ಯಾರಿವರು ಅನಾಮಿಕರು

Share Button


ಯಾರಿವರು, ಸದ್ದಿಲ್ಲದೆ ನಮ್ಮ ಬದುಕನ್ನು ಹಸನಾಗಿಸುತ್ತಿರುವ ಮಹಾನ್ ವ್ಯಕ್ತಿಗಳು, ಎಲೆ ಮರೆಯ ಕಾಯಿಗಳಂತೆ ಅಗತ್ಯವಿದ್ದವರಿಗೆ ತಮ್ಮ ನೆರವಿನ ಹಸ್ತ ಚಾಚುತ್ತಿರುವರು? ಇವರ ಸಮಾಜಸೇವೆಯ ಬಗ್ಗೆ ವರದಿಗಳಾಗಲಿ, ಫೋಟೋಗಳಾಗಲಿ ದಿನಪತ್ರಿಕೆಗಳಲ್ಲಿ ಪ್ರಕಟಣೆಯಾಗಿಲ್ಲ, ಇವರ ಬಗ್ಗೆ ನಿಮಗೆ ತಿಳಿದಿರಲು ಸಾಧ್ಯವೇ ಇಲ್ಲ. ಬನ್ನಿ, ಇವರ ಪರಿಚಯ ಮಾಡಿಕೊಳ್ಳೋಣ – ಮುಂಜಾನೆ ನನ್ನ ಜೊತೆ ಬರಲು ಸಿದ್ಧವಾಗಿರಿ.

ನಿತ್ಯ ಮುಂಜಾನೆ ಐದು ಗಂಟೆಗೇ ಎದ್ದು, ಸ್ವಲ್ಪ ಹೊತ್ತು ವಾಕ್ ಮಾಡಿ, ಯೋಗಾಭ್ಯಾಸ ಮಾಡಲು ಶ್ರೀ ಶಿವಗಂಗಾ ಯೋಗಕೇಂದಕ್ಕೆ ಹೋಗುವುದು ನನ್ನ ದಿನಚರಿಯ ಅವಿಭಾಜ್ಯ ಅಂಗ. ದಾರಿಯಲ್ಲಿ ಕೆಲವು ಮಹಿಳೆಯರು ಆಗಲೇ ತಮ್ಮ ಅಂಗಳದ ಕಸ ಗುಡಿಸಿ, ನೀರು ಹಾಕಿ ರಂಗೋಲಿ ಬಿಡಿಸುತ್ತಿರುವರು. ಹಬ್ಬದ ದಿನಗಳಲ್ಲಿ ಈ ಬಣ್ಣ ಬಣ್ಣದ ರಂಗೋಲಿಗಳನ್ನು ನೋಡುವುದು ಕಣ್ಣಿಗೊಂದು ಹಬ್ಬ. ಅರೆ ಇಡೀ ಬೀದಿಯ ಕಸವನ್ನು ಗುಡಿಸುತ್ತಿರುವ ಈ ಮಹಾನುಭಾವ ಯಾರು ಗೊತ್ತೆ? ಇವರೇ ನಮ್ಮ ಪಕ್ಕದ ಮನೆಯಲ್ಲ್ಲಿ ವಾಸವಾಗಿರುವ ರಾಮಕೃಷ್ಣಪ್ಪನವರು. ಕೆ.ಇ.ಬಿ.ಯ ನಿವೃತ್ತ ಉದ್ಯೋಗಿ. ಪ್ರತಿನಿತ್ಯ ಇಡೀ ಬೀದಿಯನ್ನು ಗುಡಿಸಿ, ಕಸವನ್ನು ಎತ್ತಿ ಹಾಕುವರು, ಕೆಲವರು ತಮ್ಮ ಮನೆಯ ಅಂಗಳದ ಕಸ ಗುಡಿಸಿ ಬೀದಿಗೆ ತಳ್ಳುವರು, ಆ ಕಸವನ್ನೆಲ್ಲಾ ಶೇಖರಿಸಿ ಕಸದ ತೊಟ್ಟಿಗೆ ಹಾಕುವರು ನಮ್ಮ ಹೀರೋ. ಬೀದಿಯ ತುಂಬಾ ಪ್ಲಾಸ್ಟಿಕ್ ಚೀಲಗಳು ಹಾರುತ್ತಿದ್ದರೆ, ರಾಮಕೃಷ್ಣಪ್ಪನವರು ಊರಿನಲ್ಲಿಲ್ಲ ಎಂದು ಎಲ್ಲರಿಗೂ ಗೊತ್ತು. ಬಹುಶಃ, ಇವರನ್ನು ನೋಡಿಯೇ ಮೋದೀಜಿಯವರು, ‘ಸ್ವಚ್ಛ ಭಾರತ್ ಅಭಿಯಾನ್’ ಜಾರಿಗೆ ತಂದರೇನೋ. ಈ ಕರ್ಮಯೋಗಿಗೆ ಮನಸ್ಸಿನಲ್ಲಿಯೇ ವಂದಿಸಿ ಯೋಗಕೇಂದ್ರಕ್ಕೆ ತೆರಳಿದೆ.

ಶ್ರೀ ಶಿವಗಂಗಾ ಯೋಗಕೇಂದ್ರದ ಕೆಲವು ವಿಶೇಷತೆಗಳನ್ನು ನೀವು ಕೇಳಿರಬಹುದು – ಈ ಕೇಂದ್ರವನ್ನು ಸ್ಥಾಪಿಸಿದ ಯೋಗಾಚಾರ್ಯ ಶ್ರೀ ರುದ್ರಾರಾಧ್ಯರು ಹಲವು ವರ್ಷಗಳಿಂದ ನೂರಾರು ಜನರಿಗೆ ಉಚಿತವಾಗಿ ಯೋಗಾಭ್ಯಾಸ ಮಾಡಿಸುತ್ತಿದ್ದಾರೆ. ಯಾವ ಪ್ರತಿಫಲಾಕ್ಷೆಯೂ ಇಲ್ಲದೆ, ಪ್ರತಿನಿತ್ಯ ಒಂದು ಶಿಕ್ಷಕರ ತಂಡ ಇವರ ಮಾರ್ಗದರ್ಶನದಲ್ಲಿ ಸಾರ್ವಜನಿಕರಿಗೆ ಯೋಗ ಕಲಿಸುತ್ತಿದ್ದಾರೆ. ಯೋಗಾಭ್ಯಾಸಕ್ಕೆ ಬರುವವರೆಲ್ಲರೂ ಈ ಯೋಗಕೇಂದ್ರದ ಸ್ವಚ್ಛತೆಗೆ ಟೊಂಕ ಕಟ್ಟಿ ನಿಲ್ಲುವರು. ಪಾರಿವಾಳದ ಗಲಭೆಯನ್ನು ತಡೆಯಲು ಇಂಟರ್‌ನೆಟ್‌ನ್ನು ಜಾಲಾಡಿ ಹೊಳೆಯುವ ಉದ್ದನೆಯ ಪ್ಲಾಸ್ಟಿಕ್ ಟೇಪುಗಳನ್ನು ತೂಗು ಹಾಕಿದ ವೀಣಾ, ಕಿತ್ತು ಹೋದ ವೆಂಟಿಲೇಟರ್‌ನ ಮೆಷ್ ರಿಪೇರಿ ಮಾಡಿಸಲು ಓಡಾಡುತ್ತಿರುವ ಅನುರಾಧ, ಇಂತಹ ಸ್ವಯಂ ಸೇವಕರು ಇಲ್ಲಿ ಪ್ರತ್ಯಕ್ಷ. ಕೆಲವರು ಕಸ ಗುಡಿಸುತ್ತಿದ್ದರೆ ಮತ್ತೆ ಕೆಲವರು ನೀರು ಹೊತ್ತು ತಂದು ನೆಲ ಸಾರಿಸುತ್ತಿದ್ದರು. ತರಗತಿಗಳಲ್ಲಿ ಇರುವ ಶಿಸ್ತು, ಶ್ರದ್ಧೆ ಕಂಡು ಬೆರಗಾದೆ. ಭಾಗ್ಯ ಯೋಗಾಭ್ಯಾಸ ಮಾಡಲು ಬಂದವರ ಹಾಜರಿ ತೆಗೆದುಕೊಳ್ಳುತ್ತಿದ್ದಳು, ಟೈಮ್ ಟೇಬಲ್ ಪ್ರಕಾರ ಯೋಗ ಶಿಕ್ಷಕರು ಯೋಗ ಕಲಿಸುತ್ತಿದ್ದರು. ಆಸನ, ಪ್ರಾಣಾಯಾಮ, ಧ್ಯಾನ ಎಲ್ಲವೂ ಈ ತರಗತಿಗಳಲ್ಲಿ ಹಾಸುಹೊಕ್ಕಾಗಿದ್ದವು. ಶ್ರೀಯುತ ಪದ್ಮನಾಭ ಅಡಿಗರು ಪ್ರಾಣಾಯಾಮ ಹಾಗೂ ಧ್ಯಾನದ ಬಗ್ಗೆ ವಿಶೇಷವಾದ ಮಾಹಿತಿ ನೀಡುತ್ತಿದ್ದರು. ಒಂದು ಗಂಟೆ ಯೋಗಾಭ್ಯಾಸ ಮಾಡಿದ ಮೇಲೆ ನಮ್ಮಲ್ಲಿ ಉತ್ಸಾಹ, ಉಲ್ಲಾಸ, ಲವಲವಿಕೆ ಮನೆ ಮಾಡುತ್ತಿದ್ದವು. ಈ ವರ್ಷದ ಅಂತರ್ ರಾಷ್ಟ್ರೀಯ ಯೋಗ ದಿನಾಚರಣೆಯ ಘೋಷವಾಕ್ಯವಾದ ‘ವಸುದೈವ ಕುಟುಂಬಕಂ’ ರೂಪಕವಾಗಿ ನಿಂತಿತ್ತು ಶ್ರೀ ಶಿವಗಂಗಾ ಯೋಗಕೇಂದ್ರ.. ಇದಕ್ಕೆಲ್ಲಾ ಕಾರಣಕರ್ತರಾದ ಯೋಗಾಚಾರ್ಯರನ್ನು ನೆನಸುತ್ತಾ ಮನೆ ಕಡೆ ಹೆಜ್ಜೆ ಹಾಕಿದೆ.

ಯೋಗ ತರಗತಿಯಿಂದ ಮನೆಗೆ ಹಿಂತಿರುಗುವಾಗ ಹಿಂಡು ಹಿಂಡು ದನಗಳು ಒಂದು ದಿನಸಿ ಅಂಗಡಿ ಮುಂದೆ ನಿಂತಿರುವುದನ್ನು ಕಂಡೆ. ಅಂಗಡಿಯ ಮಾಲೀಕ ಒಂದು ಡಬ್ಬದ ತುಂಬಾ ಬೆಲ್ಲ ತಂದು ಎಲ್ಲಾ ದನಗಳಿಗೂ ತಿನ್ನಿಸಿದ ನಂತರವೇ, ಆ ದನಗಳು ಅಲ್ಲಿಂದ ಹೊರಡುತ್ತಿದ್ದವು. ಇವರ ಮಧ್ಯೆ ಒಂದು ಬಗೆಯ ಅವಿನಾಭಾವ ಸಂಬಂಧ ಬೆಳೆದಿತ್ತು. ಅಂಗಡಿಯ ಮುಂದೆ ಒಂದು ದೊಡ್ಡದಾದ ಕಲ್ಲಿನ ತೊಟ್ಟಿಯಲ್ಲಿ ನೀರು ತುಂಬಿಸಿಡುತ್ತಿದ್ದರು, ಬಾಯಾರಿದ ಪ್ರಾಣಿಗಳು ಬಂದು ನೀರು ಕುಡಿಯಲಿ ಎಂದು. ಮನೆಗೆ ಬಂದವಳು ಬೇಗ ಬೇಗ ಅಡಿಗೆ ಮುಗಿಸಿ ಕಾಲೇಜಿಗೆ ಹೊರಟು ನಿಂತೆ. ಗೆಳತಿ ಲತಾಳ ಜೊತೆ ಕಾರಿನಲ್ಲಿ ಹೋಗುವುದು ರೂಢಿಯಾಗಿತ್ತು. ದಾರಿಯಲ್ಲಿ ಯಾರಾದರೂ ಕಾಲೇಜಿಗೆ ಬರುವವರನ್ನು ಕಂಡಾಕ್ಷಣ ಕಾರು ನಿಲ್ಲಿಸಿ, ಅವರನ್ನು ಕಾರಿನಲ್ಲಿ ಹತ್ತಿಸಿಕೊಂಡು ಹೋಗುವುದು ಲತಾಳ ರೂಢಿ. ”ಲತಾ, ನೀನೊಬ್ಬಳೇ ಕಾರಿನಲ್ಲಿ ಬರುವ ಬದಲು ಸ್ಕೂಟಿಯಲ್ಲಿ ಬರಬಹುದಲ್ಲವೇ?” ಎಂದು ಒಮ್ಮೆ ನಾನು ಕೇಳಿದಾಗ, ಅವಳ ಉತ್ತರ ಹೀಗಿತ್ತು. ”ಮೇಡಂ, ದಾರಿಯಲ್ಲಿ ಎಷ್ಟೊಂದು ಜನ ಬಸ್ಸಿಗಾಗಿ ಕಾಯುತ್ತಿರುತ್ತಾರೆ, ಕೆಲವರಿಗಾದರೂ ಲಿಫ್ಟ್ ಕೊಡುವ ಸದವಕಾಶ ನನಗೆ ಸಿಗುವುದಲ್ಲವೇ?” ಎಂದಾಗ ನಾನು ಅಚ್ಚರಿಯಿಂದ ಅವಳೆಡೆಗೆ ನೋಡಿದೆ. ಕೊವಿಡ್ ಸಮಯದಲ್ಲಂತೂ ಶಿವಮೊಗ್ಗ ನಗರದ ಪ್ರದಕ್ಷಿಣೆ ಹಾಕಿ ಕಾಲೇಜಿನ ಸಿಬ್ಬಂದಿ ವರ್ಗದವರನ್ನು ಕಾಲೇಜಿಗೆ ಕರೆದೊಯ್ಯುತ್ತಿದ್ದಳು. ‘ಲತಾ ಮೇಡಂ ಇಲ್ಲದಿದ್ದರೆ ನಾವು ಆಟೋರಿಕ್ಷಾಕ್ಕೆ ನಮ್ಮ ಸಂಬಳವನ್ನೆಲ್ಲಾ ಸುರಿಯಬೇಕಾಗಿತ್ತು ಎನ್ನುವುದು ಅವರೆಲ್ಲರ ಒಕ್ಕೊರಲಿನ ಧ್ವನಿಯಾಗಿತ್ತು

ಕಾಲೇಜಿಗೆ ಹೋಗಿ ಸಹಿಮಾಡಿ ಉಪನ್ಯಾಸಕರ ಕೊಠಡಿಗೆ ಬಂದರೆ ಅಲ್ಲಿ ಎರಡನೇ ಬಿ.ಎಸ್ಸಿ ವಿದ್ಯಾರ್ಥಿಗಳು ಕಾಯುತ್ತಿದ್ದರು. ಆ ತರಗತಿಯನ್ನು ತೆಗೆದುಕೊಳ್ಳಬೇಕಾಗಿದ್ದ ನನ್ನ ಸಹೋದ್ಯೋಗಿ ಪ್ರಿಯಾಂಕ ಇನ್ನೂ ಬಂದಿರಲಿಲ್ಲ, ಆಗಲೇ ಹತ್ತು ನಿಮಿಷ ತಡವಾಗಿತ್ತು. ವಿಭಾಗದ ಮುಖ್ಯಸ್ಥಳಾಗಿದ್ದ ನಾನು, ಮರುಮಾತಾಡದೆ ಆ ತರಗತಿಯನ್ನು ತೆಗೆದುಕೊಂಡೆ. ಎಲ್ಲರ ಮುಂದೆ ರೇಗಾಡಿದೆ – ಹೊಸದಾಗಿ ಕೆಲಸಕ್ಕೆ ಸೇರಿದ ಈ ಹುಡುಗರಿಗೆ ಜವಾಬ್ದಾರಿಯಿಲ್ಲ, ಶಿಸ್ತಿಲ್ಲ, ಮಾಡುವ ಕೆಲಸದಲ್ಲಿ ಶ್ರದ್ಧೆಯಿಲ್ಲ ಇತ್ಯಾದಿ. ಪ್ರಿಯಾಂಕ ಬಂದಾಗ ಒಂದೂವರೆಯಾಗಿತ್ತು, ನಾನು ಅವಳ ಕಡೆ ಸಿಟ್ಟಿನಿಂದ ನೋಡಿದೆ. ಅವಳು, ‘ಸಾರಿ ಮೇಡಂ, ಬೆಳಿಗ್ಗೆ ಒಂಭತ್ತು ಗಂಟೆಗೇ ನಿಮಗೆ ಫೋನ್ ಮಾಡಿದೆ, ನೀವು ನನ್ನ ಕರೆಯನ್ನು ಸ್ವೀಕರಿಸಲಿಲ್ಲ. ಶಾರದ ಬ್ಲೈಂಡ್ ಸ್ಕೂಲಿನ ವಿದ್ಯಾರ್ಥಿಯೊಬ್ಬ ಎಸ್.ಎಸ್.ಎಲ್.ಸಿ. ಪರೀಕ್ಷೆ ಬರೆಯಬೇಕಾಗಿತ್ತು, ಅವನ ಪರವಾಗಿ ಬರೆಯಲು ಬರಬೇಕಾಗಿದ್ದ ಹುಡುಗ ಬರಲಿಲ್ಲವಂತೆ, ಹಾಗಾಗಿ ನಾನು ಅರ್ಜೆಂಟಾಗಿ ಅವನ ಜೊತೆ ಹೋಗಿ 10 ರಿಂದ 1 ಗಂಟೆಯವರೆಗೆ ಪರೀಕ್ಷೆ ಬರೆದು ಕಾಲೇಜಿಗೆ ತಡವಾಗಿ ಬಂದೆ.’ ಅವಳ ಮಾತುಗಳನ್ನು ಕೇಳಿ, ನಾನು ಲಜ್ಜೆಯಿಂದ ತಲೆ ತಗ್ಗಿಸಿ ಕುಳಿತೆ.

ಅಷ್ಟರಲ್ಲಿ ಪ್ರಿನ್ಸಿಪಾಲರಿಂದ ನನಗೆ ಕರೆ ಬಂದಿತ್ತು. ನಿತ್ಯ ನನ್ನ ಕ್ಲಾಸಿಗೆ ತಡವಾಗಿ ಬರುತ್ತಿದ್ದ ಹುಡುಗಿಯ ಬಗ್ಗೆ ಪ್ರಿನ್ಸಿಪಾಲರಿಗೆ ದೂರು ನೀಡಿದ್ದೆ. ಪ್ರಿನ್ಸಿಪಾಲರು ಆ ಹುಡುಗಿಯನ್ನು ಕರೆಸಿ, ಅವಳ ಬಳಿ ಮಾತಾಡಿದರು. ಅವಳು, ‘ಮೇಡಂ, ನನಗೆ ತಂದೆ ತಾಯಿಯಿಲ್ಲ. ಅಜ್ಜಿಯ ಬಳಿ ಇದ್ದೀನಿ. ಅವರು ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಕುಳಿತು ಹೂಕಟ್ಟಿ ಮಾರುತ್ತಾರೆ. ನಾನೂ ಅವರ ಜೊತೆ ಕುಳಿತು ಹೂ ಮಾರುತ್ತೇನೆ, ಹಾಗಾಗಿ ಕಾಲೇಜಿಗೆ ಬರಲು ತುಸು ತಡವಾಗುತ್ತದೆ. ದಯಮಾಡಿ ಕ್ಷಮಿಸಿ ಮೇಡಂ, ನನಗೆ ಪದವೀಧರಳಾಗಿ ಒಂದು ಒಳ್ಳಯ ಕೆಲಸ ಪಡೆದು, ಬಡ ವಿದ್ಯಾರ್ಥಿಗಳಿಗೆ ನೆರವಾಗಬೇಕೆಂಬ ಹಂಬಲ’. ಈ ಹುಡುಗಿಗೆ ನಾನೇನು ಹೇಳಲಿ – ಬಡತನದ ಬೇಗೆ, ಓದುವ ಛಲ, ತನ್ನಂತಹ ಬಡ ವಿದ್ಯಾರ್ಥಿಗಳಿಗೆ ನೆರವಾಗುವ ಹಂಬಲ – ಮೌನವಾಗಿ ಅವಳನ್ನು ಹರಸಿ ಕಳುಹಿಸಿದೆ. ಮತ್ತೆ ಅವಳನ್ನು ಭೇಟಿಯಾಗುವ ಕ್ಷಣ ಬಂದಿತ್ತು. ಆಫೀಸಿನಲ್ಲಿ ಈ ಹುಡುಗಿ ಕಣ್ತುಂಬಾ ನೀರು ತುಂಬಿಕೊಂಡು ನಿಂತಿದ್ದಳು. ಪರೀಕ್ಷೆಯ ಫೀಸ್ ತೆಗೆದುಕೊಳ್ಳುತ್ತಿದ್ದ ಗುಮಾಸ್ತನು, ‘ಈ ದಿನವೇ ಪರೀಕ್ಷೆ ಫೀಸ್ ಕಟ್ಟಲು ಕೊನೆಯ ದಿನ, ನಾಳೆಯಿಂದ ಫೈನ್ ಕಟ್ಟಬೇಕಾಗುವುದು, ನಿಮಗಾಗಿ ಸ್ಪೆಷಲ್ ನಿಯಮಗಳನ್ನು ಮಾಡಲು ಸಾಧ್ಯವಿಲ್ಲ’ ಎಂದು ಕೂಗಾಡುತ್ತಿದ್ದ. ನಾನು ಅವಳನ್ನು ಕರೆದು ಫೀಸ್‌ನ ಮೊತ್ತ ಎಷ್ಟು ಎಂದು ಕೇಳುವ ಹೊತ್ತಿಗೇ, ಅಲ್ಲಿಗೆ ಬಂದ ವಾಗ್ದೇವಿ ಮೇಡಂ, ಪರೀಕ್ಷಾ ಶುಲ್ಕವನ್ನು ಕಟ್ಟಿದ ರಸೀದಿಯನ್ನು ಅವಳಿಗೆ ಕೊಟ್ಟು, ‘ಚೆನ್ನಾಗಿ ಓದು ಮಗೂ’ ಎಂದು ಹರಸಿದರು. ಇವರೆಲ್ಲರ ಮುಂದೆ ನಾನು ಕುಬ್ಜಳಾಗುತ್ತಿದ್ದೆ.

ಅಂದು ನಡೆದ ಘಟನೆಗಳನ್ನು ಮೆಲುಕು ಹಾಕುತ್ತಾ ಕಾಲೇಜಿನಿಂದ ಮನೆಗೆ ಹಿಂತಿರುಗುವಾಗ ನೂರಡಿ ರಸ್ತೆಯ ಮಧ್ಯೆ ನಿಂತು ಗಿಡಗಳ ಆರೈಕೆ ಮಾಡುತ್ತಿದ್ದ ಹಿರಿಯನೊಬ್ಬನನ್ನು ಕಂಡು ಅವನ ಬಳಿ ಹೋದೆ. ಅವನು ಬಾಗಿದ ಸಸಿಗಳಿಗೆ ಕೋಲನ್ನು ಕಟ್ಟುತ್ತಿದ್ದ, ಗಿಡಗಳಿಗೆ ನೀರೆರೆಯುತ್ತಿದ್ದ, ಅಲ್ಲಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಚೀಲಗಳನ್ನು ಆರಿಸಿ ಕಸದ ಬುಟ್ಟಿಗೆ ಹಾಕುತ್ತಿದ್ದ. ಅವನ ವಯಸ್ಸು ಅರವತ್ತು ದಾಟಿರಬಹುದು. ‘ನಿನ್ನ ಹೆಸರು?’ ಎಂದು ಕೇಳಿದಾಗ ‘ಪರಿಸರ ಪ್ರೇಮಿ’ ಎಂದು ಹೇಳಿದವನು ಮತ್ತೆ ತನ್ನ ಕೆಲಸದಲ್ಲಿ ತೊಡಗಿದ. ಆಗ ನನಗೆ ನೆನಪಾಗಿದ್ದು – ಸ್ಕಾಟ್‌ಲ್ಯಾಂಡಿನ ಪಾರ್ಕ್‌ವೊಂದರಲ್ಲಿ ವಿಶೇಷ ಚೇತನಳೊಬ್ಬಳು ಒಂದು ಸ್ಕೂಟಿಯಲ್ಲಿ ಓಡಾಡುತ್ತಾ ಪ್ಲಾಸ್ಟಿಕ್ ಹಾಗೂ ಗಾಜಿನ ಶೀಷೆಗಳನ್ನು ಆರಿಸಿ ಕಸದ ಬುಟ್ಟಿಗೆ ತುಂಬುತ್ತಿದ್ದ ದೃಶ್ಯ. ಪ್ರತಿ ಶನಿವಾರ ಬಂದು ಪಾರ್ಕ್‌ನ ಸ್ವಚ್ಛತೆ ಮಾಡುತ್ತಿದ್ದ ಆ ಹೆಣ್ಣಿನ ಛಲ ನೋಡಿ ಬೆರಗಾಗಿದ್ದೆ.

ಗೆಳತಿ ರುಕ್ಮಿಣಿ ನಾಯಕ್ ಫೋನ್ ಮಾಡಿ, ‘ಮೇಡಂ ನಾಳೆ ಬೆಳಿಗ್ಗೆ ಹನ್ನೊಂದು ಗಂಟೆಗೆ ಓದುಗರ ಬಳಗದ ಮೀಟಿಂಗ್ ಇದೆ, ತಪ್ಪದೆ ಬನ್ನಿ, ಸವಿತಾ ನಾಗಭೂಷಣ್‌ರವರ ಕವನ ಸಂಗ್ರಹದ ಬಗ್ಗೆ ಚರ್ಚೆ ಇದೆ.’ ಎಂದು ಆತ್ಮೀಯವಾಗಿ ಆಹ್ವಾನಿಸಿದರು. ಇವರು ಓದಿನಲ್ಲಿ ಆಸಕ್ತಿಯುಳ್ಳ ಕೆಲವು ಗೃಹಿಣಿಯರಿಗಾಗಿಯೇ ಒಂದು ಓದುಗರ ಬಳಗವನ್ನು ಕಟ್ಟಿದ್ದರು. ಪ್ರತೀ ತಿಂಗಳು ನಾಲ್ಕನೇ ಶನಿವಾರ ಒಂದೊಂದು ಪುಸ್ತಕವನ್ನು ಓದಿ, ವಿಶೇಷ ಅತಿಥಿಯ ಮಾರ್ಗದರ್ಶನದಲ್ಲಿ ಚರ್ಚೆ ಮಾಡುತ್ತಿದ್ದರು. ಆ ಪುಸ್ತಕವನ್ನು ಕೊಂಡು ಓದುವ ಅಲಿಖಿತ ನಿಯಮವೂ ಜಾರಿಯಲ್ಲಿತ್ತು. ಓದುವ ಹವ್ಯಾಸವೇ ಕಾಣೆಯಾಗುತ್ತಿರುವ ಇಂದಿನ ಟಿ.ವಿ. ಮೊಬೈಲ್ ಯುಗದಲ್ಲಿ ರುಕ್ಮಿಣಿ ನಾಯಕ್‌ರವರ ದಿಟ್ಟ ಹೆಜ್ಜೆ ಅನುಕರಣೀಯವಲ್ಲವೇ?

ಮತ್ತೊಬ್ಬ ಗೆಳತಿ ಪುಷ್ಪಲತಾ ಫೋನ್ ಬಂದಿತ್ತು, ‘ಗಾಯತ್ರಿ, ಇಸ್ಲಾಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ , ಕೆಲವು ಮಕ್ಕಳು ದಸರಾ ಕ್ರೀಡಾಕೂಟಗಳಿಗೆ ಆಯ್ಕೆಯಾಗಿದ್ದಾರೆ, ಆದರೆ ಅವರ ಬಳಿ, ಆ ಕ್ರೀಡೆಗಳಲ್ಲಿ ಪಾಲ್ಗೊಳ್ಳ್ಳಲು ಬ್ಲೇಜರ್. ಇಲ್ಲ. ನಾವೆಲ್ಲಾ ಸೇರಿ ಆ ಮಕ್ಕಳಿಗೆ ಬ್ಲೇಜರ್‍ಸ್ ಕೊಡಿಸೋಣವೇ’, ಎಂದರು. ಸಹ್ಯಾದ್ರಿ ಗೆಳತಿಯರಾದ ನಾವು ಎಂದಿನಂತೆ ಅವರನ್ನು ಹಿಂಬಾಲಿಸಿದೆವು. ಪ್ರತಿವರ್ಷ ಸ್ವಾಂತಂತ್ರ್ಯ ದಿನಾಚರಣೆಯಂದು, ಆ ಬಡ ಮಕ್ಕಳಿಗೆ ಪೆನ್ನು ಪುಸ್ತಕಗಳನ್ನು ನೀಡುತ್ತಿದ್ದ ಕೊಡುಗೈ ದಾನಿ ಇವರು. ಆದರೆ ಈ ವಿಷಯವನ್ನು ಎಲ್ಲೂ ಹೇಳಬೇಡಿ ಎಂಬ ಕರಾರನ್ನು ಹಾಕುತ್ತಿದ್ದರು.


ಮನೆಗೆ ಬಂದಾಗ ‘ತಾಯಿ ಮನೆ’ ಎಂಬ ಆಶ್ರಮವನ್ನು ಅನಾಥ ಮಕ್ಕಳಿಗಾಗಿ ನಡೆಸುತ್ತಿದ್ದ ಉತ್ಸಾಹಿ ತರುಣ ಸುದರ್ಶನ್ ನನಗಾಗಿ ಕಾಯುತ್ತಿದ್ದ. ಈ ಹುಡುಗನ ಬಗ್ಗೆ ಏನು ಹೇಳಲಿ? ತನ್ನ ಬದುಕನ್ನೇ ಈ ಮಕ್ಕಳಿಗೆ ಮುಡಿಪಾಗಿಟ್ಟಿದ್ದ. ಯಾರಾದರೂ ಅನಾಥಾಶ್ರಮ ಎಂದರೆ ಸಿಟ್ಟಿಗೇಳುತ್ತಿದ್ದ, ಆ 25 ಮಕ್ಕಳನ್ನು ತಾಯಿಯ ಬೆಚ್ಚನೆಯ ಮಡಿಲಲ್ಲಿಟ್ಟು ಪೋಷಿಸಲು ಸದಾ ಯತ್ನಿಸುತ್ತಿದ್ದ. ತಾಯಿಮನೆಯ ಹುಡುಗನೊಬ್ಬನಿಗೆ ಹದಿನೈದು ದಿನದ ಹಿಂದೆ ಆರೋಗ್ಯ ಹದಗೆಟ್ಟಿತ್ತು. ಸುದರ್ಶನ್ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮಾಡಿಸಿದ. ಆದರೆ ದಿನೇ ದಿನೇ ಅವನ ಆರೋಗ್ಯ ಹದಗೆಡುತ್ತಾ ಬಂದಾಗ, ನನ್ನ ಬಳಿ ಬಂದನು. ಆಗ ನಾನು, ಸರ್ಜಿ ಆಸ್ಪತ್ರೆಯಲ್ಲಿ ಮಕ್ಕಳ ವೈದ್ಯಳಾಗಿದ್ದ ಮಗಳ ಬಳಿ ಕಳುಹಿಸಿದೆ. ಅವಳು ಅವನನ್ನು ತಕ್ಷಣ ಐ.ಸಿ.ಯು.ಗೆ ಸೇರಿಸಿ, ಉತ್ತಮ ಚಿಕಿತ್ಸೆ ಕೊಡಿಸಿದಳು. ಒಂದು ವಾರದಲ್ಲಿ ಹುಡುಗ ಚೇತರಿಸಿಕೊಂಡ. ಆಸ್ಪತ್ರೆಯ ಬಿಲ್ ಒಂದೂವರೆ ಲಕ್ಷವಾಗಿತ್ತು. ನನ್ನ ಯಜಮಾನರು ಮತ್ತು ನನ್ನ ಮಗಳು ಹುಡುಗನ ಚಿಕಿತ್ಸೆಯ ವೆಚ್ಚವನ್ನು ಭರಿಸಲು ಸಿದ್ಧರಾಗಿದ್ದೆವು. ಆದರೆ ಸರ್ಜಿ ಆಸ್ಪತ್ರೆಯ ಮಾಲೀಕರಾದ ಡಾ.ಧನಂಜಯ್ ಸರ್ಜಿಯವರು ಈ ಚಿಕಿತ್ಸೆಯ ವೆಚ್ಚವನ್ನು ಮಾಫಿ ಮಾಡಿ ಮಾನವತೆಯ ಸಂದೇಶವನ್ನು ಸಾರಿದರು.

ಯಾರಿವರು ಅನಾಮಿಕರು, ಇಂತಹ ಸಾವಿರಾರು ಜನರು ಸದ್ದಿಲ್ಲದೆ ಸಮಾಜ ಸೇವೆಯನ್ನು ಮಾಡುತ್ತಿರುವರು. ಇದು ಅವರ ಪಾಲಿಗೆ ಸೇವೆಯಲ್ಲ, ಕರ್ತವ್ಯ. ತಮ್ಮ ಆತ್ಮ ತೃಪ್ತಿಗಾಗಿ ಮಾಡುವ ಕಾರ್ಯ. ಜಗತ್ತಿಗೆ ಬೆಳಕು ನೀಡುವ ಸೂರ್ಯ ಚಂದ್ರರಂತೆ ಸದ್ದು ಗದ್ದಲವಿಲ್ಲದೆ ನಮ್ಮನ್ನೆಲ್ಲಾ ಪೋಷಿಸುತ್ತಿರುವರು, ಭೂಮಿಯೊಳಗೆ ಅಡಗಿ ಕುಳಿತ ಮರದ ಬೇರುಗಳು ಮರವನ್ನು ಪೋಷಿಸುವಂತೆ ಸಮಾಜದ ಒಳಿತಿಗಾಗಿ ಶ್ರಮಿಸುತ್ತಿರುವರು? ನಿತ್ಯ ನಮ್ಮ ಟಿವಿ. ಪರದೆಗಳ ಮೇಲೆ ಅತ್ಯಾಚಾರ, ಅನಾಚಾರ, ಲಂಚ, ಮೋಸ, ಕೊಲೆ ಗಲ,s ಯುದ್ಧ, ಇಂತಹ ಸುದ್ದಿಗಳನ್ನೇ ನೋಡಿ ನೋಡಿ ಬೇಸತ್ತವರಿಗೆ ಅಮೃತಸಿಂಚನ ಮಾಡುವ ಇಂತಹ ಸುದ್ದಿಗಳು ನಿಜಕ್ಕೂ ನಮ್ಮ ಬದುಕನ್ನು ಹಸನು ಮಾಡಬಲ್ಲವು ಅಲ್ಲವೇ? ಇಂಗ್ಲಿಷ್ ನಾಣ್ಣುಡಿಯೊಂದು ಹೇಳುವಂತೆ, ‘Every dark cloud has a silver lining’ ಎಂತಕ ಕಡು ಕಪ್ಪಾದ ಮೋಡದ ಅಂಚಿನಲ್ಲಿಯೂ ಬೆಳ್ಳಿಯ ರೇಖೆ ಇದ್ದೇ ಇರುವುದು ಎಂಬ ಆಶಾವಾದವನ್ನು ಬಿಂಬಿಸುವ ನುಡಿಗಳಿವು. ಮರಳುಗಾಡಿನ ಮಧ್ಯೆಯಿರುವ ಓಯಸಿಸ್‌ನಂತೆ ಬಳಲಿ ಬಾಯಾರಿ ಬಂದವರ ನೀರಡಿಕೆಯನ್ನು ತಣಿಸುವ ಶುದ್ಧವಾದ ಗಂಗಾಜಲದಂತೆ ಇವರ ನಡೆ ನುಡಿ. ಇವರು ನಮ್ಮ ಸುತ್ತ ಸುಳಿಯುವ ಪ್ರಾಣವಾಯುವಿನಂತೆ, ಯಾರ ಅರಿವಿಗೂ ಬಾರದಂತೆ ನಿರಂತರವಾಗಿ ತಮ್ಮ ಸೇವಾ ಕಾರ್ಯದಲ್ಲಿ ತೊಡಗಿರುವರು. ಇವರಿಗೆ ನಮ್ಮದೊಂದು ಸಲಾಂ.

– ಡಾ.ಗಾಯತ್ರಿದೇವಿ ಸಜ್ಜನ್ , ಶಿವಮೊಗ್ಗ

9 Responses

 1. ಇಂಥವರಿಗೆ ನಮ್ಮದೂ ಒಂದು…ಸಲಾಮ್..ಮೆಲಕುಹಾಕುವಂಥಹ ಹಾಗೇ ಗಮನಿಸುವಂಥಹ ಲೇಖನ… ಧನ್ಯವಾದಗಳು ಮೇಡಂ

 2. ಯಾರಿವರು ಅನಾಮಿಕರು ಲೇಖನಕ್ಕೆ
  ಅರ್ಥಪೂರ್ಣವಾದ ಛಾಯಾಚಿತ್ರವನ್ನು ಹಾಕಿರುವ ಹೇಮಮಾಲಾ ಮೇಡಂ ಅವರಿಗೆ ಧನ್ಯವಾದಗಳು

 3. ನಯನ ಬಜಕೂಡ್ಲು says:

  Nice

 4. Padma Anand says:

  ದಿನಾ ಅನಾಚಾರ, ಬ್ರಷ್ಟಾಚಾರದ ಸುದ್ದಿಗಳಲ್ಲೆ ಮುಳುಗೇಳುವ ನಮಗೆ, ಇಂತಹ ಸದ್ದಿಲ್ಲದೆ ಕಾರ್ಯವೆಸಗುವ ಸಜ್ಜನರುಗಳು ಇರುವುದರಿಂದಲೇ ಇಂದಿಗೂ ಮಳೆ ಬೆಳೆ ಆಗುತ್ತಿರುವುದು ಎಂಬುದರ ಅರಿವು ಮೂಡಿಸುವ ಸಕಾರಾತ್ಮಕ ಲೇಖನ.. ನಮ್ಮದೂ ಸಾಷ್ಟಾಂಗ ನಮಸ್ಕಾರಗಳು.

 5. ಶಂಕರಿ ಶರ್ಮ says:

  ಹೌದು…ಎಲೆಮರೆಯ ಕಾಯಿಯಂತೆ ಅದೆಷ್ಟೋ ಜನರು ಮಾಡುತ್ತಿರುವ ಈ ಸೇವೆಗಳು ಅತ್ಯಂತ ಅಮೂಲ್ಯವಾಗಿವೆ. ಸೊಗಸಾದ ಲೇಖನ ಮೇಡಂ.

 6. Hema says:

  ಸೊಗಸಾದ ಲೇಖನ .

 7. ಸಹೃದಯ ಓದುಗರಿಗೆ ಧನ್ಯವಾದಗಳು

 8. ಡಾ.ಕೃಷ್ಣಪ್ರಭ says:

  ಲೇಖನ ಓದುತ್ತಾ ಹೋದಂತೆ ಕಣ್ಣು ತೇವವಾಯಿತು.ಸಹಾಯಹಸ್ತ ಚಾಚುವ ಅನಾಮಿಕರನ್ನು ದೇವರು ಚೆನ್ನಾಗಿಟ್ಟಿರಲಿ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: