ಅವಿಸ್ಮರಣೀಯ ಅಮೆರಿಕ – ಎಳೆ 78

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು…)
ಕರಗುತ್ತಿರುವ ಹಿಮಪರ್ವತದ ಮುಂದೆ…  

ಸ್ವಲ್ಪ ಹೊತ್ತಿನಲ್ಲೇ ,ದೊಡ್ಡ ದೊಡ್ಡ ಮಂಜುಗಡ್ಡೆಯ ತುಂಡುಗಳು ನೀರಿನಲ್ಲಿ ತೇಲಿ ಬರುತ್ತಿರುವುದು ಗೋಚರಿಸಿತು.  ಕ್ರೂಸ್ ಮುಂದಕ್ಕೆ ಚಲಿಸಿದಂತೆ ಕಂಡ ಅಚ್ಚರಿಯ ದೃಶ್ಯವು ನನ್ನನ್ನು ದಿಗ್ಮೂಢಳನ್ನಾಗಿಸಿತು! ಮುಂಭಾಗದಲ್ಲಿರುವ ಹಿಮಪರ್ವತವೊಂದರಿಂದ ಅಗಾಧ ಗಾತ್ರದ ಹಿಮ ಬಂಡೆಗಳು, ಪದರಗಳು ಕುಸಿಯುತ್ತಾ ಜಾರಿ ಸಮುದ್ರದ ನೀರಿನೊಳಗೆ ದಢಾರ್ ಎಂದು ಬೀಳುವ ಸದ್ದು ಭಯ ಹುಟ್ಟಿಸುವಂತಿತ್ತು! ಅವುಗಳು ಸಣ್ಣ ದೊಡ್ಡ ಗಾತ್ರದ ಹಿಮದ ತುಂಡುಗಳಾಗಿ ಅಲ್ಲಿರುವ ವಿಶಾಲ ನೀರಿನ ಹರಿವಿನ ಮೇಲೆ ನೂರಾರು ಹತ್ತಿಯ ಮೂಟೆಗಳನ್ನು ತೇಲಿ ಬಿಟ್ಟಂತೆ ಕಾಣುತ್ತಿತ್ತು! ಇದು ನೋಡಲು ನಯನ ಮನೋಹರವಾಗಿದ್ದರೂ ವಿಚಿತ್ರವೆನಿಸುವಂತಿತ್ತು. ನಮ್ಮ ಕ್ರೂಸನ್ನು ಆ ಪರ್ವತದಿಂದ ಸುಮಾರು ಎರಡು ಕಿ.ಮೀ. ದೂರದಲ್ಲಿ ನಿಲ್ಲಿಸಲಾಯಿತು. ನಮ್ಮಂತೆಯೇ ವೀಕ್ಷಣೆಗೆ ಬಂದ ಹತ್ತಾರು ಕ್ರೂಸ್ ಗಳು ಅಕ್ಕಪಕ್ಕ ತೇಲಾಡುತ್ತಿದ್ದವು. ಕೆಲವು ಸಾಹಸಿ ಪ್ರವಾಸಿಗರು ದೋಣಿಯಲ್ಲಿ ಕುಳಿತು ಹಿಮಬಂಡೆ ಬೀಳುವ ಜಾಗದ ಸನಿಹಕ್ಕೆ ಹೋಗುವ ಸಾಹಸ ಮಾಡುತ್ತಿದ್ದುದನ್ನು ಕಂಡು ನಮಗೆ ನಿಜಕ್ಕೂ ಗಾಬರಿಯಾಯಿತು. ಕ್ಷಣ ಕ್ಷಣವೂ ಕೇಳುವ, ಹಿಮದ ಪದರವು ಕಿತ್ತು ನೀರಿಗೆ ಬೀಳುವ ಶಬ್ದವು ಅತ್ಯಂತ ಭೀಕರವೆನಿಸುತ್ತಿತ್ತು…ಎದೆಗೇ ಬಡಿದಂತೆ ಭಾಸವಾಗುತ್ತಿತ್ತು! ಸವೆಯುತ್ತಿರುವ ಹಿಮಪರ್ವತವು ತನ್ನ ಆಯುಷ್ಯವನ್ನು ದಿನೇ ದಿನೇ ಕಳೆದುಕೊಳ್ಳುತ್ತಿರುವಂತೆ ಅನಿಸಿ, ಮನದಲ್ಲಿ ನೋವಿನ ಎಳೆಯೊಂದು ಹಾದು ಹೋಯಿತು! ಜಗತ್ತಿನಲ್ಲಿ ಮಾನವನ ಎಣೆಯಿಲ್ಲದ ದುರಾಸೆಯು, ಭೂಮಿಯ ರಕ್ಷಣಾಕವಚವಾದ ಓಜ಼ೋನ್ ಪದರವು ನಶಿಸುವುದಕ್ಕೆ ಕಾರಣವಾಗಿ,  ಭೂಮಿಗೆ ಅಪಾಯವು ಸನ್ನಿಹಿತವಾದ ಪ್ರತ್ಯಕ್ಷ ಕರಾಳ ದರ್ಶನವು ನನಗಾಗತೊಡಗಿತು. ಕಣ್ಣಂಚು ಒದ್ದೆಯಾಗಿ ನೋವಿನ ನಿಟ್ಟುಸಿರು ಬಿಡುವುದಷ್ಟೇ ಸಾಧ್ಯವಾಯಿತು. ಅಗಾಧ ನೀರಿನ ಸೆಲೆಯಾದ ಹಿಮಪರ್ವತವು ಕರಗುತ್ತಾ, ತನ್ನ ವಿನಾಶದ ಅಂಚಿಗೆ ಬಂದು ನಿಂತಿರುವ ಕ್ರೂರ ಸತ್ಯ ಕಣ್ಣ ಮುಂದೆ ನರ್ತಿಸುತ್ತಿತ್ತು!

ಸುಮಾರು ಒಂದು ತಾಸು ಈ ರುದ್ರ ರಮಣೀಯ, ಆದರೆ ಭೀಕರವಾದ ದೃಶ್ಯವನ್ನು ನೋಡುತ್ತಾ ಮೈಮರೆತೆವು. ಆಗಲೇ, ಕ್ರೂಸಿನ ಸಿಬ್ಬಂದಿಗಳು ತೇಲುತ್ತಿದ್ದ ಹಿಮದ ಕಲ್ಲುಗಳನ್ನು ಬಲೆ ಬೀಸಿ ಹಿಡಿದು, ಪ್ರವಾಸಿಗರಿಗೆ ನೀಡಿದರು. ಅದನ್ನು ಕೈಗೆತ್ತಿಕೊಂಡು ನಾವೆಲ್ಲಾ ಮಕ್ಕಳಂತೆ ಸಂಭಮಿಸಿದ್ದೇ ಸಂಭ್ರಮಿಸಿದ್ದು. ಅಲ್ಲಿಂದ ಹಿಂತಿರುಗಿದಾಗ ಮಧ್ಯಾಹ್ನ ಸೂರ್ಯನ ಬಿಸಿಲು ಎಲ್ಲೆಡೆ ಹರಡಿ ಚಳಿಯನ್ನು ದೂರ ಮಾಡಿಬಿಟ್ಟಿತ್ತು.R V ಗೆ ಹಿಂತಿರುಗಿದರೂ ಅಡುಗೆ ಮಾಡುವಷ್ಟು ಸಮಯವಿಲ್ಲದ ಕಾರಣ ಯಾವುದಾದರೂ ಹೋಟೆಲಿಗೆ ಶರಣು ಹೋಗಲೇ ಬೇಕಿತ್ತು. ನಮ್ಮಂತೆಯೇ ಬಂದ ಪ್ರವಾಸಿಗರಿಂದ, ಅಲ್ಲಿದ್ದ ಒಂದೆರಡು ಪುಟ್ಟ ಹೋಟೆಲ್ ಗಳಲ್ಲಿ ಜನಸಂದಣಿ ಬಹಳ ಹೆಚ್ಚಾಗಿತ್ತು.ಆದ್ದರಿಂದ ಅಲ್ಲಿ ಅದಕ್ಕಾಗಿ ಕಾಯುವುದು ಕಷ್ಟವೆನಿಸಿತು. ಆ ಕೆಲಸವನ್ನು ಅಳಿಯನಿಗೆ ಒಪ್ಪಿಸಿ ನಾವು R V ಗೆ ಹಿಂತಿರುಗಿದೆವು. ಅವನು ತಂದ ಪಿಜ್ಜಾವು ನಮಗೆ ಅಷ್ಟೊಂದು ಇಷ್ಟವಾಗದಿದ್ದರೂ ಬೇರೇನೂ ಗತಿ ಇಲ್ಲದ್ದರಿಂದ ಅದನ್ನೇ ಹಣ್ಣು ಜೊತೆ ತಿಂದು ಹೊಟ್ಟೆ ತುಂಬಿಸಿಕೊಂಡೆವು. ಮಕ್ಕಳು, ಅಲ್ಲೇ ಪಕ್ಕದಲ್ಲಿದ್ದ ಮಕ್ಕಳ ಆಟದ ತಾಣದಲ್ಲಿ ಜೋಕಾಲಿ, ಜಾರುಬಂಡಿಗಳಲ್ಲಿ ಆಟವಾಡಿದರು.. ನಾನು ಸಿಕ್ಕಿದ ಅವಕಾಶವನ್ನು ಹೊಸ ಜಾಗದಲ್ಲಿ ದೀರ್ಘ ನಡಿಗೆಗೆ ಮೀಸಲಿಟ್ಟೆ. ಬಿಸಿಲಿದ್ದರೂ, ತಣ್ಣನೆಯ ನೆರಳಿನಲ್ಲಿ,ಸ್ವಚ್ಛ, ನೇರ ರಸ್ತೆ ಪಕ್ಕ ಒಬ್ಬಳೇ ನಡೆಯುತ್ತಾ ಒಂದರ್ಧ ಗಂಟೆ ಸಮಯವನ್ನು ಕಳೆದೆ.

ರಾತ್ರಿಗೆ ತಂಗಲು ಅಲ್ಲಿಂದ ಸ್ವಲ್ಪ ದೂರದಲ್ಲಿರುವ ತಂಗುದಾಣಕ್ಕೆ ಹೊರಟೆವು. ಮಾರ್ಗ ಮಧ್ಯೆ ಒಂದು ವಿಚಿತ್ರವನ್ನು ಗಮನಿಸಿದೆವು. ರಸ್ತೆಯ ಪಕ್ಕದಲ್ಲೇ ಇರುವ ಸಮುದ್ರದ ಅಳಿವೆ ಪ್ರದೇಶದಲ್ಲಿ ನೀರಿನ ಹರಿವು ಇದ್ದಕ್ಕಿದ್ದಂತೆ ಬಹಳಷ್ಟು ಏರುಪೇರಾಗುತ್ತಿತ್ತು. ಮಾತ್ರವಲ್ಲದೆ, ನೀರು ಶುಚಿಯಾಗಿರದೆ ಕೆಸರಿನಿಂದ ಕೂಡಿತ್ತು. ಈ ನೀರು ಆಗಾಗ ಪಕ್ಕದಲ್ಲಿರುವ ರಸ್ತೆ ಮೇಲೂ ಹರಿಯುತ್ತಿತ್ತು. ನೀರಿನ ಈ ಅಸಹಜ ಏರಿಳಿತವನ್ನು ಆಯಾಯ ಸಮಯಕ್ಕೆ ಕರಾರುವಕ್ಕಾಗಿ ದಾಖಲಿಸಿಕೊಳ್ಳಲಾಗುತ್ತಿತ್ತು. ಅದನ್ನು ವೀಕ್ಷಿಸುತ್ತಾ ಅಲ್ಲಿ ಸ್ವಲ್ಪ ಸಮಯನ್ನು ಕಳೆದೆವು.

ಮುಂದೆ, ನಮ್ಮ ಮನೆಗಳು ಸಾಗರದ ಅಳಿವೆಯ ಕರಾವಳಿಯಲ್ಲಿರುವ ಒಂದು ಚಂದದ ತೋಪಿನ ಮಧ್ಯೆ ಇರುವ ತಂಗುದಾಣಕ್ಕೆ ತಲಪಿದವು. ಪಕ್ಕದಲ್ಲಿ, ಸ್ಪರ್ಶಿಸಲು ಕಷ್ಟವಾಗುವಂತಹ  ತಣ್ಣನೆ ಕೊರೆಯುತ್ತಾ ತುಂಬಿ ಹರಿಯುವ ಸಣ್ಣ ತೊರೆಯು ಅಳಿವೆಗೆ ಸೇರುತ್ತಿತ್ತು. ಹಿಂಭಾಗದಲ್ಲಿ ಆಗಸಕ್ಕೆ ಮೈಚಾಚಿ ನಿಂತ ದಟ್ಟನೆಯ ಮಂಜು ಮುಸುಕಿದ ಪರ್ವತ. ಅನತಿ ದೂರದಲ್ಲಿ ವಿಶಾಲವಾಗಿ ಹರಡಿರುವ ಅಳಿವೆಯ ತುಂಬು ಜಲರಾಶಿ…! ನಮ್ಮಲ್ಲೆರ RVಗಳು ಜೊತೆಯಾಗಿ ಸೇರಿದ ಕೂಡಲೇ ಮಕ್ಕಳೆಲ್ಲಾ ಸೇರಿ ತಮ್ಮ ಆಟವಾಡಲು ತೊಡಗಿದರೆ, ಮಹಿಳೆಯರು ಅಡುಗೆ ತಯಾರಿಯಲ್ಲಿ ಮುಳುಗಿದೆವು.  ಮರುದಿನ  ಬೆಳಗ್ಗಿನ ಉಪಾಹಾರ ಮುಗಿಸಿಯೇ  ಅಲ್ಲಿಂದ ಹೊರಡುವುದಿತ್ತು. ಸಾಕಷ್ಟು ಚಳಿಯಿದ್ದರೂ, ತಮ್ಮ ಪುಟ್ಟ ಮಕ್ಕಳು ಅತ್ತರೂ ಬಿಡದೆ, ಹರಿಯುವ ಶೀತಲ ನೀರಲ್ಲಿ ಮುಳುಗಿಸಿ ತೆಗೆದು ಅಪ್ಪಂದಿರು ಖುಷಿಪಟ್ಟರು! ನಮ್ಮ ಅಡುಗೆ ಪಾತ್ರೆಗಳನ್ನು ಶುಚಿಗೊಳಿಸಲು ತೊರೆಯ ನೀರು ಬಹಳ ಉಪಯೋಗವಾದರೂ, ನೀರಿನ ರಭಸಕ್ಕೆ ನಾವೆಲ್ಲಿ ಕೊಚ್ಚಿ ಹೋಗುವೆವೋ ಎಂಬ ಭಯ ಕಾಡಿದ್ದಂತೂ ಸುಳ್ಳಲ್ಲ! ಮರುದಿನ ಇನ್ನೂ ಬಹಳ ದೊಡ್ಡದಾದ ಹಿಮಪಾತವನ್ನು ವೀಕ್ಷಿಸಲು ಹೋಗುವುದಿತ್ತು……ಅದೇ ಯೋಚನೆಯಲ್ಲೇ ನಿದ್ದೆಗೆ ಜಾರಿದೆವು…

(ಮುಂದುವರಿಯುವುದು…..)

ಈ ಪ್ರವಾಸಕಥನದ ಹಿಂದಿನ ಎಳೆ ಇಲ್ಲಿದೆ: https://www.surahonne.com/?p=39273

-ಶಂಕರಿ ಶರ್ಮ, ಪುತ್ತೂರು

4 Responses

  1. ಎಂದಿನಂತೆ ಪ್ರವಾಸ ಕಥನ ಓದಿಸಿಕೊಂಡು ಹೋಯಿತು..ನಾವು ನಿಮ್ಮ ಜೊತೆಗೆ ಪ್ರವಾಸದ ಸುಖ ಅನುಭವಿಸುವ ಅನುಭವ ಆಗುತ್ತಿದೆ ಮೇಡಂ

  2. ನಯನ ಬಜಕೂಡ್ಲು says:

    ಚೆನ್ನಾಗಿದೆ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: