“ಸ್ಮಾರಕಗಳ ರಕ್ಷಣೆ” ನಮ್ಮೆಲ್ಲರ ಹೊಣೆ

Share Button

ನಿಜಕ್ಕೂ ನನಗೆ ಈ “ಸ್ಮಾರಕ” ಎಂಬ ಮೂರಕ್ಷರ ಕೇಳಿದೊಡನೆ ಮೈಮನಗಳು ರೋಮಾಂಚನಗೊಳ್ಳುತ್ತವೆ!. ಜೊತೆಗೆ ಹಲವು ನೆನಪುಗಳು ಮೂಡುತ್ತವೆ. ಏಕೆಂದರೆ ನಾನು ರಾಜ್ಯದ ಅನೇಕ ಸ್ಮಾರಕಗಳಿಗೆ ಭೇಟಿ ಕೊಟ್ಟಿದ್ದೇನೆ. ಅಲ್ಲಿನ ಸ್ಥಳ, ಇತಿಹಾಸದ ಮಹತ್ವ, ಅದು ನೀಡುವ ಸಂದೇಶ ಜೊತೆಗೆ ಅದು ಸಾರುವ ಪುರಾತನ ಕಥೆ, ಹೀಗೆ ಒಂದೇ ಎರಡೇ? ಎಲ್ಲವನ್ನು ಕೂಡ ನಾವು ಅಲ್ಲಿಕಾಣಬಹುದಾಗಿದೆ. ಅದರಿಂದಾಗಿ ಈ ಸ್ಮಾರಕ ಬಹಳ ಪ್ರಾಮುಖ್ಯತೆಯನ್ನು ಪಡೆದುಕೊಂಡಿರುತ್ತವೆ.

ಅದು ಒಂದು ವ್ಯಕ್ತಿಯ ಸ್ಮಾರಕವಾಗಿರಬಹುದು ಅದು ಪ್ರತಿಮೆ ರೂಪದಲ್ಲಿ ಸಾವಿನ ಜ್ಞಾಪಕಾರ್ಥ ಸ್ಮಾರಕ ಹೀಗೆ ಪ್ರತಿಯೊಂದು ಸ್ಮಾರಕಗಳು ಒಂದಲ್ಲ ಒಂದು ರೀತಿಯಲ್ಲಿ ಭವ್ಯ ಇತಿಹಾಸವನ್ನು ಹೊಂದಿವೆ. ಒಂದೊಂದು ಸ್ಮಾರಕಗಳು ಒಂದೊಂದು ಕಥೆಯನ್ನು ಹೇಳುತ್ತವೆ. ಸ್ಮಾರಕ ನಾ ಮೊದಲೇ ಹೇಳಿದಂತೆ ಸ್ಥಳದ ಸುತ್ತಮುತ್ತ ಕಂಡು ಬರುವ ಸ್ಥಳ ಪುರಾಣವನ್ನು ಕೂಡ ಹೇಳುತ್ತವೆ. ಸ್ಮಾರಕ ಎಂದರೆ ಜ್ಞಾಪಿಸುವ, ಸಲಹೆ ನೀಡುವ, ಅಥವಾ ಎಚ್ಚರಿಸುವ ಎಂಬೆಲ್ಲಾ ಅರ್ಥ ಬರುತ್ತದೆ. ಹಲವು ಸ್ಮಾರಕಗಳು ನಮ್ಮ ನಾಡು- ನುಡಿ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಅಂಶವನ್ನು ಒಳಗೊಂಡಿರುತ್ತವೆ. ಎಂದೋ ನಿರ್ಮಾಣವಾದ ಸ್ಮಾರಕಗಳು ಇವತ್ತಿಗೂ ಕೂಡ ಹೊಸದರಂತೆ ಕಾಣಸಿಗುತ್ತವೆ.ಸ್ವಲ್ಪ ಜೀರ್ಣೋದ್ಧಾರ ಗೊಂಡಿದ್ದರೂ ಕೂಡ ಅಂತಹ ಸ್ಮಾರಕಗಳನ್ನು ನಾವು ಇಂದು ಎಷ್ಟೇ ತಂತ್ರಜ್ಞಾನ ಮುಂದುವರಿದಿದ್ದರೂ, ಎಷ್ಟೇ ಸವಲತ್ತುಗಳು ನಮ್ಮ ಕಣ್ಣೆದುರು ಇದ್ದರೂ ಕೂಡ ಅಂತದೊಂದು ಭವ್ಯ ಸ್ಮಾರಕವನ್ನು ನಿರ್ಮಿಸಲು ಕಷ್ಟ ಅನುಭವಿಸಬೇಕಾಗುತ್ತದೆ ಎಂಬುದು ನನ್ನ ಅನಿಸಿಕೆ.

ಏಕೆಂದರೆ ಆ ಕೌಶಲ್ಯ, ಪ್ರತಿಭೆ ಎಲ್ಲವನ್ನೂ ಮೀರಿ ಕಟ್ಟಿದ್ದ ಅವತ್ತಿನ ಸ್ಮಾರಕಗಳಿಗೂ ಇಂದು ನಿರ್ಮಾಣವಾಗುತ್ತಿರುವ ಸ್ಮಾರಕಗಳಿಗೂ ಅಜಗಜಾಂತರ ವ್ಯತ್ಯಾಸವಿದೆ. ಅದರಿಂದಾಗಿ ಸ್ಮಾರಕಗಳು ಎಂದೊಡನೆ ನನ್ನ ಕಿವಿ ನಿಮಿರುತ್ತದೆ. ಜೊತೆಗೆ ಪ್ರತಿಯೊಂದು ಸ್ಮಾರಕಗಳಿಗೆ ಭೇಟಿ ನೀಡಿದಾಗಲೂ ಕೂಡ ಒಂದು ರೀತಿಯಲ್ಲಿ ತಿಳಿದುಕೊಳ್ಳುವ ಮನಸ್ಸು ನನ್ನಲ್ಲಿ ಪುಟಿದೇಳುತ್ತದೆ. ಈ “ಸ್ಮಾರಕಗಳಿಲ್ಲದ ನಗರವಿಲ್ಲ” ಎಂಬ ಮಾತಿದೆ. ಅದು ತಾಲೂಕು, ಜಿಲ್ಲೆ, ರಾಜ್ಯ, ದೇಶ ಹೀಗೆ ಎಲ್ಲೆಡೆ ಸುತ್ತಾಡಿದರು ಕೂಡ ಒಂದಲ್ಲ ಒಂದು ರೀತಿಯ ಸ್ಮಾರಕಗಳು ನಮಗೆ ಕಾಣಸಿಗುತ್ತವೆ.

ಪಾರಂಪರಿಕ ಕಟ್ಟಡಗಳ ಮೂಲಕ ಸ್ಮಾರಕಗಳು ನವ ನವೀನ. ಪ್ರಾಚೀನ ಸ್ಮಾರಕಗಳು ಕೂಡ ಕಾಣುತ್ತವೆ. ನಾವಿರುವ ಸ್ಥಳವಾದ ಮೈಸೂರಿನಲ್ಲಿ ಹಲವು ಸ್ಮಾರಕಗಳಿವೆ. ಅವುಗಳ ಬಳಿಗೆ ಹೋಗಿ ಒಮ್ಮೊಮ್ಮೆ ನೋಡಿದರೂ ಒಂದೊಂದು ರೀತಿಯ ಭಾವ ಮೂಡುತ್ತದೆ. ಸಮಯ ಸಿಗುವಷ್ಟು ನೋಡಿ ಸಂಭ್ರಮಿಸುತ್ತೇನೆ. ನಂತರ ಆ ಸ್ಮಾರಕಗಳ ಮುಂದೆ ಸೆಲ್ಫಿ ತೆಗೆದುಕೊಂಡು ಮತ್ತೆ ಮತ್ತೆ ನನ್ನ ಮನದೊಳಗೆ ಆ ಸ್ಮಾರಕಗಳನ್ನು ಶಾಶ್ವತವಾಗಿ ನನ್ನಲ್ಲಿ ಉಳಿಯುವಂತೆ ಮಾಡಿಕೊಳ್ಳುತ್ತೇನೆ. ಈ ಸ್ಮಾರಕಗಳ ಬಗ್ಗೆ ಅನೇಕರು ಪುಸ್ತಕಗಳನ್ನು ಕೂಡ ಬರೆದಿದ್ದಾರೆ. ಜೊತೆಗೆ ಅನೇಕ ವ್ಯಕ್ತಿಗಳು ಸ್ಮಾರಕಗಳ ಸುತ್ತಮುತ್ತ ಇರುವ ಇತಿಹಾಸ, ಅದರ ಉಗಮ, ನಡೆದು ಬಂದ ದಾರಿ, ಅದು ಯಾರ ಕಾಲಕ್ಕೆ ಸೇರಿದ್ದು, ಅದನ್ನು ಕಟ್ಟಿಸಿದವರು……… ಹೀಗೆ ಎಲ್ಲದರ ಬಗ್ಗೆ ವಿವರವಾಗಿ ಹೇಳುತ್ತಾರೆ.

ಹೊರದೇಶಗಳಲ್ಲಿ ಇರುವ ಸ್ಮಾರಕಗಳನ್ನು ನಾನು ನೋಡಿಲ್ಲ. ಆದರೆ ನಮ್ಮ ದೇಶದೊಳಗೆ, ರಾಜ್ಯದೊಳಗೆ ಇರುವ ಸ್ಮಾರಕಗಳಲ್ಲಿ ಕೆಲವನ್ನು ಮಾತ್ರ ನೋಡಿದ್ದೇನೆ. ಇಲ್ಲಿ ಇನ್ನೊಂದು ಗಮನಿಸಬೇಕಾದ ಅಂಶವೆಂದರೆ ಸ್ಮಾರಕಗಳನ್ನು ನೇರವಾಗಿ ನೋಡದೆ ಇದ್ದರೂ ನಾನು ಕಳೆದ 25 ವರ್ಷಗಳಿಂದಲೂ ಕೂಡ ರಾಜ್ಯದ ಅನೇಕ ಪತ್ರಿಕೆಗಳನ್ನು ಸಂಗ್ರಹಿಸುವುದರಿಂದ ಅಲ್ಲಿ ಬರುವ ಸ್ಮಾರಕಗಳ ಬಗೆಗಿನ ಲೇಖನಗಳ ಮೂಲಕ ಬರುವ ಚಿತ್ರಗಳನ್ನು ನೋಡಿ, ಓದಿ ಅದರ ಬಗ್ಗೆ ತಿಳಿದುಕೊಂಡಿದ್ದೇನೆ.

ಅದು ಏನೆಲ್ಲ ಮಹಾತ್ಮೆ ಸಾರುತ್ತವೆ? ಅದರ ಪ್ರಾಮುಖ್ಯತೆ ಏನು? ಅದರ ಪ್ರಸ್ತುತ ಸ್ಥಿತಿ, ಅಲ್ಲಿಗೆ ಹೋಗಬೇಕಾದ ಬಗೆಗಿನ ಅಂಕಿ- ಅಂಶಗಳು ಎಲ್ಲವನ್ನು ಓದುವುದರ ಮೂಲಕ, ಪತ್ರಿಕೆಗಳನ್ನು ಸಂಗ್ರಹಿಸಿದ್ದೇನೆ. “ದೇಶ ಸುತ್ತಿ ನೋಡು ಕೋಶ ಓದಿ ನೋಡು”-ಎನ್ನುವಂತೆ ಹಲವು ಸ್ಮಾರಕಗಳನ್ನು ನೇರವಾಗಿ ನೋಡದಿದ್ದರೂ ಕೂಡ ನನ್ನ ಮತ್ತೊಂದು ಹವ್ಯಾಸವಾದ ಸಂಗ್ರಹ ಮತ್ತು ಓದಿನ ಮೂಲಕ ಸ್ಮಾರಕಗಳು ನನ್ನಲ್ಲಿ ಮನೆ- ಮನ ತುಂಬಿವೆ.

ಭಾರತದಲ್ಲಿ ಪ್ರಮುಖ ಸ್ಮಾರಕಗಳೆಂದರೆ ಅಮ್ಬರ್ ಕೋಟೆ ಜೈಪುರದಲ್ಲಿ, ತಾಜ್ಮಹಲ್ ಆಗ್ರಹದಲ್ಲಿ, ಇಂಡಿಯಾ ಗೇಟ್ ದೆಹಲಿಯಲ್ಲಿ, ಗೇಟ್ ಆಫ್ ಇಂಡಿಯಾ ಮುಂಬೈನಲ್ಲಿ, ಕುತುಬ್ ಮಿನಾರ್ ದೆಹಲಿಯಲ್ಲಿ, ಚಾರ್ಮಿನಾರ್ ಹೈದರಾಬಾದ್ ನಲ್ಲಿ, ಹವಾ ಮಹಲ್ ಜೈಪುರದಲ್ಲಿ, ಅಜಂತಾ ಗುಹೆಗಳು ಔರಂಗಬಾದ್ ನಲ್ಲಿ ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಅದೇ ರೀತಿ ಕರ್ನಾಟಕದಲ್ಲಿ ಮೈಸೂರು ಅರಮನೆ, ಬೀದರ್ ಕೋಟೆ, ಬಾದಾಮಿ, ಐಹೊಳೆ, ಪಟ್ಟದಕಲ್ಲು, ಶ್ರವಣಬೆಳಗೊಳ, ಶ್ರೀರಂಗಪಟ್ಟಣ ಮುಂತಾದವು.
ಇಂತಹ ಬಗೆಬಗೆಯ ಸ್ಮಾರಕಗಳು ನಿರ್ಮಾಣಗೊಳ್ಳಲು ಹಲವರು ಕಾರಣೀಕರ್ತರಾಗಿದ್ದಾರೆ. ಅವರನ್ನೆಲ್ಲ ನಾವು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಲೇಬೇಕು. ಎಷ್ಟೇ ವರ್ಷಗಳು ಕಳೆದವು. ಜೊತೆಗೆ ಇವತ್ತಿನ ಆಧುನಿಕ ತಂತ್ರಜ್ಞಾನ ಕಾಲದಲ್ಲಿ ಅದನ್ನು ಮೀರಿ ನಿರ್ಮಾಣಗೊಂಡ ಸ್ಮಾರಕಗಳ ನೋಡುತ್ತಾ ಹೋದರೆ, ಓದುತ್ತಾ ಹೋದರೆ ಅಚ್ಚರಿ ಮೂಡಿಸುತ್ತದೆ.

ಹಂಪೆಯಲ್ಲಿರುವ ಕಲ್ಲಿನ ರಥ (ಚಿತ್ರಕೃಪೆ: ಅಂತರ್ಜಾಲ)

ಹಲವು ಸ್ಮಾರಕಗಳನ್ನು ಸರ್ಕಾರ ತನ್ನ ನಿಯಂತ್ರಣಕ್ಕೆ ಪಡೆದು ಅದರ ಮೂಲ ಸ್ಥಾನವನ್ನು ಹಾಗೆ ಉಳಿಸಿಕೊಂಡು ಪ್ರವಾಸದ ದೃಷ್ಟಿಯಿಂದ ಅಭಿವೃದ್ಧಿಪಡಿಸಿ ಇಂತಿಷ್ಟು ಹಣ ಎಂದು ನಿಗದಿಪಡಿಸಿ ಆ ಮೂಲಕ ಆ ಸ್ಮಾರಕ ವಿರುವ ಸ್ಥಳವನ್ನು ಪ್ರವಾಸಿ ಸ್ಥಳವನ್ನಾಗಿ ರೂಪಿಸಿರುವುದನ್ನು ನಾವು ಕಾಣಬಹುದಾಗಿದೆ. ಜೊತೆಗೆ ಸ್ಮಾರಕದ ಸುತ್ತ ಭದ್ರ ಬೇಲಿ ನಿಗದಿಪಡಿಸಿ, ವೀಕ್ಷಕರಿಂದ ಆಗುವ ತೊಂದರೆಗಳನ್ನು ಕೂಡ ಕಡಿಮೆ ಮಾಡಿದ್ದಾರೆ.

ಈ ರೀತಿ ಇದ್ದಾಗಲೂ ಕೂಡ ಪ್ರವಾಸಕ್ಕೆ ಹೋಗುವ ಪ್ರವಾಸಿಗರು ಅದರ ನೆಪದಲ್ಲಿ ಹಲವು ಸ್ಮಾರಕಗಳಿಗೆ ಧಕ್ಕೆ ತಂದಿರುವ ವರದಿಗಳು ಕೂಡ ಪ್ರಕಟವಾಗಿವೆ. ವ್ಯಕ್ತಿಯ ಸಾಧನೆ, ಅಲ್ಲದೇ ಭವ್ಯ ಇತಿಹಾಸ ಸಾರುವ ಸ್ಮಾರಕಗಳು ಕ್ಷಣಿಕವಾಗಿ ವಿರೂಪಗೊಳ್ಳುತ್ತಿವೆ. ಎಲ್ಲರ ಕಣ್ಣು ತಪ್ಪಿಸಿ ನಡೆಯುವ ಇಂತಹ ಹೀನ ಕೃತ್ಯಗಳ ಬಗೆಯು ಕೂಡ ಸರ್ಕಾರ, ಸ್ಥಳೀಯ ಸಂಸ್ಥೆಗಳು, ಸಂಘ-ಸಂಸ್ಥೆಗಳು ನಿಗಾ ಇಟ್ಟಿವೆ. ನಮಗೆ ನಿರ್ಮಾಣ ಮಾಡಲು ಸಾಧ್ಯವಾಗದ ಸ್ಮಾರಕಗಳ ಬಗ್ಗೆ ಕಾಳಜಿ ವಹಿಸಬೇಕಾದ ಅನಿವಾರ್ಯ ಸ್ಥಿತಿ ಇಂದು ನಿರ್ಮಾಣಗೊಂಡಿದೆ. ಈಗಲೂ ಕೂಡ ಹಲವು ಸ್ಮಾರಕಗಳು ಅನೈತಿಕ ಚಟುವಟಿಕೆಗಳ ಕೇಂದ್ರವಾಗಿವೆ. ರಕ್ಷಣೆ ಮಾಡಬೇಕಾದ ನಾವುಗಳೇ ಈ ರೀತಿ ಮಾಡಿದರೆ ಸರಿ ಅನಿಸುವುದಿಲ್ಲ. ಎಷ್ಟೋ ಕಡೆ ಸ್ಮಾರಕಗಳ ಹೊರಭಾಗದ ಗೋಡೆಗಳನ್ನು ವಿರೂಪಗೊಳಿಸಿರುತ್ತಾರೆ. ತಮ್ಮ ಪ್ರೀತಿ ಪ್ರೇಮದ ಕುರುವುವಾಗಿ ಪ್ರೇಮಿಗಳ ಹೆಸರುಗಳನ್ನು ಬರೆಯುವುದು ಕೂಡ ನಡೆದಿದೆ.

ಅದರಲ್ಲೂ ನಮ್ಮ ಯುವಜನತೆ ಈ ನಿಟ್ಟಿನಲ್ಲಿ ಗಮನ ಹರಿಸಿ ಇವತ್ತು ನಾವು ಸ್ಮಾರಕಗಳು ಉಳಿಸಿದರೆ ನಮ್ಮ ಮುಂದಿನ ಪೀಳಿಗೆಗೆ ತಿಳಿದುಕೊಳ್ಳುವ ದೃಷ್ಟಿಯಿಂದ ನೆರವಾಗುತ್ತದೆ. ನಮ್ಮ ರಾಜ್ಯದಲ್ಲಿರುವ ಹಲವು ಸ್ಮಾರಕಗಳ ಬಗ್ಗೆ ಪತ್ರಿಕೆಗಳಲ್ಲಿ ಬಂದಿರುವ ಮಾಹಿತಿಗಳನ್ನು ಕೂಡ ನಾನು ಸಂಗ್ರಹಿಸಿದ್ದೇನೆ.ಮತ್ತೊಮ್ಮೆ ನಾವು ನಮ್ಮ ಕಣ್ಣೆದುರು ಸಿಗುವ ಪ್ರತಿಯೊಂದು ಸ್ಮಾರಕಗಳನ್ನು ಕೂಡ ಅವಕ್ಕೆ ಯಾವುದೇ ರೀತಿ ಧಕ್ಕೆ ಆಗದಂತೆ ಸಂರಕ್ಷಿಸೋಣ.

-ಕಾಳಿಹುಂಡಿ ಶಿವಕುಮಾರ್, ಮೈಸೂರು.

5 Responses

 1. ಒಂದು ಜಾಗೃತಿ ಮೂಡಿಸುವಂಥಹ ಲೇಖನ ..ಚೆನ್ನಾಗಿ ಪಡಿಮೂಡಿಸಿದ್ದೀರಾ ಸಾರ್…

 2. ಶಂಕರಿ ಶರ್ಮ says:

  ಸ್ಮಾರಕಗಳನ್ನು ಉಳಿಸಬೇಕಾದ ಅಗತ್ಯತೆಯನ್ನು ಒತ್ತಿ ಹೇಳುವ ಕಾಳಜಿಯುಕ್ತ ಲೇಖನ ಚೆನ್ನಾಗಿದೆ.

 3. Padmini Hegde says:

  ಉತ್ತಮವಾದುದನ್ನು ಸಂರಕ್ಷಿಸಬೇಕು, ನಡೆಯಲ್ಲಿ ಅದರ ಪಡಿಮೂಡಿಸಬೇಕು ಎನ್ನುವ ಆಶಯ ಚೆಂದಾದದ್ದು

 4. ನಯನ ಬಜಕೂಡ್ಲು says:

  ಉತ್ತಮ ಹಾಗೂ ವಿಭಿನ್ನ ಬರಹ

 5. ಪದ್ಮಾ ಆನಂದ್ says:

  ಸ್ಮಾರಕಗಳ ಕುರಿತಾದ ಆಸಕ್ತದಾಯಕ ಬರಹ. ಹೌದು, ಸ್ಮಾರಕಗಳನ್ನು ಹಾಳುಗೆಡವುದು, ಅಂದಗೆಡಿಸುವುದು ಅತ್ಯಂತ ಖಂಡನೀಯ ಮತ್ತು ವಿಷಾದಕರ ವಿಷಯ. ಈ ಕುರಿತೂ ಸಹ ಲೇಖನ ಜಾಗೃತಿ ಮೂಡಿಸುವಂತಿರುವುದು ಪ್ರಶಂಸನೀಯ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: