ಅಧಿಕ

Share Button

ಈ ವರ್ಷದಲ್ಲಿ ಶ್ರಾವಣಮಾಸ ಅಧಿಕವಾಗಿ ಬಂದಿತ್ತು. ಆಗ ಸಂಪ್ರದಾಯಸ್ಥರು ಪಂಚಾಗದಂತೆ ಅದನ್ನು ಹೊರತುಪಡಿಸಿ ನಿಜ ಶ್ರಾವಣಮಾಸದಲ್ಲಿ ಮಾತ್ರ ಬಹುತೇಕ ಶುಭಕಾರ್ಯಗಳನ್ನು ಮಾಡುವುದುಂಟು. ಇಂತಹ ಅಧಿಕ ಮಾಸಗಳು ಚಾಂದ್ರಮಾನ ಪದ್ಧತಿಯಲ್ಲಿ ನಾಲ್ಕುವರ್ಷಗಳಿಗೊಂದರಂತೆ ಬರುತ್ತವೆ. ಇದು ಕ್ಯಾಲೆಂಡರಿನಲ್ಲಿ ಪರಿಗಣಿಸುವ ಹನ್ನೆರಡು ತಿಂಗಳಿಗೆ ಸರಿದೂಗಿಸಲು ಮಾಡುವ ಒಂದು ಸಣ್ಣ ಹೊಂದಾಣಿಕೆ. ಹೀಗಾಗಿ ಅಧಿಕ ಪದವು ನಮಗೆ ಚಿರಪರಿಚಿತವಾದದ್ದೇ. ಸಾಮಾನ್ಯ ಆಡುಭಾಷೆಯಲ್ಲಿ ‘ಆಧಿಕ’ ಎಂದರೆ ಹೆಚ್ಚಿಗೆ ಎಂದರ್ಥ. ಸಂದರ್ಭಾನುಸಾರ ಉಪಯೋಗವಾಗುವ ಈ ಪದವು ವಿವಿಧ ರೀತಿಯಲ್ಲಿ ಬಳಕೆಯಾಗುತ್ತದೆ.
ನಮ್ಮ ದೇಶವು ಕೃಷಿ ಅವಲಂಬಿತವಾಗಿದೆ. ಆದ್ದರಿಂದ ರೈತರು ತಮ್ಮ ಮಾತಿನಲ್ಲಿ ಅಧಿಕ ಪದವನ್ನು ಹಲವಾರು ರೀತಿಯಲ್ಲಿ ಬಳಸುತ್ತಾರೆ. ಹೇಗೆಂದರೆ ಮಳೆ ಹೆಚ್ಚಾಗಿ ಇದರಿಂದ ಬೆಳೆ ಹಾಳಾಗಿದ್ದು ಅಧಿಕ ಪ್ರಮಾಣದಲ್ಲಿ ಎನ್ನುತ್ತಾರೆ. ಮಳೆ ಸಕಾಲದಲ್ಲಿ ಬರದೆ ಬೇಸಾಯ ಆಗದಿದ್ದರೆ ಬೆಳೆ ನಷ್ಟ ಅಧಿಕ , ಬರಗಾಲ ಅಧಿಕ ಎಂದು ಗೋಳಾಡುತ್ತಾರೆ. ಒಂದುವೇಳೆ ಎಲ್ಲವೂ ಸಮರ್ಪಕವಾಗಿದ್ದು ನಿರೀಕ್ಷೆಗಿಂತ ಹೆಚ್ಚಿಗೆ ಬೆಳೆ ಬಂದರೆ ಈ ವರ್ಷ ಇಳುವರಿ ಅಧಿಕ ಎನ್ನುತ್ತಾರೆ. ಮಾರುಕಟ್ಟೆಯಲ್ಲಿ ದವಸಧಾನ್ಯ, ತರಕಾರಿ, ಹಣ್ಣುಕಾಯಿಗಳು ದುಬಾರಿಯಾದರೆ ಎಲ್ಲಾ ಬೆಲೆಗಳೂ ಅಧಿಕವಾಗಿವೆ ಕೊಳ್ಳುವುದು ಕಷ್ಟ ಎನ್ನುವ ಉದ್ಗಾರ. ಕೆಲವೇ ತಿಂಗಳುಗಳ ಹಿಂದೆ ಟೊಮ್ಯಾಟೋ ಬೆಲೆ ಗಗನಕ್ಕೇರಿ ಕಿಲೋಗೆ ನೂರು ರೂಪಾಯಿ ಮುಟ್ಟಿದಾಗ ನಾವೂ ಅಧಿಕವೆಂದು ಕೊಳ್ಳುತ್ತಿರಲಿಲ್ಲ. ನಂತರ ಸ್ವಲ್ಪ ಕಾಲದಲ್ಲಿ ಅದೇ ಟೊಮ್ಯಾಟೋ ಅಧಿಕ ಪ್ರಮಾಣದಲ್ಲಿ ಬೆಳೆದು ಮಾರುಕಟ್ಟೆಯಲ್ಲಿ ಬೆಲೆಯಿಲ್ಲದಂತಾದಾಗ ರೈತರು ಹಣ್ಣುಗಳನ್ನು ಬೀದಿಯಲ್ಲಿ ಸುರಿದು ಅಧಿಕ ನಷ್ಟವಾದ ಅಸಂತೋಷವನ್ನು ತೊರ್ಪಡಿಸಿದ್ದುಂಟು. ದರವು ಅಧಿಕವಿದ್ದಾಗ ಸದ್ದಿಲ್ಲದೆ ಜೇಬು ತುಂಬಿಸಿಕೊಂಡವರೂ ಅವರೇ ತಾನೇ.

ದೇಹಾರೋಗ್ಯದ ವಿಷಯದಲ್ಲಿ ಅಧಿಕ ಪದ ಪ್ರಯೋಗಕ್ಕೆ ಮಹತ್ವವುಂಟು. ಅಧಿಕ ರಕ್ತದೊತ್ತಡ, ರಕ್ತದಲ್ಲಿ ಅಧಿಕ ಸಕ್ಕರೆಯ ಪ್ರಮಾಣ, ಹೃದಯ ಬಡಿತ ಅಧಿಕ ವೇಗವಾದರೂ ತೊಂದರೆ, ಕೆಲವರಿಗೆ ಮಾನಸಿಕ ಒತ್ತಡ ಅಧಿಕವಾಗಿ ಬಹಳಷ್ಟು ತೊಂದರೆಗಳುಂಟಾಗುವುದುಂಟು. ಅದರಲ್ಲೂ ಈ ಮಾತುಗಳನ್ನು ಮೊಟ್ಟಮೊದಲ ಬಾರಿಗೆ ಪರೀಕ್ಷಿಸಿದ ವೈದ್ಯರಿಂದ ಕೇಳಿದಾಗ ತಪಾಸಣೆಗೆ ಬಂದ ವ್ಯಕ್ತಿ ಧಿಢೀರನೆ ಎದೆಗುಂದುತ್ತಾನೆ. ನಂರದ ದಿನಗಳಲ್ಲಿ ಅದೇ ವೈದ್ಯರು ಸಲಹೆ ಮಾಡಿದ ಔಷಧಿ, ಪಥ್ಯ, ಸರಳ ವ್ಯಾಯಾಮದೊಂದಿಗೆ ಎಲ್ಲ ಖಾಯಿಲೆಗಳನ್ನು ನಿಯಂತ್ರಣದಲ್ಲಿಟ್ಟುಕೊಂಡು ಬಹಳ ವರ್ಷಗಳು ಬದುಕಿರುವುದೂ ಸಾಧ್ಯ. ಏಕೆಂದರೆ ವೈದ್ಯಕೀಯ ಸಂಶೋಧನೆಗಳ ಪ್ರಕಾರ ಭಾರತದ ಜನರ ಸಾಮಾನ್ಯ ಸರಾಸರಿ ಆಯುಸ್ಸು ಮೊದಲಿಗಿಂತ ಅಧಿಕವಾಗಿದೆ. ಆದ್ದರಿಂದ ದಿರ್ಘಾಯುಷಿಗಳ ಸಂಖ್ಯೆ ಈಗ ಅಧಿಕವಾಗಿದೆ ಎಂದು ಹೆಮ್ಮೆ ಪಡಬಹುದು. ಜೊತೆಯಲ್ಲೇ ಜನನ ಪ್ರಮಾಣವೂ ಅಧಿಕವಾಗಿ ಭಾರತದ ಜನಸಂಖ್ಯೆ ಈಗ ಚೀನಾದೇಶವನ್ನೂ ಹಿಂದಿಕ್ಕಿ ಪ್ರಥಮಸ್ಥಾನಕ್ಕೇರಿದೆ.

ಸಿರಿವಂತರಿಗೆ ತಮ್ಮ ಸಂಪತ್ತನ್ನು ಇನ್ನು ಅಧಿಕಗೊಳಿಸುವ ಆಸೆ. ಇದಕ್ಕಾಗಿ ಅವರು ಹಲವು ಬಗೆಯ ಹೊಸ ವಿಧಾನಗಳನ್ನು ಹುಡುಕುತ್ತಲೇ ಇರುತ್ತಾರೆ. ಮೊದಲು ಸಾಲಕೊಟ್ಟು ಅಧಿಕ ಬಡ್ಡಿ ವಸೂಲಿ ಮಾಡಿ ಸಂಪತ್ತನ್ನು ಹೆಚ್ಚಿಸಿಕೊಳ್ಳುವುದು ಸಾಮಾನ್ಯವಾಗಿತ್ತು. ಸಾಲಗಾರರು ಸಮಯಕ್ಕೆ ಬಡ್ಡಿ ಮತ್ತು ಅಸಲನ್ನು ಹಿಂದಿರುಗಿಸಲು ಅಸಮರ್ಥರಾದರೆ ಅವರು ಸಾಹುಕಾರರ ಬಳಿ ಅಡವಿಟ್ಟ ಬಂಗಾರದ ಒಡವೆಯೋ, ಹೊಲ ಮನೆಗಳನ್ನೂ ಮಟ್ಟುಗೋಲು ಹಾಕಿಕೊಂಡು ತಮ್ಮ ಶ್ರೀಮಂತಿಕೆ ಹೆಚ್ಚಿಸಿಕೊಳ್ಳುತ್ತಿದ್ದರು. ಹೀಗೇ ಅತಿಯಾಗಿ ಸಂಪಾದಿಸಿದ ಧನವಂತರಿಗೆ ಯೋಗ್ಯ ಮಕ್ಕಳು ಹುಟ್ಟಿದರೆ ಪರವಾಗಿಲ್ಲ. ಬದಲಾಗಿ ಅನೀತಿವಂತ ಮಕ್ಕಳು ಹುಟ್ಟಿದರೆ ಅವರು ಯಾವುದೇ ಕಟ್ಟುಪಾಡಿಲ್ಲದೆ ಹಿಗ್ಗಾಮುಗ್ಗಾ ಅಪ್ಪನ ಸಂಪತ್ತನ್ನು ಮನಸ್ಸಿಗೆ ಬಂದಂತೆ ತಮ್ಮ ಕೆಟ್ಟ ಅಭ್ಯಾಸಗಳಿಂದ ಹಾಳುಮಾಡಿಕೊಳ್ಳುವುದು ಖಾತರಿ. ಇಂತಹ ಅನೇಕ ಸಂಗತಿಗಳನ್ನು ನಾವೂ ಕಂಡಿದ್ದೇವೆ. ಅದಕ್ಕೇ ಹಿರಿಯರು ಅನುಕೂಲವಿದ್ದಾಗ ಧನವಂತರು ತಮ್ಮ ಸಂಪತ್ತಿನ ಅಲ್ಪ ಭಾಗವನ್ನಾದರೂ ಅರ್ಹ ಸಂತ್ರಸ್ಥರಿಗೆ ದಾನಮಾಡಲು ತಿಳಿಸಿದ್ದಾರೆ. ಇದರಿಂದ ಪುಣ್ಯ ಸಾಧನೆಯಾಗುತ್ತದೆ ಎಂಬ ನಂಬಿಕೆ. ಇಲ್ಲವಾದರೆ ”ಜೀನ ಗಳಿಸಿದ್ದನ್ನು ಜಾಣ ಮಕ್ಕಳು ತಿಂದು ತೇಗುತ್ತಾರೆ ” ಹಾಗೂ ”ಕೊಟ್ಟದ್ದು ತನಗೆ ಬಚ್ಚಿಟ್ಟದ್ದು ಪರರಿಂಗೆ” ಎಂಬ ನುಡಿಮುತ್ತೂ ಸಹ ಇದೆ.

ಹಣದ ಹಂಬಲ ಹೆಚ್ಚಾದವರಿಗೆ ಎಷ್ಟು ಬಂದರೂ ತೃಪ್ತಿಯೆಂಬುದೇ ಇರುವುದಿಲ್ಲ. ಇನ್ನಷ್ಟು, ಮತ್ತಷ್ಟು ಹಣ ಗಳಿಸುವ ಆಸೆ ಹೆಚ್ಚುತ್ತಲೇ ಇರುತ್ತದೆ. ಈ ಸಂದರ್ಭದಲ್ಲಿ ಒಂದು ನೀತಿಕತೆ ನೆನಪಾಗುತ್ತದೆ. ಹಿಂದಿನ ಕಾಲದಲ್ಲಿ ಮೈದಾಸನೆಂಬ ಒಬ್ಬ ರಾಜನಿದ್ದನು. ಅವನು ಚಿನ್ನದ ಮೋಹಿ. ಅವನಿಗೆ ಹೆಚ್ಚುಹೆಚ್ಚು ಚಿನ್ನ ತನ್ನದಾಗಬೇಕೆಂಬ ಹುಚ್ಚಿನಲ್ಲಿದ್ದ. ಸಾಕಷ್ಟು ಅನುಕೂಲವಾಗಿದ್ದರೂ ಅದಕ್ಕಿಂತ ಅಧಿಕವಾಗಿ ಚಿನ್ನ ಸಂಗ್ರಹಿಸುವ ಗೀಳು. ದೇವರನ್ನು ಕುರಿತು ಪ್ರಾರ್ಥಿಸಿದನಂತೆ. ಅವನ ಅದೃಷ್ಟಕ್ಕೆ ದೇವನೂ ಪ್ರತ್ಯಕ್ಷನಾಗಿಬಿಟ್ಟ. ಏನು ವರಬೇಕು ಕೇಳಿಕೋ ಎಂದಾಗ ಮೈದಾಸ ”ನಾನು ಮುಟ್ಟಿದ್ದೆಲ್ಲಾ ಚಿನ್ನವಾಗುವಂತಹ ವರ ಕೊಡು ಭಗವಂತಾ” ಎಂದ. ಕರುಣಾಳು ದೇವರು ತಥಾಸ್ತು ಎಂದ. ಇದರಿಂದ ಮೈದಾಸನ ಸಂತೋಷಕ್ಕೆ ಪಾರವೇ ಇಲ್ಲದಂತಾಯಿತು. ದೇವರು ಅನುಗ್ರಹಿಸಿದ ವರವನ್ನು ಪರೀಕ್ಷಿಸಲು ತಾನು ಕುಳಿತಿದ್ದ ಪೀಠವನ್ನು ಮುಟ್ಟಿದ. ಮರದಿಂದ ಮಾಡಿದ್ದ ಅದು ತಕ್ಷಣ ಚಿನ್ನದ್ದಾಯಿತು. ನಂತರ ಹುಚ್ಚನಂತೆ ಆ ಕೊಠಡಿಯಲ್ಲಿದ್ದ ಎಲ್ಲ ವಸ್ತುಗಳನ್ನು ಮುಟ್ಟತೊಡಗಿದ. ಎಲ್ಲವೂ ಚಿನ್ನವಾಗಿ ಮಾರ್ಪಾಡಾದಾಗ ಅವನು ಪ್ರಪಂಚದಲ್ಲಿ ತಾನೇ ಅತ್ಯಧಿಕ ಚಿನ್ನವನ್ನು ಹೊಂದಿದ ವ್ಯಕ್ತಿಯಾಗುವುದರಲ್ಲಿ ಸಂಶಯವಿಲ್ಲ ಎಂದುಕೊಂಡನು. ಅಷ್ಟೊತ್ತಿಗೆ ಮಧ್ಯಾನ್ಹದ ಭೋಜನದ ಸಮಯವಾಯಿತು. ಸೇವಕರು ರಾಜನಿಗಾಗಿ ರುಚಕಟ್ಟಾದ ತಿನಿಸುಗಳನ್ನು ಬೆಳ್ಳಿಯ ಹರಿವಾಣದಲ್ಲಿ ತಂದಿಟ್ಟರು. ಆತುರಾತುರವಾಗಿ ತಿನ್ನಲು ಮೊದಲಿಟ್ಟು ತನಗೆ ಪ್ರಿಯವಾದ ಲಡ್ಡುವೊಂದನ್ನು ಎತ್ತಿಕೊಂಡ. ತಕ್ಷಣ ಅದು ಚಿನ್ನದ ಉಂಡೆಯಂತಾಯಿತು. ಅದು ಗುಂಡಾದ ಚಂಡಿನಂತಿದ್ದು ತಿನ್ನಲಾಗಲಿಲ್ಲ. ಹಾಗೆಯೇ ಹರಿವಾಣದಲ್ಲಿದ್ದ ಎಲ್ಲ ತಿನಿಸುಗಳೂ ಚಿನ್ನದ ತುಂಡುಗಳಾಗಿ ಏನನ್ನೂ ತಿನ್ನಲಾಗದೇ ಹಸುವಿನಿಂದ ನರಳುವಂತಾಯಿತು. ಹೋಗಲಿ ಪಾನೀಯವನ್ನು ಕುಡಿಯೋಣವೆಂದು ಬಟ್ಟಲನ್ನು ಎತ್ತಿಕೊಂಡರೆ ಅದೂ ಚಿನ್ನದ ನೀರಾಗಿತ್ತು. ಇಲ್ಲಿಗೆ ಅವನ ತಾಳ್ಮೆ ಕೆಟ್ಟಿತ್ತು. ನಾನೇನು ಮಾಡಿಕೊಂಡೆ ಎನ್ನುತ್ತಾ ಪೇಚಾಡುವ ಹೊತ್ತಿಗೆ ಅವನ ಏಕಮಾತ್ರ ಪ್ರೀತಿಯ ಪುತ್ರಿ ‘ಅಪ್ಪಾ’ ಎನ್ನುತ್ತಾ ಅವನತ್ತ ಓಡಿಬಂದಳು. ಅವಳು ತಂದೆಯನ್ನು ತಬ್ಬಿದ ಕೂಡಲೇ ಅವಳೊಂದು ಚಿನ್ನದ ಪುತ್ಥಳಿಯಾಗಿ ಮಾರ್ಪಟ್ಟಳು. ಮೈದಾಸನು ದುಃಖದಿಂದ ಕಂಗೆಟ್ಟು ದೈವದಲ್ಲಿ ಮತ್ತೆ ಮೊರೆಯಿಟ್ಟನು. ‘ನನಗೆ ಈ ವರವೂ ಬೇಡ, ಚಿನ್ನವೂ ಬೇಡ, ನನ್ನ ಪ್ರೀತಿಯ ಮಗಳು ಬೇಕು. ಭಗವಂತಾ ನೀನು ಕೊಟ್ಟ ವರವನ್ನು ಹಿಂದಕ್ಕೆ ಪಡೆದುಬಿಡು’ ಎಂದು ಅಳಲಾರಂಭಿಸಿದ. ಹೀಗೆ ಅಧಿಕ ಚಿನ್ನದ ಆಸೆಯಿಂದ ತನ್ನ ವಾಸ್ತವ ಜೀವನದ ಸುಖವನ್ನು ಕಳೆದುಕೊಂಡ ಮೈದಾಸನ ಕತೆ ಎಲ್ಲ ದುರಾಸೆ ಪಡುವವರಿಗೆ ಮಾದರಿಯಾಗಿದೆ. ಅದಕ್ಕೇ ಅರಿತವರು ”ಅತಿಯಾದರೆ ಜೀವಪೋಷಕವಾದ ಹಾಲೂ ವಿಷವಾದೀತು” ಎಂದು.

ಇತ್ತೀಚಿನ ದಿನಗಳಲ್ಲಿ ಮಕ್ಕಳ ವಿದ್ಯಾಭ್ಯಾಸ ಕ್ಷೇತ್ರದಲ್ಲಿ ‘ಅಧಿಕ’ ಪದದ ಪ್ರಾಮುಖ್ಯತೆ ಬಹಳವಾಗಿದೆ. ಪೋಷಕರು ತಮ್ಮ ಮಕ್ಕಳಿಗೆ ನೀನು ಬೇರೆಯವರಿಗಿಂತ ಅಧಿಕವಾಗಿ ಅಂಕಗಳನ್ನು ಪಡೆಯಲೇಬೇಕು ಎಂದು ಅತೀವ ಒತ್ತಡ ಹಾಕಿ ಅವರನ್ನು ಶಾಲೆಯಲ್ಲದೆ ಹಲವಾರು ಕೋಚಿಂಗ್ ತರಬೇತಿಗಳಿಗೆ ಸೇರಿಸಿ ಅವರ ಸಹಜ ಬಾಲ್ಯವನ್ನು ಅನುಭವಿಸಲು ಸಮಯವೇ ಇಲ್ಲದಂತೆ ಮಾಡುತ್ತಾರೆ. ನಮ್ಮಲ್ಲಿ ವಿದ್ಯಾದಾನದ ಸಂಸ್ಥೆಗಳು, ಮುಖ್ಯವಾಗಿ ಖಾಸಗಿಯವು ನಾಯಿಕೊಡೆಗಳಂತೆ ಸಂಖ್ಯೆಯಲ್ಲಿ ಹುಟ್ಟುತ್ತಲೇ ಇವೆ. ಇವೆಲ್ಲಾ ಮಕ್ಕಳಿಗೆ ಒಂದನೆಯ ತರಗತಿಯಿಂದಲೇ ಪಾಠ ಪ್ರವಚನಗಳ ಜೊತೆಗೆ ಕ್ರೀಡೆ, ಕರಾಟೆ, ಈಜು, ಕಂಪ್ಯೂಟರ್, ಧ್ಯಾನ, ಯೋಗ, ಸಂಗೀತ, ನೃತ್ಯ ಮುಂತಾದ ಸಕಲವನ್ನೂ ಕಲಿಸುತ್ತೇವೆಂದು ಹೊಗಳಿಕೊಂಡು ಭವ್ಯವಾದ ಕಟ್ಟಡಗಳ ಚಿತ್ರಗಳ ಜೊತೆಗೆ ಪತ್ರಿಕೆ ಮತ್ತು ಸಮೂಹ ಮಾಧ್ಯಮಗಳಲ್ಲಿ ಜಾಹೀರಾತು ನೀಡಿ ಪ್ರಚಾರ ಮಾಡುತ್ತಾರೆ. ಇಲ್ಲಿ ಪ್ರವೇಶ ಪಡೆಯಬೇಕಾದರೆ ಹೆತ್ತ ಅಪ್ಪ ಅಮ್ಮ ಕೂಡಿಟ್ಟ ಹಣವೆಲ್ಲವೂ ಖರ್ಚಾಗುತ್ತದೆ. ಅಂತೂ ಹೇಗೋ ಮಗ/ಮಗಳು ಒಂದು ಪದವಿಪಡೆದು ಕಂಪನಿಯೊಂದರಲ್ಲಿ ಕೆಲಸ ಗಿಟ್ಟಿಸಿಕೊಂಡರೆ ಅಲ್ಲಿಗೆ ತಮ್ಮ ಬದುಕು ಸಾರ್ಥಕವೆಂದು ಪೋಷಕರು ನಿಟ್ಟುಸಿರು ಬಿಡುತ್ತಾರೆ. ಆದರೆ ಈ ಯುವಕ/ಯುವತಿಯರು ಬೆಳಗಿನಿಂದ ಬೈಗಿನವರೆಗೆ ಕಂಪ್ಯೂಟರ್ ಮುಂದೆ ಕುಳಿತು ಜೀತದಾಳುಗಳಂತೆ ವಾರಪೂರ್ತಿ ದುಡಿಯುತ್ತಾರೆ. ವಾರಾಂತ್ಯದಲ್ಲಿ ಸಿಕ್ಕಿದಂತೆ ಹಣವನ್ನು ಖರ್ಚುಮಾಡುತ್ತಾ ಮೋಜುಮಸ್ತಿಗಳಲ್ಲಿ ಕಾಲ ಕಳೆಯುತ್ತಾರೆ. ಬಾಲ್ಯದಿಂದಲೂ ವಾಸ್ತವ ಪ್ರಜ್ಞೆ ಬೆಳೆಸಿಕೊಳ್ಳದೆ ಬಾವಿಯೊಳಗಣ ಕಪ್ಪೆಗಳಂತೆ ಇದ್ದ ಇವರಿಗೆ ಬದುಕಿನ ಮೌಲ್ಯಗಳನ್ನು ಕಟ್ಟಿಕೊಳ್ಳಲು ಸಮಯವಾಗಲೀ ವಿವೇಚನೆಯಾಗಲೀ ಇರುವುದಿಲ್ಲ. ಇದರಿಂದ ಮುಂದೆ ತಮ್ಮ ಪೋಷಕರನ್ನಂತೂ ಗಮನಿಸಲೂ ಆಗದೆ, ತಾವೂ ನೆಮ್ಮದಿಯಿಂದ ಜೀವಿಸಲಾಗದೆ ಅಧಿಕ ಮಾನಸಿಕ ಒತ್ತಡದಲ್ಲಿ ಕಾಲ ಹಾಕುವಂತಾಗಿದೆ. ಇವರ ಗುರಿ ಕಾರು, ಬಂಗಲೆ, ದೊಡ್ಡ ಬ್ಯಾಂಕ್‌ಬ್ಯಾಲೆನ್ಸ್ ಮಾಡುವುದರಲ್ಲಿಯೇ ವ್ಯರ್ಥವಾಗುತ್ತದೆ. ಇದೂ ಕೂಡ ಅಧಿಕವಾದ ಮಾತಾಪಿತೃಗಳ ಮತ್ತು ಯುವ ಜನಾಂಗದ ಹಿರಿಯಾಸೆಯ ದುರಂತವಾಗಿದೆ.


ಈ ಸಂದರ್ಭದಲ್ಲಿ ನನಗೆ ಹಿಂದೆ ಓದಿದ್ದ ಕನ್ನಡ ಕಾವ್ಯವೊಂದರಲ್ಲಿ ಬರುವ ಒಂದು ಅಪೂರ್ವವಾದ ವಾಕ್ಯ ನೆನಪಾಗುತ್ತದೆ. ಅದು ಹರಿಶ್ಚಂದ್ರ ಕಾವ್ಯದಲ್ಲಿ ವಿಶ್ವಾಮಿತ್ರರು ಹೇಳುವ ಮಾತು ”ಹರಿಶ್ಚಂದ್ರಾ ಪಂಚೇಂದ್ರಿಯಗಳಲಿ ನಾಲ್ಕಧಮ ಒಂದಧಿಕವೇ?” ಎಂದು ಪ್ರಶ್ನಿಸುತ್ತಾರೆ. ಒಂದು ದಿನ ಬೇಟೆಯಾಡಿ ಬಂದು ಕಾಡಿನಲ್ಲಿ ಆಶ್ರಯಧಾಮದಲ್ಲಿ ವಿಶ್ರಾಂತಿಗಾಗಿ ಕುಳಿತಿದ್ದ ರಾಜಾ ಹರಿಶ್ಚಂದ್ರನನ್ನು ಧರ್ಮಭ್ರಷ್ಟನ್ನಾಗಿಸಲು ವಿಶ್ವಾಮಿತ್ರರು ರೂಪಿಸುವ ಸಂಚಿದು. ತಾವೇ ಸೃಷ್ಟಿಸುವ ಸುಂದರ ಚಾಂಡಾಲ ಕನ್ಯೆಯರನ್ನು ಅವನ ಬಳಿಗೆ ಕಳುಹಿಸಿ ಅವನ ಮನರಂಜನೆ ಮಾಡುವಂತೆ ಆಜ್ಞಾಪಿಸುತ್ತಾರೆ. ಅವರು ತಮ್ಮ ಗಾನ ನೃತ್ಯಗಳಿಂದ ರಾಜನಿಗೆ ನಿಜಕ್ಕೂ ಮನೋ ಲ್ಲಾಸ ಆಗುವಂತೆ ಮಾಡುತ್ತಾರೆ. ಇದರಿಂದ ಸುಪ್ರೀತನಾದ ರಾಜನು ಅವರಿಗೆ ಸೂಕ್ತ ಬಹುಮಾನ ಕೊಟ್ಟು ಕಳುಹಿಸಿ ಎಂದು ತನ್ನ ಸಿಬ್ಬಂದಿಗೆ ಹೇಳುತ್ತಾನೆ. ಆದರೆ ಆ ಕನ್ಯಾಮಣಿಗಳು ಅದಕ್ಕೊಪ್ಪದೆ ತಮಗೆ ರಾಜನ ಸಂಗವೇ ಬೇಕೆಂದು ಹಟಹಿಡಿಯುತ್ತಾರೆ. ಹರಿಶ್ಚಂದ್ರನು ಅವರು ಚಂಡಾಲ ಕನ್ಯೆಯರು ಹಾಗಾಗಿ ತಾನು ಅವರನ್ನು ಸ್ವೀಕರಿಸಲಾಗದು. ಇದು ನಿಶಿದ್ಧವೆಂದು ನಿರಾಕರಿಸುತ್ತಾನೆ. ಆಗ ದುತ್ತೆಂದು ವಿಶ್ವಾಮಿತ್ರ ಮಹರ್ಷಿ ಅಲ್ಲಿ ಗೋಚರಿಸುತ್ತಾನೆ. ಅವರು ನನ್ನ ಸೃಷ್ಟಿಯಿಂದ ಬಂದವರು, ಆದ್ದರಿಂದ ನನಗೆ ಮಕ್ಕಳ ಸಮಾನರು. ನೀನು ಅವರನ್ನು ಸ್ವೀಕರಿಸಲೇಬೇಕು ಎಂದು ಒತ್ತಾಯಿಸುತ್ತಾ ಮೇಲಿನಂತೆ ಮಾತುಗಳನ್ನು ಹೇಳುತ್ತಾನೆ. ನೀನವರ ಸೌಂದರ್ಯವನ್ನು ಕಣ್ಣಿನಿಂದ ನೋಡಿ ಆನಂದಿಸಿದೆ, ಅವರ ಗಾಯನವನ್ನು ಕಿವಿಯಿಂದ ಕೇಳಿದೆ, ಅವರ ಮೈಗೆ ಪೂಸಿಕೊಂಡ ಸುಗಂಧದ ಕಂಪು ಗಾಳಿಯಲ್ಲಿ ತೇಲಿಬಂದಾಗ ನಿನ್ನ ಮೂಗು ಅದನ್ನು ಆಘ್ರಾಣಿಸಿತು. ಇಷ್ಟಾಗಿ ಅವರ ಸ್ಪರ್ಶ ಮಾತ್ರ ನಿಶಿದ್ದವೇಕೆ? ಎಂದು ಈ ಮಾತುಗಳನ್ನಾಡುತ್ತಾನೆ. ಮುಂದಿನ ಕತೆಯೆಲ್ಲರಿಗೂ ಗೊತ್ತು ವಿಶ್ವಾಮಿತ್ರನ ತಂತ್ರ ಕುತಂತ್ರಗಳೆಲ್ಲವೂ ನಿಷ್ಫಲವಾಗಿ ಅವನು ಪರಾಜಿತನಾಗುತ್ತಾನೆ. ಆದರೆ ಈ ಪ್ರಸಂಗದಲ್ಲಿ ಅಧಿಕ ಪದದ ಸ್ವಾರಸ್ಯ ಮನ ಸೆಳೆಯುತ್ತದೆ.

ಹೀಗೇ ನಮ್ಮ ಸುತ್ತಮುತ್ತಲಿನ ಸಮಾಜದ ಜನರನ್ನು ಅವಲೋಕಿಸುತ್ತಾ ಹೋದರೆ ಅರ್ಥವಾಗುವುದಿಷ್ಟು. ಬದುಕಿನಲ್ಲಿ ಎಲ್ಲವೂ ಇತಿಮಿತಿಯಲ್ಲಿದ್ದರೆ ಸಂತೃಪ್ತಿ, ನೆಮ್ಮದಿ ದೊರೆಯುವುದು. ಇವೇ ನಿಜವಾದ ಬದುಕಿನ ಅರ್ಥ. ಯಾವುದು ‘ಅಧಿಕ’ವಾದರೂ ಬದುಕೇ ನಷ್ಟವಾಗಬಹುದು ಎಚ್ಚರಿಕೆ ಬೇಕು.

ಬಿ.ಆರ್.ನಾಗರತ್ನ, ಮೈಸೂರು

9 Responses

 1. ನಯನ ಬಜಕೂಡ್ಲು says:

  ಸೊಗಸಾಗಿದೆ ಲೇಖನ. ಅಧಿಕ ಪದದ ಬಳಕೆ ಯ ಜೊತೆ ಹಲವಾರು ಬೇರೆ ಉತ್ತಮ ವಿಚಾರಗಳೂ ಇವೆ.

 2. Anonymous says:

  ಹರೇರಾಮ.

 3. SHARANABASAVEHA K M says:

  ಅಧಿಕ ಪದವನ್ನು ಅಧಿಕವಾಗಿ ಬಳಸಿ ಅದರ ಅರ್ಥವನ್ನು ನೀಡುತ್ತಾ ಕೊನೆಗೆ ಹರಿಶ್ಚಂದ್ರ ಕಾವ್ಯದವರೆಗೂ ಹೋಗಿ……. ನದಿಯಂತೆ ಹರಿಯುತ್ತಾ ಹೋಗುತ್ತದೆ ನಿಮ್ಮ ಬರಹ…..ಅದ್ಭುತ ಮೇಡಂ

 4. Padma Anand says:

  ‘ಅಧಿಕ’ ಪದದ ಎಲ್ಲ ರೀತಿಯ ಅರ್ಥವ್ಯಾಪ್ತಿಯನ್ನು ಕೂಲಂಕುಷವಾಗಿ ವಿಶ್ಲೇಷಿಸಿದ ಪ್ರಬುದ್ಧ ಲೇಖನ..

 5. ಶಂಕರಿ ಶರ್ಮ says:

  ಅಧಿಕವಾದರೆ ಅಮೃತವೂ ವಿಷ. ಎಲ್ಲವೂ ಹಿತಮಿತವಾಗಿದ್ದರೇ ಚೆನ್ನ ಅಲ್ಲವೇ? ಸೊಗಸಾದ ಲೇಖನ, ನಾಗರತ್ನ ಮೇಡಂ.

 6. Hema says:

  ಸೊಗಸಾದ ಲೇಖನ,

 7. Too much is too bad
  ಎಂಬ ನಾಣ್ಣುಡಿಯನ್ನು ಸೊಗಸಾಗಿ ಉಣಪಡಿಸಿದ್ದೀರಿ ಹರಿಶ್ಚಂದ್ರನವರೆಗೂ ಹೋಗಿ ಕಥೆಯ ಹಂದರ ವಿಸ್ತಾರವಾಗಿದೆ

 8. ನನ್ನ ಲೇಖನವನ್ನು ಓದಿ ಪ್ರೀತಿ ಯಿಂದ ಪ್ರತಿಕ್ರಿಯೆ ನೀಡುರುವ..ಶರಣಬಸವೇಶ. ಸಾರ್ ಶಂಕರಿ ಮೇಡಂ..
  ಪದ್ಮಾ ಮೇಡಂ.. ಹೇಮಾ ಮೇಡಂ.. ಅವರುಗಳಿಗೆ ಹೃತ್ಪೂರ್ವಕವಾದ ಧನ್ಯವಾದಗಳು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: