಹೋಯಿತು. ಇದನ್ನು ಕಡಿದು ಹಾಕಬಹುದಿತ್ತು. ಆದರೆ ಸೈಮನ್ ರೌರ್ಕಿ ಎಂಬ ಕಾಷ್ಠ ಕಲಾವಿದ ಅದನ್ನು ನೋಡಿದ ಅದನ್ನು ತನಗೆ ನೀಡುವಂತೆ ವಿನಂತಿಸಿ ಅದರಲ್ಲಿ ಅಷ್ಟೇ ಎತ್ತರದ ಒಂದು ಕೈಯನ್ನು ಅದ್ಭುತವಾಗಿ ಕೆತ್ತಿದ. ತನ್ನ ನೈಪುಣ್ಯವನ್ನು ಮೆರೆದ. ಇಂದು ಈ ಮರ ಒಂದು ಸುಂದರ ಕಲಾ ಸ್ಮಾರಕವಾಗಿ, ಪ್ರೇಕ್ಷಣೀಯ ಸ್ಥಳವಾಗಿ ಮಾರ್ಪಟ್ಟಿದೆ. ನಮ್ಮ ಬದುಕೂ ಅಷ್ಟೇ, ಪ್ರತಿ ಸೋಲು, ಹಿನ್ನಡೆಯನ್ನೂ ನಮ್ಮ ಪರವಾಗಿ ಪರಿವರ್ತಿಸಿಕೊಳ್ಳಲು ಸಾಧ್ಯ ಅದಕ್ಕೆ ಸೈಮನ್ ರೌರ್ಕಿಯ ಕಲಾಕೃತಿಯೇ ಸಾಕ್ಷಿ.

ಈ ಲೇಖನವನ್ನು ಮುಗಿಸುವ ಮೊದಲು ಓರ್ವ ಆಶಾವಾದಿ ಯೋಗಿಯ ಬಗ್ಗೆ ಹೇಳಿದರೆ ಸಾರ್ಥಕ ಎನಿಸುತ್ತದೆ. ಓರ್ವಯೋಗಿ ಒಂದು ಎತ್ತರದ ಗುಡ್ಡದ ಮೇಲೆ ವಾಸಿಸುತ್ತಿದ್ದರು. ಗುಡ್ಡದ ಕೆಳಗಿನ ಗ್ರಾಮಸ್ಥರು ನೀಡುವ ಫಲ, ಹಾಲು ಸೇವಿಸಿ, ಧ್ಯಾನ ಹಾಗೂ ಪ್ರಾರ್ಥನೆಯಲ್ಲಿ ಮಗ್ನರಾಗಿರುತ್ತಿದ್ದರು. ಇವರು ಜನರ ಭವಿಷ್ಯವನ್ನು ನಿಖರವಾಗಿ ಹೇಳುವ ಸಾಮರ್ಥ್ಯದವರಾಗಿದ್ದರು. ಇದರಿಂದ ಅವರ ಗುಡ್ಡಕ್ಕೆ ಪ್ರತಿನಿತ್ಯ ನೂರಾರು ಗ್ರಾಮಸ್ಥರು ಗುಡ್ಡದ ಕೆಳಗಿನಿಂದ ಮೇಲಿನವರೆಗೂ ಸಾಲಿನಲ್ಲಿ ನಿಂತು, ಭವಿಷ್ಯ ಕೇಳಿ ಅವರಿಗೆ ಫಲ ನೀಡಿ ವಾಪಸ್ಸಾಗುತ್ತಿದ್ದರು. ಒಮ್ಮೆ ಓರ್ವ ಎಂಟು ವರ್ಷದ ಬಾಲಕ ಆಶ್ಚರ್ಯದಿಂದ ಯೋಗಿ ಹೇಗೆ ಭವಿಷ್ಯ ಹೇಳುತ್ತಾರೆ ಎಂಬುದನ್ನು ಪರೀಕ್ಷಿಸಲು ಮುಂದಾದ ಅವನು ಒಂದು ಸಣ್ಣ ಗುಬ್ಬಚ್ಚಿ ಮರಿಯನ್ನು ಕೈಯಲ್ಲಿ ಹಿಡಿದು ಸರತಿಯಲ್ಲಿ ಹಲವು ಗಂಟೆಗಳ ಕಾಲ ನಿಂತ ಬಳಿಕ ಅವನ ಸರತಿ ಯೋಗಿಯ ಬಳಿಗೆ ಬಂತು. ಯೋಗಿಯ ಮುಖ ನೋಡಿ ಬಾಲಕ ಕೇಳಿದ ‘ನನ್ನ ಕೈಯಲ್ಲಿ ಏನಿದೆ?’ಎಂದು. ಯೋಗಿ ಉತ್ತರಿಸಿದರು, ಒಂದು ಸಣ್ಣ ಗುಬ್ಬಚ್ಚಿ ಮರಿ ಇದೆ ಎಂದು. ಬಾಲಕನಿಗೆ ಆಶ್ಚರ್ಯ! ಆದರೂ ಅವನು ಯೋಗಿಗೆ ‘ಈ ಗುಬ್ಬಚ್ಚಿ ಬದುಕಿದೆಯೋ? ಅಥವಾ ಸತ್ತಿದ್ದೆಯೋ ಹೇಳಬಹುದೇ? ಎಂದ. ಬಾಲಕನ ಮನಸ್ಸಿನಲ್ಲಿ ಬದುಕಿದೆ ಎಂದರೆ ಅದನ್ನು ಹಿಚುಕಿ ಸಾಯಿಸಿ ತೋರಿಸುತ್ತೇನೆ. ಸತ್ತಿದೆ ಎಂದರೆ ಹಾಗೇ ತೋರಿಸುತ್ತೇನೆ. ಹೇಗಾದರೂ ಯೋಗಿ ಸೋಲುತ್ತಾರೆ ಎಂಬ ಆಶಾವಾದಿ. ಇದನ್ನು ಮನಗಂಡ ಯೋಗಿಗಳು ಬಾಲಕನಿಗೆ ನಸುನಗುತ್ತ ಆ ಗುಬ್ಬಚ್ಚಿಮರಿಯ ಭವಿಷ್ಯ ನಿನ್ನ ಕೈಲಿದೆ ಎಂದರು. ದಿಗ್ಭ್ರಮೆಗೊಂಡ ಬಾಲಕ ಯೋಗಿಯ ಕಾಲಿಗೆ ಎರಗಿ ಗುಬ್ಬಚ್ಚಿಯನ್ನು ಆಕಾಶಕ್ಕೆ ಬಿಟ್ಟ. ಇಲ್ಲಿ ಯೋಗಿಯ ಆಶಾವಾದವೇ ಗೆದ್ದಿತು ಅಲ್ಲವೇ?

ಒಟ್ಟಿನಲ್ಲಿ ಎಲ್ಲರೂ ಆಶಾವಾದಿಗಳಾದರೆ ಜಗತ್ತು ನಿಜಕ್ಕೂ ಅಭಿವೃದ್ಧಿಯಡೆಗೆ ಸಾಗುವುದರಲ್ಲಿ ಯಾವ ಸಂಶಯವೂ ಇಲ್ಲ ನೀವೇನಂತೀರಿ?

ಕೆ.ರಮೇಶ್, ಮೈಸೂರು

8 Responses

 1. Hema says:

  ಚೆಂದದ ಬರಹ..

 2. ಈ ಜಗತ್ತಿನಲ್ಲಿ ಬದುಕಲು ಬೇಕೇ ಬೇಕು ಆಶಾವಾದ
  ಹಲವು ಬಾರಿ ಕಗ್ಗತ್ತಲ ನಿರಾಶಾವಾದದಲ್ಲಿ ಮುಳುಗಿಹೋದ ಜನರಿಗೆ ಈ ಲೇಖನ ಆಶಾವಾದ ದೀಪವನ್ನು ಬೆಳಗುವುದರಲ್ಲಿ ಸಂದೇಹವೇ ಇಲ್ಲ ವಂದನೆಗಳು

 3. ಚಂದದ ಲೇಖನ ಸಾರ್…

 4. ನಯನ ಬಜಕೂಡ್ಲು says:

  ಚೆನ್ನಾಗಿದೆ ಲೇಖನ

 5. ಶಂಕರಿ ಶರ್ಮ says:

  ಜೀವಿಸಲು ಮುಖ್ಯವಾಗಿ ಬೇಕಾದ ಆಶಾವಾದದ ಅಗತ್ಯತೆಯ ಕುರಿತ ಸೊಗಸಾದ ಲೇಖನ.

 6. Padma Anand says:

  ಆಶಾವಾದ ಕುರಿತಾದ ಆಶಾವಾದದ ಲೇಖನ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: