ರಥಸಪ್ತಮಿಗೊಂದು ಸೌರಧಾರೆ
“ನವೋ ನವೋ ಭವತಿ ಜಾಯಮಾನಃ ”
ದಿನವೂ ನಿತ್ಯಹೊಸತಾಗಿಕಾಣುವ ,ರಮಣೀಯತೆಯ ನಿಧಿ, ನನ್ನ ಸೌಂದರ್ಯ ಆರಾಧಕ, ತೇಜಪುಂಜ, ಸಕಲಕೂ ಜೀವದಾತನಾದ ಸೂರ್ಯನಿಗೆ ಮಿಗಿಲಾದ ಶಕ್ತಿ ಮತ್ತೊಂದಿಲ್ಲ..ಇಂತಹ ದೇವನ ಆರಾಧನೆಯ ದಿನವೇ ರಥಸಪ್ತಮಿ.
“ಆದಿದೇವ ನಮಸ್ತುಭ್ಯಂ ಪ್ರಸೀದಂ ಮಮ ಭಾಸ್ಕರ, ದಿವಾಕರ ನಮಸ್ತುಭ್ಯಂ ಪ್ರಭಾಕರ ನಮೋಸ್ತುತೇ”...ಎಂದು ಪ್ರಾರಂಭವಾಗುವ ಬೆಳಗಿನ ನಿತ್ಯ ಕಾಯಕದ ಕಲ್ಪಕ್ಕೆ ಸಾಕಾರಕೊಡುವವನೊಬ್ಬನೇ ಅದು ಸೂರ್ಯದೇವ. ನಮ್ಮ ಸನಾತನ ಸಂಸ್ಕೃತಿಯು ಆಚರಿಸಿಕೊಂಡು ಬರುವ ಹಬ್ಬಗಳಲ್ಲಿ ‘ರಥಸಪ್ತಮಿ’ ಯೂ ಒಂದು. ಎಲ್ಲಾ ವರ್ಗದ ಜನರು ಪೂಜಿಸುವ ,ಕಣ್ಣಿಗೆ ಕಾಣುವ ಏಕ ಮಾತ್ರ ದೇವ. ‘ಸೌರ’ ಎಂದೇ ಕರೆಯುವ ಭಕ್ತಿ ಪುರಾಣದಲ್ಲಿ ಸೂರ್ಯನೇ ಪರಾದೇವತೆ. ‘ಪಂಚಾಯತನ’ ಎಂದು ಕರೆಯುವ ಒಂದು ಪೂಜಾಕಲ್ಪದಲ್ಲೂ ಈತನೇ ಪ್ರಮುಖ.ಅಲ್ಲದೆ ಸೂರ್ಯಬಿಂಬವು ಹರಿ ಹರರಿಬ್ಬರಿಗೂ ಸಾಲಿಗ್ರಾಮ, ಶಿವಲಿಂಗಗಳಂತೆ ಪೂಜಾಮಾಧ್ಯಮವೂ ಆಗಿದೆ. ರೈತನಿಗಂತೂ ಈತನೇ ಪ್ರಮುಖ ಆರಾಧ್ಯ. ಬೆಳಗ್ಗೆ ಎದ್ದು ಕೈಮುಗಿಯದೆ ಅವನ ಕಾಯಕವಿಲ್ಲ. ನಿತ್ಯವೂ ಬಿಡದೆ ಪೂಜಿಪ ದೇವ ನಮ್ಮ ಸೂರ್ಯ. ಈತನಿಗೆ ಸೂರ್ಯ ನಾರಾಯಣ ಎಂದೂ ಕರೆಯುವರು. “ಸವಿತೃಮಂಡಲ ಮಧ್ಯವರ್ತಿ ನಾರಾಯಣಸ್ಸರಸಿಜಾಸನ ಸನ್ನಿವಿಷ್ಟಃ…..” ಎಂಬ ಧ್ಯಾನ ಶ್ಲೋಕದಲ್ಲಿ ನಾರಾಯಣನು ಭಾನುಮಂಡಲ ಮಧ್ಯದಲ್ಲಿ ಪೂಜಿಸಲ್ಪಡುವನು. “ಗಾಯತ್ರ್ಯ ಕಾರ್ಗ್ನಿಗೋಚರಃ ಶಂಭುಃ..” ಈ ಶ್ಲೋಕದಲ್ಲಿ ಶಿವನು ಮಧ್ಯದಲ್ಲಿ ಪೂಜಿಸಲ್ಪಡುವನು. ಹಲವು ಉಪನಿಷತ್ತುಗಳು ಕೂಡ ಭಾನುಮಂಡಲದಲ್ಲಿ ಪರಮಾತ್ಮನನ್ನು ಪೂಜಿಸಬೇಕೆಂದು ಹೇಳುತ್ತವೆ. ತ್ರಿಕಾಲ ಸಂಧ್ಯಾವಂದನೆಯಲ್ಲಿ ಜಪಿಸುವ ಗಾಯತ್ರಿ ಮಂತ್ರವು ಸವಿತೃದೇವತಾಕವಾಗಿದೆ. ಹೀಗೆ ಉಪಾಸ್ಯ ಹಾಗೂ ಉಪಾಸನಾದ್ವಾರ ದೇವತೆಯೂ ಆಗಿ ಸರ್ವ ಪ್ರಿಯ ದೇವತೆಯಾಗಿ ನಮ್ಮ ಸೂರ್ಯದೇವ ಕಂಗಚಳಿಸುತ್ತಾನೆ. ಹಾಗಾಗಿ ಎಲ್ಲಾ ವರ್ಗದವರು ಬೇಧವಿಲ್ಲದೆ ಸೂರ್ಯನ ಹಬ್ಬವನ್ನು ಆಚರಿಸುವರು.
“ಸೂರ್ಯ ಗ್ರಹಣತುಲ್ಯಾ ತು ಶುಕ್ಲಾ ಮಾಘಸ್ಯ ಸಪ್ತಮಿ / ಅಚಲಾ ಸಪ್ತಮೀ ದುರ್ಗಾ ಶಿವರಾತ್ರಿರ್ಮಹಾಭರಃ “ ಎಂಬ ಶ್ಲೋಕವು ‘ರಥಸಪ್ತಮಿ’ ಮತ್ತು ‘ ಅಚಲಾ ಸಪ್ತಮೀ ‘ ಎಂಬ ಹೆಸರನ್ನು ತಿಳಿಸುತ್ತದೆ. “ಏವಂ ವಿಧಂ ರಥವರಂ ರಥವಾಜಿಯುಕ್ತಂ..” ಎಂಬ ವಾಕ್ಯದಲ್ಲಿ ವಿಶೇಷವಾದ ಸಪ್ತಮಿಯಂದೇ ‘ರಥವರ’ ಎಂದು ಕರೆಯಲ್ಪಡುವ ಸೂರ್ಯನನ್ನು ಪೂಜಿಸಲ್ಪಡುವುದು. ‘ರಥವರ’ ಶಬ್ಧವು ರಥಕ್ಕೆ ಅನ್ವಯಿಸುತ್ತದೆಯೇ ಹೊರತು ಸೂರ್ಯನಿಗಲ್ಲ. ಹಾಗಾಗಿ ಪ್ರಸಿದ್ಧವಾದ ಸೂರ್ಯ ರಥದ ಉತ್ತರಗತಿಯ ನಿಮಿತ್ತವಾಗಿ ದೇವರನ್ನು ಆರಾಧಿಸುವ ಸಪ್ತಮೀ ತಿಥಿ ಯಂದು ರಥಸಪ್ತಮಿ ಆಚರಣೆಯಾಗಿದೆ..ದೇವಾಲಯಗಳಲ್ಲಿ ಉತ್ತರಾಯಣದಲ್ಲೇ ರಥೋತ್ಸವ ಪ್ರಾರಂಭ ಆಗುವುದು ಸಪ್ತಮಿ ತಿಥಿಯಲ್ಲಾದ್ದರಿಂದ ಇದನ್ನು ‘ರಥಸಪ್ತಮಿ’ ಎಂದು ವಾಡಿಕೆ.
ಇದು ‘ಅಚಲಾ ಸಪ್ತಮಿ’ ಎಂದು ಕರೆಸಿಕಚಳ್ಳಲು ಕಾರಣ ‘ ಅಕ್ಷಯ ತೃತೀಯ ‘ ಅಕ್ಷಯವಾಲ ಫಲವನ್ನು ಕೊಡುವಂತೆಈ ಪವಿತ್ರ ಸಪ್ತಮಿಯು ಅಚಲವಾದ ಫಲವನ್ನು ಕೊಡುವುದಾಗಿರುವುದರಿಂದ ಮತ್ತು ಬೇರೆ ಯಾರಿಂದಲೂ ಚಾಲನೆಮಾಡಲ್ಪಡದೇ ಇರುವ ತೀರ್ಥ ಜಲದಲ್ಲಿ ಅರುಣೋದಯ ಸಮಯದಲ್ಲಿ ಸ್ನಾನಮಾಡಬೇಕಾದ ಸಪ್ತಮಿಯಾದ್ದರಿಂದ ಇದು ‘ ಅಚಲಾ ಸಪ್ತಮಿ ‘ ಎಂದೂ ವ್ಯಾಖ್ಯಾನಿಸಿದ್ದಾರೆ.
ಆಚರಣೆಯ ದಿನ ಮಾಘಮಾಸದ ಶುಕ್ಲ ಪಕ್ಷದ ಸಪ್ತಮಿಯಂದು ಈ ಪರ್ವವು ಆಚರಿಸಲ್ಪಡಬೇಕು. ಆದರೆ ಸಪ್ತಮಿಯು ಅರುಣೋದಯ ಸಮಯದಲ್ಲಿ ವ್ಯಾಪ್ತಿಯಿರಬೇಕು. ಸ್ನಾನಾದಿಗಳನ್ನು ಕೂಡ ಆಗಲೇ ಮಾಡಬೇಕು.ಇಡೀ ಮಾಘಮಾಸವೇ ಪ್ರಾತಃಕಾಲದ ಸ್ನಾನಕ್ಕೆ ಪ್ರಾಶಸ್ತ್ಯ. ಇಡೀ ಮಾಘಮಾಸದಲ್ಲಿ ಮಾಡಲಾಗದಿದ್ದವರು ಸಂಕ್ರಾಂತಿ,ರಥಸಪ್ತಮಿ ಹಾಗೂ ಮಾಘೀ ಮೂರುದಿನಗಳಲ್ಲಾದರೂ ಪ್ರಾತಃಸ್ನಾನವನ್ನು ಮಾಡಲೇಬೇಕು ಎನ್ನುತ್ತವೆ ಶಾಸ್ತ್ರಗಳು. ಅರುಣೋದಯ ಸಮಯದಲ್ಲಿ ಸಮುದ್ರ, ಷುಷ್ಕರಣಿ, ಸರೋವರ ಹೀಗೆ ಪುಣ್ಯತೀರ್ಥಗಳಲ್ಲಿ ಅವಗಾಹನ ಸ್ನಾನ ಮಾಡುವುದು ಪುಣ್ಯಪ್ರದ ಎನ್ನಲಾಗುತ್ತದೆ. ತಲೆಯಮೇಲೆ ಚಿನ್ನ, ಬೆಳ್ಳಿ, ಸೋರೇಬುರುಡೆ ದೀಪಪಾತ್ರದಲ್ಲಿ ಎಳ್ಳೆಣ್ಣೆ ಬತ್ತಿಗಳಿಂದ ಹತ್ತಿಸಿದ ದೀಪವನ್ನು ಇರಿಸಿಕೊಂಡು ಮತ್ತು ಏಳು ಎಕ್ಕದ ಎಲೆಗಳನ್ನು, ಏಳು ಎಲಚೀ ಎಲೆಗಳನ್ನು ತಲೆ ಮತ್ತು ತೋಳುಗಳ ಮೇಲೆ ಇರಿಸಿಕೊಂಡು ಸಾವಧಾನವಾದ ಮನಸ್ಸಿನಿಂದ ,ಸೂರ್ಯ ದೇವನನ್ನು ಸ್ಮರಣೆಮಾಡುತ್ತಾ ಮಾಡಬೇಕು. ಎಲ್ಲಾ ರೀತಿಯ ಸಪ್ತ ಪಾಪಗಳೂ ದೂರಮಾಡೆಂದು ಸಪ್ತಾಶ್ವಾಧಿಪನಿಗೆ ಅರ್ಘ್ಯದ ಮೂಲಕ ಸಮರ್ಪಿಸಬೇಕು.
ಕೆಂಪುಬಣ್ಣದ ಚಂದನದಿಂದ ಕರ್ಣಿಕಾ ಸಹಿತವಾದ ಅಷ್ಟದಳ ಪದ್ಮವನ್ನು ಬರೆಯಬೇಕು. ಅದರ ಪೂರ್ವಾದಿದಳಗಳಲ್ಲಿ ಪ್ರದಿಕ್ಷಣವಾಗಿ ರವಿ,ಭಾನು,ವಿವಸ್ವಂತ,ಭಾಸ್ಕರ , ಸವಿತೃ,ಅರ್ಕ,ಸಹಸ್ರಕಿರಣ ಮತ್ತು ಸರ್ವಾತ್ಮಕ ಎಂಬ ನಾಮಧೇಯಗಳಿಂದ ಸೂರ್ಯ ದೇವರನ್ನು, ಮಧ್ಯದಲ್ಲಿ ಪ್ರಣವಸಹಿತವಾದ ಸಪತ್ನೀಕಶಿವನನ್ನೂ ಬರೆದು ಆವಾಹಿಸಿ ಪೂಜಿಸಬೇಕು…ವಿಗ್ರಹವನ್ನು(ಇದ್ದರೆ) ಎಳ್ಳಿನ ಹಿಟ್ಟಿನಿಂದ ಮಾಡಿದ ಎರೆಯಪ್ಪಗಳಿಂದ ಆರಾಧಿಸಬೇಕು. ಎಳ್ಳಿನ ಹಿಟ್ಟಿನಿಂದ ಮಾಡಿದ ಕರ್ಣಾಭರಣವನ್ನು ಇಟ್ಟು, ಕೆಂಪು ವಸ್ತ್ರದಿಂದ ಮುಚ್ಚಿ ಪುಷ್ಪಗಳಿಂದ, ಧೂಪ ದೀಪಗಳಿಂದ ಪೂಜಿಸಬೇಕು. ವಿಗ್ರಹ ಪೂಜೆ ಇರದವರು ನೀರಿನಲ್ಲಿ ಅವನ ಪ್ರತಿಬಿಂಬವನ್ನು ಪೂಜಿಸಬಹುದು.. ಸೂರ್ಯನಿಗೆ ಪ್ರಿಯವಾದ ಸಾವಿತ್ರಾಷ್ಟಾಕ್ಷರ ಮಹಾಮಂತ್ರ , ಸೂರ್ಯ ಗಾಯತ್ರಿ, ಯಜುರ್ವೇದದ ಅರುಣಮಂತ್ರ,ಋಗ್ವೇದದ ಮಹಾಸೌರಮಂತ್ರ, ಸೌರಸಾಮಗಳು,ಆದಿತ್ಯ ಹೃದಯ ಮುಂತಾದವುಗಳ ಜಪ ಪಾರಾಯಣಗಳನ್ನು ಮಾಡುವುದು ಶ್ರೇಯಕರ.
ನಾನಾ ದೃಷ್ಟಿಯಿಂದ ಸಂಬಂಧಹೊಂದಿರುವ ಸೂರ್ಯ ದೇವನ ಮಂಡಲದಲ್ಲಿ ಭಗವಂತನನ್ನು ಇರಿಸಿ ಅಂದು ಉತ್ಸವವನ್ನು ಆಚರಿಸಲಾಗುತ್ತದೆ. ಸ್ನಾನ ಸಮಯದಲ್ಲಿ ಸೂರ್ಯನ ಅಂಶಗಳನ್ನು ಆರಾಧಿಸುವಾಗ ಮಧ್ಯದಲ್ಲಿ ” ಗಾಯರ್ತ್ರ್ಯರ್ಕಾಗ್ನಿ , ಗೋಚರಃ ಶಂಭುಃ ” ಅಂದರೆ ಗಾಯತ್ರಿ, ಸೂರ್ಯ ಮತ್ತು ಅಗ್ನಿಗಳಲ್ಲಿ ಗೋಚರಿಸುವ ಶಿವನನ್ನು ದೇವಿ ಸಹಿತ ಪೂಜಿಸುವುದು ಶುಭಕರವಾಗಿದೆ. ಆಚಾರಗಳನ್ನು ವಿಚಾರಗಳ ಸಮೇತ ತಿಳಿದು ಆಚರಿಸಿದರೆ ಫಲವು ಶುಭಪ್ರದವಾಗಿರುತ್ತದೆ.
ರಥಸಪ್ತಮಿಯ ಶುಭಾಶಯಗಳೊಂದಿಗೆ,
-ಸಿ.ಎನ್.ಭಾಗ್ಯಲಕ್ಷ್ಮಿ ನಾರಾಯಣ
ಮಾಹಿತಿಪೂರ್ಣ ಬರಹ
ರಥಸಪ್ತಮಿ ಬಗ್ಗೆ ಬರದಿರುವ ಲೇಖನ ಚೆನ್ನಾಗಿ ಬಂದಿದೆ ಸೋದರಿ… ಆ ಸಂಗತಗಳ ನೆನಪಿಗೊಂದು ವಂದನೆ ಸೋದರಿ
ರಥಸಪ್ತಮಿಯ ಮಹತ್ವದ ಬಗ್ಗೆ ಹೇಳಿರುವ ತಮಗೆ ತುಂಬಾ ಧನ್ಯವಾದಗಳು
ರಥಸಪ್ತಮಿ ಆಚರಣೆಯ ವಿಧಾನ, ಮಹತ್ವ, ಇತ್ಯಾದಿಗಳ ಸವಿವರ ಸಕಾಲಿಕ ಲೇಖನ ಚೆನ್ನಾಗಿದೆ.