ಪುಸ್ತಕ ಪರಿಚಯ: ಪ್ರೀತಿಯ ಕರೆ ಕೇಳಿ (ಲಘು ಬರಹಗಳ ಸಂಗ್ರಹ)

Share Button
ನಯನ ಬಜಕೂಡ್ಲು

ಪುಸ್ತಕ :- ಪ್ರೀತಿಯ ಕರೆ ಕೇಳಿ (ಲಘು ಬರಹಗಳ ಸಂಗ್ರಹ)
ಲೇಖಕರು :- ಡಾ. ಗಾಯತ್ರಿ ದೇವಿ ಸಜ್ಜನ್
ಪ್ರಕಾಶಕರು :-ಜಿ ಬಿ ಬಿ ಪಬ್ಲಿಕೇಶನ್ಸ್
ಪುಟಗಳು :- 156
ಬೆಲೆ :- 150/.

‘ಸುರಹೊನ್ನೆ‘ ಅಂತರ್ಜಾಲ  ಪತ್ರಿಕೆಯ ಸಂಪಾದಕಿ ಹೇಮಮಾಲಾ ಬಿ ಮೈಸೂರು ಇವರು ಬರೆದ ಮುನ್ನುಡಿ ಪುಸ್ತಕದೊಳಗಿನ ತಿರುಳಿನ ಸೂಕ್ಷ್ಮ ಪರಿಚಯವನ್ನು ನೀಡುತ್ತದೆ.   ಡಾ. ಗಾಯತ್ರಿ ದೇವಿ ಸಜ್ಜನ್ ಅವರ ಪರಿಚಯವಾದದ್ದು ಸುರಹೊನ್ನೆ ಪತ್ರಿಕೆಯಲ್ಲಿ ಅವರ  ಬರಹಗಳು ಬರಲಾರಂಬಿಸಿದಾಗ.  ಆ ಬರಹಗಳೆಲ್ಲವೂ ಒಂದರಿಂದ ಒಂದು ಚಂದ ಹಾಗೂ ಮಾಹಿತಿ ಪೂರ್ಣ.  ಆ ಬರಹಗಳನ್ನು ಓದುವಾಗ ಅಂದುಕೊಂಡದ್ದಿದೆ,  ಇವರು ಇವನ್ನೆಲ್ಲ ಪುಸ್ತಕ ರೂಪದಲ್ಲಿ ಪ್ರಕಟಿಸಿದ್ದರೆ ಬಹಳಷ್ಟು ಮಂದಿ
ಓದುಗರನ್ನು ತಲುಪಬಹುದೇನೋ ಅಂತ.  ಇವರ ಅನುಭವಗಳ ಬುತ್ತಿ ಬಹುಶ:  ಎಂದಿಗೂ ಬರಿದಾಗದಷ್ಟು ಅಗಾಧವಾದದ್ದು ಅಂತ ಇವರ ಲೇಖನಗಳನ್ನು ಓದುವಾಗ ಮನಸ್ಸಿಗೆ ಅನ್ನಿಸುತ್ತದೆ.

ಮೊದಲ ಲೇಖನವೇ ಹೃದಯಸ್ಪರ್ಶಿ –” ಅಮ್ಮ ಎಂಬ ಜೀವನಾಮೃತ”.  ಮಕ್ಕಳಾಗಿ ನಮಗೆ ಅಮ್ಮನ ಮನಸ್ಸು,  ಅವಳು ನಮಗಾಗಿ ಪಟ್ಟ ಕಷ್ಟ,  ಬೆಳೆಸಲು ಪಟ್ಟ ಶ್ರಮ ಇದು ಯಾವುದು ಅರ್ಥ ಆಗುವುದಿಲ್ಲ.  ಆದರೆ ನಾವು ಅಮ್ಮ ಆದಾಗ ನಮ್ಮ ಅಮ್ಮನ ಬೆಲೆ, ಅವಳ ತ್ಯಾಗ ಎಲ್ಲವೂ ಅರ್ಥವಾಗತೊಡಗುತ್ತದೆ. ಮಕ್ಕಳ ಸ್ಥಾನದಲ್ಲಿ ಇದ್ದಾಗ ನಾವು ನಮ್ಮ  ಆಟ, ಹುಡುಗಾಟಗಳಲ್ಲೇ ಕಳೆದು ಹೋಗಿರುತ್ತೇವೆ. ಅದೇ ಅಮ್ಮನ ಸ್ಥಾನಕ್ಕೆ ಬಂದಾಗ ನಮ್ಮ ಹೆತ್ತವಳ ಬೆಲೆ ಅರಿವಾಗುತ್ತದೆ.  ಆದರೆ  ಕಾಲ ಮಿಂಚಿ ಹೋಗಿರುತ್ತದೆ. ಸಮಯ ಯಾರನ್ನು ಕಾಯುವುದಿಲ್ಲವಲ್ಲ? ಒಂದು ಹಂತದಲ್ಲಿ ನಾವು ಅವಳಿಗಾಗಿ ಸಮಯ ನೀಡಬೇಕಿತ್ತು ಅನ್ನುವ ಪಾಪಪ್ರಜ್ಞೆಯೊಂದಿಗೆಯೇ ಬದುಕು ಮುಗಿಯುವುದಿದೆ.  ಎಷ್ಟು ವಿಚಿತ್ರ ಈ ಜೀವನ?.

ಸಂಸಾರ ಎಷ್ಟೇ ಸುಂದರವಾಗಿದ್ದರೂ ಅಲ್ಲಿ ಗಂಡ ಹೆಂಡತಿಯ ನಡುವೆ ಪರಸ್ಪರ ಅಸೂಯೆ ಅನ್ನುವ ಬೀಜ ಒಂದು ಮೊಳಕೆಯೊಡೆದರೆ ಸಾಕು, ಆ ಸಂಸಾರ ಛಿದ್ರ ಛಿದ್ರ. ಹೆಚ್ಚಾಗಿ ಗಂಡು ಹೆಣ್ಣಿನ ಏಳಿಗೆಯನ್ನು ಸಹಿಸಲಾರ. ಹೆಣ್ಣು ತನಗಿಂತ ಉನ್ನತ ಸ್ಥಾನಕ್ಕೆ ತಲುಪಿದಲ್ಲಿ ಅಸಹನೆ ಅವನನ್ನು ಆವರಿಸಿಕೊಳ್ಳತೊಡಗುತ್ತದೆ.  ಕಾರಣವಿಲ್ಲದೆ ಅವನು ಕೀಳರಿಮೆಯಲ್ಲಿ ಮುಳುಗುತ್ತಾನೆ. ಇದು ಎಲ್ಲರ ಬದುಕಿಗೆ ಅನ್ವಯಿಸುವುದಿಲ್ಲ. ತನ್ನ ಬಾಳ ಸಂಗಾತಿಯ ಏಳಿಗೆಯನ್ನು ಪ್ರೋತ್ಸಾಹಿಸುವ ಮನಸ್ಥಿತಿಯವರೂ ಇರುತ್ತಾರೆ.  ಆದರೆ ಬಹಳ ಅಪರೂಪ. ಸುಂದರ ಸಂಸಾರವೊಂದು  ಅಸೂಯೆಯ ಬಲೆಗೆ ಸಿಲುಕಿ ವಿನಾಶದ ಅಂಚನ್ನು ತಲುಪಿದ ಹೃದಯ ವಿದ್ರಾವಕ ಕಥೆ.
ತೆರೆಗಳಿಲ್ಲದ ಸಾಗರವೆಲ್ಲಿದೆ? ಕಷ್ಟ ನೋವುಗಳಿಲ್ಲದ  ಬದುಕು ಎಲ್ಲಿದೆ?. ಇಲ್ಲಿ ಒಬ್ಬೊಬ್ಬರದ್ದು ಒಂದೊಂದು ತರ ಜೀವನ.  ನೋವು ಕಷ್ಟ ಅನ್ನುವುದು ಇಲ್ಲಿ ಪ್ರತಿಯೊಬ್ಬರನ್ನು ತಟ್ಟಿಯೇ  ತಟ್ಟುತ್ತದೆ.  ಕೆಲವರು ಇದಕ್ಕೆ ಹೆದರಿ ಜೀವವನ್ನೇ ಕಳೆದುಕೊಳ್ಳುತ್ತಾರೆ,  ಕೆಲವರು ಆ ಕಷ್ಟಗಳನ್ನೆಲ್ಲ ಎದುರಿಸಿ ಗೆದ್ದು ಹೊಸ ಜೀವನ ನಡೆಸುತ್ತಾರೆ.  ಹೆದರಿ ಸಾಯುವ ಪ್ರಯತ್ನ ಮಾಡುವುದಕ್ಕಿಂತ ಎದುರಿಸಿ ಹೊಸ ಬದುಕು ಕಟ್ಟಿಕೊಳ್ಳುವುದರಲ್ಲಿ ಬುದ್ದಿವಂತಿಕೆ ಇದೆ. ಈ ಜೀವ,  ಜೀವನ ಎರಡು ನಮಗೆ ದೇವರಿತ್ತ ಉಡುಗೊರೆ. ಅದನ್ನು ಜಾಣತನದಿಂದ  ಕಾಯ್ದುಕೊಂಡು ನೆಮ್ಮದಿಯನ್ನು ಹೊಂದುವುದು ನಮ್ಮ ಕೈಯಲ್ಲಿದೆ.  ಕಷ್ಟಗಳನ್ನು  ಎದುರಿಸಿ,  ಗೆದ್ದು ಪಕ್ವತೆ ಬಂದಾಗ ನಾವು ಇನ್ನೊಬ್ಬರ ಬದುಕಿಗೆ ಉದಾಹರಣೆಯಾಗುವಷ್ಟು ಸಬಲರಾಗುತ್ತೇವೆ.

ಹೆಣ್ಣನ್ನು ಅಬಲೆ ಎಂದು  ಕೀಳಾಗಿ ಕಾಣುತ್ತಿದ್ದ ಕಾಲವೊಂದು  ಇತ್ತು. ಹೆಣ್ಣಾದ ಅತ್ತೆಯೇ ತನ್ನ ಸೊಸೆಗೆ  ಚಿತ್ರಹಿಂಸೆ ನೀಡುತ್ತಿದ್ದ ದಿನಗಳಿದ್ದವು. ಕೆಲವೆಡೆ ಇಂದಿಗೂ  ಈ ದೃಶ್ಯಗಳು  ಕಾಣಸಿಗುತ್ತವೆ. ಆದರೆ ಹೆಣ್ಣು ಬದುಕಿನಲ್ಲಿ ದೃಢ ನಿರ್ಧಾರ ಮಾಡಿ ಎದ್ದು ನಿಂತರೆ ಅವಳನ್ನು ತಡೆಯಲು  ಯಾರಿಂದಲೂ ಸಾಧ್ಯವಿಲ್ಲ. ಅವಳು ತೊಡುವ ಛಲ ಅವಳ ಬದುಕನ್ನು ಅವಳೇ ಗಟ್ಟಿಯಾಗಿ ರೂಪಿಸಿಕೊಳ್ಳುವಷ್ಟು ಅವಳನ್ನು ಗಟ್ಟಿಗೊಳಿಸುತ್ತದೆ. ದೃಢ ಸಂಕಲ್ಪ  ಬೇಕು ಅಷ್ಟೇ. ಈ ಹಾದಿಯಲ್ಲಿ ಅವಳನ್ನು ನರಕಕ್ಕೆ ತಳ್ಳುವ ಮಂದಿಯೂ ಇದ್ದಾರೆ, ಕೈ ಹಿಡಿದು ಮೇಲೆತ್ತಿ ಸಹಾಯಕ್ಕೆ ನಿಲ್ಲುವ ಹೆಣ್ಣು ಮಕ್ಕಳೂ ಇದ್ದಾರೆ.

“ತೊಟ್ಟಿಲಿನಿಂದ  ಸಮಾಧಿಯವರೆಗೆ ನಡೆದಿತ್ತು ಈ ಬದುಕಿನ ಪಯಣ.  ಮನದಲ್ಲಿ ಹಲವು ಪ್ರಶ್ನೆಗಳು ಕಾಡುತ್ತಿದ್ದವು- ನಾನು ನಾನೆಂಬ ಅಹಂಕಾರದಲ್ಲಿ ಬಂಧಿಯಾಗಿರುವೆವು ನಾವೆಲ್ಲಾ. ಹಣ ಮತ್ತು ಅಧಿಕಾರದ ಹಿಂದೆ ಓಡುತ್ತಿರುವೆವು ನಾವೆಲ್ಲ.  ದ್ವೇಷ ಅಸೂಯೆಗಳಿಂದ ಎಲ್ಲವನ್ನು ಎಲ್ಲರನ್ನೂ ನಾಶ ಪಡಿಸಲು  ಹೊರಟಿರುವೆವು ನಾವೆಲ್ಲ” – ” ಜವರಾಯ ಬಂದು ಕರೆದಾಗ”  ಅನ್ನುವ ಅಂಕಣದ ಸಾಲುಗಳು. ಎಷ್ಟೊಂದು ಅರ್ಥಪೂರ್ಣ. ಮಾನವನ ಮೂಢತನಕ್ಕೆ ಹಿಡಿದ ಕನ್ನಡಿಯಂತಿದೆ.

ಒಟ್ಟು 30 ಅಂಕಣಗಳನ್ನು ಒಳಗೊಂಡ ಬರಹಗಳ ಸಂಗ್ರಹ ಡಾ.  ಗಾಯತ್ರಿ ದೇವಿ ಸಜ್ಜನ್ ಅವರ “ಪ್ರೀತಿಯ ಕರೆ ಕೇಳಿ”  ಕೃತಿ. ಮೊದಲ 10 ಬರಹಗಳು ಹೆಣ್ಣಿನ ಅಂತರಂಗ,  ಬವಣೆ,ಬದುಕನ್ನು ಓದುಗರ ಮುಂದೆ ತೆರೆದಿಟ್ಟರೆ ಉಳಿದ 20 ಲೇಖನಗಳು ಬೇರೆ ಬೇರೆ ಜಾಗಗಳು, ಪ್ರಕೃತಿ ಸೌಂದರ್ಯ ಹೀಗೆ ಬೇರೆ ಬೇರೆ ವಿಚಾರಗಳ ಗುಚ್ಛ.  ಮೊದಲ 10 ಬರಹಗಳು ಹೃದಯಸ್ಪರ್ಶಿ ಹಾಗೂ ಉಳಿದವುಗಳು  ಉಲ್ಲಾಸ ತುಂಬುವಂತಹವುಗಳು.


“ನಾ ಕಂಡ ಆದಿ ಯೋಗಿ” -ಡಾ  ಗಾಯತ್ರಿ ದೇವಿ ಸಜ್ಜನ್ ಅವರ ಇನ್ನೊಂದು  ಕೃತಿ. ಅದರೊಳಗೇನಿದೆ  ಅನ್ನುವುದನ್ನು ಇನ್ನೂ ಓದಬೇಕಿದೆ. ಡಾ  ಗಾಯತ್ರಿ ದೇವಿ ಸಜ್ಜನ್ ಅವರಿಂದ ಇನ್ನಷ್ಟು ಉತ್ತಮ ಕೃತಿಗಳು ಬರೆಯಲ್ಪಡಲಿ ಅನ್ನುವ ಹಾರೈಕೆಯೊಂದಿಗೆ…..

 – ನಯನ ಬಜಕೂಡ್ಲು

4 Responses

 1. ನನ್ನ ಪುಸ್ತಕ ‘ಪ್ರೀತಿಯ ಕರೆ ಕೇಳಿ’ ಪರಿಚಯವನ್ನು ಮಾಡಿಕೊಟ್ಟಿರುವ ನಯನವರಿಗೆ ನನ್ನ ಧನ್ಯವಾದಗಳು
  ಲೇಖನಗಳನ್ನು ಪ್ರಕಟಿಸಿ, ಪುಸ್ತಕಕ್ಕೆ ಮುನ್ನುಡಿ ಬರೆದಿರುವ ಹೇಮಮಾಲಾ ಅವರಿಗೆ ನನ್ನ ವಂದನೆಗಳು.

 2. ಈ ಪುಸ್ತಕ ನಾನೂ ಓದಿರುವುದರಿಂದ ಮತ್ತೊಂದು ಸಾರಿ ಮೆಲಕು ಹಾಕುವಂತಾಯಿತು ಆ ಕೃತಿಯ ತಿರುಳನ್ನು ತಮ್ಮ ದೇ ನಿಲುವಿನಲ್ಲಿ ಅಭಿಪ್ರಾಯ ನೀಡಿರುವುದು..ಚೆನ್ನಾಗಿ ದೆ ವಂದನೆಗಳು ನಯನಮೇಡಂ

 3. ಶಂಕರಿ ಶರ್ಮ says:

  ಕೃತಿಯ ವಿಮರ್ಶಾತ್ಮಕ ಬರಹ ಬಹಳ ಚೆನ್ನಾಗಿ
  ಮೂಡಿಬಂದಿದೆ ನಯನಾ ಮೇಡಂ. ಯಾವಾಗಲೂ ನೀವು ಬರೆಯುವ ಪುಸ್ತಕ ವಿಮರ್ಶೆ ಬಹಳ ಚೆನ್ನಾಗಿರುತ್ತದೆ.

 4. Hema says:

  ಚಿಕ್ಕ, ಚೊಕ್ಕ ಪುಸ್ತಕ ಪರಿಚಯ..ಚೆನ್ನಾಗಿದೆ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: