ಅವಿಸ್ಮರಣೀಯ ಅಮೆರಿಕ – ಎಳೆ 79

Share Button

PC: Internet

(ಹಿಂದಿನ ಸಂಚಿಕೆಯಿಂದ ಮುಂದುವರಿದುದು…)
ಎಚ್ಚರಿಕೆಯ ಗಂಟೆ ಸದ್ದು….!!

ಜುಲೈ 7, ಶನಿವಾರ…ಬೆಳಿಗ್ಗೆ ಒಂಭತ್ತೂವರೆ ಗಂಟೆಗೆ, ಹಿಂದಿನ ದಿನದ ಕ್ರೂಸ್ ಗಿಂತ ಸ್ವಲ್ಪ ದೊಡ್ಡದಾದ ಕ್ರೂಸ್ ನಲ್ಲಿ, ಸೆವಾರ್ಡ್ ಮಿನಿ ಬಂದರಿನಿಂದ ನಮ್ಮ ಜಲಪ್ರಯಾಣ ಆರಂಭವಾಯಿತು. ಸುಮಾರು ಅರ್ಧತಾಸಿನ ಪಯಣದ ಬಳಿಕ ನಾವು ಹಿಂದಿನ ದಿನ ವೀಕ್ಷಿಸಿದ ಹಿಮಪರ್ವತಕ್ಕಿಂತಲೂ ಬಹಳ ದೊಡ್ಡ ಗಾತ್ರ ಹಾಗೂ ವಿಶಾಲವಾದ ಹಿಮಪರ್ವತದ ಮುಂದೆ ನಮ್ಮ ಕ್ರೂಸ್ ನಿಂತಿತು. ಮೈಲುಗಟ್ಟಲೆ ಉದ್ದನೆಯ ಹಿಮದಂಡೆಯಲ್ಲಿ ಅಗಾಧ ಗಾತ್ರದ ಹಿಮಪದರಗಳು ಕಿವಿಗಡಚಿಕ್ಕುವ ಸದ್ದಿನೊಂದಿಗೆ ಸಮುದ್ರದ ನೀರಿಗೆ ಕುಸಿದು, ತೇಲುತ್ತಾ, ಕರಗುತ್ತಾ ತಮ್ಮ ಜೀವನ ಯಾತ್ರೆಯನ್ನು ಕೊನೆಗೊಳಿಸುತ್ತಿದ್ದವು. ಇಲ್ಲಿಯೂ, ಈ ರುದ್ರ ರಮಣೀಯ ದೃಶ್ಯವು ನೋಡಲು ಚೆನ್ನಾಗಿದ್ದರೂ, ಅದನ್ನು ಪೂರ್ತಿ ಸಂಭ್ರಮದಿಂದ ಆಸ್ವಾದಿಸಲಾಗದ ಮಿಶ್ರಭಾವವು ಮನಸ್ಸನ್ನು ಆವರಿಸಿತು.

ಅಲ್ಲಿಂದ, ನಮ್ಮ ಚಲಿಸುವ ಮನೆಗಳಿಗೆ ಹಿಂತಿರುಗಿದ ಬಳಿಕ, ನಮ್ಮ ರಸ್ತೆ ಪಯಣ ಆರಂಭವಾಯಿತು. ಈ ಪಯಣದ ಮಾರ್ಗ ಮಧ್ಯದಲ್ಲಿ ಇನ್ನೊಂದು ವಿಶೇಷವಾದ ಹಿಮಪ್ರವಾಹವನ್ನು ವೀಕ್ಷಿಸಲೋಸುಗ ನಮ್ಮ ವಾಹನಗಳು ಎತ್ತರೆತ್ತರ ಮರಗಳಿರುವ, ದಟ್ಟ ತೋಪಿನ ನಡುವೆ ಇರುವ ಒಂದು ಪುಟ್ಟ ಕಟ್ಟಡದ ಮುಂದೆ ನಿಂತವು.  ಇದು, ಪ್ರವಾಸಿಗರ ತಂಗುದಾಣದ ಜೊತೆಗೆ, ಇಲ್ಲಿಂದ ಕಾಲ್ನಡಿಗೆ ದೂರದಲ್ಲಿರುವ ಹಲವಾರು ಹಿಮಪ್ರವಾಹಗಳನ್ನು ವೀಕ್ಷಿಸಲು ಯಾತ್ರಿಕರಿಗೆ ಮಾರ್ಗಸೂಚಿ ಹಾಗೂ ಮಾರ್ಗದರ್ಶನವನ್ನು ನೀಡುವ ತಾಣವಾಗಿದೆ. ಅವರವರ  ಸಮಯಾವಕಾಶಕ್ಕೆ ತಕ್ಕಂತೆ ಜಾಗಗಳನ್ನು ಆಯ್ದುಕೊಳ್ಳಬಹುದಾಗಿದೆ. ನಮ್ಮ ತಂಡವು ಅಲ್ಲಿಂದ ಸುಮಾರು ಒಂದೂವರೆ ಮೈಲು ದೂರದಲ್ಲಿರುವ ಹಿಮಪ್ರವಾಹವನ್ನು ನೋಡಲು ಸಜ್ಜಾಯಿತು.

ತೋಪಿನ ನಡುವಿರುವ ಸೊಗಸಾದ ರಸ್ತೆಯಲ್ಲಿ ಸಾಗುತ್ತಿದ್ದಂತೆ ಅಲ್ಲಲ್ಲಿ ಇಸವಿಗಳನ್ನು ನಮೂದಿಸಿದ ಫಲಕಗಳು ಕಾಣಸಿಗುತ್ತಿದ್ದವು. ಅವುಗಳ ಬಗ್ಗೆ ವಿಚಾರಿಸಿದಾಗ ತಿಳಿದುಬಂದ ವಿಚಾರವು ಅತ್ಯಂತ ಗಂಭೀರವಾಗಿದೆ. ಕಟ್ಟಡದ ಅತೀ ಸನಿಹದಲ್ಲಿ 1917, ಅಲ್ಲಿಂದ ಇನ್ನೂ ಮುಂದಕ್ಕೆ 1926…1961,, ಹೀಗೆ ಸಾಗಿದ್ದ ಫಲಕಗಳು; ಅಯಾಯ ಇಸವಿಯಲ್ಲಿ ಹಿಮದ ರಾಶಿಯು ಅಲ್ಲಿಯ ವರೆಗೆ ಹರಡಿದ್ದ ಕುರುಹಾಗಿದ್ದವು. ವರ್ಷಗಳು ಕಳೆದಂತೆ, ಹೆಚ್ಚಾಗುತ್ತಿರುವ ಭೂಮಿಯ ತಾಪಮಾನದಿಂದಾಗಿ ಹಿಮಪದರವು ಕರಗಿ ಅದರ ಅಂಚು ಹಿಂದೆ ಸರಿಯುತ್ತಾ ಇತ್ತು!! ಇತ್ತೀಚೆಗಿನ ಇಸವಿಗಳ ಫಲಕಗಳನ್ನು ಗಮನಿಸಿದಾಗ, ವರ್ಷದಿಂದ ವರ್ಷಕ್ಕೆ ಹಿಮ ರಾಶಿಯ ಹಿನ್ನಡೆಯು ಅತ್ಯಂತ ವೇಗವಾಗಿದೆ….ಇದನ್ನು ನೋಡುವಾಗ ನಮ್ಮ ಎದೆ ಬಡಿತವೂ ವೇಗವಾಗುವುದು!…ಈ ಎಚ್ಚರಿಕೆಯ ಕರೆಗಂಟೆಯು, ನಮ್ಮ ಧರಣಿಯ ಮುಂದಿನ ಭವಿಷ್ಯದ ಚಿಂತೆ ಕಾಡುವಂತೆ ಮಾಡುವುದು. ಸ್ವಲ್ಪ ದೂರವನ್ನು ಸಮತಟ್ಟಾದ ಪ್ರದೇಶದಲ್ಲಿರುವ ರಸ್ತೆಯಲ್ಲಿ ಸಾಗಿದ ಬಳಿಕ, ಕಚ್ಚಾ ಕಾಲುದಾರಿಯಲ್ಲಿ ಸಣ್ಣ ಬೆಟ್ಟವೇರಲು ಆರಂಭಿಸಿದೆವು. ಚಳಿ ಪ್ರದೇಶವಾದರೂ ಬಿಸಿಲಿನ ಧಗೆಗೆ ಸ್ವಲ್ಪ ಆಯಾಸ, ಸೆಕೆ ಆರಂಭವಾಯಿತು. ಕೈಚೀಲದಲ್ಲಿದ್ದ ನೀರಿನ ಬಾಟಲಿ ಖಾಲಿಯಾಗತೊಡಗಿತು. ಎತ್ತರೆತ್ತರ ಬಂಡೆಗಳ ಮೇಲೆ ನಡೆಯುವಾಗ ಕಾಲು ಜಾರದಂತೆ ಜಾಗ್ರತೆ ವಹಿಸುವ ಅಗತ್ಯವಿತ್ತು. ಅದಕ್ಕೆ ಸರಿಯಾಗಿ ಅಲ್ಲಿ ನಡೆಯುವಾಗ ಜಾರಿ ಬಿದ್ದು ಎಲುಬಿಗೆ ಪೆಟ್ಟಾಗಿ ತೊಂದರೆಗೊಂಡವರ ಕಥೆಯನ್ನು ಅಳಿಯ ಹೇಳಿದಾಗ ಮತ್ತೂ ಭಯವಾಗಿದ್ದು ನಿಜ! ಅಲ್ಲೇ ದಾರಿ ಪಕ್ಕದಲ್ಲಿ ಪುಟ್ಟ ಮಗುವನ್ನು ಕರೆದೊಯ್ಯುವ ಸ್ಟ್ರಾಲರ್ (ಕೈಗಾಡಿ) ಒಂದನ್ನು ಕಂಡು ಆಶ್ಚರ್ಯವಾಯಿತು. ಪುನ: ಹಿಂದಕ್ಕೆ ಬರುವಾಗಲೂ ಅದು ಅಲ್ಲೇ  ಸುಸ್ಥಿತಿಯಲ್ಲಿ  ಇರುವುದನ್ನು ಕಂಡು ನಿಜಕ್ಕೂ ಖುಷಿಪಟ್ಟೆ. ನಮ್ಮೂರಲ್ಲಿಯಾದರೆ ಅದು ಯಾವಾಗಲೋ ನಾಪತ್ತೆಯಾಗುತ್ತಿತ್ತು ಎಂದು ನೆನೆದು ನಗುಬಂತು ಬಿಡಿ!

 

ಅರ್ಧ ತಾಸಿನ ಏರುದಾರಿ ಮುಗಿಯುತ್ತಿದ್ದಂತೆ…ನಾವು ದೊಡ್ಡ ಬೆಟ್ಟವೊಂದರ ಅರ್ಧ ಭಾಗದಲ್ಲಿದ್ದೆವು. ಅಲ್ಲಿಂದ ಮುಂದಕ್ಕೆ ಆಳವಾದ ಪ್ರಪಾತವಿತ್ತು. ನಾವು ನಿಂತ ಜಾಗದ ಬಲಭಾಗದಲ್ಲಿ ಅನತಿ ದೂರದಲ್ಲಿ ಬೆಳ್ಳಗಿನ ಹಿಮದ ರಾಶಿ ಗೋಚರಿಸುತ್ತಿತ್ತು. ಪ್ರಪಾತದ ಕಣಿವೆಯಲ್ಲಿ, ಹಿಮಗಡ್ಡೆಯು ಕರಗಿ ಹರಿದ ಸ್ಪಟಿಕ ಜಲವು ಮುಂದಕ್ಕೆ ಸಾಗಿದಂತೆ ಮಣ್ಣಿನೊಂದಿಗೆ ಸೇರಿ ರಾಡಿಯಾಗಿತ್ತು. ಹಿಮಗಡ್ಡೆಯು ನಿಧಾನವಾಗಿ ಕರಗುತ್ತಾ, ಅಲ್ಲಿ ಒಂದು ಬೃಹದಾಕಾರದ ಕಮಾನು ಸೃಷ್ಟಿಯಾಗಿತ್ತು. ಉತ್ಸಾಹೀ ಯುವಕ ಯುವತಿಯರು ಇಳಿಜಾರಾದ ಅಪಾಯಕಾರಿ ದಾರಿಯಲ್ಲಿ ನಡೆದು, ಆ ಹಿಮದ ರಾಶಿ ಮತ್ತು ಆಳ ಕಣಿವೆಯತ್ತ ಸಾಗಿ ಖುಷಿ ಪಡುತ್ತಿದ್ದರು. ನಾವು ನಿಂತಿದ್ದ ಜಾಗದಲ್ಲಿ; ನಾವು ಮೇಲಕ್ಕೆ ಹಾರಿಯೇ ಹೋಗುವೆವೇನೋ ಎಂಬಷ್ಟು ಜೋರಾಗಿ ಶೀತಲ ಗಾಳಿ ಬೀಸುತ್ತಿತ್ತು…  ಸಮತೋಲನವನ್ನು ಕಾಪಾಡಿಕೊಳ್ಳಲು ಕಷ್ಟವಾಗುವಾಗುತ್ತಿತ್ತು! ನಾವಿಬ್ಬರು ಅಲ್ಲಿದ್ದ ಓರೆಕೋರೆ ಬಂಡೆಯ ಮೇಲೆ ಕುಳಿತು ಕೈಚೀಲದಲ್ಲಿದ್ದ ಬಿಸ್ಕೆಟನ್ನು ಖಾಲಿ ಮಾಡತೊಡಗಿದೆವು. ಕೆಳಗೆ ಬಯಲು ಪ್ರದೇಶದಲ್ಲಿ ಹರಡಿರುವ ದಟ್ಟ ಹಸಿರಿನ ಕಾಡು, ಮುಂದಕ್ಕೆ ದೂರದಲ್ಲಿ ಕಾಣುವ ಪರ್ವತಗಳು, ಅವುಗಳ ಮೇಲೆ ಬೆಳ್ಳಗೆ ಅಲ್ಲಲ್ಲಿ ಹೊಳೆಯುವ ಹಿಮರಾಶಿಗಳು… ಇತ್ಯಾದಿಗಳೆಲ್ಲಾ ನಿಸರ್ಗವನ್ನು ರಮಣೀಯಗೊಳಿಸಿದ್ದವು. ಅವುಗಳನ್ನೇ ನೋಡುತ್ತಾ ಮೈಮರೆತಿದ್ದ ನಮಗೆ, ಸಮಯ ಸರಿದುದೇ ತಿಳಿಯಲಿಲ್ಲ…

ಕೆಳಗಡೆ ಹಿಮ ಪ್ರವಾಹದತ್ತ ಹೋಗಿದ್ದ ನಮ್ಮ ತಂಡದ ಸದಸ್ಯರು ಹಿಂತಿರುಗಿದ ತಕ್ಷಣ ಬೆಟ್ಟವಿಳಿದ ತಕ್ಷಣ ನಮ್ಮ ಮುಂದಿನ ಪ್ರಯಾಣ ಆರಂಭಿಸಿದೆವು…. ರಾತ್ರಿ ತಂಗಲಿರುವಆ ಸೂಕ್ತ ತಂಗುದಾಣದತ್ತ. ಮರುದಿನ ಅತ್ಯಂತ ಅನಿರ್ವಚನೀಯ ಅನುಭವವನ್ನು ನೀಡುವಂತಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಅದೇನೆಂದು ನೋಡೋಣ ಮುಂದಿನ ಎಳೆಯಲ್ಲಿ…..

(ಮುಂದುವರಿಯುವುದು…..)

ಈ ಪ್ರವಾಸಕಥನದ ಹಿಂದಿನ ಎಳೆ ಇಲ್ಲಿದೆ:  https://www.surahonne.com/?p=39323

-ಶಂಕರಿ ಶರ್ಮ, ಪುತ್ತೂರು

8 Responses

 1. Padmini Hegde says:

  ಪ್ರಯಾಸದ ಚಾರಣದ ಸಂತೋಷದ ಚಿತ್ರ ಸೊಗಸಾಗಿದೆ

 2. ಎಂದಿನಂತೆ ಪ್ರವಾಸ ಕಥನ ಓದಿಸಿಕೊಂಡು ಹೋಯಿತು..ಚಿತ್ರ ಗಳು ಪೂರಕವಾಗಿಮನಕ್ಕೆ..ಮುದತಂದಿತು… ಶಂಕರಿ ಮೇಡಂ

 3. ನಯನ ಬಜಕೂಡ್ಲು says:

  ಬಹಳ ಚೆನ್ನಾಗಿದೆ

 4. ವನಿತಾ ಪ್ರಸಾದ್ ಪಟ್ಟಾಜೆ ತುಮಕೂರು says:

  ಪ್ರವಾಸ ಕಥನ ಚೆನ್ನಾಗಿದೆ.

 5. ಶಂಕರಿ ಶರ್ಮ says:

  ಧನ್ಯವಾದಗಳು ವನಿತಕ್ಕ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: