ಅವಿಸ್ಮರಣೀಯ ಅಮೆರಿಕ – ಎಳೆ 77

Share Button


(ಹಿಂದಿನ ಸಂಚಿಕೆಯಿಂದ ಮುಂದುವರಿದುದು…)
ಸಾಲ್ಮೋನ್ ಮೀನುಗಳೊಡನೆ….

R.V.ಯಲ್ಲಿ ಅಡುಗೆ ತಯಾರಿಸಿ, ಊಟ ಮುಗಿಸಿ, ಸಂಜೆ ಹೊತ್ತಿಗೆ ಡೆನಾಲಿಯ ಅತ್ಯಂತ ವಿಶೇಷವಾದ ತಾಣವೊಂದಕ್ಕೆ ಭೇಟಿ ಕೊಡುವುದಿತ್ತು… ಸಾವೇಜ್ ನದಿ ತೀರ (Savage River). ಅಲಾಸ್ಕಾದ ಜೀವ ಜಗತ್ತಿನ ಅತ್ಯಂತ ಬಲವಾದ ಕೊಂಡಿಯಾದ ಜಗತ್ಪ್ರಸಿದ್ಧ Salmon ಮೀನುಗಳ ಜೀವನ ಪಯಣದ ದೃಶ್ಯವನ್ನು ನೋಡುವುದಿತ್ತು! ಸಾಮಾನ್ಯವಾಗಿ ಪಕ್ಷಿಗಳು ಸಂತಾನಾಭಿವೃದ್ಧಿಗಾಗಿ ಸಾವಿರಾರು ಮೈಲು ಪಯಣಿಸುವುದನ್ನು ಕೇಳಿದ್ದೇವೆ.  ಆದರೆ ಮೀನುಗಳು ಈ ತರಹ ವಲಸೆ ಹೋಗುವುದು ತಿಳಿದಿರಲಿಲ್ಲ. ಇವುಗಳ ಜೀವನ ಶೈಲಿಯು ಬಹಳ ವಿಚಿತ್ರವಾಗಿದೆ. ಇವು ಸಿಹಿ ನೀರಿನಲ್ಲಿ ಜನಿಸಿ, ಸಮುದ್ರದಲ್ಲಿ ಬೆಳೆದು, ಪುನ: ಸಂತಾನೋತ್ಪತ್ತಿಗಾಗಿ ಸಿಹಿ ನೀರಿನತ್ತ  ವಲಸೆ ಹೋಗುತ್ತವೆ. ಈ ದೀರ್ಘ ಪಯಣದಲ್ಲಿ ದಾರಿ ಮಧ್ಯದಲ್ಲೇ ಸಾವಿರಾರು ಮೀನುಗಳು ಸತ್ತು ಹೋಗಿಯೋ ಅಥವಾ ನರ ರಾಕ್ಷಸರ ಪಾಲಾಗಿಯೋ ನಾಶವಾಗುತ್ತವೆ. ಅಳಿದುಳಿದ ಅತ್ಯಲ್ಪ ಸಂಖ್ಯೆಯ ಮೀನುಗಳು ಗುರಿ ತಲಪುವುದರಲ್ಲಿ ಸಫಲವಾಗುತ್ತವೆ!  ಸಾಧಾರಣ ಮುಷ್ಟಿ ಗಾತ್ರದ ಈ Salmon ಮೀನುಗಳು, ತಮ್ಮ ಸಂತಾನಾಭಿವೃದ್ಧಿಗಾಗಿ ಸಿಹಿ ನೀರಿನಲ್ಲಿ ಮೊಟ್ಟೆ ಇಡಲು, ಸಾಗರದಿಂದ, ಅದಕ್ಕೆ ಸೇರುವ ನದಿಯ ನೀರಿನ ಹರಿವಿನ ವಿರುದ್ಧ ದಿಕ್ಕಿನಲ್ಲಿ ಗುಂಪು ಗುಂಪಾಗಿ, ದಿಟ್ಟವಾಗಿ ಈಜುತ್ತಾ, ಆಗಾಗ ಚಿಮ್ಮಿ ಮೇಲಕ್ಕೆ ನೆಗೆಯುತ್ತಾ ಮುಂದುವರಿಯುವುದನ್ನು ಕಣ್ಣಾರೆ ಕಂಡು ಆಶ್ಚರ್ಯಪಟ್ಟೆವು. ಈ ನೆಗೆಯುವ ಹಂತದಲ್ಲಿ ಹೆಚ್ಚಿನವುಗಳು ಹಕ್ಕಿಗಳ ಪಾಲಾಗುವುವು. ಮೀನುಗಳ ಈ ಸುದೀರ್ಘ ಪಯಣದಲ್ಲಿ ಅಳಿದುಳಿದ ಮೀನುಗಳ ಸಂಖ್ಯೆ ಅತ್ಯಲ್ಪವೆಂದೇ ಹೇಳಬಹುದು. ಜೊತೆಗೆ, ಅಳಿವೆಯ ಈ ಪ್ರದೇಶದಲ್ಲಿ ‘ಮೀನುಗಳನ್ನು ಹಿಡಿಯುವುದು ನಿಷಿದ್ಧ` ಎಂಬ ಫಲಕವಿದ್ದರೂ, ಗಾಳ ಹಾಕಿ ಮೀನು ಹಿಡಿಯುವುದನ್ನು ಕಂಡು ಆಶ್ಚರ್ಯದೊಂದಿಗೆ ಖೇದವೆನಿಸಿತು. ಆದರೆ, ಇಲ್ಲಿಯ ಜನರ ಪ್ರಮುಖ ಆಹಾರ ಹಾಗೂ ಆದಾಯದ ಮೂಲವೂ ಇದೇ ಆದ್ದರಿಂದ ಮರುಕವೂ ಆಯಿತೆನ್ನಿ.

ಗಂಟೆ ರಾತ್ರಿ ಒಂಭತ್ತು ಆದರೂ ಸಂಜೆ ಸೂರ್ಯ ಆಗಸದಲ್ಲಿ ಕೆಂಪಗೆ ಹೊಳೆಯುತ್ತಿದ್ದ!  ಅಲ್ಲೇ ಪಕ್ಕದಲ್ಲಿರುವ ಹಳೆಯ ರೈಲು ನಿಲ್ದಾಣದಲ್ಲಿ ಅಡ್ಡಾಡಿ, ಪುಟ್ಟ ಹೂದೋಟದ ಬೆಂಚಿನಲ್ಲಿ ಕುಳಿತು ತಣ್ಣಗಿನ ಗಾಳಿಯಲ್ಲಿ ಮೈಯೊಡ್ಡಿ ಡೆನಾಲಿಯ ಸುಂದರ ಸಂಜೆಯನ್ನು(ರಾತ್ರಿಯನ್ನು?!) ಸವಿಯುತ್ತಾ ಕುಳಿತವರಿಗೆ ಸಮಯದ ಪರಿವೆ ಇರಲಿಲ್ಲ…. ನಮ್ಮ ಚಲಿಸುವ ಮನೆಗೆ ಹಿಂತಿರುಗಿದಾಗ ಸಮಯ ರಾತ್ರಿ ಗಂಟೆ ಹನ್ನೆರಡು…ಎಲ್ಲೆಡೆ ಸಂಜೆಯ ತಣ್ಣನೆಯ ಬೆಳಕು ಹರಡಿತ್ತು!

ಸುಂದರ ಬಂದರ ಸೆವಾರ್ಡ್ (Seward)

ಜುಲೈ  2ನೇ ತಾರೀಕು… ಡೆನಾಲಿಯಲ್ಲಿ ಎರಡನೇ ದಿನದ ಸಂಭ್ರಮ! ರಾಷ್ಟ್ರೀಯ ರಕ್ಷಿತ ಪ್ರದೇಶವಾದ ಪ್ರಮುಖ ನಗರ ಸೆವಾರ್ಡ್ (Seward)ನತ್ತ ನಮ್ಮ ಮನೆ ಓಡಿತು. ಅಂಕರೇಜ್ ನಿಂದ ಸುಮಾರು 120 ಮೈಲು ದೂರವಿರುವ ಈ ಬಂದರು ಪ್ರದೇಶವು ಮೂರೂ ಕಡೆಗಳಲ್ಲಿ ಮಹಾಸಾಗರಗಳಿಂದ ಸುತ್ತುವರಿದ ಈ ಪರ್ಯಾಯ ದ್ವೀಪವಾಗಿದ್ದು, ಫಿಯೋರ್ಡ್ಸ್ (Fjords) ರಾಷ್ಟ್ರೀಯ ಉದ್ಯಾನವನಕ್ಕೆ ಮುಖ್ಯದ್ವಾರದಂತಿದೆ. ಕೆನೈ ಪರ್ಯಾಯ ದ್ವೀಪದ ಫಿಯೋರ್ಡ್ಸ್ (Fjords) ಕೊಲ್ಲಿಯಲ್ಲಿರುವ ಈ ಪ್ರದೇಶವು ಹಲವಾರು ವಿಶೇಷತೆಗಳನ್ನು ಒಳಗೊಂಡ ಅತ್ಯಂತ ಸುಂದರ ತಾಣ. ಆರ್ಕ್ಟಿಕ್ ಮಹಾಸಾಗರದ ಕೊಲ್ಲಿ ಪ್ರದೇಶದ ಬೇರಿಂಗ್ ಸಮುದ್ರದ ಜಲಸಂಧಿ ಪ್ರದೇಶವು, ಜಲಪ್ರಯಾಣಿಕರಿಗೆ ಕೊಲ್ಲಿಯೊಳಗೆ ಪ್ರವೇಶಿಸುವ ಮಹಾದ್ವಾರವೂ ಹೌದು. ಸುಮಾರು 2,800 ಜನರು ವಾಸಿಸುವ ಈ ಪ್ರದೇಶವು, ಹಾರ್ಡಿಂಗ್ ಮತ್ತು ಮೆಕೆನ್ಲಿ ಪರ್ವತಗಳ ಮೇಲಿನಿಂದ ನೇರವಾಗಿ ಸಮುದ್ರಕ್ಕೆ ಬೀಳುತ್ತಿರುವ ಹಿಮಪ್ರವಾಹ ಮಾತ್ರವಲ್ಲದೆ, ಸಮುದ್ರದ  ಈ ಕೊಲ್ಲಿ ಪ್ರದೇಶದ ಸುತ್ತಲೂ  ಆಗಸದೆತ್ತರ ಸೆಟೆದು ನಿಂತಿರುವ ಪರ್ವತಗಳ ಸಾಲು…ಇವೆಲ್ಲವೂ ಜಗತ್ತಿನೆಲ್ಲೆಡೆಯ ಛಾಯಾಗ್ರಾಹಕರನ್ನು ತನ್ನೆಡೆಗೆ ಸೆಳೆಯುತ್ತದೆ. ಇಲ್ಲಿಯ ಆಳಸಮುದ್ರ, ತೊಂದರೆ ನೀಡುವ ಮಂಜುಗಡ್ಡೆ ರಹಿತ ಬಂದರು, ಸಾರಿಗೆಗಾಗಿ ಒದಗುವ ರೈಲು ಮತ್ತು ವಿಮಾನ ಸಂಪರ್ಕಗಳ ಅನುಕೂಲತೆಗಳು ನಗರ ಪ್ರದೇಶ ಮತ್ತು ನಾಡಿನ ಒಳಭಾಗಗಳಿಗೆ ಸಂಪರ್ಕ ಕಲ್ಪಿಸುತ್ತವೆ.  ಇಂತಹ ಅತ್ಯಪೂರ್ವ, ರಮಣೀಯ ಸ್ಥಳದಲ್ಲಿರುವ ಆಳವಾದ ಸಮುದ್ರದಲ್ಲಿ ಸಾಕಷ್ಟು ತಿಮಿಂಗಿಲಗಳು, ಸಮುದ್ರ ಸಿಂಹ ಇತ್ಯಾದಿಗಳು ಕಾಣಸಿಗುತ್ತವೆ.

ಹಿಮಪ್ರವಾಹ(Glacier)

ಒಂದಂತಸ್ತಿನ ಮಿನಿ ಕ್ರೂಸ್ ಗಳಲ್ಲಿ ನೀರ ಮೇಲಿನ ವಿಹಾರ ಅತ್ಯಂತ ಆನಂದದಾಯಕ. ಸುಮಾರು 350 ಜನರನ್ನು ಹೊತ್ತೊಯ್ಯಬಲ್ಲ ಇದು ಆಳ ಸಮುದ್ರಗಳತ್ತ ನಮ್ಮನ್ನು ಕರೆದೊಯ್ದು, ಹಾರುವ ತಿಮಿಂಗಿಲ, ಕಡಲಲ್ಲಿ ವಾಸಿಸುವ ವಿವಿಧ ರೀತಿಯ ಪ್ರಾಣಿ, ಪಕ್ಷಿಗಳು, ಸಾಗರಕ್ಕೆ ನಿಧಾನವಾಗಿ ಸೇರುತ್ತಿರುವ ಅಗಾಧ ಹಿಮಪ್ರವಾಹದ ವಿಹಂಗಮ ನೋಟಗಳ ದರ್ಶನ ಮಾಡಿಸಿದುದು ನಿಜಕ್ಕೂ ಅವಿಸ್ಮರಣೀಯ!  

ನಮ್ಮ ನಾಲ್ಕು ಮನೆಗಳು ಡೆನಾಲಿಯ ಈ ಪುಟ್ಟ ಬಂದರಿನ ಬಳಿ ಬಂದಾಗ ಬೆಳಗ್ಗೆ ಒಂಭತ್ತು ಗಂಟೆ. ಕ್ರೂಸ್ ಗೆ ಟಿಕೆಟ್ ಖರೀದಿಸಿ, ಅದಾಗಲೇ ಇದ್ದ ಉದ್ದನೆಯ ಸಾಲಿನ ಹಿಂದೆ ನಿಂತೆವು. ಖಾಲಿಯಾದ ಕ್ರೂಸ್ ಬರಲು ಅರ್ಧಗಂಟೆ ಕಾಯಬೇಕಾಯಿತು. ಅದು ಬಂದ ತಕ್ಷಣ ನನ್ನ ಸಂಭ್ರಮಕ್ಕೆ ಎಣೆ ಇಲ್ಲದಂತಾಯಿತು… ಅತ್ಯಂತ ರೋಮಾಂಚಕಾರಿ ಅನುಭವಕ್ಕೆ ಸಿದ್ಧಳಾದೆ!

ಒಂದು ಮೇಲಂತಸ್ತಿನ ಈ ಕ್ರೂಸ್ ನಲ್ಲಿರುವ, ಮೂರು ಮಂದಿ  ಆರಾಮವಾಗಿ ಕುಳಿತುಕೊಳ್ಳಬಹುದಾದಂತಹ ಮೆತ್ತನೆಯ ಆಸನಗಳ ಎದುರು ಭಾಗದಲ್ಲಿ ತಿಂಡಿ ತಿನ್ನಲು ಚಂದದ ಉದ್ದನೆಯ ಮೇಜಿದೆ. ಪ್ರವಾಸಿಗರು ಎಲ್ಲಿ ಬೇಕೆಂದರಲ್ಲಿ ಕುಳಿತುಕೊಳ್ಳಬಹುದು. ಅಲ್ಲಿರುವ ವಿಶಾಲವಾದ ಕೌಂಟರಿನಲ್ಲಿ ಲಭ್ಯವಿರುವ ತಿಂಡಿ ತಿನಿಸುಗಳನ್ನು ಖರೀದಿಸಬಹುದು. ಪೂರ್ತಿ ಕ್ರೂಸ್ ನಲ್ಲಿ ಎಲ್ಲಿ ಬೇಕೆಂದರಲ್ಲಿ ಸುತ್ತಾಡಬಹುದು. ಶುಚಿಯಾದ ಈ ಕ್ರೂಸ್ ನಲ್ಲಿ ಎಲ್ಲಾ ಮೂಲಭೂತ ಸೌಕರ್ಯಗಳೂ ಲಭ್ಯವಿದ್ದು, ಒಮ್ಮೆಗೆ ಸುಮಾರು ಇನ್ನೂರು ಮಂದಿ ಪಯಣಿಸಬಹುದು. ಎತ್ತರದಿಂದ ವೀಕ್ಷಣೆಯು ಬಹಳ ಚೆನ್ನಾಗಿರುವುದರಿಂದ, ನಾನು ಮೇಲಿನ ಅಂತಸ್ತಿನ ಒಂದು ಪಕ್ಕದಲ್ಲಿ ನಿಂತುಕೊಂಡೇ ನಮ್ಮ ಸಮುದ್ರ ಪಯಣದ ಸೊಬಗನ್ನು ಸವಿಯಲು ಆರಂಭಿಸಿದೆ….

PC: Internet

ಬಂದರಿನಿಂದ ಹೊರಟ ನಮ್ಮ ಬೃಹತ್ ದೋಣಿಯು ಅಗಾಧ ಅಳಿವೆಯ ಮೂಲಕ ಹಾದು ಹೋದಾಗ ಅದರ ಇಕ್ಕೆಲಗಳಲ್ಲಿರುವ, ನೀರಿನಲ್ಲಿ ಬೆಳೆಯುವ ದಟ್ಟ ಹಸಿರಿನ ಕಾಡು ಕಣ್ತುಂಬಿತು. ನಿಧಾನವಾಗಿ ವಿಶಾಲವಾದ ಕೊಲ್ಲಿಯೊಳಗೆ ಪ್ರವೇಶಿಸಿದಾಗ ಗಾಢನೀಲಿಯ ಆಳವಾದ ನೀರಿನ ಅಗಾಧತೆಗೆ  ದಂಗಾಗಿ ಹೋದೆ! ಮೊದಲಿಗೆ, ತಿಮಿಂಗಿಲಗಳಿರುವ ಆಳ ಸಮುದ್ರದತ್ತ ಕ್ರೂಸ್ ಚಲಿಸಿದಾಗ ನಮ್ಮೆಲ್ಲರ ಕಣ್ಣುಗಳು ಅವುಗಳನ್ನು ಹುಡುಕಲಾರಂಭಿಸಿದವು. ಹತ್ತು ನಿಮಿಷಗಳ ಕಾಲ ಅಲ್ಲೇ ಸುತ್ತಾಡುತ್ತಾ ತಿಮಿಂಗಲಗಳ ನಿರೀಕ್ಷೆಯಲ್ಲಿರುವಾಗಲೇ ಹತ್ತಿರದಲ್ಲೇ ರಭಸದಿಂದ ಮೇಲಕ್ಕೆ ಚಿಮ್ಮುವ ನೀರು ಗೋಚರಿಸಿತು….ಅದೋ ಹಿಂದಿನಿಂದ ಇನ್ನೆರಡು…ಪಕ್ಕದಲ್ಲಿ ಮತ್ತೆರಡು…!! ಹತ್ತಾರು ತಿಮಿಂಗಿಲಗಳು ನಿರ್ಭೀತಿಯಿಂದ ಸಾಗರ ಸಾಮ್ರಾಜ್ಯದಲ್ಲಿ ವಿಹರಿಸುತ್ತಿದ್ದವು! ಬಹು ದೂರದಲ್ಲಿ ಗಿಡ ಮರಗಳು ತುಂಬಿದ ಪುಟ್ಟ ದ್ವೀಪವು ಕಾಣಿಸುತ್ತಿತ್ತು. ಅಳಿವೆಯಾದ್ದರಿಂದ, ಕಣ್ಣಳತೆಯ ದೂರದಲ್ಲಿ ಆಗಸದೆತ್ತರಕ್ಕೆ ಚಾಚಿ ನಿಂತ ಪರ್ವತಶ್ರೇಣಿಯ ತಪ್ಪಲು ಸಾಗರದಾಳದಲ್ಲಿ ನೆಟ್ಟಿತ್ತು. ಎತ್ತರೆತ್ತರ ಅಲೆಗಳೇ ಇಲ್ಲದ ನೀಲಿ ನೀರನ್ನು ಬಗೆದು ನಮ್ಮ ಕ್ರೂಸ್ ವೇಗವಾಗಿ ಸಾಗುವಾಗ, ಅದರ ಹಿಂಬದಿಯಲ್ಲಿ, ಅಗಾಧ ಬೆಳ್ನೊರೆಯ ರಸ್ತೆ ನಿರ್ಮಾಣವಾಗಿ ಮಾಯವಾಗುತ್ತಿತ್ತು. ನಾನು ನಿಂತುಕೊಂಡೇ ಈ ರೋಚಕ ದೃಶ್ಯಗಳನ್ನು ಕಣ್ತುಂಬಿಕೊಳ್ಳುತ್ತಿದ್ದೆ. …  

(ಮುಂದುವರಿಯುವುದು…..)

ಈ ಪ್ರವಾಸಕಥನದ ಹಿಂದಿನ ಎಳೆ ಇಲ್ಲಿದೆ: https://www.surahonne.com/?p=39217

-ಶಂಕರಿ ಶರ್ಮ, ಪುತ್ತೂರು

6 Responses

 1. ನಯನ ಬಜಕೂಡ್ಲು says:

  Very nice

 2. ಪ್ರವಾಸ ಕಥನ ಎಂದಿನಂತೆ ಓದಿಸಿಕೊಂಡು ಹೋಯಿತು ಅದಕ್ಕೆ ಪೂರಕವಾದ ಚಿತ್ರ ಗಳು ಮನಕ್ಕೆ ಮುದತಂದಿತು.. ಶಂಕರಿ ಮೇಡಂ

 3. Hema says:

  ಹಲವಾರು ವಿಶಿಷ್ಟ ಪ್ರವಾಸದ ಅನುಭವಗಳನ್ನು ಚಿತ್ರಿಸಿದ ಬರಹ . ಸೊಗಸಾಗಿ ಮೂಡಿ ಬರುತ್ತಿದೆ.

  • ಶಂಕರಿ ಶರ್ಮ says:

   ನಿಮ್ಮ ಪ್ರೀತಿಯ ಪ್ರತಿಕ್ರಿಯೆಗೆ ಧನ್ಯವಾದಗಳು ಮಾಲಾ. ಬರಹಗಳನ್ನು ಸೊಗಸಾಗಿ ಪ್ರಕಟಿಸಿ ಪ್ರೋತ್ಸಾಹಿಸುತ್ತಿರುವ ನಿಮಗೆ ಹೃತ್ಪೂರ್ವಕ ಕೃತಜ್ಞತೆಗಳು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: