ಥೀಮ್ 4 : ಮನೆ ಔಷಧಿಗಳು
ಚಳಿಗಾಲದಲ್ಲಿ ಧಾರಾಳವಾಗಿ ಸಿಗುವ ಬೆಟ್ಟದ ನೆಲ್ಲಿಕಾಯಿಯ ಬೀಜವನ್ನು ತೆಗೆದು ಪುಡಿಮಾಡಿ ಉಪ್ಪು ಬೆರೆಸಿ ಬಿಸಿಲಲ್ಲಿ ಒಣಗಿಸಿ ಭದ್ರವಾಗಿಟ್ಟರೆ ವರ್ಷಾನುಗಟ್ಟಲೆ ಕೆಡುವುದಿಲ್ಲ. ಮನೆಯಲ್ಲಿ ಅಗತ್ಯಕ್ಕೆ ಒದಗುವ ಮನೆ ಔಷಧಿಗಳಲ್ಲಿ ಇದರ ಪಾತ್ರ ಬಹಳ ಹಿರಿದು.
- ಅಜೀರ್ಣದ ಹೊಟ್ಟೆ ನೋವಿಗೆ, ಎರಡು ಚಮಚ ನೆಲ್ಲಿಕಾಯಿಯ ಪುಡಿಯನ್ನು ಮಜ್ಜಿಗೆಯಲ್ಲಿ ಬೆರೆಸಿ ತೆಗೆದುಕೊಂಡರೆ ಶೀಘ್ರ ಉಪಶಮನ.
- ಇದರಂತೆ ಕಂಚುಳಿಕಾಯಿಯು ಕೂಡಾ ಅಜೀರ್ಣದ ತೊಂದರೆಯನ್ನು ನಿವಾರಿಸುತ್ತದೆ. . ಕಂಚುಳಿಕಾಯಿಯನ್ನು ಸಣ್ಣಗೆ ತುಂಡರಿಸಿ ಉಪ್ಪಲ್ಲಿ ಬೆರೆಸಿ ಜಾಡಿಯಲ್ಲಿ ಗಾಳಿಯಾಡದಂತೆ ಇರಿಸಿದರೆ ಇದು ಕೂಡಾ ವರ್ಷಾನುಗಟ್ಟಲೆ ಕೆಡುವುದಿಲ್ಲ. ಅಜೀರ್ಣದ ಬೇಧಿಗೆ, ಇದರ ಒಂದು ಸಣ್ಣ ತುಂಡನ್ನು ಮಜ್ಜಿಗೆಯಲ್ಲಿ ಕದಡಿ ತೆಗೆದುಕೊಂಡರೆ ಬಹಳ ಬೇಗನೆ ತೊಂದರೆ ನಿವಾರಣೆಯಾಗುತ್ತದೆ. ತೀರಾ ಪುಟ್ಟ ಮಕ್ಕಳಿಗೆ ಇದರ ಉಪಯೋಗ ಹಿತಕರವಲ್ಲ.
- ಸ್ವಾತಿ ಮಹಾನಕ್ಷತ್ರದ ಸಮಯದಲ್ಲಿ ಸಂಗ್ರಹಿಸಿಟ್ಟ ನೀರನ್ನು ಹಲವು ತೊಂದರೆಗಳ ನಿವಾರಣೆಗೆ ಉಪಯೋಗಿಸಬಹುದು. ಸಣ್ಣ ಪುಟ್ಟ ಕಣ್ಣು ಅಥವಾ ಕಿವಿ ನೋವುಗಳಿಗೆ ಇದರ ಒಂದೆರಡು ಹನಿಗಳನ್ನು ದಿನದಲ್ಲಿ ನಾಲ್ಕೈದು ಬಾರಿ ಉಪಯೋಗಿಸಿದರೆ ಶೀಘ್ರ ಪರಿಹಾರ. ಉಗುರುಸುತ್ತು ಅಥವಾ ಗುಣವಾಗದ ಹಳೆಯ ಗಾಯಗಳಿಗೆ ದೀರ್ಘಕಾಲದ ಬಳಕೆಯಿಂದ ಪೂರ್ತಿ ಗುಣಮುಖರಾಗಬಹುದು..
- ಆಗಾಗ ಸಣ್ಣ ಪುಟ್ಟ ಕಸದ ತುಣುಕು ಅಥವಾ ಮರಳಿನ ಕಣಗಳು ಕಣ್ಣಿನೊಳಗೆ ಬಿದ್ದು ಬಹಳ ತೊಂದರೆ ಕೊಡುತ್ತವೆ. ಅದಕ್ಕಾಗಿ ತುರ್ತಾಗಿ ವೈದ್ಯರನ್ನು ಕಾಣಲು ಹೋಗಬೇಕಾಗಿಲ್ಲ. ಮನೆಯ ಕೈತೋಟದಲ್ಲಿರುವ ತುಳಸಿಯ ಒಣಗಿದ ಒಂದೆರಡು ಬೀಜಗಳನ್ನು ಕಣ್ಣಿಗೆ ಹಾಕಿದರೆ ಸ್ವಲ್ಪ ಹೊತ್ತಿನಲ್ಲಿ ಗಂಜಿಯಂತಾದ ಬೀಜದ ಜೊತೆಗೆ ಕಸವು ಕಣ್ಣಿನ ಮೂಲೆಯಲ್ಲಿ ಸೇರುತ್ತದೆ. ಅದನ್ನು ಸುಲಭವಾಗಿ ಸ್ವಚ್ಛಗೊಳಿಸಬಹುದು.
- ತಿಂದ ಆಹಾರವನ್ನು ಜೀರ್ಣಿಸಿ ಹೊರಹಾಕುವುದರಲ್ಲಿ ವಿಫಲವಾದರೆ ಪೈಲ್ಸ್ ಬರುವುದು ಸರ್ವೇಸಾಮಾನ್ಯ. ಇಂದಿನ ಆಹಾರ ಪದ್ಧತಿಯೂ ಇದಕ್ಕೆ ಪೂರಕವಾಗಿದೆ ಎನ್ನಬಹುದು. ಔಷಧಿ ಪ್ರಯೋಗ ಫಲಿಸದೆ ಶಸ್ತ್ರಚಿಕಿತ್ಸೆ ಮಾಡಬೇಕಾದ ಪ್ರಮೇಯವೂ ಬರಬಹುದು. ಇದರ ಉಪಶಮನಕ್ಕೆ ರಾಮಬಾಣದಂತಿರುವ ಮನೆ ಔಷಧಿಯು ಪ್ರಕೃತಿಯ ಕೊಡುಗೆಯಾಗಿದೆ. ದಿನವೊಂದಕ್ಕೆ ಒಂದು ಬಿಳಿ ಮೂಲಂಗಿಯನ್ನು ಯಾವುದೇ ರೂಪದಲ್ಲಿ ಹಸಿಯಾಗಿ ದಿನಾ ಬಳಸಿದರೆ ಕೆಲವೇ ದಿನಗಳಲ್ಲಿ ಪೈಲ್ಸ್ ಗುಣವಾಗುವುದು.
–ಶಂಕರಿ ಶರ್ಮ, ಪುತ್ತೂರು.
ಉತ್ತಮ ಮಾಹಿತಿಯುಳ್ಳ ಲೇಖನ ಚೆನ್ನಾಗಿದೆ ಶಂಕರಿ ಮೇಡಂ
ಧನ್ಯವಾದಗಳು… ಸೋದರಿ ನಾಗರತ್ನ ಅವರಿಗೆ.
ಮಾಹಿತಿಪೂರ್ಣ
ಧನ್ಯವಾದಗಳು..ಸೋದರಿ ನಯನಾ ಅವರಿಗೆ.
ಉತ್ತಮ ಮಾಹಿತಿ ತಿಳಿಸಿಕೊಟ್ಟಿದ್ದೀರಿ ಅಕ್ಕಾ
ಧನ್ಯವಾದಗಳು… ಸೋದರಿ ಆಶಾ ಅವರಿಗೆ.
ಸರಳ, ಸುಲಭ ಪರಿಹಾರ!
ಉತ್ತಮ ಮನೆ ಮದ್ದುಗಳನ್ನು ತಿಳಿಸಿ ಕೊಟ್ಟದ್ದಕ್ಕೆ ಧನ್ಯವಾದಗಳು ಮೇಡಂ