ಗಟ್ಟಿಗ ಮಗ ಗರುಡ

Share Button

ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ ‘ ಎಂಬ ಒಂದು ಸೂಕ್ತಿಯು ಪ್ರಚಲಿತವಾಗಿರುವಂತಾದ್ದು. ಜನನಿ ಹಾಗೂ ಜನ್ಮಭೂಮಿಯು ಸ್ವರ್ಗಕ್ಕಿಂತ ಮಿಗಿಲಾದುದಂತೆ, ಹಾಗೆಯೇ ಮಾತೃದೇವೋಭವ, ಪಿತೃದೇವೋಭವ, ಆಚಾರ್ಯ ದೇವೋಭವ ಎನ್ನುತ್ತಾ, ಪ್ರಥಮತಃ ಹೆತ್ತತಾಯಿಗೆ ಮತ್ತೆ ತಂದೆಗೆ, ಆಮೇಲೆ ಗುರುಗಳಿಗೆ ನಮಿಸಿದ ಮೇಲಷ್ಟೇ ಮಿಕ್ಕವರಿಗೆ ಪ್ರಣಾಮ ಮಾಡುವುದು ಹಿಂದೂಗಳಲ್ಲಿ ಸನಾತನದಿಂದಲೇ ಬಂದ ಪದ್ಧತಿ, ಪಿತೃಋಣ, ದೇವಋಣ, ಋಷಿಋಣ ಎಂಬುದು ಋಣತ್ರಯಗಳು ಮನುಷ್ಯನನ್ನು ಬಾಧಿಸುವುದಂತೆ, ಪಿತೃಋಣದಲ್ಲಿ ತಾಯಿಯ ಋಣವೆಂಬುದು ಶ್ರೇಷ್ಠವಾದುದು. ತಾಯಿಯ ಋಣದಿಂದ ಮುಕ್ತರಾಗಲು ಸಾಧ್ಯವಿಲ್ಲ ಎಂಬುದು ಬಲ್ಲವರು ಮಾತು. ಆದರೂ ಕೈ ಮೀರಿ ಸೇವೆ ಮಾಡಿ ಜನ್ಮದಾತೆಯನ್ನು ಪ್ರಸನ್ನಗೊಳಿಸುವುದು ಮಕ್ಕಳ ಕರ್ತವ್ಯ. ಹೆತ್ತ ಮಾತೆಯ ಮನವರಿತು ಸೇವೆ ಮಾಡಿ ಕೃತಕೃತ್ಯರಾದವರನ್ನು ಅದೆಷ್ಟೋ ಮಂದಿಯನ್ನು ನೋಡಿದ್ದೇವೆ. ಅದಕ್ಕೂ ಮಿಗಿಲಾಗಿ ಪುರಾಣೇತಿಹಾಸಗಳಲ್ಲಿ ಓದಿದ್ದೇವೆ. ವೃದ್ಧರೂ ಅಂಧರೂ ಆದ ತಂದೆ-ತಾಯಿಯರನ್ನ ಕಾವಡೆಯಲ್ಲಿ ಕುಳ್ಳಿರಿಸಿ

ಹೆಗಲಿಗೇರಿಸಿಕೊಂಡು ಹೋಗಿ ತೀರ್ಥಯಾತ್ರೆ ಮಾಡಿ ಅವರ ಇಷ್ಟಾರ್ಥ ಈಡೇರಿಸಿದ ಶ್ರವಣಕುಮಾರನ ಪಿತೃಭಕ್ತಿಯನ್ನು ಇದೇ ಅಂಕಣದಲ್ಲಿ ಹಿಂದೆ ಓದಿದ್ದೇವೆ. ಅಂತೆಯೇ ಮಾತೃಭಕ್ತಿಯನ್ನು ಮೆರೆದ ಇನ್ನೋರ್ವನ ಕತೆಯನ್ನು ಈ ಅಂಕಣದಲ್ಲಿ ಇದೀಗ ನೋಡೋಣ.

ಸವತಿಯ ಚಾಕರಿ ಮಾಡುತ್ತಾ ಆಕೆಯ ಸೇವಕಿಯಂತಿರುವ ತನ್ನಮ್ಮನನ್ನು ನೋಡುತ್ತಾನೇ ಮಗ. ಅಮ್ಮನಿಗೆ ಸವತಿಯ ಸೇವೆ ಮಾಡಬೇಕಾಗಿ ಬಂದುದು ಹೇಗೆ? ಈ ಚಾಕರಿ ವೃತ್ತಿ ದೂರೀಕರಿಸುವ ಬಗ್ಗೆ ಚಿಂತಿಸುತ್ತಾನೆ ಮಗ.

ಕಶ್ಯಪ ಮಹಾಮುನಿಗೆ ‘ವಿನತೆ’ ಹಾಗೂ ‘ಕದ್ರು’ ಎಂಬ ಇಬ್ಬರು ಪತ್ನಿಯರು. ಇವರಲ್ಲಿ ವಿನತೆಯ ಮಗನೇ ಗರುಡ, ವಿನತೆ ಮತ್ತು ಕದ್ರು ಅನ್ನೋನ್ಯವಾಗಿದ್ದು ಒಮ್ಮೆ ಜೊತೆಯಾಗಿ ವಾಯುವಿಹಾರಕ್ಕೆ ಹೊರಟರು. ಆಗ ದೇವ-ದಾನವರ ಸಮುದ್ರ ಮಥನದಲ್ಲಿ ಮೂಡಿ ಬಂದ ‘ಉಚ್ಚೈಶ್ರವಸು’ವನ್ನು ದೂರದಲ್ಲಿ ಕಂಡು ಅದರ ಬಣ್ಣದ ಬಗ್ಗೆ ಇಬ್ಬರಿಗೂ ಚರ್ಚೆಯಾಯ್ತು, ಕುದುರೆಯ ಕಾಯವು ಬಿಳಿಯ ಬಣ್ಣವಾಗಿದೆಯೆಂದು ವಿನತೆ ಹೇಳಿದರೆ; ಕದ್ರುವು ಅದಕ್ಕೊಪ್ಪದೆ ಅದರ ಬಾಲವು ಕಪ್ಪು ಬಣ್ಣವಾಗಿದೆಯೆಂದು ವಾದಿಸಿದಳು. ವಾದವು ವಿವಾದಕ್ಕೆ ತಿರುಗಿತು. ಕೊನೆಗೆ ಪಣವೊಡ್ಡಿದರು. ಹೇಗೆಂದರೆ, ಯಾರ ವಾದವು ಸುಳ್ಳಾಗಿರುತ್ತದೆಯೋ ಅವಳು ಮತ್ತೋರ್ವಳ  ದಾಸಿಯಾಗಿರಬೇಕೆಂದು ಅವರೊಳಗೆ ತೀರ್ಮಾನಕ್ಕೆ ಬಂದರು. ಅದರ ಪರೀಕ್ಷೆಯ ಸಮಯವೂ ಬಂತು. ಕದ್ರುವು ಆಕೆಯ ಮಗನಾದ ಕಾರ್ಕೋಟಕನಿಗೆ ವಿಷಯ ತಿಳಿಸಿ ಕುದುರೆಯ ಬಾಲಕ್ಕೆ ಸುತ್ತಿ ನಿಂದು ಬಾಲವು ಕಪ್ಪಾಗಿ ಕಾಣಲು ನೆರವಾಗುವಂತೆ, ತಾನು ಪಣದಲ್ಲಿ ಗೆಲ್ಲಬೇಕೆಂದು ಕಿವಿಗೆ ಊದಿದಳು. ವಿನತೆ ಸೋಲುವಂತ ಹೀಗೆ ಕುತಂತ್ರ ಹೂಡಿದಳು ಕದ್ರು. ಒಪ್ಪಂದ ಪ್ರಕಾರ ವಿನತೆಗೆ ಈಗ ಕದ್ರುವಿನ ದಾಸಿಯಾಗಬೇಕಾಯ್ತು, ಗರುಡನಿಗೆ ತನ್ನತಾಯಿಗಾದ ಅನ್ಯಾಯ ತಿಳಿದು ಬಹಳ ನೋವಾಯ್ತು. ಅವನು ಯೋಚಿಸಿ, ಚಿಂತಿಸಿ ಮಲತಾಯಿಯಾದ ಕದ್ರುವಿನ ಬಳಿಗೂಡಿ `ತಾಯಿ ನನ್ನಮ್ಮನನ್ನು ಸೇವಕಿಯನ್ನಾಗಿ ಮಾಡಿಕೊಂಡಿದ್ದೀರಾ ಇದರಿಂದ ಆಕೆ ವಿಮೋಚನೆಯಾಗಲೇಬೇಕು. ಇದಕ್ಕಾಗಿ ನಾನು ಏನು ಮಾಡಬೇಕು? ನೀವು ಹೇಳಿದಂತೆ ನಿಮ್ಮ ಸೇವೆಯನ್ನು ನಾನು ಮಾಡುವ ತಿಳಿಸಿರಿ’ ಎಂದನು. ಅದಕ್ಕವಳು ನೀನು ಹೋಗಿ ದೇವಲೋಕದಿಂದ ಅಮೃತ ಕಲಶವನ್ನು ತಂದುಕೊಟ್ಟಲ್ಲಿ ಮಾತ್ರ ನಿನ್ನಮ್ಮ ಬಿಡುಗಡೆ ಹೊಂದಲು ಸಾಧ್ಯ’ ಎಂದಳು.

ಗರುಡನು ತನ್ನ ತಂದೆಯಾದ ಕಶ್ಯಪರಲ್ಲಿಗೆ ಹೋಗಿ ಅವರ ಆಶೀರ್ವಾದ ಪಡೆದು ದೇವಲೋಕಕ್ಕೆ ಹೋದನು. ಅಲ್ಲಿ ದೇವೆಂದ್ರನಲ್ಲಿರುವ ಅಮೃತ ರಕ್ಷಕರನ್ನು ಕೊಂದನು. ಸುತ್ತಲೂ ಸಂಚರಿಸುತ್ತಿದ್ದ ಇಂದ್ರನ ವಜ್ರಾಯುಧದ ಹೊಡೆತವನ್ನು ಲಕ್ಷ್ಯ ಮಾಡದೆ,ಅಗ್ನಿಯ ಜ್ವಾಲೆಯನ್ನೂ ಮೀರಿ ಒಳಹೊಕ್ಕು ಅಮೃತ ಕಲಶವನ್ನು ಕೊಂಡೊಯ್ಯುತ್ತಿರುವಾಗ ಇಂದ್ರನು ವಜ್ರಾಯುಧವನ್ನು ಎಸೆಯಲು ಅದಕ್ಕೆ ಗೌರವ ಕೊಡುವುದಕ್ಕಾಗಿ ಗರುಡನು ತನ್ನ ಒಂದು ಗರಿಯನ್ನು ಎಸೆದು ತನ್ನ ಪ್ರಯಾಣವನ್ನು ಮುಂದುವರಿಸಿದನು. ದೇವೇಂದ್ರನು ಗುರುಡನ ಪರಾಕ್ರಮಕ್ಕೆ, ಅವನ ಸಂಸ್ಕೃತಿಗೆ ಮೆಚ್ಚಿಕೊಂಡು ಅಮೃತ ಕಲಶವನ್ನು ಸರ್ಪಗಳ ವಶ ಮಾಡಬೇಡ ಎನ್ನಲು ‘ತನ್ನ ತಾಯಿಯ ದಾಸ್ಯ ವಿಮೋಚನೆಯಾದ ಕೂಡಲೆ ತಾವು ಅಮೃತ ಕಲಶವನ್ನು ಹಿಂತಿರುಗಿ ತರಬಹುದು’ ಎಂದನು.

ಇಂದ್ರನು ‘ಸರ್ಪಗಳು ನಿನ್ನ ಆಹಾರವಾಗಲಿ’ ಎಂದು ವರವನ್ನಿತ್ತನು. ಗರುಡನು ಅಮೃತವನ್ನು ತಂದಿತ್ತಾಗ ಕದ್ರುವು ತನ್ನ ಮುಂದಿದ್ದ ದರ್ಭಾಸ್ಮರಣದ ಮೇಲಿಡಲು ಹೇಳಿದಳು. ಮತ್ತೆ ‘ನಿನ್ನ ತಾಯಿಯು ಇಂದಿನಿಂದ ದಾಸ್ಯದಿಂದ ಬಿಡುಗಡೆ ಹೊಂದಿದ್ದಾರೆ’ ಎಂದಳು. ಅಲ್ಲದೆ ತನ್ನ ಮಕ್ಕಳೊಡನೆ ‘ಸ್ನಾನ ಮಾಡಿ ಬಂದು ಅಮೃತವನ್ನು ಕುಡಿಯಿರಿ’ ಎಂದಳು. ಆ ಸರ್ಪಗಳೆಲ್ಲ ಸ್ನಾನಕ್ಕೆ ಹೋದಾಗ ಇಂದ್ರನು ಬಂದು ಅಮೃತ ಕಲಶವನ್ನು ಅಪಹರಿಸಿ ಹಿಂತಿರುಗಿ ಒಯ್ದನು. ಸರ್ಪಗಳು ಸ್ನಾನ ಮಾಡಿ ಬರುವಾಗ ಅಮೃತ ಕಲಶ ಮಾಯವಾಗಿತ್ತು. ಆಸೆಯಿಂದ ದರ್ಭೆಯನ್ನು ನೆಕ್ಕಲು ಅವುಗಳ ನಾಲಿಗೆಯು ಸೀಳಾಯ್ತಂತೆ. ಗರುಡನ ಸಾಮರ್ಥ್ಯವನ್ನು ಮೆಚ್ಚಿದ ವಿಷ್ಣುವು ಈತನಿಗೆ ‘ಸುಪರ್ಣ’ನೆಂದು ಹೆಸರನ್ನೂ ನೀಡಿದ್ದಲ್ಲದೆ ತನ್ನ ವಾಹನವನ್ನಾಗಿ ಮಾಡಿಕೊಂಡನು. ಅಲ್ಲದೆ ಅವನನ್ನು ತನ್ನ ಧ್ವಜದಲ್ಲಿಟ್ಟುಕೊಂಡು ವಿಷ್ಣುವು ಗರುಡಧ್ವಜನಾದನು. ಹೀಗೆ ತಾಯಿಯನ್ನು ದಾಸ್ಯವಿಮೋಚನೆ ಮಾಡಿಸಿದ ಗಟ್ಟಿಗ ಮಗ ರುಡನಿಗೆ ತಾಯಿಯ ಪ್ರೀತಿ ಮಾತ್ರವಲ್ಲದೆ ವಿಷ್ಣು ಸಾನ್ನಿಧ್ಯವೂ ದೊರೆತು ಆತನ ಪರಾಕ್ರಮ, ಹೆಸರು ಆ ಚಂದ್ರಾರ್ಕವಾಯಿತು. ಗರುಡನಿಗೆ ಸುಮುಖ, ಸುನಾಮ, ಸುನೇತ್ರ, ಸುವಚ್, ಸುರುಕ್, ಸುಬಲ ಮೊದಲಾದ ಮಕ್ಕಳಿದ್ದರು. ಇಂದಿನ ತಿರುಪತಿ ಬೆಟ್ಟಕ್ಕೆ ‘ಗರುಡಾಚಲ’ ಎಂಬ ಹೆಸರಿದೆ.

ಶ್ರೀ ಮಹಾವಿಷ್ಣುವು ವರಾಹವತಾರ ಮಾಡಿ ಹಿರಣ್ಯಾಕ್ಷನನ್ನು ಕೊಂದ ಮೇಲೆ ಅದೇ ವೇಷದಿಂದ ವೈಕುಂಠಕ್ಕೆ ಹೋಗಲಾರದೆ ಈಗಿನ ತಿರುಮಲೆ ಬೆಟ್ಟದಲ್ಲಿದ್ದು ವೈಕುಂಠದಲಿದ್ದ ತನ್ನ ಕ್ರೀಡಾ ಪರ್ವತವನ್ನು ಗರುಡನಿಂದ ತರಿಸಿಕೊಂಡು ಅಲ್ಲೇ ನೆಲೆಸಿದನಂತೆ. ಅತ್ತ ವೈಕುಂಠದಲ್ಲಿ ಲಕ್ಷ್ಮೀಯು ಆಕೆಯು ಆಕಾಶ ರಾಜನಿಗೆ ‘ಪದ್ಮಾವತಿ’ ಎಂಬ ಹೆಸರಿನಿಂದ ಮಗಳಾಗಿ ಹುಟ್ಟಿ ಶ್ರೀನಿವಾಸನಾಗಿ ನಿಂತ ವಿಷ್ಣುವನ್ನುವಿವಾಹವಾದಳು ಎಂಬ ಪುರಾಣ ಕತೆಯಿದೆ.

-ವಿಜಯಾ ಸುಬ್ರಹ್ಮಣ್ಯ, ಕುಂಬಳೆ

6 Responses

 1. ಎಂದಿನಂತೆ ಪುರಾಣಕಥೆ ಓದಿಸಿಕೊಂಡು ಹೋಯಿತು ಹಾಗೇ ಮರೆತಿದ್ದ ಅಂಶಗಳನ್ನು ನೆನಪಿಗೆ ತಂದುಕೊಟ್ಟಿತು ವಿಜಯಾಮೇಡಂ.

 2. Anonymous says:

  ಹೇಮಮಾಲಾ ಹಾಗೂ ಸುರಹೊನ್ನೆ ಓದುಗ ಬಳಗಕ್ಕೆ ಧನ್ಯವಾದಗಳು.

 3. ನಯನ ಬಜಕೂಡ್ಲು says:

  ಚೆನ್ನಾಗಿದೆ

 4. ಶಂಕರಿ ಶರ್ಮ says:

  ತನ್ನ ತಾಯಿಯನ್ನು ದಾಸ್ಯದಿಂದ ಬಿಡುಗಡೆಗೊಳಿದ, ಪರಾಕ್ರಮಿ ಗರುಡನ ಕಥೆ ತುಂಬಾ ಚೆನ್ನಾಗಿದೆ ವಿಜಯಕ್ಕ.

 5. ಮಾತೃಭಕ್ತನಾದ ಗರುಡನ ಕಥೆ ಚೆನ್ನಾಗಿ ಮೂಡಿ ಬಂದಿದೆ

 6. Anonymous says:

  ಗಟ್ಟಿಗ ಗರುಡನ ಪರಾಕ್ರಮ, ಮಾತೃಭಕ್ತಿಯೊಂದಿಗೆ ಅವನಿಗೆ ಲಭಿಸಿದ ಫಲಾಫಲಗಳೊಂದಿಗೆ ಯಾವುದೇ ಕಾಲಕ್ಕೂ ಕದ್ರುವಿನಂತಹ ಸಣ್ಣ ಮನಸ್ಸಿನ ಜನರೂ ಇರುತ್ತಾರೆಂಬ ಕಟುಸತ್ಯವೂ ಅನಾವರಣಗೊಂಡಿದೆ ಸೊಗಸಾದ ಪುರಾಣ ಕಥನದಲ್ಲಿ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: