ಪುಸ್ತಕ :- ದೃಷ್ಟಿ -ಸೃಷ್ಟಿ (ಅಂಕಣ ಬರಹಗಳು)
ಪುಸ್ತಕ :- ದೃಷ್ಟಿ -ಸೃಷ್ಟಿ (ಅಂಕಣ ಬರಹಗಳು)
ಲೇಖಕರು :- ಬಿ. ನರಸಿಂಗ ರಾವ್ ಕಾಸರಗೋಡು
ಪುಟಗಳು :- 284+10
ಬೆಲೆ :- 250/-
ನಮ್ಮ ಗಡಿನಾಡಿನಲ್ಲಿ ಬಿ. ನರಸಿಂಗರಾವ್ ಅನ್ನುವ ಒಬ್ಬರು ಒಳ್ಳೆಯ ಬರಹಗಾರರು, ಲೇಖಕರು ಇದ್ದಾರೆ ಅನ್ನುವ ಪರಿಚಯ ಆದದ್ದು ನನಗೆ ಹವ್ಯಾಸಿ ಗಾಯಕಿ, ಯಾವಾಗಲೂ ಒಳ್ಳೆಯದನ್ನು ಪ್ರೋತ್ಸಾಹಿಸಿ, ಕೆಟ್ಟದ್ದನ್ನು ಅಷ್ಟೇ ಕಟ್ಟುವಾಗಿ ಖಂಡಿಸುವ, ನವಿರಾದ ಹಾಸ್ಯ ಪ್ರಜ್ಞೆ ಹೊಂದಿರುವ Facebook ಗೆಳತಿ ಜ್ಯೋತಿ ಉಮೇಶ್ ಅವರಿಂದ. ಬ್ಯಾಂಕ್ ನಲ್ಲಿ ಉದ್ಯೋಗಿಯಾಗಿದ್ದು ಈಗ ನಿವೃತ್ತಿ ಹೊಂದಿರುವ ಲೇಖಕರದ್ದು ಎಂತಹ ವಿಶಾಲ ಮನಸ್ಸು ಅನ್ನುವ ಪರಿಚಯ ಎಂ. ರಂಗನಾಥ ಮಲ್ಯ ಅವರ ಬೆನ್ನುಡಿ ಹಾಗೂ ಡಾ. ಪ್ರದೀಪ ಕುಮಾರ ಹೆಬ್ರಿಯವರು ಬರೆದ ನಲ್ನುಡಿಯಲ್ಲಿ ಸಿಗುವುದಲ್ಲದೆ ಅವರೊಡನೆ ಮಾತನಾಡಿದಾಗ ಬಹಳ ಸ್ಪಷ್ಟವಾಗಿ ಅರ್ಥವಾಗುತ್ತದೆ. ತಮ್ಮ ಪುಸ್ತಕಗಳನ್ನು ಮಾರಿ ಬಂದ ಹಣವನ್ನು ” ಶ್ರೀ ಸಾಯಿ ನಿಕೇತನ ಸೇವಾಶ್ರಮ”ಕ್ಕೆ ಹೋಗುವಂತೆ ಮಾಡಿದ ವ್ಯವಸ್ಥೆ ಲೇಖಕರ ಉದಾರ ಮನಸ್ಸು, ಅವರ ಸಹಾಯ ಹಸ್ತ ಚಾಚುವ ಗುಣಕ್ಕೆ ಸಾಕ್ಷಿ. ಪುಸ್ತಕಗಳ ಮೂಲಕ ಜ್ಞಾನ ಸಂಪಾದನೆ ಮಾತ್ರವಲ್ಲ, ಅವುಗಳನ್ನು ಪ್ರಕಟಿಸಿ ಓದುಗರು ಕೊಂಡಾಗ ಬಂದ ಹಣದಿಂದ ಇನ್ನೊಬ್ಬರ ಬದುಕಿಗೂ ಬೆಳಕಾಗಬಹುದು ಅನ್ನುವುದನ್ನು ಈ ಲೇಖಕರ ಕಾರ್ಯದಿಂದ ತಿಳಿದುಕೊಳ್ಳಬಹುದು ನಾವು. ಇದೊಂದು ಉತ್ತಮ ಹಾಗೂ ಎಲ್ಲರೂ ಅನುಸರಿಸಬಹುದಾದಂತಹ ಒಳ್ಳೆಯ ಕೆಲಸ.
ಕುಂದಾನಗರಿ, ಕಾರವಲ್, ಕನ್ನಡಪ್ರಭ ಹೀಗೆ ಹಲವಾರು ಪತ್ರಿಕೆಗಳಲ್ಲಿ ನರಸಿಂಗರಾವ್ ಅವರ ಬರಹಗಳು ಪ್ರಕಟವಾಗಿವೆ ಹಾಗೂ ಈಗಲೂ ಆಗುತ್ತಿವೆ. ಇವರ ಲೇಖನಗಳ ಸೊಬಗಿನ ಪರಿಚಯವನ್ನು ಡಾ. ಪ್ರದೀಪ ಕುಮಾರ್ ಹೆಬ್ರಿಯವರು ನಲ್ನುಡಿಯಲ್ಲಿ ಬಹಳ ಚೆನ್ನಾಗಿ ನೀಡಿದ್ದಾರೆ.
ಕೇರಳ ರಾಜ್ಯದ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಬೇಕಲ ಕೋಟೆಯು ಒಂದು. ಈ ಕೋಟೆಗೆ ಐತಿಹಾಸಿಕ ಹಿನ್ನೆಲೆ ಇದೆ. ಶಿವಪ್ಪ ನಾಯಕ, ಟಿಪ್ಪು ಸುಲ್ತಾನರ ಕಥೆಯನ್ನು ಹೇಳುವ ಈ ತಾಣ ಬಹಳ ಸುಂದರ. ಲೇಖಕರು ಇಲ್ಲಿ ತಮ್ಮ ಹೆಸರಿನೊಂದಿಗೆ ಬರುವ ಮೊದಲ ಅಕ್ಷರ ಈ ಊರನ್ನೇ ಸೂಚಿಸುತ್ತದೆ ಎಂದು ಹೇಳಿ ತಮ್ಮ ಹಿರಿಯರು ಹಾಗೂ ತಲೆಮಾರನ್ನು ನೆನೆಯುವ ಪರಿ ಆಕರ್ಷಕ. ಈ ಲೇಖನ ಕೊನೆಗೊಂಡೊಡನೆ ಒಂದು ಕವನ ಗಂಜಿಊಟ ಹಾಗೂ ಮಿಡಿ ಉಪ್ಪಿನಕಾಯಿಯ ಸವಿಯನ್ನು ಬಣ್ಣಿಸುತ್ತದೆ. ಗಂಜಿ ಊಟದ ಸವಿಯನ್ನು ಬಲ್ಲವರು ಇದನ್ನು ಓದುವಾಗ ಖಂಡಿತ ಬಾಯಲ್ಲಿ ನೀರೂರದೆ ಇರದು.
ಬದುಕು ಅನ್ನುವುದು ಇಲ್ಲಿ ಒಬ್ಬೊಬ್ಬರ ಪಾಲಿಗೆ ಒಂದೊಂದು ರೀತಿಯಲ್ಲಿ ದೊರೆಯುತ್ತದೆ. ಕೆಲವರು ಶ್ರೀಮಂತರಾದರೆ, ಇನ್ನು ಕೆಲವರು ಬಡವರು, ಮತ್ತೆ ಕೆಲವರು ಮಧ್ಯಮ ವರ್ಗದವರು. ನಮಗೆ ಬೇಕಾದಷ್ಟು ಸಂಪತ್ತು ಇದ್ದಾಗ ಬೇಕಾದಷ್ಟನ್ನು ಇಟ್ಟುಕೊಂಡು ಉಳಿದದ್ದನ್ನು ಸಮಾಜದ ಒಳಿತಿಗೆ ನೀಡುವ ಮನೋಭಾವವನ್ನು ನಾವು ಹೊಂದಬೇಕು. ಈ ಮನೋಭಾವ ಒಂದು ಹೊಸ ಸಂತೋಷ, ನೆಮ್ಮದಿಯನ್ನು ತರುತ್ತದೆ ಅನ್ನೋ ಉತ್ತಮ ಸಂದೇಶವನ್ನು ನೀಡುವ ಲೇಖನ-” ಅವರವರ ಪ್ರಕೃತಿಗೆ ಅನುಸರಿಸಿ ಸುಖ, ಸಂತೋಷ”. ಇಲ್ಲಿ ಹೇಳಿರುವಂತೆಯೇ ನಡೆದುಕೊಳ್ಳುತ್ತಿರುವ, ಬದುಕುತ್ತಿರುವ ಪ್ರವೃತ್ತಿಯವರು ನಮ್ಮ ಲೇಖಕರು ಅನ್ನುವುದು ಅವರನ್ನು ಹೆಚ್ಚು ಹೆಚ್ಚು ಅರಿತ ಹಾಗೆ ಅರ್ಥವಾಗುತ್ತದೆ.
ಜೀವನದಲ್ಲಿ ಒಂದು ಹಂತಕ್ಕೆ ತಲುಪುವಾಗ ಹೇಗೆ ಈ ಪಯಣ ಒಂಟಿಯಾಗಿ ಉಳಿಸುತ್ತದೆ ಅನ್ನುವುದನ್ನು ಸಾರುವ ಕವನ – ” ಜೀವನದ ಸಂಜೆ”. ಈ ಪಯಣ ಆರಂಭಗೊಳ್ಳುವಾಗ ಎಲ್ಲರೂ ಜೊತೆಗಿರುತ್ತಾರೆ ಆದರೆ ಮುಂದೆ ಸಾಗಿದಂತೆ, ಕಾಲ ಸರಿದಂತೆ ಒಬ್ಬೊಬ್ಬರೇ ದೂರ ಉಳಿದು ಸಾಗುತ್ತಿರುವವರು ಒಂಟಿಯಾಗಿ ಉಳಿಯುತ್ತಾರೆ. ಸಂಬಂಧಗಳು ಅಷ್ಟೇ ಕೈಯಲ್ಲಿರುವ ಹಣ, ಆಸ್ತಿ, ಅಂತಸ್ತಿಗೆ ತಕ್ಕಷ್ಟು ಮಾತ್ರ ಸೀಮಿತವಾಗಿರುತ್ತವೆ. ಈ ಎಲ್ಲಾ ಸಂದರ್ಭಗಳನ್ನು ಮೀರಿ ಜೊತೆಯಾಗುವ ಸಂಬಂಧವಷ್ಟೇ ಬದುಕು ಸಾರ್ಥಕ ಅನ್ನಿಸುವ ಭಾವವನ್ನು ತರುತ್ತದೆ. ಉಳಿದಂತೆ ಆವರಿಸುವುದು ಮನಸ್ಸನ್ನು ಶೂನ್ಯ ಭಾವವಷ್ಟೇ.
ಪ್ರತಿಯೊಬ್ಬ ಮನುಷ್ಯನಲ್ಲೂ ಒಂದಲ್ಲ ಒಂದು ಕೊರತೆ ಇದ್ದೇ ಇದೆ. ಯಾರು ಇಲ್ಲಿ ಪೂರ್ಣವಾಗಿ ಪರಿಪೂರ್ಣರಲ್ಲ. ಆದರೂ ನಾವು ನಮ್ಮೆಲ್ಲ ಕೊರತೆಗಳಿಂದ ತಕ್ಕಮಟ್ಟಿಗಾಗುವಷ್ಟು ಸುಧಾರಣೆಗಳನ್ನು ತಂದುಕೊಂಡು ಹೇಗೆ ಸಮಾಜದಲ್ಲಿ ನೆಲೆಸಬೇಕು ಅನ್ನುವ ಸಂದೇಶವನ್ನು ಹೊತ್ತ ಒಂದು ಲೇಖನ.
ಸ್ಥಳೀಯ ಸ್ಥಳಗಳು, ಊರುಗಳು, ಪ್ರಕೃತಿ, ಕಾಸರಗೋಡಿನ ಇತಿಹಾಸ ಹೀಗೆ ಪುಟ್ಟ ಪುಟ್ಟ ಲೇಖನಗಳನ್ನು ಒಳಗೊಂಡ ಸುಂದರ ಬರಹಗಳ ಗುಚ್ಚ ಬಿ. ನರಸಿಂಗ ರಾವ್ ಅವರ ಈ ಕೃತಿ ‘ದೃಷ್ಟಿ ಸೃಷ್ಟಿ‘ ಬಹಳ ಇಷ್ಟವಾಯಿತು. ಈ ಲೇಖಕರು ಬರೆದ ಇನ್ನೊಂದು ಕೃತಿ ಆತ್ಮಕಥನ “ನಾನೆಂಬ ಭಾರತೀಯ”. ಹಲವಾರು ಉತ್ತಮ ಯೋಚನೆ, ಆಲೋಚನೆಗಳು ಅಕ್ಷರರೂಪ ಪಡೆದು ” ದೃಷ್ಟಿ ಸೃಷ್ಟಿ” ಯಲ್ಲಿ ಸ್ಥಾನ ಪಡೆದಿವೆ. ಇದರಲ್ಲಿರುವ ಇನ್ನೊಂದು ಮುಖ್ಯ ಆಕರ್ಷಣೆ ಲೇಖನಗಳ ಜೊತೆ ಜೊತೆಗೆ ಮಧ್ಯ ಮಧ್ಯ ಕಾಣಿಸಿಕೊಳ್ಳುವ ಕವನಗಳು. ಇವತ್ತಿಗೂ ನರಸಿಂಗರಾವ್ ಅವರು ಪತ್ರಿಕೆಗಳಲ್ಲಿ ಲೇಖನಗಳನ್ನು ಬರೆಯುತ್ತಿದ್ದಾರೆ. ಅವರ ಹಲವಾರು ಒಳ್ಳೆ ಒಳ್ಳೆಯ ಲೇಖನಗಳು ಎಂದಿಗೂ ಪ್ರಕಟವಾಗುತ್ತಿವೆ. ಇವೆಲ್ಲವುಗಳು ಕೂಡ ಪುಸ್ತಕ ರೂಪದಲ್ಲಿ ಎಲ್ಲರ ಕೈ ಸೇರಲಿ ಅನ್ನುವ ಹಾರೈಕೆ.
ದೃಷ್ಟಿಸೃಷ್ಟಿಯಂತಹ ಒಂದು ಉತ್ತಮ ಪುಸ್ತಕ ಹಾಗೂ ಅದರ ಲೇಖಕರನ್ನು ಪರಿಚಯಿಸಿದ ಗೆಳತಿ ಶ್ರೀಮತಿ ಜ್ಯೋತಿ ಉಮೇಶ್ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು.
– ನಯನ ಬಜಕೂಡ್ಲು
ಪುಸ್ತಕ, ಕೃತಿ ಎರಡರ ಪರಿಚಯ ಚೆನ್ನಾಗಿದೆ
ಪುಸ್ತಕ ಪರಿಚಯ..ಚೆನ್ನಾಗಿ ಬಂದಿದೆ..ನಯನ ಮೇಡಂ
ಚಂದದ ಪುಸ್ತಕ ಪರಿಚಯ ನಯನಾ
ಒಳ್ಳೆಯ ಪುಸ್ತಕವೊಂದರ ಪರಿಚಯದ ಜೊತೆಗೆ, ಉದಾತ್ತ ಗುಣಗಳನ್ನು ಹೊಂದಿದ ಅದರ ಲೇಖಕರ ಪರಿಚಯವೂ ಬಹಳ ಚೆನ್ನಾಗಿ ಮೂಡಿಬಂದ ಲೇಖನ ಇಷ್ಟವಾಯಿತು.