ಕನ್ನಡ ನಾಡಿನ ಲಾವಣಿ

Share Button


ಕನ್ನಡದೀ ನಾಡಿನ ವೈಭವಕ್ಕೆ ಸರಿಯುಂಟೇ
ಕುಂತು ಕೇಳಿ‌ ಮಂದಿ ನೀವು ಚಂದದಿಂದಲಿ
ಜಗವ ಮೋಡಿ ಮಾಡಿದಂಥ ಶಿಲ್ಪವೇನು ಕಾವ್ಯವೇನು
ಕನ್ನಡಾಂಬೆ ಮುಕುಟಗಳು ಮಲೆಯ ಶೃಂಗವು
       ‌‌‌‌‌‌        ಶುಕವು ಪಿಕವು ಭೃಂಗವು(೧)

ಬೇಲೂರು ಹಳೆಬೀಡು ಕೊಲ್ಲೂರು ಶೃಂಗೇರಿ
ವೀರನಾರಾಯಣ ಗುಡಿ ಗೋಕರ್ಣವು
ಹೊರನಾಡು ಅನ್ನಪೂರ್ಣೆ ದೊಡ್ಡಗಣಪ ಮುರುಡೇಶ
ಗೊಮ್ಮಟೇಶ್ವರನು ಮತ್ತೆ ಹಾಸನಾಂಬೆಯ
                ದೇವಿ ಮಂಗಳಾಂಬೆಯ (೨)

ಕಡೆಗೋಲ ಕೃಷ್ಣನೂರು ಕಟೀಲು ಧರ್ಮಸ್ಥಳ
ಇಡಗುಂಜಿ ಹೊರನಾಡು ಸುಬ್ರಹ್ಮಣ್ಯನ
ಬಿಡದೆ ನೋಡಿ ರಂಗಪಟ್ಣ ಶ್ರೀಕಂಠೇಶ್ವರನ ಪಾದ
ಅಡ್ಡ ಬಿದ್ದು ಶರಣೆನ್ನಿ ಹರಿಹರಗೆ
                        ತಾಯಿ ಎಲ್ಲಮ್ಮನಿಗೆ (೩)

ಬಾದಾಮಿ ಬನಶಂಕ್ರಿ ಪಟ್ಟದ್ಕಲ್ಲು ಐಹೊಳೆ
ಮರೆಯೋದುಂಟೆ ಹಂಪಿಯ ವೈಭವವ
ಝರಣೀ ನರಸಿಂಹನ ಯಲಗೂರ ಹನುಮನ
ಮೂಡಬಿದ್ರಿ ದೇವನೂರು ಲಕ್ಷ್ಮೀಕಾಂತನ
                   ತೊರವೆ ನರಸಿಂಗನ (೪)

ಗೇರುಸೊಪ್ಪೆ ಭರಚುಕ್ಕಿ ಗಗನಚುಕ್ಕಿ ಅಬ್ಬೆ ಹೆಬ್ಬೆ
ಮಾಗೋಡು ಸಾತೋಡಿ ದೂಧಸಾಗರ
ಗೋಕಾಕ ಉಂಚಳ್ಳಿ ಚುಂಚನಕಟ್ಟೆ ಸಿರಿಮನೆ
ಮತ್ತದೆಷ್ಟೊ ಧಬಧಬೆ ಮನಮೋಹಕ
           ಬಲು‌ ರೋಮಾಂಚಕ  (೫)

ಕನ್ನಡದ ಗಂಗೆಯರು ತುಂಗೆ ಭದ್ರೆ ಕಾವೇರಿ
ಹೇಮಾವತಿ ಶರಾವತಿ ಪಿನಾಕಿನಿಯು
ಮಲಪ್ರಭೆ ಕೃಷ್ಣ ಭೀಮಾ ಘಟಪ್ರಭಾ ಕಾಳಿಯೇನು
ಅರ್ಕಾವತಿ ನೇತ್ರಾವತಿ ಕಪಿಲೆಯರ
                     ಲೋಕಪಾವನಿಯರ (೬)

ಬಿಳಿಗಿರಿರಂಗನನ್ನು ಮಲೆಮಹಾದೇಶ್ವರನ
ಗೋಪಾsಲಸ್ವಾಮಿ ಬೆಟ್ಟ ಕೊಡಚಾದ್ರಿಯ
ಶಿವಗಂಗೆ ನಂದಿಯದ್ರಿ ಸ್ಕಂದದೇವ ಪರ್ವತವ
ಮುಳ್ಳಯ್ಯನಗಿರಿ ನೋಡಿ ಮಹಿಷೂರನು
                        ನಾಡಹಬ್ಬದೂರನು  (೭)

ಹಕ್ಕಬುಕ್ಕ ರಾಯಣ್ಣನು ಧೀರಯೋಗಿ ವಿದ್ಯಾರಣ್ಯ
ಚೆನ್ನಮ್ಮರು ಮಲ್ಲಮ್ಮ ಧೀರೆ ಓಬವ್ವ
ರಾಣಿ ಚೆನ್ನಭೈರಾದೇವಿ ಉಳ್ಳಾಲದ ಅಬ್ಬಕ್ಕ
ಶಿವಶರಣರು ಹರಿದಾಸ ಸಂತರು
            ಮನದ ಕೊಳೆಯ ತೊಳೆದರು (೮)

ಕನ್ನಡದ ಕಬೀರನು ಶಿಶುವಿನಾಳ ಷರೀಫ಼
ನಾಡು ಕಟ್ಟಿದೊಡೆಯರು ಧೀಮಂತರು
ಪಂಪ ರನ್ನ ಪೊನ್ನ ಜನ್ನ ಕುಮಾರವ್ಯಾಸನು
ಮುದ್ದಣ್ಣ ನರಹರಿ ಲಕುಮೀಶರು
               ಕಾವ್ಯ ಗಂಗೆಯ ತಂದರು  (೯)

ಅಷ್ಟೆ ಇಷ್ಟೆ ಕೀರುತಿಯು ಎಷ್ಟು ಹೇಳಿ ಮುಗಿಯದು
ಮುತ್ತಿನಂಥ ಲಿಪಿಯಿಂದ ಖ್ಯಾತವಿಹುದು
ಸುತ್ತಲೆಲ್ಲರ ಸೆಳೆಯುವ ಭಾವೈಕ್ಯದ ಗುಡಿಯಿದು
ಮತ್ತೆ  ಶರಣೆನ್ನಿ ನಮ್ಮ ಕನ್ನಡಮ್ಮಗೆ
                    ಹೃದಯದಧಿದೇವಿಗೆ (೧೦)

ರತ್ನಾ ಮೂರ್ತಿ

6 Responses

 1. ಈ ಪ್ರಕಾರವೇ ಈಗ ಬಹಳ ಅಪರೂಪವಾಗಿದೆ…ಕನ್ನಡ ನಾಡನ್ನು ಲಾವಣಿ ಮೂಲಕ ಪ್ರಸ್ತುತ ಪಡಿಸಿದ್ದು ಓದಿ ಸಂತಸವಾಯಿತು ಮೇಡಂ.

 2. ನಯನ ಬಜಕೂಡ್ಲು says:

  ಸೊಗಸಾಗಿದೆ

 3. ನಯನ ಬಜಕೂಡ್ಲು says:

  ಕರುನಾಡು ಕನ್ನಡಿಗರ ಹೆಮ್ಮೆಯ ನಾಡು

 4. Venkat says:

  ತುಂಬಾ ಚೆನ್ನಾಗಿದೆ!

 5. ಶಂಕರಿ ಶರ್ಮ says:

  ಕನ್ನಡಾಂಬೆಯ ವೈಭವವನ್ನು ಪೊಗಳಿದ ಲಾವಣಿ ಪಸಂದಾಗೈತೆ.

 6. ಪದ್ಮಾ ಆನಂದ್ says:

  ಲಾವಣಿ ರೂಪದಲ್ಲಿ ಕನ್ನಡ ನಾಡಿನ ಸೊಗಸೆಲ್ಲವನ್ನೂ ಕಟ್ಟಿಕೊಟ್ಟಿರುವ ಅಪರೂಪದ ಚಂದದ ಪ್ರಕಾರ ಇದಾಗಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: