ದೇವರ ಮನೆಗೆ ಹೋಗೋಣ ಬನ್ನಿ ಹೆಜ್ಜೆ – 2

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)

ನಮ್ಮ ಮುಂದಿನ ಪ್ರವಾಸಿ ತಾಣ ‘ಬೆಟ್ಟದ ಬೈರವೇಶ್ವರ’. ಈ ದೇಗುಲ ಸಕಲೇಶಪುರದಿಂದ 35 ಕಿ.ಮೀ. ದೂರದಲ್ಲಿದ್ದು, ಬೈರವನು ಈ ಪ್ರದೇಶವನ್ನು ಸಂರಕ್ಷಿಸುವ ದೈವವೆಂಬ ನಂಬಿಕೆ ಇದೆ. ಈ ಜನರ ಗೌಜು, ಗದ್ದಲ ಬೇಡ ಎಂದೆನ್ನುತ್ತಾ ಬೈರವ ಬೆಟ್ಟದ ನೆತ್ತಿಯ ಮೇಲೆ ಕುಳಿತಿದ್ದ. ಕಾರು ನಿಲ್ಲಿಸಿದವರು ಬೆಟ್ಟವನ್ನು ಹತ್ತ ತೊಡಗಿದೆವು, ಕಾಡಿನ ಮಧ್ಯೆ ಸುಮಾರು ಮೂರು ಕಿ.ಮೀ. ನಡೆಯಬೇಕಿತ್ತು. ಆನೆಗಳು ಓಡಾಡುವ ಹಾದಿ ಇದು, ಐದು ಗಂಟೆಯ ಹೊತ್ತಿಗೇ ಅಲ್ಲಿಂದ ಇಳಿದು ಬಂದು ಬಿಡಿ ಎಂದು ಅಲ್ಲಿದ್ದ ಸ್ಥಳಿಯರೊಬ್ಬರು ಎಚ್ಚರಿಕೆ ನೀಡಿದರು. ಈ ಗುಡ್ಡ ಬೆಟ್ಟಗಳ ನಡುವೆ ತನ್ನ ಧಡೂತಿ ದೇಹ ಹೊತ್ತುಕೊಂಡು ಆನೆ ತಿರುಗಾಡುವುದಾದರೂ ಹೇಗೆ ಎಂಬ ಅನುಮಾನ ಮನದಲ್ಲಿ ಮೂಡಿತ್ತು. ನಮ್ಮ ರಕ್ಷಣೆಗೆಂದು ಪಕ್ಕದಲ್ಲಿದ್ದ ಗಿಡಗಳಿಂದ ಒಂದು ಕೋಲು ಮುರಿದುಕೊಂಡೆ, ಮಗಳು ನಕ್ಕಳು, ‘ಅಮ್ಮಾ ನಿನ್ನ ಹೆಬ್ಬೆರಳ ಗಾತ್ರದ ಕೋಲಿನಿಂದ ಆನೆಯನ್ನು ಓಡಿಸುವೆಯಾ?’ ಅವಳು ಹೇಳಿದ್ದರಲ್ಲೂ ಸತ್ಯ ಇತ್ತು, ಆದರೆ ಕೈಲೊಂದು ಕೋಲಿದ್ದರೆ ಮನಸ್ಸಿಗೊಂದು ಧೈರ್ಯ ಅಲ್ಲವೇ? ಎರಡು ಕಿ.ಮೀ. ನಡೆಯುವ ಹೊತ್ತಿಗೇ ಸಾಕು ಸಾಕೆನಿಸಿತ್ತು, ಅಲ್ಲಲ್ಲಿ ಮರಗಳ ತಂಪಾದ ನೆರಳಿತ್ತು, ಮತ್ತೆ ಕೆಲವೆಡೆ ಬಿಸಿಲು. ಮನೆಯವರು ಉಸ್ಸಪ್ಪಾ ಎಂದು ಮರದ ನರಳಿನಲ್ಲಿ ಕುಳಿತುಬಿಟ್ಟರು, ನಾನು ಬೈರವನ ದರ್ಶನ ಮಾಡಲೇಬೇಕೆಂಬ ಛಲದಿಂದ ಮುನ್ನೆಡೆದೆ.

ಇನ್ನೂ ಅರ್ಧ ಕಿ.ಮೀ. ಇರುವಾಗ ಕಾಲುಹಾದಿಯ ಬಲಭಾಗದಲ್ಲಿ ಬೆಟ್ಟದ ಬೈರವೇಶ್ವರ ದೇಗುಲಕ್ಕೆ ದಾರಿ ಎಂಬ ಫಲಕ ತೂಗು ಹಾಕಿದ್ದರು. ಅಲ್ಲಿಂದ ಮೆಟ್ಟಿಲುಗಳು ಇದ್ದವು. ‘ಮೆಟ್ಟಿಲು ಸರಿಯಿಲ್ಲ, ಹೆಚ್ಚು ಆಯಾಸವಾಗುವುದು, ಈ ದಾರಿಯಲ್ಲಿಯೇ ಮುಂದೆ ಹೋಗಿ’ ಎಂದು ಸಲಹೆ ನೀಡಿದರು ಎದುರಿಗೆ ಸಿಕ್ಕ ಪ್ರವಾಸಿಗರು. ಅಷ್ಟು ಮೇಲೆ ಹೋಗಿ ಕುಳಿತ ಬೈರವನನ್ನು ಮನಸ್ಸಿನಲ್ಲಿಯೇ ನಿಂದಿಸುತ್ತಾ ಕಡಿದಾದ ಹಾದಿಯನ್ನು ಏರತೊಡಗಿದೆ. ಬೈರವನ ದೇಗುಲ ತಲುಪಿದಾಗ ಗಂಟೆ ನಾಲ್ಕು. ಬೆಟ್ಟದ ನೆತ್ತಿಯ ಮೇಲೆ ಆರು ನೂರು ವರ್ಷಗಳ ಹಿಂದೆ ನಿರ್ಮಿಸಲಾದ ಕದಂಬರ ಶೈಲಿಯ ವಾಸ್ತುಶಿಲ್ಪದಲ್ಲಿ ನಿರ್ಮಿಸಲಾಗಿರುವ ಪುರಾತನ ದೇಗುಲ ಇಂದು ಶಿಥಿಲಾವಸ್ಥೆ ತಲುಪಿತ್ತು. ದೇಗುಲದ ಬಾಗಿಲು ಬಂದಾಗಿತ್ತು, ಬಾಗಿಲ ಬಳಿ ಇದ್ದ ರಂಧ್ರದಲ್ಲಿ ಇಣುಕು ಹಾಕಿದೆ, ಕತ್ತಲು, ಏನೂ ಕಾಣಲಿಲ್ಲ, ಬೈರವ ಕತ್ತಲಲ್ಲಿ ಕರಗಿ ಹೋಗಿದ್ದ. ಮನಸ್ಸಿಗೆ ತುಸು ಬೇಸರವಾಯಿತು. ಬೈರವನ ದರ್ಶನ ಮಾಡಲು ಎಷ್ಟು ಶ್ರಮಪಟ್ಟು ಬಂದೆ, ಆದರಿಲ್ಲಿ ದೇಗುಲದ ಬಾಗಿಲು ಹಾಕಿತ್ತು. ಹಲವು ಚಾರಣಿಗರು ದೇಗುಲದ ಮುಂದೆ ಕಾಣುತ್ತಿದ್ದ ಪಾಂಡವರ ಬೆಟ್ಟವನ್ನು ಏರುವ ಸಾಹಸ ಮಾಡುತ್ತಿದ್ದರು. ಕೆಲವರು ದೂರದ ಬೆಟ್ಟದ ನೆತ್ತಿಯ ಮೇಲೆ ನಿಂತು ಹೆಮ್ಮೆಯಿಂದ ನಮ್ಮೆಡೆ ಮೋದಿ ಸ್ಟೈಲಿನಲ್ಲಿ ಕೈ ಬೀಸುತ್ತಿದ್ದರು. ನನ್ನ ಜೊತೆಯಿದ್ದ ಮಕ್ಕಳು ಪಾಂಡವರ ಬೆಟ್ಟ ಏರಲು ಸನ್ನದ್ಧರಾಗಿ ಹೊರಟೇ ಬಿಟ್ಟರು.

ಪಾಂಡವರ ಬೆಟ್ಟ ಎಂಬ ಹೆಸರು ಬರಲೂ ಒಂದು ಐತಿಹ್ಯ ಇದೆ – ದ್ವಾಪರಯುಗದಲ್ಲಿ ಪಗಡೆಯಾಟದಲ್ಲಿ ಕೌರವರೊಂದಿಗೆ ಸೋತ ಪಾಂಡವರು ಹನ್ನೆರೆಡು ವರ್ಷ ವನವಾಸವನ್ನೂ, ಒಂದು ವರ್ಷ ವನವಾಸವನ್ನೂ ಮಾಡಬೇಕಾಯಿತು. ಒಂದು ವರ್ಷದ ಅಜ್ಞಾತವಾಸ ಮಾಡುವಾಗ ಪಾಂಡವರು ಇಲ್ಲಿ ಕೆಲಕಾಲ ನೆಲೆಸಿದ್ದರೆಂದೂ ಹಾಗೂ ಪಾಂಡವರು ಪ್ರತಿಷ್ಟಾಪಿಸಿದ ದೇವರೇ ಬೈರವೇಶ್ವರ ಎಂಬ ಪ್ರತೀತಿಯೂ ಇದೆ. ದೇಗುಲದ ಸುತ್ತಲೂ ನೋಡಿದೆ, ಪಶ್ಚಿಮ ಘಟ್ಟದ ಗಿರಿ ಶ್ರೇಣಿಗಳು, ಕಣಿವೆಯಲ್ಲಿ ನೀರು ಹರಿಯುವ ಸದ್ದು, ಮೇಲೆ ಹಾರುತ್ತಿದ್ದ ಹಕ್ಕಿಗಳು – ಎಲ್ಲವನ್ನೂ ನೋಡುತ್ತಾ ನಿಂತೆ. ಆಗ ಅಳಿಯ ಹೇಳಿದರು, ‘ಅಮ್ಮಾ, ಪಶ್ಚಿಮ ದಿಕ್ಕಿನಲ್ಲಿ ನೋಡಿ, ಸೂರ್ಯಾಸ್ತವಾಗುತ್ತಿದೆ’. ರವಿಯ ಹೊಂಬಣ್ಣ ದೇಗುಲದ ಮೇಲೆ ಪ್ರತಿಫಲಿಸುತ್ತಿತ್ತು, ಅದು ಬೈರವನಿಗೆ ಬೆಳಗುವ ಮಂಗಳಾರತಿಯಂತೆ ತೋರುತ್ತಿತ್ತು, ಗೂಡು ಸೇರಲು ತವಕಿಸುತ್ತಿದ್ದ ಹಕ್ಕಿಗಳ ಚಿಲಿಪಿಲಿ ನಾದ ಮಂತ್ರಘೋಷದಂತೆ ಕೇಳಿಸುತ್ತಿತ್ತು, ಸುತ್ತಲೂ ಇದ್ದ ಗಿಡ ಮರಗಳಲ್ಲಿ ಅರಳುತ್ತಿದ್ದ ಪುಷ್ಪಗಳ ಪರಿಮಳ ಧೂಪದ ಸುವಾಸನೆಯನ್ನು ಬೀರುತ್ತಿತ್ತು. ಬೈರವ ಎಲ್ಲೆಲ್ಲಿಯೂ ಇದ್ದ, ಬೆಟ್ಟದ ಬೈರವನ ನರ್ತನ ನಿಸರ್ಗದ ಮಡಿಲಲ್ಲಿ ನಿರಂತರವಾಗಿ ಸಾಗಿತ್ತು. ಬೆಟ್ಟದ ಬೈರವನ ದರ್ಶನವಾಗಿತ್ತು. ಪ್ರಕೃತಿಮಾತೆಯೇ ಬೈರವನಿಗೆ ಪೂಜೆಯನ್ನು ಸಲ್ಲಿಸಿ ಪುನೀತಳಾಗುತ್ತಿದ್ದಳು. ಇಂತಹ ಅಪರೂಪದ ಪ್ರಕೃತಿಯ ಆರಾಧನೆಯನ್ನು ಕಣ್ತುಂಬಿಕೊಳ್ಳುತ್ತಾ, ನಮ್ಮ ಪುರಾತನ ಸಂಸ್ಕೃತಿಯ ಹಿರಿಮೆಯನ್ನು ಮೆಲುಕು ಹಾಕುತ್ತಾ, ನಮ್ಮ ರೆಸಾರ್ಟಿಗೆ ಹಿಂತಿರುಗಿದೆವು.

‘ಬೆಟ್ಟದ ಬೈರವೇಶ್ವರ ‘ ದೇಗುಲ, ಸಕಲೇಶಪುರ, PC: Internet

ನಮ್ಮ ಮುಂದಿನ ಸವಾರಿ ಎತ್ತಿನ ಭುಜದತ್ತ ಹೊರಟಿತ್ತು, ಎರಡು ವರ್ಷಗಳ ಹಿಂದೆ ಈ ಪ್ರದೇಶದಲ್ಲಿ ಚಾರಣ ಮಾಡಿದ್ದ ಮೊಮ್ಮಕ್ಕಳು ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಿದ್ದರು, ಎಂಟು ವರ್ಷದ ಯಶೂವನ್ನು ಹದಿನಾಲ್ಕು ವರ್ಷದ ತೇಜು ಕೋಡುಗಲ್ಲಿನ ಮೇಲೆ ಹತ್ತಿಸಿದ್ದನ್ನು ಸಂಭ್ರಮದಿಂದ ನೆನಪಿಸಿಕೊಳ್ಳುತ್ತಿದ್ದ. ಮಗಳು ಮೊದಲೇ ಎಚ್ಚರಿಸಿದ್ದಳು, ‘ಅಮ್ಮಾ, ಇದು ಬಹಳ ಕಡಿದಾದ ಚಾರಣ, ಎಷ್ಟು ಸಾಧ್ಯವೋ ಅಷ್ಟು ಮಾತ್ರ ಬೆಟ್ಟವನ್ನು ಹತ್ತು. ಅತಿಯಾದ ಆತ್ಮವಿಶ್ವಾಸದಿಂದ ಬೆಟ್ಟ ಹತ್ತಲು ಹೋಗಿ ತೊಂದರೆಗೆ ಒಳಗಾಗಬೇಡ.’ ವೈದ್ಯಳಾಗಿದ್ದ ಮಗಳ ಮಾತುಗಳನ್ನು ಕೇಳುವುದು ಒಳಿತು ಎಂದು, ತುಸು ಬೇಸರವಾದರೂ ಮೌನವಾಗಿ ತಲೆಯಾಡಿಸಿದೆ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಬೈರಾಪುರದ ಬಳಿ ಇರುವ ಶಿಶಿಲ ಗುಡ್ಡ ಎತ್ತಿನ ಭುಜವನ್ನು ಹೋಲುವುದರಿಂದ ಎತ್ತಿನ ಭುಜ ಎಂದೇ ಹೆಸರಾಗಿತ್ತು. ಬೈರಾಪುರದಿಂದ ನಾಲ್ಕು ಕಿ.ಮೀ. ಕಲ್ಲು ಮಣ್ಣಿನ ರಸ್ತೆಯಲ್ಲಿ ನಡೆದರೆ ಎತ್ತಿನ ಭುಜ ಕಾಣುವುದು. ದಟ್ಟವಾದ ಅರಣ್ಯ ಪ್ರದೇಶವನ್ನು ಮಡಿಲಲ್ಲಿ ಹೊತ್ತು ನಿಂತಿರುವ ಸಾಲು ಸಾಲು ಬೆಟ್ಟಗಳ ಶ್ರೇಣಿ, ಪಶ್ಚಿಮ ಘಟ್ಟಗಳ ಭಾಗವಾದ ಒಂಭತ್ತು ಬೆಟ್ಟಗಳು ಒಂದಕ್ಕೊಂದು ಜೋಡಿಯಾಗಿ ನಿಂತಿವೆ. ವೈವಿಧ್ಯಮಯವಾದ ಗಿಡ ಮರಗಳು, ಹುಲ್ಲುಗಾವಲು, ಕಣಿವೆಗಳಲ್ಲಿ ಹರಿಯುವ ಹಳ್ಳಗಳೂ ಚಾರಣಿಗರನ್ನು ಕೈ ಬೀಸಿ ಕರೆಯುತ್ತಿದ್ದವು. ಈ ನಯನ ಮನೋಹರವಾದ ಬೆಟ್ಟವನ್ನು, ಮಗಳ ಕೈ ಹಿಡಿದು ನಿಧಾನವಾಗಿ ಹತ್ತಿದೆ. ಎತ್ತಿನ ಭುಜವನ್ನು ಹೋಲುತ್ತಿದ್ದ ಕೋಡುಗಲ್ಲಿನ ಬುಡದಲ್ಲಿ ನಿಂತಾಗ – ‘ಅಬ್ಬಾ, ಭೂಲೋಕದ ಸ್ವರ್ಗ ಇದು ಎಂದೆನಿಸಿತ್ತು. ಇಲ್ಲಿಂದ ಆಕಾಶಕ್ಕೆ ಮೂರೇ ಗೇಣು ಎನ್ನಿಸಿತ್ತು. ಸಮುದ್ರ ಮಟ್ಟದಿಂದ 4265 ಅಡಿ ಎತ್ತರದಲ್ಲಿರುವ ಎತ್ತಿನ ಭುಜ ಕಾಫಿನಾಡಿನ ಮುಕುಟಮಣಿಯಂತೆ ಕಂಗೊಳಿಸುತ್ತಿತ್ತು. ಒಂದು ಕ್ಷಣ ಮಂಜು ಮುಸುಕುತ್ತಿತ್ತು, ಮತ್ತೊಂದು ಕ್ಷಣದಲ್ಲಿ ಮಂಜಿನ ತೆರೆ ಸರಿಸಿದ ನಿಸರ್ಗ, ಆ ಸುಂದರವಾದ ನೋಟವನ್ನು ನಮ್ಮ ಮುಂದೆ ತೆರೆದಿಡುತ್ತಿತ್ತು. ಮೋಡಗಳು ಕಣ್ಣಾಮುಚ್ಚಾಲೆ ಆಟ ಆಡುತ್ತಿದ್ದವು.
ಎತ್ತಿನಭುಜವನ್ನು ಹತ್ತಿದ ಸಾಹಸಿ ಚಾರಣಿಗರು ಕೇಕೆ ಹಾಕುತ್ತಾ ಉತ್ಸಾಹದಿಂದ ಫೋಟೋಗಳನ್ನು ಕ್ಲಿಕ್ಕಿಸುತ್ತಿದ್ದರು. ನಾನು ಆ ಗುಂಪಿನಲ್ಲಿ ಮಕ್ಕಳು, ಮೊಮ್ಮಕ್ಕಳನ್ನು ಗುರುತಿಸಲು ಯತ್ನಿಸುತ್ತಿದ್ದೆ, ಕಂಡಾಗ ಜೋರಾಗಿ ಕೈ ಬೀಸುತ್ತಿದ್ದೆ. ನಾನೂ ಇಪ್ಪತ್ತು ವರ್ಷ ಮುಂಚೆ ಬಂದಿದ್ದರೆ ಈ ಕೋಡುಗಲ್ಲನ್ನು ಏರಬಹುದಿತ್ತು ಎನ್ನಿಸಿದ್ದೂ ಸುಳ್ಳಲ್ಲ. ಮೌನವಾಗಿ ಸುತ್ತಮುತ್ತಲಿನ ಬೆಟ್ಟ ಗುಡ್ಡಗಳನ್ನು ವೀಕ್ಷಿಸಿದೆ. ಪ್ರಕೃತಿಯ ವಿಹಂಗಮ ನೋಟ ಕಂಡು ಬೆರಗಾದೆ. ಬದುಕಿನ ಜಂಜಾಟವನ್ನೆಲ್ಲಾ ಮರೆತು ಸಂತಸದ ಉಯ್ಯಾಲೆಯಲ್ಲಿ ತೂಗಾಡಿದೆ. ಇಷ್ಟು ಭವ್ಯವಾದ, ಮನೋಹರವಾದ ದೃಶ್ಯಗಳನ್ನು ಇನ್ನೆಲ್ಲಿ ನೋಡಲು ಸಾಧ್ಯ ನೀವೇ ಹೇಳಿ?

ಎತ್ತಿನ ಭುಜ ಬೆಟ್ಟ, PC : Internet

ಎತ್ತಿನಭುಜದಿಂದ ಕೆಳಗಿಳಿದು ಬಂದ ಮೊಮ್ಮಕ್ಕಳು ತಮ್ಮ ಸಾಹಸಗಾಥೆಯನ್ನು ವರ್ಣಿಸುತ್ತಿದ್ದರು. ಅವರ ಮಾತುಗಳನ್ನು ಕೇಳುತ್ತಾ ಮೈಮರೆತ ನಾನು ಒಂದೆರೆಡು ಬಾರಿ ನುಚ್ಚುಗಲ್ಲುಗಳ ಮೇಲೆ ಕಾಲಿಟ್ಟು ಜಾರಿಬಿದ್ದೆ. ಮುಂದೆ ಮೊಮ್ಮಗ ತೇಜು ಕೈ ಹಿಡಿದೇ ನಡೆಸಿದ. ಬೆಟ್ಟದ ಬುಡಕ್ಕೆ ಬಂದವರು ಹತ್ತಿರದಲ್ಲಿದ್ದ ನಾಣ್ಯ ಬೈರವೇಶ್ವರ ಸ್ವಾಮಿಯ ದೇಗುಲಕ್ಕೆ ಹೋದೆವು. ಪೂರ್ವದಲ್ಲಿ ರಾಜರು ನಾಣ್ಯಗಳನ್ನು ತಯಾರಿಸುವ ಟಂಕಸಾಲೆಯು ಇಲ್ಲಿದ್ದುದರಿಂದ, ಈ ಸ್ಥಳಕ್ಕೆ ನಾಣ್ಯ ಬೈರವೇಶ್ವರನೆಂಬ ಹೆಸರು ಬಂದಿತೆಂಬ ಪ್ರತೀತಿಯಿದೆ. ಬೈರವನು ಇಲ್ಲಿನ ಪ್ರಕೃತಿ ಸೌಂದರ್ಯಕ್ಕೆ ಮನಸೋತು ನರ್ತಿಸಿದ್ದರಿಂದ, ಕೆಲವರು ಈ ದೇಗುಲಕ್ಕೆ ನಾಟ್ಯ ಬೈರವೇಶ್ವರನೆಂದೂ ಕರೆಯುತ್ತಾರೆ.

ದೇವರ ಮನೆ ನೋಡಲೆಂದು ಹೊರಟವರಿಗೆ ನಿಸರ್ಗದ ವಿವಿಧ ಆಯಾಮಗಳ ಪರಿಚಯವಾಗಿತ್ತು. ಕಾಳಬೈರವೇಶ್ವರನ ಸಮೀಪವಿದ್ದ ಬೆಟ್ಟಗಳ ಸಾಲು ಎಲ್ಲರಿಗೂ ಎಟುಕುವಂತಿದ್ದವು, ಬೆಟ್ಟದ ಬೈರವೇಶ್ವರನನ್ನು ಕಾಣಲು ತುಸು ಪರಿಶ್ರಮ ಬೇಕಿತ್ತು, ಆದರೆ ಎತ್ತಿನ ಭುಜವನ್ನು ಏರಲು ಕಷ್ಟಸಾಧ್ಯವಾಗಿತ್ತು. ಕಾಫಿನಾಡಿನ ಚೆಲುವನ್ನು ಕಾಣಲು ಬರುವ ಪ್ರವಾಸಿಗರನ್ನು ಬೇರೆಯೇ ಲೋಕಕ್ಕೆ ಕರೆದೊಯ್ಯುವಂತಿತ್ತು. ಕನ್ನಡದ ಕವಿ ನಿಸಾರ್ ಅಹಮದ್‌ರವರ ನಿತ್ಯೋತ್ಸವದ ಸಾಲುಗಳನ್ನು ಗುನುಗುತ್ತಾ ಹಿಂತಿರುಗಿದೆವು – ನಿತ್ಯ ಹರಿದ್ವರ್ಣವನದ ತೇಗ ಗಂಧ ತರುಗಳಲ್ಲಿ / ನಿತ್ಯೋತ್ಸವ ತಾಯಿ ನಿತ್ಯೋತ್ಸವ.

(ಮುಗಿಯಿತು)

ಈ ಬರಹದ ಹಿಂದಿನ ಸಂಚಿಕೆ ಇಲ್ಲಿದೆ: https://www.surahonne.com/?p=39328

ಡಾ.ಗಾಯತ್ರಿದೇವಿ ಸಜ್ಜನ್, ಶಿವಮೊಗ್ಗ

5 Responses

 1. ವಾವ್ ತುಂಬಾ ಚೆನ್ನಾದನಿರೂಪಣೆ ಮೇಡಂ… ತುಂಬಾ ಆಪ್ತ ತೆಯನ್ನು ತಂದುಕೊಟ್ಟಿತು..

 2. ನಯನ ಬಜಕೂಡ್ಲು says:

  ಸೊಗಸಾಗಿತ್ತು

 3. Padmini Hegde says:

  ನಿತ್ಯೋತ್ಸವ ತಾಯಿ ನಿತ್ಯೋತ್ಸವ!.

 4. ವಿದ್ಯಾ says:

  ರಸಮಯ ವರ್ಣನೆ

 5. ಶಂಕರಿ ಶರ್ಮ says:

  ಬೆಟ್ಟದ ಭೈರವೇಶ್ವರನನ್ನು ನಿಂದಿಸಿದರೂ, ಅದ್ಭುತ ಪ್ರಕೃತಿ ವೀಕ್ಷಣೆ ಅದುದಂತೂ ನಿಜ! ಎತ್ತಿನ ಭುಜ ಬೆಟ್ಟ ಅತ್ಯಂತ ನೈಜವಾಗಿದೆ… ನಿರೂಪಣೆ ಆತ್ಮೀಯವೆನಿಸಿತು… ಧನ್ಯವಾದಗಳು ಗಾಯತ್ರಿ ಮೇಡಂ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: