ಅವಿಸ್ಮರಣೀಯ ಅಮೆರಿಕ – ಎಳೆ 74

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು…)
ಚಲಿಸುವ ಮನೆಯ ಒಳಹೊಕ್ಕು…

ಮಧ್ಯರಾತ್ರಿಯ ನಿದ್ದೆಯ ಅಮಲಿನಲ್ಲಿದ್ದ ನಮಗೆ ಅಲ್ಲಿಯ ಸುಂದರ ಸಂಜೆಯ ಬೆಳಕನ್ನು ಆಸ್ವಾದಿಸುವುದಾದರೂ ಹೇಗೆ ಸಾಧ್ಯ ಅಲ್ಲವೇ? ಇದೇ ಸಮಯಕ್ಕೆ ಸರಿಯಾಗಿ ನಮ್ಮ ಅತ್ಮೀಯ ಗೆಳೆಯರ ಬಳಗದ ಇತರ ಆರು ಕುಟುಂಬದವರೂ ಆಂಕರೇಜ್ ಗೆ ಬಂದಿಳಿದು ನಮ್ಮ ಜೊತೆಗೂಡಿದರು. ಎಲ್ಲರೂ ಅಲ್ಲಿಯ R.V. ತಂಗುದಾಣದ ಆಫೀಸಿನಲ್ಲಿ ಭೇಟಿಯಾದೆವು. ತಂಗುದಾಣದಲ್ಲಿ ಸಾಲು ಸಾಲಾಗಿ ನಿಂತಿದ್ದ ನೂರಾರು R.V.ಗಳನ್ನು ಕಂಡಾಗ ಮೋಜೆನಿಸಿತು. ಅಂತರ್ಜಾಲದ ಮೂಲಕ ಮೊದಲೇ ಕಾದಿರಿಸಿದ್ದ ವಾಹನಗಳನ್ನು ನಮಗೆ ತಕ್ಷಣ ಹಸ್ತಾಂತರಿಸಿದರು. ಅದರೊಳಗೆ ಪ್ರವೇಶಿಸುತ್ತಿದ್ದಂತೆ ಆಶ್ಚರ್ಯ..ಆನಂದ ಎರಡೂ ಆಗಿದ್ದಂತೂ ನಿಜ. ಪುಟ್ಟ ಮನೆಯೊಂದರ ಒಳಗೆ ಹೊಕ್ಕಂತೆ ಭಾಸವಾಯಿತು. ಸಂತೋಷ, ಬೆರಗು ನಮ್ಮನ್ನಾವರಿಸಿತು! 

ಅಲಾಸ್ಕಾ ಎಂಬ ಈ ಹಿಮನಗರಿಯಲ್ಲಿ ನಮ್ಮ ಸುತ್ತಾಟ ನಡೆದುದು R V (Recreational Vehicle ) ಎಂಬ ಇದೇ  ಕನಸಿನ ಮನೆಯಲ್ಲಿ.   “ಅಮ್ಮಾ, ಟೀ ರೆಡಿಯಾಯ್ತಾ?” ಮಗಳ ಪ್ರಶ್ನೆ. “ಅಜ್ಜೀ, ನನಗೂ ತಮ್ಮಂಗೂ ಫ್ರಿಜ್ಜಿಂದ Icecream ತೆಗೆದು ಕೊಡ್ತೀಯಾ?” ಮೊಮ್ಮಗಳ ನಿವೇದನೆ. ” ಸ್ನಾನಕ್ಕೆ ಹೋಗ್ತೀನಿ , ಬೇಗ ರೆಡಿ ಆಗ್ಬೇಕು “, ಅಳಿಯನಿಗೆ ಹೊರಡುವ ತುರಾತುರಿ. ಏನಿದೆಲ್ಲ? ಮನೆಯೊಳಗಿನ ಪ್ರಾಸಂಗಿಕ ಮಾತುಕತೆಗಳನ್ನು ಇಲ್ಲಿ ಯಾಕೆ ಹೇಳ್ತಾ ಇದ್ದೇನೆ ಅಂದ್ಕೊಂಡ್ರಾ? ಇಲ್ಲಪ್ಪ… ಇವೆಲ್ಲ ಮನೆಯೊಳಗಿನ ಮಾತುಗಳಲ್ಲ. 70-80 ಕಿ.ಮೀ ವೇಗದಲ್ಲಿ ಓಡುತ್ತಿರುವ ನಮ್ಮ R V ಒಳಗಡೆ ನಡೆದ ಮಾತುಕತೆ! ಆಶ್ಚರ್ಯವಾಗ್ತಾ ಇದೆಯಾ? ಹೌದು! ಇದೊಂದು ಕಲ್ಪನಾತೀತ, ಅದ್ಭುತ ವಾಹನ. ಇಡೀ ಮನೆಯೇ ರಸ್ತೆ ಮೇಲೆ ವೇಗವಾಗಿ ಸಂಚರಿಸುವುದೆಂದರೆ ಅದೇನು ಸಾಮಾನ್ಯ ವಿಷಯವೇ? ಇದರ ಬಗ್ಗೆ ಪೂರ್ತಿ ವಿವರಗಳನ್ನು ತಿಳಿದರೆ ನೀವು ಬೆರಗಾಗದಿರಲು ಸಾಧ್ಯವೇ ಇಲ್ಲ! ಅದನ್ನು ಮುಂದೆ ನೋಡೋಣ….    

ಇನ್ನೂ ಸೂರ್ಯನ ಬೆಳಕಿದ್ದರೂ ಸಮಯ ಅದಾಗಲೇ ಮಧ್ಯರಾತ್ರಿ. ಎಲ್ಲರೂ ಮಲಗಿ ಮುಂಜಾನೆ ಎದ್ದು ಹೊರಡುವ ತಯಾರಿ ಆಗಬೇಕಾದ್ದರಿಂದ, ಬೇಗನೇ ಎಲ್ಲರೂ ಮಲಗುವ ಪ್ರಯತ್ನ ಮಾಡಿದೆವು. ಮರುದಿನ ಬೆಳ್ಳಂಬೆಳಗ್ಗೆ ಹೊರಡುವ ಮೊದಲು ವಾಹನದ ಮಾಲಕರು ಬಹು ಮುಖ್ಯವಾದ ಕಾರ್ಯಕ್ರಮವೊಂದನ್ನು ಆಯೋಜಿಸಿದ್ದರು. ಅಮೆರಿಕದಲ್ಲಿ ನಮ್ಮಲ್ಲಿರುವಂತೆ ಬಾಡಿಗೆ ವಾಹನವು ಅದರ ಚಾಲಕನ ಸಹಿತ ಬರುವುದಿಲ್ಲ. ಇಲ್ಲಿ ಬಾಡಿಗೆಗೆ ವಾಹನವನ್ನು ಮಾತ್ರ ಪಡೆಯಬಹುದು. ಅದರ ಚಾಲನೆಯನ್ನು ನಾವೇ ಮಾಡಬೇಕಾಗುತ್ತದೆ. ಆದ್ದರಿಂದ ನಮ್ಮ ತಂಡಗಳ ಪ್ರತಿಯೊಬ್ಬ ವಾಹನ ಚಾಲಕನಿಗೆ, ಆ ವಾಹನದ ಚಾಲನೆಗೆ ಅಗತ್ಯವಾದ ಮಾಹಿತಿಗಳನ್ನು ಸುಮಾರು ಎರಡು ಗಂಟೆಗಳ ಕಾಲ, ಅತ್ಯುತ್ತಮ ರೀತಿಯಲ್ಲಿ ಮನವರಿಕೆ ಮಾಡಲಾಯಿತು(Orientation). ಇದರ ಆಕಾರವು ಸಾಮಾನ್ಯ ಬಸ್ಸಿಗಿಂತ ದೊಡ್ಡದಿರುವುದರಿಂದ, ಚಾಲನೆ ಅಷ್ಟು ಸುಲಭವಲ್ಲ. ಅದರ ಬಗ್ಗೆ, ಅದರ ಕಾರ್ಯ ನಿರ್ವಹಣೆ, ಒಳಗಿನ ಸವಲತ್ತುಗಳ ಬಳಕೆ, ಇತ್ಯಾದಿಗಳ ಕುರಿತು ಕೂಲಂಕುಷ ಮಾಹಿತಿಗಳನ್ನು ಈ ಕಾರ್ಯಾಗಾರದಲ್ಲಿ ನೀಡಲಾಯಿತು.

ನಾವು ಬಳಸಿದ  ಮನೆಯು, 8 ಮಂದಿಯ ಬಳಕೆಗೆ ಯೋಗ್ಯವಾಗಿತ್ತು.  ಅದರೊಳಗಿನ ವ್ಯವಸ್ಥೆ ನೋಡಿ ದಂಗಾಗಿ ಬಿಟ್ಟೆವು. ಸುಮಾರು 250 ಚ.ಅಡಿಗಳಷ್ಟು ಸ್ಥಳಾವಕಾಶದಲ್ಲಿ, ಸಾಮಾನ್ಯ ಕುಟುಂಬವೊಂದರ ಅಗತ್ಯತೆಗಳನ್ನೆಲ್ಲಾ ಪೂರೈಸಿದ್ದರು. ವಾಹನದ ಮೆಟ್ಟಲೇರಿ ಒಳ ಹೋಗುತ್ತಿದ್ದಂತೆಯೇ ಮುಂಭಾಗದಲ್ಲಿ ಅಡುಗೆಗಾಗಿ ಮೂರು ಒಲೆಗಳಿರುವ ಗ್ಯಾಸ್ ಸ್ಟವ್, ಅದರ ಕೆಳಭಾಗದಲ್ಲಿರುವ ಡ್ರಾಯರ್ ನಲ್ಲಿ ಅಡುಗೆಗೆ ಮತ್ತು ಊಟಕ್ಕೆ ಅಗತ್ಯವಿರುವ ಸಣ್ಣ, ದೊಡ್ಡ ಪಾತ್ರೆ ಪಗಡಿಗಳು, ಪ್ಲೇಟ್, ಬಟ್ಟಲುಗಳು, ಸೌಟು, ಚೂರಿಗಳು ಫಳಫಳನೆ ಹೊಳೆಯುತ್ತಾ ಸಿದ್ಧವಾಗಿ ಕುಳಿತಿವೆ. ಜೊತೆಗೆ, ಒಲೆಯ ಮೇಲ್ಭಾಗ… ಎತ್ತರದಲ್ಲಿ, ಮೈಕ್ರೋವೇವ್ ಒಲೆ ಇದೆ. ಅಡುಗೆ ಒಲೆಯ ಎಡಭಾಗದಲ್ಲಿರುವ ವಾಶ್ ಬೇಸಿನ್ ನಲ್ಲಿ, ಬಳಕೆಗೆ ಯೋಗ್ಯವಾದ ನೀರು ಮತ್ತು ಕುಡಿಯುವ ಶುದ್ಧ ನೀರು ಬರುವಂತಹ ನೀರಿನ ನಲ್ಲಿಯಿದೆ. ಇದರ ಮುಂಭಾಗದಲ್ಲಿ, ಅಂದರೆ, ವಾಹನದೊಳಗೆ ನಡೆದಾಡಲು ಇರುವ ಜಾಗದ ವಾಹನದ ಇನ್ನೊಂದು ಪಕ್ಕಕ್ಕಿದೆ.. ಶಿಸ್ತಿನಿಂದ ನಿಂತಿರುವ ಫ್ರಿಜ್. ಒಲೆಯ ಬಲ ಪಕ್ಕಕ್ಕಿದೆ; ಮೂವರು ಆರಾಮವಾಗಿ ಕುಳಿತುಕೊಳ್ಳಬಹುದಾದಂತಹ ಮೆತ್ತನೆಯ ಸೋಫಾ ಹಾಗೂ ನಾಲ್ಕು ಮಂದಿ ಒಟ್ಟಿಗೆ ಬಳಸಬಹುದಾದಂತಹ ಎದುರು ಬದುರು ಸೀಟುಗಳ ಊಟದ ಮೇಜು. ಜೊತೆಗೆ ಪ್ರಯಾಣಿಕರ ಸುರಕ್ಷತೆಗಾಗಿ  ಎಲ್ಲಾ ಆಸನಗಳಲ್ಲೂ ಸೀಟ್ ಬೆಲ್ಟ್ ಗಳಿವೆ. ಮಲಗುವ ವೇಳೆಗೆ ಸೋಫಾ ಮತ್ತು ಊಟದ ಮೇಜುಗಳನ್ನು ಇಬ್ಬರು ಮಲಗುವ ಹಾಸಿಗೆಯಂತೆ ಪರಿವರ್ತಿಸಿಕೊಳ್ಳುವ ವ್ಯವಸ್ಥೆಯಿದೆ. ವಾಹನದ ಚಾಲಕನ ಸೀಟಿನ ಮೇಲ್ಭಾಗದಲ್ಲಿ ಮತ್ತು ಫ್ರಿಜ್ಜಿನ ಇನ್ನೊಂದು ಪಕ್ಕದಲ್ಲಿ ಪ್ಯತ್ಯೇಕವಾಗಿ ಇಬ್ಬರು ಮಲಗಬಹುದಾದ ಹಾಸಿಗೆಗಳಿವೆ. ಇವುಗಳು ಮಾತ್ರವಲ್ಲದೆ, ಚಳಿಗಾಗಿ ಬೆಚ್ಚನೆಯ ರಗ್ಗುಗಳು, ಸ್ವಚ್ಛ, ಶುಭ್ರ ಹಾಸು ಹೊದಿಕೆಗಳೊಂದಿಗೆ  ವಾರಕ್ಕೆ ಬೇಕಾಗುವಷ್ಟು ಸ್ನಾನದ ಹಾಗೂ ಕಿಚನ್ ಟವೆಲ್ ಗಳು ಅಲ್ಲಿರುವ ಕಪಾಟಲ್ಲಿ ಭದ್ರವಾಗಿವೆ. ಕಿಟಿಕಿ ಬಾಗಿಲುಗಳಿಗೆ ಸೊಳ್ಳೆ ಪರದೆ, ಕರ್ಟನ್ ಗಳಿವೆ. ಪ್ರತ್ಯೇಕವಾದ ಶೌಚಾಲಯ ಜೊತೆ, ಬಿಸಿನೀರಿನ ವ್ಯವಸ್ಥೆ ಇರುವ ಸ್ನಾನದ ಕೋಣೆಯಿದೆ. ಎರಡು ಕಡೆಗಳಲ್ಲಿ ಟಿ.ವಿ. ಮತ್ತೊಂದು ಕಡೆಗೆ ಡಿ.ವಿ.ಡಿ ಪ್ಲೇಯರ್. ಉಳಿದಂತೆ ಇರುವ ಜಾಗಗಳಲ್ಲಿ ಆನುಕೂಲಕರವಾದ ಕಪಾಟು, ಕ್ಲೋಸೆಟ್ ಗಳು, ಇಡೀ ವಾಹನಕ್ಕೆ ಎ.ಸಿ ವ್ಯವಸ್ಥೆ… ಒಂದು ಮನೆಯಂತಾಗಲು ಇಷ್ಟು ಸಾಕಲ್ಲವೇ? 

ಇವುಗಳೆಲ್ಲದರ ಜೊತೆಗೆ ಕೆಲವು ವಿಶೇಷವಾದ ಪೂರಕ ವ್ಯವಸ್ಥೆಗಳೂ ಇವೆ. ಮನೆಗಳು ಸಮತಲವಾಗಿರುವಂತೆ ರಚಿಸುವುದು ಎಲ್ಲರಿಗೂ ಗೊತ್ತು. ವಾಹನವನ್ನು ದೀರ್ಘ ಸಮಯ ನಿಲ್ಲಿಸುವಾಗ ಕೂಡಾ ಇದೇ ವ್ಯವಸ್ಥೆಗೆ ಬದ್ಧವಾಗಿರುವಂತೆ ಅದರ ಮಧ್ಯ ಭಾಗದಲ್ಲಿಯೇ ಇದೆ ಸ್ಪಿರಿಟ್ ಲೆವೆಲ್. ಪುಟ್ಟ ಗಾಜಿನ ಗೋಳದ ಮಧ್ಯದಲ್ಲಿರುವ ಕಪ್ಪುಚುಕ್ಕೆಯು, ಅದರೊಳಗಿರುವ ಗುಳ್ಳೆಯ ಮಧ್ಯ ಭಾಗಕ್ಕೆ ಬರುವಂತೆ, ಅದಕ್ಕನುಗುಣವಾಗಿ ವಾಹನವನ್ನು ನಿಲ್ಲಿಸಮಾಡಬೇಕಾಗುತ್ತದೆ. ಅದಕ್ಕಾಗಿ, ಅಗತ್ಯವಿದ್ದರೆ ಚಕ್ರಗಳನ್ನು ಎತ್ತರಿಸಲು ಅಗತ್ಯವಾದ ಮರದ ದಿಮ್ಮಿಯ ತುಂಡುಗಳೂ ಡಿಕ್ಕಿಯಲ್ಲಿರುತ್ತವೆ! ಮೈಕ್ರೋವೇವ್ ಒಲೆಯನ್ನು ಮತ್ತು ಎ.ಸಿ.ಯನ್ನು ಬಳಸಲು ಜನರೇಟರ್ ಹಾಗೂ  ಸ್ನಾನದ ಬಿಸಿನೀರಿಗಾಗಿ ಹೀಟರ್ ನ ವ್ಯವಸ್ಥೆಯಿದೆ. ವಾಹನದ ಒಳಗಡೆ ಅಡುಗೆ ಸಮಯದಲ್ಲಿ ಅಥವಾ ಇನ್ನಿತರ ಕಾರಣಗಳಿಂದ ಹೆಚ್ಚು ಹೊಗೆ ಉತ್ಪತ್ತಿಯಾದರೆ ಎಚ್ಚರಿಸಲು ಸಂವೇದಕ(Senser) ಮತ್ತು ಸೈರನ್ ವ್ಯವಸ್ಥೆಯಿದೆ. ಬಳಕೆಗಾಗಿರುವ ಮತ್ತು ಶುದ್ಧ ಕುಡಿಯುವ ನೀರುಗಳ ಟ್ಯಾಂಕ್ ಗಳನ್ನು ಖಾಲಿಯಾದಂತೆ ತುಂಬಿಸಿಕೊಳ್ಳಲು ಮತ್ತು ಉಪಯೋಗಿಸಿ ಕಲುಷಿತಗೊಂಡ ನೀರಿನ ಟ್ಯಾಂಕ್ ನ್ನು ಖಾಲಿ ಮಾಡಲು ಅನೇಕ ಕಡೆಗಳಲ್ಲಿ refilling ಮತ್ತು dumping station ಗಳಿವೆ. RV ಗಳಿಗಾಗಿಯೇ ಇರುವ ನಿಲುಗಡೆ ಜಾಗಗಳಲ್ಲಿ ಇವುಗಳು ಉಚಿತವಾಗಿವೆ. ಆದರೆ, ಉಳಿದ ಕಡೆಗಳಲ್ಲಿ ಶುಲ್ಕ ನೀಡಬೇಕಾಗುವುದು.

(ಮುಂದುವರಿಯುವುದು…..)

ಈ ಪ್ರವಾಸಕಥನದ ಹಿಂದಿನ ಎಳೆ ಇಲ್ಲಿದೆ:    https://www.surahonne.com/?p=39111

-ಶಂಕರಿ ಶರ್ಮ, ಪುತ್ತೂರು  

6 Responses

 1. ಪ್ರವಾಸ ಕಥನ ಓದಿಸಿ ಕೊಂಡು ಹೋಯಿತು ಹಾಗೇ ನೀವು ನೀಡಿರುವ ಹೊಸ ಅನುಭವ ನನಗೆ..ಮುದತಂದಿತು..ಏಕೆಂದರೆ ನಾನಂತೂ ಅಲ್ಲಿಗೆ ಹೋಗುವ ಅವಕಾಶ …ಬಹುಶಃ ಬರಲಾರದು..ಹೀಗಾಗಿ ಓದಿ ಹಾಕಿರುವ ಚಿತ್ರ ನೋಡಿ…ತಿಳಿದುಕೊಂಡೆ..ಮೇಡಂ

  • ಶಂಕರಿ ಶರ್ಮ says:

   ಮೆಚ್ಚುಗೆಯ ಪ್ರತಿಕ್ರಿಯೆಗೆ ಧನ್ಯವಾದಗಳು….ನಾಗರತ್ನ ಮೇಡಂ.

 2. ನಯನ ಬಜಕೂಡ್ಲು says:

  ಹೊಸ ಹೊಸ ವಿಚಾರಗಳು ಮನಸಿಗೆ ಮುದ ನೀಡುತ್ತವೆ

 3. Padma Anand says:

  ಸೌಲಭ್ಯಗಳ ಆಗರವನ್ನು ಕಣ್ಣಿಗೆ ಕಡ್ಟುವಂತೆ, ಅಲ್ಲಲ್ಲ, ಮನಸ್ಸಿಗೆ ನಾಟುವಂತೆ ವರ್ಣಿಸಿರುವ ಪರಿ ಅಭಿನಂದನೀಯ.

  • ಶಂಕರಿ ಶರ್ಮ says:

   ಮೆಚ್ಚುಗೆಯ ಪ್ರತಿಕ್ರಿಯೆಗೆ ಧನ್ಯವಾದಗಳು….ಪದ್ಮಾ ಮೇಡಂ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: